Pages

Saturday, March 27, 2010

ಪಾಣಿನಿ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯಾರೇಖೆ ಯಿಲ್ಲವಾದ್ದರಿಂದ ಮಗುವಿಗೆ ವಿದ್ಯೆ ಹತ್ತುವುದಿಲ್ಲವೆಂದು ತಿಳಿಸಿ ಮಗುವನ್ನು ಹಿಂದಿರುಗಿ ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ.ತಾಯಿಯಾದರೋ ಪರಿಪರಿಯಾಗಿ ಬೇಡಿಕೊಂಡರೂ ಗುರುಗಳು ನಿರಾಕರಿಸಿಬಿಡುತ್ತಾರೆ.ದು:ಖದಿಂದ ಹಿಂದಿರುಗಿದ ಬಾಲಕ ಸ್ವಲ್ಪ ಸಮಯದ ಬಳಿಕ ಒಬ್ಬನೇ ಗುರುಗಳ ಹತ್ತಿರ ಪುನ: ಬರುತ್ತಾನೆ. " ಏಕೆ ಬಂದೆ?" ಗುರುಗಳಧ್ವನಿ ಗಡುಸಾಗಿರುತ್ತೆ. " ಗುರುಗಳೇ ವಿದ್ಯಾರೇಖೆ ಹೇಗಿರುತ್ತೆ?"-ಶಾಂತವಾಗಿ ಬಾಲಕ ಕೇಳುತ್ತಾನೆ.
ಬಾಲಕನೊಬ್ಬನನ್ನು ಕರೆದು ಅವನ ಹಸ್ತವನ್ನು ತೋರಿಸಿ "ವಿದ್ಯಾರೇಖೆ ಎಂದರೆ ಇದು, ನಿನಗೆ ಅದರ ಲೇಶ ಮಾತ್ರವೂ ಇಲ್ಲ. ನಿನಗೆಲ್ಲಿ ವಿದ್ಯೆ ಹತ್ತಲು ಸಾಧ್ಯ? ಹೊರಟು ಬಿಡು" ಗುರುಗಳು ಸಿಟ್ಟಿನಿಂದಲೇ ಹೇಳುತ್ತಾರೆ.
ಬಾಲಕ ಆಶ್ರಮದಿಂದ ಹೊರಗೆ ಹೋಗುತ್ತಾನೆ.ಸ್ವಲ್ಪ ಸಮಯದ ಬಳಿಕ ಗುರುಗಳಲ್ಲಿಗೆ ಮತ್ತೆ ಬರುತ್ತಾನೆ.ಗುರುಗಳಿಗೆ ಈಗಂತೂ ಅಸಾಧ್ಯವಾದ ಸಿಟ್ಟು ಬರುತ್ತೆ. ಸುಮ್ಮನೆ ನನ್ನ ಕಾಲ ಹರಣ ಮಾಡುತ್ತಿದ್ದಾನಲ್ಲಾ! ಬಾಲಕ ಶಾಂತವಾಗಿಯೇ ಗುರುಗಳಲ್ಲಿ ನಿವೇದಿಸಿಕೊಳ್ಳುತ್ತಾನೆ-" ಗುರುಗಳೇ, ಈಗ ವಿದ್ಯಾರೇಖೆ ಮೂಡಿದೆ ನೋಡಿ" -ಸುರಿಯುತ್ತಿದ್ದ ರಕ್ತವನ್ನು ಲೆಕ್ಕಿಸದೆ ಗುರುಗಳ ಮುಂದೆ ಕೈ ಚಾಚುತ್ತಾನೆ. ಬೆಣಚುಕಲ್ಲಿನಿಂದ ಬಾಲಕ ಕೈ ಮೇಲೆ ಗೆರೆ ಎಳೆದಿರುತ್ತಾನೆ.ಈ ದೃಶ್ಯವನ್ನು ನೋಡಿದ ಗುರುಗಳು ಬಾಲಕನನ್ನು ತಬ್ಬಿಕೊಂಡು " ಕಣ್ಣೀರಿಡುತ್ತಾ ನಿನ್ನಂತಹ ಛಲ ಇರುವ ವಿದ್ಯಾರ್ಥಿಗಲ್ಲದೆ ಇನ್ಯಾರಿಗೆ ನಾನು ವಿದ್ಯಾದಾನ ಮಾಡಲಿ? ನಿನಗೆ ಖಂಡಿತವಾಗಿಯೂ ಹೇಳಿಕೊಡುತ್ತೇನೆಂದು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಈ ಬಾಲಕನೇ ವ್ಯಾಕರಣವನ್ನು ರಚಿಸಿದ ಮಹಾ ಪಂಡಿತ " ಪಾಣಿನಿ"

Monday, March 22, 2010

ಹೊಸ ತಾಣ ವೇದಾಸ್ ಫಾರ್ ಆಲ್

ಆತ್ಮೀಯ ವೇದಾಭಿಮಾನಿಗಳೇ,

ವೇದಸುಧೆಯು ಆರಂಭವಾಗಿ ಬಹುದಿನಗಳೇನೂ ಆಗಿಲ್ಲ. ಬೇಲೂರಿನ ಮಿತ್ರ ಶ್ರೀ ವಿಶ್ವನಾಥ ಶರ್ಮರು ಹಲವು ವರ್ಷಗಳ ಹಿಂದೆ ಶ್ರೀಸುಧಾಕರಶರ್ಮರು ಮಾಡಿದ್ದ ಉಪನ್ಯಾಸಗಳ ಧ್ವನಿಮುದ್ರಿಕೆಯನ್ನು ನನಗೆ ಕೇಳುವಂತೆ ಮಾಡಿದ ಪರಿಣಾಮವಾಗಿ ಅದನ್ನುಎಂಪಿ- ಕ್ಕೆ ಕನ್ವರ್ಟ್ ಮಾಡಿ ನನ್ನ ಮಿತ್ರರಿಗೆಲ್ಲಾ ಕೇಳಿಸಿ ನಂತರ ಬಿನ್ ಫೈರ್ ಡಾಟ್ ಕಾಮ್ ತಾಣಕ್ಕೆ ಅಪ್ಲೋಡ್ ಮಾಡಿ ಅದರಕೊಂಡಿಗಳನ್ನು ಸಂಪದದಲ್ಲಿ ಪ್ರಕಟಿಸಿದ್ದರಿಂದ ಹಲವರು ಸುಧಾಕರಶರ್ಮರ ಉಪನ್ಯಾಸಗಳನ್ನು ಕೇಳುವಂತಾಯ್ತು. ಉಪನ್ಯಾಸಗಳು ಹಲವರ ಮೆಚ್ಚಿಗೆಯನ್ನೂ ಪಡೆಯಿತು. ಅದೇ ಉಪನ್ಯಾಸಗಳ ಬರಹ ರೂಪವನ್ನು ಸಂಪದದಲ್ಲೂ ಪ್ರಕಟಿಸಿದ್ದೆ. ನಂತರ ಅದಕ್ಕಾಗಿಯೇ "ವೇದಸುಧೆ" ಬ್ಲಾಗ್ ಶುರುವಾಯ್ತು. ಬ್ಲಾಗ್ ಶುರುಮಾಡಿದ ಹಿನ್ನೆಲೆಯನ್ನು ಸುಧಾಕರಶರ್ಮರಿಗೆ ತಿಳಿಸಿ ಬಗ್ಗೆ ಬರುವ ಪ್ರಶ್ನೆಗಳಿಗೆ ಶರ್ಮರು ಬ್ಲಾಗ್ ನಲ್ಲಿಯೇ ಉತ್ತರಿಸಲೂ ಒಪ್ಪಿದ್ದರು. ಆದರೆ ಬ್ಲಾಗ್ ನಲ್ಲಿ ಕನ್ನಡದಲ್ಲಿ ಅವರಿಗೆ ಬರೆಯಲುತಾಂತ್ರಿಕ ತೊಡಕುಂಟಾಗಿ ಅವರಿಂದ ಉತ್ತರಗಳನ್ನು ಪ್ರಕಟಿಸಲು ಸಾಧ್ಯವಾಗಲೇ ಇಲ್ಲ. ಮಧ್ಯೆ ಬೆಂಗಳೂರಿನಲ್ಲಿ ಕಳೆದ೧೮..೨೦೧೦ ರಂದು ಕೆಲವು ಮಿತ್ರರು ಪುಟ್ಟ ಸಭೆಯೊಂದನ್ನು ನಡೆಸಿ ವೇದ ಪ್ರಚಾರಕ್ಕಾಗಿ ವೆಬ್ ಸೈಟ್ ಒಂದನ್ನು ಆರಂಭಿಸುವಬಗ್ಗೆ ಚರ್ಚಿಸಿದೆವು. ಅದರ ಎರಡನೆಯ ಸಭೆಯು ದಿನಾಂಕ ೨೦..೨೦೧೦ ರಂದು ವೇದಾಧ್ಯಾಯೀ ಸುಧಾಕರಶರ್ಮರ ಮನೆಯಲ್ಲಿನಡೆದು ವೆಬ್ಸೈಟ್ ಗಾಗಿ ಒಂದು ಸಮಿತಿಯನ್ನು ರಚಿಸಲಾಯ್ತು. ಎಲ್ಲರ ಅಭಿಮತದಂತೆ www.vedasforall.org ಸೂಚಿಸಲಾಯ್ತು. ವಿಶ್ವದಾದ್ಯಂತ ವೇದವಾಣಿಯು ತಲುಪಲೆಂದು ಆಂಗ್ಲ ಭಾಷೆಯಲ್ಲೂ ಹಾಗೂ ದೇಶೀಯ ಭಾಷೆಯಾಗಿಹಿಂದಿಯಲ್ಲೂ , ನಮ್ಮ ಪ್ರಾದೇಶಿಕ ಭಾಷೆಯಾಗಿ ಕನ್ನಡದಲ್ಲೂ ಮತ್ತು ಸಂಸ್ಕೃತದಲ್ಲೂ ಬರಹಗಳನ್ನು ಪ್ರಕಟಿಸಲು ನಿರ್ಧರಿಸಲಾಯ್ತು. ತಾಣದಲ್ಲಿ ಬರಹಗಳಲ್ಲದೆ ಆಡಿಯೋ,ವೀಡಿಯೋ ಕ್ಲಿಪ್ ಗಳೂ ಇರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ತಾಣವನ್ನು ರಚಿಸುವ ತಾಂತ್ರಿಕ ಹೊಣೆಯನ್ನು ಶ್ರೀ ವಿಶಾಲ್ ಮತ್ತು ಅವರ ಮಿತ್ರರಿಗೆ ವಹಿಸಲಾಯ್ತು. ಶ್ರೀ ಸುಧಾಕರ ಶರ್ಮರುಬರಹಗಳನ್ನು ಸಂಪಾದಿಸುವ ಹೊಣೆಯನ್ನು ಹೊತ್ತರು. ಅಂತೂ ಒಂದೆರಡು ದಿನಗಳ ಪ್ರಯತ್ನದಿಂದ ಇಂದು ತಾಣವುಆರಂಭಗೊಂಡಿದೆ. ಇದರ ಉಪಯೋಗವನ್ನು ನಾವು ಪಡೆಯುವುದಲ್ಲದೆ ಅದರ ಪರಿಚಯವನ್ನು ನಮ್ಮ ಮಿತ್ರರಿಗೂ ಮಾಡಿಕೊಡುವಹೊಣೆ ನಮ್ಮದಾಗಬೇಕು.

www.vedasforall.org ವೇದ ಸುಧೆ:

ತಾಣವು ಆರಂಭವಾದರೂ ವೇದಸುಧೆಯು ಮುಂದುವರೆಯುತ್ತದೆ. www.vedasforall.orgವೇದವು ಎಲ್ಲರಿಗಾಗಿ " ಉದ್ಧೇಶವನ್ನು ಹೊಂದಿದ್ದು ಇದರಲ್ಲಿ ವೇದಾಧ್ಯಾಯೀ ಸುಧಾಕರಶರ್ಮರ ಜೊತೆಗೆ ಇನ್ನೂ ಹಲವು ವೇದ ವಿದ್ವಾಂಸರ ಬರಹಗಳುಮತ್ತು ಆಡಿಯೋ ವೀಡಿಯೋ ಕ್ಲಿಪ್ ಗಳಿರುತ್ತವೆ. ಆದರೆ ವೇದಸುಧೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಅಡ್ಡಿಯಾಗದ ಯಾವುದೇವಿಚಾರಗಳ ಚರ್ಚೆ ನಡೆಯುತ್ತದೆ. ವಿಚಾರ ವಿಮರ್ಶೆ ನಡೆಯುತ್ತದೆ.ಇಲ್ಲಿ ಯಾವುದು ವೇದೋಕ್ತ ಅಥವಾ ಯಾವುದು ವೇದೋಕ್ತವಲ್ಲಾಎಂಬುದಕ್ಕಿಂತಲೂ ವ್ಯಕ್ತಿ ಹಾಗೂ ಸಮಾಜದ ನೆಮ್ಮದಿ ಕಾಪಾಡುವ ಯಾವುದೇ ವಿಷಯಗಳ ಬಗ್ಗೆ ವಿಚಾರ ವಿಮರ್ಶೆಮಾಡಲಾಗುವುದು. ಯಾವುದು ಸಮಾಜಕ್ಕೆ ಕಂಟಕವೋ ಅದರ ಬಗ್ಗೆ ಸಮಾಜವನ್ನು ಎಚ್ಚರಿಸುವಂತಾ ಪುಟ್ಟ ಪುಟ್ಟ ಬರಹಗಳನ್ನುಇಲ್ಲಿ ಪ್ರಕಟಿಸಲಾಗುವುದು.

ಅಂತೂ ವೇದಾಸ್ ಫಾರ್ ಆಲ್ ತಾಣವು ವೇದಸುಧೆ ಬ್ಲಾಗ್ ಗೆ ಪ್ರತಿ ಸ್ಪರ್ಧಿಯಾಗಿ ಆರಂಭಗೊಂಡಿಲ್ಲ, ಬದಲಿಗೆ ತಾಣದ ವ್ಯಾಪ್ತಿವಿಶಾಲವಾಗಿದ್ದು ವೇದಸುಧೆಯು ತಾಣಕ್ಕೆ ಪೂರಕವಾಗಿರುತ್ತದೆ.



Thursday, March 11, 2010

ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!

ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯು ಹೇಳುತ್ತಿದ್ದರು " ನೋಡುಮಗು, ಸುಳ್ಳು ಹೇಳಬಾರದು,” ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!" ಇವತ್ತು ಆ ಮಾತು ನೆನಪು ಮಾಡಿಕೊಂಡರೆ ನಗು ಬರುತ್ತೆ. ಆದರೆ ಆ ವಯಸ್ಸಿನಲ್ಲಿ ಹೆದರಿಸಿದ್ದರಿಂದ ಒಂದಿಷ್ಟು ಒಳ್ಳೆಯ ನಡತೆಯನ್ನು ರೂಢಿಸಿಕೊಳ್ಳಲು ಸಹಾಯವಾಗಿದ್ದಿರಬಹುದು. ಈಗ ಆ ಮಾತು ಯಾಕೆ ನೆನಪಾಯ್ತೆಂದರೆ ಚಿಕ್ಕ ಮಕ್ಕಳಿಗೆ ಹೀಗೆ ಭಯ ಉಂಟು ಮಾಡಿ ಒಂದಿಷ್ಟು ಸದ್ಗುಣಗಳನ್ನು ಕಲಿಸುವುದನ್ನು ಒಪ್ಪ ಬಹುದೇನೋ ಆದರೆ ಪ್ರೌಢಾವಸ್ತೆ ತಲುಪಿದಮೇಲೂ ಈ ರೀತಿ ಯಾರಾದರೂ ಭೀತಿಯುಂಟು ಮಾಡಿದರೆ ಅವರಿಗೆ ಏನೆನ್ನಬೇಕು? ಹಲವಾರು ವರ್ಷಗಳಿಂದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನನ್ನ ಮನದಲ್ಲಾಗುವ ಜಂಜಾಟವನ್ನು ನಿಮ್ಮ ಗಮನಕ್ಕೂ ತರಲು ಈ ಪ್ರಯತ್ನ. ಪೂಜಾ ಭಾಗ ಮುಗಿಯುವ ವರೆಗೂ ಭಕ್ತಿಯಿಂದಲೇ ಕುಳಿತಿರುವ ನನಗೆ ಸತ್ಯನಾರಾಯಣ ಕಥೆಯನ್ನು ಕೇಳುವಾಗ ಗೊಂದಲ ಶುರುವಾಗುತ್ತದೆ. ಸತ್ಯನಾರಾಯಣ ಪ್ರಸಾದವನ್ನು ತಿನ್ನಲಿಲ್ಲವೆಂಬ ಕಾರಣಕ್ಕೆ ವ್ಯಾಪಾರಿಯೊಬ್ಬನ ಹಡಗುಗಳು ಸಮುದ್ರದಲ್ಲಿ ಮುಳುಗಿಹೋಗಿ ಭಾರಿ ನಷ್ಟವಾಯ್ತೆಂದೂ ನಂತರ ಪಶ್ಚಾತ್ಥಾಪ ಪಟ್ಟು ವ್ರತವನ್ನಾಚರಿಸಿ ಪ್ರಸಾದವನ್ನು ತಿಂದ ಮೇಲೆ ಅವನ ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಾಯ್ತೆಂದೂ ಕಥೆಯನ್ನು ಕೇಳುವಾಗ , ನಮ್ಮಜ್ಜಿ ನೆನಪಾಗುತ್ತಾಳೆ
ಸತ್ಯನಾರಾಯಣ ಕಥೆಯನ್ನು ಯಾರೂ ಪ್ರಶ್ನೆ ಮಾಡಲು ಯತ್ನಿಸುವುದಿಲ್ಲ. ಕಾರಣ ಅದರ ಹಿಂದೆ ಶ್ರದ್ಧೆ- ಭಕ್ತಿಯ ಜೊತೆಗೆ ಭೀತಿಯೂ ಸೇರಿದೆ. ಸತ್ಯನಾರಾಯಣವ್ರತವನ್ನು ಕೇವಲ ಯಾರೋ ಅವಿದ್ಯಾವಂತರು ಆಚರಿಸುತ್ತಾರೆಂದೇನೂ ಅಲ್ಲ. ಬಹುಪಾಲು ಜನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಅದರಬಗ್ಗೆ ಯಾವ ತಕರಾರೂ ಇಲ್ಲ. ಆದರೆ ಎಲ್ಲರನ್ನೂ ರಕ್ಷಿಸುವ ಭಗವಂತನು ಐಶ್ವರ್ಯವನ್ನು ನಾಶಮಾಡಿದ, ಜೀವಹಾನಿ ಮಾಡಿದ, ಮುಂತಾಗಿ ಕಥೆ ಇದ್ದರೆ ಅದನ್ನು ಇನ್ನೂ ಹೇಳಿಕೊಂಡೇ ಇರಬೇಕೇ?
ಯಾವುದೋ ಒಂದು ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಬಂದಾಗ ಧರ್ಮಕಾರ್ಯ ನಡೆಯಲು ಅಂದಿನ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಜನರಲ್ಲಿ ಭಯವನ್ನುಂಟು ಮಾಡಿದರೆ ಅವನು ಧರ್ಮಮಾರ್ಗದಲ್ಲಿ ಹೋಗುತ್ತಾನೆಂಬ ಕಾರಣದಿಂದ ಒಂದಿಷ್ಟು ಕಥೆ ಹೆಣೆದಿರಬಹುದು. ಇದನ್ನು ಇಂದಿನ ದಿನಗಳಲ್ಲಿ ಪುರೋಹಿತರು ಅವರ ಹೊಟ್ಟೆ ತುಂಬಿಸಿಕೊಳ್ಳಲು ಮಾಡಿದ ಪ್ಲಾನ್ ಅಂತಾ ಹೇಳುವ ಜನರಿದ್ದಾರೆ. ದೇವರನ್ನು ನಂಬದ ನಾಸ್ತಿಕನ ವಿಚಾರ ಬೇರೆ. ವಿಚಾರವಾದದ ಹೆಸರಲ್ಲಿ ಹಿಂದು ಪರಂಪರೆ, ಹಿಂದು ಧಾರ್ಮಿಕ ಆಚರಣೆಗಳನ್ನು ಖಂಡಿಸುವವರ ವಿಚಾರ ಬೇರೆ. ಆದರೆ ಭವಂತನನ್ನು ನಂಬುವ ಹಿಂದು ಆಚಾರ-ವಿಚಾರಗಳನ್ನು ಪ್ರೀತಿಸುವ ಪ್ರಗತಿಪರ ಆಸ್ತಿಕನ ವಿಚಾರ ಬಂದಾಗ ಇಂತಾ ಕಥೆಗಳನ್ನು ಹೇಳದೆ ಮನಸ್ಸಿನ ನೆಮ್ಮದಿಗಾಗಿ ಯಾವುದೇ ದೇವರ ಪೂಜೆಯನ್ನು ಅವನ ಇಚ್ಛೆಯಂತೆ ಮಾಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಭಾವನೆ. ಅಷ್ಟೇ ಅಲ್ಲ ಕುರುಡು ನಂಬಿಕೆಗಳು, ಅಂಧಾಚರಣೆಗಳನ್ನು ಬಿಡುವ ಧೈರ್ಯ ನಮಗೆ ಬರಬೇಕು. ನೀವುಏನಂತೀರಾ?

Wednesday, March 10, 2010

ಆತ್ಮೀಯ ಹಾರೈಕೆ

ಆತ್ಮೀಯ ಶ್ರೀಧರ್,
ನಮಸ್ಕಾರ ತಮಗೆ,
ತಮ್ಮ ಬಗ್ಗೆ ತಿಳಿದುಕೊಂಡೆ, ಬಹಳ ಸಂತೋಷವಾಯಿತು.
ಸ್ವಾರ್ಥಿಗಳು ಏನನ್ನೂ ಮಾಡಲಾರರೇ ವಿನಃ ನಿಸ್ವಾರ್ಥರು ತಮ್ಮನ್ನು ಸದಾ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡೆ ಇರುತ್ತಾರೆ. ತಮ್ಮ ಬಹುಮುಖಿ ವ್ಯಕ್ತಿತ್ವದ ಅರಿವಾಗುತ್ತಿದೆ. ತಮ್ಮ ಸಮಾಜಮುಖಿ ಕೆಲಸಕ್ಕೆ ಎಷ್ಟೇ ಕೃತಜ್ಞತೆ ಹೇಳಿದರೂ ಅದು ಸಾಲದ್ದು ಅಥವಾ ಏನೋ ನಮ್ಮಿಂದ ಆಗದ್ದಕ್ಕೆ ಸುಮ್ಮನೇ ಹೇಳಬೇಕಲ್ಲ ಅಂತ ಹೇಳಿದ್ದೆವೇನೋ ಅನ್ನಿಸಿಬಿಡುತ್ತದೆ. ಯಾವುದೇ ಪ್ರಶಸ್ತಿ-ಫಲಕಗಳ ಹಿಂದೆ ಬೀಳದೆ 'ನಿಜದ ಅರಿವಿ'ನೆಡೆಗೆ ನೀವು ಹೆಜ್ಜೆ ಹಾಕಿರುವುದು ನಿಮ್ಮ ಪುಣ್ಯ ಸಂಚಯನಕ್ಕೆ ಬಹಳ ಅನುಕೂಲ.
ಇನ್ನು ನೀವು ಹೇಳಿದ ಹಾಗೇ ವೃತ್ತಿ ಜೀವನ ಒಂದು ಇರಲೇಬೇಕು, ಅದರ ಹಕ್ಕು-ಬಾಧ್ಯತೆಗಳು ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮನೆ-ಕುಟುಂಬ ಇದರ ಜವಾಬ್ದಾರಿ ಇನ್ನೊದು ಕಡೆಗೆ. ಇವುಗಳ ಜೊತೆಗೇ ಇಂದಿನದಿನ ಸಮಾಜ ಸೇವೆ ಮಾಡುವುದು ಬಹಳ ಕಷ್ಟಸಾಧ್ಯದ ಮಾತೇ ಸರಿ. ಹಲ್ಲುಗಳ ಮಧ್ಯೆಯ ನಾಲಿಗೆಯಂತೆ, ಕಷ್ಟಗಳ ಮಧ್ಯೆಯೇ ನಮ್ಮನ್ನು ಮರೆತು ಉಳಿದ ಸಹಯಾತ್ರಿಕರಿಗೆ [ಜೀವನವೇ ಯಾತ್ರೆ ಅಂತ ತಿಳಿದರೆ] ಮಾರ್ಗದರ್ಶಿಸುವಲ್ಲಿ, ಒಳ್ಳೆಯ ಗುರು-ಹಿರಿಯ ತತ್ವಬೋಧಕರನ್ನು ತೋರಿಸುವಲ್ಲಿ ತಾವು ಮಾಡಿರುವ ಕೆಲಸ ಶ್ಲಾಘನೀಯ, ನಮ್ಮ ಬಾಯಿಮಾತಿನ ಶ್ಲಾಘನೆ ಬೇಡ ಬಿಡಿ, ಇದು ಬೂಟಾಟಿಕೆಯಾದೀತು, ನಿಮಗೆ ದೇವರೇ ನಿರ್ಮಿಸಿಕೊಡುವ ಬಹುದೊಡ್ಡ ಶ್ಲಾಘನೆ ಜನ್ಮಾಂತರಕ್ಕೂ ಸಿಗಲಿದೆ; ಇದರಲ್ಲಿ ಯಾವುದೇ ಸಂಶಯವಿಲ್ಲ.
ರಾ.ಸ್ವ.ಸಂಘದ ಬಗ್ಗೆ ಬಹಳ ಕುತೂಹಲ-ಆಸಕ್ತಿ ಇದ್ದ ನನಗೆ, ನಮ್ಮೂರಿನಲ್ಲಿ ನಾನು ಚಿಕ್ಕವನಿರುವಾಗಲೇ ನಮ್ಮ ಮನೆಯಲ್ಲಿ ಬೈಠಕ್ ನಡೆದಿತ್ತು, ಹೀಗಾಗಿ ಅದರ ಕಾರ್ಯತತ್ಪರತೆ ಗೊತ್ತಿರುವ ವಿಷಯ, ಅದಿಲ್ಲದಿದ್ದರೆ ನಮ್ಮ ಹಿಂದೂಗಳನ್ನೆಲ್ಲಾ ಕುತ್ಸಿತ ರಾಜಕಾರಣಿಗಳು ಏನುಮಾಡುತ್ತಿದ್ದರು ಎನ್ನುವುದು ಊಹಿಸಲೂ ಕಷ್ಟ. ಅದರಲ್ಲಿ ತೊಡಗಿದವರು ಒಂಥರಾ ರಾಮಕೃಷ್ಣಾಶ್ರಮದಲ್ಲಿ ತರಬೇತಿ ಪಡೆದಂತೆ ಇರುತ್ತಾರೆ ಎಂದು ಬೇರೆ ಹೇಳಬೇಕೇ?
ನಮ್ಮಲ್ಲಿ ವರದಹಳ್ಳಿಯ ಭಾಗವನ್ ಶ್ರೀಧರರ ಬಗ್ಗೆ ತಾವು ಕೇಳಿರಬಹುದು, ಅಂಥ ಮಹಾತ್ಮರ ಹೆಸರನ್ನು ಪಡೆದಿದ್ದೀರಿ, ನನಗೆ ಅದೂ ಬಹಳ ಸಲ ನೆನಪಿಗೆ ಬಂತು.ಹೀಗಾಗಿ ನಿಮ್ಮನ್ನು ಅರಿತುಕೊಂಡು ಬಹಳ ಆಭಾರಿಯಾಗಿದ್ದೇನೆ, ನಿಮಗೆ ಪ್ರಜ್ಞಾನಮೂಲ ಪರಬ್ರಹ್ಮ ಸುದೀರ್ಘ ಅಕ್ಷಯ ಆಯುರಾರೋಗ್ಯ ,ನಿರ್ವಿಘ್ನತೈಶ್ವರ್ಯ, ಜ್ಞಾನ-ಸಂಪತ್ ಸಮೃದ್ಧಿ ಕರುಣಿಸಲೆಂದು ಅವನಲ್ಲಿ ಪ್ರಾರ್ಥಿಸಿ ಶುಭಾಹಾರೈಸುತ್ತಿದ್ದೇನೆ .
|| ಸತ್ಯಾಃ ಸಂತು ಶ್ರೀ ಶ್ರೀಧರಸ್ಯ ಕಾಮಾಃ || [ಸ್ವರ ಸೇರಿಸಿ ಓದಿಕೊಳ್ಳಿ]
ಧನ್ಯವಾದಗಳು, ಶುಭದಿನ
ವಿ.ಆರ್.ಭಟ್

Monday, March 8, 2010

ಬೆಳಕಿನ ಕಿಂಡಿ

ವೇದವು ಯಾರ ಸ್ವತ್ತು?
ಇಂದು ವೇದದ ಬಗೆಗೆ ತಪ್ಪು ಕಲ್ಪನೆಗಳೇ ಹೆಚ್ಚು.ವೇದವು ಯಾರ ಸ್ವತ್ತು? ಬ್ರಾಹ್ಮಣರು ಮಾತ್ರ ಕಲಿಯ ಬೇಕೆ? ಅಥರ್ವಣವೇದದಲ್ಲಿ ಈ ಬಗ್ಗೆ ಏನು ಹೇಳಿದೆ? ಈ ಬಗ್ಗೆ ನೋಡೋಣ.

ಪ್ರಜಯಾ ಸ ವಿಕ್ರಿಣೀತೇ
ಪಶುಭಿಶ್ಚೋಪದಸ್ಯತಿ|
ಯ ಆರ್ಷೇಯೇಭ್ಯೋ ಯಾಚದ್ಭ್ಯೋ
ದೇವಾನಾಂ ಗಾಂ ನ ದಿತ್ಸತಿ||

[ಅಥರ್ವ.೧೨.೪.೨]

ಅರ್ಥ:
ಯಾವನು ಆರ್ಷೇಯರಾದ ಅಂದರೆ ಪರಮಋಷಿಯಾದ ಪರಮಾತ್ಮನ ಮಕ್ಕಳಾದ ಜ್ಞಾನಯಾಚನೆ ಮಾಡುವ ಜನರಿಗೆ, ವಿದ್ವಜ್ಜನರ ಸಂಪತ್ತಾದ ವೇದವಾಣಿಯನ್ನು ಕೊಡಲು ಇಚ್ಛಿಸುವುದಿಲ್ಲವೋ, ಅವನು ಮಕ್ಕಳು-ಮರಿಗಳೊಂದಿಗೆ ಮಾರಿಹೋಗುತ್ತಾನೆ. ಮತ್ತು ತನ್ನ ಪಶು ಸಂಪತ್ತಿನೊಂದಿಗೆ ನಷ್ಟ-ಭ್ರಷ್ಟನಾಗಿ ಹೋಗುತ್ತಾನೆ.
ಇದು ವೇದ ವಾಣಿ. ಇನ್ಯಾರ ಅಪ್ಪಣೆ ಬೇಕು?
ವೇದವನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳು ಬೇಡವೇ? ಅರ್ಹತೆ ಬೇಡವೇ? ಯಾವುದೇ ವಿದ್ಯೆಯನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳೂ ಬೇಕು, ಅರ್ಹತೆಯೂ ಬೇಕು.ಹಾಗಾದರೆ ಕಟ್ಟುಪಾಡುಗಳೇನು? ವೇದವನ್ನು ಕಲಿಯಲಿಚ್ಛಿಸುವವನು ಮಾಂಸಾಹರಿಯಾಗಿದ್ದರೆ ಮೊದಲು ಮಾಂಸಾಹಾರ ತ್ಯಜಿಸಬೇಕು.ವೇದವನ್ನು ಕಲಿಯುವ ತೀವ್ರ ಇಚ್ಛೆ ಹೊಂದಿರಬೇಕು.ಅರ್ಹತೆ ಏನು? ಉಪನಯನ ಸಂಸ್ಕಾರವಾಗಬೇಕು. ಕಲಿಯಬೇಕೆಂಬ ಇಚ್ಛೆ ತೀವ್ರ ವಾದರೆ ಗುರುವು ದೊರೆಯುತ್ತಾನಷ್ಟೇ ಅಲ್ಲ,ಬೇಕಾದ ಸಿದ್ಧತೆ ಮಾಡಿಸುತ್ತಾನೆ.ಈಗಾಗಲೇ ಅಂತಹ ಗುರುಗಳು ನಮ್ಮ ಮಧ್ಯೆಯೇ ಇದ್ದಾರೆ.ಉಪಯೋಗವಾಗಬೇಕಷ್ಟೆ.

Friday, March 5, 2010

ಕೃತಜ್ಞತೆಗಳು

ಸೇವೆಯಲಿ ತಾನು ತನ್ನನು ಮರೆತುಸಲ್ಲುವುದು
ಯಾವ ಕಾಲಕೂ ಬರುವ ಪುಣ್ಯ ಸಂಚಯನ
ಜೀವಿತಾವಧಿಯುದ್ದ ಮಾಡು ವೇದಾಧ್ಯಯನ
ಜವನ ಧಿಕ್ಕರಿಸುತಲಿ | ಜಗದಮಿತ್ರ

ಸನ್ಮಿತ್ರರಾಗಿ ನಮ್ಮೆಲ್ಲಾ ಓದುಗ ಮಿತ್ರರಿಗೆ ನಿಸ್ವಾರ್ಥರಾಗಿ ವೇದಸುಧೆಯನ್ನು ಹರಿಸುತ್ತಿರುವ ಶ್ರೀ ಶ್ರೀಧರ್ ಅವರಿಗೆ ಧನ್ಯತಾಪೂರ್ವಕ ಅರ್ಪಿಸಿದ ಸಾಲುಗಳು, ಓದುಗ ಸ್ನೇಹಿತ ಬಂಧುಗಳೇ, ಬನ್ನಿ ವೇದಸುಧೆಯಲ್ಲಿ, ವೇದದ ಸೇವಾ ಕೈಂಕರ್ಯದಲ್ಲಿ ಕೈಜೋಡಿಸೋಣ
--ವಿ.ಆರ್.ಭಟ್