Pages

Wednesday, March 5, 2014

ಜೆವನ ವೇದ -4

ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ
ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶ ವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

ಜೀವನ ವೇದ -3

ಸಮಾಜಿಕ ಮತ್ತು ಪರಿಸರ ಜಾಗೃತಿ ಮೂಡಿಸುವ ತಂದೆತಾಯಿಯರು ನಾವಾಗೋಣ
ಒಂದು ನೆಮ್ಮದಿಯ ಕುಟುಂಬದಲ್ಲಿನ ಯಜಮಾನನ ಅರ್ಹತೆಗಳ  ಬಗ್ಗೆ ಅಥರ್ವಣ  ವೇದದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರದ ಆಧಾರದಲ್ಲಿ  ವಿಚಾರ ಮಾಡುತ್ತಿದ್ದೆವು. ಕಳೆದ ವಾರ ಮೊದಲ ಸಾಲಿನ ಎರಡು  ಶಬ್ಧಗಳ ಬಗ್ಗೆ ಚರ್ಚಿಸಿದ್ದೇವೆ.  ಇಂದು ಮುಂದಿನ ಭಾಗದ ಬಗ್ಗೆ ವಿಚಾರವನ್ನು ಮಾಡೋಣ. ಇಂದು ವಿಮರ್ಶೆಮಾಡಬೇಕಾದ ಮಂತ್ರ ಭಾಗವೆಂದರೆ. . . . . . .
ಸುಮೇಧಾ:
ಮೇಧಾವಂತನಾಗಿರಬೇಕು. ಎಲ್ಲಿ ಮೇಧಾ ಅಂದರೆ ಜ್ಞಾನವಿರುತ್ತದೆಯೋ ಅಲ್ಲಿ ಅಂಧವಿಶ್ವಾಸ ಗಳಿರುವುದಿಲ್ಲ.ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ. ಧರ್ಮಾಧರ್ಮಗಳ ವಿವೇಕವಿದ್ದಾಗ ಜೀವನವು ನಿರ್ಭಯದಿಂದ ಸಾಗುತ್ತದೆ. ಅವನು ಯಾವುದೇ ವ್ಯಾಮೋಹಕ್ಕೆ ಒಳ   ಗಾಗುವುದಿಲ್ಲ. ಮನೆಯ ಸದಸ್ಯರಲ್ಲಿ ವ್ಯಾಮೋಹ ಹೊಂದದೆ ಪ್ರೀತಿ,ವಾತ್ಸಲ್ಯ, ಮಮಕಾರಗಳನ್ನು ಹೊಂದಿರುತ್ತಾನೆ. ಮನೆಯ ಹಿರಿಯನ ಈ ಗುಣಗಳು ಕಿರಿಯರ ಅಭ್ಯುದಯಕ್ಕೆ ಆಸ್ಪದ ನೀಡುತ್ತವೆ.
ಮನೆಯ ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ..
ಅಘೋರೇಣ ಚಕ್ಷುಷಾಮಿತ್ರಿಯೇಣ|
ಶಾಂತವಾದ,ಸ್ನೇಹಪೂರ್ವಕ ದೃಷ್ಟಿಕೋನ ಹೊಂದಿದ ನಡೆಯುಳ್ಳವನು, ಎಂದು ಈ ಮಂತ್ರಭಾಗದ ಅರ್ಥ.
ಕೆಲವು ಮಕ್ಕಳು ತಮ್ಮ ಅಹವಾಲನ್ನು ತಾಯಿಯೊಡನೆ ಮಾತ್ರವೇ ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅಪ್ಪ ಎಲ್ಲಿ ಬೈದುಬಿಡುತ್ತಾರೋ! ಎಂಬ ಭಯ. ತಂದೆಯ ಬಗ್ಗೆ  ಇಂತಹ ಭಯವು ಸರ್ವತಾ ಇರಕೂಡದು. ಇಲ್ಲಿ ತಪ್ಪು ಮಕ್ಕಳದ್ದಲ್ಲ ತಂದೆಯದು. ವೇದವು ಹೇಳುತ್ತದೆ  ಮಕ್ಕಳನ್ನು ಸ್ನೇಹದಿಂದ ನೋಡು ಎಂದು. ಒಬ್ಬ ತಂದೆ ತನ್ನ ಮಕ್ಕಳನ್ನು ಭಯದಿಂದ ಇಟ್ಟುಕೊಂಡಿದ್ದಾನೆಂದರೆ ಅವನು ವೇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದೇ ಅರ್ಥ. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆದ್ದು ವಿಶ್ವಾಸದಿಂದ  ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕೇ ಹೊರತೂ ಭಯದಿಂದಲ್ಲ.
ಮನೆಯ ಯಜಮಾನನ ಮತ್ತೊಂದು ಅರ್ಹತೆ ಎಂದರೆ.. . . .
ಸುಮನಾ: -
ಸುಮನಾ ಎಂದರೆ ಉತ್ತಮ ಮನಸ್ಸುಳ್ಳವನು ಎಂದರ್ಥ. ಒಬ್ಬ ಆದರ್ಶ ತಂದೆಯ ಮನಸ್ಸು ಉತ್ತಮವಾಗಿರಬೇಕಾದರೆ ಅವನು ಪವಿತ್ರಕಾಮದಿಂದ ಪೂರ್ಣವಾಗಿರಬೇಕು, ಪಾಪಮಯ ವಾಸನೆಯು ಹತ್ತಿರವೂ ಸುಳಿಯ ಕೂಡದು.ಪಾಪಮಯ ವಾಸನೆಗೆ ಬಲಿಯಾದದ್ದೇ ಆದರೆ ಅವನ ಮನಸ್ಸು ಉತ್ತಮ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ.
ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ. . . . .
ವಂದಮಾನ:- ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರಬೇಕು. ಅಂದರೆ ಅವನಲ್ಲಿ ಹುಡುಕಿದರೂ ದೋಷ ಸಿಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಯಾರೊಡನೆಯೂ ಅತೀ ಸಲಿಗೆಯೂ ಇರಬಾರದು, ವೈರವೂ ಇರಬಾರದು. ಅನಗತ್ಯವಾದ ವಾದ ವಿವಾದಗಳು ವೈರತ್ವಕ್ಕೆ ಕಾರಣವಾಗುತ್ತದೆ.
ಹಲವು ಭಾರಿ ಬೇಡದ ವಿಷಯಗಳಿಗೆ ಚರ್ಚೆ ಆರಂಭವಾಗಿ ಅದು ಬೇರೆಯದೇ ಹಾದಿ ಹಿಡಿದುಬಿಡುತ್ತದೆ. ಯಾರೊಡನೆಯೂ ಅನಗತ್ಯವಾಗಿ ವಾದ ಮಾಡಬಾರದೆಂದು ತೀರ್ಮಾನಿಸಿದ್ದರೂ ಹಲವು ವೇಳೆ ನಮಗರಿವಿಲ್ಲದಂತೆ ನಮ್ಮ ಸುಮಧುರ ಮಾತುಗಳೂ ಕೂಡ ವಾದದತ್ತ ಹೊರಳಿರುತ್ತದೆ. ನಮಗೆ ಸತ್ಯವೆನಿಸಿದ್ದನ್ನು ನಾವು ಹೇಳುತ್ತಿದ್ದರೂ ಅದು ಎದುರು ಪಕ್ಷದವನಿಗೆ ರುಚಿಸದಾಗ ಮಾತು ವಾದದತ್ತ ನಮಗರಿವಿಲ್ಲದೆ ಹೊರಳುತ್ತದೆ. ಎದುರಾಳಿಯು ವಿತ್ತಂಡವಾದ ಮಾಡಲೆಂದೇ ಬಂದಿದ್ದರಂತೂ ನಮ್ಮ ಕಥೆ ಮುಗಿದಂತೆಯೇ. ಆದ್ದರಿಂದ ನಿಮ್ಮ ಮಾತನ್ನು ಒಪ್ಪದ ವ್ಯಕ್ತಿಯನ್ನು ಒಪ್ಪಿಸುವ ಪ್ರಯತ್ನ ಮಾಡದಿರುವುದೇ ಕ್ಷೇಮ. ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ಒಂದು ಉತ್ತಮ ವಿಚಾರವನ್ನು ತನ್ನ ವಿತ್ತಂಡವಾದದಿಂದ ಸೋಲಿಸಬೇಕೆಂದು ನಿರ್ಧರಿಸಿರುವ ವ್ಯಕ್ತಿಗೆ ನಷ್ಟವಾಗುತ್ತದೆಯೇ ಹೊರತೂ ನಿಮಗೇನೂ ನಷ್ಟವಿಲ್ಲ. ಅಲ್ಲವೇ? ಆದ್ದರಿಂದ ಎಲ್ಲರ ಪ್ರಶಂಸೆಗೆ ಪಾತ್ರನಾಗಬೇಕೆಂದರೆ ಅನಗತ್ಯ ವಾದ-ವಿವಾದ ಮಾಡಲೇ ಕೂಡದು
ಅಹಂಕಾರವು ಮನುಷ್ಯನ ದೊಡ್ದ ಶತ್ರುವಾಗಿದ್ದು, ಅಹಂಕಾರವು ಇವನ ಎಲ್ಲಾ ಸದ್ಗುಣಗಳನ್ನೂ ಮೆಟ್ಟಿ ಇವನನ್ನು ಅವನತಿಯತ್ತ ತಳ್ಳುತ್ತದೆ. ಆದ್ದರಿಂದ ಅಹಂಕಾರವು ಸುಳಿಯದಂತೆ ಎಚ್ಚರವಹಿಸಬೇಕು. ಹೀಗೆ ಒಬ್ಬ ಆದರ್ಶ ತಂದೆಯಾಗಿರಬೇಕಾದರೆ ಮೇಲಿನ ಆರು ಗುಣಗಳನ್ನು ಹೊಂದಿರಬೇಕು.
ಋಗ್ವೇದದ ಇನ್ನೊಂದು  ಮಂತ್ರವು ತಂದೆ-ತಾಯಿಯ ಕರ್ತವ್ಯದ ಬಗ್ಗೆ ಸೊಗಸಾಗಿ ಹೇಳುತ್ತದೆ.ಆ ಮಂತ್ರದ ಬಗ್ಗೆ ವಿಚಾರ ಮಾಡೋಣ.

ತೇ ಸೂನವ: ಸ್ವಪಸ: ಸುದಂಸಸೋ ಮಹೀ ಜಜ್ಞುರ್ಮಾತರಾ ಪೂರ್ವ ಚಿತ್ತಯೇ |
ಸ್ಥಾತುಶ್ಚ ಸತ್ಯಂ ಜಗತಶ್ಚ ಧರ್ಮಾಣಿ ಪುತ್ರಸ್ಯ ಪಾಥ: ಪದಮದ್ವಯಾವಿನ: || [ಋಗ್ವೇದ ಮಂಡಲ -೧ ಸೂಕ್ತ- ೧೫೯ ಮಂತ್ರ - ೩]
ಪದಾರ್ಥ:-
ಸ್ವಪಸ: = ಉತ್ತಮ ಕರ್ಮಗಳು
ಸುದಂಸಸ: = ಅವುಗಳನ್ನು ಉತ್ತಮ ರೀತಿಯಲ್ಲಿ ಆಚರಣೆಗೆ ತರುವವರು
ಪೂರ್ವ ಚಿತ್ತಯೇ = ಅದಕ್ಕೆ ಅಗತ್ಯವಾದ ಸಿದ್ಧತೆಯನ್ನು ಮುಂಚಿತವಾಗಿ ಯೋಚಿಸುವವರು
ಜಗ್ನ್ಯು: = ಪ್ರಸಿದ್ಧರಾಗಿರುತ್ತಾರೆಯೋ
ತೇ = ಅವರು
ಮಹಿ = ಹಿರಿದಾದ
ಮಾತರ = ತಾಯಿಯನ್ನು
ಸ್ಥಾತು: = ಸ್ಥಿರ ಧರ್ಮವನ್ನಾಚರಿಸುವವನು
ಚ = ಮತ್ತು
ಜಗತ: = ಜಗತ್ತಿಗೆ
ಧರ್ಮಾಣಿ = ಸಾಧಾರಣ ಧರ್ಮಗಳಲ್ಲಿ
ಅದ್ವಯಾವಿನ: = ಏಕರೂಪದಲ್ಲಿರುವ
ಪುತ್ರಸ್ಯ = ಮಗನಿಗೆ
ಸತ್ಯ ಪದಂ = ಸ್ಥಿರವಾದ ಸ್ಥಾನವನ್ನು ಪಡೆಯುವಂತಹ
ಪಾಥ: ಮಾರ್ಗವನ್ನು
ಸೂನವ: = ಅವರ ಸಂತಾನಗಳು ನಿರಂತರ ಕೈಗೊಳ್ಳಬೇಕು
ಭಾವಾರ್ಥ :-
ಭೂಮಿ ಮತ್ತು ಸೂರ್ಯರು ಸ್ಥಿರ ಮತ್ತು ಜಂಗಮರೂಪವಾದ ಎಲ್ಲಾ ಜೀವಿಗಳನ್ನು ಹೇಗೆ ಪಾಲನೆ ಮಾಡುತ್ತಾರೋ, ಎಲ್ಲಾ ಜೀವಿಗಳಿಗೂ ಸಮಾನಧರ್ಮವನ್ನು ಹೇಗೆ ಅನ್ವಯಿಸುವಂತೆ ಮಾಡುತ್ತಾರೋ ಅದನ್ನು ಅರಿಯಬೇಕು. ತಂದೆತಾಯಿಯರು ಈ ವಿಸ್ಮಯ ಜಗತ್ತಿನ ರಹಸ್ಯವನ್ನು ಮಕ್ಕಳಿಗೆ ಹೇಳಿಕೊಟ್ಟು ಅವರೂ ಸಹ ಈ ಜಗತ್ತಿನಲ್ಲಿ ಕೃತಾರ್ಥರಾಗುವಂತೆ ಮಾಡಬೇಕು.

ಈ ಮಂತ್ರದ ಭಾವಾರ್ಥದ ಬಗ್ಗೆ ವಿಚಾರಮಾಡುವಾಗ ಪ್ರಕೃತಿಯ ಚಿತ್ರಣ ನಮ್ಮ ಕಣ್ಮುಂದೆ ಬರಬೇಕು. ಈ ಸೃಷ್ಟಿಯ ರಹಸ್ಯವು ಸಾಮಾನ್ಯರಾದ ನಮಗೆ ಅರ್ಥವಾಗುವುದು ಅಷ್ಟು ಸುಲಭವೇನಲ್ಲ. ಆದರೆ ಭಗವಂತನು ನಮಗೆ ಕೊಟ್ಟಿರುವ ಗಾಳಿ,ಬೆಳಕು,ನೀರಿನ ಬಗ್ಗೆ ನಾವೇನಾದರೂ ಕಿಂಚಿತ್ ಯೋಚಿಸಿದ್ದೇವೆಯೇ? ನಾವು ಬದುಕಲು ಬೇಕಾದ ಇಷ್ಟನ್ನೂ ನಮಗೆ ಭಗವಂತನು ಉಚಿತವಾಗಿ ನೀಡಿದ್ದಾನಲ್ಲಾ! ಅಷ್ಟೇ ಅಲ್ಲ, ಇವನು ಒಳ್ಳೆಯವ, ಇವನು ಕೆಟ್ಟವ, ಇವನು ನಮ್ಮವ, ಇವನು ಬೇರೆಯವನೆಂದು ಭೇದ ಮಾಡಲೇ  ಇಲ್ಲವಲ್ಲಾ!
ಈ ಮಂತ್ರವು ಹೇಳುತ್ತದೆ ಈ ಭೂಮಿ-ಸೂರ್ಯರ ಧರ್ಮವನ್ನು ತಂದೆತಾಯಿಯಾದವರು ತಮ್ಮ ಮಕ್ಕಳಿಗೆ ಹೇಳಿಕೊಡಿ. ಅಬ್ಭಾ! ಒಂದು ವೇಳೆ ಭಗವಂತನ ಈ ಸಮಾನ ಧರ್ಮವನ್ನು ಸರಿಯಾಗಿ ಅರಿತುಕೊಂಡಿದ್ದೇ ಆದರೆ ನಾವು ಪ್ರಕೃತಿಯ ನಾಶಕ್ಕೆ ಕಾರಣ ವಾಗುತ್ತಿರಲಿಲ್ಲ. ನಮ್ಮ ದುರಾಸೆಯ ಪರಿಣಾಮವಾಗಿ ನಾವು ಕಾಡನ್ನೂ ಬಿಡಲಿಲ್ಲ, ಕೆರೆಗಳನ್ನೂ ಬಿಡಲಿಲ್ಲ. ಕಾಡನ್ನು ನಾಶಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿದೆವು. ಕೆರೆಗಳನ್ನು ನಾಶಮಾಡಿ ಮನೆ ಕಟ್ಟಿದೆವು! ಪರಿಣಾಮ ಕಾಡಿನಲ್ಲಿರಬೇಕಾದ ಮೃಗಗಳೆಲ್ಲಾ ಆಶ್ರಯವಿಲ್ಲದೆ ನಾಡಿಗೆ ನುಗ್ಗುತ್ತಿವೆ! ಕೆರೆಗಳನ್ನು ನಾಶಮಾಡಿದ ನಾವು ಅಂತರ್ಜಲ ಕುಸಿತವಾಗಿ ನೀರಿಗೆ ಹಾಹಾಕಾರ  ಪಡುವಂತಾಗಿದೆ. ವೇದವಾದರೋ ನಮ್ಮನ್ನು ಸದಾಕಾಲ ಎಚ್ಚರಿಸುತ್ತಲೇ ಇದೆ, ಆದರೆ ವೇದದ ಮಾತು ನಮ್ಮ ಕಿವಿಗೆ ಬೀಳಬೇಕಷ್ಟೆ.
ಕುಟುಂಬದಲ್ಲಿ ತಂದೆಯ ಕರ್ತವ್ಯಗಳಂತೆಯೇ ಉಳಿದ ಸದಸ್ಯರ ಕರ್ತವ್ಯಗಳೂ ಇವೆ.
ನಿಜವಾದ ಮಗನು ಯಾರು?
ಋಗ್ವೇದದ ಒಂದು ಮಂತ್ರವನ್ನು ನೋಡಿ...
ಸ ವಹ್ನಿ: ಪುತ್ರ: ಪಿತ್ರೋ:  ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ|
[ಋಗ್ವೇದ ೧ ನೇ ಮಂಡಲ ೧೬೦ ನೇ ಸೂಕ್ತ ೩ನೇ ಮಂತ್ರ]
ಪಿತ್ರೋ: = ಮಾತಾಪಿತೃಗಳ ಸೇವೆಯಿಂದ
ವಹ್ನಿ: = ಎತ್ತಿಹಿಡಿಯುವವನೇ
ಪುತ್ರ: = ನಿಜವಾದ ಪುತ್ರನು
ಸ ಧೀರ: = ಆ ಧೀರನಾದ ಮಗನೇ
ಮಾಯಯಾ = ತನ್ನ ಪ್ರಜ್ಞೆಯಿಂದ
ಪವಿತ್ರವಾನ್ = ಪವಿತ್ರಶಕ್ತಿಯುಕ್ತನಾಗಿ
ಭುವನಾನಿ  ಪುನಾತಿ = ಲೋಕಗಳನ್ನು  ಪವಿತ್ರಗೊಳಿಸುತ್ತಾನೆ

ಈ ಮಂತ್ರದ ಭಾವಾರ್ಥವೆಂದರೆ ಮಾತಾ ಪಿತೃಗಳ ಸೇವೆಯನ್ನು ಮಾಡುವ ಮಗನೇ ನಿಜವಾದ ಮಗನು.ಅವನು ತನ್ನ ಪ್ರಜ್ಞೆಯಿಂದ ಪವಿತ್ರನಾಗಿ ಲೋಕಗಳನ್ನು ಪವಿತ್ರಗೊಳಿಸುತ್ತಾನೆ. ಅಂದರೆ ಮಾತಪಿತೃಗಳ ಸೇವೆ ಮಾಡದ ಮಗ ನಿಜವಾದ ಮಗನಲ್ಲ. ಅವನು ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳು ಉದ್ಭವಿಸುವುದಿಲ್ಲ. ಇನ್ನು ಅವನಿಂದ ಯಾವ ಲೋಕ ಪವಿತ್ರಗೊಳ್ಳಬೇಕು!
ಒಬ್ಬ ಮಗನು ತನ್ನ ಪ್ರಜ್ಞೆಯಿಂದ ಪವಿತ್ರನಾಗಿ ಲೋಕಗಳನ್ನು ಪವಿತ್ರಗೊಳಿಸಬೇಕಾದರೆ ಅವನ ತಂದೆತಾಯಿಯರಿಗೆ ನಿಜವಾದ ಸಾಮಾಜಿಕ ಮತ್ತು ಪರಿಸರ  ಪ್ರಜ್ಞೆ  ಇರಬೇಕು. ಆಗ  ಮಕ್ಕಳಲ್ಲಿಯೂ ಸಾಮಾಜಿಕ ಜಾಗೃತಿ, ಪರಿಸರ ಜಾಗೃತಿ ಮಾಡಿಸಿಯಾರು. ಇಂತಹಾ ಆದರ್ಶ ತಂದೆತಾಯಿಯರು   ನಾವಾಗಬೇಕಲ್ಲವೇ?

ಜೀವನ ವೇದ -2

 ಸಂಮೃದ್ಧ ಮನೆ :
                                                  
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೨ನೇ ಮಂತ್ರ]

 ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು, ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು. ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು. ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.
ಇಂದಿನ ಕಾಲಕ್ಕೆ ನಾವು ಈ ವೇದಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಸಂಮೃದ್ಧವಾದ ಮನೆ ಅಂದರೆ ಮನೆಯ ಯಜಮಾನನು ಸತ್ಯಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಿರಬೇಕು. ಆ ಸಂಪತ್ತಿನಿಂದ ಮನೆಗೆ ಬಂದ ಅತಿಥಿಗಳ ಸತ್ಕಾರವು ಚೆನ್ನಾಗಿ ನಡೆಯುತ್ತಿರಬೇಕು. ಅದು ಸುಸಂಕೃತ ಮನೆಯಾಗಿದ್ದು  ಮನೆಯಲ್ಲಿ ಯಾವಾಗಲೂ ಸಂತಸದ ವಾತಾವರಣ ನೆಲಸಿರಬೇಕು.
ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ ವಸುವನೀ ಸುಮೇಧಾ ಅಘೋರೇಣ ಚಕ್ಷುಷಾಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ  ರಮಧ್ವಂ ಮಾ ಬಿಭೀತ ಮತ್||
[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು,ಮೇಧಾವಂತನಾಗಿರಬೇಕು,ಮನೆಯಸದಸ್ಯರೊಡನೆ ಕ್ರೋಧರಹಿತನೂ, ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ,ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜನ್ ಬಿಭ್ರತ್
ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು, ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರವಾದ ಪ್ರೇಮಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .
ವಸುವನಿ :
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ.
ಯಜುರ್ವೇದದ ೪೦ನೇ ಅಧ್ಯಾಯದ ೧೬ ನೇ ಮಂತ್ರದಲ್ಲಿ ಸಂಪತ್ತನ್ನು ಯಾವ ಮಾರ್ಗದಲ್ಲಿ ಗಳಿಸಬೇಕೆಂಬುದನ್ನು ತಿಳಿಸುತ್ತದೆ.ಆಮಂತ್ರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||

ಅರ್ಥ
ದೇವ = ದಿವ್ಯ ಸ್ವರೂಪನೇ
ಅಗ್ನೇ = ಪ್ರಕಾಶಮಯ ಭಗವಾನ್
ತೇ = ನಿನಗೆ
ಭೂಯಿಷ್ಠಾಮ್ = ಅತ್ಯಧಿಕವಾಗಿ
ನಮ ಉಕ್ತಿಂ ವಿಧೇಮ = ಸತ್ಕಾರಪೂರ್ವಕವಾಗಿ ನಮಸ್ಕರಿಸುತ್ತೇವೆ.
ವಿದ್ವಾನ್ = ಸರ್ವಜ್ಞನಾದ ನೀನು
ಅಸ್ಮತ್ = ನಮ್ಮಿಂದ
ಜುಹುರಾಣಮ್ = ಕುಟಿಲತೆಯನ್ನು
ಏನ: = ಪಾಪವನ್ನು
ಯುಯೋಧಿ = ಬೇರೆ ಮಾಡು
ಅಸ್ಮಾನ್ = ನಮ್ಮನ್ನು
ರಾಯೇ = ಸುಖಕ್ಕಾಗಿ
ಸುಪಥಾ = ಒಳ್ಳೆಯ ಮಾರ್ಗದಲ್ಲಿ ನಡೆಸು
ವಿಶ್ವಾನಿ ವಯುನಾನಿ = ನಮಗೆ ಸಕಲ ಪ್ರಶಸ್ತ ಜ್ಞಾನಗಳನ್ನು
ನಯ: = ಲಭಿಸುವಂತೆ ಮಾಡು

ಈ ಮಂತ್ರದ ಸಾರವೇನು?
ಜ್ಞಾನದಾತನಾದ ಪ್ರಭುವೇ, ನಮ್ಮಿಂದ ಕುಟಿಲತೆಯನ್ನೂ, ಪಾಪಾಚರಣೆಯನ್ನೂ ದೂರಮಾಡು.ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸುವಂತೆಮಾಡು. ನಮ್ಮ ಕಲ್ಯಾಣಕ್ಕಾಗಿ ನಿನಗೆ ಅತ್ಯಧಿಕ ನಮಸ್ಕಾರಗಳನ್ನು ಮಾಡುತ್ತೇನೆ.
ಈ ಮಂತ್ರದಲ್ಲಿ ಒಂದು ಶಬ್ಧಪ್ರಯೋಗವಾಗಿದೆ. ಅದು ರಾಯೇ  ಅಂದರೆ ನಮ್ಮ ಸುಖಕ್ಕಾಗಿ ಸಂಪತ್ತನ್ನು ಗಳಿಸಬೇಕೆಂಬುದೇ ವೇದದ ಆಶಯ. ಆದರೆ ಸಂಪತ್ತನ್ನು ಗಳಿಸುವಾಗ ಸನ್ಮಾರ್ಗದಲ್ಲಿ ಗಳಿಸಲು ದಾರಿಮಾಡಿಕೊಡು, ಎಂಬುದು ದೇವರಲ್ಲಿ  ನಮ್ಮ ಪ್ರಾರ್ಥನೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ  ವೇದವು ಕೇವಲ ವೈರಾಗ್ಯವನ್ನು ಹೇಳುವುದಿಲ್ಲ.ಜೀವನದಲ್ಲಿ ಸುಖವಾಗಿರಿ. ಆದರೆ ಸುಖವಾಗಿರಲು ಅಗತ್ಯವಾದ ಹಣವನ್ನು ಸಂಪಾದಿಸಲು ವಾಮ ಮಾರ್ಗಹಿಡಿಯಬೇಡಿ. ಸನ್ಮಾರ್ಗದಲ್ಲಿ ಧನಾರ್ಜನೆ ಮಾಡಿ, ಜೀವನದಲ್ಲಿ ಸುಖವಾಗಿರಿ, ಎಂಬುದು ವೇದದ ಆಶಯ.
ಹಣವನ್ನು ಹೇಗೆ ಸಂಪಾದಿಸಬೇಕು? ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ ಎನ್ನುತ್ತದೆ ಮತ್ತೊಂದು ಸುಭಾಷಿತ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ.ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ?

ಜೀವನ ವೇದ -1

                                         
ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು  ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅ೦ತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ  ಬರಬೇಕೇ? ಅಧ್ಯಾತ್ಮ ಚಿಂತನೆ  ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ?
ಸ್ವರ್ಗ ಎಲ್ಲಿದೆ?
ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು  ನಿತ್ಯ ನರಕವಾಗಿ  ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ?ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು  ಕೆಲವು ಜೀವನ ಸೂತ್ರಗಳನ್ನು  ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ.
ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ಕಾರ್ಯಕ್ರಮವಿರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
ಸಖೇ ಸಪ್ತಪದೀ ಭವ
ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ  ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತೂ? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ.
ಸಖೇ ಸಪ್ತಪದೀ ಭವ  ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ    ನೂರಾರು ಜನರು ಸಾಕ್ಷಿಯಾಗಿದ್ದಾರೆ,ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ?
         ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ಮಾಡುತ್ತಾರೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ?
ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು ,ಅಲ್ವಾ?  ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ?
ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ  ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.
ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ|
[ಕಾಂಡ ೧೪ ಸೂಕ್ತ ೨ ಮಂತ್ರ ೬೪]
ಅರ್ಥ:-
ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ.
ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು.
ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ  ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ  ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು  ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು  ಹೇಗೆ ಜೀವನವನ್ನು  ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು   ವೇದವು ನಮಗೆ ನೀಡುತ್ತದೆ.

Sunday, March 2, 2014

ನಮ್ಮ ಮನೆಗಳು ಹೇಗಿರಬೇಕು? ಹೇಗಿರಬಾರದು?

ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.
ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: ||
[ಅಥರ್ವ:೨.೧೪.೩]
ಯ: = ಯಾವ
ಗೃಹ:  = ಮನೆಯು
ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ
ತತ್ರ= ಅಲ್ಲಿ
ಸರ್ವಾ: = ಎಲ್ಲಾ
ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು
ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ ಮಾಡುವಂತಹ ಸಂಕಷ್ಟಗಳು
ಸನ್ತು = ಇರುತ್ತವೆ
ತತ್ರ = ಅಲ್ಲಿ
ಸೇದಿ: = ದು:ಖಗಳು
ನಿ ಉಚ್ಯತು = ಯಾವಾಗಲೂ ಇರುತ್ತವೆ
ಹಾಗೆಂದರೇನು?
ಸತ್ಪುರುಷರಿಲ್ಲದ , ಸತ್ ಕಾರ್ಯಗಳು ನಡೆಯದ ,ಸಜ್ಜನರು ಬಾರದ ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ. ಅಲ್ಲಿ ದುಷ್ಟರು . ವಿಷಕೀಟಗಳು.ವಿವಿಧವ್ಯಾಧಿಗಳು, ಅನೇಕ ಆಪತ್ತುಗಳು, ದು:ಖಗಳು ನೆಲೆಸಲು ಅವಕಾಶವಾಗುತ್ತದೆ. ಅಲ್ಲಿ ಒಳ್ಳೆಯವರು ಇರಲಾರರು. ಕೆಲವು ಮನೆಗಳಿಗೆ ಹೋದರೆ ಸ್ವಲ್ಪಹೊತ್ತು ಕುಳಿತುಕೊಳ್ಳಲೂ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತರೆ ಸಾಕೆನಿಸುತ್ತದೆ.ಇನ್ನು ಕೆಲವು ಮನೆಗಳಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದು ಹೋಗೋಣ   ಎನಿಸುತ್ತದೆ. ಇಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಸಾದು ಸತ್ಪುರುಷರ ಸಮಾಗಮ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು. ನಾವು ಹಲವು ಗ್ರಂಥಗಳನ್ನು ಓದಬಹುದು, ಹಲವು ಉಪನ್ಯಾಸಗಳನ್ನು ಕೇಳಬಹುದು, ಮಠ ಮಂದಿರಗಳಿಗೆ ಸುತ್ತಬಹುದು, ತೀರ್ಥಯಾತ್ರೆಗಳನ್ನು ಮಾಡಬಹುದು, ಆದರೆ ನಮ್ಮ ಮನೆ ಹೇಗಿರಬೇಕೆಂದು ಎಂದಾದರೂ ಯೋಚಿಸಿದ್ದೇವೆಯೇ? ನಮ್ಮ ಮನೆಯಲ್ಲಿ ಸಿಗದ ಸುಖ-ನೆಮ್ಮದಿಯನ್ನು ಬೇರೆಲ್ಲೋ ಹುಡುಕಿ ಹೊರಟರೆ ಸಿಕ್ಕೀತೇ?
ನಮ್ಮ ಚಿಕ್ಕವಯಸ್ಸಿನಲ್ಲಿ ಹಿರಿಯರು ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ” ಮನೆಯಲ್ಲಿ ಯಾವಾಗಲೂ ಋಣಾತ್ಮಕ ಮಾತುಗಳನ್ನು ಆಡಬೇಡಿ, ಜಗಳ ಮಾಡಬೇಡಿ. ಬೈದಾಡಬೇಡಿ?.ಹೀಗೆ ಮಾಡಿದರೆ ಮನೆಯ ತೊಲೆಯಲ್ಲಿ ಕುಳಿತಿರುವ ವಾಸ್ತು ಪುರುಷ” ಅಸ್ತು” ಎಂದು ಬಿಡುತ್ತಾನೆ. ಆಗ ಕೆಟ್ಟ  ಮಾತುಗಳನ್ನಾಡಿದರೆ ಕೆಟ್ಟ   ಪರಿಣಾಮವೇ ಆಗುತ್ತದೆ. ಅದಕ್ಕಾಗಿ ಒಳ್ಳೆಯ ಮಾತುಗಳನ್ನೇ ಆಡಿ, ಆಗ ಒಳ್ಳೆಯದೇ ಆಗುತ್ತದೆ.
ವಾಸ್ತು ಪುರುಷ ಎಲ್ಲಿರುತ್ತಾನೋ, ಇರುವುದಿಲ್ಲವೋ ಚಿಂತಿಸಬೇಕಾಗಿಲ್ಲ. ಆದರೆ  ನಮ್ಮ ಹಿರಿಯರ ಮಾತಿನ ಸಂದೇಶವನ್ನು ಗಮನಿಸಬೆಕಲ್ಲವೇ? ಒಳ್ಳೆಯ ಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಒಳ್ಳೆಯ ಪರಿಣಾಮ ಆಗಲೇಬೇಕು. ಇದು ವೈಜ್ಞಾನಿಕವಾಗಿ ಕೂಡ ಸತ್ಯವೇ ಹೌದು. ವೇದವು ಇನ್ನೂ ಮುಂದೆ ಹೋಗಿ ತಿಳಿಸುತ್ತದೆ” ಸಜ್ಜನರ ಸಾಮೀಪ್ಯವಿರಬೇಕು , ಸತ್ ಕಾರ್ಯಗಳು ನಡೆಯುತ್ತಿರಬೇಕು” ಇಲ್ಲವಾದಲ್ಲಿ  ಅಂತಹ ಮನೆಯಲ್ಲಿ ಜನರ ನೆಮ್ಮದಿ ಹಾಳಾಗುತ್ತದೆ, ಅನಾರೋಗ್ಯ,ಅಸಹನೆ, ದು:ಖ ಎಲ್ಲವೂ ಸುತ್ತಿಕೊಳ್ಳುತ್ತವೆ.

ಹೌದಲ್ಲವೇ? ಇವೆಲ್ಲವೂ ನಮ್ಮ ಅರಿವಿಗೆ ತಿಳಿದಿರುವ ವಿಷಯಗಳೇ ಆಗಿವೆ. ಆದರೂ ನಮ್ಮ ಮನೆಗಳಿಗೆ ಯಾರು ಬಂದು ಹೋಗುತ್ತಾರೇ, ಯಾವ ಮಾತುಕತೆ ನಡೆಯುತ್ತದೆ, ಯಾವುದನ್ನೂ ನಾವು ಗಮನಿಸುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ  ನಮ್ಮ ಮನೆಯಲ್ಲಿ ಸ್ಥಾನಪಡೆದಿರುವ ಟಿ.ವಿ ಎಂಬ ಪೆಡಂಬೂತ!!
ಟಿ.ವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳು ಬಿತ್ತರಿಸುವುದಿಲ್ಲವೆಂದಲ್ಲ, ಆದರೆ ಬಹುಪಾಲು ಮನೆಗಳಲ್ಲಿ ಗಮನಿಸಿ, ದಿನದಲ್ಲಿ ಆರೇಳು ಗಂಟೆಗೂ ಮಿಗಿಲಾಗಿ, ಅಶ್ಲೀಲ ದೃಶ್ಯಗಳು, ರಕ್ತಸಿಕ್ತ ಕೊಲೆ ಸುಲಿಗೆಯ ದೃಷ್ಯಗಳು, ಕಿವಿಯನ್ನು ಕತ್ತರಿಸುವಂತಹ ಕರ್ಕಶ ಹಾಡುಗಳು!!
ರಾತ್ರಿ ಮಲಗುವಾಗಲೂ “ ಕ್ರೈಮ್ ಸ್ಟೋರಿ” ನೋಡಿ ಮಲಗುವ ಎಷ್ಟು ಮನೆಗಳಿಲ್ಲಾ! ಮಲಗುವ ವೇಳೆಯಲ್ಲೂ ಇಂತಹ ಭಯಾನಕ ದೃಷ್ಯಗಳನ್ನು ನೋಡಿ ಮಲಗಿದಾಗ ನಿದ್ರೆಯಲ್ಲಿ ನಮ್ಮ ಮನ:ಸ್ಥಿತಿ ಹೇಗಿದ್ದೀತು? ಸುಖವಾದ ನಿದ್ರೆಯು ಬಯಸಿದರೆ ಸಿಕ್ಕೀತೇ?

ನಮ್ಮ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರವಾದ ಸಂಬಂಧವಿದೆ ಎಂದು ಮನೋವೈದ್ಯರು ಸಾರುತ್ತಿದ್ದಾರೆ, ಆದರೂ ನಾವು ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನಕೊಟ್ಟಿದ್ದೇವೆಯೇ? ಇತ್ತೀಚೆಗೆ ವೇದ ವಿದ್ವಾಂಸರೊಬ್ಬರೊಡನೆ ಮಾತನಾಡುತ್ತಿದ್ದೆ”  ವೇದ ಮಂತ್ರ ಗಳನ್ನು ನಿತ್ಯವೂ ಪಠಿಸುವುದರಿಂದ ಏನು ಫಲ ಸಿಗುತ್ತೆ? ನಿಮಗೇನು ಪ್ರಯೋಜನವಾಗಿದೆ? ಎಂದು ಕೇಳಿದಾಗ ಅವರು ಹೇಳಿದರು “ ನೋಡಿ ಏನು ಲಾಭ ಎಂದು ನಾನು ತಲೆಕೆಡಸಿಕೊಳ್ಳಲು ಹೋಗಿಲ್ಲ,  ನನಗೀಗ ಎಪ್ಪತ್ತು ವರ್ಷ ವಯಸ್ಸು, ಆರೋಗ್ಯವಾಗಿದ್ದೇನೆ. ಶುಗರ್, ಬಿ.ಪಿ ಅಥವಾ ಯಾವ ಖಾಯಿಲೆಯೂ ಇಲ್ಲ. ನಿತ್ಯವೂ ನನ್ನ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತೇನೆ, ಬೆಳಿಗ್ಗೆ ಸಂಜೆ  ಒಂದೊಂದು ಗಂಟೆ ಸಂಧ್ಯಾಕರ್ಮಗಳ ಜೊತೆಯಲ್ಲಿ ಒಂದಿಷ್ಟು ವೇದ ಮಂತ್ರಗಳನ್ನು ಹೇಳಿಕೊಳ್ಳುತ್ತೇನೆ. ರಾತ್ರಿ ಎಂಟರೊಳಗೆ ಸ್ವಲ್ಪ ಉಪಹಾರ ಸ್ವೀಕರಿಸಿ  ಹತ್ತರೊಳಗೆ ಹಾಸಿಗೆ ಮೇಲೆ ಹೋದರೆ ಐದು ನಿಮಿಷಗಳಲ್ಲಿ ನಿದ್ರೆ ಬರುತ್ತೆ, ಎಚ್ಚರವಾಗುವಾಗ ಬೆಲಗಿನ ಜಾವ ಐದು ಗಂಟೆಯಾಗಿರುತ್ತೆ. ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತೇನೆ. ಸುಖವಾಗಿದ್ದೇನೆ. ನನಗೆ ಇನ್ನೇನು ಬೇಕು?

ಹೌದು ನಮ್ಮೆಲ್ಲರ ಮನೆಗೂ ಒಂದು ನೀತಿ ಸಂಹಿತೆ ಇರಬೇಕು. ಅದರಮೇಲೆ ನಮ್ಮ ನಿಗಾ ಇರಬೇಕು. ಸಾದು ಸಜ್ಜನರಿಗೆ, ವಿದ್ವಾಂಸರಿಗೆ ಮನೆಯಲ್ಲಿ ಆಶ್ರಯ ಕೊಡಬೇಕು. ಅವರ ಹಿತವಾದ ಮಾತುಗಳು ನಮ್ಮ ಮನೆಯ ಜನರ ಕಿವಿಯಮೇಲೆ ಬೀಳುತ್ತಿರಬೇಕು. ನಮ್ಮ ಮನೆಯಲ್ಲಿ ಸಮಸ್ಯೆ ಇಟ್ಟುಕೊಂಡು ದೇವಾಲಯಗಳಿಗೆ ಸುತ್ತಿದರೆ ಆ ಭಗವಂತನು ಮೆಚ್ಚಿ ಅವನೇ ಬಂದು ನಮ್ಮ ಮನೆ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ನಮ್ಮ ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಒಂದು ಕುಟುಂಬದ ನಾವೇ ಅದನ್ನು ಸರಿಪಡಿಸಿಕೊಂಡು  ಸಜ್ಜನರ ಸಹವಾಸವನ್ನಿಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಮನೆಯನ್ನು  ದೇವಾಲಯವನ್ನಾಗಿಯೂ ಮಾಡಬಹುದು, ಸ್ವರ್ಗವಾಗಿಯೂ ಮಾಡಬಹುದು. ಎಲ್ಲವೂ ನಮ್ಮ ಕೈಲೇ ಇದೆ. 

Saturday, March 1, 2014

ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ?

     ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ? ಈ ಪದಗಳ ನಿಜವಾದ ಅರ್ಥವೇನು? ಕೇಳೋಣ ಬನ್ನಿ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ದ್ವನಿಯಲ್ಲಿ: ಕೊಂಡಿ ಕ್ಲಿಕ್ಕಿಸಿ.
-ಕ.ವೆಂ.ನಾಗರಾಜ್.
http://vedajeevana.blogspot.in/2012/03/blog-post_29.html