Pages

Thursday, March 3, 2011

ಯೋಚಿಸಲೊ೦ದಿಷ್ಟು..೨೪

೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ,ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!

೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!

೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!

೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!

೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!

೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!

೭.ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದ ರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!

೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!

೯.ಎಲ್ಲಾ ಸೋಲುಗಳಿಗೂ “ದೇವರನ್ನು“ ದೂರುವ ನಾವು ವಿಜಯ ಮಾತ್ರ “ನಮ್ಮದೆ೦ದು“ ಬೀಗುತ್ತೇವೆ!

೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ “ಕಪಟ“ವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!

೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!

೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)

೧೩.ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!

೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!

೧೪. ಬುಧ್ಧಿವ೦ತಿಕೆ ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!

೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು
---- ವಿ.ಆರ್ ಭಟ್

Monday, February 28, 2011

ವಾಸ್ತು ಹೋಮ, ಗಣಪತಿ ಹೋಮ

ಆತ್ಮೀಯ ಸುಧಾಕರ ಶರ್ಮಾಜಿ, ನಮಸ್ತೆ,
ಮನೆ ಕಟ್ಟಿ ಗೃಹ ಪ್ರವೇಶದ ಸಂದರ್ಭದಲ್ಲಿ  ಮಾಡುವ ವಾಸ್ತು ಹೋಮ, ಗಣಪತಿ ಹೋಮ, ಮದುವೆ ನಂತರ ಅಥವಾ ಬೇಕೆಂದಾಗಲೆಲ್ಲಾ ಮಾಡುವ ಸತ್ಯನಾರಾಯಣ ವ್ರತ, ಮುಂತಾದ ಆಚರಣೆಗಳು  ಎಷ್ಟು ಬಲವಾಗಿ ಬೇರು ಬಿಟ್ಟಿದೆ ಎಂದರೆ  ಸರಳವಾದ ಅಗ್ನಿಹೋತ್ರವನ್ನು ಮಾಡಿ/ನೋಡಿ ಆನಂದಿಸಿದವರೂ ಸಹ ತಮ್ಮ ಮನೆಯಲ್ಲಿ  ನೂತನ ಗೃಹ ಪ್ರವೇಶ ಅಥವಾ ಮದುವೆಯ ಸಂದರ್ಭಗಳಲ್ಲಿ  ಅಗ್ನಿಹೋತ್ರವನ್ನು ಮಾಡೋಣ ಆದರೆ ಇದುವರೆವಿಗೆ ನಡೆದು ಬಂದಿರುವ ಆಚರಣೆ ಬಿಡಲು ಸಾಧ್ಯವೇ? ಎಂದು ಮಾತನಾಡುತ್ತಾರಲ್ಲಾ! ಶರ್ಮರೇ, ಸಮಾಧಾನ ಕೊಡುವಿರಾ?
ನಾನೇ ನನ್ನ ಮನೆಯ ಮೇಲೆ ಮೊದಲ ಮಹಡಿ ಕಟ್ಟಿ ಅದರ  ಮೇಲೆ ಸತ್ಸಂಗಕ್ಕೊಂದು ವಿಶಾಲ ಹಾಲ್ ಮಾಡುವ ಉದ್ಧೇಶದಿಂದ ಕೆಲಸ ಆರಂಭಿಸಿಯಾಗಿದೆ. ನನ್ನ ಪತ್ನಿ ಈಗಾಗಲೇ ಗೃಹಪ್ರವೇಶ ಹೇಗಿರಬೇಕೆಂಬ ಲೆಕ್ಖಾಚಾರ ಹಾಕುತ್ತಾ, ನನ್ನ ಮನಸ್ಸಿಗೂ ಬೇಸರ ವಾಗಬಾರದು, ಹಿಂದಿನ ಆಚರಣೆಗಳನ್ನು ಬಿಡಬಾರದೆಂಬ ಉಪಾಯವಾಗಿ ನೀವು ಅಗ್ನಿಹೋತ್ರ ಮಾಡಿ, ಬೇಡವೆನ್ನುವುದಿಲ್ಲ ಆದರೆ ವಾಸ್ತು ಹೋಮ/ಗಣಪತಿ ಹೋಮಗಳೂ ಇರಲಿ, ಎಂಬ  ಮಾತುಗಳನ್ನಾಡಿತ್ತಿದ್ದಾರೆ. ವಾಸ್ತು ಹೋಮ/ಗಣಪತಿ ಹೋಮಗಳು ಅನಿವಾರ್ಯವೇ? ಅಥವಾ ವೇದೋಕ್ತವಾಗಿ ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ? ದಯಮಾಡಿ ತಿಳಿಸುವಿರಾ? ವೇದಸುಧೆಯಲ್ಲಿ ಚರ್ಚೆ ಆರಂಭಿಸಿರುವ ನಾನು ವೇದದ ಹಾದಿಯಲ್ಲಿ ಸಾಗಬೇಕೆಂಬ ಮಹದಾಸೆ ಉಳ್ಳವನು, ಮಾರ್ಗವನ್ನು ಸುಗಮಗೊಳಿಸುವ ಹೊಣೆ ನಿಮ್ಮದು.

ಸಗೋತ್ರ ವಿವಾಹ

 ಕವಿ ಸುರೇಶ್ ಕೇಳಿದ ಪ್ರಶ್ನೆಗೆ ಶರ್ಮರ ಉತ್ತರ ಪ್ರಕಟವಾಗಿದೆ.  ಈ ವಿಷಯದಲ್ಲಿ ಚರ್ಚೆ ನಡೆಯಲು ಅವಕಾಶಮಾಡಲೆಂದು ಇಲ್ಲಿ ಪ್ರಕಟಿಸಲಾಗಿದೆ.
--------------------------------
ಶ್ರೀ ಸುಧಾಕರ ಶರ್ಮರಿಗೆ ಪ್ರಣಾಮಗಳು, ಸಗೋತ್ರ ವಿವಾಹದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆಗಬಹುದು; ಆಗಬಾರದು ಇತ್ಯಾದಿ. ತಮ್ಮ ಮಾರ್ಗದರ್ಶನಕ್ಕಾಗಿ ಕೋರುವೆ. ಗೌರವಾದರಗಳೊಂದಿಗೆ,  -ಕವಿ ಸುರೇಶ್
------------------------------------------------
ಗಾಂ ತ್ರಾಯತ ಇತಿ ಗೋತ್ರಃ|| ದನ ಮೇಯಿಸುವುದರಿಂದ ಬಂದದ್ದು ಗೋತ್ರ! ಮೊದಲಿಗೆ ಗುರುಕುಲದಲ್ಲಿರುವಾಗ ಗೋಪಾಲನೆ ಅನಿವಾರ್ಯವಾಗಿತ್ತು. ಪರಿಚಯ ಮಾಡಿಕೊಳ್ಳುವಾಗ ನೀನು ಯಾವ ಗುರುಕುಲದಲ್ಲಿ ಓದಿದ್ದು ಎಂಬುದನ್ನು, ನೀನು ಯಾವ ಗುರುಕುಲದಲ್ಲಿ ದನ ಮೇಯಿಸುತ್ತಿದ್ದೆ? ಎಂಬರ್ಥದಲ್ಲಿ "ಗೋತ್ರ" ಹುಟ್ಟಿದಂತೆ ಕಾಣುತ್ತದೆ. ಗೋ ಎಂದರೆ ವಾಣಿ ಎಂತಲೂ ಅರ್ಥವಿದೆ. ಅದನ್ನು ರಕ್ಷಿಸುವುದೇ ಗೋತ್ರ. ಹಾಗಾಗಿ ಯಾವ ಅಧ್ಯಯನ ಪರಂಪರೆ ನಿನ್ನದು ಎಂಬುದನ್ನು ತಿಳಿಯಲು ಗೋತ್ರ ಶಬ್ದದ ಪ್ರಯೋಗವೂ ಆಗಿರಬಹುದು. ಹೀಗೆ ಹಿನ್ನೆಲೆಯಿರುವಾಗ ಇದಕ್ಕೂ ವಿವಾಹಕ್ಕೂ ಯಾವಾಗ ಹೇಗೆ ಗಂಟು ಬಿತ್ತೋ ವಿಚಿತ್ರವಾಗಿದೆ. ವಿವಾಹ ಸಂದರ್ಭದಲ್ಲಿ ನೋಡಬೇಕಾದ್ದು ಗುಣ, ಸ್ವಭಾವಗಳೊಂದಿಗೆ, ಜೀವನ ಧ್ಯೇಯೋದ್ದೇಶಗಳೊಂದಿಗೆ, ರಕ್ತಸಂಬಂಧ. ಹತ್ತಿರದ ರಕ್ತಸಂಬಂಧಿಗಳಲ್ಲಿ ಲಗ್ನವಾಗದರೆ ಆನುವಂಶಿಕ ರೋಗಗಳು ತಲೆಯೆತ್ತುವ ಸಾಧ್ಯತೆಗಳು ಹೆಚ್ಚು. ತಾಯಿಯ ಕಡೆಯಾಗಲಿ ಅಥವಾ ತಂದೆಯ ಕಡೆಯಾಗಲಿ ಸುಮಾರು ಏಳು ತಲೆಮಾರುಗಳಷ್ಟು ಅಂತರವಿರುವಂತೆ ನೋಡಿಕೊಂಡರೆ ಈ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಬಹುಶಃ Almost Zero. ಇಂದು ಹಿಂದಿನ ಏಳು ತಲೆಮಾರುಗಳ ಮಾಹಿತಿ ಇಲ್ಲದಿರುವಾಗ ಎಷ್ಟು ಸಾಧ್ಯವೋ ಅಷ್ಟು ದೂರದ ಸಂಬಂಧ ನೋಡುವುದು ಒಳ್ಳೆಯದು. 
-ಸುಧಾಕರಶರ್ಮ

Friday, February 25, 2011

ವೇದಸುಧೆಯಲ್ಲಿ ಹಲವಾರು ಆರೋಗ್ಯಪೂರ್ಣ ಚರ್ಚೆಗಳಾಗಿವೆ. ಪುರಾಣಗಳ ವಿಷಯದಲ್ಲಿ ಒಂದೆರಡು ದಿನಗಳಿಂದ ಚರ್ಚೆ ನಡೆದಿದೆ.  "ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ?" ಎಂದು  ಶ್ರೀ ಪ್ರಸನ್ನರು ಪ್ರಶ್ನೆ ಕೇಳಿದ್ದಾರೆ. ಶ್ರೀ ಶರ್ಮರಿಂದ ಉತ್ತರ ನಿರೀಕ್ಷಿಸಲಾಗಿದೆ.  ಶ್ರೀ ಶರ್ಮರು ಅವರ ಕೆಲಸಗಳ ಒತ್ತಡದ ನಡುವೆಯೂ ವೇದಸುಧೆಯನ್ನು ವಾರಕ್ಕೆ ಒಮ್ಮೆಯಾದರೂ ಅವಲೋಕಿಸಿ ತಮ್ಮ ವಿವರಣೆಯನ್ನು ಕೊಡುವರು. ವೇದಸುಧೆಯ ಅಭಿಮಾನಿಗಳೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು "ಅಭಿಮತ" ಪುಟದಲ್ಲಿ ಮುಕ್ತವಾಗಿ ಹಂಚಿಕೊಳ್ಳಲು ವೇದಸುಧೆಯು ವಿನಂತಿಸುತ್ತದೆ.

ಸತ್ಯದ ಹುಡುಕಾಟ?

1] ನಮಸ್ತೆ ಸುಧಾಕರ್ ಜೀ, ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ? ಏಕೆಂದರೆ, ಜೀವಿಗಳ ಉಗಮದ ಬಗ್ಗೆ ಆಧುನಿಕ ವಿಜ್ಞಾನಿಗಳು ಹೇಳಿರುವುದು(ಹೇಳಿದ್ದರೂ ಇರಬಹುದು) ನನಗೆ ತಿಳಿದಿಲ್ಲ. ಆದರೆ ಡಾರ್ವಿನ್ ನ ಪ್ರಕಾರ ಒಂದರಿಂದ ಮತ್ತೊಂದು ರೂಪಾಂತರ ಹೊಂದಿತೆಂಬುದು ಆತನ ವಾದಸರಣಿ (ದಾಖಲೆ ಸಹಿತವಾಗಿಯಲ್ಲ). ಅದು ಸತ್ಯವೂ ಅಲ್ಲ ಅಥವ ಅದನ್ನು ಸುಳ್ಳೆಂದು ನಿರಾಕರಿಸಲೂ ಆಗುವುದಿಲ್ಲ.
    -ಪ್ರಸನ್ನ

    2] ಸತ್ಯದ ಹುಡುಕಾಟ ತು೦ಬಾ ಒಳ್ಳೆಯದೆ. ಯಾವ ಸತ್ಯವೇ೦ದು ಕೆಳಬಹುದೆ? ಸಾರ್ವಕಲಿಕ ಸತ್ಯವಾದರೆ ಆದು ಪರಬ್ರಹ್ಮ ಒ೦ದೆ ಅಲ್ಲವೇ. ಮಿಕ್ಕಿದ್ದೆಲ್ಲ ಕ್ಷಣಿಕ ಸತ್ಯ ಅಲ್ಲವೇ. ಪ್ರಸನ್ನರವರು ಕೆಳಿದ ಮೂಲ ಪ್ರಶ್ನೆ (ಸತ್ಯ ದ ಹುಡುಕಾಟದಲ್ಲಿ) ಕಳೆದು ಹೋಯಿತೆ? ನಾವು ಇರುವುದು(ಈ ದೇಹದಲ್ಲಿ) ಸತ್ಯ ಅಲ್ಲವೇ? ಆದರೆ ತು೦ಬಾ ಸೂಕ್ಷ್ಮವಾದ, ಅತ್ತ್ಯುತ್ತಮವಾದ ವಿಷಯವನ್ನು ಪ್ರಾರ೦ಭಿಸಿದ್ದಕ್ಕೆ ಧನ್ಯವಾದಗಳು
-ವಿನಾಯಕ ಭಟ್ 

3] ವೇದವೆಂದರೆ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತ ವಾಕ್ಯಗಳು ಮಾತ್ರವೇ? 
-ಮಹೇಶ್
------------------------------------------------------
ನನ್ನ ಅನಿಸಿಕೆ:
ವೇದಗಳು ಪ್ರಪಂಚಕ್ಕೆ ಜ್ಞಾನಭಂಡಾರವೆಂದು ನಂಬುವ ಜನರು ನಾವು. ಆದರೆ ಇಂದು ನೂರಾರು ವರ್ಷಗಳಿಂದ ಪುರಾಣ ಕಥೆಗಳ ಆಧಾರದಮೇಲೆ ನಮ್ಮ ಆಚರಣೆಗಳು ನಡೆದಿದ್ದು  ವೇದವು ಕಳೆದುಹೋಗಿದೆ ಎಂದು ಅನ್ನಿಸುವುದಿಲ್ಲವೇ? ವೇದ ಎಂದರೆ ಒಂದಿಷ್ಟು ಮಂತ್ರಗಳ ಪಠಣೆಯೇ? ಆದರೆ ವೇದಾಧ್ಯಾಯೀ ಸುಧಾಕರ ಶರ್ಮರು ವೇದಮಂತ್ರಗಳ ಅರ್ಥವನ್ನು ವಿವರಿಸುತ್ತಾ ಅವುಗಳು ಮಾನವನ ಜೀವನಕ್ಕೆ ಹೇಗೆ ಅನುಕೂಲಕರವಾಗಿವೆ, ಎಂಬ ವಿವರಣೆ ಕೊಡುತ್ತಿದ್ದಾರೆ.ಅದೇ ಸಮಯದಲ್ಲಿ ನಮ್ಮ ಆಚರಣೆಗಳಲ್ಲಿನ ಕೆಲವು ದೋಷಗಳನ್ನೂ ನಮಗೆ ಮನವರಿಕೆ ಮಾಡುತ್ತಾ ನಾವು ಅದೆಷ್ಟು ಕುರುಡಾಗಿ ಹಲವು ಆಚರಣೆಗಳನ್ನು ಮಾಡುತ್ತಿದ್ದೇವೆಂಬುದನ್ನು ಆಧಾರಸಹಿತವಾಗಿ ಮನವರಿಕೆ ಮಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ಸತ್ಯ ಕಾಣುತ್ತಿದೆ.ಉಧಾಹರಣೆಗೆ ಅಗ್ನಿಹೋತ್ರ ಕ್ರಿಯೆ. ಎಷ್ಟು ಸರಳ! ಪಕೃತಿಗೆ ಅದೆಷ್ಟು ಪೂರಕ! ಸರಿಯಾಗಿ ಮಾಡಿದ್ದೇ ಆದರೆ ಮನೆಯಲ್ಲಿದ್ದವರಷ್ಟೇ ಅಲ್ಲದೆ ಸುತ್ತಮುತ್ತಲ ಜನರ ಮೇಲೂ ಅದರ ಪ್ರಭಾವವಾಗುವುದರಲ್ಲಿ ಸಂಶಯವಿಲ್ಲ.ಯಾವ ಗೊಂದಲ ಗೋಜಿಲ್ಲ. ಜಾತಿ ಮತದ ಅಡ್ದಗೋಡೆಯಿಲ್ಲ. ಸಸ್ಯಾಹಾರ ಮಾತ್ರ ಕಡ್ಡಾಯ. ಮನುಷ್ಯ ಮನುಷ್ಯನ ನಡುವೆ ಭೇದವಿಲ್ಲದೆ ಯಾರೇ ಆಗಲೀ ಸಸ್ಯಾಹಾರಿ ಯಾಗಿದ್ದುಕೊಂಡು, ಸದ್ವಿಚಾರ ಮಾಡುತ್ತಾ, ಪರಿಶುದ್ಧವಾದ ಜೀವನ ನಡೆಸುತ್ತಾ, ನೂರಾರು ದೇವರುಗಳ ಗೊಂದಲವಿಲ್ಲದೆ ಸರ್ವ ಶಕ್ತನೂ ಸರ್ವವ್ಯಾಪಿಯೂ ಸಾರ್ವಭೌಮನೂ ಆದ ವಿಶ್ವಚೇತನವನ್ನು ಆರಾಧಿಸುತ್ತಾ,ನಿತ್ಯ ಸಂಧ್ಯೋಪಾಸನೆ ಮಾಡುತ್ತಾ , ನಿತ್ಯ ಜೀವನವೇ ಒಂದು ಯಜ್ಞವೆಂದು ಭಾವಿಸುತ್ತಾ ನಡೆಸುವ ಬದುಕಿನಲ್ಲಿ ನಿರಾಳ,ನೆಮ್ಮದಿ ಸಿಗಲಾರದೇ? ಶರೀರ ಮನಸ್ಸು ಆರೋಗ್ಯಕರ ವಾಗಿರಲಾರದೇ? ಇನ್ನೊಬ್ಬರಿಗೆ ದ್ರೋಹವಾಗದಂತೆ ನಡೆಸುವ ಸರಳಜೀವನವು ಸಹಜವಾಗಿ ಹಗುರವಾಗಿರಲಾರದೇ?
ನನ್ನ ದೃಷ್ಟಿಯಲ್ಲಿ ಇದುವೇ ಸತ್ಯದ ಹುಡುಕಾಟ.
-ಹರಿಹರಪುರಶ್ರೀಧರ್