ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, April 1, 2010

ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ|
ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ|
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ||

ಇಂದು ಈ ಭೂಮಿಯನ್ನು ದುರ್ದೈವವೊಂದು ಮುತ್ತಿದೆ. ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ. ಪ್ರತಿದಿನದ ಲೋಕದ ವಾರ್ತೆಗಳು ತಲೆ ಸುತ್ತು ಬರಿಸುತ್ತಿವೆ. ಇದಕ್ಕೆಲ್ಲಾ ಕಡೆ ಎಂದು?

ಡಿ ವಿ ಜಿ ಯವರು ಆದಿನಗಳ ಬಗ್ಗೆಯೇ ಅಷ್ಟು ನೊಂದು ಮನದಾಳದ ನೋವನ್ನು ಕಗ್ಗದಮೂಲಕ ಹೊರಹಾಕಿದ್ದಾರೆ. ಇಂದು ಡಿ ವಿ ಜಿ ಬದುಕಿದ್ದರೆ! ಗಾಂಧೀಜಿ ಬದುಕಿದ್ದರೆ! ಮೊನ್ನೆ ತಾನೇ ಚಪಲ ಚನ್ನಿಗರಾಯ ನಿತ್ಯಾನಂದ[ಸ್ವಾಮಿ]ಯ ರಾದ್ಧಾಂತ! ರೇಣುಕಾಚಾರ್ಯ ಜಯಲಕ್ಷ್ಮಿ ವಿಲಾಸ!! ದೇಶದ ಹಣ ರಾಜಾರೋಶವಾಗಿ ಲೂಟಿ ಮಾಡುತ್ತಿರುವ ರಾಜಕಾರಣಿಗಳು! ದೇಶದ ಭದ್ರತೆಗೆ ಸವಾಲೊಡ್ದಿರುವ ಆತಂಕವಾದಿಗಳು! ಕೊಲೆ ಸುಲಿಗೆಗಳು! ಅತ್ಯಾಚಾರಗಳು!!
ಇದು ದುರ್ದೈವವಲ್ಲವೇ? ಇಂತಹ ಸುದ್ಧಿಗಳಿಂದ ತಲೆ ಸುತ್ತಿಬರಬೇಡವೇ? ಇದಕ್ಕೆಲ್ಲಾ ಕಡೆ ಎಂದು? ಉತ್ತರಿಸುವವರಾರು? ಉತ್ತರಿಸಬೇಕಾದ ಯುವಕರೆಲ್ಲಾ ಟಿ.ವಿ. ಮುಂದೆ ಕುಳಿತು ಕ್ರಿಕೆಟ್ ನೋಡುತ್ತಾ ಕೇಕೆ ಹಾಕುತ್ತಿದ್ದಾರೆ! ಆ ಭಗವಂತನೇ ಧರೆಗೆ ಇಳಿದು ಬರಬೇಕೆ?
------------------------------------------------------------------------------------------------
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ
ವಲೆವಂತೆ ಲೋಕ ತಲ್ಲಣಿಸುತಿಹುದು|
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೋ? ಮಂಕುತಿಮ್ಮ||

ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವಂತೆ ಜಗತ್ತು ಹಪಹಪಿಸುತ್ತಿದೆ. ಇದ್ದ ಹಳೆಯ ಧರ್ಮವು ಸತ್ತು ಹೋಗಿದೆ. ಹೊಸ ಧರ್ಮವು ಹುಟ್ಟಿಲ್ಲ. ಈಗಿನ ತಲ್ಲಣಕೆ ಕೊನೆ ಎಂದೋ?- ಎಂದು ಡಿ ವಿ ಜಿ ಯವರು ಆತಂಕ ವ್ಯಕ್ತಪಡಿಸುತ್ತಾರೆ.
ಡಿವಿಜಿಯವರು ಏಳೆಂಟು ದಶಕಗಳ ಹಿಂದೆ ಕಂಡುಕೊಂಡ ಸತ್ಯವು ಇಂದು ಇನ್ನೂ ಹೆಚ್ಚು ಅನ್ವಯವಾಗುವಂತೆ ತೋರುತ್ತಿದೆ. ನಮ್ಮ ಋಷಿ ಮುನಿಗಳು ತಮ್ಮ ತಪಸ್ಸಿನ ಫಲವಾಗಿ ಹಾಕಿಕೊಟ್ಟ ಮಾರ್ಗವನ್ನು ಸಂದೇಹದಿಂದ ನೋಡುತ್ತಾ ಅದನ್ನು ಗೊಡ್ಡು ಎಂದು ದೂರತಳ್ಳಿ[ಹಳೆ ಧರ್ಮ ಸತ್ತಿಹುದು] ಹೊಸ ದಾರಿಯನ್ನು ಕಂಡುಕೊಳ್ಳಲಾಗದೆ ತಲ್ಲಣಗೊಂಡಿರುವ ನಮ್ಮ ಇಂದಿನ ಸ್ಥಿತಿಯು ಅಂದು ಡಿ ವಿ ಜಿ ಕಂಡ ಸ್ಥಿತಿಗಿಂತಲೂ ಇನ್ನೂ ಕೆಟ್ಟಿದೆಯಲ್ಲವೇ?
ನಮ್ಮ ಪೂರ್ವಜರು ಬೆಳೆಸಿದ್ದ ಧರ್ಮ ವೃಕ್ಷದಡಿಯಲ್ಲಿ ಮರವೇ ಕಾಣದಂತೆ ಕಳೆ ಬೆಳೆದಿರುವುದು ನಿಜ. ಆ ಕಳೆಯನ್ನು ತೆಗೆದು ಮರಕ್ಕೆ ಗೊಬ್ಬರ ನೀರು ಹಾಕಿ ಬೆಳೆಸ ಬೇಕೋ ಅಥವಾ ಮರದ ಸುತ್ತ ಕಳೆಯಿದೆ ಎಂದು ಮರವನ್ನೇ ಉರುಳಿಸ ಬೇಕೋ? ಮರವನ್ನು ಉರುಳಿಸುವ ಕೆಲಸವಂತೂ ಭರದಿಂದ ಸಾಗಿದೆ.ನೆರಳು ಮಾಯವಾಗಿದೆ. ಜನತೆ ಕಂಗಾಲಾಗಿದ್ದಾರೆ. ಕಳೆ ತೆಗೆದು ಮರವನ್ನು ಉಳಿಸುವ ಕೆಲಸ ಆಗಬೇಕಿದೆ. ಅದು ನಮ್ಮ ಕೈಲೇ ಇದೆ.

2 comments:

  1. ಡೀವೀಜಿ ಯವರನ್ನು ಕನ್ನಡ ಭಗವದ್ಗೀತೆ ಬರೆದವರೆಂದು ಜನ ತಡವಾಗಿ ಗುರುತಿಸಿದರು, ಒಂದುಕಾಲಕ್ಕೆ ಕಗ್ಗದ ೪೫೦ ಪ್ರತಿಗಳು ಹಳೇ ಪೇಪರ್ ಕೊಳ್ಳುವವರ ಕೈಗೆ ಹೋಗುತ್ತಿತ್ತು , ನಮ್ಮ ಜನರೇ ಹೀಗೆ, ಕೆಲವೊಮ್ಮೆ ಕ್ಷಣಿಕ ಆನಂದಕ್ಕಾಗಿ, ವಿನೋದಕ್ಕಾಗಿ ಮನಸೋಲುವ ಜನ ಸೋತಾಗ ಕಾಣುವುದು ಇಂತಹ life saving jackets ಗಳನ್ನು,ಓದಲಾಗದ ಕಗ್ಗಂಟಾದ ವೇದದ ಬಗ್ಗೆ ಅದು ಪುರೋಹಿತಶಾಹಿಗಳದ್ದೆಂದು ಪಟ್ಟಕಟ್ಟಿದರು, ಕಗ್ಗವನ್ನೂ ಅದೇರೀತಿ ಮಾಡಹೊರಟು ಯಾರೋ ಕೆಲ ಪುಣ್ಯಾತ್ಮರು ಓದಿದವರು ಅರ್ಥಬರೆದರು, ಇಲ್ಲದಿದ್ದಲ್ಲಿ ಕಗ್ಗದ ಉಳಿವೇ ಸಂಶಯವಾಗಿತ್ತು.

    ReplyDelete
  2. ಸತ್ಯವಾದ ಮಾತು.

    ReplyDelete