Pages

Tuesday, April 13, 2010

ಪಾತ್ರಾಪಾತ್ರವರಿತು ದಾನಮಾಡು

ಶಕ್ತ: ಪರಜನೇ ಜಾತಾ ಸ್ವಜನೇ ದು:ಖ ಜೀವಿನಿ|
ಮಧ್ವಾಪಾತೋ ವಿಷಾ ಸ್ವಾದ: ಸ ಧರ್ಮಪ್ರತಿರೂಪಕ:||
- ಮನು ಸ್ಮೃತಿ

ತನ್ನವರು ಕಷ್ಟದಿಂದ ಜೀವಿಸುತ್ತಿರುವಾಗ ,ಅವರನ್ನು ಉಪೇಕ್ಷಿಸಿ ಪರರಿಗೆ ಕೊಡುವುದು ಧರ್ಮವಲ್ಲ. ಅದು ಧರ್ಮದಂತೆ ಕಾಣುತ್ತದೆಯಷ್ಟೆ. ನೋಡಲು ಜೇನಿನಂತೆ ಕಂಡರೂ ಅದರ ರುಚಿ ಕಹಿಯೇ.
ದಾನಮಾಡಬೇಕು ನಿಜ. ಆದರೆ ಯಾರಿಗೆ ದಾನ ಮಾಡಬೇಕು? ಪಾತ್ರಾಪಾತ್ರವರಿತು ದಾನಮಾಡಬೇಕಲ್ಲವೇ? ಅಪಾತ್ರನಿಗೆ ದಾನಮಾಡುವುದು ಧರ್ಮವಲ್ಲ, ಬದಲಿಗೆ ಅದು ವ್ಯರ್ಥವೆನ್ನುತ್ತದೆ ವಿದುರ ನೀತಿ.
ದಾನವನ್ನು ಸ್ವೀಕರಿಸಲು ಹಲವಾರು ಪಾತ್ರಗಳಿದ್ದಾಗ ಸ್ವಜನರಿಗೆ ಪ್ರಥಮಾರ್ಹತೆ ಎನ್ನುತ್ತದೆ ಮನುಸ್ಮೃತಿ. ಸ್ವಜನರು ಯಾರು? ತನ್ನ ಹೆಂಡತಿ-ಮಕ್ಕಳು, ವೃದ್ಧರಾದ ತಂದೆತಾಯಿ,ತನ್ನನ್ನು ನಂಬಿಕೊಂಡಿರುವ ಅಶಕ್ತ ಬಂಧುವರ್ಗ.ಇವರನ್ನು ಉಪೇಕ್ಷಿಸಿ ಹೆಸರಿಗಾಗಿ,ಪ್ರಚಾರಕ್ಕಾಗಿ ಅನ್ಯರಿಗೆ ದಾನಮಾಡುವುದು ಅಧರ್ಮವೆನಿಸುತ್ತದೆ. ಈಬಗೆಯ ಹಲವು ನಿದರ್ಶನಗಳನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದಾಗಿದೆ. ಅಣ್ಣನಮನೆಯಲ್ಲೋ ,ತಮ್ಮನಮನೆಯಲ್ಲೋ ಬಡತನದಿಂದ ನರಳುತ್ತಿದ್ದು ಅವರ ದುರ್ದೈವಕ್ಕೆ ರೋಗ ಪೀಡಿತರೂ ಆಗಿ ಹಾಸಿಗೆ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಉಪೇಕ್ಷಿಸಿ ಈ ವ್ಯಕ್ತಿಯು ಯಾವುದೋ ಸಮಾರಂಭವನ್ನಾಚರಿಸುತ್ತಾ ಊರಿನವರನ್ನೆಲ್ಲಾ ಕರೆದು ಸತ್ಕರಿಸಿದರೆ ಯಾವ ದೇವರು ಮೆಚ್ಚುತ್ತಾನಲ್ಲವೇ?

3 comments:

  1. ಶ್ರೀಧರರೇ, ಇಂದು ತಾವು ನೋಡುತ್ತಿದ್ದೀರಿ, ದಿನದಿಂದ ದಿನಕ್ಕೆ ನಮ್ಮ ವೇದಸುಧೆಯ ಓದುಗರ ಬಳಗ ವಿಸ್ತರಿಸಲ್ಪಡುತ್ತಿದೆ, ಇದು ನನಗೆ ಬಹಳ ಹೆಮ್ಮೆ. ಮೌಲಿಕ ಸತ್ವಯುತ ವಿಷಯಗಳನ್ನು ಕೊಟ್ಟರೆ ಕ್ರಮೇಣ ಓದುಗರು ಅದನ್ನು ಅನುಸರಿಸುತ್ತಾರೆ,ಇಷ್ಟಪಡುತ್ತಾರೆ. ಇಂದಿನ ಈ ಸುಭಾಷಿತ ಕೂಡ ಚೆನ್ನಾಗಿದೆ, ನನಗಿಂತ ಮೊದಲೇ ಗುರುಮೂರ್ತಿಯವರು ಬರೆದಿದ್ದಾರಲ್ಲ, ಎಲ್ಲರಿಗೂ ಇಷ್ಟವಾಗುವ ಸುಭಾಷಿತವಿದು,ತಮ್ಮ ಪ್ರಯತ್ನಕ್ಕೆ,ಪ್ರಸ್ತುತಿಗೆ ಧನ್ಯವಾದಗಳು

    ReplyDelete
  2. ಅಪಾತ್ರರಿಗೆ ಮತ್ತು ಅಯೋಗ್ಯರಿಗೆ ಮಾಡುವ ದಾನ ವ್ಯರ್ಥ. ಚೆ೦ದದ ಸುಭಾಷಿತ.

    ReplyDelete