Pages

Sunday, August 1, 2010

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ

--ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಜಗದಮಿತ್ರನ ಕಗ್ಗ' ಸಂಕಲನದಿಂದ




2 comments:

  1. [ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
    ಸೂತ್ರ-ಮನಮುದಗೊಳಿಸು]

    ನಿಜ ಭಟ್ಟರೇ,
    ಇಲ್ಲ ಸಲ್ಲದ ಒತ್ತಡಗಳನ್ನು ತಲೆಯಮೇಲೆ ಅನಗತ್ಯವಾಗಿ ಎಳೆದುಕೊಂಡು. ಬಿಪಿ,ಶುಗರ್, ಅಂತಾ ಮದ್ದು ತೆಗೆದುಕೊಳ್ಳುವ ಬದಲು "ಮನ ಮುದಗೊಳಿಸು" ಸೂತ್ರ ಎಷ್ಟು ಚೆನ್ನಾಗಿದೆ! ಮನುಷ್ಯನು ಅತಿಯಾದ ಭೋಗಜೀವನದಲ್ಲಿ ಸಿಲುಕಿ ನಿಜವಾಗಿ ದುರ್ಬಲನಾಗುತ್ತಿದ್ದಾನೆ. ಅದಕ್ಕೆಲ್ಲಾ ಮದ್ದು ನಮ್ಮ ಋಷಿಮುನಿಗಳ ಆದರ್ಶಮಯ ತ್ಯಾಗ ಜೀವನ.

    ReplyDelete
  2. ಧನ್ಯವಾದಗಳು ಶ್ರೀಧರ್ ಸಾಹೇಬರೇ, 'ಜಗದಮಿತ್ರ' ಡೀವಿಜಿಯವರ ಶಿಷ್ಯ, ಆತ ಸುಮ್ಮ ಸುಮ್ಮನೇ ಮಾತನಾಡುವುದೇ ಇಲ್ಲ, ವಾರಕ್ಕೊಮ್ಮೆ ಬರೆಯಲೂ ತಡಮಾಡುತ್ತಾನೆ ಗೊತ್ತಾ ?

    ReplyDelete