Pages

Thursday, August 12, 2010

ತೋಚಿದ್ದು-ಗೀಚಿದ್ದು-ಭಾಗ-1


ನಾನೆಂಬುದು ನಾನಲ್ಲ,
ನನದೆಂಬುದು ನನದಲ್ಲ,
ನನ್ನವರೆಂಬುವರು ನನ್ನವರಲ್ಲ,
ಆದರೂ ಈ ಸತ್ಯ ನಾ ತಿಳಿದಿಲ್ಲ!
*** *** ***

ಬದುಕುವಾಸೆ ವರ್ಷ ನೂರು,
ಅಂದು ಕೊಂಡದ್ದು ನೂರು,
ಕನಸು ಕಂಡಿದ್ದು ನೂರು,
ಆದರೂ ಆಗಲಿಲ್ಲ ಚೂರು-ಪಾರು!
*** *** ***

ಬರುವಾಗ ಒಂಟಿ,
ಹೋಗುವಾಗ ಒಂಟಿ,
ನಡುವಿನಲೇಕೆ ಈ ಜಂಟಿ?
*** *** ***

ನನದೆಲ್ಲವೂ ಸರಿ
ನಾ ನುಡಿವುದೆಲ್ಲವೂ ಸರಿ
ನಾ ಮಾಡುವುದೆಲ್ಲವೂ ಸರಿ
ಹೌದಲ್ಲವೇ? ನೀವೇನಂತೀರಿ?
ಖಂಡಿತಾ ಅಲ್ಲ! ಸಧ್ಯಕ್ಕೆ ನೀ ಪಕ್ಕಕ್ಕೆ ಸರಿ!!
*** *** ***

ನನ್ನ ನಿತ್ಯಾನುಷ್ಠಾನದ ಮೂಲ ಜಪಮಂತ್ರ 'ಬೇಕು'
ಎಲ್ಲವೂ ಬೇಕು, ಎಲ್ಲವೂ ನನಗೇ ಬೇಕು,
ಆದರೂ ತಿಳಿಯದಾಗಿದೆ, 'ನನಗೇನು ಬೇಕು'
ಯಾರಾದರೂ ತಿಳಿಸುವಿರಾ ಈ ಬೇಕಿಗೊಂದು ಬ್ರೇಕು?
*** *** ***

ಬದುಕಬೇಡ ನೀ ನೂರು ವರುಷ
ಖಂಡಿತಾ ತರಲಾರದು ಅದು ನಿನಗೆ ಹರುಷ
ಬದುಕಾಗುವುದು ನಿತ್ಯ ಗೋಳಾಟದ ಬೇಗುದಿ
ತೊಲಗಿದರೆ ಸಾಕಪ್ಪಾ ಎಂದು ಕಾಯ್ವರೇ ಬಲು ಮಂದಿ!
*** *** ***

ದಿನಾ ನಡೆಯುತ್ತೇನೆ, ದಿನಾ ಎಡವುತ್ತೇನೆ
ದಿನಾ ನುಡಿಯುತ್ತೇನೆ, ದಿನಾ ತೊದಲುತ್ತೇನೆ
ದಿನಾ ಅಳುತ್ತೇನೆ, ದಿನಾ ನಗುತ್ತೇನೆ
ದಿನದಿನದ ಬಾಳಿನ ಅನುಭವವೆ ಇದೇ ತಾನೆ?
*** *** ***

ಒಳಗೆ ಜ್ವಾಲಾಮುಖಿ, ಹೊರಗೆ ಹಸನ್ಮುಖಿ,
ಒಳಗೆ ನಾನಾ ಜಂಜಾಟದ ನಡುವೆಯೂ ಜೀವನ್ಮುಖಿ,
ಬದುಕುವುದು ನನಗಲ್ಲ, ಪರರಿಗೆ,
ಅದುವೇ ಸದಾ ಇರಲಿ ನನ ಪಾಲಿಗೆ!
*** *** ***

ಕಡೆಗಣಿಸಬೇಡ ನಿನ್ನೀ ದೇಹವನು
ಅದೇ ಆ ಭಗವಂತನ ಅನುಪಮ ಸೃಷ್ಠಿ
ಸದಾ ಇರಲಿ ಸ್ವಸ್ಥ ದೇಹ, ಸ್ವಸ್ಥ ಮನಸ್ಸು
ಅದುವೇ ಇಹಲೋಕದಿಂದ ಪರಲೋಕಕ್ಕೊಯ್ಯುವ ಸಾಧನ ಸಂಪತ್ತು!
*** *** ***

ಸುರಿಯುತಿಹುದು ಮಳೆ

ತಂಪಾಗಿಹುದು ಇಳೆ

ಬಸಿರೊಡೆಯಿತು ಧರೆ,

ಹೊದ್ದಿತು ಹಸಿರಿನಾ ಝರಿ-ಸೀರೆ!
*** *** ***

ನಿನಗಿರಲು ಅಧಿಕಾರ
ಇರುವುದು ವಂದಿ ಮಾಗದರ
ಜೈಜೈಕಾರ
ಅಧಿಕಾರ ಹೋದೊಡನೆ ವಂದಿ
ಮಾಗದರು ಮಾಯ
ಕಾಲ್ಗೆ ಬೀಳುವವರಿಲ್ಲ, ಕಾಲೆಳೆಯುವವರೇ ಎಲ್ಲ!
*** *** ***

ಒಳಗೆ ತುಂಬಿದಾ ನಗು, ಹೊರಬಾರದ ನಗು,
ಒಳಗೆ ತುಂಬಿದಾ ಹರುಷ, ಹೊರಗೆ ಬರೀ ವರ್ಷ
ಒಳಗೆ ತುಂಬಿದಾ ಭಾವನೆಗಳು, ಹೊರಗೆ ಬರೀ ಗೋಜಲುಗಳು
ಉಕ್ಕಬಾರದೇ ಈ ಅಗ್ನಿಪರ್ವತ, ಉಗುಳಬಾರದೇ ತನ್ನೊಡಲಿನ ತುಡಿತಗಳ?
*** *** ***

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

*** *** ***
ನನಗ್ಯಾರಿಲ್ಲ ನಾನೊಬ್ಬನೇ ಎಲ್ಲ
ಎಲ್ಲವೂ ಇದೆ ಆದರೆ ನನಗೇನಿಲ್ಲ
ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
ಅಂಬಿಗನ ಬಾಳಿನ ಪರಿ ನನ ಬಾಳೂ ದಂಡ!
*** *** ***
ನೊಂದು ಮೂಕಾಗಿ

ಬೆಂದು ಬೆಂಡಾಗಿ

ಸೋತು ಸುಣ್ಣಾಗಿ, ಸುಟ್ಟು ಕರಕಲಾಗಿ

ರೋಧಿಸುತಿಹುದೀ ಜೀವ

*** *** ***

ಬಳಸಿದರು ನನ್ನನ್ನು ಕಬ್ಬಿನ ಜೆಲ್ಲೆಯಂತೆ

ಬಳಸಿ ಮೂಲೆ ಸೇರಿಸಿದರು ಕಸಪೊರಕೆಯಂತೆ

ಮೊಸರನ್ನ ತಿಂದು ನನ ಮೂತಿಗೆ ಸವರಿದರು ಕೋತಿಯಂತೆ

ಎಸೆದರು ಉಂಡಾದ ಮೇಲೆ ಬಾಳೆಎಲೆಯ ಪರಿಯಂತೆ!

*** *** ***

ಮಾತಾಡಿ ಕೆಟ್ಟರು ಕೆಲವರು

ಮಾಡಿ ಕೆಟ್ಟರು ಕೆಲವರು

ಮಾತಾಡಿ-ಮಾಡಿ ಕೆಟ್ಟವರೂ ಕೆಲವರು

ಮಾತಾಡದೇ, ಮಾಡದೇ ಜಾಣರಾದರು ಹಲವರು!

*** *** ***


ದುರ್ಬಳಿಸಿಹರು ಎನ್ನ ಸಹನೆಯನ್ನ

ದುರ್ಬಳಿಸಿಹರು ಎನ್ನ ಮೌನವನ್ನ

ದುರ್ಬಳಿಸಿಹರು ಎನ್ನ ಮೃದು ಮನಸ್ಸನ್ನ

ನಾನೀಗ ಬರೀ ಹಳಸಿದ ಚಿತ್ರಾನ್ನ!


*** *** ***


ಋಣದಿಂದ ಬಂತು ಸಂಬಂಧ

ಸಂಬಂಧದಿಂದ ಹೆಚ್ಚಿತು ಋಣಬಂಧ

ಅದುವೇ ಜೀವ-ಜೀವನದ ಋಣಾನುಬಂಧ

ಅದುವೇ ತಪ್ಪಿಸಿಕೊಳ್ಳಲಾರದ ಪಾಶ-ಬಂಧ!


*** *** ***

9 comments:

  1. ನನ್ನ ಕಂಪ್ಯೂಟರ್ ನ ಅರೆಜ್ಞಾನದಿಂದ ಮತ್ತು ಅಚಾತುರ್ಯದಿಂದ ತಮ್ಮ ಪ್ರತಿಕ್ರಿಯೆಗಳು
    ಪ್ರಕಟವಾಗಿದ್ದು ರದ್ದಾಗಿದೆ. ಇದರಲ್ಲಿ ಬೇರೆ ಉದ್ದೇಶವಿಲ್ಲ. ದಯವಿಟ್ಟು ತಮ್ಮ ಪ್ರತಿಕ್ರಿಯೆಗಳನ್ನು ಅವಕಾಶವಾದಾಗ ಪುನ: ನೀಡಿ.ಧನ್ಯವಾದಗಳು

    ReplyDelete
  2. ಸುರೇಶ, ಒಟ್ಟಿಗೆ ಭೋರ್ಗರೆದ ಮಳೆ ಬಂದಂತಾಗಿದೆ. ತಪ್ಪು ತಿಳಿಯದಿರು. ತಡೆಹಿಡಿದದ್ದನ್ನೆಲ್ಲಾ ಒಟ್ಟಿಗೆ ಹೊರಬಿಟ್ಟರೆ ಒಳ್ಳೆಯದಲ್ಲ. ಇದನ್ನೆಲ್ಲಾ ಬೇರೆ ಬೇರೆಯಾಗಿ ಪ್ರಕಟಿಸಬಹುದಿತ್ತು.
    [[ವಂದಿ ಮಾದಿಗರ]] ಇದನ್ನು ವಂದಿ ಮಾಗದರ ಎಂದು ಬದಲಾಯಿಸುವುದು ಸೂಕ್ತ.

    ReplyDelete
  3. ಕ್ಷಮಿಸಿ ಸುರೇಶರವರೇ ನನ್ನ ಪ್ರತಿಕ್ರಿಯೆಗಳನ್ನು ನಾನೇ ತೆಗೆದಿರುವೆ. ನನ್ನ ಪ್ರತಿಕ್ರಿಯೆ ಸ್ವಲ್ಪ ನೇರವಾಯಿತು ಎನಿಸಿ ನಾನೇ ತೆಗೆದಿರುವೆ.
    ದಯವಿಟ್ಟು ತಾವು ತಪ್ಪು ತಿಳಿಯಬಾರದು.

    ReplyDelete
  4. ಶ್ರೀಯುತ ಸುರೇಶರವರೇ,
    ನನ್ನ ಪ್ರತಿಕ್ರಿಯೆಗಳನ್ನು ತಮ್ಮ ಖಾಸಗಿ ಪತ್ರದಲ್ಲಿ ಕಳುಹಿಸುವೆ. ನೀವು ಈ ಮೊದಲೇ ಓದಿದ್ದರೆ ಕಲಿಸುವದಿಲ್ಲ. ಅಂಕಣದಲ್ಲಿ ಬೇಡವೆಂದು ನಾನೇ ತೆಗೆದಿರುವೆ.
    ತಮ್ಮ ವಿಧೇಯ
    ಸೀತಾರಾಮ.

    ReplyDelete
  5. ನಾಗರಾಜ್,
    "ಮಾಗದರು" ಎಂದು ಬದಲಿಸಲಾಗಿದೆ.

    ReplyDelete
  6. ರಾಜು ಮತ್ತು ಶ್ರೀಧರ್,
    ತಿದ್ದುಪಡಿಗೆ ಧನ್ಯವಾದಗಳು.
    ಶ್ರೀ ಸೀತಾರಮ್ ರವರ ಪ್ರತಿಕ್ರಿಯೆ ನಿರೀಕ್ಷಿಸುವೆ.

    ReplyDelete