ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, September 9, 2010

ಎಲ್ಲಾ ಆತ್ಮ ಸಂತೋಷ ಕ್ಕಾಗಿ

ವೇದಸುಧೆಯ ಅಭಿಮಾನಿಳೇ, ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.ಗೌರಿ-ಗಣೇಶನ ವಿಚಾರ ವೇದಗಳಲ್ಲಿದೆಯೇ? ನೀವು ಆಚರಿಸುತ್ತೀರಾ? ನಿಮ್ಮ ಆಚರಣೆಗೆ ಅರ್ಥ ಇದೆಯೇ? ಅಂತಾ ನನ್ನ ಸ್ನೇಹಿತರೊಬ್ಬರು ನನ್ನೊಡನೆ ನಿನ್ನೆ ಚರ್ಚೆ ಆರಂಭಿಸಿದರು.ವೇದಸುಧೆ ಅನ್ನೋ ಹೆಸರಲ್ಲಿ ಬ್ಲಾಗ್ ಶುರು ಮಾಡಿದಮೇಲೆ ಕೆಲವು ಸಲ ನನಗೆ ಮುಜುಗರವೂ ಆಗಿದೆ. ಖುಷಿಯೂ ಆಗಿದೆ.ನನ್ನ ಸ್ನೇಹಿತ ಒಪ್ಪಲಿ ಬಿಡಲಿ ಅವನಿಗೆ ನಾನು ಏನು ಹೇಳಿದೆನೋ ಅದನ್ನು ಮತ್ತು ಇವತ್ತು ಹಬ್ಬದ ತಯಾರಿಯಲ್ಲಿಯೇ ಉಂಟಾಗಿರುವ ಸಂತೋಷವನ್ನೂ ಇಲ್ಲಿ ನಿಮಗೂ ತಿಳಿಸಿ ಬಿಡ್ತೀನಿ.
ನಮ್ಮ ಎಲ್ಲಾ ಚಟುವಟಿಕೆಗಳ ಒಟ್ಟು ಉದ್ಧೇಶವೇನು? ಒಂದು ಸಮಾಧಾನಕರ ಜೀವನ ಸಾಗಿಸುವುದು, ಅಷ್ಟೇ ತಾನೆ? ದಿನವೂ ಆಫೀಸು,ವ್ಯಾಪಾರ-ವ್ಯವಹಾರ ಅಂತಾ ಕಾಲ ಹಾಕೋ ನಾವು ಒಟ್ಟಾರೆ ನಮ್ಮ ಹೊಟ್ಟೆ-ಬಟ್ಟೆಗೆ ಒಂದಿಷ್ಟು ದುಡಿಮೆ ಮಾಡೋದರಲ್ಲಿ ಇಡೀ ದಿನವನ್ನು ಕಳೆದು ಬಿಡ್ತೀವಿ. ಸರ್ಕಾರೀ ನೌಕರರಂತೂ ತಮ್ಮ ೩೦-೩೫ ವರ್ಷಗಳ ಸರ್ವೀಸ್ ನಲ್ಲಿ ಸಾಲಮಾಡಿ ಒಂದು ೩೦*೪೦ ಅಳತೆಯ ಮನೆಕಟ್ಟಿ ಜೀವನವೆಲ್ಲಾ ಸಾಲ ತೀರಿಸಿ ಒಂದು ದಿನ ಗೊಟಕ್ ಅಂದ್ರೆ ಅಲ್ಲಿಗೆ ಅವರ ಜೀವನದ ಕಥೆ ಮುಗಿದಂತೆಯೇ. ಇಂತಾ ಗಡಿಬಿಡಿ ಜೀವನದಲ್ಲಿ ಮನುಷ್ಯನಿಗೆ ಒಂದಿಷ್ಟು ಬದಲಾವಣೆ ಬೇಡವೇ? ಅದಕ್ಕಾಗಿ ಈ ಹಬ್ಬ-ಹರಿದಿನ. ಒಂದು ವೇಳೆ ಗಣಪತಿ ವ್ರತ ಮಾಡದೆ ಹೋದ್ರೆ ಆಕಾಶ ಕಳಚಿ ತಲೆ ಮೇಲೆ ಬೀಳುವುದಿಲ್ಲ. ಆದರೆ ಹಬ್ಬದ ತಯಾರಿಯ ಆ ಸಡಗರ ಇದೆಯಲ್ಲಾ! ಅದನ್ನು ಕಳೆದುಕೊಂಡು ಬಿಡ್ತೀವಲ್ರೀ. ಎಂ.ಬಿ.ಏ ಮಾಡ್ತಿರೋ ನನ್ನ ಮಗಂಗೆ ನಿತ್ಯವೂ ದೇವರಿಗೊಂದು ನಮಸ್ಕಾರ ಹಾಕಬೇಕೆಂಬ ಮನಸ್ಸಿಲ್ಲ. ಆದರೆ ಇವತ್ತು ನನ್ನೊಡನೆ ಮಾರ್ಕೆಟ್ಟಿಗೆ ಬಂದು ಹಣ್ಣು-ಹೂವು, ಬಾಳೆಕಂದು-ಮಾವಿನಸೊಪ್ಪು, ಎಲ್ಲಾ ಖರೀಧಿಸುವಾಗ ಎಂತಾ ಸಡಗರ ಇತ್ತು, ಗೊತ್ತಾ? ನಾನು ಸಾಮಾನ್ಯವಾಗಿ ಒಂದು ಚಿಕ್ಕ ಗಣಪತಿ ವಿಗ್ರಹ ತರ್ತಾ ಇದ್ದೆ. ಈ ವರ್ಷ ಅವನ ದರ್ಬಾರಲ್ಲಿ ಸ್ವಲ್ಪ ದೊಡ್ಡ ಗಣಪನೇ ನಮ್ಮ ಮನೆಗೆ ಬಂದು ಕುಳಿತಿದ್ದಾನೆ. ಇನ್ನು ಗಣಪತಿ ಮಂಟಪ ಕಟ್ಟೋ ಸಡಗರ. ಇನ್ನು ನನ್ನ ಪತ್ನಿಗಾದರೋ ಅವಳ ತಂಗಿ ಜೊತೆ ಸೇರಿಕೊಂಡು ಮೋದಕ ಮಾಡುವ, ಮೊರದ ಬಾಗಿನಕ್ಕೆ ಅಣಿ ಮಾಡಿಕೊಳ್ಳುವ ಸಡಗರ. ಮನೆಯಲ್ಲಿ ಎಲ್ಲಾ ಆಕ್ಟ್ವೀವ್ ಆಗಿಬಿಟ್ಟಿದ್ದಾರೆ. ಬಹುಷ: ಇವತ್ತು ರಾತ್ರಿ, ನಾಳೆ ರಾತ್ರಿ ಮಲಗಿಕೊಳ್ಳುತ್ತಾರೋ ಇಲ್ವೋ ಗೊತ್ತಿಲ್ಲ. ಅಂದಹಾಗೆ ಶನಿವಾರ ಮಾಡೋ ಹಬ್ಬಕ್ಕೆ ಇವತ್ತೇ ಹೂವು- ಹಣ್ಣು ಇತ್ಯಾದಿ ತಂದಾಯ್ತು. ಯಾಕೆ ಗೊತ್ತಾ? ನಾಳೆ ಹಾಸನದ ಮಾರ್ಕೆಟ್ ನಲ್ಲಿ ಒಂದು ಹುಳುವೂ ತೆವಳಲು ಸಾಧ್ಯವಿರುವುದಿಲ್ಲ. ಅಷ್ಟು ರಷ್. ಏನ್ರೀ ಜನಕ್ಕೆ ಹುಚ್ಚು ಅಂತೀರಾ? ನಾನು ಹೇಳೋದು ಹುಚ್ಚಲ್ಲ, ಬದಲಿಗೆ ಸಡಗರ. ಅದರಲ್ಲೇ ಸಂತೋಷ. ಅದರಲ್ಲೇ ಆನಂದ. ಆ ಅನಂದವನ್ನು ಯಾಕೆ ಕಳೆದು ಕೊಳ್ಳಲಿ? ವೇದದಲ್ಲಿ ಇರಲಿ-ಬಿಡಲಿ ಸಂತೋಷಕ್ಕಾಗಿ, ಸಡಗರಕ್ಕಾಗಿ ಗಣೇಶನ ಹಬ್ಬ ಆಚರಿಸುತ್ತೀನಿ. ಅಂದಹಾಗೆ ಹಬ್ಬ ಆಚರಿಸುವುದರಿಂದ ಗಣೇಶ ಸುಪ್ರೀತನಾಗಿ ನಮಗೆ ಬೇಕಾದ ವರ ಕೊಡ್ತಾನೇ ಅಂತಾನೂ ಅಲ್ಲ, ಆಚರಿಸದೆ ಹೋದರೆ ಶಾಪಕ್ಕೆ ಗುರಿಯಾಗುತ್ತೀ ನೆಂದೂ ಅಲ್ಲ. ಎಲ್ಲಾ ಆತ್ಮ ಸಂತೋಷ ಕ್ಕಾಗಿ.

4 comments:

 1. ನಿಜ. ಸರಳವಾಗಿ ಹೇಳಿದ್ದಿರಾ....

  ReplyDelete
 2. ನಿಮ್ಮಂತ ಸಹೃದಯರಿರುವುದರಿಂದಲೇ ಭಾವನೆಗಳಿಗೆ ಬೆಲೆ ಇದೆ. ಎಲ್ಲರಿಗೂ ನೀವು ಕೊಡುತ್ತಿರುವ ಪ್ರೋತ್ಸಾಹದಿಂದ ವೇದಸುಧೆ ಮುನ್ನಡೆಯುತ್ತಿದೆ, ಎಂಬುದರಲ್ಲಿ ಸಂಶಯವಿಲ್ಲ.

  ReplyDelete
 3. ಹೌದು...ಚೆನ್ನಾಗಿ ತಿಳಿಸಿದ್ದೀರಿ.

  ReplyDelete
 4. 'ನಬ್ರೂಯಾತ್ ಸತ್ಯಮಪ್ರಿಯಮ್'! ಅಪ್ರಿಯವಾದ ಸತ್ಯವನ್ನು ಹೇಳಬಾರದಂತೆ. ದೇವರ ಕುರಿತು ನಮ್ಮ ವೈಯಕ್ತಿಕ ಅಭಿಪ್ರಾಯವನ್ನು ಎಲ್ಲರ ಮೇಲೆ ಹೇರುವುದು ತರವಲ್ಲ, ಅದು ಖಡಕ್ ಸತ್ಯವಾಗಿದ್ದರೂ ಸಹ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ನಮ್ಮ ವಿಚಾರ ಹೇಳಬಹುದು, ಅದು ಸರಿಯಿದ್ದರೂ ಅದನ್ನು ಒಪ್ಪಲೇಬೇಕೆಂದು ಇತರರನ್ನು ನಿರ್ಬಂಧಿಸುವುದು ಎಷ್ಟು ಸೂಕ್ತ? ಮನೆಮಂದಿ, ಹಿತೈಷಿಗಳು, ಸಮಾಜ ಇಂತಹ ಆಚರಣೆಗಳಿಂದ ಸಂತೋಷಪಡುವುದಾದಲ್ಲಿ, ಅದರಿಂದ ಒಳ್ಳೆಯ ಪರಿಣಾಮಗಳಾಗುತ್ತಿದ್ದಲ್ಲಿ ವಿರೋಧಿಸಬೇಕೇಕೆ? ವೈಚಾರಿಕ ಬದಲಾವಣೆ, ಸತ್ಯದ ಅರಿವನ್ನು ಬಲವಂತವಾಗಿ ಮೂಡಿಸುವುದು ಕಷ್ಟ.ಹಾಗೆಂದು ಸತ್ಯದ ಅರಿವು ಮೂಡಿಸುವ ಕಾರ್ಯ ನಿಲ್ಲಿಸದೆ ಮುನ್ನಡೆಯಲೇಬೇಕು.

  ReplyDelete