ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, November 1, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6ಋಗ್ವೇದದಲ್ಲಿ:-


ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)


[ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ;

ಎಂದು ಓದುತ್ತೇವೆ. ಅಥರ್ವವೇದದಲ್ಲಿ:-


ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)


ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ-


ಎಂದು ಹೇಳಿದೆ. ಯಜುರ್ವೇದದಲ್ಲಿ:-


ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ
ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ
ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20)


ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)


[ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ - ಎನ್ನುತ್ತಾರೆ.


ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-


ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)


[ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.


ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ - ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-


ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)


[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.


ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

4 comments:

 1. >>ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು. <<

  ಸುಮ್ಮನೆ ಏನು ಬೇಕಾದರೂ ವಿತ್ತ೦ಡ ವಾದ ಮಾಡಬಹುದು. ಆದರೆ ಮೇಲಿನ ಮಾತುಗಳ ಸತ್ಯವನ್ನು ಅರಿಯುವವರಾರು?

  ಚೆನ್ನಾಗಿದೆ. ನಿನ್ನೆ ತಾನೇ ಇದರ ಬಗ್ಗೆ ಚುಟುಕಾಗಿ ನನ್ನ ಅಣ್ಣ ಹೇಳಿದ್ದ. ಅದು ನಿಮ್ಮಿ೦ದ ಸವಿಸ್ತಾರವಾಗಿ ಬರೆಯಲ್ಪಟ್ಟಿದೆ.ಓದಿ ವಿವರವಾಗಿ ತಿಳಿದುಕೊ೦ಡೆ.ಅದಕ್ಕಾಗಿ ನಿಮಗೆ ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ReplyDelete
 2. ವೇದಸುಧೆಯ ಪ್ರಧಾನ ಲೇಖಕರು ನೀವೇ.ವೇದಸುಧೆಯನ್ನು ಆರಂಭಿಸಿದ್ದರಿಂದ ಅದರ ಕೀಲಿ ನನ್ನೊಡನಿದೆ, ನೀವು ಒಪ್ಪಿದರೆ ಈಗಲೇ ಕೀಲಿ ನಿಮ್ಮ ಕೈಲಿಟ್ಟುಬಿಡುವೆ. ಏನಂತೀರಾ? ನಿಮ್ಮ ಒಪ್ಪಿಗೆ ನಿರೀಕ್ಷೆಯಲ್ಲಿರುವೆ.

  ReplyDelete
 3. "ದೇವನೊಬ್ಬ ನಾಮ ಹಲವು" ಎಂಬ ಬಗ್ಗೆ ಉತ್ತಮ ಪೂರಕ ಬರಹ.

  ReplyDelete
 4. ಆತ್ಮೀಯ ನಾವಡ, ಶ್ರೀಧರ ಮತ್ತು ನಾರಾಯಣಭಟ್ಟರಿಗೆ ವಂದನೆಗಳು.
  ಪ್ರಿಯ ಶ್ರೀಧರ,ಆರಂಭಿಸಿರುವುದೇ ದೊಡ್ಡದು; ನನ್ನ ಕೆಲಸ ಅಂಚೆಯಣ್ಣನ ಕೆಲಸವೇ ಆಗಿದೆ. ನನ್ನದೇನಿದೆ? ಕೀಲಿಕೈ ಹಸ್ತಾಂತರದ (ಈ ಬಗ್ಗೆ ನಿಮ್ಮಿಂದ 2-3 ಸಂದರ್ಭದಲ್ಲಿ ಕೇಳಿರುವೆ)ಮಾತುಗಳು ನಿಮ್ಮಿಂದ ಬಾರದಿರಲಿ.

  ReplyDelete