Pages

Thursday, November 18, 2010

ನಿತ್ಯ ಸತ್ಯ

 ಆತ್ಮೀಯ ವೇದಸುಧೆಯ ಅಭಿಮಾನಿಗಳೇ ಈ ಒಂದು ಪುಟ್ಟ ಪದ್ಯವು ಬಂಡಾಯ ಕವನದಂತೆ ಮೇಲ್ನೋಟಕ್ಕೆ ಕಂಡುಬಂದು ಚಿಂತನ ಶೀಲರಿಂದ  ಜಿಜ್ಞಾಸೆಗೆ ಕಾರಣವಾಯ್ತು. ಬದುಕಿನ ಜಂಜಾಟದಲ್ಲಿ ಹಲವರಿಗೆ ಉಂಟಾಗಬಹುದಾದ ದ್ವಂದ್ವಗಳಿಗೆ ಕೆಲವಕ್ಕಾದರೂ ಸಮಾಧಾನವು ಈ ಜಿಜ್ಞಾಸೆಯಿಂದ ದೊರೆತಿದೆ ಎಂದು ಭಾವಿಸುತ್ತೇನೆ. ವಿಶೇಷವಾಗಿ ಮಂಥನದಲ್ಲಿ ಪಾಲ್ಗೊಂಡು ಗಟ್ಟಿನೆಲೆಯಿಂದ ವಿವರಣೆ ನೀಡಿದ ಶ್ರೀ ವಿಷ್ಣುಭಟ್ಟರಿಗೆ ಕೃತಜ್ಞನಾಗಿದ್ದೇನೆ.
-ಹರಿಹರಪುರಶ್ರೀಧರ್
----------------------------------------------------------------------
ಎಲ್ಲಿಹುದು ಹೇಗಿಹುದು ನಿತ್ಯವೂ ಹುಡುಕಾಟ|
ತೆಪ್ಪಗಿರಲು ಬೆಪ್ಪಲ್ಲ  ಎಂಬ ಹೊಯ್ದಾಟ|
ಹುಡುಕಿ ಹುಡುಕುತ್ತಾ  ಅಲೆದಾಟ ಪರದಾಟ|
ಕಾಣದಾ  ಗುರಿಯೆಡೆಗೆ  ವ್ಯರ್ಥದಾ ಹೋರಾಟ||

ನಿತ್ಯದಾ ತುತ್ತಿಗೆ ಒತ್ತೆಇಟ್ಟವಗೆ|
ದುಡಿ ದುಡಿದು ಹಣ್ಣಾಗಿ ಮುಪ್ಪು ಬಂದವಗೆ|
ಹುಡುಕಿ ಬರುವುದು ನಿದ್ರೆ  ಕಾಲು ಚಾಚಿದೊಡೆ|
ಹುಡುಕದೇ ಶಿವ ಬರುವ  ಇವನಿದ್ದೆಡೆ||

ಬೇಕು ಬೇಡಗಳು ಕೆಲವರಾ ಸೊತ್ತು
ಬೇಡವೆಂದರು ಬಿಡದು ಆಪತ್ತು ವಿಪತ್ತು|
ಹರಿಯುವುದು ನೀರು ಹಳ್ಳದೆಡೆ ಸತ್ಯ
ಮೈ ಮುರಿದು ದುಡಿದವಗೆ ಅರೆಹೊಟ್ಟೆ ನಿತ್ಯ||

ಹಣೆ ಮೇಲೆ ನಾಮ  ವೀಭೂತಿ  ಫಳಫಳನೆ ಹೊಳೆಯುವುದು|
ದುಡಿ ದುಡಿದು ಸೋತವಗೆ ಬೆವರು ಹರಿಯುವುದು|
ಎಷ್ಟು ತಪಿಸಿದರು ಶಿವನು ಬರಲಿಲ್ಲವೇಕೆ?
ದಂಡಿಸಿದ ದೇಹಕೆ ಶಿವ ಪೂಜೆ ಬೇಕೆ?||

10 comments:

  1. [[ಹುಡುಕಿ ಬರುವುದು ನಿದ್ರೆ ಕಾಲು ಚಾಚಿದೊಡೆ|
    ಹುಡುಕದೇ ಶಿವ ಬರುವ ಇವನಿದ್ದೆಡೆ||]]
    ಪರಿಶ್ರಮಿಗಳ ಬಗ್ಗೆ ಈ ಮಾತು ಸತ್ಯ.

    ReplyDelete
  2. ನನಗೆ ಸರಿ ಅರ್ಥವಾಗಲಿಲ್ಲ. ಕೊನೆಯ ಚರಣಗಳಲ್ಲಿ ಬರೆದಿದ್ದೀರಲ್ಲ :

    ಹಾಡು ವಿರೋಧಾಭಾಸವನ್ನು ಹೊರಹೊಮ್ಮುತ್ತದೆ. ಗೊತ್ತಿಲ್ಲದ ಗುರಿಯೆಡೆಗೆ ಯಾರು ಸಾಗು ಎಂದರು ? ಅದು ನಾವೇ ಒಪ್ಪಿ ಮಾಡಿಕೊಳ್ಳುವುದಲ್ಲವೇ? ವ್ಯರ್ಥವೆಂದಾದರೆ ಯಾಕೆ ಹೋರಾಡಬೇಕು ?

    ಹಣೆ ಮೇಲೆ ನಾಮ ವೀಭೂತಿ ಫಳಫಳನೆ ಹೊಳೆಯುವುದು|
    ದುಡಿ ದುಡಿದು ಸೋತವಗೆ ಬೆವರು ಹರಿಯುವುದು|
    ಎಷ್ಟು ತಪಿಸಿದರು ಶಿವನು ಬರಲಿಲ್ಲವೇಕೆ?
    ದಂಡಿಸಿದ ದೇಹಕೆ ಶಿವ ಪೂಜೆ ಬೇಕೆ?||

    ದುಡಿ ಎಂದು ದೇವರು ಹೇಳಿಲ್ಲ, ಅದು ನಮಗೆ ನಮ್ಮ ಭೌತಿಕ ಇರುವಿಕೆಗೆ ಬೇಕಾದ ಕರ್ಮಫಲದ ಕಾಯಕ! ಬರೇ ದೇಹವನ್ನು ದಂಡಿಸುವುದರಿಂದ ಎಲ್ಲವೂ ಸಿದ್ಧಿಯಾಗುವುದಾದರೆ ಜಿಮ್ ನಲ್ಲಿ ಬಹಳ ಜನ ಗುದ್ದಾಡುತ್ತಾರೆ! ಅದು ಪಥ್ಯ ಅಲ್ಲ ಎಂಬುದು ನನ್ನ ವಾದ. ತ್ರಿಕರಣ ಪೂರ್ವಕ ಸೇವೆ ಅಗತ್ಯ, ಸೇವೆ ಅಂದ್ರೆ ಅರ್ಪಿಸಿಕೊಳ್ಳುವುದು, ಪ್ರತಿಫಲವನ್ನು ಅಪೇಕ್ಷಿಸದೇ ಆತನನ್ನು ಅಪ್ಪಿಕೊಳ್ಳುವುದು ಎಂದು ನಾನರ್ಥಕಲ್ಪಿಸಿಕೊಂಡಿದ್ದು.

    ಯಾಕೋ ಈ ಹಾಡು ನನಗೆ ಸರಿಕಾಣಿಸುತ್ತಿಲ್ಲ ! ಶ್ರೀಧರರೇ ನಂಬಿರುವ ಶಕ್ತಿಯಲ್ಲಿ ವಿರೋಧಾಭಾಸವೇಕೆ, ನೋಡಿ ಆತ ಹೇಳಿದ್ದಾನೆ :
    ’ಸಂಶಯಾತ್ಮಾ ವಿನಶ್ಯತಿ’ ಎಂದು, ಸಂಶಯಪಟ್ಟ ಧರ್ಮರಾಯ ಕೂಡ ತನ್ನ ರಥವನ್ನೇ ತಾನು ಕೆಡವಿಕೊಂಡ! ಹೀಗಾಗಿ ದ್ವಂದ ಧೋರಣೆಯ ಹಾಡುಗಳಿದ್ದರೆ ದಯವಿಟ್ಟು ಪರಾಮರ್ಶಿಸಿ, ಇಲ್ಲದಿದ್ದರೆ ಅದು ಬಂಡಾಯ ಸಾಹಿತ್ಯದ ದಾರಿಹಿಡಿಯುತ್ತದೆ! ಹಲವರಿಗೆ ದಾರಿ ಹೇಳಬೇಕಾದುದು ವೇದಸುಧೆ, ನಿಮ್ಮಿಂದ ಉತ್ತಮ ಕೃತಿಗಳನ್ನು ನಿರೀಕ್ಷಿಸುತ್ತೇನೆಯೇ ಹೊರತು ದ್ವಂದ್ವದ ಕೃತಿಗಳನ್ನಲ್ಲ. ಬೇಸರಿಸಬೇಡಿ, ನಮಸ್ಕಾರ.

    ReplyDelete
  3. [ವ್ಯರ್ಥವೆಂದಾದರೆ ಯಾಕೆ ಹೋರಾಡಬೇಕು?]
    ವ್ಯರ್ಥದಾ ಹೋರಾಟವೆಂದರೆ ಇದುವರೆಗಿನ ನನ್ನ ಹೋರಾಟವು ವ್ಯರ್ಥವಾಗಿದೆ ಎಂಬುದು ನನ್ನ ಭಾವ.ಅಂದಮಾತ್ರಕ್ಕೆ ಸಫಲನಾಗುವುದಿಲ್ಲವೆಂದಲ್ಲ.
    [ಗೊತ್ತಿಲ್ಲದ ಗುರಿಯೆಡೆಗೆ]
    ಹೌದು ಗುರಿಯು ಸರಿಯಾಗಿ ಗೊತ್ತಾಗಿಲ್ಲವೆಂದೇ ನನ್ನ ಅರ್ಥ. ಗೊತ್ತಾಗಿಸಿಕೊಳ್ಳಬೇಕಿದೆ.
    [ಜಿಮ್ ನಲ್ಲಿ ಬಹಳ ಜನ ಗುದ್ದಾಡುತ್ತಾರೆ!]
    ಜಿಮ್ ನಲ್ಲಿ ಗುದ್ದಾಡುವ ಜನರಿಗೂ ಶ್ರಮಿಕ ವರ್ಗಕ್ಕೂ ವ್ಯತ್ಯಾಸ ಇಲ್ವಾ?
    ಮೈ ಮುರಿದು ದುಡಿದವಗೆ ಅರೆಹೊಟ್ಟೆ ನಿತ್ಯ-ಇದು ನಿಜ ಅಲ್ವಾ?
    [ನಂಬಿರುವ ಶಕ್ತಿಯಲ್ಲಿ ವಿರೋಧಾಭಾಸವೇಕೆ]
    ವೀರೋಧಾಭಾಸವೆಲ್ಲಿ?
    [ಬಂಡಾಯ ಸಾಹಿತ್ಯದ ದಾರಿಹಿಡಿಯುತ್ತದೆ]
    ಜೀವನದಲ್ಲಿನ ಉಳಿಪೆಟ್ಟುಗಳು ಅನೇಕ ವೇಳೆ ಬಂಡಾಯದ ಮಾತುಗಳನ್ನಾಡಿಸುತ್ತವೆ.ಕಳೆದ ಒಂಬತ್ತು ತಿಂಗಳಿನಿಂದ ವೇದಸುಧೆ.ಆದರೆ ಕಳೆದ ಐದು ದಶಕಗಳಲ್ಲಿ ಅನುಭವಿಸಿರುವ ನೋವು ನಲಿವುಗಳು ಅನೇಕ ವೇಳೆ ಅಕ್ಷರ ರೂಪತಾಳುತ್ತವೆ.
    [ದ್ವಂದ್ವದ ಕೃತಿಗಳನ್ನಲ್ಲ]
    ನನ್ನ ಮನಸ್ಸಿನ ಭಾವನೆಗಳಿಗೆ ಕಡಿವಾಣ ಹಾಕಿಕೊಳ್ಳಲಾರೆ. ಇಲ್ಲಿರುವ ಕೃತಿಯು ಬರೆದವನ ಮನಸ್ಸಿನ ದ್ವಂದಗಳೇ ಹೊರತು ಅದು ವೇದಸುಧೆಯ ದ್ವಂದ್ವವಲ್ಲ.

    ReplyDelete
  4. ತಮಗೆ ನೋವಾಗಿದ್ದರೆ ಮೊದಲಾಗಿ ನಾನು ಅದಕ್ಕೆ ತಮ್ಮಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ನಾನು ಅವಲೋಕಿಸಿರುವುದು ಒಬ್ಬ ಓದುಗನಾಗಿ. ನೀವೇ ನೋಡಿ, ದಿನವಹಿ ಹಾಲವಾರು ಯಾತ್ರಿಕರು ಈ ಬ್ಲಾಗಿಗೆ ಬರುತ್ತಾರೆ, ಈ ಬ್ಲಾಗಿನಲ್ಲೂ ಮತ್ತಂಥದೇ ವಿಷಯವನ್ನು ಕಂಡರೆ ಅದರಲ್ಲಿ ಹುರುಳಿರುವುದೇ?

    ಇನ್ನೊಂದು ತಮ್ಮಲ್ಲಿ ನನ್ನ ಅರಿಕೆ, ಭಗವಂತ ತಮ್ಮ ೫ ದಶಕಗಳ ದುಡಿಮೆಯನ್ನು ಗಣಿಸಿಯೇ ಇವತ್ತು ತಾವು ಇಂತಹ ಸ್ಥಿತಿಯಲ್ಲಿದ್ದೀರಿ, ಮಾನಸಿಕ ಆಘಾತಗಳು, ಅಪಚಾರಗಳು, ವ್ಯಥೆ-ಕಥೆಗಳು, ದುಃಖ-ದುಮ್ಮಾನಗಳು ಮನುಷ್ಯಮಾತ್ರನಿಗೆ ಇರುವುದೇ! ಮೈಸೂರು ಅರಸರಿಗೆ ಮಕ್ಕಳಿಲ್ಲ ಮಿಕ್ಕಿದ್ದಕ್ಕೇನೂ ಕೊರತೆಯಿಲ್ಲ: ದೇವರಿಲ್ಲವೇ ? ಆತ ಬರಲಿಲ್ಲವೇ ? ಕೂಲಿ ಮಾಡುವವ ಕೂಲಿಯಾಗುವ ಪರಿಸರದಲ್ಲಿ ಹುಟ್ಟಿ ಬೆಳೆಯುವುದು ಅವನ ಜಾತಃ ಕರ್ಮವೇ ಹೊರತು ಅವನು ಆಗರ್ಭ ಶ್ರೀಮಂತರ ಮಗನಾಗಿ ಹುಟ್ಟಬಾರದೆಂದು ಯಾರಾದರೂ ಹೇಳಿದ್ದರೇ ? ಅವರವರು ಪಡೆದು ಬಂದಿದ್ದನ್ನು ಉಪಭೋಗಿಸಿಬೇಕು ಸ್ವಾಮೀ, ದುಡಿದ ಎಲ್ಲವನ್ನೂ ತಕ್ಷಣಕ್ಕೆ ಕೊಡುವ ಎ.ಟಿ.ಎಮ್. ವ್ಯವಸ್ಥೆ ದೇವರ ಆಸ್ಥಾನದಲ್ಲಿಲ್ಲವೆನಿಸುತ್ತದೆ.

    ವೈಯ್ಯಕ್ತಿಕವಾಗಿ ನಿಮ್ಮ ನೋವಿಗೆ ಪ್ರತಿಸ್ಫಂದಿಸುತ್ತೇನೆ, ಅದಕ್ಕೆ ವಿಷಾದವೂ ಇದೆ. ಆದರೆ ನೋವನ್ನು ಕಾವ್ಯವಾಗಿ ಬರೆದಾಗ ಹಲವರು ಓದುವಾಗ ಅವರಿಗೂ ಆ ದ್ವಂದ ಅನಿಸಿಕೆಯಾಗಿಗುವುದಲ್ಲವೇ ?

    ನಾನೊಬ್ಬ ಹಲವರನ್ನು ಕರೆದುಕೊಂಡು ಬನ್ನಿ ಹೋಗೋಣ ನಿಮಗೆ ತೋರಿಸುತ್ತೇನೆಂದು ಆಶ್ವಾಸನೆ ಕೊಡುವ ದಾರಿಯಲ್ಲಿ ಹೋಗುತ್ತ ಹೋಗುತ್ತ ನಾವೇ ವಿಶ್ವಾಸ ಕಳೆದುಕೊಂಡರೆ ಮಿಕ್ಕುಳಿದ ಸಹಯಾತ್ರಿಕರ ಗತಿಯೇನು?
    ಅದಕ್ಕೇ ನಾನು ಹೇಳವುದು, ನಾವಿನ್ನೂ ತಲುಪುವ ಹಂತ ಬಹಳ ಎತ್ತರದಲ್ಲಿದೆ, ಅಲ್ಲಿಗೆ ಏರಲು ನಾವು ಸತತ, ಅವಿರತ, ಫಲಾಫಲ ನಿರಪೇಕ್ಷಿತ ಸಾಧನೆಯ ಹಾದಿಯನ್ನು ತುಳಿಯಬೇಕು. ಅದೊಂದು ಜಾರುವ ಎಣ್ಣೆಗಂಬ, ಏರಿ-ಜಾರಿ ಏರಿ-ಜಾರಿ ಕೊನೆಗೂ ಏರುತ್ತಾ ಗುರಿಯನ್ನು ತಲ್ಪಬೇಕು! ಆಗಲೇ ನಮ್ಮ ಜೀವನ ಸಾರ್ಥಕ. ಧನ್ಯವಾದ

    ReplyDelete
  5. ನನ್ನ ಇನ್ನು ಹಲವು ಕೃತಿಗಳನ್ನು ನೀವು ಓದಿದರೆ ಇವನು ಪಕ್ಕಾ ಬಂಡಾಯಗಾರವೆಂದು ನನ್ನಿಂದ ದೂರವಾಗಿ ಬಿಡುತ್ತೀರೇನೋ, ಆದರೆ ಇಂತಾ ಸನ್ನಿವೇಶಗಳನ್ನು ಹಲವರು ಎದುರಿಸುತ್ತಿರುತ್ತಾರೆ. ತಾವು ಆಯ್ಕೆಮಾಡಿಕೊಂಡ ಬದುಕಿನ ಮಾರ್ಗದಬಗ್ಗೆ ಜೀವನದ ಅಂತ್ಯದವರೆಗೂ ಒಂದು ತೀರ್ಮಾನಕ್ಕೆ ಬರದೆ ಜೀವನ ಅಂತ್ಯವಾಗಿಬಿಡುವ ಅನೇಕ ಉಧಾಹರಣೆಗಳಿವೆ.ನಾಸ್ತಿಕರನೇಕರು ಜೀವನದ ಸಂಧ್ಯಾಕಾಲದಲ್ಲಿ ಆಸ್ತಿಕರಾಗಿರುವುದನ್ನು ಕಂಡಿದ್ದೇನೆ, ಹಾಗೆಯೇ ಆಸ್ತಿಕರು ನಾಸ್ತಿಕರಾಗಿರುವ ಉಧಾಹರಣೆಗಳಿವೆ. ಅಂತರ್ಯದಲ್ಲಿ ದ್ವಂದ್ವಗಳಿದ್ದದ್ದೇ.ಅದರ ನಿವಾರಣೆಗೆ ದಾರಿ ತೋರಬೇಕಾದವರು ವಿಪ್ರರು[ವಿಶೇಷ ಪ್ರಜ್ಞಾವಾನ್]. ಅವರುಗಳಿಂದ ಉತ್ತರಬರಲೆಂಬುದೂ ಕೂಡ ಬರವಣಿಗೆಯ ಒಂದು ಉದ್ಧೇಶ.

    ReplyDelete
  6. ನಿಮ್ಮಂತಹ ಹೆಚ್ಚಿನ ತಿಳುವಳಿಕೆಯುಳ್ಳವರಿಗೆ ಮತ್ತೂ ’ಪ್ರಾಜ್ಞರ ಉತ್ತರ’ ’ಪ್ರಾಜ್ಞರ ಉತ್ತರ’ ಎಂದು ನಿರೀಕ್ಷಿಸುವವರಿಗೆ ನಾನು ಏನು ಹೇಳಲಾದೀತು ? ನೋವು ಪ್ರತೀ ಮಾನವನ ಅವಿಭಾಜ್ಯ ಅಂಗ. ಮುಖ್ಯಮಂತ್ರಿಗೂ ನೋವಿದೆ, ಪ್ರಧಾನಮಂತ್ರಿಗೂ ನೋವಿದೆ, ಬುದ್ಧ ಹೇಳಿದ ಹಾಗೇ [ಸಾವಿಲ್ಲದ]ನೋವಿಲ್ಲದ ಮನೆಯಿಂದ ಸಾಸಿವೆ ತನ್ನಿ ಎನ್ನಬಹುದಷ್ಟೇ! ಇಂತಹ ನೋವನ್ನು ಅರಿತೇ ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದ. ಸನ್ಯಾಸಿಗೂ ಒಂದು ಆಸೆ ಇರುತ್ತದೆ: ಅದು ಮೋಕ್ಷವನ್ನು ಪಡೆಯುವದು, ಆದ್ರೆ ಮಿಕ್ಕುಳಿದ ಎಲ್ಲಾ ಆಸೆಗಳಿಂದ ಅವರು ಮುಕ್ತರಾಗಲು ಪ್ರಯತ್ನಿಸುತ್ತಾರೆ. ಎಷ್ಟೋ ಸನ್ಯಾಸಿಗಳಿಗೂ ಹಾಗೆ ಎಲ್ಲವನ್ನೂ ಬಿಡಲು ಆಗುವುದಿಲ್ಲ-ಫಲವಾಗಿ ಮೋಕ್ಷಸಾಧನೆಯ ಹಾದಿಯಲ್ಲಷ್ಟೇ ಅವರಿರುತ್ತಾರೆ. ಆಸ್ತಿಕರು ನಾಸ್ತಿಕರಾಗುವಂತಹ ಘಟ್ಟ ನಿಮಗೆ ಬರಲಾರದು ಎಂದುಕೊಳ್ಳುತ್ತೇನೆ. ನೀವೇ ಕೆಲ ತಿಂಗಳ ಹಿಂದೆ ಲೇಖನ ಬರೆದಿರಿ: ಜಗತ್ತಿನ ಸಮಸ್ಯೆಗಳನ್ನೆಲ್ಲಾ ಹೊತ್ತು ತನ್ನದೇ ಎಂದು ತಿರುಗುವವ ಒಮ್ಮೆ ಅದನ್ನು ಇಳಿಸಿ ಓಡಾಡಿದರೆ ಸುಖವಾಗಿರಬಲ್ಲ ಎಂಬುದಾಗಿ. ಆದರೆ ಹಿಂದಿನ ಹಲವನ್ನು ನೀವೇ ಅವಲೋಕಿಸಿಕೊಳ್ಳುತ್ತ ಇನ್ನೂ ಗುರಿ ಸಿಕ್ಕಿಲ್ಲ ಎನ್ನುತ್ತೀರಿ. ಗುರಿಯಿರದಿದ್ದರೆ ನಾವೆಲ್ಲಾ ವೇದಸುಧೆಯಲ್ಲಿ ಬರಿದೇ ಹರಟೇನು ಪ್ರಯೋಜನ?

    ಬದುಕಿನಲ್ಲಿ ನಿಶ್ಚಿತತೆ ಮಖ್ಯ. ಇದಕ್ಕೆ ಪೂರಕವಾಗಿ ಉದಾಹರಿಸಿದರೆ ದೊಡ್ಡ ಲೇಖನವೇ ಸೃಷ್ಟಿಯಾಗುತ್ತದೆ. ಅದನ್ನು ನನ್ನ ಬ್ಲಾಗಿನಲ್ಲಿ ಬರೆಯುತ್ತೇನೆ, ತಾಳ್ಮೆಯಿರಲಿ.

    ತೀರ್ಮಾನ ಕೊಡುವ ಪ್ರಾಜ್ಞರು ಇಲ್ಲಿಗೆ ಬರುವುದಿಲ್ಲ, ಅವರು ಎಲ್ಲರ ಮಧ್ಯೆ ಕುಳಿತಿರುವುದೂ ಇಲ್ಲ, ಅವರನ್ನು ಹಿಮಾಲಯದಂತಹ ಪ್ರದೇಶಗಳಲ್ಲಿ ಹುಡುಕಬೇಕಾಗುತ್ತದೆ. ವಿಪ್ರರು ವೇದವನ್ನೇ ಆಧರಿಸಿದ್ದಾರೆ. ವೇದವನ್ನು ವೇದಸಾರವನ್ನು ಅಭ್ಯಸಿಸಿದರೆ ಎಲ್ಲವೂ ಸುಸೂತ್ರ.

    ReplyDelete
  7. ನೀವು ನನ್ನನ್ನು ಪ್ರಾಜ್ಞನೆಂದರೆ ನಾನು ಒಪ್ಪಲಾರೆ. ಇರಲಿ.ಅದು ಮುಖ್ಯವಲ್ಲ.ಅಂತೂ ಬಿಡುವಿಲ್ಲದ ನಿಮ್ಮನ್ನು ಎಳದಾಡಿದ್ದಕ್ಕೆ ಕ್ಷಮೆ ಇರಲಿ. ಇನ್ನು ಒಂದು ದಿನ ಈ ಬಂಡಾಯದ ಬರಹ ಇಲ್ಲಿರಲು ಬಿಡಲೇ? ಇಲ್ಲಿರುವುದು ಸೂಕ್ತವಲ್ಲವೆಂದು ನೀವು ಹೇಳಿದರೆ ತೆಗೆದು ಬಿಡುವೆ. ಕಾರಣ ನಾವಿಬ್ಬರು ಮಾತ್ರ ಇಲ್ಲಿ ಸಕ್ರಿಯವಾಗಿದ್ದೇವೆ.ಬೇರೆ ಹತ್ತಿಪ್ಪತ್ತು ಓದುಗರು ಓದಿರಬಹುದು. ಆದರೆ ನಾಗರಾಜರು ಬಿಟ್ಟರೆ ನೀವು ಮಾತ್ರವೇ ಪ್ರತಿಕ್ರಿಯಿಸಿರುವುದು.ನಮಸ್ಕಾರಗಳು.

    ReplyDelete
  8. ಇಷ್ಟು ನಾನು ಬರೆದಿದ್ದೂ ಕೂಡ ಯಾತ್ರಿಕರು ನೀವು ಬರೆದಿದ್ದನ್ನು ಗಮನಿಸಿ ಅನ್ಯಥಾಭಾವ ತಾಳದಿರಲಿ ಎಂಬ ಉದ್ದೇಶಕ್ಕಾಗಿಯೇ. ಇಲ್ಲದಿದ್ದರೆ ನನ್ನ ಪ್ರತಿಕ್ರಿಯೆಯನ್ನು ನೇರವಾಗಿ ಮಿಂಚಂಚೆ ಮೂಲಕ ಕಳುಹಿಸುತ್ತಿದ್ದೆ. ಬರಹ ಇರಲಿ, ಅದರ ಕೆಳಗೊಂದು ಸಣ್ಣ ಟಿಪ್ಪಣಿ ಹಾಕಿಬಿಡಿ ಆಗದೇ? ಯಾಕೆಂದರೆ ಎಲ್ಲಾ ಓದುಗರೂ ಪ್ರತಿಕ್ರಿಯೆಗಳನ್ನು ನೋಡುವಷ್ಟು ವ್ಯವಧಾನಿಗಳಲ್ಲ. ಒಂದೊಮ್ಮೆ ನೋಡದೇ ಇದ್ದರೂ ಅವರಿಗೂ ಕಾವ್ಯ ಹೀಗೊಂದು ಜಿಜ್ಞಾಸೆಗಾಗಿ ಬರೆದಿದ್ದು ಎಂದು ತಿಳಿಯಲಿ ಆಗದೇ?
    ನಮಸ್ಕಾರಗಳು.

    ReplyDelete
  9. ನಿಮ್ಮಿಬ್ಬರ ಅರ್ಥಪೂರ್ಣ ಜಿಜ್ಞಾಸೆ ಮನಸಿಗೆ ಹಿಡಿಸಿತು. ಮುಂಚೂಣಿಯಲ್ಲಿರುವವರು ತೊಳಲಾಟದಲ್ಲಿದ್ದರೆ ಅನುಸರಿಸಲು ಬರುವವರಿಗೆ ಗೊಂದಲವಾಗಬಹುದು ಎಂಬ ಶ್ರೀ ಭಟ್ಟರ ಅನಿಸಿಕೆಯಲ್ಲೂ ಅರ್ಥವಿದೆ.

    ReplyDelete
  10. ಒಪ್ಪಿದೆ, ನಾಗರಾಜ್, ಭಟ್ಟರ ಮಾತುಗಳನ್ನು ಸ್ವೀಕರಿಸಿರುವೆ.ಈ ಬಗ್ಗೆ ಇಂದು ವಿವರವಾದ ಲೇಖನವನ್ನೇ ಬರೆದಿರುವೆ.

    ReplyDelete