Pages

Tuesday, November 9, 2010

ಸಸ್ಯಾಹಾರಿಯಾಗಬೇಕೆಂದು ಹಿಂದುತ್ವವು ಬಯಸುತ್ತದೆಯೇ?


       ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು:  ದೇವರನ್ನು ನಂಬಬೇಕೆಂದು ಹಿಂದುತ್ವವು ಬಯಸುತ್ತದೆಯೇ?  ಸಸ್ಯಾಹಾರಿಯಾಗಬೇಕೆಂದು ಹಿಂದುತ್ವವು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ ಮೊದಲನೆಯ ಪ್ರಶ್ನೆಗೆ ಉತ್ತರಿಸಿದ್ದೇನೆ. ಎರಡನೆಯ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ.
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಸಸ್ಯಾಹಾರಿಯಾಗಿರಬೇಕೆಂದು ಹಿಂದುತ್ವವು  ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲು  ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)


     ಜೀವನವು  ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲು ತಿನ್ನುವುದು ಮತ್ತು ತಿನ್ನುವ ಸಲುವಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.


     ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.


     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
      ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
 ಮೂಲ ಇಂಗ್ಲಿಷ್ ಲೇಖನ:  ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ;          ಕವಿ ನಾಗರಾಜ್.

19 comments:

  1. [ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ]

    ಅದ್ಭುತ ಲೇಖನ ಎಂದಷ್ಟೇ ಹೇಳುವೆ.ಹೆಚ್ಚಿಗೆ ಹೇಳಲೂ ತಾಕತ್ ಬೇಕು.
    ಹೇಗೂ ನುಡಿಯಿಂದ ಬರಹಕ್ಕೆ ಕನ್ವರ್ಟರ್ ದೊರೆತಿದೆ.ಇಂತಹ ಹೆಚ್ಚೆಚ್ಚು ಲೇಖನಗಳು ಮೂಡಿಬರಲಿ.

    ReplyDelete
  2. ಕೇವಲ ತಪ್ಪು ಹುಡುಕುವ ಸಲುವಾಗಿ ಬರೆದೆನೆಂದು ಭಾವಿಸಬೇಕಾಗಿಲ್ಲ, ಲೇಖನ ಅದ್ಬುತವಾಗಿದೆ ಆದರೆ ಶಬ್ದ ಹಿಂದು ಅಲ್ಲಾ ಹಿಂದೂ ಆದರೆ ಸರಿ ಎಂದು ನನ್ನನಿಸಿಕೆ, ಅಂತೆಯೇ ಹಿಂದುತ್ವ ಅಲ್ಲ ಹಿಂದೂತ್ವ ಆಗಬೇಕೇನೋ. ಇನ್ನು ಕೊನೆಯಲ್ಲಿ ಬರೆದ ಮೂರ್ಖರ ಮತ್ತು ಜಾಣರ ಸಾಲುಗಳು ಅರ್ಥವಾಗುತ್ತಿಲ್ಲ, ನಾಗರಾಜರೇ ದಯವಿಟ್ಟು ಸರಿಪಡಿಸುವಿರೇ?

    ಬರೆದ ಅಂಶಗಳೆಲ್ಲಾ ಸಕಾಲಿಕ ಮತ್ತು ಸಮರ್ಪಕ, ಆದರೆ ಇದನ್ನು ಅರ್ಥಮಾಡಿಕೊಳ್ಳಲೂ ಯೋಗ್ಯತೆ ಬೇಕು, ಎಲ್ಲರಿಂದಲೂ ಇದು ಸಾಧ್ಯವೇ ?
    ಮದ್ಯದ ಚಟ ಬಿಡುವುದು ಎಷ್ಟು ಕಷ್ಟವೋ ಅದಕ್ಕಿಂತಾ ಕಷ್ಟ ಮಾಂಸದ ಊಟದ ಚಟ. ನಾವೇನಾದರೂ ಹೇಳಿದರೆ"ನೀವ್ಯಾರ್ರೀ ಹೇಳೋರು ಬೇಕಾದ್ರೆ ನೀವೂ ತಿನ್ನಿ " ಎನ್ನುವ ಜನರೇ ಜಾಸ್ತಿ. ಒಂದು ಪ್ರಾಣಿ ತಾನು ಸಾಯುವಾಗ ಅದರ ದೇಹದಲ್ಲಿ ವಿಷಯುಕ್ತ ಗ್ರಂಥಿಯೊಂದರ ಬಿಡುಗಡೆ ಆಗುತ್ತದೆ ಎಂದು ಕೇಳ್ಪಟ್ಟೆ, ಹೀಗಿದ್ದೂ ದಿನವೂ ಪ್ರಾಣಿಗಳ ಅಂಗಾಂಗ ತಿನ್ನುವುದರಿಂದ ಪರೋಕ್ಷ ಕಾಯಿಲೆಗೆ ಅದು ಕಾರಣವಾಗುತ್ತದೆ ಎಂಬುದೂ ತಿಳಿಯಿತು. ಇದನ್ನೆಲ್ಲಾ ಅರಿತೇ ಹಿಂದಕ್ಕೆ ನಮ್ಮ ಇತಿಹಾಸ ಪುರಾಣಗಳಲ್ಲಿ ಬೇಡ/ಕ್ಷತ್ರಿಯರಾದವರೂ ಕೂಡ ಮಹರ್ಷಿಗಳಾಗುವಾಗ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಂಡರು. ಸಾಕ್ಷಿ ಸಹಿತ ಹೆಸರಿಸಬಹುದಾದ ಘಟನೆಗಳಿವೆ, ತತ್ಕಾಲಕ್ಕೆ ಇಷ್ಟಕ್ಕೇ ಮುಗಿಸುತ್ತಿದ್ದೇನೆ. ದೀಪದಿಂದ ಬೆಳಕು ಸಿಗುತ್ತದೆ, ಅರಿಯದೇ ಬಟ್ಟೆಗೆ ತಾಗಿಸಿದರೆ [ನೇರವಾಗಿ ಅಗ್ನಿಯಿಂದುರಿವ ದೀಪಗಳು] ಬೆಂಕಿಹೊತ್ತಿಕೊಂಡು ಅನಾಹುತಕ್ಕೆ ಕಾರಣವಾಗುತ್ತದೆ. ದೀಪದ ಬಳಕೆಯನ್ನು ಅರಿಯುವುದು ಪ್ರಾಜ್ಞರು ತೋರಿಸಿದ ದಾರಿ, ಅರಿಯದೇ ಮೌಢ್ಯ ಮೆರೆಯುವುದು ಅನಾಹುತಕ್ಕೆ ದಾರಿ! ಲೇಖನ ಬಹಳ ಖುಷಿ ನೀಡಿತು, ಮೂಲ ಲೇಖಕ ಸದಾನಂದರಿಗೂ ಹಾಗೂ ನಿಮಗೂ ಧನ್ಯವಾದಗಳು

    ReplyDelete
  3. tumba chennagide lekhana... ellaru artha maadikoLLabekaada lekhana... dhanyavadagaLu sir

    ReplyDelete
  4. ಲೇಖನ ಚೆನ್ನಾಗಿದೆ. ಆದರೆ ಇದನ್ನು ಅರ್ಥ ಮಾಡಿ ಕೊಳ್ಳುವವರು ಇವತ್ತಿನ ದಿನಮಾನದಲ್ಲಿ ಕಡಿಮೆ ಜನ ಇದ್ದಾರೆ ಅನಿಸುತ್ತದೆ.

    ReplyDelete
  5. ಕವಿನಾಗರಾಜರೇ, ಅಧ್ಬುತ ಲೇಖನ. ಮೂಲ ಲೇಖಕರಿಗೂ ಹಾಗೂ ಅನುವಾದಕರಾದ ನಿಮಗೂ ನನ್ನ ವ೦ದನೆಗಳು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  6. ಆತ್ಮೀಯ ಶ್ರೀಧರ, ನಿಮ್ಮ ಪ್ರತಿಕ್ರಿಯೆ ಹಾಗೂ ಹಾರೈಕೆಗೆ ವಂದನೆ.
    ಆತ್ಮೀಯರಾದ ಮನಸು, ಪರಾಂಜಪೆ ಮತ್ತು ರಾಘವೇಂದ್ರ ನಾವಡರಿಗೆ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು.
    ಶ್ರೀಯುತ ಭಟ್ಟರಿಗೆ, ಈಗಸಾಮಾನ್ಯವಾಗಿ ಬಳಕೆಯಾಗುತ್ತಿರುವಂತೆ 'ಹಿಂದು' ಮತ್ತು 'ಹಿಂದುತ್ವ' ಪದಗಳನ್ನು ಬಳಸಿದ್ದೇನೆ.ಜಾಣ ಮತ್ತು ಮೂರ್ಖರ ಬಗ್ಗೆ ಮೂಲ ಲೇಖನದಲ್ಲಿ ಹೀಗಿದೆ:

    It is only a fool who does not take life seriously.
    It is intelligent who seriously takes life seriously.
    It is wise who seriously does not take life seriously. For him the life is an
    enchanting sport to be played to the best! Win or loose, it is a fun to play.
    ನಾನು ಅನುವಾದಿಸಿದುದರಲ್ಲಿ ಅಗತ್ಯದ ಬದಲಾವಣೆ ಇದ್ದಲ್ಲಿ ದಯಮಾಡಿ ಸೂಚಿಸಿರಿ.
    ನಿಮ್ಮವ, ಕವಿನಾಗರಾಜ್.

    ReplyDelete
  7. ಮಾನ್ಯ ನಾಗರಾಜರೇ, ತಮ್ಮ ಅಪ್ಪಣೆಯಂತೇ ಮತ್ತೆ ಬಂದು ಬರೆಯಬೇಕಾಯ್ತು. ಇಲ್ಲಿ ಕೊನೇ ಸಾಲಿನಲ್ಲಿ ಜಾಣ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದೆಯಲ್ಲ ಅದರರ್ಥ ಆತ ಮಾಂಸಾಹಾರವನ್ನು ತಿನ್ನಲೂಬಹುದು ಯಾಕೆಂದರೆ ಜೀವನ ಅವನಿಗೊಂದು ಆಟ ಎಂದಾಗುವುದಿಲ್ಲವೇ ? ಹೀಗಾಗಿ ಮೂಲ ಲೇಖನದಲ್ಲಿ ಋಣಾತ್ಮಕ ಒಕ್ಕಣೆಗಳಿದ್ದರೆ ಅವುಗಳನ್ನು ಕೈಬಿಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ನೀವೇ ತಿಳಿದುನೋಡಿ, ಹೌದೆನಿಸಿದರೆ ತಿದ್ದಿ ಇಲ್ಲವಾದಲ್ಲಿ ಹಾಗೇ ಬಿಡಿ ಆಗದೇ ?

    ReplyDelete
  8. ಶ್ರೀ ಭಟ್ಟರಿಗೆ ನಮಸ್ಕಾರ. ಲೇಖನದ ಮೂಲ ಉದ್ದೇಶಕ್ಕೆ ಈ ಭಾಗ ಸ್ವಲ್ಪ ಧಕ್ಕೆ ತರಬಹುದೆಂದು ನನಗೂ ಅನ್ನಿಸುವುದು. ಆದರೆ ಅನುವಾದಕನಾಗಿ ನಾನು ಬದಲಾವಣೆ ಮಾಡುವುದು ಸೂಕ್ತವಾಗುವುದಿಲ್ಲ. ಮೂಲ ಲೇಖಕರ ಉದ್ದೇಶ ಸಹ 'ಹೇಗೆ ಬೇಕಾದರೂ ಇರಿ' ಎಂದು ಹೇಳುವುದು ಆಗಿರಲಿಕ್ಕಿಲ್ಲ. ಆದ್ದರಿಂದ ಈ ಭಾಗವನ್ನು ಅನುವಾದದ ವ್ಯಾಪ್ತಿಯಿಂದ ಕೈಬಿಡುವೆ.
    [[ಮೂರ್ಖ ಮಾತ್ರ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
    ಬುದ್ಧಿವಂತ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ.
    ಜಾಣ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆತನಿಗೆ ಜೀವನವೆಂದರೆ ಅತ್ಯುತ್ತಮವಾಗಿ ಆಡಬೇಕಾದ ಆಟ! ಗೆಲ್ಲಲಿ ಅಥವ ಸೋಲಲಿ, ಆಡುವುದರಲ್ಲಿ ಖುಷಿಯಿದೆ.]]
    *********

    ReplyDelete
  9. ಅರ್ಥ ಮಾಡಿಕೊಳ್ಳುವುದರಲ್ಲಿ ತೊಡಕಿತ್ತು. ಬಿಟ್ಟಿದ್ದು ಸರಿಯಾಯ್ತು.

    ReplyDelete
  10. ಉತ್ತಮ ವೈಚಾರಿಕ ಲೇಖನ ಒದಗಿಸಿದ್ದಕ್ಕೆ ಕೃತಜ್ಞತೆಗಳು.

    ReplyDelete
  11. ವಂದನೆಗಳು, ಶ್ರೀಧರ್ ಮತ್ತು ನಾರಾಯಣಭಟ್ಟರಿಗೆ.

    ReplyDelete
  12. ಸಾತ್ವಿಕ ಆಹಾರ ಸಾತ್ವಿಕ ಮನಸ್ಸಿನ ಮೂಲ. ಮನಸ್ಸು ಸಾತ್ವಿಕವಾದಷ್ಟೂ ಬುದ್ಧಿ ಕೂಡ ವಿವೇಚನಾಸಹಿತವಾಗಿ ನಮ್ಮನ್ನು ಮುನ್ನಡೆಸಬಲ್ಲದು. "ಊಟ ತನ್ನಿಚ್ಛೆ, ನೋಟ ಪರರಿಚ್ಚೆ" ಎಂಬ ಮಾತೊಂದಿದೆ. ಆದರೂ, ಲೇಖನದಲ್ಲಿ ತಿಳಿಸಿದಂತೆ, ನಾವು ತಿನ್ನುವ ಆಹಾರ ಸಾಮಗ್ರಿಗಳಿಂದ ಪ್ರಕೃತಿಗೆ ಮತ್ತು ಇತರೆ ಪ್ರಾಣಿಗಳಿಗೆ, ಕನಿಷ್ಠ ತೊಂದರೆಯಾಗುವ ಕಾಳಜಿ ಅತ್ಯವಶ್ಯ. ವಿಚಾರಕ್ಕೆ ಹಚ್ಚುವಂತಹ ವಿಷಯ. ಮೂಲ ಲೇಖಕರ ಆಶಯ ಚೆನ್ನಾಗಿದೆ. ಅನುವಾದವೂ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.

    ReplyDelete
  13. ಶ್ರೀ ಭಟ್ಟರು "ಹಿಂದು" ಪದ ಸರಿ ಇಲ್ಲ, "ಹಿಂದೂ" ಪದ ಸರಿ ಎನ್ನುತ್ತಾರೆ. ಆದರೆ ನಾನು ಆರ್.ಎಸ್.ಎಸ್.ನಿಂದಾಗಿ ರೂಢಿಸಿಕೊಂಡಿದ್ದು ’ಹಿಂದು" ಎಂಬ ಪದವನ್ನೇ.ಯಾವುದು ಸರಿ? ಯಾವುದು ತಪ್ಪು? ಎಂಬುದಕ್ಕೆ ಸಹೃದಯಿಗಳು ಯಾರೇ ಆಗಲೀ ರೆಫೆರೆನ್ಸ್ ಕೊಟ್ಟರೆ ಒಳ್ಳೆಯದು.

    ReplyDelete
  14. ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆ. ಇದು ಮೂಲ ಲೇಖಕರು 30-11-1994ರಲ್ಲಿ ಬರೆದ ಲೇಖನ. ಅಂತರ್ಜಾಲದಲ್ಲಿ ಓದಿ ನನಗೆ ಹಿಡಿಸಿದ್ದರಿಂದ ಮತ್ತು ವಿಚಾರ ಇಂದಿಗೂ ಪ್ರಸ್ತುತವೆನಿಸಿದ್ದರಿಮದ ಅನುವಾದಿಸಿ ಸಹೃದಯರ ಮುಂದೆ ಇಟ್ಟಿರುವೆ.

    ReplyDelete
  15. ಮೂಲ ಲೇಖಕರ ಉಳಿದ ಬರಹಗಳನ್ನೂ ಅನುವಾದಿಸುವ ಶ್ರಮ ತೆಗೆದುಕೊಳ್ಳಬಹುದೇ?

    ReplyDelete
  16. .....ಅದ್ಭುತ ಲೇಖನ....ಮೂಲ ಲೇಖಕ ಸದಾನಂದರಿಗೂ ಹಾಗೂ ಅದನ್ನು ಅನುವಾದಿಸಿ ಹಂಚಿಕೊಂಡದ್ದಕ್ಕೆ ನಿಮಗೂ ಧನ್ಯವಾದಗಳು .....ನಿಮ್ಮಿಂದ ಇಂತಹ ಲೇಖನಗಳು ಹೆಚ್ಹು ಹೆಚ್ಹು ಬರಲಿ ಎಂದು ಹಾರೈಸುತ್ತೇನೆ .... ಧನ್ಯವಾದಗಳು !!!...

    ReplyDelete
  17. ಜಗದೀಶರೇ,ನಮಸ್ಕಾರಗಳು, ವೇದಸುಧೆಯ ಆರಂಭದಲ್ಲಿ ನಿಮ್ಮ ದರ್ಶನವಾಗಿತ್ತು. ಮತ್ತೆ ಕಂಡಿರಲಿಲ್ಲ. ಊರಲ್ಲಿರಲಿಲ್ಲವೇ?

    ReplyDelete
  18. ಇನ್ನೊಂದಿಷ್ಟು.
    ನಮಗೆ ನೋವಾಗಿಲ್ಲದಿದ್ದರೂ, ಮತ್ತೊಬ್ಬರ, ಮತ್ತೊಂದು ಜೀವಿಯ ನೋವನ್ನು ನಾವೇ ನೋವು ತಿನ್ನುತ್ತಿರುವಂತೆ ಮಾನಸಿಕವಾಗಿ ಅನುಭವಿಸಿ ಸ್ಪಂದಿಸುವುದನ್ನೇ "ಅನುಕಂಪ" ಎನ್ನುತ್ತೇವೆ. ಈ ಸಾಮರ್ಥ್ಯ ಕೇವಲ, ಕೇವಲ ಮನುಷ್ಯ ಪ್ರಾಣಿಗೆ ಮಾತ್ರ ಇದೆ!! ಮನುಷ್ಯತ್ವ, ಮಾನವೀಯತೆಯ Core = ತಿರುಳೇ "ಅನುಕಂಪ". ಅದಿಲ್ಲದಿದ್ದರೆ ಅವರು ಮಾನವರಾಗುವುದೆಂತು? ಮನುಷ್ಯಣ ಮುಖ್ಯ ಲಕ್ಷಣದ ಹಿನ್ನೆಲೆಯಲ್ಲಿ ಮಾನವರೆಲ್ಲರೂ ಸಸ್ಯಾಹಾರಿಗಳೇ ಆಗಿರಬೇಕು. ಅಥವಾ ಸಸ್ಯಾಹಾರಿಗಳೇ ಮಾನವರು!
    "ಊಟ ತನ್ನಿಚ್ಛೆ" - ಯಾವಾಗ? ಆ ಊಟ ಮತ್ತೊಬ್ಬರ ಊಟವನ್ನು ಕಸಿದುಕೊಂಡು ತಿನ್ನದಿದ್ದಾಗ! ಹಾಗಿಲ್ಲದಿದ್ದರೆ, ಇವರ ಕಸಿಯುವಿಕೆಯಿಂದ ಊಟದಿಂದ ವಂಚಿತರಾದವರು ದನಿಯೆತ್ತಲು ಎಲ್ಲ ಹಕ್ಕನ್ನೂ ಹೊಂದಿರುತ್ತಾರೆ. ಆಗ "ಊಟ ತನ್ನಿಚ್ಛೆ" ಎಂಬ ವಾದ ಅಮಾನವೀಯವಾಗುತ್ತದೆ.
    ದಯಾನಂದರು ಬರೆದ "ಗೋಕರುಣಾನಿಧಿಃ" ದಯವಿಟ್ಟು ಓದಬೇಕಾಗಿ ವಿನಂತಿ.
    ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಸಾರಾಂಶ :- ಒಂದು ಗೋವು ತನ್ನ ಸಹಜ ಆಯಸ್ಸನ್ನು ಕಳೆದರೆ, ಅದು ತನ್ನ ಜೀವಮಾನದಲ್ಲಿ 25,000 ಜನಕ್ಕೆ ಒಂದು ಹೊತ್ತಿನ ಊಟವನ್ನು ಒದಗಿಸುವಷ್ಟು ಸಂಪತ್ತನ್ನು ಉತ್ಪಾದಿಸುತ್ತದೆ. (ಸಗಣಿ, ಗಂಜಲ, ಹಾಲು, ಸಂತಾನ, ದೈಹಿಕ ಶ್ರಮ ಇತ್ಯಾದಿ). ಬದಲಿಗೆ ಅದನ್ನು ಕಡಿದು ತಿಂದರೆ ಹೆಚ್ಚೆಂದರೆ 500 ಜನಕ್ಕೆ ಒಂದು ಹೊತ್ತಿನ ಊಟವಾಗಬಹುದು. ಈ 500 ಜನರು 24,500 ಜನರ ಊಟವನ್ನು ಕಸಿದಿರುತ್ತಾರೆ. ಇದು ಸಮಾಜದ್ರೋಹ!
    ಕೊಂದು ತಿನ್ನುವ ಯಾವುದೇ ಪ್ರಾಣಿಯಿರಲಿ, ಅದನ್ನು ಕೊಲ್ಲುವವರೆಗೆ ಅದು ಬಳಸಿಕೊಂಡ ಪ್ರಕೃತಿಸಂಪತ್ತನ್ನು ಅದು ನೀಡುವ ಮಾಂಸಕ್ಕೆ ಹೋಲಿಕೆ ಮಾಡಿದಾಗ ಅತ್ಯಂತ ನಷ್ಟದ ವ್ಯವಹಾರ. ಅದು ಪೂರ್ಣ ಆಯಸ್ಸಿದ್ದರೆ ಲಾಭಕರ.
    ಈ ಹಿನ್ನೆಲೆಯಲ್ಲಿ, ದೇಶದ ಆರ್ಥಿಕ ವ್ಯವಸ್ಥೆ ಈ ಮಾಂಸಾಹಾರದಿಂದ ಏರುಪೇರಾಗುತ್ತದೆ. ಎಲ್ಲ ದೇಶಭಕ್ತರು ಸಸ್ಯಾಹಾರಿಗಳೇ ಆಗಿರಬೇಕು. ಇಲ್ಲವಾದಲ್ಲಿ ಇದು ದೇಶದ್ರೋಹ!
    ಗಮನಿಸಿ - ಇಲ್ಲೆಲ್ಲೂ "ಹಿಂದ","ಧಾರ್ಮಿಕ ಭಾವನೆ", "ಬ್ರಾಹ್ಮಣ-ಅಬ್ರಾಹ್ಮಣ" ಮೊದಲಾದ ಪದಪ್ರೆಯೋಗಗಳಾಗಿಲ್ಲ.
    ವಾಸ್ತವದೃಷ್ಟಿಕೋನ(Objective outlook) ಮಾತ್ರ ಇದೆ.
    -ಸುಧಾಕರ ಶರ್ಮಾ

    ReplyDelete