ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, December 18, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2

     ವೇದಗಳ ಸಿದ್ಧಾಂತದ ಪ್ರಕಾರ, ಚೇತನ ಜೀವಾತ್ಮರು ವಿರಾಟ್ ಚೇತನದಿಂದ ಸರ್ವಥಾ ಬೇರೆಯಾದ ಸ್ವತಂತ್ರ ತತ್ವಗಳು. ಋಗ್ವೇದದ ಈ ಕರೆಯನ್ನು ಗಮನವಿತ್ತು ಆಲಿಸಿರಿ:-


ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ|
ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್
ಕೋ ವಿದ್ವಾಂಸಮುಪ ಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪)


     [ಯತ್ ಅನಸ್ಥಾ] ಮೂಳೆಗಳಿಲ್ಲದ ಯಾವ ಚೇತನನು [ಅಸ್ಥನ್ವಂತಮ್] ಮೂಳೆಗಳಿಂದ ಕೂಡಿದ ದೇಹವನ್ನು [ಬಿಭರ್ತಿ] ಧರಿಸುತ್ತಾನೋ [ಜಾಯಮಾನಂ ಪ್ರಥಮಮ್] ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು [ಕೋ ದದರ್ಶ] ಯಾವನು ನೋಡುತ್ತಾನೆ? [ಭೂಮ್ಯಾ] ಭೌತಿಕ ಜಗತ್ತಿನಿಂದ [ಅಸುಃ ಅಸೃಕ್] ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. [ಆತ್ಮಾ ಕ್ವ ಸ್ವಿತ್] ಆತ್ಮನು ಎಲ್ಲಿಂದ ಬರುತ್ತಾನೆ? [ಏತತ್ ಪ್ರಷ್ಟುಮ್] ಇದನ್ನು ಕೇಳಲು [ಕಃ] ಯಾವನು [ವಿದ್ವಾಂಸಂ ಉಪಗಾತ್] ವಿದ್ವಾಂಸನ ಬಳಿಗೆ ಹೋಗುತ್ತಾನೆ?
ಈ ಜಿಜ್ಞಾಸೆಗೆ ಪ್ರೇರಣೆ ನೀಡಿ ಆಮೇಲೆ ವೇದಗಳು ಮಾರ್ಗದರ್ಶನ ಮಾಡುತ್ತವೆ.


ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ ವರ್ಧಮಾನಃ|| (ಋಕ್. ೬.೯.೪)


    [ಅಯಂ] ಈ ಜೀವಾತ್ಮನು [ಪ್ರಥಮಃ ಹೋತಾ] ಮೊದಲನೆಯ ಆದಾನ-ಪ್ರದಾನಕರ್ತನು. [ಇಮಂ ಪಶ್ಯತ] ಇವನನ್ನು ನೋಡಿರಿ. [ಮರ್ತ್ಯೇಷು] ಮೃತ್ಯುವಿಗೀಡಾಗುವ ಭೌತಿಕ ಶರೀರದಗಳಲ್ಲಿ [ಇದಂ ಅಮೃತಂ ಜ್ಯೋತಿಃ] ಇದು ಅಮರ ಜ್ಯೋತಿಯಾಗಿದೆ. [ಅಯಂ] ಇವನು [ಸ ಧೃವಃ] ಆ ಶಾಶ್ವತನಾದ ಆತ್ಮನು. [ಅಮರ್ತ್ಯಃ] ಅಮರನಾದ ಆ ಆತ್ಮನು [ಆ ನಿಷತ್ತಃ] ಜಗತ್ತಿನಲ್ಲಿ ಕುಳಿತು [ತನ್ವಾ ವರ್ಧಮಾನಃ] ದೇಹದಿಂದ ವೃದ್ಧಿ ಹೊಂದುತ್ತಾ [ಜಜ್ಞೇ] ಪ್ರಕಟನಾಗುತ್ತಾನೆ.
     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಶರೀರದ ಭಾಗವಲ್ಲ. ಅದರಿಂದ ಸರ್ವಥಾ ಭಿನ್ನನು. ಆತ್ಮ ಚೇತನ, ದೇಹ ಜಡ. ಆತ್ಮ ಅಮರ, ದೇಹ ಮರಣಕ್ಕೀಡಾಗುವ ವಸ್ತು. ಶರೀರದಲ್ಲಿ ಪಂಚ ಜ್ಞಾನೇಂದ್ರಿಯಗಳು, ನಾಲ್ಕು ಅಂತಃಕರಣಗಳು ಹೋತೃಗಳಾಗಿವೆ, ಕೊಡುವ ತೆಗೆದುಕೊಳ್ಳುವ ಅಂಗಗಳಾಗಿವೆ. ಆದರೆ ಅವೆಲ್ಲಾ ಎಷ್ಟೇ ಚೆನ್ನಾಗಿದ್ದರೂ ಪ್ರಥಮ ಹೋತೃವಾದ, ಮೊದಲನೆಯ ಆದಾತೃ-ಪ್ರದಾತೃವಾದ ಆತ್ಮನಿಲ್ಲದಿದ್ದರೆ, ಶರೀರ ಆರಿಹೋದ ದೀಪದಂತೆ ಅಪ್ರಯೋಜಕ, ನಗರದಿಂದ ಹೊರಸಾಗಿಸಲರ್ಹವಾದ ಶವ ಮಾತ್ರ. ಆತ್ಮನು ಶರೀರದಲ್ಲಿ ಪ್ರವಿಷ್ಟನಾಗುವುದು ಪ್ರಭುವಿನ ಆದೇಶದಂತೆ ಉತ್ಕರ್ಷ ಸಾಧಿಸುವುದಕ್ಕೆ. ಕೇವಲ ತಿನ್ನುವುದಕ್ಕೆ, ಕುಡಿಯುವುದಕ್ಕಲ್ಲ.

8 comments:

 1. "ಸಾವಿನೊಂದಿಗೆ ದೇಹವನ್ನು ತ್ಯಜಿಸುವ ಆತ್ಮ-ಪುನಃ ಹೊಸ ಎಳೆ ದೇಹ ಸೇರಿಕೊಳ್ಳುವುದು"-ಈ ಕಲ್ಪನೆ ವೈಜ್ಞಾನಿಕ ಮನೋಭಾವದವರಾದ ವೇದಕಾಲದ ಜನರಲ್ಲಿ ಇತ್ತೇ?

  ReplyDelete
 2. ಸುಬ್ರಹ್ಮಣ್ಯ ಮಾಚಿಕೊಪ್ಪರೇ, ವೇದಕಾಲದ ಜನ ಎನ್ನಲು ವೇದ ಜನರಿಂದ ಸೃಜಿಸಲ್ಪಟ್ಟಿದ್ದಲ್ಲ, ಸತ್ಯಯುಗವನ್ನು ವೇದದಕಾಲವೆಂದು ನಾವು ಪರಿಗಣಿಸಬಹುದೇ ಹೊರತು ವೇದ ಕಾಲಕ್ಕೆ ಸೀಮಿತವಾಗಿಲ್ಲ. ಇದಲ್ಲದೇ ಪುರಾತನರು ನಮಗಿಂತಾ ವೈಜ್ಞಾನಿಕವಗಿ ಕೂಡ ಬಹಳ ಮುಂದಿದ್ದರು, ನೀವು ಪ್ರತಿಯೊಂದೂ ಶಾಶ್ತ್ರವನ್ನು ತೆಗೆದುನೋಡಿ ಅವುಗಳ ಹಿಂದೆ ವಿಜ್ಞಾನವೇ ಅಡಗಿದೆ, ಕೆಲವೊಮ್ಮೆ ಶಾಸ್ತ್ರ ಸಂಪ್ರದಾಯವಾಗಿ ಬದಲಾಗಿ ಅಲ್ಲಿ ವ್ಯತ್ಯಯ ಕಂಡುಬಂದರೆ ಅದಕ್ಕೆ ಮೂಲ ಶಾಶ್ತ್ರಕಾರರ ತಪ್ಪೇನೂ ಇಲ್ಲ. ಇಲ್ಲಿ ಶಾಸ್ತ್ರಕಾರಕೂಡ ಭಗವಂತನೇ ಎಂಬುದು ನಾವು ನೆನಪಿಡಬೇಕಾದ ಅಂಶ. ಆರ್ಯಭಟನಂತಹ ಮೇಧಾವಿಗಳಿ ಯಾವುದೇ ಉಪಕರಣಗಳ ಸಹಾಯವಿಲ್ಲದೇ ರಾಹು ಕೇತುಗಳನ್ನು [ನೆಪ್ಚೂನ್ ಮತ್ತು ಪ್ಲುಟೋ]ಕಂಡುಹಿಡಿದಿರುವುದು ದಾಖಲಾದ ವಿಷಯ. ರಾಮಾಯಣದಲ್ಲೇ ಪುಷ್ಪಕವಿಮಾನವನ್ನೂ ಅದರ ಪರಿಕಲ್ಪನೆಯನ್ನೂ ನಾವು ಕಾಣುತ್ತೇವೆ. ಹೀಗಾಗಿ ಅಮರನಾದ ಜೀವಾತ್ಮ ತನ್ನ ಕರ್ಮವೆಂಬ ಬ್ಯಾಂಕ್ ಬ್ಯಾಲೆನ್ಸ್ ಅವಲಂಬಿಸಿ ಕಾಲಕಾಲಕ್ಕೂ ಬೇರೇ ಬೇರೇ ದೇಹಗಳನ್ನು ಆಶ್ರಯಿಸುತ್ತಾನೆ, ಇದನ್ನೇ ನಾವು ಹುಟ್ಟು-ಸಾವುಗಳೆಂದು ಕರೆಯುತ್ತೇವೆ-ಇದನ್ನು ಪರಮಾತ್ಮ ವೇದದಲ್ಲೇ ಹೇಳಿದ್ದಾನೆ, ನಾವು ವೇದವನ್ನು ಪುರೋಹಿತರ/ ವೈದಿಕರ ಅರ್ಥವಾಗದ ಪುಸ್ತಕಗಳೆಂಬ ಸಾಲಿಗೆ ಸೇರಿಸಿಬಿಟ್ಟಿದ್ದೇವೆ, ವೇದವನ್ನು ಓದಿದರೆ ನಮಗೆ ಜೀವನದ ರಹಸ್ಯಗಳು ಬಯಲಾಗುತ್ತವೆ, ಗೋಜಲುಗಳ ನಿವಾರಣೆ ಸಾಧ್ಯವಾಗುತ್ತದೆ. ನಿಮ್ಮ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
 3. ಭಟ್ಟರ ಮಾತಿನ ತಾತ್ಪರ್ಯಕ್ಕೆ ವೇದಾಧಾರ ಹೀಗಿದೆ -
  ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಚ ಪಥಿಭಿಶ್ಚರಂತಂ
  ಸ ಸಧ್ರೀಚೀರ್ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ||
  (ಋಕ್.1.164.31.) - ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ
  ಅವಿನಾಶಿಯಾದ ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು ನಾನು ನೋಡುತ್ತಿದ್ದೇನೆ. ಅವನು ನೇರವಾಗಿ ನಿಂತು ನಡೆಯುವ ಶರೀರಗಳನ್ನೂ, ಅವನೇ ತೆವಳಿಕೊಂಡು ಹೋಗುವ ಶರೀರಗಳನ್ನು ನೆಲೆಗೊಳಿಸುತ್ತಾ, ಲೋಕಗಳ ಒಳಕ್ಕೆ ಬಂದು ಹೋಗಿ ಮಾಡುತ್ತಿರುತ್ತಾನೆ.
  ಪುನರ್ಜನ್ಮದ ವಿಚಾರ ವೈಜ್ಞಾನಿಕವಾಗಿದೆ.
  ಇದನ್ನು ಒಪ್ಪದ ಆಧುನಿಕ ವೈಜ್ಞಾನಿಕ ಮನೋಭಾವದವರು, ಅನೇಕ ವಾಸ್ತವಾಂಶಗಳನ್ನು ಉತ್ತರಿಸುವಲ್ಲಿ ಸೋಲುತ್ತಾರೆ.
  ವೇದಜ್ಞರು ಅತ್ಯಂತ ವೈಜ್ಞಾನಿಕರಾಗಿದ್ದರಿಂದಲೇ ಪುನರ್ಜನ್ಮದ ವಿಚಾರವನ್ನು ಸ್ಪಷ್ಟವಾಗಿ ಸಮರ್ಥಿಸುತ್ತಾರೆ.
  ರೂಢಿಯಲ್ಲಿ ಪುನರ್ಜನ್ಮದ ವಿಚಾರ ವಿಕೃತವಾಗಿದೆ. ಆ ಬಗ್ಗೆ ಈ ಸಮರ್ಥನೆ ಇಲ್ಲ.
  ವೈಜ್ಞಾನಿಕ ಪುನರ್ಜನ್ಮದ ಬಗ್ಗೆ ಮತ್ತೊಮ್ಮೆ ನೋಡುವ.

  ReplyDelete
 4. ವಿ.ಆರ್. ಭಟ್ಟರಿಗೆ ನಮಸ್ಕಾರ,

  ನನಗೆ ತಿಳಿದ ಮಟ್ಟಿಗೆ ರಾಹುಕೇತುಗಳೆನ್ನುವುದು ನೆಪ್ಚೂನ್ ಮತ್ತು ಪ್ಲುಟೋ ಅಲ್ಲ, ಇವು ಒಂದು ಕಾಲ್ಪನಿಕ ಬಿಂದುಗಳು, ಈ ಜಾಗಕ್ಕೆ ಭೂಮಿ ಅಥವಾ ಚಂದ್ರ ಬಂದಾಗ ಗ್ರಹಣಗಳಾಗುತ್ತವೆ.

  ಕಳೆದ ಶತಮಾನದಲ್ಲೇ ನಮ್ಮವರೇ ಆದ ಮಹರ್ಷಿ ಆನೆಕಲ್ ಸುಬ್ಬರಾಯರು(1866 - 1941) ಮತ್ತು ಸಂಗಡಿಗರು ರೈಟ್ಸ್ ಸಹೋದರರಿಗಿಂತ ಮುಂಚೆ 1895ರಲ್ಲೇ ಬಾಂಬೆಯ ಚೌಪಾಟಿ ದಂಡೆಯಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ಹಾರಿಸಿದರು. ಬ್ರಿಟೀಷರ ಕುತಂತ್ರದಿಂದಾಗಿ ಇವರ ಸಾಧನೆ ಬೆಳಕಿಗೆ ಬರಲಿಲ್ಲ, (ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಎಸ್.ಜಗನ್ನಾಥರಾವ್ ಬಹುಳೆ ಬರೆದಿರುವ "ಮಾರುತಸಖ" ಪುಸ್ತಕವನ್ನು ಓದಿ, ಪ್ರಕಾಶಕರು ಸಾಧನಾ ಪ್ರಕಾಶನ, ಬೆಂಗಳೂರು.)

  ReplyDelete
 5. ಆನೇಕಲ್ ಸುಬ್ಬರಾಯರನ್ನು ಕುರಿತು ಇತ್ತೀಚೆಗೆ ಒಂದು ಕನ್ನಡ ಚಲನಚಿತ್ರ ಬಂದಿತ್ತು, ಅದರ ಹೆಸರು 'ಪ್ರಪಾತ'. ಕಿರು ಮಾಹಿತಿಗಾಗಿ ನೋಡಿ http://www.bangalorexpo.com/news/bangalore-news/prapaatha-kannada-feature-film/

  ReplyDelete
 6. ಶ್ರೀನಾಥರವರಿಗೆ ನಮಸ್ಕಾರ, ನೆಪ್ಚೂನ್ ಪ್ಲುಟೋ ಗ್ರಹಗಳು ಮೊದಲು ಕಂಡಿದ್ದಲ್ಲ, ಈಗ ಕೂದ ಅವು ಛಾಯಾಗ್ರಹಗಳೇ, ಬರಿಗಣ್ಣಿಗೆ ಕಾಣುವುದಿಲ್ಲ! ಮಿಕ್ಕಿದ್ದು ನೀವು ಹೇಳಿದಂತೇ ಸತ್ಯ. ಆದರೆ ರಾಹು ಮತ್ತು ಕೇತುಗಳನ್ನೇ ನಮ್ಮ ವಿಜ್ಞಾನಿಗಳು ಹೀಗೆ ಹೆಸರಿಸಿದ್ದಾರೆ ಎಂಬುದು ನನ್ನ ಓದಿನ ನೆನಪು, ಸ್ವಲ್ಪ ಚಿಂತಿಸಿ ನೋಡಿ.ಧನ್ಯವಾದಗಳು.

  ReplyDelete
 7. ಒಂದು ಉತ್ತಮವಾದ ಚರ್ಚೆಯಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಶ್ರೀ ಸುಬ್ರಮ್ಹಣ್ಯ, ಶ್ರೀ ಭಟ್, ಶ್ರೀ ಸುಧಾಕರಶರ್ಮ,ಶ್ರೀ ಶ್ರೀನಾಥ್-ನಿಮ್ಮೆಲ್ಲರಿಗೂ ಧನ್ಯವಾದಗಳು.ನಿಮ್ಮ ಚರ್ಚೆಯಿಂದ ಅನೇಕರಿಗೆ ಹಲವು ವಿಚಾರಗಳು ತಿಳಿದಂತಾಗುತ್ತದೆ.ಧನ್ಯವಾದಗಳು.

  ReplyDelete
 8. ರಾಹು-ಕೇತುಗಳು ಛಾಯೆಗಳು ಅರ್ಥಾತ್ ನೆರಳುಗಳು. ಒಂದು ಭೂಮಿಯ ನೆರಳಾದರೆ ಇನ್ನೊಂದು ಚಂದ್ರನ ನೆರಳು. ಇವಕ್ಕೂ ನೆಪ್ಚ್ಯೂನ್, ಪ್ಲೂಟೋಗಳಿಗೂ ಸಂಬಂಧವಿಲ್ಲ. ನೆಪ್ಷ್ಯೂನ್, ಪ್ಲೂಟೋಗಳು ಗ್ರಹಗಳು, Matter, Mass ಇರುವಂತಹವು. ಆದರೆ ರಾಹು ಕೇತುಗಳು Matter ಅಥವಾ Mass ಅಲ್ಲ!
  ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು 'ಚಂದ್ರಗ್ರಹಣ'ವಾದರೆ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಅಲ್ಲಿನವರಿಗೆ ಸೂರ್ಯನು ಕಾಣಿಸದೇ ಹೋಗಿ 'ಸೂರ್ಯಗ್ರಹಣ'ವಾಗುತ್ತದೆ. ಈ ವಿಜ್ಞಾನದ ವಿಷಯಕ್ಕೆ ಕಥೆ ಕಟ್ಟಬೇಕಾದ ಅವಶ್ಯಕತೆ ಇರಲಿಲ್ಲ. ಕಟ್ಟಿದ್ದಾರೆ. ರಾಹು ಕೇತುಗಳು ಚಂದ್ರ ಸೂರ್ಯನನ್ನು ನುಂಗುತ್ತಾರೆಂದು ಇತ್ಯಾದಿ. Forget the story. Take the astronomical science.

  ReplyDelete