ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, April 25, 2011

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....

ಯಾವುದನ್ನು ಇಷ್ಟಪಡುವುದಿಲ್ಲವೋ ಅದೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದು ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಷ್ಟ ಬೇಡಾ ಎಂದು ಹಂಬಲಿಸಿದರೆ ಕಷ್ಟಗಳ ಜಡಿಮಳೆಯೇ ಸುರಿಯುವುದು, ಯಾವುದು ಉತ್ತೀರ್ಣವಾಗಲಿ ಎನ್ನುತ್ತೇವೋ ಅದು ಅನುತ್ತೀರ್ಣಗೊಳ್ಳುವುದು ಇದು ಅನೂಚಾನವಾಗಿ ಎಲ್ಲರೂ ಅನುಭವಿಸುವ ಸತ್ಯ. ಅಂತೆಯೇ ಇವತ್ತಿನ ಈ ಸಂಗತಿ ಸಂತೋಷದಿಂದ ಶ್ರುತಪಡಿಸುತ್ತಿರುವುದಲ್ಲ; ಬದಲಾಗಿ ಅನಿವಾರ್ಯವಾಗಿ ಬರೆಯಬೇಕಾಗಿ ಬಂದ ಪ್ರಸಂಗ. ಹಲವಾರು ದಿನಗಳಿಂದ ಯಾವುದನ್ನು ಬರೆಯುವ ಸಂಭವ ಸದ್ಯಕ್ಕೆ ಬಾರದೇ ಇರಲಿ ಎಂದು ಬಯಸುತ್ತಿದ್ದೆನೋ ಅದು ಬಂದುಬಿಟ್ಟಿದೆ-ಅದೆಂದರೆ ನಮ್ಮೆಲ್ಲರಿಗೆ ಚಿರಪರಿಚಿತರಾದ ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರ ದೇಹಾಂತ್ಯ.

ಆಂಧ್ರ ಪ್ರದೇಶದ ಅತೀ ಉಷ್ಣ ತಾಪಮಾನವುಳ್ಳ ಜಾಗದಲ್ಲಿ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಆಶಾಕಿರಣವಾಗಿ ಬೆಳಗುವುದು ಸಾಧ್ಯವೆಂದರೆ ಅದೊಂದು ಅತಿಮಾನುಷ ಶಕ್ತಿಯ ಆವಾಸ ಎನ್ನಲು ಅಡ್ಡಿಯಿಲ್ಲ. ಹಿಂದೆ ರಾಮ, ಕೃಷ್ಣ ಹೀಗೆಲ್ಲಾ ದೇವರು ಅವತಾರ ಎತ್ತಿ ಬಂದಂತೇ ಯಾವುದೋ ಋಷಿ ಅಥವಾ ಮುನಿ ತನ್ನ ತಪಸ್ಸನ್ನು ಭುವಿಯ ಜನರ ಸದುಪಯೋಗಕ್ಕೆ ಧಾರೆ ಎರೆಯುವ ಮನಸ್ಸಾಗಿ ಇಂತಹ ರೂಪದಲ್ಲಿ ಜನಿಸಿದ್ದು ನಿಜವೆನಿಸುತ್ತದೆ. ಮಾಧ್ಯಮಗಳವರು ಏನೇ ಹೇಳಿದರೂ ಕೋಟ್ಯಂತರ ಜನರು ಪ್ರತಿಯೊಬ್ಬರೂ "ನಮ್ಮ ಕಷ್ಟ ಕಳೆಯಿತು" " ನಮ್ಮ ಸಮಸ್ಯೆ ಬಗೆಹರಿಯಿತು " ಎಂದರೆ ಸುಮ್ಮನೇ ಹಾಗೆ ಹೇಳಲಿಕ್ಕೆ ಯಾರಿಗೂ ತಲೆಕೆಟ್ಟಿಲ್ಲ; ಅವರಲ್ಲಿ ಅನೇಕರು ಗಣ್ಯಾತಿಗಣ್ಯರೂ ಸಂಪದ್ಭರಿತರೂ ಆಗಿದ್ದವರಿದ್ದು ಘನವಿದ್ವಾಂಸರೂ ಬಹಳ ಜನರಿದ್ದರೆಂಬುದರಲ್ಲಿ ಅನುಮಾನವಿಲ್ಲ.

ಯಾವುದೇ ಶಾಲೆಗೆ ಹೋಗದೇ ಯಾವ ವ್ಯಾಸಂಗವನ್ನೂ ಮಾಡದೇ ಜಗತ್ತಿನ ಹಲವು ಭಾಷೆಗಳನ್ನು ಮಾತನಾಡುವುದು, ಸಾಗರಗರ್ಭದಂತಹ ವೇದಗಳನ್ನು ಓದದೇ ಪ್ರವಚನದಲ್ಲಿ ಅವುಗಳ ಸಾರವನ್ನು ಶ್ಲೋಕಸಹಿತ ಹೇಳುವುದು, ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಸರಿಯಾದ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಗುವುದು ಯಾವುದೋ ಜನಸಾಮಾನ್ಯನಿಗಲ್ಲ; ಅವರಲ್ಲಿರುವ ಆ ಅವ್ಯಕ್ತ ಶಕ್ತಿ ತನ್ನನ್ನು ತೋರ್ಪಡಿಸಿಕೊಂಡು ಜಗತ್ತಿನಲ್ಲಿ ಯಾರ್ಯಾರಿಗೆ ತೊಂದರೆ ಇದೆಯೋ ಅವರೆಲ್ಲಾ ಬಂದು ಬಗೆಹರಿಸಿಕೊಳ್ಳಲಿ ಎಂಬುದನ್ನು ಸೂಚಿಸಲಿಕ್ಕಾಗಿ ಬಾಬಾ ಪವಾಡ ಮಾಡಬೇಕಾಗಿ ಬಂತು. ಪವಾಡದ ಪ್ರತ್ಯಕ್ಷದರ್ಶಿಗಳು ಹಲವರು ಹೇಳುವಂತೇ ಎಲ್ಲಾ ಪವಾಡಗಳೂ ಅನಿರೀಕ್ಷಿತವಾಗಿ ಆ ಕ್ಷಣಕ್ಕೆ ಅಲ್ಲಲ್ಲೇ ಘಟಿಸುವಂಥವು ಮತ್ತು ಹೆಚ್ಚಾಗಿ ಬಾಬಾ ಕೈ ತಿರುವಿದಾಗ ನಡೆಯುತ್ತಿದ್ದ ಪವಾಡಗಳು.

ಹಿಂದೆ ನಾನು ಅನೇಕಾವರ್ತಿ ಹೇಳಿದಂತೇ ಈ ಲೋಕದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯವೆಂಬ ೫ ಕೋಶಗಳಿವೆ, ಆದರೆ ಮಾನವನ ಜ್ಞಾನ ಪ್ರಯತ್ನದಿಂದ ವಿಜ್ಞಾನಮಯ ಕೋಶದವರೆಗೂ ಹೋಗುತ್ತದೆ. ಶ್ರೇಷ್ಠ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಆನಂದಮಯ ಕೋಶದ ಅರಿವುಂಟಾಗುತ್ತದೆ. ಅದನ್ನರಿತ ನಿಜವಾದ ಜ್ಞಾನಿಗೆ ಪವಾಡನಡೆಸುವುದು ಬಹಳ ಸುಲಭ. ಅಂಥವರಿಗೆ ಸಂಕಲ್ಪಸಿದ್ಧಿ ಕೂಡ ಪ್ರಾಪ್ತವಾಗುತ್ತದೆ. [ಅಂದರೆ ಕೇವಲ ಅವರು ಸಂಕಲ್ಪಿಸಿದರೂ ಸಾಕು ಹೇಗೋ ಆ ಕೆಲಸ ಸಲೀಸಾಗಿ ನಡೆದುಹೋಗುತ್ತದೆ] ಆದರೆ ಈ ಪವಾಡಗಳು ವಿಜ್ಞಾನಕ್ಕೆ ಧಕ್ಕುವುದಿಲ್ಲ. ವಿಜ್ಞಾನ ಅವುಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಅವು ವಿಜ್ಞಾನಮಯಕೋಶದ ಪರಿಮಿತಿಯನ್ನೂ ಮೀರಿದ ಜಾಗದಲ್ಲಿ ಹುಟ್ಟಿದಂಥವು! ಇದನ್ನೇ ಸೂಕ್ಷ್ಮವಾಗಿ ಹೇಳುತ್ತಾ ಬಾಬಾ ಆಧ್ಯಾತ್ಮವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಡಿ ಎಂದರು, ಹಾಗೊಮ್ಮೆ ಅದನ್ನು ನಡೆಸಿದರೂ ಯಾವುದೋ ಅವಘಡಗಳು ಸಂಭವಿಸಬಹುದಿತ್ತೇನೋ. ಈ ಜಗತ್ತಿನಲ್ಲಿ ಶೂನ್ಯ ಎಂಬುದೇ ಇಲ್ಲಾ ಎಂದು ಅವರು ಹೇಳಿದರು, ಅದರರ್ಥ ಬಾಬಾ ಕೈತಿರುವಿದಾಗ ಇನ್ನಾವುದೋ ಅಗೋಚರ ಅತಿಮಾನುಷ ಹಸ್ತ ಅವರು ಸಂಕಲ್ಪಿಸಿದ ವಸ್ತುವನ್ನು ಅವರ ಕೈಗೆ ನೀಡುತ್ತಿತ್ತು! ಲೌಕಿಕ ಬುದ್ಧಿವಂತಿಕೆ ಜಾಸ್ತಿಯಾದ ನಾವು ಎಲ್ಲವನ್ನೂ ಕೇವಲ ವೈಜ್ಞಾನಿಕ ಪರೀಕ್ಷೆಗೇ ಒಳಪಡಿಸಿದೆವು ಆದರೆ ಆತ್ಮ ಎಂದರೇನು? ಅದರ ಅಸ್ಥಿತ್ವ ಯಾವ ರೂಪದಲ್ಲಿರುತ್ತದೆ? ಅದು ಶರೀರದಲ್ಲಿ ಯಾವ ಜಾಗದಲ್ಲಿರುತ್ತದೆ? ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಮತ್ತು ಯಾವಾಗ ಎಲ್ಲಿಗೆ ಹೇಗೆ ತೆರಳುತ್ತದೆ ? -ಈ ಪ್ರಶ್ನೆಗಳಿಗೆ ನಮ್ಮ ಅತ್ಯಾಧುನಿಕ ವಿಜ್ಞಾನ ಇವತ್ತಿಗೂ ಗಪ್ ಚುಪ್ ! ಸೌರಮಂಡಲದ ಆಕಾಶಕಾಯಗಳನ್ನು ಗುರುತ್ವಾಕರ್ಷಣ ಶಕ್ತಿ ನಿರ್ಮಿಸಿ ಹಾಗೆ ನಿಯಮಿತಗೊಳಿಸಿದವರು ಯಾರು ? --ಈಗಲೂ ನಮ್ಮ ವಿಜ್ಞಾನ ಊಹೂಂ ! ಅಂದಮೇಲೆ ವಿಜ್ಞಾನವೇ ಎಲ್ಲವೂ ಅಲ್ಲ ಅದರ ಹೊರತಾಗಿ ಇನ್ನೇನೋ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನ್ಯಾಯ ಇದಾಗಿದೆ.

ಒಂದೆರಡು ಸಣ್ಣ ಪವಾಡಗಳ ಉದಾಹರಣೆಯನ್ನು ಬಳಸಿಕೊಳ್ಳುತ್ತೇನೆ:

೧. ಕರ್ನಾಟಕ ವಿಧಾನಸಭೆಯ ಮಾಜಿಸ್ಪೀಕರ್ ಆದಂತಹ ರಮೇಶ್‍ಕುಮಾರ್ ಅವರು ತಾನು ಸ್ವತಃ ನೋಡಿದ್ದನ್ನು ಹೇಳಿದ್ದಾರೆ: ಒಮ್ಮೆ ಪುಟ್ಟಪರ್ತಿಗೆ ಅವರು ಹೋಗಿದ್ದಾಗ ನಡೆದ ದರ್ಶನದ ಬಳಿಕ ಬಾಬಾ ಕೆಲವರನ್ನು ಆಪ್ತ ಸಂದರ್ಶನಕ್ಕೆ ಒಳಗೆ ಕರೆದರಂತೆ. ಅವರಲ್ಲಿ ರಮೇಶ್ ಕೂಡಾ ಒಬ್ಬರು. ಅವರ ಜೊತೆಗೆ ಸಾಲಿನಲ್ಲಿ ಅಮೇರಿಕದ ಪಾಮೋಲಿವ್ ಕಂಪನಿಯ ಯಜಮಾನರು ಮತ್ತವರ ಮಡದಿಕೂಡ ಇದ್ದರಂತೆ. ಆ ಹೆಂಗಸಿನ ಹತ್ತಿರ ನಿನಗೇನು ಬೇಕು ಎಂದು ಬಾಬಾ ಕೇಳಿದಾಗ " ಐ ವಾಂಟ್ ಪೀಸ್ " [ನನಗೆ ಶಾಂತಿ ಬೇಕು] ಎನ್ನುತ್ತಾ ಚೆಕ್‍ಬುಕ್ ತೆಗೆದು ೫೦೦ಕೋಟಿ ರೂಪಾಯಿಗಳ ಚೆಕ್ ಒಂದನ್ನು ಬಾಬಾಗೆ ಬರೆದುಕೊಟ್ಟಳಂತೆ! ಬಾಬಾ ಮೊದಲು "ಗುಡ್" ಎಂದರಂತೆ. ಆಮೇಲೆ ಆ ಚೆಕ್ಕನ್ನು ಹರಿದು ಚಿಕ್ಕ ಚಿಕ್ಕ ತುಂಡುಮಾಡಿ ಕೈಲಿ ಭಸ್ಮವಾಗಿ ಪರಿವರ್ತಿಸಿ ಅದನ್ನೇ ಅವಳಕೈಗೆ ಹಾಕಿ " ಟೇಕ್ ಪೀಸ್, ಡೋಂಟ್ ಎವರ್ ಡಿಸ್ಪ್ಯೂಟ್ ವಿತ್ ಯುವರ್ ಹಸ್ಬಂಡ್, ಲರ್ನ್ ಹೌ ಟು ಲಿವ್ ವಿದೌಟ್ ಹರ್ಟಿಂಗ್ ಎನಿಬಡಿ [ ಈ ಭಸ್ಮ ತಗೋ, ಗಂಡನ ಜೊತೆ ಜಗಳವಾಡುವುದನ್ನು ಬಿಟ್ಟುಬಿಡು ಯಾರಿಗೂ ನೋವುಂಟುಮಾಡದ ರೀತಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿ ] " ಎಂದುಬಿಟ್ಟರಂತೆ! ಹಣದ ಆಸೆ ಇದ್ದರೆ ಯಾರಾದರೂ ತಮಗೆ ಕೊಟ್ಟ ೫೦೦ ಕೋಟಿ ರೂಪಾಯಿಗಳ ಚೆಕ್ಕನ್ನು ಭಸ್ಮಮಾಡುತ್ತಿದ್ದರೇ?

೨. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡವರಲ್ಲಿ ಆದಿಚುಂಚನಗಿರಿ ಮಠಾಧೀಶರು, ದೇವೇಗೌಡರು ಮತ್ತು ಸಾಯಿಬಾಬಾ ಇದ್ದರಂತೆ. [ಇದು ಆದಿಚುಂಚನಗಿರಿ ಮಠಾಧೀಶರೇ ಸ್ವತಃ ಅನುಭವದಿಂದ ಹೇಳಿದ್ದು!] ಬಾಬಾರ ಕೈಲಿರುವ ಕರ್ಚೀಫ್ ಕೆಳಗೆಬಿತ್ತು. ಆಗ ಪಕ್ಕದಲ್ಲಿ ಕುಳಿತಿದ್ದ ದೇವೇಗೌಡರು ಅದನ್ನು ಎತ್ತುಕೊಡಲು ಮುಂದಾದಾಗ ಆಗಿನ್ನೂ ಕರ್ನಾಟಕದ ಸಿ.ಎಂ. ಆಗಿದ್ದ ಗೌಡರನ್ನು " ಇರ್ಲಿ ಬಿಡಿ ಪ್ರೈಮ್ ಮಿನಿಷ್ಟ್ರೇ , ಬಿಡಿ ಪ್ರೈಮ್ ಮಿನಿಷ್ಟ್ರೇ, ಬಿಡಿ ಪ್ರೈಮ್ ಮಿನಿಷ್ಟ್ರೇ " ಎಂದು ಬಾಬಾ ಹೇಳಿದರಂತೆ. ಎಲ್ಲರೂ ಅದೇನೋ ಬಾಬಾ ನೆನಪಿರದೇ ತಪ್ಪುಚ್ಚರಿಸುತ್ತಿದ್ದಾರೆ ಎಂದುಕೊಂಡರು. ಆದರೆ ಅದಾದ ೧೫ ದಿನಗಳಲ್ಲೇ ಹರದನ ಹಳ್ಳಿಯ ಹೈದ ಭಾರತದ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ!

ಇಂತಹ ಪವಾಡಗಳಿಂದ ಬಾಬಾಗೆ ಯಾವ ಲಾಭವೂ ಇರಲಿಲ್ಲ. " ನೀವು ಯಾಕೆ ಉಂಗುರ, ನೆಕ್ಲೇಸ್ ಎಲ್ಲಾ ಸೃಷ್ಟಿಸಿಕೊಡುತ್ತೀರಿ ? " ಎಂದು ಯಾರೋ ಕೇಳಿದಾಗ ಬಾಬಾ ಹೇಳಿದ್ದು ಹೀಗೆ- " ನೀವು ಅತ್ಯಂತ ಪ್ರೀತಿಪಾತ್ರರಿಗೆ ಎಷ್ಟೋ ಸರ್ತಿ ಪ್ರೀತಿಯಿಂದ ಗಿಫ್ಟ್ ಕೊಡುವುದಿಲ್ಲವೇ ? ತಂದೆ ಮಕ್ಕಳಿಗೆ ಏನಾದರೂ ತಂದುಕೊಡುವುದಿಲ್ಲವೇ ? ಅದೇ ರೀತಿಯಲ್ಲಿ ಪ್ರೀತಿಯಿಂದ ಅವರ ಖುಷಿಗಾಗಿ ಹಾಗೆ ಕೊಡುತ್ತೇನೆ " ! ಇದನ್ನು ಪುಷ್ಟೀಕರಿಸಲು ನಾವು ಇತಿಹಾಸ ಕೆದಕಿದರೆ ಬಾಬಾ ಪ್ರಚಾರಪ್ರಿಯರೂ ಆಗಿರಲಿಲ್ಲ! ಅವರು ವಿದೇಶಕ್ಕೆ ಹೋಗಿದ್ದು ಒಮ್ಮೆಮಾತ್ರ-ಉಗಾಂಡಾಕ್ಕೆ. ಅಲ್ಲಿನ ಜನರಿಗೆ ಅಲ್ಲಿಗೆ ಹೋದಾಗ ಹೇಳಿದರಂತೆ " ನಾನು ನಿಮ್ಮನ್ನು ನನ್ನತ್ತ ಆಕರ್ಷಿಸಲು ಬಂದಿಲ್ಲ, ನಿಮ್ಮ ನಿರ್ವ್ಯಾಜ ಪ್ರೀತಿಕಂಡು ನಿಮ್ಮನ್ನೆಲ್ಲಾ ನೋಡಿ ಸಂತೋಷ ಹಂಚಿಕೊಳ್ಳುವ ಮನಸ್ಸಾಗಿ ಬಂದಿದ್ದೇನೆ. " ಅದೇ ಮೊದಲು ಮತ್ತು ಅದೇ ಕೊನೆ-ಮತ್ತೆ ಬಾಬಾ ವಿದೇಶಗಳಿಗೆ ಹೋಗಲೇ ಇಲ್ಲ. ಜಗತ್ತಿನ ಹಲವಾರು ದೇಶಗಳ ಜನರೇ ಅವರನ್ನು ಹುಡುಕುತ್ತಾ ಅವರಿದ್ದೆಡೆಗೇ ಬಂದರು; ಸಹಾಯ ಪಡೆದರು.

"ಲವ್ ಆಲ್ ಸರ್ವ್ ಆಲ್" ಇದು ಅವರ ಬೋಧನೆ. ಅದನ್ನು ಆಚರಿಸಿಯೂ ತೋರಿಸಿದರು. ಸರಕಾರಗಳು ಮಾಡಲಾಗದ ಕೆಲಸಗಳು ಅವರಿಂದ ನಡೆದವು. ಹಳ್ಳಿಗಳಲ್ಲಿ ಬಡಜನರಿಗೆ ಗ್ರಾಮಸೇವೆ ನಡೆಯಿತು: ಜೀವನಾವಶ್ಯಕ ವಸ್ತುಗಳು, ಬಟ್ಟೆಗಳು ಮುಂತಾದವು ನೀಡಲ್ಪಟ್ಟವು. ನೀರಿಲ್ಲದ ಜಿಲ್ಲೆಗಳ ಹಾಹಾಕಾರ ತಣಿಸಲು ನೀರು ಸರಬರಾಜು ಮಾಡುವ ಯೋಜನೆಗಳು ಶಾಶ್ವತವಾಗಿ ಕಾರ್ಯಗತವಾದವು. ದಿಕ್ಕಿಲ್ಲದ ಬಡಜನರಿಗೆ ಅವರ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿಶ್ಶುಲ್ಕ ಆಸ್ಪತ್ರೆಗಳು ಸ್ಥಾಪಿತವಾದವು. ಅನಕ್ಷರಸ್ಥರಿಗೆ ಶಾಲೆಗಳು-ಶಿಕ್ಷಣ ಸಂಸ್ಥೆಗಳು ರೂಪತಾಳಿದವು. ಇವೆಲ್ಲಾ ನಡೆಯುತ್ತಲೇ ಇವೆ. ಅವರು ಯಾವ ರಾಜಕೀಯ ಪಕ್ಷವನ್ನಾಗಲೀ ಯಾವುದೇ ಒಂದು ಮತವನ್ನಾಗಲೀ ಆತುಕೊಂಡವರಲ್ಲ. ಸರ್ವಧರ್ಮಗಳ ಸಕಲದೇಶಗಳ ಮಾನವರನ್ನು ಏಕರೂಪದಿಂದ ನೋಡಿದರು ಬಾಬಾ. ಹೆಣ್ಣುಮಕ್ಕಳಿಗೂ ವೇದ ಬೋಧಿಸಿ ಉಪನಯನ ಮಾಡಿಸಿದ ಔದಾರ್ಯ ಮತ್ತು ಪರಿಜ್ಞಾನ ಅವರದ್ದು. " ದೇಹಿ " ಎಂದು ಬಂದರೆ ಇಲ್ಲಾ ಎನ್ನಬಾರದು ಎಂಬ ಭಾರತೀಯ ಆರ್ಷೇಯ ಪದ್ಧತಿಯನ್ನು ಸತತವಾಗಿ ಅನುಷ್ಠಾನದಲ್ಲಿಟ್ಟ ಒಬ್ಬರೇ ಸಂತ ಬಾಬಾ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾಧ್ಯಮಗಳು ಆಗಾಗ ಹಲವು ವಿಷಯಗಳನ್ನು ಮನಸೋ ಇಚ್ಛೆ ವಿಕೃತವಾಗಿ ಬರೆದವು. ಬಾಬಾ ಹಾಗೆ ಹೀಗೆ ಎಂದೆಲ್ಲಾ ನೂರೆಂಟು ಇಲ್ಲದ್ದನ್ನು ಹೇಳಿದವು. ಆದರೂ ನಿಜಕ್ಕೂ ಹೇಳುತ್ತೇನೆ ಕೇಳಿ ನನ್ನಂತರಂಗ ಅವುಗಳನ್ನು ಪ್ರಶ್ನಿಸುತ್ತಲೇ ಇತ್ತು. ’ಬಾಬಾ ದೈವಾಂಶ ಸಂಭೂತರು’ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿತ್ತು. ಆದರೂ ಮರುಳು ಮನಸ್ಸು ಏನುಮಾಡಿತು ಬಲ್ಲಿರೋ ? ವ್ಯಾವಹಾರಿಕವಾಗಿ ಪುಟ್ಟಪರ್ತಿಯ ಯಾವುದೋ ವಸತಿ ನಿಲಯಕ್ಕೆ ನಾವೆಲ್ಲಾ ಕೆಲವರು ಹೋಗಿದ್ದರೂ ’ಪ್ರಶಾಂತಿ ನಿಲಯ’ದ ಗೇಟನ್ನು ನಾನು ಕಂಡಿದ್ದರೂ ಅದರೊಳಗೆ ಹೋಗಲು ನನ್ನ ಮರುಳು ಮನಸ್ಸು ಆಗ ಬಿಡಲೇ ಇಲ್ಲ. ಬಾಬಾ ಒಂದೊಮ್ಮೆ ಹೇಳಿದ್ದರಂತೆ " ನನ್ನನ್ನು ನೇರವಾಗಿ ದರ್ಶಿಸಲೂ ಪಡೆದುಬರಬೇಕು " ಎಂಬುದಾಗಿ. ಹೀಗಾಗಿ ನಾನು ಪಡೆದಿರದ ಆ ಭಾಗ್ಯ ನನಗೆ ಆ ಅವಕಾಶ ನೀಡಲಿಲ್ಲ-ಅದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ. ನೋಡಿ ಸಮಯವೇ ಹೀಗೆ: ಯಾರಿಗೂ ಕಾಯುವುದಿಲ್ಲ. ಬಾಬಾ ಜನಿಸಿದ್ದರು, ಅವರ ಕರ್ತವ್ಯ ಮುಗಿಯಿತು. ಈಗ ಮರಳಿಯೇ ಬಿಟ್ಟರು. ಮತ್ತೆ ಬಾಬಾ ಬೇರೇ ದೇಹದಲ್ಲಿ ಜನಿಸಬಹುದು; ಅದು ಬೇರೇ ಪ್ರಶ್ನೆ. ಆದರೆ ಇವತ್ತಿನವರೆಗೆ ಈ ದೇಹದಿಂದಿದ್ದ ಬಾಬಾ ಈಗ ಈ ಶರೀರವನ್ನು ತ್ಯಜಿಸಿಬಿಟ್ಟಿದ್ದಾರೆ. ಈಗ ಜೀವಂತ ಬಾಬಾ ಮತ್ತೆ ನೋಡಲು ಸಿಗುವರೇ ? ಸಮಯ ಮೀರಿಹೋಯಿತು. ಅದಕ್ಕೇ ಯಾವುದಕ್ಕೂ ವಿವೇಚಿಸಿ ನಡೆಯಬೇಕು ಎನ್ನುತ್ತಾರೆ.

ಇನ್ನು ಅಷ್ಟೆಲ್ಲಾ ಪವಾಡ ನಡೆಸುವ ಕೋಟ್ಯಂತರ ಭಕ್ತರ ಸಂಕಷ್ಟ ಪರಿಹರಿಸುವ ಬಾಬಾ ತಾನೇ ತಿಂಗಳಕಾಲ ಆಸ್ಪತ್ರೆಯಲ್ಲಿ ಸಾದಾ ಮನುಷ್ಯನೊಬ್ಬ ಮಲಗಿದಂತೇ ಆ ತೊಂದರೆ ಈ ತೊಂದರೆ ಎನ್ನುತ್ತಾ ಮಲಗಿದ್ದು ಯಾಕೆ-ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ? --ಇದು ಹಲವರ ಪ್ರಶ್ನೆ. ಮನುಷ್ಯರೂಪದಲ್ಲಿ ಜನಿಸಿದ ಯಾವುದೇ ಆತ್ಮಕ್ಕೆ ಐಹಿಕ ಬಾಧೆಗಳು ಸಹಜ. ಅನೇಕಾವರ್ತಿ ಇಂಥಾ ಪುಣ್ಯಾತ್ಮರು ತಮ್ಮ ಶಿಷ್ಯಗಣದ ನೋವನ್ನು ತಾವು ಪಡೆದು ಅನುಭವಿಸಿ ಅವರಿಗೆಲ್ಲಾ ನಲಿವನ್ನೂ ಸುಖವನ್ನೂ ನೀಡುತ್ತಾರೆ. ತೊಂದರೆಗಳು ರಾಮನನ್ನಾಗಲೀ ಕೃಷ್ಣನನ್ನಾಗಲೀ, ಏಸು-ಬುದ್ಧ-ಮಹಾವೀರ-ಪೈಗಂಬರ ಇಂತಹ ಯಾರನ್ನೇ ಆಗಲಿ ಬಿಡಲಿಲ್ಲ. ಹಲವು ಋಷಿಗಳೂ ಸನ್ಯಾಸಿಗಳೂ ಅನೇಕ ಸಂಕಟಗಳನ್ನು ಅನುಭವಿಸಿದ್ದಾರೆ. ಅದರಂತೇ ಬಾಬಾ ದೇಹ ವಿಸರ್ಜಿಸಲು ಕಾರಣಬೇಕಿತ್ತು. ಅವರು ಯಾವುದೋ ಒಂದು ತಿಥಿ-ಮಿತಿಗಾಗಿ ಕಾದಿದ್ದರು. ಇಂದು ಆ ಘಳಿಗೆ ಕೂಡಿಬಂತು; ಹೊರಟುಬಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಾತ್ಮರು ದೇಹವನ್ನು ವಿಸರ್ಜಿಸುವಾಗ ಹೇಳುತ್ತಾ ಇರುವುದಿಲ್ಲ. ಹೇಳದೇ ಇದ್ದರೇ ಹಲವು ಭಕ್ತರು ನೋವನ್ನು ಅನುಭವಿಸುತ್ತಾರೆ-ಇನ್ನು ಹೇಳಿಬಿಟ್ಟರೆ ಎಷ್ಟೊಂದು ಜನ ಸುತ್ತ ನೆರೆದು ದೇಹವಿಸರ್ಜನೆಗೆ ತಡೆಯಾಗಬಹುದೆಂಬ ಕಾರಣದಿಂದ ಕರ್ತವ್ಯ ಮುಗಿದ ನಂತರ ಸುಮ್ಮನೆ ತೆರಳಿಬಿಡುತ್ತಾರೆ.

ಇವತ್ತಿನ ಜಗಕ್ಕೆ ಬೇಕಾದ ಮಿಕ್ಕಿದ್ದೆಲ್ಲವನ್ನೂ ನಾವು ಪಡೆದಿದ್ದೇವೆ; ಪಡೆಯುವವರಿದ್ದೇವೆ. ಆದರೆ ಎಲ್ಲರೂ ಒಂದೇ ಎಂಬ ಏಕೋಭಾವಮಾತ್ರ ಇಲ್ಲ. ಜಗತ್ತು ಸ್ಥಿರವಲ್ಲ, ನಾವು ಶಾಶ್ವತವಲ್ಲ, ಈ ಜಗತ್ತಿನಲ್ಲಿ ನಾವು ಯಾವಲೆಕ್ಕವೂ ಅಲ್ಲ, ಜಗತ್ತನ್ನಾಳುವ ಶಕ್ತಿಯನ್ನು ಆರಾಧಿಸುವ ಮೊದಲ ಹೆಜ್ಜೆಯಾಗಿ ಎಲ್ಲರನ್ನೂ ಪ್ರೀತಿಸಲು ಕಲಿಯಬೇಕು, ಎಲ್ಲರಿಗೂ ಹಂಚಿ ಬದುಕಲು ಕಲಿಯಬೇಕು-ಎಂಬ ಉದಾತ್ತ ತತ್ವಗಳನ್ನು ಸರಳ ರೀತಿಯಲ್ಲಿ ಅನುಸರಿಸಿ ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಎತ್ತಿಹಿಡಿದ ಬಾಬಾ ತಾನೊಬ್ಬ ಶ್ರೇಷ್ಠಜೀವಿ ಎಂಬುದನ್ನು ತಮ್ಮ ಬದುಕಿನ ಆದರ್ಶದಿಂದ ತೋರಿಸಿದ್ದಾರೆ. ಪುಟ್ಟಪರ್ತಿಯಲ್ಲಿ ಇರುವ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು ಅವಲೋಕಿಸಿದರೆ ಸರಕಾರ ನಡೆಸುವ ರಾಜಕಾರಣಿಗಳು ಕಲಿಯಬಹುದಾದ ಪಾಠಗಳು ಹಲವು.

ನಾನು ಬಾಬಾ ಭಕ್ತನಾಗಿರಲಿಲ್ಲ. ಆದರೆ ಅವರ ಚರ್ಯೆಗಳನ್ನು ಗಮನಿಸುತ್ತಾ ಬಂದ ನನ್ನಂತರಂಗ ಯಾಕೋ ಅವರನ್ನು ನೆನೆಯುವಂತೇ ಮಾಡುತ್ತಿತ್ತು. ಇನ್ನು ಪುಟ್ಟಪರ್ತಿಯಲ್ಲಿ ಅವರ ಸಮಾಧಿಯೇ ಹೊರತು ಜೀವಂತವಾಗಿ ಅವರನ್ನು ನೋಡುವುದು ಸಾಧ್ಯವಿಲ್ಲವಲ್ಲ. ಈ ಘಳಿಗೆಯಲ್ಲಾದರೂ ಮಲಿನವಾದ ಮನಸ್ಸಿನ ಕೊಳೆಯನ್ನು ನಾಶಮಾಡುವ ಸಲುವಾಗಿ ಹೊರಟುನಿಂತ ಬಾಬಾರವರಿಗೆ ಜಗದ ಎಲ್ಲರಪರವಾಗಿ ಈ ಕೆಳಗಿನ ಶ್ಲೋಕದೊಂದಿಗೆ ಸಾಷ್ಟಾಂಗ ವಂದನೆಗಳು,ಅಭಿನಂದನೆಗಳು-

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||

14 comments:

 1. ನಮಸ್ಕಾರ, ಭಟ್ಟರೇ. ನಾನು ಶ್ರೀ ಸಾಯಿಬಾಬಾರವರ ಬಗ್ಗೆ ಎಂದೂ ಆಸಕ್ತನಾಗಿರಲಿಲ್ಲ. ಹೀಗಾಗಿ ನನ್ನ ವೈಯಕ್ತಿಕ ಅಭಿಪ್ರಾಯದಿಂದ ಬೇಸರಿಸದಿರಿ. ನೀವು ತಿಳಿಸಿದ ಎರಡು ಉದಾಹರಣೆಗಳೂ ನೀವೇ ಅಂದಿರುವಂತೆ 'ಅಂತೆ'! ನಿಜವಿರಬಹುದು, ಇಲ್ಲದಿರಬಹುದು. ಅವರು ಅಪಾರ ಅನುಯಾಯಿಗಳನ್ನು, ಭಕ್ತರನ್ನು ಹೊಂದಿದ್ದವರು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಮಾಡಿದ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆಯಿದೆ. ಆದರೆ ಸುಮಾರು 40,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಣ, ಆಸ್ತಿಗಳನ್ನು ಅವರು ಬಿಟ್ಟು ಹೋಗಿದ್ದಾರಲ್ಲಾ! ಟನ್ನುಗಟ್ಟಲೆ ಚಿನ್ನವನ್ನು ಸಾಗಿಸಿರುವ ಕುರಿತೂ ಸಹ ವದಂತಿಯಿದೆ. ಅದಕ್ಕಾಗಿ ಈಗ ಕಿತ್ತಾಟವಿದೆಯಲ್ಲಾ! ಅದನ್ನೂ ಅವರು ಸೇವಾಕಾರ್ಯಗಳಿಗೆ ವಿನಿಯೋಗಿಸಿದ್ದರೆ ಇಡೀ ಆಂಧ್ರಪ್ರದೇಶ ಉದ್ಧಾರವಾಗಿಬಿಡುತ್ತಿತ್ತು!

  ReplyDelete
 2. ನಮಸ್ಕಾರ ನಾಗರಾಜರೇ, ಅಭಿಪ್ರಾಯ ಭೇದ ಸಹಜ, ೪೦, ೦೦೦ ಕೋಟಿ ಹಣವನ್ನು ಅಷ್ಟೊಂದು ದೊಡ್ಡ ಸಂಸ್ಥೆಯನ್ನು ನಡೆಸಲು ಇರಿಸಿದ್ದರು ಅನಿಸುವುದಿಲ್ಲವೇ ನಿಮಗೆ? ನಮ್ಮ ಯಾವುದೇ ಸರಕಾರ ಪುಕ್ಕಟೆ ಆಸ್ಪತ್ರೆಗಳನ್ನು ನಿಮಿಸಿದೆಯೇ ? ಅದಕ್ಕೆಲ್ಲಾ ದಿನನಿತ್ಯ ತಗಲಬಹುದಾದ ಖರ್ಚುವೆಚ್ಚ ನಾವು ಊಹಿಸಲೂ ಸಾಧ್ಯವಿಲ್ಲವಲ್ಲ,ಧನ್ಯವಾದಗಳು

  ReplyDelete
 3. ಶ್ರೀ ಸಾಯಿಬಾಬಾ ರವರಿಗಿದ್ದ/ಇರುವ ಅಸಂಖ್ಯಾತ ಅನುಯಾಯಿಗಳನ್ನು ನೋಡಿದಾಗ ಅವರಲ್ಲಿ ಒಂದು ಅಗೋಚರ ಶಕ್ತಿ ಮತ್ತು ಆಕರ್ಷಣೆ ಇತ್ತೆಂಬುದು ಬಹುಶ: ಒಪ್ಪಬೇಕಾದ ಅಂಶವೇ. ಅವರನ್ನು ನಾನೂ ನೋಡಿಲ್ಲ. ಏನಿದ್ದರೂ ಮಾಧ್ಯಮಗಳ ಮೂಲಕ ಮತ್ತು ಅವರ ಭಕ್ತರ ಮೂಲಕ ಪಡೆದ ಮಾಹಿತಿಯಷ್ಟೇ ನನ್ನಲ್ಲಿರುವುದು. ನಮಗೆ ಕಾಣದ ಇನ್ನೂ ಅನೇಕ ವಿಚಾರಗಳಿರಬಹುದು. ಆದರೆ ಪ್ರಸ್ತುತವಾಗುವುದು ಅವರು ಮಾಡಿದಂತಹ ಅಪಾರವಾದ ಸಾರ್ವಜನಿಕ ಸೇವೆ ಮತ್ತು ನಂಬಿ ಬಂದ ಕೋಟ್ಯಂತರ ಭಕ್ತರಿಗೆ ನೀಡಿದ ಸಾಂತ್ವನ ಮತ್ತು ಸಮಾಧಾನ. ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪು ಹಣಕ್ಕಿಂತ ಅಲ್ಲಿರುವ ಹಣ ಹೆಚ್ಚೇನೂ ಅಲ್ಲ! ಲೇಖನ ಸಮಯೋಚಿತವೂ, ಮನನೀಯವೂ ಆಗಿದೆ ಎಂಬುದು ನನ್ನ ಅನಿಸಿಕೆ. ಅಭಿನಂದನೆಗಳು.

  ReplyDelete
 4. ಸಾಯಿಬಾಬಾ ಅವರ ವಿಚಾರದ ಬಗೆಗೆ ಚರ್ಚೆಮಾಡುತ್ತಾ ನಮ್ಮ ನಮ್ಮ ಮನವನ್ನು ನೋಯಿಸಿಕೊಳ್ಳುವುದು ಬೇಡ.
  ಭಗವದ್ಗೀತೆಯ ಒಂದುಮಾತು ಎಂದಿಗೂ ಸತ್ಯವಲ್ಲವೇ?....ಅದೇನೆಂದರೆ....
  ಉದ್ಧರೇದಾತ್ಮನಾತ್ಮಾನಾಂ ಆತ್ಮಾನಮವಸಾಧಯೇತ್|
  ಆತ್ಮೈವಹ್ಯಾತ್ಮನೋ ಬಂಧು: ಆತ್ಮೈವ ರಿಪುರಾತ್ಮನ:||

  ಅವನನ್ನು ಅವನೇ ಉದ್ಧರಿಸಿಕೊಳ್ಳಬೇಕು,ಅವನಿಗೆ ಅವನೇ ಶತೃ,ಅವನಿಗೆ ಅವನೇ ಮಿತ್ರ||
  ಅಂದರೆ ಬೇರೆ ಯಾರೂ ಯಾರನ್ನೂ ಉದ್ಧರಿಸಲು ಸಾಧ್ಯವಿಲ್ಲ. ಎಲ್ಲಾ ಅವರವರ ಕೈನಲ್ಲೇ ಇದೆಯೆಂದಾಗ, ಎಲ್ಲರೂ ಅವರವರ ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಕು,ಅವರು ಉದ್ಧಾರವಾಗುವುದರ ಜೊತೆಗೆ ದೇಶವು ಉದ್ಧಾರವಾಗಿಬಿಡುತ್ತೆ. ಮಾಡುವುದಿದ್ದರೆ ಅರಿವಿನ ಜಾಗೃತಿ ಮಾಡಬೇಕೇ ಹೊರತೂ ಬೇರೆ ಏನೇ ಮಾಡಿದರೂ ಅದರಹಿಂದೆ ಗೊಂದಲಗಳು, ಗೋಜಲುಗಳು ಸಾಕಷ್ಟು ಇರುತ್ತದೆ. ವೇದಸುಧೆಯು ಅದರ ಅಭಿಮಾನಿಗಳಲ್ಲಿ ವೇದದ ಆಧಾರದಲ್ಲಿ ಒಂದಿಷ್ಟು ಜಾಗೃತಿಯನ್ನು ಮಾಡುತ್ತಾ, ಜೊತೆಜೊತೆಗೇ ಸತ್ಯಮಾರ್ಗದಲ್ಲಿ ನಡೆಯಲು ಪ್ರೇರಣೆಕೊಡುತ್ತಾ ಸಾಗುವ ಪ್ರಯತ್ನಮಾಡುವುದು ಸೂಕ್ತವೆನಿಸುತ್ತದೆ.

  ReplyDelete
 5. ಶ್ರೀಧರ್ ಜೀ!
  ನೀವು ಹೇಳಿದ್ದನ್ನೇ ವೇದ ಹೀಗೆನ್ನುತ್ತದೆ.
  ಸ್ವಯಂ ವಾಜಿನ್ ತನ್ವಂ ಕಲ್ಪಯಸ್ವ, ಸ್ವಯಂ ಯಜಸ್ವ, ಸ್ವಯಂ ಜುಷಸ್ವ, ಮಹಿಮಾ ತೇ ಅನ್ಯೇನ ನ ಸನ್ನಶೇ|| (ಯಜು.23.15.) - ಸ್ವಯಂ ಮಾಡಬೇಕೇ ಹೊರತು ಮತ್ತೊಬ್ಬರ ಸಾಧನೆಯಿಂದ ನಮಗೇನೂ ದಕ್ಕುವುದಿಲ್ಲ!!
  ಯಾವ ಮಾನವನೂ ಮತ್ತೊಬ್ಬ ಮಾನವನಿಂದ ಉದ್ಧಾರವಾಗುವುದಿಲ್ಲ. ಉದ್ಧಾರ ಮಾಡುತ್ತೇನೆನ್ನುವವರು ಟೋಪಿ ಹಾಕಲು ಯತ್ನಿಸುತ್ತಾರೆ. ಬೇರೆಯವರಿಂದ ಉದ್ಧಾರವಾದೆವೆಂಬುವರು ತಿಳಿದೋ ತಿಳಿಯದೆಯೋ ಸುಳ್ಳು ಹೇಳುತ್ತಿದ್ದಾರೆ. ಹೆಚ್ಚೆಂದರೆ ನಮಗೆ ಸಿಗಬಹುದಾದದ್ದು ಸ್ವಲ್ಪ ಸಲಹೆ,ಮಾರ್ಗದರ್ಶನ. ಅದಕ್ಕೆ ಕೃತಜ್ಞತೆ ಇರಲೇಬೇಕು. ಸಕಲ ಮಾನವರ ಉದ್ಧಾರಕ ಆ ಭಗವಂತನನೊಬ್ಬನೇ!

  ReplyDelete
 6. ಆತ್ಮೀಯ ಶ್ರೀಧರರೇ, ನಿಮ್ಮೆಲ್ಲರ ಸಂಶಯಗಳಿಗೆ ಇಂದಿನ [೨೯.೦೪.೨೦೧೧ ರ ] ಹೊಸದಿಗಂತದ ೬ನೇ ಪುಟದಲ್ಲಿ ’ಚಿತ್ತ ಭಿತ್ತಿ’ ಎಂಬ ತಲೆಬರಹದಲ್ಲಿ ಎಂ. ಶ್ರೀನಿವಾಸನ್ ಅವರು ಬರೆದ ಮಂಥನ ಸಮರ್ಪಕವಾಗಲಿದೆ, ದಯಮಾಡಿ ಓದಿಕೊಳ್ಳಿ. ಮನುಷ್ಯರೆಲ್ಲರೂ ಕೇವಲಾತ್ಮರಾಗಿ ಜನಿಸುವುದಿಲ್ಲ, [ಕೇವಲಾತ್ಮಕ್ಕೆ ಜನನವೇ ಇಲ್ಲ] ಆತ್ಮದಲ್ಲೇ ಹಲವು ಹಂತಗಳಿವೆ. ಸಾಮಾನ್ಯ ಮನುಷ್ಯ ತಾನೇ ಎಲ್ಲವೂ ತನಗೆ ತನ್ನಿಂದಲೇ ಆತ್ಮಜ್ಞಾನ ಕುಳಿತಲ್ಲೇ ಬೆಳಗುತ್ತದೆ ಎಂದರೆ ಹುಂಬತನವಾಗುತ್ತದೆ, ಸಾಧನಾ ಪಥದಲ್ಲಿ ಗುರುವಿನ ಮಾರ್ಗದರ್ಶನ ಅನಿವಾರ್ಯ. ಗುರುವಿಗೇ ಗುರುವೂ ಇರುತ್ತಾರೆಂದಮೇಲೆ ಸಂಸಾರವಂದಿಗರಾದ ಮಾನವರಿಗೆ ಉತ್ತಮ ಗುರುವೊಬ್ಬನ ಅವಶ್ಯಕತೆಯಿದೆ. ಇನ್ನು ಪವಾಡಗಳನ್ನು ಪರಾವಿದ್ಯೆ ಬಲ್ಲವರು ನಡೆಸುವುದಕ್ಕೂ ಲೌಕಿಕ ಜಾದೂಗಾರರು ನಡೆಸುವುದಕ್ಕೂ ಬಹಳ ಅಂತರವಿದೆ. ಪರಾವಿದ್ಯೆ ಬಲ್ಲವರು ಏಕಕಾಲಕ್ಕೆ ಅನೇಕ ಕಡೆ ಕಾಣಿಸಿಕೊಳ್ಳುವ ಸಾಮರ್ಥ್ಯವನ್ನೂ ಪಡೆದಿರುತ್ತಾರೆ, ಭಕ್ತರ ಲೌಕಿಕ, ಆದಿಭೌತಿಕ ಕಾಯಿಲೆಗಳನ್ನು ಆದಿದೈವಿಕ ಶಕ್ತಿಯಿಂದ ನಿವಾರಿಸುವಲ್ಲಿ ಸಮರ್ಥರಾಗಿರುತ್ತಾರೆ, ಇದನ್ನೇ ನಮ್ಮ ಸಮರ್ಥ ಶ್ರೀಧರರೂ ನಡೆಸಿದ್ದರು. ಲೇಖನದಲ್ಲಿ ಹೇಳಿರುವಂತೇ ಪವಾಡಗಳನ್ನೆಲ್ಲಾ ಕೇವಲ ಲೌಕಿಕವಾಗಿ ಅಳೆಯಲು ಸಾಧ್ಯವಾಗುವುದಿಲ್ಲ! ಯಾರೋ ಒಬ್ಬಿಬ್ಬರು ಹೇಳಿದ್ದರೆ ಪರವಾಗಿರಲಿಲ್ಲ, ಕೋಟ್ಯಂತರ ಭಕ್ತರು ಸುಳ್ಳರೂಒ ಮೂಢರೂ ಆಗಿರುವುದಿಲ್ಲ -ತಿಳಿಯಿರಿ. ನಿನ್ನೆ ಬೆಂಗಳೂರಲ್ಲಿ ಅಧವಾನಿಯೇ ಹೇಳಿದರು-ಅವರಿಗೆ ನಡೆದ ಪವಾಡವನ್ನು, ನನ್ನ ಹತ್ತಿರದ ಸಂಬಂಧಿಕರೊಬ್ಬರಿಗೆ ಸ್ಲಿಪ್ ಡಿಸ್ಕ್ ಆಪರೇಶನ್ ಆದರೂ ನೋವುಮಾತ್ರ ಹಾಗೇ ಇತ್ತು, ಒಮ್ಮೆ ರಾತ್ರಿ ಯಾರದೋ ಮಾತು ಕೇಳಿ ಭಕ್ತಿಯಿಂದ ಸಾಯಿಬಾಬಾರನ್ನು ನೆನೆಯುತ್ತ ಮಲಗಿದವರಿಗೆ ಕನಸಿನಲ್ಲಿ ಬಾಬಾ ಬಂದು ಎಲ್ಲಿನೋವಿದೆಯೋ ಅಲ್ಲಿ ಬೆನ್ನನ್ನು ಒತ್ತಿಹಿಡಿದರಂತೆ, ಎಚ್ಚರವಾಗಿಹೋಯ್ತು! ಮಾರನೇದಿನದಿಂದ ನೋವೇ ಮಾಯ! ಅದಾದ ಕೆಲದಿನಗಳಲ್ಲೇ ಬಾಬಾರನ್ನು ಸ್ವತಃ ನೋಡಲು ಪುಟ್ಟಪರ್ತಿಗೆ ಹೋಗಿ ಬಂದರು. ಹೀಗೇ ಅವಧೂತರ ಬಗ್ಗೆ ತಮಗೆ ಜಾಸ್ತಿ ಹೇಳುವುದು ಬೇಕಾಗಿಲ್ಲತಾನೇ ? ಯಾಕೆಂದರೆ ನೀವೂ ನೋಡಿದವರು. ಆದರೆ ನಾವೂ ನೀವೂ ಅವಧೂತರಾಗಬೇಕು ಎಂದರೆ ಅದಕ್ಕೆ ಜನ್ಮಾಂತರಗಳ ತಪಶ್ಚರ್ಯದ ಫಲಬೇಕು. ಬರಿದೇ ನಾನೂ ಬರೆದಿಲ್ಲ, ಅನುಭವಿಸಿ, ಮಥಿಸಿ ಬರೆದಿದ್ದೇನೆ, ಕೇವಲ ವೇದದ ಸಾರವಷ್ಟೇ ಎಲ್ಲರನ್ನೂ ನೇರವಾಗಿ ಆತ್ಮೋದ್ಧಾರಕ್ಕೆ ಹಚ್ಚುವುದಿಲ್ಲ, ಅದಕ್ಕೆ ’ಗುರುಬಲ’ವೂ ಬೇಕು, ನಮಸ್ಕಾರ.

  ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು

  ReplyDelete
 7. ಮೊದಲೇ ಒಂದು ವಿನಂತಿ ಮಾಡಿರುವೆ. ಈ ಚರ್ಚೆ ನಮ್ಮ ಸ್ನೇಹತ್ವಕ್ಕೆ ಧಕ್ಕೆಯುಂಟುಮಾಡದಿರಲಿ.ಆದರೆ ಮೌಢ್ಯವನ್ನು ಪೋಷಣೆಮಾಡುವಂತಹ ಕೆಲಸ ನಮ್ಮಿಂದಾಗಬಾರದು.ಬಾಬಾ ಅವರ ವಿಚಾರದಲ್ಲಿ ಸಾಕಷ್ಟು ಗೋಜಲುಗಳು ಗೊಂದಲಗಳು. ನನಗೆ ಆ ಬಗೆಗೆ ಪ್ರಸ್ತಾಪಮಾಡುವ ಇಷ್ಟವಿಲ್ಲ. ಪ್ರತಿಯೊಬ್ಬನಿಗೂ ಗುರು ಬೇಕೇ ಬೇಕು. ಎಂತಹ ಗುರು ಬೇಕು? ಆತ್ಮದ ಬಗ್ಗೆ ಅರಿವುಂಟುಮಾಡುವ ಆತ್ಮೋದ್ಧಾರದ ಮಾರ್ಗವನ್ನು ತೋರಿಸಬಲ್ಲ ಗುರು.ನನ್ನ ಲೌಕಿಕ ಸುಖಭೋಗವನ್ನು ಯಾವ ಶ್ರಮವಿಲ್ಲದೆ [ಲಾಟರಿ ಹೊಡೆದಂತೆ]ಕರುಣಿಸಬಲ್ಲ ಗುರು ಸಿಗುತ್ತಾರೆಂದರೆ ಜನರು ತಾತ್ರೆಗೆ ಸೇರಿದಂತೆ ಸೇರುತ್ತಾರೆ.ಮೊದಲೇ ಹೇಳುವುದಿಲ್ಲವೇ, ಜನ ಮರುಳೋ ಜಾತ್ರೆ ಮರುಳೋ?
  ಆದರೆ ಇತ್ತೀಚೆಗೆ ಧ್ಯಾನ, ಪ್ರಾಣಾಯಾಮ, ಯೋಗಾಸನದ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ಸ್ವಾಮೀಜಿ ರಾಮ್ ದೇವ್ ರಂತಹ ಅನೇಕ ಮಹಾತ್ಮರು ಕಾಣಸಿಗುತ್ತಾರೆ. ಅವರು ವೈಕ್ತಿಕ ಸಾಧನಾ ಮಾರ್ಗವನ್ನು ಹೇಳಿಕೊಡುವದರಜೊತೆಗೆ ದೇಶಕ್ಕಾಗಿ, ಸಮಾಜಕ್ಕಾಗಿ ಚಿಂತನೆಮಾಡುವಂತಹ, ದುರ್ವ್ಯಸನದಿಂದ ದೂರವಾಗುವಂತಹ ಕೆಲವು ಜಾಗೃತಿ ಕೆಲಸವನ್ನು ಮಾಡುತ್ತಿದ್ದಾರೆ. ಭಾರತಮಾತೆ ಬಂಜೆಯಲ್ಲ. ಇಂತಹ ಹಲವರು ಹಿಂದೂ ಇದ್ದರು. ಇಂದೂ ಇದ್ದಾರೆ. ಗುರುವನ್ನು ಹುಡುಕುವಾಗಲೂ ಸರಿಯಾದ ಗುರುವನ್ನುಹುಡುಕಿಕೊಳ್ಲಬೇಕು. ಇಲ್ಲದಿದ್ದರೆ ಅದೇ[ಗುರು?] ಎಂತಹ ಅಧ: ಪತನಕ್ಕೂ ಕೊಂಡೊಯ್ಯಬಲ್ಲ. ಈ ಬಗ್ಗೆ ನಿತ್ಯಾನಂದ ಮಹಾತ್ಮೆಯನ್ನು ನೀವೇ ಬರೆದಿದ್ದಿರಿ. ಆಗಲೂ ಕೂಡ ವಿಚಾರಮಾಡದೇ ಅವರ ಬಗ್ಗೆಯೂ ಚರ್ಚಿಸುವುದು ಬೇಡವೆಂದೇ ನನ್ನ ಅಭಿಮತವಾಗಿತ್ತು. ಈಗಲೂ ಅದೇ ನನ್ನ ಅಭಿಮತ.

  ReplyDelete
 8. ಸ್ವಾಮೀ ಶ್ರೀಧರರೇ, ನಾನು ವೈಯ್ಯಕ್ತಿಕವಾಗಿ ಯಾರಮೇಲೂ ಕೋಪ ಸಾಧಿಸಹೊರಟಿಲ್ಲ, ಬೆಂಗಳೂರಿನಲ್ಲಿ ಒಬ್ಬ ಗೌಡರ ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಗುಣವಾಗದ ಕಾಯಿಲೆ ಅಡರಿಕೊಂಡು ಬಹಳ ಪ್ರಯಾಸಪಡುತ್ತಿದ್ದರು, ಯಾರೋ ಹೇಳಿದರಂತೆ--ಶ್ರೀಧರ ಸ್ವಾಮಿಗಳು ಬಂದಿದ್ದಾರೆ, ಅವರನ್ನು ಕಾಣಿರಿ ಅಂತ, ಅಳುತ್ತ ಬಂದ ಇನ್ನೂ ಪರಿಚಯವೇ ಇರದ ವ್ಯಕ್ತಿಯನ್ನು ಸ್ವಾಮೀಜಿ ಸಂತೈಸಿದರು, ಸಮಸ್ಯೆ ಆಲಿಸಿದರು, ತೀರ್ಥಕೊಟ್ಟು ಕ್ಷಣಾರ್ಧದಲ್ಲಿ ಪರಿಹರಿಸಿದರು, ಅದಕ್ಕೆ ಪರ್ಯಾಯವಾಗಿ ಆತ ಭೂಮಿಯನ್ನು ದಾನವಾಗಿ ಆಶ್ರಮಕ್ಕೆ ನೀಡಿದ, ಎಂದಿಗೂ ಯಾರಲ್ಲೋ ಏನನ್ನೂ ಕೈಯ್ಯಲ್ಲಿ ಸ್ವತಃ ಪಡೆಯದ ಗುರುಗಳು ಅಂದು ಆತನ ಒತ್ತಾಯಕ್ಕೆ ಪ್ರೀತಿಗೆ ಮಣಿದು ಭೂದಾನವನ್ನು ಪಡೆದರು, ಬೆಂಗಳೂರಿನ ವಸಂತಪುರದಲ್ಲಿರುವ ಆ ಜಾಗದಲ್ಲಿ ಈಗ ಶ್ರೀಧರ ಪಾದುಕಾಶ್ರಮವಿದೆ.

  ನೀವು ಹೇಳಿದ ಹಾಗೇ ಕ್ಷಣದಲ್ಲಿ ಎಲ್ಲವೂ ನಡೆಯುವ ಹಾಗಿದ್ದರೆ ಮತ್ತೆ ಪಾಪ ಪುಣ್ಯಗಳ ಭಯವೇಕೆ, ಹಂಗೇಕೆ ಅಲ್ಲವೇ ? ಆದರೂ ಆರ್ತರ, ಪರಿಹಾರಬಯಸಿ ಅಸಹಾಯರಾಗಿ ಬಂದಿರುವ ಭಕ್ತರ ಮೊರೆಗೆ ಗುರುವಾದವನು ಸಾಂತ್ವನ ನೀಡುವುದು ಉಚ್ಛ ಸಂತರ-ಸಾಧಕರ ಕರ್ತವ್ಯ, ಅದನ್ನು ಅವರು ಮಾಡುತ್ತಾರೆ.

  ನಾನೆನೂ ಬಾಬಾ ಭಕ್ತನಾಗಿದ್ದೆ ಎಂದು ತಿಳಿಯಬೇಡಿ, ಅನಿಸಿದ್ದನ್ನು, ಕಂಡಿದ್ದನ್ನು ಹೇಳಲು ತೊಂದರೆಯಿಲ್ಲವಲ್ಲಾ ? ತಾವು ಸಕ್ಕರೆ ಪಟ್ಟಣದ ಅವಧ್ಹೂತ ಬಗ್ಗೆ ಮೂರು ನಾಲ್ಕು ಲೇಖನ ಬರೆದಿರಿ, ನಾವೆಲ್ಲಾ ಸ್ಪಂದಿಸಿದೆವು, ನಮಗೆ ಅವರ ಬಗ್ಗೆ ಗೊತ್ತು, ಈಗ ಹೇಳಿ ಅವರೂ ಹಲವಾರು ಜನರ ಸಮಸ್ಯೆಗಳಿಗೆಪರಿಹಾರ ನೀಡುತ್ತಿದ್ದರು, ಅದು ತಪ್ಪಾಗಿತ್ತೇ ?

  ಬಾಬಾ ಒಬ್ಬ ಅವಧೂತರು, ಅವರು ಕಾಣಿಕೆಯಾಗಿ ಬಂದ ಆಸ್ತಿಯನ್ನೆಲ್ಲಾ ತನ್ನ ವೈಯ್ಯಕ್ತಿಕ ಹೆಸರಿಗೆ ಬಳಸದೆ, ಅದಕ್ಕೊಂದು ವಿಶ್ವಸ್ಥ ಸಮಿತಿ ರಚಿಸಿ ಸೇವಾಕಾರ್ಯ ನಡೆಸಿದರು, ಸಮಸ್ಯೆ ಬಡವರಿಗೂ ಬಲ್ಲಿದರಿಗೂ ಇರುವಡು ಸಹಜವಾದುದರಿಂದ, ಪರಿಹಾರ ಬಯಸಿ ತನ್ನನ್ನು ನೆಚ್ಚಿಬಂದ ಭಕ್ತರಿಗೆ ಸನ್ಮಾರ್ಗ ಬೋಧಿಸಿದರು, ಅವರ ಕನ್ನಡದ ಪ್ರವಚನಗಳನ್ನು ಕೇಳಿ ಆಮೇಲೆ ಆ ಬಗ್ಗೆ ನಿಮಗೆ ತಿಳಿಯುತ್ತದೆ. ಯಾವ ಸನ್ಯಾಸಿಗೂ ಮೀರಿದ ಮಾತುಗಳವು, ಕೇವಲ ಆತ್ಮಜ್ಞಾನದಿಂದ ಹೊರಬರುವ ಅನುಭವಾಮೃತ. ಇಷ್ಟು ಸಾಕು, ನಿಮಗೆ ಈ ಲೇಖನ ಯಾರನ್ನಾದರೂ ವೇದಸುಧೆಯಿಂದ ವಿಮುಖರನ್ನಾಗಿಸುವ ಸಂಭವನೀಯತೆ ಕಂಡುಬಂದರೆ ಈ ಕ್ಷಣ ಅದನ್ನು ಅಳಿಸಿಬಿಡಿ, ಧನ್ಯವಾದ

  ReplyDelete
 9. ಚರ್ಚೆಗೆ ಎಡೆಮಾಡಿಕೊಟ್ಟ ನಿಮ್ಮ ಉತ್ತಮವಾದ ಲೇಖನವನ್ನು ಅಳಿಸುವುದೆಂದರೇನು? ಹೀಗೆಯೇ ಸಕ್ರಿಯವಾಗಿ ವೇದಸುಧೆಯನ್ನು ಮುನ್ನೆಡೆಸೋಣ. ಈ ಚರ್ಚೆಯಿಂದಾಗಿ ಹಲವರಿಗೆ ಉಪಯೋಗವಾಗಿದೆ ಎಂದು ಭಾವಿಸುವೆ. ನಮಸ್ತೆ.

  ReplyDelete
 10. ಇನ್ನೂ ಮುಂದುವರಿದು ಸ್ವಲ್ಪ ಹೇಳುತ್ತೇನೆ : ಆದ್ಯ ಶಂಕರಾಚಾರ್ಯ ಪೀಠದ ಹಿಂದಿನ ಒಬ್ಬ ಸಾಧಕ ಸ್ವಾಮಿಗಳು ಹೀಗೆಂದಿದ್ದಾರೆ " ಸಾಯಿಬಾಬಾ ಅವರಲ್ಲಿ ಯಾವುದೋ ತಪಸ್ವಿಯ / ಯೋಗಿಯ ಆತ್ಮ ಸೇರಿಕೊಂಡಿದೆ, ಬಹುಶಃ ಅದು ಅವರಿಗೆ ಚೇಳು ಕಡಿದ ಸಂದರ್ಭದಲ್ಲಿ ಪ್ರವೇಶವಾಗಿರಬಹುದು " -- ಇಷ್ಟೆಲ್ಲಾ ಬಹಳ ಹಿಂದೆಯೇ ಕೇಳಿದ್ದರೂ ಒಪ್ಪದ ಮನಸ್ಸು ನನ್ನದಾಗಿತ್ತು, ಆದರೆ ಅವರ ವೈಯ್ಯಕ್ತಿಕ ಆಹಾರ, ವ್ಯವಹಾರ ನೋಡಿದಾಗ ಅವಧೂತರಾದ ಅವರಿಗೆ ಕುಳಿತಲ್ಲೇ ಸಮಾಧಿ ಸ್ಥಿತಿ ಲಭಿಸುತ್ತಿತ್ತು, ಮತ್ತು ಲೌಕಿಕವಾಗಿ ಪಾದಕ್ಕೆ ಬಿದ್ದಿದ್ದ ಕೋಟ್ಯಂತರ ಧನ-ಕನಕವನ್ನು ಅವರ ಸಂಸ್ಥೆಯೊಂದನ್ನು ರೂಪಿಸಿ ಜನಸೇವೆಗೆ ಮೀಸಲಾಗಿರಿಸಿದರು, ಯಾವ ಮಠಮಾನ್ಯಗಳ ಹಾಗೆ ತಮ್ಮ ಜಾತ ಕುಟುಂಬದ ಸಂಪರ್ಕವಿರಿಸಿಕೊಂಡು ಅದನ್ನು ಬಳಸಿಕೊಳ್ಳಲಿಲ್ಲ, ಜನಿಸಿದ ಮನೆಯ ಪಕ್ಕದಲ್ಲಿಯೇ ಇದ್ದರೂ ಒಡಹುಟ್ಟಿದ ಜನರೊಟ್ಟಿಗೆ ಸಂಬಂಧವಿರಿಸಿಕೊಳ್ಳಲಿಲ್ಲ, ಎಲ್ಲಾ ಭಕ್ತರನ್ನು ಕಂಡಂತೆ ಅವರನ್ನೂ ಕಂಡರು, ತಮ್ಮನ ಮಗನನ್ನು ೨೦೧೦ ರಲ್ಲಿ ತಮ್ಮ ಗತಿಸಿದ ನಂತರ ಸಂಸ್ಥೆಗೆ ಸೇರಿಸಿಕೊಂಡರು- ಅದೂ ಕರಾರುಗಳಮೇಲೆ! ಹೀಗಾಗಿ ಒಬ್ಬ ಸಹಜ ಸಂತನಲ್ಲಿರಬೇಕಾದ ಎಲ್ಲಾ ಗುಣಗಳು ಅವರಲ್ಲಿದ್ದವು, ಆದರೆ ಫಲ- ಮಂತ್ರಾಕ್ಷತೆ ನೀಡುವ ಅಥವಾ ದೇವರನ್ನು ಇಟ್ಟು ಬಹಿರಂಗವಾಗಿ ಪೂಜಿಸುವ ಬದಲು ಅದನ್ನೆಲ್ಲಾ ಮನಸಪೂಜೆಯಲ್ಲೇ ನಡೆಸಿದರು, ಸಾಮ್ರಾಜ್ಯವೇ ಸ್ಥಾಪಿತವಾಗಿ ಬಂಗಾರದ ಪೀಠದಲ್ಲೇ ಕುಳಿತರೂ
  ಸ್ಥಿತಪ್ರಜ್ಞರಾಗಿ ಇರುತ್ತಿದ್ದರು, ಅನಿರೀಕ್ಷಿತವಾಗಿ 'ತಮ್ಮನ್ನೆಲ್ಲಾ ಎಲ್ಲಿ ಮಾತನಾಡಿಸುತ್ತಾರೆ ' ಎಂದು ಬಂದ ನೊಂದ ಭಕ್ತರಿಗೆ ದರ್ಶನದ ಸಾಲಿನಲ್ಲಿ ಮುನ್ನುಗ್ಗಿ ಬಂದು ತಲೆನೇವರಿಸಿದ ದಾಖಲೆಗಳು ಹಲವು, ಇವುಗಳನ್ನೆಲ್ಲಾ ಹೊರಗಿನವನಾಗಿ ನೋಡಿ ತುಲನೆಮಾಡಿ ಓಹೋ ನಾನು ತಪ್ಪುಮಾಡಿಬಿಟ್ಟೆ ಎಂದು ಮನ ಒಪ್ಪಿಕೊಂಡಾಗ ಬರೆದದ್ದೇ ಈ ಲೇಖನ, ಅವರ ದರ್ಶನ ಸಾಧ್ಯವಾಗಲಿಲ್ಲ, ಅವರೆಲ್ಲಿದ್ದರೂ ಅವರಲ್ಲಿ ಕ್ಷಮೆಯಾಚಿಸಿ ವಂದಿಸುತ್ತೇನೆ.

  ReplyDelete
 11. ಭಟ್ಟರೇ!
  ಅವರಿಗೆ, ಇವರಿಗೆ ಎಲ್ಲೋ ಏನೋ ಆಯಿತಂತೆ ಎಂಬ ವಿಚಾರವನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು, ದಯವಿಟ್ಟು ನಿಮ್ಮ ನೇರವಾದ First Hand ಅನುಭವವಿದ್ದರೆ ಅಷ್ಟನ್ನು ಮಾತ್ರ ಹೇಳಿ. ಅಂತೆ ಕಂತೆಗಳನ್ನು verify ಮಾಡುವುದು ಅಸಾಧ್ಯ/ಕಷ್ಟ ಸಾಧ್ಯ!
  ಗುರುಗಳಿಗೆ ಗುರು, ಪರಮ ಗುರು ಭಗವಂತನೊಬ್ಬನೇ! ಉಳಿದವರೆಲ್ಲರೂ ವಿದ್ಯಾರ್ಥಿಗಳೇ. ಹಿರಿಯ ವಿದ್ಯಾರ್ಥಿಗಳು ಕಿರಿಯರೊಂದಿಗೆ ತಮ್ಮ ಜ್ಞಾನ-ಅನುಭವವನ್ನು ಹಂಚಿಕೊಳ್ಳಬಹುದು. ಕಿರಿಯರು ಅವರನ್ನು ಗುರುವೆಂದೂ ಗುರುತಿಸಬಹುದು. ಆದರೆ, ನಿಜವಾದ ಸಜ್ಜನರು ತಮ್ಮನ್ನು ತಾವು ಗುರುವೆಂದು ಎಂದೂ ಒಪ್ಪುವುದಿಲ್ಲ!
  ಇನ್ನು ಪ್ರಕೃತಿ ನಿಯಮಗಳಗೆ, ಸೃಷ್ಟಿಕ್ರಮಕ್ಕೆ ವಿರುದ್ಧವಾಗಿ ಯಾರೂ ಎಲ್ಲೂ ಎಂದೂ ಮೀರಿ ವ್ಯವಹಾರ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದಾರೆಂದರೆ, ಆ ನಿಯಮಗಳನ್ನು `ನಿಯಮ'ಗಳೆಂದು ಕರೆಯುವುದಾದರೂ ಹೇಗೆ?! ಏಕೆ?!
  ಸತ್ಯಾನ್ವೇಷಣೆಗೆ ನಂಬಿಕೆಗಳು ಅಡ್ಡಬರಬಾರದಲ್ಲವೇ?!
  ಅಕಸ್ಮಾತ್ ನನ್ನ ಮಾತುಗಳು ತೀಕ್ಷ್ಣವೆಂದೆನಿಸಿದರೆ ಕ್ಷಮಿಸಿ ಮತ್ತು ಮರೆತುಬಿಡಿ.
  ಶ್ರೀಧರ್ ರವರು ಎಂದಂತೆ ನಮ್ಮ ಸ್ನೇಹಕ್ಕೆ, ಜಿಜ್ಞಾಸೆಗೆ ಅಡ್ಡಿ ಬರುವುದು ಬೇಡ!

  ReplyDelete
 12. ಸನ್ಮಾನ್ಯ ಶರ್ಮರೇ, ತಮಗೆ ಮೊದಲಾಗಿ ವಂದನೆಗಳು.

  ಲೌಕಿಕವಾಗಿ ಇಷ್ಟು ಬರೆಯಬಲ್ಲೆವಾದರೆ ಇದರ ಅರಿವು ಮೂಡಿಸಿದ್ದೂ ಗುರುವೇ. ಯಾವುದೇ ವಿದ್ಯೆಯನ್ನಾಗಲೀ ಸಾಧನೆಯನ್ನಾಗಲೀ ಕಲಿಯುವ ಸರಳಮಾರ್ಗ ಆ ಮಾರ್ಗದ ಸದ್ಗುರುವೊಬ್ಬನ ಶಿಷ್ಯತ್ವ ಹೊಂದುವುದಾಗಿದೆ. ವಿಜ್ಞಾನಿಗಳನೇಕರು ಹಿಂದಿನ ವಿಜ್ಞಾನಿಗಳು ಕಂಡುಹಿಡಿದ ಸೂತ್ರಗಳನ್ನು ಬಳಸಿ ಮತ್ತೇನನ್ನೋ ಹೊಸದನ್ನು ಕಾಣಲು ತೊಡಗುತ್ತಾರೆ. ಅಂದರೆ ನಾವು ಇನ್ನೂ ಏರಿರದ ಒಂದು ಹಂತವನ್ನು ಅದಾಗಲೇ ಏರಿದ ಕೆಲವರು ಇರುತ್ತಾರೆ ಎಂಬುದು ಸ್ಪಷ್ಟವಷ್ಟೇ? ತಾನೇ ಗುರು ತನ್ನನ್ನೇ ಪೂಜಿಸಿ ಎಂದು ಸಾಯಿಬಾಬಾ ಹೇಳಲಿಲ್ಲ, ತನ್ನನ್ನು ಪೂಜಿಸುವ ಬದಲು ದೈವಧ್ಯಾನಮಾಡಿ ಎಂದೇ ಅವರು ಹೇಳಿದ್ದು, ಆದರೆ ಜನತೆ ಅವರನ್ನೇ ಪೂಜಿಸಿತು-ಇದು ಅವರಲ್ಲಿದ್ದ ಅದ್ಭುತ ಚೈತನ್ಯಕ್ಕೆ ಸಂದ ಪೂಜೆ. ’ಪರಿಪರಿಯ ರೂಪದಲಿ ಚಲಿಸುತಿರೆ ಪರಮಾತ್ಮ .......’ ಎಂದು ಮಹಾತ್ಮ ಡೀವೀಜಿಯವರು ಕಗ್ಗದಲ್ಲಿ ಹೇಳಿದ್ದನ್ನು ತಾವು ಓದಿದ್ದೀರಿ. ಹಲವು ಬಾರಿ ಜಗನ್ನಿಯಾಮಕ ಶಕ್ತಿ ಮಾನವರೂಪ ಧಾರಣೆಮಾಡುತ್ತದೆ, ಇದನ್ನು ನೀವು ಒಪ್ಪುತೀರೋ ಬಿಡುತ್ತೀರೋ ಅದು ನಿಮಗೆ ಬಿಟ್ಟಿದ್ದು; ನಾನಂತೂ ಇದನ್ನು ತ್ರಿಕರಣ ಪೂರ್ವಕ ಒಪ್ಪುತ್ತೇನೆ.

  ಅಂತೆಕಂತೆ ಎನ್ನುತೀರಿ-- ನಮ್ಮ ಭಗವನ್ ಶ್ರೀಧರರು ಮೈಸೂರಿನಲ್ಲಿ ಏಕಕಾಲಕ್ಕೆ ಎರಡು ವೇದಿಕೆಗಳಲ್ಲಿ ಪ್ರವಚನ ಕೊಟ್ಟ ದಾಖಲೆ ಇದೆ! ಇಲ್ಲಿ ಬಾಬಾರ ಬಗ್ಗೆ ಹಿರಿಯ ಲೇಖಕಿ ಪ್ರೇಮಾಭಟ್ ಅವರ ಅನುಭವವೇ ಬೇರೆ- ತಡವಾಗಿ ಮಕ್ಕಳಾಗಿದ್ದು, ಸಿಸೇರಿಯನ್ ಅಂತ ಸರಿಯಾದ ಯಾವ ವ್ಯವಸ್ಥೆಯೂ ಇಲ್ಲದ ಆಸ್ಪತ್ರೆಯಲ್ಲಿ ಹೆದರಿ ಮಲಗಿದ್ದಾಗ ವಿದ್ಯುತ್ತೂ ಹೋಗಿ ಸಮಸ್ಯೆಯಾದಾಗ ಆಕೆಯ ಪ್ರಾರ್ಥನೆಗೆ ಬಾಬಾ ಸ್ಪಂದಿಸಿದ್ದು-ನಂತರ ವೈದ್ಯರು ಅವರಿಗೆ ಸಿಸೇರಿಯನ್ ಮಾಡುವ ಮೊದಲೇ ಸಹಜವಾಗಿ ಮಗು ಜನಿಸಿದ್ದು--ಇದೆಲ್ಲವನ್ನೂ ಅವರು ದಿನಪತ್ರಿಕೆಯೊಂದರಲ್ಲಿ ಹೇಳಿಕೊಂಡು ನುಡಿನಮನ ಸಲ್ಲಿಸಿದ್ದಾರೆ. ಇಂತಹ ಅಸಂಖ್ಯ ದಾಖಲೆಗಳು, ಸಾಕ್ಷಿಗಳು ಜೀವಂತವಿರುವಾಗ ಎಲ್ಲವೂ ಅಂತೆಕಂತೆಗಳ ಸಂತೆ ಎನ್ನಲು ಸಾಧ್ಯವೇ ?

  ವಿಚಾರಮಾಡಿ, ಏನೂ ಇಲ್ಲದ ಹುತ್ತಗಳೇ ತುಂಬಿರುವ ಬರಡುಭೂಮಿಯಲ್ಲಿ, ಬಿರುಬಿಸಿಲ ನೆಲದಲ್ಲಿ ಗೊಲ್ಲರ ಹಳ್ಳಿಯಲ್ಲಿ ಜನಿಸಿದ ವ್ಯಕ್ತಿಯೊಬ್ಬ ಕೇವಲ ೮೫ ವಯಸ್ಸಿನ ಜೀವಮಾನದಲ್ಲಿ ನಭೂತೋ ನಭವಿಷ್ಯತಿ ಎಂಬಷ್ಟು ಸಾಧನೆಮಾಡುವುದು ಸುಲಭವೇ ? ಏನೂ ಇಲ್ಲದೇ ಬರಿದೇ ಬೊಗಳೆಬಿಡುವ ಹುಡುಗನಾದರೆ ವಿಜ್ಞಾನಿಗಳೂ ತತ್ವಜ್ಞಾನಿಗಳೂ ಮಹಮಹಾ ವಿದ್ವಾಂಸರೂ ಪಂಡಿತರೂ ಶರಣು ಬರುತ್ತಿದ್ದರೇ? ರಾಜಕಾರಣಿಗಳನ್ನು ಬಿಡಿ-ಅವರದ್ದು ಎಲ್ಲಿದ್ದರೂ ವೋಟ್‍ಬ್ಯಾಂಕ್ ವ್ಯವಾಹಾರ, ಆದರೆ ಸಂಗೀತ-ಸಾಹಿತ್ಯ-ಕಲೆಗಳಲ್ಲಿ ನುರಿತ ಹಲವು ಶೇಷ್ಠರು ಅಲ್ಲಿಗೆ ಬರಲು ಯಾವುದೇ ಕಾರಣವಿರಲಿಲ್ಲವೇ ? ಇನ್ನೊಬ್ಬರ ಮೆದುಳಿನಲ್ಲಿ ಉದಯಿಸುವ ಮಾನಸ ತರಂಗಗಳನ್ನು ಓದಿ ಅನಿರೀಕ್ಷಿತವಾಗಿ ಅದನ್ನು ಬಂದ ಶಿಷ್ಯರಾದ ಅವರಲ್ಲಿ ಪ್ರಸ್ತುತಪಡಿಸಿದರೆ ಅದಕ್ಕೇನನ್ನುತ್ತೀರಿ ?

  ಭೌತಿಕ ದೇಹದ ಬಗ್ಗೆ ಬಿಡಿ-ಅದರ ಬಗ್ಗೆ ಅರವಿಂದರು ಹೇಳಿದ್ದೂ ಸುಳ್ಳಾಗಿಹೋಗಿದೆ, ಮಹರ್ಷಿಗಳಾದ ರಮಣರಿಗೇ ಕ್ಯಾನ್ಸರ್ ಆಗಿತ್ತು-ಹುಳಗಳು ಆಗಿದ್ದವು, ರಾಮಕೃಷ್ಣ ಪರಮಹಂಸರಿಗೂ ಕೂಡ ಕ್ಯಾನ್ಸರ್ ಆಗಿತ್ತು. ಜಗದ್ಗುರುವಾದ ಶ್ರೀಕೃಷ್ಣನಿಗೆ ಕಾಲಿಗೆ ಬಾಣ ತಗುಲಿ ಸಾಯುವ ಸ್ಥಿತಿ ಗೊತ್ತಿರಲಿಲ್ಲ! ರಾಮನ ಇಹದ ಕರ್ತವ್ಯ ಮುಗಿಯಿತು ಎನ್ನಲು ಕಾಲ ಬಂದಿದ್ದ! ಹೀಗೇ ಬಾಬಾ ಕೂಡ ೯೬ಬ್ ವರ್ಷ ಬದುಕುತ್ತೇನೆ ಎಂದಿದ್ದಿರಬಹುದು. ಆದರೆ ಅದು ಮುಖ್ಯವಲ್ಲ, ಅವರ ಸಾಧನೆ ಮುಖ್ಯ. ಇಡೀ ಭಾರತದಲ್ಲಿ ಮಂದಿರ-ಮಸೀದಿ-ಮಠ-ಮಾನ್ಯಗಳಲ್ಲಿ ಕಾಣಿಕೆ ಹುಂಡಿ ಇರುವುದನ್ನು ಕಾಣುತ್ತೇವೆ: ಬಾಬಾ ಆಶ್ರಮದಲ್ಲಿ ಎಲ್ಲಿಯೂ ಕಾಣಿಕೆ ಹುಂಡಿ ಇಲ್ಲ. ಅವರು ಪಾದಪೂಜೆ ಮುಂತಾದ ಯಾವ ಕಾರ್ಯವನ್ನೂ ಇಟ್ಟುಗೊಳ್ಳಲಿಲ್ಲ. ಮೊದಲೇ ಹೇಳಿದಹಾಗೇ ಮಂತ್ರಾಕ್ಷತೆ ಎಂಬ ಮಾತೇ ಇಲ್ಲ. ಭಕ್ತರಿಗೆ ಭಸ್ಮ ಇನ್ನೂ ಹಲವು ಲೌಕಿಕವಾಸನೆ ಜಾಸ್ತಿ ಉಳ್ಳವರಿಗೆ ವಾಚು-ಉಂಗುರ ಇತ್ಯಾದಿ ಗಿಫ್ಟು. ಜಗತ್ತಿನ ಯಾವ ಜಾದೂಗಾರನೂ ಕೊಟ್ಟದ್ದನ್ನು ಶಾಶ್ವತವಾಗಿ ಅವರಿಗೇ ಉಳಿಯುವಂತೆಮಾಡುವ ಜಾದೂ-ಪವಾಡ ಮಾಡಲಿಲ್ಲ; ಬಾಬಾ ಕೊಟ್ಟ ಸರ, ಉಂಗುರ, ವಾಚು ಇವುಗಳನ್ನು ಮರಳಿ ಪಡೆಯಲಿಲ್ಲ ಅಥವಾ ಅವು ಮಾಯವಾಗಲಿಲ್ಲ! ಹಾಗಂತ ಬಾಬಾ ಅದನ್ನು ಎಲ್ಲಿಂದಲೋ ಲಪಟಾಯಿಸಲೂ ಇಲ್ಲ! ಹಾಗಾದರೆ ಅವೆಲ್ಲಾ ಎಲ್ಲಿಂದ ಬಂದವು? ನಿಲುವಂಗಿಯ ತೋಳಿನಲ್ಲಿ ಒಂದನ್ನೋ ಎರಡನ್ನೋ ಅಂಟಿಸಿ ಜಾದುಮಾಡಿದರು ಎನ್ನೋಣವೆಂದರೆ ಕೆಲವೊಮ್ಮೆ ೮-೧೦ ಭಕ್ತರಿಗೆ ಏನೇನನ್ನೋ ಸೃಜಿಸಿಕೊಡುತ್ತಿದ್ದರು! ಹಾಗಾದರೆ ಕೃಶಕಾಯರಾದ ಅವರ ತೋಳುಗಳ ಬದಿಯಲ್ಲಿ ಅವುಗಳನ್ನು ಅಡಗಿಸಿ ಇಟ್ಟುಕೊಂಡಿದ್ದರೆ ಒಮ್ಮೆಯಾದರೂ ಎಲ್ಲಾದರೂ ಅಲ್ಲಾಡಿದಾಗ ಗೊತ್ತಾಗಬೇಕಾಗಿತ್ತಲ್ಲಾ ?

  ReplyDelete
 13. CONTD......

  ನಿಮ್ಮ ಮಾತನ್ನು ಒಪ್ಪೋಣ, ದೇವರು ಒಬ್ಬನೇ ಗುರು, ಆದರೆ ಅದೇ ದೇವರು ತನ್ನನ್ನೇ ತಾನು ಸೃಜಿಸಿಕೊಳ್ಳುತ್ತೇನೆ ಎಂದಿದನ್ನು ನಂಬುವ, ಹುಡುಕುವ, ಆಚರಿಸುವ, ಆರಾಧಿಸುವ ಗುಂಪಿಗೆ ಸೇರಿರುವ ಜನರಲ್ಲಿ ನಾನೂ ಒಬ್ಬ. ಯಾವ ದೇವ ವೇದವನ್ನು ಸೃಷ್ಟಿಸಿದನೋ ಅದೇ ದೇವ ತನ್ನನ್ನೂ ಹುಟ್ಟಿಸಿಕೊಳ್ಳುತ್ತಾನೆ-ಹಲವು ರೂಪಗಳಲ್ಲಿ, ವೈವಿಧ್ಯಗಳಲ್ಲಿ. ಇದಕ್ಕೊಂದು ಅದ್ಭುತ ನಿದರ್ಶನ ಶ್ರೀ ಆದಿಶಂಕರರು. ೩೨ ವಯಸ್ಸಿನೊಳಗೆ [ಇಂದಿನ ಹುಡುಗರು ಲವ್ವು ಲವ್ವು ಎಂದು ಕುಣಿಯುವ ವಯಸ್ಸಿನೊಳಗೆ ] ಪ್ರಪಂಚಕ್ಕೇ ದಾರಿದೀಪವಾಗಬಲ್ಲ ಪಥವೊಂದನ್ನು ತೋರಿಸಿ, ಯಾವುದೇ ವಾಹನ ಸೌಕರ್ಯಗಳಿರದಿದ್ದ ಆ ಕಾಲಘಟ್ಟದಲ್ಲಿ ಆಸೇತು ಹಿಮಾಲಯ ಪರ್ಯಂತ ಹಲವುಸಾಅರಿ ಉಪಕ್ರಮಿಸಿ, ೪ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ, ಆಶುಕವಿತ್ವದಿಂದ ಹಲವು ಸ್ತುತಿಗೀತೆಗಳು, ಶ್ಲೋಕಗಳು, ಭಾಷ್ಯಗಳನ್ನು ಬರೆದು ’ಇದಮಿತ್ಥಂ’ ಎಂದು ತೋರಿಸಿ ’ಅಹಂ ಬ್ರಹ್ಮಾಸ್ಮಿ’ ಎನ್ನುವುದನ್ನು ಹೀಗೆ ಅನುಭವಿಸಿ ಎಂದರು. ಇವತ್ತಿನ ದಿನಗಳಲ್ಲಾದರೆ ವಿಜ್ಞಾನಿಗಳು ಅವರಿಗೂ ಪವಾಡಪುರುಷ ಎನ್ನುತ್ತಿದ್ದರೇನೋ! ಕೇವಲ ೩೨ ವರ್ಷಗಳಲ್ಲಿ ಇಷ್ಟೆಲ್ಲಾ ಮಾಡಲು ಸಾಧ್ಯವೇ ?

  ಹೀಗಾಗಿ ನನ್ನ ನಂಬಿಕೆಗೂ ನನ್ನ-ನಿಮ್ಮೆಲ್ಲರ ಸ್ನೇಹಕ್ಕೂ ಯಾವುದೇ ವೈರುಧ್ಯವಿಲ್ಲ. ಜಿಜ್ಞಾಸೆಯ ಮಾರ್ಗದಲ್ಲಿ ಹಲವು ಪಾವಟಿಗೆಗಳನ್ನು ಹತ್ತುತ್ತಾ ಹೋಗಬೇಕಾಗುತ್ತದೆ. ಕಂಡಿದ್ದು ಅನುಭವಿಸಿದ್ದು ಎಂದೂ ಸುಳ್ಳಾಗಲು ಸಾಧ್ಯವಿಲ್ಲ. ತಾವರೆಯ ಎಲೆ ನೀರಲ್ಲೇ ಇದ್ದರೂ ಮೇಲೆಬಿದ್ದ ನೀರನ್ನು ಸ್ವೀಕರಿಸದೇ ಹೇಗಿರುವುದೋ ಹಾಗೇ ಕೋಟಿಗಟ್ಟಲೆ ಧನಕನಕದ ರಾಶಿ ಪಾದಕ್ಕೆ ಹರಿದುಬಂದರೂ ಅದನ್ನೆಲ್ಲಾ ಕೇವಲ ಸಮಾಜದ ಸೇವೆಗಾಗಿ ಸಮಿತಿಯೊಂದನ್ನು ರಚಿಸಿ ತಾನು ನೆಪಮಾತ್ರಕ್ಕೆ ಎಂದುಕೊಂಡು ’ನನ್ನ ಜೀವನವೇ ನನ್ನ ಸಂದೇಶ’ ಎಂದ ಬಾಬಾ ನಿಜಕ್ಕೂ ಹಾಗೇ ಅಲ್ಲವೇ ? ಇಷ್ಟು ಸಾಕು, ನಮಸ್ಕಾರ.

  ReplyDelete
 14. ಸಾಯಿ ಬಾಬಾರ ಬಗ್ಗೆ ಅತಿ ಹೆಚ್ಚಾದ ಗೌರವವನ್ನು ಕೊಟ್ಟಿದ್ದೀರಿ, ಅವರು ಅರ್ಹರೇ ಎಂಬುದೇ ನಮ್ಮನು ಕಾಡುವ ಪ್ರೆಶ್ನೆ. ಉದಾಹರಣೆಗೆ ಸಿಂಹಳದಿಂದ ಬಂದ ಕೊವೂರ್ ಆಗಲಿ ಎಚ್. ನರಶಿಂಹಯ್ಯನವರಾಗಲೀ ಎಷ್ಟು ಕೇಳಿದರೂ ಮಾತನಾಡಲು ಅವಕಾಶ ಕೊಡಲಿಲ್ಲ. ಬೇಡವೇ ಬೇಡ, ಜೋತೆಗೆ ಅವರ ಆನುಯಾಯಿಗಳಿಗೆ ಒಂದು ಕುಂಬಳಕಾಯಿಯನ್ನು ಕೊಡಲೀ ಸಾಕು ನಾನು ನಿಮಗೆ ಶರಣು ಎಂದರು. ಆತ ಅದರಬಗ್ಗೆ ಏನೂ ಪ್ರತಿಕ್ರಿಯೇಯಿಲ್ಲ ಕಾರಣ, ಎಲ್ಲವೂ ಮಾಯಜಾಲ, ಮೋಸ, ಡಗಲ್‍ಬಾಜಿ, ತಂತ್ರ, ಜಾಧು, ಹೀಗೆ ಹೇಳುತ್ತಲೇ ಹೋಗಬಹುದು. ನಮ್ಮಜನ ಏಂದೂ ಬುದ್ಧಿವಂತರಾಗುವರೂ ಅರಿಯದಾಗಿದೆ.

  ReplyDelete