Pages

Thursday, April 14, 2011

ಇಷ್ಟುದಿನ ನೆಚ್ಚಿನಂಬಿ


ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾ ರಮೇಶ್

   (Link)

ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

6 comments:

  1. ಪ್ರಿಯ ಶ್ರೀಧರ್, ನಮಗೆ ಇಂತಹ ಚಿಂತನೆಗಳು ಚಿಕ್ಕ ವಯಸ್ಸಿನಲ್ಲಿ ಬರುವುದಿಲ್ಲ. ಅಗ 'ಏನೋ ಮಾಡಿಬಿಡಬಹುದು, ಬದಲಾವಣೆ ತರಬಹುದು' ಎಂಬ ಉತ್ಸಾಹವಿರುತ್ತದೆ. ಬದಲಾವಣೆ ಆಗುವುದು, ಆಗಬೇಕಿರುವುದು ನಮ್ಮಲ್ಲಿ ಮಾತ್ರ ಎಂಬ ತಿಳುವಳಿಕೆ ತಡವಾಗಿ ಅರಿವಾಗುತ್ತದೆ ಎಂಬುದು ನನ್ನ ಅನುಭವ.ಇದನ್ನೇ ನಿಮ್ಮ ಸುಂದರ ರಚನೆ ಹೊರಗೆಡವುತ್ತಿದೆ. ಚೆನ್ನಾಗಿದೆ.

    ReplyDelete
  2. ಶ್ರೀಧರ್ ಸಾಹೇಬರೇ, ಹಾಡನ್ನು ಅನುಭವಿಸುತ್ತಲೇ ದಾಸರ 'ಇಷ್ಟುದಿನ ಈ ವೈಕುಂಠ' ಎಂಬ ಹಾಡಿನ ನೆನಪು ಬಂತು, ಚೆನ್ನಾಗಿದೆ, ಧನ್ಯವಾದಗಳು

    ReplyDelete
  3. ಸುಂದರ ರಚನೆ. 'ನಿನ್ನ ನೀನು ಮರೆತರೇನು ಸುಖವಿದೇ' ಅಲ್ಲವೇ?

    ReplyDelete
  4. ಆತ್ಮೀಯ ನಾಗರಾಜ್, ಸುರೇಶ್ ಮತ್ತು ಭಟ್ಟರೇ,
    ಮೊನ್ನೆ ಸುರೇಶರ ಬ್ಲಾಗ್ ನಲ್ಲಿ ಒಂದು ಲೇಖನ ಓದುತ್ತಿದ್ದಾಗ ನನ್ನ ಮನದಲ್ಲಿ ಮೂಡಿದ ಸಾಲುಗಳಿವು. ಅದಕ್ಕಾಗಿ ಕವಿ ಸುರೇಶರಿಗೆ ಮೊದಲು ನಾನು ಕೃತಜ್ಞ.ಭಾವನೆಗಳಿಗೆ ಅಕ್ಷರ ಕೊಡುವ ಪುಟ್ಟ ಪ್ರಯತ್ನ ಮಾಡಿದೆನಷ್ಟೆ.ಅದಕ್ಕೆ ಸೋದರೀ ಲಲಿತಾ ಧ್ವನಿ ಕೊಟ್ಟಿರುವುದರಿಂದ ನಿಮ್ಮಗಳ ಮೆಚ್ಚುಗೆ ಪಡೆಯಿತು.ಅಷ್ಟೆ. ಇದರಲ್ಲಿ ನನ್ನದೇನಿದೆ ಹೇಳಿ. ಮೆಚ್ಚುಗೆ ವ್ಯಕ್ತ ಪಡಿಸಿದ ನಿಮ್ಮೆಲ್ಲರಿಗೂ ಹಾಡನ್ನು ಆಲಿಸಿದ ವೇದಸುಧೆಯ ಎಲ್ಲಾ ಅಭಿಮಾನಿಗಳಿಗೂ ವಂದನೆಗಳು.

    ReplyDelete
  5. ಈ ಮಾನವ ಜೀವನದ ಉದ್ದೇಶ ಪ್ರಾಣಿಗಳಂತೆ ನಿದ್ರಾಹಾರ ಭಯಮೈಥುನಗಳಷ್ಟೇನೋ ಅಥವಾ ಇನ್ನೂ ಏನಾದರೂ ಇದೆಯೋ ಎಂಬ ಹುಡುಕುವಿಕೆ, ಸರಿಯುತ್ತರ ಪಡೆಯುವಿಕೆಯೇ ಆತ್ಮಚಿಂತನೆ. ಅದಕ್ಕೆ ಪ್ರೇರಣೆಯನ್ನು ನೀಡುವ ಇಂತಹ ಗೇಯ ಚಿಂತನಾ ಲಹರಿಗಳು ಬೇಕೂ ಬೇಕು!

    ReplyDelete
  6. [ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು]
    ಎಂಬ ಒಂದು ಸಾಲಿಗೆ ನೀವು ಆತ್ಮ ಚಿಂತನೆಯನ್ನು ಬಲು ಸರಳವಾಗಿ ಹೇಳಿ ಹಾಡಿನ ಘನತೆ ಹೆಚ್ಚಿಸಿದಿರಿ.ಈಗ ನನ್ನ ಚಿಕ್ಕ ಪ್ರಯತ್ನವು ಸಾರ್ಥಕವಾಯ್ತು.ನನ್ನಲ್ಲಿ ಒಂದಿಷ್ಟು ಇಂತಹಾ ಚಿಂತನೆಗಳು ಮೂಡುತ್ತಿವೆ ಎಂದರೆ ಅದರಹಿಂದೆ ನೀವಿದ್ದೀರೆಂದೇ ಅರ್ಥ.ಮಾತಿನಲ್ಲಿ ಕೃತಜ್ಞತೆ ಹೇಗೆ ಹೇಳಲಿ?

    ReplyDelete