Pages

Monday, August 1, 2011

ವಿವೇಕ ಚೂಡಾಮಣಿ ಭಾಗ -೫

ಗ್ರಂಥದ ಮುಂದುವರಿದ ಭಾಗ

पठंतु शास्त्राणि यजंतु देवान्
कुर्वंतु कर्माणि भजंतु देवताः ।
आत्मैक्य बोधेन विना विमुक्ति-
र्न सिध्यति ब्रह्मशतांतरेपि ॥६॥


ಪಠಂತು ಶಾಸ್ತ್ರಾಣಿ ಯಜಂತು
ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ|
ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ-
-ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬||

ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ.

ಪಠಂತು ಶಾಸ್ತ್ರಾಣಿ (=ಶಾಸ್ತ್ರಗಳನ್ನು ಓದುವುದು), ಯಜಂತು ದೇವಾನ್ (=ದೇವತೆಗಳನ್ನು ಪೂಜಿಸುವುದು)
ಕುರ್ವಂತು ಕರ್ಮಾಣಿ (=ಕರ್ಮಗಳನ್ನು ಮಾಡುವುದು), ಭಜಂತು ದೇವತಾ: (=ದೇವತೆಗಳನ್ನು ಸ್ತುತಿಸುವುದು)
ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ (= ಆತ್ಮಜ್ಞಾನ(ಬ್ರಹ್ಮ ಸಾಕ್ಷಾತ್ಕಾರೆ) ವಿಲ್ಲದೆ ಮುಕ್ತಿಯಿಲ್ಲ)
ನ ಸಿಧ್ಯತಿ ಬ್ರಹ್ಮ ಶತಾಂತರೇಪಿ (= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು)

"ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ" ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ. ಹಾಗಾದರೆ ಮುಕ್ತಿಯ ದಾರಿ ಯಾವುದು ? ಈ ಚಿಂತೆ-ಕೋಟಲೆಗಳಿಂದ ಬಿಡುಗಡೆ ಎಂತು ?.
ತನ್ನೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಚಿಂತನೆಗೆ ಒಡ್ಡಿಕೊಳ್ಳದೆ ಇದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದರೂ (ಅಷ್ಟು ಅವಧಿ ಕಳೆದರೂ) ಮೋಕ್ಷ ಅಥವಾ ಮುಮುಕ್ಷುತ್ವವು ದೊರಕಲಾರದು ಎಂದು ಹೇಳುತ್ತಾರೆ.
ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ ಇದೆಲ್ಲಾ ಬಳಕೆಗೆ ಬಾರದ್ದೇ ? ವ್ಯರ್ಥವೇ ? ಇದನ್ನೆಲ್ಲಾ ಮಾಡುವುದಾದರೂ ಏಕೆ? ಎಂಬ ಪ್ರಶ್ನೆ ಏಳುವುದು ಸಹಜ.
ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ನೆಮ್ಮದಿಯ ಅಕೌಂಟಿನಲ್ಲಿ ಜಮೆಯಾಗುವ ಡಿಪಾಸಿಟ್ಟುಗಳು !. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳನ್ನು ಬಿಟ್ಟು ಬಿಡೋಣ ಎಂದರೆ, ಅವನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ !. ಕರ್ಮಗಳಿಂದ ದೊರೆಯುವ ಫಲವು ಮಾತ್ರ ಗೌಣವಾದುದು. ’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದಲ್ಲ. ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ.
ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಸಾಧನೆಗೆ ಸಮಯವಾದರೂ ಎಲ್ಲಿದೆ? ಕರ್ಮಗಳನ್ನಾದರೂ ಹೇಗೋ ಆಚರಿಸಬಹುದು, ಜ್ಞಾನಮಾರ್ಗಕ್ಕೆ ಅವಕಾಶವಾಗುವುದು ಕಷ್ಟವಲ್ಲವೆ ? ಕರ್ಮ-ಜ್ಞಾನಗಳ ಅ ಆ ಇ ಈ ಗಳೂ ಗೊತ್ತಿರದವರು ಆತ್ಮಜ್ಞಾನವನ್ನು ಸಾಧಿಸಲು ಸಾಧ್ಯವೆ ? ಎಂಬ ಪ್ರಶ್ನೆಗಳು ಏಳುತ್ತದೆ.
ಬಿ.ಎ. ಮುಗಿಸಿದ ನಂತರವಷ್ಟೇ ಎಂ.ಎ. ಗೆ ಹೋಗಬಹುದೇ ಹೊರತು ಒಂದನೇ ತರಗತಿಯಿಂದ ನೇರವಾಗಿ ಎಂ.ಎ. ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಾಧನೆ ಎನ್ನುವುದು ಬೇಕಾಗುತ್ತದೆ.
"ಜಟ್ಟಿ ಕಾಳಗದಿ ಸೋತೊಡೇನಾಯ್ತು
ಪಟ್ಟು ವರಸೆಗಳೆಲ್ಲಾ ವಿಫಲವೆನ್ನುವೆಯಾ?
ಮುಟ್ಟಿ ನೋಡವನ ಮೈ ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿ ಫಲ " ಎನ್ನುವ ವಾಕ್ಯವನ್ನು ನಾವು ಬಹುವಾಗಿ ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳನ್ನು ಹೀಗೇ ಹೇಳಬೇಕಾಗುತ್ತದೆ.
’ಕೊಳೆತ ಹಣ್ಣನ್ನು ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲಾ’ ಎಂದರೆ ಆಗೊಮ್ಮೆ ಈಗೊಮ್ಮೆ ರುಚಿ ನೋಡುವ ಮನಸಾಗುತ್ತದೆ. ’ತಿಂದರೆ ಸತ್ತೇ ಹೋಗುತ್ತಿಯಾ’ ಎಂದಾಗ ಕೊಂಚ ಗಂಭೀರತೆ ಬರುತ್ತದೆ. ಕರ್ಮ-ಜ್ಞಾನಗಳ ವಿಚಾರವೂ ಹಾಗೆಯೇ. ನಾವು ಆಚರಿಸುವ ಯಾವ ಕರ್ಮಗಳೂ ವ್ಯರ್ಥವಾಗುವುದಿಲ್ಲ, ಅವೆಲ್ಲವೂ ಜ್ಞಾನ ಮಾರ್ಗದ ಮೆಟ್ಟಿಲುಗಳು. ಸಂಸಾರಿಗಳಿಗೆ ಲೌಕಿಕರಿಗೆ {ಪ್ರವೃತ್ತಿ ಧರ್ಮ‍(೧)} ಕರ್ಮಕ್ಕೆ ಸದಾ ಅವಕಾಶವಿದೆ, ಆದರೆ ಸನ್ಯಾಸಿಗಳಿಗೆ, ವಿರಾಗಿಗಳಿಗೆ {ನಿವೃತ್ತಿ ಧರ್ಮ(೧)} ಕರ್ಮದ ಗೊಡವೆಯೇ ಇಲ್ಲದವರಿಗೆ ಬಿಡುಗಡೆ ಹೇಗೆ ? . ಪ್ರವೃತ್ತಿ-ನಿವೃತ್ತಿ ಧರ್ಮಗಳನ್ನು ಎಷ್ಟೇ ಆಚರಿಸಿದರೂ ’ಆತ್ಮೈಕ ಜ್ಞಾನ’ ಲಭ್ಯವಾಗದೆ ಮುಮುಕ್ಷುತ್ವವಿಲ್ಲ ಎಂಬ ಧೀರವಾದ ಮಾತನ್ನು ಶ್ರೀ ಶಂಕರರು ಹೇಳುತ್ತಾರೆ.
-------------------------------------------------------

ಗ್ರಂಥದ ಮುಂದಿನ ಸೂಕ್ತಿಯನ್ನು ಗಮನಿಸೋಣ

अम्रुतत्वस्य नाशास्ति वित्तेनेत्येव हि श्रुतिः ।
ब्रवीति कर्मणो मुक्तेः अहेतुत्वं स्पुटं यतः ॥७॥


ಅಮೃತತ್ವಸ್ವ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ | (=ವಿತ್ತ ಅಥವಾ ಸಂಪತ್ತಿನಿಂದ ಅಮೃತತ್ವವು(ಮುಕ್ತಿಯು) ದೊರಕದು)
ಬ್ರವೀತಿ ಕರ್ಮಣೋ ಮುಕ್ತೇಃ ಅಹೇತುತ್ವಂ ಸ್ಪುಟಂ ಯತಃ||೭|| (= ಕರ್ಮದಿಂದ ಮುಕ್ತಿಯಿಲ್ಲ ಎಂಬುದು ಸ್ಪಷ್ಟವಾದುದು)

ನಾವು ಲೌಕಿಕ ಕರ್ಮಗಳನ್ನು ಅನುಸರಿಸಿದಾಗ ಅದರಿಂದ ಸಂಪತ್ತಿನ ಅಥವಾ ದ್ರವ್ಯದ ಲಾಭವು ನಮಗೆ ಬರುತ್ತದೆ. ಪರೋಪಕಾರವು ಒಳ್ಳೆಯ ಕಾರ್ಯವೇ ಆಗಿದ್ದರೂ ಅಂತಹ ಕಾರ್ಯಕ್ಕೆ ಪ್ರತಿಫಲವನ್ನು ಪಡೆದಾಗ ಆ ಕರ್ಮವು ನೆಮ್ಮದಿಯ ಮಾರ್ಗಕ್ಕೆ ಅಡಾಚಣೆಯಾಗುತ್ತದೆ. ’ಪುತ್ರ ಸಂತಾನವಿಲ್ಲದೆ ಮುಕ್ತಿಯಿಲ್ಲ’ ಎಂಬ ಮಾತೊಂದು ಅಲ್ಲಲ್ಲಿ ತೇಲಿ ಬರುತ್ತಿರುತ್ತದೆ. ಅಂತಹವರು ಶಂಕರರ ಈ ಮಾತನ್ನು ಗಮನಿಸಲೇ ಬೇಕು.
" ಶ್ರುತಿಗಳು (೨) ಹೇಳಿರುವಂತೆ ಪುತ್ರರು, ಧರ್ಮ-ಕರ್ಮಗಳು, ಉಪಾಸನೆ, ಸಂಪತ್ತು, ವಸ್ತು-ವಾಹನಗಳು, ಇವೆಲ್ಲವೂ ವಿತ್ತದ ಅಥವಾ ಧನದ ರೂಪವೇ ಆಗಿರುವುದರಿಂದ ಇವುಗಳಿಂದ ಮೋಕ್ಷದ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ"
ಎಂದು ಹೇಳುತ್ತಾರೆ. ’ನಕರ್ಮಣಾ ನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬ ಉಪನಿಷತ್ತಿನ ಸಾಲುಗಳು ಬಹು ಪ್ರಖ್ಯಾತವಾದುದು. ತ್ಯಾಗದಿಂದಲೇ ಅಮೃತತ್ವವು ಎಂಬುದನ್ನು ಶ್ರುತಿಗಳು ಹೇಳುತ್ತವೆ.
ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೆ? ಆ ದಾರಿ ಅಷ್ಟೊಂದು ಸುಲಭವೇ ? ಎಂಬ ಪ್ರಶ್ನೆ ಬರುತ್ತದೆ.
ನನ್ನ ಮಿತ್ರರಾದ ಕೊಳ್ಳೇಗಾಲದ ಮಂಜುನಾಥರು ಒಮ್ಮೆ ನನಗೆ ಹೀಗೆ ಹೇಳಿದ್ದರು ( ಬಹುಷಃ ಅವರು ಹೇಳಿರುವುದು ಅವರಿಗೇ ಮರೆತು ಹೋಗಿರಬಹುದು !)
"ನೀವು ಒಂದು ಕೆಲಸ ಮಾಡಿಲ್ಲ ಅಂದ್ರೆ ಅದು ನಿಮ್ಮಿಂದ ಆಗೋದಿಲ್ಲ ಅಂತಾ ಅಲ್ಲ, ಅದು ನಿಮ್ಮ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿಲ್ಲ, ಅಂದರೆ ನೀವು ಆ ಕೆಲಸಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ ಅಂತ ಅರ್ಥ ಅಷ್ಟೆ " .

ಯಾವುದೂ ಅಸಾಧ್ಯವಲ್ಲ, ಆದರೆ ಆ ಕೆಲಸ ನಮ್ಮ ಅಜೆಂಡಾದಲ್ಲಿ ಟಾಪ್ ಪ್ರಿಯಾರಿಟಿ ಪಡೆದುಕೊಳ್ಳದೆ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂದು ಹೇಳಬಹುದು.

ಜ್ಞಾನಪ್ರಾಪ್ತಿಯಿಂದಲೇ(ಬ್ರಹ್ಮಜ್ಞಾನ) ಮುಕ್ತಿ ಎನ್ನುವುದಾದರೆ ಅದನ್ನು ಪಡೆಯುವ ದಾರಿ ಯಾವುದು? ಸಾಧನಗಳೇನು ? ಮುಂದಿನ ಕಂತಿನಲ್ಲಿ ಈ ವಿಚಾರವನ್ನು ತಿಳಿಯೋಣ.

-----------------------------------------


ಟಿಪ್ಪಣಿ :

೧: ಪ್ರವೃತ್ತಿ ಧರ್ಮ : ನಮ್ಮ ನಿತ್ಯ -ನೈಮಿತ್ತಿಕ-ಕಾಮ್ಯ ಕರ್ಮಗಳು. ಉಪಾಸನೆ, ಸಾಂಪ್ರದಾಯಿಕ ಆಚರಣೆಗಳು, ಹೊಟ್ಟೆಪಾಡಿನ ಕೆಲಸಗಳು ಮುಂತಾದುವು.

ನಿವೃತ್ತಿ ಧರ್ಮ : ವೈರಾಗ್ಯ, ಸನ್ಯಾಸ, ಅಷ್ಟಾಂಗ ಯೋಗಗಳು [ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ.( ಇವುಗಳ ವಿವರಣೆಗಳು ಮುಂದೆ ಬರಲಿದೆ)] ಮುಂತಾದುವು

೨. ಶ್ರುತಿಗಳು ಹೇಳಿರುವಂತೆ : ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ. ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರಾದೇವಿಗೆ ಹೇಳುತ್ತಾರೆ " ಕರ್ಮದಿಂದ ಫಲವು ಲಭಿಸುವುದು ಮತ್ತು ಆ ಫಲವು ಧನಕ್ಕೆ ಸಮಾನವಾದುದರಿಂದ ಕರ್ಮದಿಂದ ಮುಕ್ತಿ ಸಾಧ್ಯವಿಲ್ಲ" ಎಂದು.
-------------------------
ಹಿಂದಿನ ಕಂತುಗಳು:

ವಿವೇಕ ಚೂಡಾಮಣಿ -ಭಾಗ ೪

ವಿವೇಕ ಚೂಡಾಮಣಿ -ಭಾಗ ೩

ವಿವೇಕ ಚೂಡಾಮಣಿ -ಭಾಗ-೨

ವಿವೇಕ ಚೂಡಾಮಣಿ -ಭಾಗ-1

6 comments:

  1. [ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು]
    ನಿಜ, ಸುಬ್ರಹ್ಮಣ್ಯರೇ.
    ನಾವು ನಿತ್ಯವೂ ಮಾಡುವ ಕರ್ಮಗಳು, ಆಚರಿಸುವ ಆಚರಣೆಗಳು,ನಮ್ಮ ಚಿಂತನೆಗಳು, ನಡವಳಿಕೆಗಳು,ನಿತ್ಯವೂ ನಮ್ಮನ್ನು ಮುಕ್ತಿಯಮಾರ್ಗದಲ್ಲಿ ಗಟ್ಟಿಮಾಡುತ್ತಾ ಹೋಗುತ್ತವೆ.ಸಾಯುವ ದಿನವೂ ಕೂಡ ಸತ್ಕರ್ಮವನ್ನು ಮಾಡುತ್ತಲೇ ಸಾವು ಬರಲಿ!. ಒಬ್ಬ ಮಹನೀಯರಿದ್ದರು.ಸಮಾಜದ ಜಾಗೃತಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದ ಸಮಾಜಸೇವಕರು.ನಿತ್ಯವೂ ಬಿಡುವಿಲ್ಲದ ಅವರ ಸಮಾಜಕಾರ್ಯದಲ್ಲಿ ಒಂದುದಿನ ಯುವಕರಿಗೆ ದೇಶಭಕ್ತಿಯ ಭಾಷಣ ಮಾಡುತ್ತಾ ಮಾಡುತ್ತಾ ವೇದಿಕೆಯಿಂದ ಕುಸಿದು ಬಿದ್ದರು. ಪ್ರಾಣಪಕ್ಷಿ ಹಾರಿಹೋಗಿತ್ತು!!

    ReplyDelete
  2. ಜ್ಞಾನಪ್ರಾಪ್ತಿಯಿಂದಲೇ ಮುಕ್ತಿಯೆಂಬ ಆಚಾರ್ಯ ಶಂಕರರ ನಿಲುವು ಒಟ್ಟಾರೆಯಾಗಿ ಬಂದಿದ್ದರೂ ನಿರೂಪಣೆಯಲ್ಲಿ ಕೆಲವು ಅಸ್ಪಷ್ಟತೆಯಿದೆಯೆನಿಸಿತು.

    ಮೊದಲ ಶ್ಲೋಕದ ಆಶಯ ಹೀಗೆ: "ನೀನು ಏನೇ ಕರ್ಮಗಳನ್ನು ಮಾಡು, ಆತ್ಮಬೋಧೆಯಿಲ್ಲದಿದ್ದರೆ ನೂರು ಬ್ರಹ್ಮರು ಬಂದುಹೋದರೂ ನಿನಗೆ ಮುಕ್ತಿಯಿಲ್ಲ (ಕರ್ಮಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ)" ಅಂದರೆ ಆತ್ಮಬೋಧೆಯೇ ಆತ್ಮನ ಆತ್ಯಂತಿಕ ಗಮ್ಯವೆಂದಾಯಿತು. ಹಾಗಿದ್ದರೆ ಕರ್ಮ? ಅದು ಆತ್ಮಬೋಧೆಯ ಮಾರ್ಗ (ಶ್ಲೋಕವನ್ನು ಗಮನಿಸಿದರೆ, ಅದರಲ್ಲಿ ಕರ್ಮದ ನಿರಾಕರಣೆಯಿಲ್ಲ, ಬದಲಿಗೆ ಕರ್ಮದ ಆತ್ಯಂತಿಕತೆಯ ನಿರಾಕರಣೆಯಿದೆ, ಅಷ್ಟೇ). ಕರ್ಮವು ಆತ್ಮಬೋಧೆಯ ಮಾರ್ಗವಷ್ಟೇ, ಅದೇ ಗಮ್ಯವಲ್ಲ (ಈ ಮಾತನ್ನು ಶ್ಲೋಕದಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ, ಆದರೆ ನೀವು ಅದನ್ನು ಸೊಗಸಾಗಿ ಬಿಡಿಸಿಟ್ಟಿದ್ದೀರಿ). ಅಂದಮೇಲೆ, ಕರ್ಮವು ಜ್ಞಾನಕ್ಕೆ ಮಾರ್ಗ, ಜ್ಞಾನವು ಮುಕ್ತಿಗೆ ಮಾರ್ಗ, ಆದ್ದರಿಂದ ಕರ್ಮ-ಜ್ಞಾನ-ಮುಕ್ತಿ ಇವು ಎಲ್ಲವೂ ಮುಖ್ಯ ಎಂದಂತಾಯಿತು.

    ಆದರೆ ಮುಂದಿನ ಶ್ಲೋಕ ತುಸು ಬೇರೆಯದೇ ನಿಲುವು ತಳೆಯುತ್ತದೆ. ವಿತ್ತದಿಂದ ಮುಕ್ತಿ ದೊರಕದು; ಕರ್ಮವು ಫಲ (ವಿತ್ತ) ವನ್ನೀಯುತ್ತದೆ, ಆದ್ದರಿಂದ ಕರ್ಮದಿಂದ ಮುಕ್ತಿಯು ದೊರಕದು. ವಿತ್ತದಿಂದ ಮುಕ್ತಿಯೇಕೆ ದೊರಕದು? ಏಕೆಂದರೆ ಅದು ಲೋಕದಲ್ಲಿ ರಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಜ್ಞಾನಕ್ಕೆ ಬೇಕಾದ್ದು ವಿರಕ್ತಿ, ನಿಸ್ಸಂಗ. ಕರ್ಮವು ವಿತ್ತವನ್ನು ನೀಡುತ್ತದೆ, ವಿತ್ತದಿಂದ ರಕ್ತಿ. ಈ ಕಾರಣದಿಂದ ಕರ್ಮದೊಡನೆ ಸಂಗವೇರ್ಪಡುತ್ತದೆ, ಅದು ಜ್ಞಾನಬಾಹಿರ. ಆದ್ದರಿಂದ ಕರ್ಮಸಂಗಿಗೆ ಮುಕ್ತಿಯಿಲ್ಲ ಎಂದರು.

    ಮೊದಲ ಶ್ಲೋಕದಲ್ಲಿ ಕರ್ಮವು ಜ್ಞಾನಕ್ಕೆ ಪೂರಕವೆಂದೆವು, ಎರಡನೆಯ ಶ್ಲೋಕದಲ್ಲಿ ಕರ್ಮವು ಜ್ಞಾನಕ್ಕೆ ಬಾಹಿರವೆಂದೆವು. ಇದು ವಿರೋಧಾಭಾಸವಲ್ಲವೇ ಅಂದರೆ, ಅದಕ್ಕೆ ಸಮಾಧಾನ ಹೀಗೆ: ಕರ್ಮದಲ್ಲಿ ಎರಡು ವಿಧ; ಒಂದು ಜ್ಞಾನಸಾಧಕ, ಇನ್ನೊಂದು ಫಲ ಸಾಧಕ. ಮೊದಲನೆಯದು ಜ್ಞಾನಕ್ಕೆ, ತನ್ಮೂಲಕ ಮುಕ್ತಿಗೆ ಪೂರಕವಾದ್ದರಿಂದ ಅದು ಬೇಕು. ಇನ್ನು ಎರಡನೆಯದೋ, ಅದು ಫಲದಾಯಕವಾದ್ದರಿಂದ, ಜ್ಞಾನವಿಮುಖತೆಯನ್ನುಂಟುಮಾಡುವುದರಿಂದ ಅದು ತಿರಸ್ಕಾರಯೋಗ್ಯವಲ್ಲವೇ? ಅದಕ್ಕೆ ಸಮಾಧಾನವೆಂದರೆ, ವಿಮುಖತೆಯನ್ನುಂಟುಮಾಡುವುದು ಕರ್ಮವಲ್ಲ, ಅದರ ಫಲ. ಫಲವನ್ನು ಪಡೆಯದಿದ್ದರೆ? ಅದರಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ? ಅದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದು ಅಲ್ಲವೇ, "ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಶು ಕದಾಚನ - ನಿನಗೆ ಕರ್ಮದ್ದಷ್ಟೇ ಅಧಿಕಾರ, ಫಲದ್ದಲ್ಲ" ("ಮಾ ಫಲೇಶು ಕದಾಚನ" ಅನ್ನುವುದರ ಅರ್ಥ "ಫಲಕ್ಕೆ ನಿನಗೆ ಅಧಿಕಾರವಿಲ್ಲ" ಎಂದು ತಾನೆ?). "ಮಾ ಫಲೇಶು" ಅನ್ನುವುದನ್ನ ಬಹುವಿಧದಲ್ಲಿ ಅರ್ಥೈಸಬಹುದು "ಫಲ ನಿನ್ನ ಕೈಯಲ್ಲಿಲ್ಲ, ಬಂದದ್ದನ್ನು ಅನುಭವಿಸು"; "ಫಲದ ಅಪೇಕ್ಷೆ ಬಿಡು"; "ಫಲವನ್ನು ನನಗೆ ಬಿಡು (ಏನನ್ನು ಕೊಡಬೇಕೆನ್ನುವುದು ನನಗೆ ಗೊತ್ತು)"; "ಫಲವನ್ನು ನನಗೆ ಬಿಡು (ನಿನಗೆ ಅದು ಬೇಡ) ಇತ್ಯಾದಿ. ಇರಲಿ, ಇಲ್ಲಿ ನಾವು ಹೇಳಿದ್ದು, ಫಲದ ಆಸೆ ಬಿಡು. ಹೀಗೆ ಫಲದ ಆಸೆಬಿಟ್ಟ ಕ್ರಿಯಾಕರ್ಮವೂ (ತನ್ನ ವಿಮುಖತೆಯ ಸ್ವಭಾವವನ್ನು ಕಳೆದುಕೊಂಡು) ಜ್ಞಾನಸಾಧಕವಾಗಬಲ್ಲುದು ಎಂಬುದು ಪ್ರಾಯಶಃ ಶಂಕರರ ಆಶಯ. ಸಂಗ್ರಹವಾಗಿ ಹೇಳಬಹುದಾದರೆ ಜ್ಞಾನದ ದಾರಿಯನ್ನನುಸರಿಸು; ಕರ್ಮದ ದಾರಿ ಜ್ಞಾನದ ದಾರಿಯೊಡನೆ ಸಾಗುವವರೆಗೂ ಅದನ್ನೂ ಅನುಸರಿಸು; ಫಲದ ಕಾರಣದಿಂದ ಕರ್ಮವು ಬೇರೆದಾರಿಯಲ್ಲಿ ಕೊಂಡೊಯ್ಯುವುದಾದರೆ, ಫಲವನ್ನು ಬಿಟ್ಟು ಕರ್ಮವನ್ನಾಚರಿಸಲು ಆಗುವುದೋ ನೋಡು; ಅದೂ ಸಾಧ್ಯವಾಗುವಂತಿಲ್ಲದಿದ್ದರೆ, ಅಂಥ ಕರ್ಮವನ್ನೇ ನಿರಾಕರಿಸು, ಏಕೆಂದರೆ ಜ್ಞಾನವೊಂದೇ ಮುಕ್ತಿಸಾಧಕ, ಮತ್ತು ಅದಕ್ಕೆ ಮಾರಕವಾದದ್ದೆಲ್ಲವೂ ನಿರಾಕರಣೀಯ" ಆದ್ದರಿಂದ ಬುದ್ಧನ ಕರ್ಮನಿರಾಕರಣೆಯ ಮಾರ್ಗವನ್ನು ಅನುಸರಿಸದಿದ್ದರೂ ಜ್ಞಾನಕ್ಕೆ ಮಾರಕವಾಗುವುದಾದರೆ ಕರ್ಮನಿರಾಕರಣೆಗೆ ಶಂಕರರು ಹಿಂದೆಯುವುದಿಲ್ಲ (ಇದು ನನ್ನ ಅರಿವು; ತಪ್ಪಿದ್ದರೆ ದಯವಿಟ್ಟು ತಿದ್ದಿ)

    ಕರ್ಮದ ವಿಷಯ ಬಂದಾಗ ಆಚಾರ್ಯ ಮಧ್ವರ ನಿಲುವು ಸ್ವಾರಸ್ಯವಾಗಿದೆ. "ಕುರು ಭುಂಕ್ಷ್ವಚ ಕರ್ಮ ನಿಜಂ ನಿಯತಂ - "ನಿನಗೆ ನಿಜವಾದ (ಸ್ವಭಾವಕ್ಕೆ ತಕ್ಕದ್ದೆಂದು ಆಗಲೇ ನಿರ್ಧಾರವಾಗಿಬಿಟ್ಟಿರುವ) ಕರ್ಮಗಳನ್ನು ಮಾಡು (ಮಾಡಲೇ ಬೇಕು), ಅದರ ಫಲಗಳನ್ನು ಅನುಭವಿಸಲೇ ಬೇಕು" ಎನ್ನುತ್ತಾರೆ ಮಧ್ವಾಚಾರ್ಯರು. ಕರ್ಮವು ಮೋಕ್ಷಸಾಧಕವೇ? ಅಲ್ಲ, ಜ್ಞಾನಸಾಧಕ (ಅದು ಸತ್ಕರ್ಮವಾದರೆ - ದುಷ್ಕರ್ಮವಾದರೆ ಅಜ್ಞಾನಸಾಧಕ); ಜ್ಞಾನವು ಮುಕ್ತಿಸಾಧಕವೇ? ಅಲ್ಲ, ಅದು ಭಕ್ತಿಗೆ ಸಾಧಕ. ಹೀಗೆ ಹುಟ್ಟಿದ ಭಕ್ತಿಯೊಂದೇ ಮುಕ್ತಿಸಾಧಕ. ಭಕ್ತಿಯ ಪರಾಕಾಷ್ಠೆಯಲ್ಲಿ ಭಗವದನುಗ್ರಹವಾಗಿ, ಕರ್ಮದಿಂದ ಬಿಡುಗಡೆ ದೊರಕುತ್ತದೆ, ಅದರಿಂದ ಮುಕ್ತಿ.

    ಕರ್ಮವು ಸ್ವಭಾವಕ್ಕೆ ತಕ್ಕದ್ದಾಗಿ ಮೊದಲೇ ನಿರ್ಧಾರವಾಗಿಬಿಟ್ಟಿರುವುದರಿಂದ ಮುಕ್ತಿಯೋಗ್ಯವಾದ ಜೀವಿಗಳಿಗೆ ಮಾತ್ರ ಸತ್ಕರ್ಮದ ಸ್ವಭಾವವಿರುತ್ತದೆ, ಸತ್ಕರ್ಮದಿಂದ ಭಕ್ತಿ, ಭಕ್ತಿಯಿಂದ ಮುಕ್ತಿ. ಈ ಮುಕ್ತಿಯು ಅದ್ವೈತದ ಅರಿವಲ್ಲ, ಬದಲಿಗೆ ಭಗವತ್ಸಾಯುಜ್ಯದಲ್ಲಿ ದೊರೆಯುವ ಕುಂದಿಲ್ಲದ, ಕೊನೆಯಿಲ್ಲದ ಆನಂದ (ಈ ಆನಂದದ intensity ಕೂಡ ಜೀವರ ಸ್ವಭಾವಕ್ಕನುಗುಣವಾಗಿ ಬೇರೆಯಾಗುತ್ತದೆ. ಹೀಗಾಗಿ, ಮಧ್ವರ ಪ್ರಕಾರ ಮುಕ್ತಿಯು universal ಅಲ್ಲ, ಬದಲಿಗೆ personal). ಮುಕ್ತಿಯೋಗ್ಯವಲ್ಲದ ಜೀವಿಗಳಿಗೆ ಸತ್ಕರ್ಮದ ಪ್ರೇರಣೆಯೇ ಬರುವುದಿಲ್ಲವಾದ್ದರಿಂದ ಅಲ್ಲಿ ಮುಕ್ತಿಯ ಪ್ರಶ್ನೆಯೇ ಬರದು.

    ಇನ್ನು ದ್ವೈತಾದ್ವೈತಗಳ ಚರ್ಚೆಗೆ ಇದು ವೇದಿಕೆಯಲ್ಲ; ಕರ್ಮದ ಪರಿಕಲ್ಪನೆ ಸ್ವಾರಸ್ಯಕರವಾಗಿ ಕಂಡಿದ್ದರಿಂದ ವಿವಿಧ ದರ್ಶನಗಳಲ್ಲಿ ಈ ಬಗೆಗಿನ ನಿಲುವನ್ನು ತುಸು ವಿಶ್ಲೇಷಿಸಿದೆ ಅಷ್ಟೇ. ಕಾಮೆಂಟ್ ಬೋರುಹೊಡೆಸುವಷ್ಟು ಉದ್ದವಾಗಿದ್ದರೆ ಕ್ಷಮಿಸಿ :)
    -Manjunatha Kollegala

    ReplyDelete
  3. ಹರಿಹರಪುರ ಶ್ರೀಧರ್ ಹೇಳಿದರು...

    [ಮುಕ್ತಿಯು universal ಅಲ್ಲ, ಬದಲಿಗೆ personal). ಮುಕ್ತಿಯೋಗ್ಯವಲ್ಲದ ಜೀವಿಗಳಿಗೆ ಸತ್ಕರ್ಮದ ಪ್ರೇರಣೆಯೇ ಬರುವುದಿಲ್ಲವಾದ್ದರಿಂದ ಅಲ್ಲಿ ಮುಕ್ತಿಯ ಪ್ರಶ್ನೆಯೇ ಬರದು]
    ಮಂಜುನಾಥರು ತಿಳಿಸುವ ಮುಕ್ತಿ ಎಂದರೆ ಕಟ್ಟಕಡೆಯ ಜೀವನ್ ಮುಕ್ತಿ. ಆದರೆ ನಿತ್ಯಜೀವನದಲ್ಲಿ ಆತಂಕಗಳಿಂದ, ಅತಿ ದು:ಖದಿಂದ, ಅತೀ ಸಂತೋಷದಿಂದ ಪಾರಾಗುವ ಬಗೆ ಹೇಗೆಂದು ಸುಬ್ರಹ್ಮಣ್ಯರು ತಿಳಿಸುತ್ತಾರೆ. ಇದು ಇಂದಿನ ಸಮಾಜಕ್ಕೆ ಅತೀ ಅಗತ್ಯವಾದುದು. ಈಗೆಲ್ಲಾ ವ್ಯಕ್ತಿತ್ವ ವಿಕಸನ ತರಬೇತಿಗಾಗಿ ಶುಲ್ಕಕೊಟ್ಟು ತರಗತಿಗಳಿಗೆ ಹೋಗುವ ಯುವಕರಿದ್ದಾರೆ. ಅಂತವರು ಶಂಕರರ ಭಜಗೋವಿಂದಮ್, ಸಾಧನಾ ಪಂಚಕಮ್, ವಿವೇಕ ಸಚೂಡಾಮಣಿ--ಈ ಗ್ರಂಥಗಳನ್ನು ಅರ್ಥಮಾಡಿಕೊಂಡು ಓದಬೇಕು. ಕಾಟಾಚಾರಕ್ಕಲ್ಲ. ಆಗ ನಿಜಜೀವನ ಧರ್ಮ ತಿಳಿಯುತ್ತಾ ಹೋಗುತ್ತದೆ. ನೆಮ್ಮದಿಯು ತಾನೇ ತಾನಾಗಿ ಇವನದಾಗುತ್ತದೆ.

    ReplyDelete
  4. ಸುಬ್ರಹ್ಮಣ್ಯ ಅವರೇ , ಮಾಲಿಕೆಗಳು ಅದ್ಭುತವಾಗಿ ಬರುತ್ತಿವೆ , ನನ್ನ ವಿನಯಪೂರಕ ಅಭಿನಂದನೆಗಳು!!..ಇದು ಪುಸ್ತಕರೂಪದಲ್ಲಿ ಲಭ್ಯವೇ ?ಎಲ್ಲಿ ಸಿಗುತ್ತದೆ ? ದಯವಿಟ್ಟು ತಿಳಿಸುವಿರಾ ?

    ReplyDelete
  5. ಮಾನ್ಯ ಜಗದೀಶರೇ,

    ಇಲ್ಲಿ ನಾನು ಬರೆಯುತ್ತಿರುವುದು ಚಂದ್ರಶೇಖರ ಭಾರತಿಗಳ ಸಂಸ್ಕೃತ ವ್ಯಾಖ್ಯಾನವನ್ನು ಇಟ್ಟುಕೊಂಡು. ಈ ಪುಸ್ತಕದ ವ್ಯಾಖ್ಯಾನವು ಗ್ರಾಂಥಿಕವಾಗಿದ್ದು ಅದರ ಅರ್ಥವನ್ನು ಅಷ್ಟೋ ಇಷ್ಟೋ ತಿಳಿದುಕೊಂಡು ನನ್ನ ಮತಿಗೆ ಬಂದಷ್ಟು ಬರೆಯುತ್ತಿದ್ದೇನೆ. ನನ್ನ ಪುಸ್ತಕವಂತೂ ಲಭ್ಯವಿಲ್ಲ :) ಏಕೆಂದರೆ ನಾನು ಇಲ್ಲೇ ಮೊದಲು ಬರೆಯುತ್ತಿರುವುದು !.

    ಇನ್ನು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  6. ಪ್ರಿಯ ಸುಬ್ರಹ್ಮಣ್ಯರೇ, ವೈಚಾರಿಕ ಸಂಗತಿಗಳನ್ನು ಕೇಳುತ್ತಲೇ ಇರಬೇಕು, ವಿಮರ್ಶಿಸಬೇಕು, ಅರಿಯಬೇಕು, ಅನುಸರಿಸಬೇಕು! ಮುಂದುವರೆಸಿರಿ.
    -ನಾಗರಾಜ್.

    ReplyDelete