Pages

Saturday, November 5, 2011

ವಿವೇಕ ಚೂಡಾಮಣಿ-ಭಾಗ-೧೬


मूलम् - ಮೂಲ

मोक्षकारणसामग्र्यां भक्तिरेव गरियसी ।
स्वस्वरूपानुसन्धानं भक्तिरित्यभिधीयते ॥३२॥

ಮೋಕ್ಷಕಾರಣಸಾಮಗ್ರ್ಯಾಂ ಭಕ್ತಿರೇವ ಗರೀಯಸೀ |
ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ ||೩೨||

ಪ್ರತಿಪದಾರ್ಥ :-
(ಮೋಕ್ಷಕಾರಣ = ಬಿಡುಗಡೆಗೆ ಕಾರಣವಾಗಿರುವ, ಸಾಮಗ್ರ್ಯಾಂ= ಸಲಕರಣೆಗಳಲ್ಲಿ(ಸಾಧನಗಳಲ್ಲಿ), ಭಕ್ತಿಃ ಏವ = ಭಕ್ತಿಯೇ, ಗರೀಯಸೀ = ದೊಡ್ಡದು(ಶ್ರೇಷ್ಠವಾದುದು). ಸ್ವಸ್ವರೂಪಾನುಸಂಧಾನಂ = ತನ್ನನ್ನುತಾನು ತಿಳಿಯುವುದು, ಭಕ್ತಿಃ ಇತಿ= ಭಕ್ತಿಯೆಂದು, ಅಭಿಧೀಯತೇ = ಹೇಳಲ್ಪಡುತ್ತದೆ )

ತಾತ್ಪರ್ಯ :

ಮೋಕ್ಷಕ್ಕೆ (ಬಿಡುಗಡೆಗೆ) ಸಹಾಯಕವಾಗಿರುವ ಸಾಧನ-ಸಲಕರಣೆಗಳಲ್ಲಿ ಭಕ್ತಿಯೂ ಸೇರಿದ್ದು ಇದೇ ಶ್ರೇಷ್ಠವಾದುದಾಗಿರುತ್ತದೆ. ತನ್ನ ನಿಜವಾದ ಸ್ವರೂಪವನ್ನು , ತನ್ನತನವನ್ನು ತಿಳಿದುಕೊಳ್ಳುವುದೇ ಭಕ್ತಿಯೆಂದು ಹೇಳಲ್ಪಟ್ಟಿದೆ.

ವಿವರಣೆ :

ಇಹದ ಬಂಧನದಿಂದ ಬಿಡಿಸಿಕೊಂಡು ಆತ್ಮಜ್ಞಾನವನ್ನು ಪಡೆಯಲು ಸಾಧನ ಚತುಷ್ಟಯಗಳ ಅಗತ್ಯವನ್ನು ಈಗಾಗಲೇ ವಿವರವಾಗಿ ತಿಳಿದಿದ್ದೇವೆ. ಇದರ ಜೊತೆಗೆ ಭಕ್ತಿಯೂ ಸಹ ತುಂಬ ಹಿರಿದಾದುದು ಎಂದು ಆಚಾರ್ಯರು ಹೇಳುತ್ತಾರೆ. ’ ಭಕ್ತಿ’ ಎಂದರೆ, ತನ್ಮಯರಾಗಿ ಫಲಾಪೇಕ್ಷೆಯಿಂದ ಮಾಡುವ ಸಗುಣ ಬ್ರಹ್ಮೋಪಾಸನೆಯಾಗಲೀ, ನಿತ್ಯಕರ್ಮಾನುಷ್ಠಾನುಗಳಗಲೀ ಅಥವಾ ಇನ್ಯಾವುದನ್ನೋ ಕುರಿತು ಚಿಂತಿಸುವುದಾಗಲೀ ಅಲ್ಲದೆ ಕೇವಲ ತನ್ನನ್ನು ತಾನು ತಿಳಿಯುವುದು ಅಥವಾ ತನ್ನತನದ ಹುರುಳು-ತಿರುಳನ್ನು ಅರಿಯುವ ವಿವೇಕವೇ ಭಕ್ತಿ ಎಂದು ಹೇಳುತ್ತಾರೆ.  ಆಚಾರ್ಯರು ಜ್ಞಾನದ ಪ್ರತಿಪಾದಕರಾಗಿದ್ದುದರಿಂದ (ಗ್ರಂಥದ ವಿಷಯವೂ ಅದೇ ಆಗಿರುವುದರಿಂದ) ಭಕ್ತಿಯನ್ನು ಏಕತ್ರ ಸಾಕಲ್ಯದ (ಅದ್ವೈತದ) ನಿಟ್ಟಿನಲ್ಲಿ ವಿವರಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯಬಹುದು.  ಭಕ್ತಿ ಎಂದಾಗ ತನ್ಮಯತೆ, ಸಮರ್ಪಣಾ ಮನೋಭಾವ, ಪ್ರೀತಿ, ಸ್ವಾರ್ಥತ್ಯಾಗಗಳೆಲ್ಲವೂ ಬೆಸೆದುಕೊಂಡೇ ಬರುತ್ತದೆ. ಇವೆಲ್ಲವೂ ಸಾಧನ ಚತುಷ್ಟಯಗಳಲ್ಲಿ ಬಂದಿರುವುದನ್ನು ಗಮನಿಸಬಹುದಾಗಿರುತ್ತದೆ. ಕರ್ಮ, ಭಕ್ತಿ, ಧ್ಯಾನ, ಜ್ಞಾನಗಳೆಲ್ಲವೂ ಬೇರೆಯೇ ಆಗಿದ್ದರೂ ’ಯೋಗ’ ಎನ್ನುವುದು ಇವುಗಳಿಗೆ ಸೇರಿಕೊಂಡಾಗ ಎಲ್ಲವೂ ಪರಮಾರ್ಥದ ಉದ್ದೇಶವನ್ನೇ ಹೇಳುತ್ತವೆ ಅಥವಾ ಜ್ಞಾನವೇ ಆಗುತ್ತದೆ.  ಕರ್ಮದಲ್ಲಿ ಸಕಾಮ ಕರ್ಮ (ಫಲಾಪೇಕ್ಷಿತ) ನಿಷ್ಕಾಮ ಕರ್ಮ (ಫಲದ ಬಯಕೆ ಇಲ್ಲದೆ) ಎಂದು ಇರುವಂತೆಯೇ ಭಕ್ತಿ, ಧ್ಯಾನ, ಜ್ಞಾನಗಳಲ್ಲೂ ಭೇದವು ಕಂಡುಬರುತ್ತದೆ. ಶಾಸ್ತ್ರಾರ್ಥ ಜ್ಞಾನಕ್ಕೂ ಪರಮಾರ್ಥ ಜ್ಞಾನಕ್ಕೂ ವ್ಯತ್ಯಾಸವಂತೂ ಇದ್ದೇ ಇದೆ.  ಪರಮಾರ್ಥ ಜ್ಞಾನವನ್ನು ಪಡೆಯುವುದೇ ನಿರುಪಾದಿಕವಾದ ಪರಭಕ್ತಿ ಎಂದು ಎಂದು ಹೇಳುತ್ತಾರೆ.  ಇಂತಹ ಪರಭಕ್ತಿಯು ಹುಟ್ಟುವುದು ಸ್ವಸ್ವರೂಪಾನುಸಂಧಾನದಿಂದ (ತನ್ನನ್ನು ತಾನು ಅರಿಯುವುದರಿಂದ) ಎನ್ನುತ್ತಾರೆ.   "ವೇದಾಂತದ ಶ್ರವಣ-ಮನನ-ನಿದಿಧ್ಯಾಸನವೇ ಸ್ವಸ್ವರೂಪಾನುಸಂಧಾನ ಮತ್ತು ಅದೇ ಸಾಕ್ಷಾತ್ಕಾರಕ್ಕೆ ನೇರ ಕಾರಣವು" ಎಂದು ಸದ್ಗುರುಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.
ಶ್ಲೋಕದ ಕೊನೆಯಲ್ಲಿ "ಹೇಳಲ್ಪಡುತ್ತದೆ (ಹೇಳಲ್ಪಟ್ಟಿದೆ) ಎಂದು ಆಚಾರ್ಯರು ನಿರೂಪಿಸಿರುದನ್ನು ಗಮನಿಸಿದಾಗ ವೇದಾಂತದ ’ಏಕತ್ವ’ ತತ್ವವು ಶಂಕರಿಂದೇನೂ ಮೊದಲಾಗದೆ ಬಹಳ ಹಿಂದೆಯೇ ಪ್ರತಿಪಾದಿಸಲ್ಪಟ್ಟಿರುವ ದರ್ಶನವೆಂಬುದು ಸ್ಪಷ್ಟವಾಗುತ್ತದೆ. ’ಏಕತ್ವ’ಅ ಮತ್ತು ’ನಾನಾತ್ವ’ಗಳ ದರ್ಶನವು ಉಪವರ್ಷರೇ ಮೊದಲಾಗಿ ಹಲವು ಮಹಾಮನೀಷಿಗಳಿಂದ ಶಂಕರರಿಗಿಂತ ಮುಂಚೆಯೇ ಹೇಳಲ್ಪಟ್ಟಿದ್ದರೂ ಅಂತಹ ದರ್ಶನಗಳಿಗೆ ಸರಳವಾದ ಭಾಷ್ಯಗಳನ್ನು ರಚಿಸಿ ಆಸಕ್ತರ ಕೈಗೆಟುಕುವಂತೆ ಮಾಡಿದ್ದು ಶಂಕರರೇ ಎಂದು ನಿಸ್ಸಂದೇಹವಾಗಿ ಹೇಳಬಹುದು(ವಿದ್ವಾಂಸರ ಅಭಿಪ್ರಾಯದಂತೆ).  ಕೆಲವರು ಅದ್ವೈತದರ್ಶನವನ್ನು ’ಶಾಂಕರ ಮತ’ ಶಾಂಕರ ತತ್ವ’ ಎಂದೆಲ್ಲಾ ಹೇಳುವುದನ್ನು ಗಮನಿಸಿರುತ್ತೇವೆ. ಶಂಕರರ ಭಾಷ್ಯಗಳನ್ನು ರಚನೆಗಳನ್ನು ವಿವರವಾಗಿ ಗಮನಿಸಿದರೆ ಅವರು ಹೊಸತೇನನ್ನೂ ಹೇಳದೆ ಇರುವುದನ್ನೇ ಒಪ್ಪಗೊಳಿಸಿಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಆದುದರಿಂದ  ’ಶಾಂಕರ ಮತ’ ಶಾಂಕರ ತತ್ವ’ ಎಂದೆಲ್ಲಾ ಹೇಳಿ ಖಂಡನ-ಮಂಡನಗಳನ್ನು ಮುಂದುವರಿಸಿಕೊಂಡು ಜಗಳವಾಡುವುದು ವಿವೇಚನಾರಹಿತವಾದುದು ಎಂದು ಹೇಳಬೇಕಾಗುತ್ತದೆ.


 मूलम्-ಮೂಲ:-

उक्तसाधनसम्पन्नः तत्वजिज्ञासुरात्मनः ।
उपसीदेद् गुरुं प्राज्ञं यस्माद् बन्धविमोक्षणम् ॥३३॥

ಉಕ್ತಸಾಧನಸಂಪನ್ನಸ್ತತ್ವಜಿಜ್ಞಾಸುರಾತ್ಮನಃ|
ಉಪಸೀದೇದ್ಗುರುಂ ಪ್ರಾಜ್ಞಂ ಯಸ್ಮಾದ್ಬಂಧವಿಮೋಕ್ಷಣಮ್ ||೩೩||

ಪ್ರತಿಪದಾರ್ಥ:-

(ಉಕ್ತಸಾಧನ =ಹಿಂದೆ ಹೇಳಿದ ಸಾಧನಗಳಿಂದ, ಸಂಪನ್ನಃ = ಚೆನ್ನಾಗಿ ಕೂಡಿದವನೂ(ಪಡೆದವನೂ), ಆತ್ಮನಃ=ಆತ್ಮವಸ್ತುವಿನ, ತತ್ವಜಿಜ್ಞಾಸುಃ=ಹುರುಳನ್ನು ತಿಳಿಯಲು ಬಯಸುವವನೂ , ಯಸ್ಮಾತ್= ಯಾರಿಂದ, ಬಂಧ ವಿಮೋಕ್ಷಣಂ= ಅಂಟು ಕಳೆಯುತ್ತದೆಯೋ(ಮೋಕ್ಷಕ್ಕೆ ದಾರಿಯಾಗುತ್ತದೆಯೋ), ತಂ ಪ್ರಾಜ್ಞಂ ಗುರುಂ = ಅಂತಹ ಜ್ಞಾನಿಯಾದ ಗುರುವನ್ನು, ಉಪಸೀದೇತ್ =ಹೊಂದಬೇಕು,ಬಳಿ ಸಾರಬೇಕು).

ವಿವರಣೆ :-
ಹೀಗೆ ಸಾಧನ ಚತುಷ್ಟಯದ ಜೊತೆಗೆ ನಿರುಪಾಧಿಕವಾದ ಪರಭಕ್ತಿಯನ್ನೂ(ಸ್ವಸ್ವರೂಪಾನುಸಂಧಾನ) ಮೇಳವಿಸಿಕೊಂಡು ಅಥವಾ ಚೆನ್ನಾಗಿ ಪಡೆದುಕೊಂಡ ನಂತರ ಆತ್ಮಾರ್ಥದ ಚಿಂತನೆಗಾಗಿ ಅಥವಾ ಜಿಜ್ಞಾಸೆಗಾಗಿ (ಜ್ಞಾನುಮಿಚ್ಛಾ=ತಿಳಿದುಕೊಳ್ಳುವ ಬಯಕೆ, ಅಪೇಕ್ಷಿ) ಇಹದ ಅಂಟು-ನಂಟುಗಳನ್ನು (ಬಂಧನಗಳು) ಕಳೆದು ಮೋಕ್ಷದ ದಾರಿಯನ್ನು ತೋರಬಲ್ಲಂತಹ ಜ್ಞಾನಿಯಾದ ಗುರುವಿನ ಮೊರೆಹೋಗಬೇಕು ಅಥವಾ ಬಳಿಸಾರಬೇಕು ಎಂದು ಆಚಾರ್ಯರು ತಿಳಿಸುತ್ತಾರೆ.  ಸಾಧನ ಚತುಷ್ಟಯದ ಜೊತೆಗೆ ಇತರ ಎಲ್ಲಾ ಸಾಧನಗಳನ್ನು ಚೆನ್ನಾಗಿ ಪಡೆದುಕೊಂಡು ಗಂಟುಕಟ್ಟಿ ಇಟ್ಟುಕೊಂಡ ನಂತರ ಬ್ರಹ್ಮವಸ್ತುವಿನ ತಿಳುವಳಿಕೆಗಾಗಿ ತರ್ಕ, ಚರ್ಚೆಗಳನ್ನು ನೆಡೆಯಿಸಿ ಕೊನೆಗೆ ಸ್ವಾನುಭವದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯುವುದು ಆತ್ಮಾರ್ಥಿಯ ಉದ್ದೇಶವೆಂಬುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ಆಕ್ಷೇಪ:-    ಸಾಧನ ಚತುಷ್ಟಯದ ಸಾಧನೆಯು ಇದ್ದಾಗ ಆತ್ಮಾನುಸಂಧಾನವು ಸರಳವೂ, ಪುರುಷಪ್ರಯತ್ನದಿಂದಲೂ ಸಾಧ್ಯವಾಗಬಹುದಾದುದರಿಂದ ಗುರುವಿನ-ಜಿಜ್ಞಾಸೆಯ ಅಗತ್ಯವಿದೆಯೆ ?

ಸಮಾಧಾನ :-  "ಬ್ರಹ್ಮವಸ್ತುವು ಪ್ರಸಿದ್ಧ ವಸ್ತುವೇ ಆಗಿದ್ದರೂ ಜಿಜ್ಞಾಸೆಗೆ ಅವಕಾಶವಿದೆ. ಏಕೆಂದರೆ, ಬ್ರಹ್ಮದ ವಿಶೇಷ ಸ್ವರೂಪದ ವಿಷಯದಲ್ಲಿ ವಿರುದ್ಧಾಭಿಪ್ರಾಯಗಳಿವೆ. ತಾರ್ಕಿಕರು, ಸಾಂಖ್ಯರು, ಬೌದ್ಧರು, ಲೋಕಾಯತಿಕರು ಮುಂತಾದವರಲ್ಲಿ ಬ್ರಹ್ಮ ಸ್ವರೂಪದ ವಿಷಯದಲ್ಲಿ ಏಕತೆ ಇಲ್ಲದಿರುವ ಕಾರಣ ಬ್ರಹ್ಮನನ್ನು ಅರಿತುಕೊಳ್ಳಲು ಅವಕಾಶವಿದೆ" ಎಂದು ಶ್ರೀ ಶಂಕರರೇ ತಮ್ಮ ಬ್ರಹ್ಮಸೂತ್ರಗಳ ಮೇಲಿನ ಭಾಷ್ಯದ ಆರಂಭದಲ್ಲೇ ವಿವರವಾಗಿ ಬಿಡಿಸಿಡುತ್ತಾರೆ. ತಿಳಿದುಕೊಳ್ಳಬೇಕೆಂಬ ಬಯಕೆಯು ಇದ್ದಾಗ ತಿಳಿಸಿಕೊಡುವವರೂ ಇರಬೇಕಾಗುತ್ತದೆ.

ಮುಂದೆ ’ಜ್ಞಾನಿ’ಯಾದ ಗುರುವಿನ ಬಳಿಗೆ ತೆರಳಬೇಕು ಎಂದು ಹೇಳುತ್ತಾರೆ. ಯಾರೋ ಒಬ್ಬ ಪೀಠದಮೇಲೆ ಕುಳಿತಿರುವವರನ್ನು ಗುರು ಎಂದು ಒಪ್ಪಿಕೊಂಡು ನೆಚ್ಚಿಕೊಳ್ಳುವುದಲ್ಲ, ಬ್ರಹ್ಮಜ್ಞಾನವನ್ನು ಪಡೆದಿರುವ ಗುರುವನ್ನು ಅನುಸರಿಸಬೇಕು ಎಂದು ಹೇಳುತ್ತಾರೆ. ಶಾಸ್ತ್ರಗ್ರಂಥಗಳ ಅಧ್ಯಯನದಿಂದಲೂ ಆತ್ಮಾನುಸಂಧಾನವನ್ನು ನೆಡೆಯಿಸಬಹುದಲ್ಲವೆ ? ಎಂದರೆ, ಅವುಗಳನ್ನೂ ಗುರುಗಳೇ ಬರೆದಿರುವುದರಿಂದ ಒಂದು ಮಟ್ಟಿಗೆ ಗ್ರಂಥಗಳೂ ಗುರುವೇ ಎನಿಸಿಕೊಂಡರೂ ಅವುಗಳನ್ನು ಓದಿದ ನಂತರ ಹುಟ್ಟುವ ಸಂದೇಹಗಳಿಗೆ ಪರಿಹಾರ ಕೊಡುವವರು ಯಾರು ? . ಸಿ.ಡಿ. ಹಾಕಿಕೊಂಡೋ ಅಥವಾ ಟಿ.ವಿ. ಯಲ್ಲಿ ಕಲಿಸುವುದನ್ನು ನೋಡಿಕೊಂಡೋ ಸಂಗೀತವನ್ನು, ನೃತ್ಯವನ್ನು ಕಲಿಯಲು ಮೊದಲಾಗಬಹುದು. ಆದರೆ, ನಡುವೆ ಅಪಸ್ವರ ಬಂದಾಗ, ತಾಳ ತಪ್ಪಿದಾಗ ಸಿ.ಡಿ. ಪ್ಲೇಯರ್ ತಿದ್ದಿಕೊಡುತ್ತದೆಯೆ ?!. ತಾಂತ್ರಿಕತೆಯು ತುತ್ತತುದಿಯಲ್ಲಿರುವ ಈ ಕಾಲದಲ್ಲಿ (ವಿಡಿಯೋ ಕಾನ್ಫೆರೆನ್ಸ್, ಇ-ಎಜುಕೇಶನ್) ಏನೆಲ್ಲಾ ಪ್ರಗತಿಯನ್ನು ಕಂಡಿದ್ದರೂ ಎದುರು-ಬದುರು ಕುಳಿತು ನೆಡೆಯಿಸುವ ಆಪ್ತಸಂವಾದ, ಸಮಾಲೋಚನೆಗೆ ಯಾವುದೂ ಸರಿಸಾಟಿಯಾಗಲಾರದು ಎನ್ನುವುದನ್ನು ಒಪ್ಪಬೇಕಲ್ಲವೆ ? . ಗುರುವಿನ ಉಪದೇಶದಿಂದಲೂ ಸಂದೇಹಗಳು ಪರಿಹಾರವಗದಿದ್ದಲ್ಲಿ ಪರಿಹಾರವನ್ನು ಕೊಡುವ ಗುರುವು ಬರುವವರೆವಿಗೂ ಕಾಯಬೇಕಾಗುತ್ತದೆ. ಅಂತಹವರು ಯಾರಿದ್ದಾರೆ ? ಎನ್ನುವ ಪ್ರಶ್ನೆಯೂ ಬಂದು ಹೋಗುತ್ತದೆ. ಮಾನ್ಯ ಡಿ.ವಿ.ಜಿ. ಯವರು ತಮ್ಮ ಕಗ್ಗದಲ್ಲಿ ಹೀಗೆ ಹೇಳುತ್ತಾರೆ .

"ತರಣಿದರ್ಶನಕಿಂತ ಕಿರಣಾನುಭವ ಸುಲಭ|
ಪರಮಶಾಸ್ತ್ರಕಿಂತ ಸರಿಯುದಾಹರಣೆ||
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ?|
ದೊರೆತಂದು ನೀಂ ಧನ್ಯ - ಮಂಕುತಿಮ್ಮ || " 

’ಜ್ಞಾನಿ’ ಎಂದರೆ ಶಾಸ್ತ್ರಾರ್ಥಗಳನ್ನೂ ಪರಮಾರ್ಥವನ್ನೂ ಅಧ್ಯಯನ ಮತ್ತು ಅನುಭವದಿಂದ ತಿಳಿದವರು ಎಂದು ಗ್ರಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಬ್ರಹ್ಮಜಿಜ್ಞಾಸೆಗೆ ’ಬ್ರಹ್ಮಜ್ಞಾನಿ’ ಅಥವಾ ’ಜೀವನ್ಮುಕ್ತ’ರನ್ನೇ ಮಾದರಿಯಾಗಿರಿಸಿಕೊಳ್ಳಬೇಕಾಗುತ್ತದೆ ಅಥವಾ ಆಶ್ರಯಿಸಬೇಕಾಗುತ್ತದೆ. ಗ್ರಂಥವೂ ಗುರುವಾಗಬಲ್ಲುದು, ಒಂದು ಜೇನ್ನೊಣವೂ ಪ್ರೇರಣೆ ನೀಡಬಲ್ಲುದು ಆದರೆ, ಅನುಭದಿಂದ ಬರುವ ಗುರುವಾಕ್ಯವು ಹೆಚ್ಚಿನ ಸಮಾಧಾನವನ್ನು ನೀಡಬಲ್ಲುದು ಎಂದು ತಿಳಿಯಬಹುದು. ಶಂಕರರು, ರಮಣಮಹರ್ಷಿಗಳಂತಹ ಅನೇಕ ಜ್ಞಾನಿಗಳು ಇದಕ್ಕೆ ನಿದರ್ಶನ ಎನ್ನಬಹುದು. ಕೆಲವರಿಗೆ ಶಾಸ್ತ್ರಾರ್ಥಗಳು ಚೆನ್ನಾಗಿ ಗೊತ್ತಿರುತ್ತದೆ ಆದರೆ ತಿಳಿಸುವುದಕ್ಕೆ ಬರುವುದಿಲ್ಲ. ಇನ್ನೂ ಕೆಲವರಿಗೆ ಏನೋ ಕೊಂಚ ತಿಳಿದಿರುತ್ತದೆ ಆದರೆ, ಅದನ್ನೇ ಬಣ್ಣ ಕಟ್ಟಿ ಹೇಳುವುದರಲ್ಲಿ ನಿಪುಣರಾಗಿರುತ್ತಾರೆ (ವಿವೇಕಿಗಳೊಬ್ಬರು ಹೇಳುವಂತೆ " ಅವರ ಇನ್ವೆಸ್ಟ್ ಮೆಂಟೇ ಕಮ್ಮಿ ಆದರೆ ಟರ್ನ್ ಓವರ್ ಜಾಸ್ತಿ" ಎನ್ನುವಂತೆ !).
ಪಂಡಿತರೊಬ್ಬರು ಕಾಶಿಗೆ ತೆರಳಿ ಅಲ್ಲಿ ಎಲ್ಲರೊಡನೆ ವಾದವನ್ನು ಮಾಡಿ ಗೆದ್ದ ನಂತರ "ಇನ್ನು ಇಲ್ಲಿ ವಿಶ್ವನಾಥನನ್ನು ಬಿಟ್ಟರೆ ನನ್ನೊಡನೆ ವಾದ ಮಾಡಲು ಯಾರೂ ಉಳಿದಿಲ್ಲ" ಎಂದರಂತೆ !. ಅಂದರೆ, "ಇದು ಇಷ್ಟೇ " (ಯಾವ ದೇಶಕ್ಕೇ ಹೋದರೂ) ಎಂದು ಕಡ್ಡಿಮುರಿದಂತೆ ಹೇಳುವ ಗುರುವ ಅಗತ್ಯ ಮತ್ತು ಅಪೇಕ್ಷಿಗಳು ಅಂತಹ ಗುರುವನ್ನೇ ಆಶ್ರಯಿಸಬೇಕು , ಬಳಿಸಾರಬೇಕು ಎಂದು ಆಚಾರ್ಯರು ಮೇಲಿನ ಶ್ಲೋಕದಲ್ಲಿ ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಗುರುವಿನ ಬಳಿಸಾರಿ ನಿವೇದಿಸಿಕೊಳ್ಳುವುದರಿಂದ ಮೊದಲಾಗಿ ಬ್ರಹ್ಮಜಿಜ್ಞಾಸೆಯನ್ನು ಆಚಾರ್ಯರ ನಿರೂಪಣೆಯಲ್ಲಿ ತಿಳಿಯೋಣ.  

ವಂದನೆಗಳೊಂದಿಗೆ.

2 comments:

  1. ಸುಬ್ರಹ್ಮಣ್ಯರೇ, ವೇದಸುಧೆಯಲ್ಲಿ ಹರಿಯುತ್ತಿರುವ ನಿಮ್ಮ ಚೂಡಾಮಣಿ ಚರಿತಾಮೃತ ಹಲವು ಓದುಗರಿಗೆ ಉತ್ತಮ ಗ್ರಾಸವಾಗಿದೆ ಎಂದುಕೊಳ್ಳುತ್ತೇನೆ, ಉತ್ತಮ ಬರಹ, ಅಭಿನಂದನೆಗಳು.

    ಶ್ರೀಧರ್ ರಲ್ಲಿ ಒಂದು ಮನವಿ, ನನಗೆ ಜಾಸ್ತಿ ವೇದಸುಧೆ.ಕಾಂ ನಲ್ಲಿ ಓದಲು ಸಾಧ್ಯವಾಗುತ್ತಿಲ್ಲ, ನಾನು ಸದ್ಯಕ್ಕೆ ವೇದಸುಧೆಯ ಬ್ಲಾಗ್ ನಲ್ಲಿಯೇ ತೃಪ್ತನಾಗಿದ್ದೇನೆ, ದಯವಿಟ್ಟು ತಪ್ಪು ಗ್ರಹಿಕೆ ಬೇಡ.

    ReplyDelete
  2. ಭಟ್ಟರೇ,

    ನಿಮ್ಮಂತಹ ಆಸಕ್ತರ ಪ್ರೋತ್ಸಾಹವೇ ಚೂಡಾಮಣಿಯು ಇಲ್ಲಿ ಬೆಳೆಯಲು ಕಾರಣವಾಗುತ್ತಿರುವುದು. ಕಾಲಕಾಲಕ್ಕೆ ಬಂದು ಬೆನ್ನು ತಟ್ಟುತ್ತಿರುವ ನಿಮಗೆ ಅನೇಕ ಧನ್ಯವಾದಗಳು.

    ReplyDelete