ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, December 21, 2011

ಸತ್ತರು ಎನಲವರು ಹುಟ್ಟಿರಲೇ ಇಲ್ಲ!


     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 
ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! 


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||
**********************
-ಕ.ವೆಂ.ನಾಗರಾಜ್.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ]

3 comments:

 1. ಆತ್ಮೀಯ ನಾಗರಾಜ್ ರವರಿಗೆ,
  ನಿಮ್ಮ ಲೇಖನ ಓದಿದೆ, ಖುಷಿಯಾಯಿತು. ನನಗೆ ಈ ವಿಚಾರಗಳು ನನ್ನ ಪ್ರೀತಿಯ ತಂದೆ 1983 ರಲ್ಲಿ ನಿಧನರಾದಾಗ ಉದ್ಹ್ಭವಿಸಿತ್ತು. ಆಗ ನಾನು ನನ್ನ ಹಿರಿಯರಲ್ಲಿ, ಪುರೋಹಿತರಲ್ಲಿ ಈ ರೀತಿಯ ಪ್ರಶ್ನೆಗಳನ್ನು ಕೇಳಿ 'ತಲೆಹರಟೆ' ಎಂಬ ಬಿರುದನ್ನೂ ಪಡೆದಿದ್ದೆ. ನನ್ನ ತಂದೆಯ ಶ್ರಾದ್ದದ ಸಮಯದಲ್ಲಿ ಇದೆ ರೀತಿಯ ಸಂವಾದ ನಡೆಸಿ ನನ್ನ ತಾಯಿ ಮೊದಲುಗೊಂಡು ಎಲ್ಲರಿಂದ ನಿಂದೆಗೆ ಗುರಿಯಾಗಿದ್ದೆ. ಯಾರಿಂದಲೂ ನನ್ನ ಸಂಶಯ ಬಗೆಹರಿಯಲಿಲ್ಲ. ನಂತರದ ದಿನಗಳಲ್ಲಿ ನನ್ನೆಲ್ಲ ಸಂಶಯಗಳಿಗೆ ಪರಿಹಾರವನ್ನು ನನ್ನ ಗುರುಗಳು ಕೊಟ್ಟರು . ಈ ಲೇಖನವನ್ನು ಓದುವಾಗ ನನ್ನೆಲ್ಲ ಹಳೆಯ ನೆನಪು ಕಾಡಿದವು.
  ದೇವರು ಈ ಜಗತ್ತನ್ನು ಸ್ರ್ಯಷ್ಟಿ ಮಾಡಿದನೇ? ಈ ಪ್ರಶ್ನೆಗೆ ಭಗವಾನ್ ರಮಣ ಮಹರ್ಷಿಗಳು ಕೊಟ್ಟಿರುವ ಉತ್ತರ ನಿಮ್ಮೊಡನೆ ಹಂಚಿಕೊಳ್ಳುವುದು ಸಮಂಜಸ ಎನಿಸಿತು. ಹೀಗಾಗಿ ಅದರ ಪೂರ್ಣ ಪಾಠ ಇಲ್ಲಿದೆ.
  "God is not the creator of the universe, the universe is merely a manifestation of his inherent power ; he is inseparable form of it, but he is not affected by its appearance or its disappearance. God is the formless being which sustains the universe."
  ಉತ್ತಮ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
  ಪ್ರಕಾಶ್

  ReplyDelete
 2. ಅರಿವ ಹಸಿವಿರುವವರಿಗೆ ಪ್ರಶ್ನೆಗಳು ಕಾಡುತ್ತವೆ ಎಂಬುದು ನಿಮ್ಮ ಪ್ರತಿಕ್ರಿಯೆಯಿಂದ ಸ್ಪಷ್ಟವಾಗುತ್ತದೆ. ಭಗವಾನ್ ರಮಣ ಮಹರ್ಷಿಗಳ ಮಾತು ಮನನೀಯ. ನಿಮ್ಮ ಅನಿಸಿಕೆಗೆ ಕೃತಜ್ಞ, ಪ್ರಕಾಶರವರೇ.

  ReplyDelete
 3. ಈಗ ಡಿಸೆಂಬರ್ 22 ರ ರಾತ್ರಿ 11.00 . ಈವರೆಗಿನ ಎಲ್ಲಾ ಪ್ರತಿಕ್ರಿಯೆಗಳ ಸಹಿತ ಲೇಖನವನ್ನು ಓದಿದೆ. ಚೆನ್ನಾಗಿದೆ. ಸುಧಾಕರ ಚತುರ್ವೇದಿಗಳ ಮತ್ತು ಸುಧಾಕರ ಶರ್ಮರ ವಿಚಾರದ ತಳಹದಿಯಲ್ಲಿ ಬರೆದಿದ್ದೀರಿ. ಅವರುಗಳ ಪ್ರಭಾವ ಚೆನ್ನಾಗಿಯೇ ಆಗಿದೆ. ಅಥವಾ ನಿಮಗೆ ಸತ್ಯ ಎನಿಸಿದ್ದನ್ನು ಪ್ರಾಮಾಣಿಕವಾಗಿ ಬರೆದಿದ್ದೀರಿ. ಈ ವಿಚಾರಧಾರೆಯಲ್ಲಿ ನನ್ನಂತಹ ಸಾಮಾನ್ಯರಿಗೆ ಸಹಜವಾಗಿ ಗೊಂದಲಗಳು ಇದ್ದೇ ಇರುತ್ತವೆ.
  ನಮಗೆ ಕಾಣದ ಒಂದು ಶಕ್ತಿ ಇದ್ದು ನಮಗೆ ಊಹಿಸಲು ಸಾಧ್ಯವಾಗದ ಎಲ್ಲಾ ಸಂಗತಿಗಳನ್ನೂ ಅದರ ಪಾಡಿಗೆ ಅದು ನಿರ್ವಹಿಸಿಕೊಂಡು ಹೋಗುತ್ತಿರುವುದೇ ಸತ್ಯ.ಅದರಲ್ಲಿ ಹುಟ್ಟು ‍ಸಾವು ಕೂಡ ಸೇರುತ್ತದೆ. ಚೈತನ್ಯ ಇದ್ದಾಗ ಅದು ಜೀವಂತ ಶರೀರ. ಚೈತನ್ಯ ಇಲ್ಲದಾಗ ಹೆಣ. ಒಂದು ಶರೀರದ ಉತ್ಪತ್ತಿಯಾಗುವಾಗ ಅದರಲ್ಲಿ ಅದಾಗಲೇ ಚೈತನ್ಯವು ಇರುತ್ತದೆ. ಚೈತನ್ಯವು ಶರೀರದಿಂದ ಇಲ್ಲವಾಗುವುದಕ್ಕೆ ಸಾವು ಎನ್ನುವರು. ಹುಟ್ಟುವಾಗಲೇ ಜೊತೆಗಿದ್ದ ಚೈತನ್ಯವು ಶರೀರವು ಸತ್ತಾಗ ಇಲ್ಲವಾಗುತ್ತದೆ. ಶರೀರ ಹುಟ್ಟುವಾಗ ಅದರಲ್ಲಿ ಚೈತನ್ಯವನ್ನು ತುಂಬಿದವನೇ ಅದನ್ನು ಹಿಂಪಡಿದಿರಬೇಕಲ್ಲವೇ?
  ವಾಹನಕ್ಕೆ ಚೈತನ್ಯ ಬರಬೇಕಾದರೆ ಕಣ್ಣಿಗೆ ಕಾಣುವ ಇಂಧನ ತುಂಬಬೇಕು. ಗಾಳಿ ಊದಿದಾಗ ಬಲೂನ್ ದೊಡ್ಡದಾಗಿ ಅದರ ಅಸ್ತಿತ್ವವನ್ನು ತೋರ್ಪಡಿಸಿಕೊಳ್ಳುತ್ತದೆ. ಪಾತ್ರ್ಗೆ ತುಂಬಿದ ನೀರನ್ನು ನೋಡ‌ಬಹುದು. ಆದರೆ ಬಲ್ಪ್ ಪ್ರಕಾಶಿಸುವಾಗ ಅದಕ್ಕೆ ಕಾರಣವಾದ ವಿದ್ಯುತ್ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ [ಮುಟ್ಟಿ ಶಾಕ್ ಹೊಡಿಸಿಕೊಳ್ಳುವುದು ಅಥವಾ ಪ್ರಾಣವನ್ನೇ ಬಿಡುವ ಮಾತು ಬೇಡ] ಹಾಗೆಯೇ ನಮ್ಮ ಚಟುವಟಿಕೆಗೆ ಕಾರಣವಾದ ಚೈತನ್ಯವನ್ನು ನಮ್ಮ ಚಟುವಟಿಕೆಯಿಂದಲೇ ಖಾತರಿ ಪಡಿಸಿಕೊಳ್ಳ ಬೇಕು ಹೊರತು ಕಣ್ಣಿಗೆ ಕಾಣುವುದಿಲ್ಲ. ಭಗವಂತ ನೆಂಬ ಮಾಹಾ ಜನರೇಟರ್ ಒಂದಿದೆ. ಅದು ಎಲ್ಲಾ ಜೇವಿಗಳಿಗೋ ಚೈತನ್ಯ ತುಂಬುವ ಹಾಗೂ ಹಿಂಪಡೆಯುವ ಕೆಲಸವನ್ನು ಅದರ ಪಾಡಿಗೆ ಅದು ಮಾಡುತ್ತಾ ಹೋಗುತ್ತದೆ. ಹುಟ್ಟು ಒಂದು ರೂಪಾಂತರ ವೆಂತಲೇ ಹೇಳಿ, ಚಿಂತೆ ಇಲ್ಲ. ಆದರೆ ಚೈತನ್ಯವೆಂಬುದು ಭಗವಂತನ ಕೊಡುಗೆ.
  ಭಗವಂತ ನಾದರೋ ಸರ್ವ ವ್ಯಾಪಿ,ಸರ್ವ ಶಕ್ತ. ಸರ್ವವ್ಯಾಪಿ ಅನ್ನುವಾಗ ಶರೀರದೊಳಗಿನ ಚೈತನ್ಯ ವೆಂದಿರಲ್ಲಾ, ಅದೂ ಕೂಡ ಅವನೇ. ಅವನಿಚ್ಛೆಯಂತೆ ಈ ಎಲ್ಲಾ ಆಟ. ಹುಟ್ಟು‍ಸಾವು ಎಲ್ಲವೂ ಸೇರಿ. ಈ ಆಟವನ್ನು ಅವನು ಸಂಪೂರ್ಣ ಗಮನಿಸುತ್ತಿರುವುದು ನಿಜ.
  ಒಂದು ಅನುಮಾನ ಮೂಡುತ್ತೆ. ಸಾಧ್ಯವಾದರೆ ಪರಿಹರಿಸಿ. ಭಗವಂತನು ಸರ್ವ ವ್ಯಾಪಿ. ಅಂದರೆ ಅವನಿಲ್ಲದೆ ಸೂಜಿಮೊನೆಯಷ್ಟೂ ಜಾಗವಿಲ್ಲ. ಅಂದರೆ ನಮ್ಮ ಅಣು ಅಣುವಿನಲ್ಲೂ ಅವನೇ ತುಂಬಿದ್ದಾನೆ. ಅಂದಮೇಲೆ ನಾವು ತಪ್ಪು‍ಸರಿ ಮಾಡುವುದು ಎಂದರೆ ಏನರ್ಥ? ಎಲ್ಲಾ ಅವನದೇ ಆಟವಲ್ಲವೇ?

  ReplyDelete