ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, December 8, 2011

"ಮಡೆ' ಸ್ನಾನ




                           ಇಂದು ಮಡ "ಮಡೆ' ಸ್ನಾನಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಮಾಜದಲ್ಲಿ ಇಂತಹ ಅನಿಷ್ಟ ನಂಬಿಕೆಗಳು ಇರಬಾರದೆಂದು ಆಶಯ. ಇದು ಒಂದು ರೀತಿಯಲ್ಲಿ ಉತ್ತಮ ಪ್ರತಿರೋಧ. ಆದರೆ, ಒಂದು ವಿಚಾರವನ್ನು ಗಮನಿಸ ಬೇಕಿದೆ. ಈ ಸಮಾಜದಲ್ಲಿ ಇರುವ ಎಲ್ಲ ಜಾತಿ, ಮತ,ಪಂಗಡ,ಕೊಮುಗಳಲ್ಲು ಒಂದಲ್ಲ ಒಂದು ರೀತಿಯ ನಂಬುಗೆಯ ಆಚಾರಗಳು ಇದ್ದೆ ಇದೆ. ಇವುಗಳಲ್ಲಿ ಕೆಲವು ಅಮಾನವೀಯ, ಹಿಂಸಾತ್ಮಕ ಮತ್ತು ಶೋಷಣೆಯಿಂದ  ಕೂಡಿದವುಗಳಾಗಿವೆ. ಉದಾಹರಣೆಗೆ : ಬೆತ್ತಲೆ ಸೇವೆ,ಕೋಣಗಳ ಬಲಿ, ಸಾಮೂಹಿಕ ಕುರಿಗಳಬಲಿ, ಸಿಡಿ, ಕೆಂಡ ಹಾಯುವುದು, ಉನ್ಮತ್ತರಾಗಿ ಮೈಕೈಗೆ ಚಾಕುವಿನಲ್ಲಿ ಇರಿದುಕೊಳ್ಳುವುದು, ದೆವ್ವ ಬಿಡಿಸುವಾಗಿನ ಹಿಂಸಾಕೃತ್ಯಗಳು( ಹೀಗೆ ಬರೆದರೆ ಪಟ್ಟಿ ಉದ್ದವಾಗುತ್ತದೆ) ಇತ್ಯಾದಿಗಳೆಲ್ಲ ಮೂಡನಂಬಿಕೆಯ !  ಜೊತೆಗೆ ಇವನ್ನು ಈಗಲೂ ನಮ್ಮ ಜನ  ಸಡಗರದಿಂದ ಆಚರಿಸುತ್ತಿದ್ದಾರೆ. ಇಂತಹ ದೃಶ್ಯಗಳನ್ನು ದೃಶ್ಯ ಮಾಧ್ಯಮದಲ್ಲಿ ವಿಶೇಷವಾಗಿ ಪ್ರಸಾರ ಮಾಡುತ್ತಿದ್ದಾರೆ. ಹೊಸ ಹೊಸ ಹೆಸರುಗಳೊಂದಿಗೆ ಮೂಡ ನಂಬಿಕೆಗಳನ್ನು ಬಿತ್ತುವ ಕೆಲಸವನ್ನು ಅವ್ಯಾಹತವಾಗಿ ದೃಶ್ಯ ಮಾಧ್ಯಮದವರು  ನಡೆಸುತ್ತಲೇ ಬಂದಿದ್ದಾರೆ.  ಇಂತಹ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಊರಿನ ದೇವಸ್ತಾನಗಳಿಗೆ, ಇನ್ನಿತರ ಸ್ತಳಗಳಿಗೆ  ಹೋಗಿ ಅಲ್ಲಿ ನಡೆಯುವ ಇಂತಹ ನಂಬಿಕೆಯ ಕಾರ್ಯ ಕ್ರಮಗಳನ್ನು ವೈವಿದ್ಯಮಯವಾಗಿ ಪ್ರತ್ಯಕ್ಷವಾಗಿ ಚಿತ್ರಿಸಿ,  ಪ್ರಸಾರಮಾಡಿ ಜನರಲ್ಲಿ  ಸುಪ್ತವಾಗಿರುವ ಇಂತಹ ನಂಬಿಕೆಗಳನ್ನು ಜಾಗೃತ ಮಾಡುತ್ತಿರುವ ವಿಚಾರ  ಎಲ್ಲರಿಗು ಗೊತ್ತಿದೆ !  ಇಂತಹ ಕಾರ್ಯಕ್ರಮಗಳಿಗೆ T R P ಕೂಡ ಜಾಸ್ತಿ ಇದೆಯೆಂದು ತಿಳಿದು ಬಂದಿದೆ.

                             ಇಂತಹ ಕಾಯಕ್ರಮಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಯಾವ ಪ್ರತಿರೋಧವು ತೋರದೆ ಇರುವುದು ಆಶ್ಚರ್ಯಕರ ವಿಚಾರ. ಸಾಮಾಜಿಕ ಕಳಕಳಿ ಇರುವ ಮಂದಿಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲವೋ ಅಥವಾ ಜಾಣತನದ ಪ್ರದರ್ಶನವೋ? ನಿಜವಾಗಿ ಮೂಡನಂಬಿಕೆಗಳನ್ನು ತೊಡೆದು ಹಾಕಬೇಕೆಂಬುವ ವಿಚಾರ ಇರುವ ಸಮಾಜದ ಕಾರ್ಯಕರ್ತರು ಎಲ್ಲೇ ಇಂತಹ ವಿಚಾರ, ಪ್ರದರ್ಶನ ನಡೆದರೂ  ಪ್ರತಿಭಟನೆ ಮಾಡಬೇಕಲ್ಲವೇ?ಯಾವುದೇ ಸಮುದಾಯದಲ್ಲಿ ಮೂಡನಂಬಿಕೆ ಪ್ರದರ್ಶನ  ಆದರು ಅದಕ್ಕೆ ವಿರೋಧ ವ್ಯಕ್ತ ಮಾಡಬೇಕಲ್ಲವೇ?  ಮಾಡಿದ್ದಾರೆಯೇ? ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆ ಸಮಾಜ ಕಾರ್ಯಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ  ಅಗತ್ಯ ಇದೆ.

                            ಇಂತಹ ಸಂದರ್ಭದಲ್ಲಿ ಸುಬ್ರಹ್ಮಣ್ಯದಲ್ಲಿ ನಡೆದ "ಮಡೆ' ಸ್ನಾನ ಕೂಡ  ಈಗ್ಗೆ ಎಷ್ಟೋ ವರ್ಷಗಳಿಂದ ನಡೆದು ಬಂದಿರುವ ಪದ್ಧತಿ, ಹೊರತು ನಿನ್ನೆ ಮೊನ್ನೆಯಿಂದ  ಶುರುವಾದದ್ದಲ್ಲ. ಅಂದರೆ, ಇದು ಬೆಳಕಿಗೆ ಬಂದಿರಲಿಲ್ಲ ಅಥವಾ ಇದಕ್ಕೆ ವಿರೋಧ ವ್ಯಕ್ತ ಆಗಿರಲಿಲ್ಲ. ಇದು ಎಲ್ಲರಿಗು ತಿಳಿದ ವಿಚಾರವೇ. ಇದೆ ರೀತಿ ಒಂದೊಂದು ದೇವಸ್ತಾನದಲ್ಲಿ ಒಂದೊಂದು ರೀತಿಯ ಆಚರಣೆಗಳು ಇದ್ದೆ ಇವೆ. ಯಾವುದೇ ಕ್ಷೇತ್ರ ಕೂಡ ಯಾವುದೇ ನಂಬಿಕೆಯ ಆಚರಣೆಗಳಿಂದ ಹೊರತಾಗಿಲ್ಲ. ಕ್ಷೇತ್ರಕ್ಕೆ ಬರುವ ಭಕ್ತರ ವಿಶ್ವಾಸ ಮತ್ತು ನಂಬಿಕೆಗೆ ಬಿಟ್ಟದ್ದು. ಇಂತಹ ನಂಬಿಕೆಯಿಂದ ಯಾರನ್ನಾದರೂ ಬಲವಂತವಾಗಿ ಬಲಿಪಶು ಮಾಡಿದ್ದರೆ ಅಂತಹ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಪ್ರತಿ ಕಾರ್ಯವು ಅಗತ್ಯವಾಗುತ್ತದೆ, ಕಾನೂನು ರೀತ್ಯ ಸಮರ್ಪಕವು ಹೌದು. ಅಂತಹ ಯಾವುದೇ ಕಾರ್ಯ ಸುಬ್ರಹ್ಮಣ್ಯದಲ್ಲಿ ನಡೆದಂತೆ ಕಾಣುವುದಿಲ್ಲ. ಯಾರನ್ನು ಬಲವಂತವಾಗಿ "ಮಡೆ' ಸ್ನಾನ ಮಾಡಲು ಕರೆದಿಲ್ಲ ಅಥವಾ ಪ್ರಚೋದಿಸಿಲ್ಲ. ಭಕ್ತರ ನಂಬಿಕೆಗೆ ಅನುಸಾರ ಅವರ ಆಚರಣೆಯನ್ನು ಯಾರಿಗೂ ತೊಂದರೆ ಮಾಡದೆ ಆಚರಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ ಏಕೆ? ಕಾನೂನಿನಲ್ಲು ಅವರವರ ಆಚರಣೆಯನ್ನು ನಡೆಸಲು  ಅವಕಾಶ ಇಲ್ಲವೇ?  ನಂಬಿಕೆಯ ವಿಚಾರದಲ್ಲಿ ಮೂಗು ತೋರಿಸುತ್ತಾ ಹೋದರೆ ಕೊನೆಗೊಂದು ದಿನ ಎಲ್ಲವು ತಪ್ಪಾಗಿಯೇ ಕಾಣಬಹುದಲ್ಲವೇ? ನಮ್ಮ  ಅಪನಂಬಿಕೆಯ ವಿಚಾರ ಇನ್ನೊಬ್ಬರ ನಂಬಿಕೆ ಆಗಬಹುದಲ್ಲವೇ?  ನಮಗೆ ಅಪಥ್ಯವಾದದ್ದು  ಇನ್ನೊಬ್ಬರಿಗೆ ಪಥ್ಯವಾ ಗಬಾರದು ಎಂದೇನಿಲ್ಲ ಅಲ್ಲವೇ? ಹಾಗೆ ನೋಡಿದರೆ ನಮ್ಮ ಪೂಜೆ ಪುನಸ್ಕಾರಗಳು, ಪ್ರಾರ್ಥನೆಗಳು, ಎಲ್ಲವು ನಂಬಿಕೆಯ ಆಧಾರದಲ್ಲಿಯೇ ಇರುವುದಲ್ಲವೇ? ಇಂತಹ ಆಚರಣೆಯ ಸಂಧರ್ಭದಲ್ಲಿ ಉಪವಾಸ, ದಾನ, ಹೋಮ ಹವನ, ಜಪ,ಇತ್ಯಾದಿಗಳೆಲ್ಲವೂ  ನಂಬಿಕೆಯನ್ನೇ  ಅವಲಂಬಿಸಿವೆ. ಇದನ್ನು ಪ್ರಶ್ನಿಸ ಬಹುದೇ? 

                           ಸಮಾಜದಲ್ಲಿ  ಜನರು ತಾವು ಕಂಡುಕೊಂಡ, ನಂಬಿಕೊಂಡ ಅನೇಕ  ಆಚರಣೆಗಳನ್ನು ಮಾಡುತ್ತ ಅದರಲ್ಲೇ ಸುಖವನ್ನು ಕಂಡುಕೊಳ್ಳುತ್ತಿದ್ದಾರೆ. ಇದರಿಂದ  ಅವರಿಗೆ ನೆಮ್ಮದಿ ಇದೆ. ಸಂತೋಷ ಇದೆ. ಅದನ್ನು ಕಸಿಯಲು ನಮಗೆಷ್ಟರ ಹಕ್ಕಿದೆ? ಒಂದು ಪಕ್ಷ ಈ ಆಚರಣೆಗಳನ್ನು ಬಿಟ್ಟ ಪಕ್ಷದಲ್ಲಿ ಅವರಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ಅವರ ಈ ಆಚರಣೆಯನ್ನು ಕಸಿದುಕೊಳ್ಳುವುದರಿಂದ ಸಮಾಜಕ್ಕೆ ನಾವು ನೀಡುವುದೇನು? ಈ ಆಚರಣೆ ನಿಂತು ಇನ್ನೊಂದು ಪ್ರಾರಂಭ ಆಗಬಹುದಲ್ಲವೇ?   ಅನಾದಿ ಕಾಲದಿಂದ ನಡೆದಿರುವ ಎಷ್ಟೋ ಆಚರಣೆಗಳು ಕಾಲಾನುಕ್ರಮದಲ್ಲಿ ಬಿಟ್ಟುಹೊಗುತ್ತಿವೆ.  ಇದಕ್ಕೆ ಕಾರಣ ಸಮಾಜದ ಜನರಲ್ಲಿ ಬೆಳೆದ ಪ್ರಜ್ಞೆ.   ಈ  ಪ್ರಜ್ನಾವಂತಿಗೆ ಬರುವತನಕ ಜನರನ್ನು ಬದಲಿಸಲು ಕಷ್ಟ.

                           ಸ್ವಲ್ಪ ಯೋಚಿಸೋಣ. ಸಮಾಜವನ್ನು ತಿದ್ದುವ ಕೆಲಸಕ್ಕೆ ಕೈ ಹಾಕುವ ಮುಂಚೆ ನಮ್ಮನ್ನು ನಾವು ತಿದ್ದಿಕೊಂಡು, ನಾವು ಸಮಾಜಕ್ಕೆ ಮಾದರಿಯಾಗಬಲ್ಲವೆ  ಎಂಬುದರ ಬಗ್ಗೆ ಚಿಂತಿಸುವುದು  ಅಗತ್ಯ ಎನಿಸುವುದಿಲ್ಲವೇ? ಇಂತಹ ಮೂಡನಂಬಿಕೆ ಎನ್ನುವಂತಹ ಕಾರ್ಯಗಳಲ್ಲಿ ನಾವು ಭಾಗಿಯಾಗದೆ ಇರೋಣ. ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡದೆ ಇರೋಣ. ನಮ್ಮ ಮನೆಗಳಲ್ಲಿ ನಾವು ಇಂತಹ ಆಚರಣೆಗಳಿಂದ ಮುಕ್ತ ಮಾಡೋಣ.

                            ಇದಕ್ಕೆ ನೀವು ಏನು ಹೇಳುತ್ತಿರ?...........

ಹೆಚ್.ಏನ್.ಪ್ರಕಾಶ್

----------------------------------------------------------


ಈ ಬಗ್ಗೆ  ಸಮಾಜದ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವೇದಸುಧೆಯ      ಅಭಿಮಾನಿಗಳು  ತಮ್ಮ ತಮ್ಮ ಅಭಿಪ್ರಾಯವನ್ನು ಕೊಡಬೇಕಾಗಿ ಕೋರಿಕೆ.

-ಹರಿಹರಪುರ ಶ್ರೀಧರ್

ಸಂಪಾದಕ 

5 comments:

 1. ಪ್ರತಿಭಟನೆಯ ಮಾರ್ಗದಿಂದ ಮೂಢನಂಬಿಕೆಯನ್ನು ಅಳಿಸಲಾಗುವುದಿಲ್ಲ. ಪ್ರಜ್ಞಾ ಜಾಗೃತಿಯಿಂದ ಮಾತ್ರ ಬದಲಾವಣೆ ಆದೀತು.

  ReplyDelete
 2. ಪ್ರಜ್ಞಾ ಜಾಗೃತಿ, ಇದು ಹೇಗೆ? ಸ್ವಲ್ಪ ವಿವರಿಸಬಹುದೇ?

  ReplyDelete
 3. ನಿಮ್ಮ ವಿಚಾರಧಾರೆ ಸಂಪೂರ್ಣ ತಪ್ಪು. ತಪ್ಪುಗಳನ್ನು ಪಟ್ಟಿಮಾಡಿ ಈ ತಪ್ಪನ್ನೂ ಸರಿ ಎಂಬರ್ಥದಲ್ಲಿ ಬರೆದಿದ್ದೀರಿ. ಹಿಂದೂ ಧರ್ಮದ ಭವಿಷ್ಯದ ದೃಷ್ಟಿಯಿಂದ ಇಂತಹ ಆಚರಣೆಗಳು ಒಳ್ಳೆಯದಲ್ಲ. ಅವು ನಿಂತಷ್ಟೂ ಒಳ್ಳೆಯದು. ಹೊಸಸಹಸ್ರಮಾನಕ್ಕೆ ಹಿಂದೂ ಧರ್ಮ ಇಂತಹ ಆಚರಣೆಗಳೊಂದಿಗೆ ಮುನ್ನುಗ್ಗಬೇಕೆ?

  ReplyDelete
 4. ಕುದುರೆಯ ಮುಖವನ್ನು ನೀರಿಗೆ ಅದ್ದಿದರೂ ಅದು ನೀರು ಕುಡಿಯದು! ಬಲವಂತವಾಗಿ ಯಾರಿಗೂ ಹೀಗೆಯೇ ಮಾಡಿ ಅಂದರೆ ಮಾಡಲಾರರು. ರಾಜ್ಯಾದ್ಯಂತ ಮಡೆಸ್ನಾನ ವಿರೋಧಿಸಿದರೂ, ಅದರ ಪರವಾಗಿ ಸುಬ್ರಹ್ಮಣ್ಯ ಬಂದ್ ಯಶಸ್ವಿಯಾಗಿ ನಡೆದದ್ದು ಇದಕ್ಕೆ ಸಾಕ್ಷಿ. ಅವರಿಗೆ ಸೂಕ್ತವಾಗಿ ತಿಳಿವಳಿಕೆ ನೀಡುವ, ಜಾಗೃತಗೊಳಿಸುವ ಕೆಲಸವಾಗಬೇಕು."ಮಡೆಸ್ನಾನ ಮೂಢ ನಂಬಿಕೆ ಎಂದರೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವುದು ಯಾವುದು ಮೂಢನಂಬಿಕೆ ಅಲ್ಲ, ಹೇಳಿ" ಎಂಬುದು ಶ್ರೀ ವೀರೇಂದ್ರ ಹೆಗ್ಗಡೆಯವರ ಮಾತು!

  ReplyDelete
 5. ನಿಮ್ಮೆಲ್ಲರಿಗೆ ಧನ್ಯವಾದಗಳು
  ಹೆಚ್ ಎನ್ ಪ್ರಕಾಶ್

  ReplyDelete