Pages

Monday, February 20, 2012

ಮಂಕು ತಿಮ್ಮನ ಕಗ್ಗ - ರಸಧಾರೆ (೫)








ಏನು ಜೀವನದರ್ಥ?


ದೇವರೆಂಬುದದೇನು ಕಗ್ಗತ್ತಲ ಗವಿಯೆ?
ನಾವರಿಯಲಾದೆಲ್ಲದರೊಟ್ಟು ಹೆಸರೇ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?
ಸಾವು ಹುಟ್ಟುಗಳೇನು?- ಮಂಕುತಿಮ್ಮ  

ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?
ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? - ಮಂಕುತಿಮ್ಮ.

ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.

ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವಿನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು  ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ  ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವೀ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ.  ಕಾಡು  ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ.  ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣು ಹಂಪಲುಗಳು ಯತೇಚ್ಚವಾಗಿ  ಸಿಗುತ್ತದೆ. ಹಾಗೇ  ಗಗನದಿಂದ ಬಂದ ಮಳೆ ತನಗೆ ಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು" ದೇವರು" ಎಂದ.  ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನ ಸ್ತಿತಿ ಹಾಗೆ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ ಪಕ್ಷಿ ಗಿಡ ಮರ,ನದಿ ಸಮುದ್ರ, ಮಳೆ ಬಿಸಿಲು ಬೆಳಕು ಹೂವು  ಹಣ್ಣು  ಹೀಗೆ ಎಲ್ಲವೂ ಅವನಿಗೆ ದೈವ ಸಮಾನ.  

ಆದರೆ ಆ ದೇವರೇನು  ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ " ಅದು " ಇದೇ" ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ  ಅಲ್ಲವೆ?. ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ( ಪರಿಭಾಷೆ = definition )ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ.

ವಾಚಕರೆ, ನೋಡಿ ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ?  ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಕೇಳುತ್ತಾರೆ.

ಹಾಗೆ  ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ   ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ?  ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಕಗ್ಗದ ಮೂಲಕ  ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.

ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ವಿಚಾರ ಮಾಡುವ, ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ

ರವಿ ತಿರುಮಲೈ

2 comments:

  1. [ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?]

    ಕಾಯುವ ನಿದ್ದದ್ದೇ ಆದರೆ ಜಗದಲ್ಲಿರುವ ಈ ದು:ಖಗಳೇಕೆ? ಎಂದು ಡಿ.ವಿ.ಜಿ ಯವರು ಹೇಳಿರುವುದು ನಮ್ಮಲ್ಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕಲು . ಸ್ವಾಮಿ ಜಗದಾತ್ಮಾನಂದರು ಬಲು ಸೊಗಸಾಗಿ ಹೇಳುತ್ತಾರೆ.ಭಗವಂತನನ್ನು ನೋಡಬೇಕೇ? ಮಗುವೊಂದು ತಾಯಿಯನ್ನು ನಂಬಿರುವಷ್ಟು ಅಚಲ ನಂಬಿಕೆ ನಿನ್ನಲ್ಲಿದ್ದರೆ ನೀನು ನೋಡ ಬಹುದು. ದೋಣಿಯೊಂದು ನದಿಯಲ್ಲಿ ಹೊರಟಿದೆ. ಬಿರುಗಾಳಿಯಿಂದಾಗಿ ಪ್ರಯಾಣಿಕರೆಲ್ಲಾ ತತ್ತರಿಸಿ ಹೋಗುತ್ತಾರೆ. ಆದರೆ ಮಗುವೊಂದು ಆನಂದವಾಗಿ ಆಡಿಕೊಂಡಿದೆ. ಮಗುವನ್ನು ಕೇಳುತ್ತಾರೆ." ದೋಣಿ ಮುಳುಗುತ್ತಿದೆ.ನಿನಗೆ ಹೆದರಿಕೆಯಾಗುವುದಿಲ್ಲವೇ? ಮಗು ಹೇಳುತ್ತೆ" ಇಲ್ಲ, ಅಮ್ಮ ಬಂದು ನನ್ನನ್ನು ಎತ್ತಿಕೊಂಡು ಹೋಗುತ್ತಾಳೆ"
    ದೇವರನ್ನು ನೋಡಲು ಅಂತಹ ಅಚಲವಾದ ನಂಬಿಕೆ ಬೇಕಲ್ಲವೇ? ಇಡೀ ಬ್ರಹ್ಮಾಂಡವನ್ನು ನಡೆಸುತ್ತಿರುವ ಆ ಭಗವಂತನನ್ನು ಹೇಗೆ ಕಲ್ಪಿಸಿಕೊಂಡು ನೋಡಬೇಕು? ಅನುಭವಿಸಬೇಕಷ್ಟೆ.

    ReplyDelete
  2. ಸನ್ಮಾನ್ಯ ರವಿಯವರೇ, ಕಗ್ಗದ ಮುಕ್ತಕಗಳಲ್ಲಿ ಒಂದೊಂದನ್ನೂ ನಿತ್ಯವೂ ಬಿತ್ತರಿಸುವ, ಅರ್ಥವಿಸುವ ನಿಮ್ಮಿಂದ ಉತ್ತಮ ಕಾರ್ಯ ನಡೆಯುತ್ತದೆ, ನನಗೆ ಅದಾಗಲೇ ತಾವು ಫೇಸ್ ಬುಕ್ ನಲ್ಲಿ ಪರಿಚಿತರಾದರೂ ವೇದಸುಧೆಗೆ ತಾವು ಇತ್ತೀಚೆಗೆ ಬಂದಿದ್ದೀರಿ. ಇಲ್ಲಿಗೆ ತಮಗೆ ನನ್ನ ವೈಯ್ಯಕ್ತಿಕದ ಸ್ವಾಗತಕೂಡ. ವೇದಸುಧೆಯಲ್ಲಿ ಪ್ರಕಟಗೊಳ್ಳುವ ಬಹುತೇಕ ಎಲ್ಲಾ ಕೃತ್ತಿಗಳನ್ನೂ ಓದಿದರೂ ಸಮಯದ ಅಭಾವದಿಂದ ನಾನು ಕೆಲವೊಮ್ಮೆ ಪ್ರತಿಕ್ರಿಯೆಗಳನ್ನು ಹಾಕಲಾಗುತ್ತಿಲ್ಲ. ಈ ದಿಸೆಯಿಂದ ಯಾರೂ ತಪ್ಪುತಿಳಿಯಬಾರದೆಂದು ಈ ಹಿಂದೇ ನಾನು ವಿನಂತಿಸಿದ್ದೇನೆ. ನಿಮ್ಮ ಈ ಕಾರ್ಯ ಮುನ್ನಡೆದು ಹಲವು ಕೃತಿಗಳು ಲೋಕಾರ್ಪಣಗೊಳ್ಳಲಿ, ನಮಸ್ಕಾರ.

    ReplyDelete