ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, March 6, 2012

ಸತ್ಯ ಹುಡುಕಲು ಹೊರಟಾಗ ಬರೀ ಗೊಂದಲವೇ!

ಸತ್ಯ ಹುಡುಕಲು ಹೊರಟಾಗ ಬರೀ ಗೊಂದಲವೇ! ಇಂದು    ಹಾಸನದ ಸಮೀಪ ದೊಡ್ದಪುರದಲ್ಲಿ ನಡೆಯುತ್ತಿರುವ ಸಾಂಕೇತಿಕ ಅಶ್ವಮೇಧಯಾಗದ ಕಡೆಯದಿನ . ಯಾಗಕ್ಕೆ ಬಂದಿರುವ ನೂರಾರು ವೈದಿಕರಲ್ಲಿ  ನಮ್ಮ ಮನೆಯಲ್ಲಿ ನಾಲ್ಕಾರುಜನರು ತಂಗುತ್ತಿದ್ದಾರೆ.  ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರೊಡನೆ  ಯಜ್ಞದಲ್ಲಿ ಪ್ರಾಣಿಬಲಿ ಯ ಬಗ್ಗೆ    ವೇದ ದಲ್ಲಿದೆಯೇ? ಎಂದರೆ  "ಇದೆ" ಎನ್ನಲು ಸಂಕೋಚವನ್ನೂ ಪಡುವುದಿಲ್ಲ. ಆದರೆ ನಾವು ಇಲ್ಲಿ ಅಶ್ವಮೇಧ ಯಾಗವನ್ನೇ ಮಾಡುತ್ತಿಲ್ಲವೆಂದು ಹೇಳುತ್ತಾರೆ. "ಸಾಂಕೇತಿಕ ಅಶ್ವಮೇಧಯಾಗ " ಎಂದೇ ಪ್ರಚಾರವಾಗಿದೆಯಲ್ಲಾ! ಎಂದು ಕೇಳಿದರೆ  ವ್ಯವಸ್ಥಾಪಕರನ್ನು ಕೇಳಿ, ಇಲ್ಲಿ ಬೇರೆ ಬೇರೆ ಯಜ್ಞಗಳನ್ನು ಮಾಡುತ್ತಿದ್ದೇವೆ. ಇಲ್ಲಿ ಪ್ರಾಣಿಬಲಿ ಇಲ್ಲ  ಎನ್ನುತ್ತಾರೆ. ಹಾಗಾದರೆ ಕುದುರೆ  ಇದೆಯಲ್ಲಾ!  ಎಂದರೆ ಅದರ ಸಮ್ಮುಖದಲ್ಲಿ ಯಜ್ಞ ನಡೆಯತ್ತದೆ ಹೊರತು " ಬಲಿ  ಇಲ್ಲ" " ಸಾ೦ಕೇತಿಕ ವಾಗಿಯೂ ಇಲ್ಲ" ಎನ್ನುತ್ತಾರೆ.  ಅಶ್ವ ಮೇಧದ ಮಂತ್ರವನ್ನು ಹೇಳುವುದಿಲ್ಲವೇ? ಎಂದರೆ  ಅಶ್ವಮೇಧಯಾಗವೆ ಇಲ್ಲವೆಂದಮೇಲೆ  ಮಂತ್ರವೆಲ್ಲಿ ? ಎನ್ನುತ್ತಾರೆ.  ಒಟ್ಟಿನಲ್ಲಿ ಎಲ್ಲವೂ ಗೊಂದಲದ ಗೂಡು. ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದದಲ್ಲಿ ಹೇಳಿದೆ ,ಎನ್ನುತ್ತಾರೆ. ಆಧಾರವನ್ನೂ ಕೊಡುವುದಾಗಿ ಹೇಳುತ್ತಾರೆ. ಕೊಟ್ಟಿಲ್ಲ. ಕೊಡಬಹುದೇನೋ .......
ಇರಲಿ. ಕೊಟ್ಟರೂ ಅದನ್ನು  ಸುಧಾಕರಶರ್ಮರು ಒಪ್ಪುವುದಿಲ್ಲ.

ನನ್ನಲ್ಲಿ  ಮತ್ತಷ್ಟು ಗೊಂದಲಗಳಿಗೆ ಈ ಚರ್ಚೆಗಳು ಕಾರಣ ವಾಯ್ತಷ್ಟೇ.  
ಚರ್ಚೆಗಾಗಿ ಮಾತ್ರ ಇಲ್ಲಿ ಒಂದು ವಿಚಾರವನ್ನು  ಹರಿಬಿಡುತ್ತೇನೆ.   ಸಾಮಾನ್ಯವಾಗಿ " ನೀನು ಒಳ್ಳೆಯವನಾಗಬೇಕು, ನೀನು ಕೋಪ ಬಿಡಬೇಕು.....ಇತ್ಯಾದಿ ಯಾರಿಗಾದರೂ ಉಪದೆಶಿಸಿದಾಗ ನಾವು ಏನು ಅರ್ಥ ಮಾಡಿಕೊಳ್ಳಬೇಕು? ಉಪದೇಶ ಪಡೆಯುತ್ತಿರುವ ವ್ಯಕ್ತಿಯು  ಅಲ್ಲಿಯವರಗೆ ಒಳ್ಳೆಯವನಾಗಿರಲಿಲ್ಲ. ಕೋಪಿಷ್ಠ ನಾಗಿದ್ದ, ಎಂದು ತಾನೇ ತಿಳಿಯಬೇಕು .

ಇದೇ ಭಾವದಲ್ಲಿ  ಚಿಂತನೆ ನಡೆಸಿದಾಗ  "ವೇದಗಳಲ್ಲಿ  ಅಲ್ಲಲ್ಲಿ  ಹಸುವನ್ನು ಕೊಲ್ಲಬೇಡ, ಕುದುರೆಯನ್ನು ಕೊಲ್ಲಬೇಡ, ಕುರಿಯನ್ನು ಕೊಲ್ಲಬೇಡ, ಆಶಕ್ತವಾದ ಪ್ರಾಣಿಯನ್ನು ಕೊಲ್ಲಬೇಡ"  ಎಂದು ಹೇಳುವಾಗ   ಒಂದನ್ನು ಕೊಲ್ಲ ಬೇಡವೆಂದಾಗ  ಇನ್ನೊಂದನ್ನು ಕೊಂದರೆ ಪರವಾಗಿಲ್ಲವೆಂದು ಭಾವಿಸಬಹುದಲ್ಲವೇ? 

ವೇದದಲ್ಲಿ ಅಲ್ಲಲ್ಲಿ ಯಾಕೆ ಹೀಗೆ ಪ್ರತ್ಯೇಕವಾಗಿ ಮಂತ್ರಗಳಿವೆ? ಅಂದರೆ  ಆ ಸಂದರ್ಭದಲ್ಲಿ ಯಜ್ಞಕ್ಕೆ ಪ್ರಾಣಿಬಲಿ ಇತ್ತು ಎಂದು ಅರ್ಥೈಸಬೇಕಾಗುತ್ತದಲ್ಲವೇ?  ಹೌದು ಇತ್ತು ಅದು ತಪ್ಪೆಂದು ವೇದ ಹೇಳುತ್ತಲಿದೆ ಎಂದಾದರೆ  ವೇದವೇ ಅಲ್ಲವೇ?  ಎಲ್ಲಕ್ಕಿಂತ ಪ್ರಾಚೀನ. ಮನುಷ್ಯನಿಗೆ ಜ್ಞಾನ ಬಂದಿದ್ದೇ  ವೇದದಿಂದ ಎಂತಲೂ ಭಾವಿಸಬಹುದಲ್ಲವೇ? 

ಮೊಂಡುವಾದಕ್ಕಾಗಿ ಈ ಮಾತುಗಳನ್ನು ಬರೆಯುತ್ತಿಲ್ಲ. ನಿನ್ನೆ ರಾತ್ರಿ ನನಗೆ ಕೆಲವರು " ನೀವು ವೇದಸುಧೆಯ ಸಂಪಾದಕರು, ವೇದವನ್ನು ಒಪ್ಪುವವರು. ನೀವು ಅಶ್ವಮೇಧ ಯಾಗಕ್ಕೆ ಹೋಗಲಿಲ್ಲವೇಕೆ? ಎಂದು ಪ್ರಶ್ನಿಸಿದರು.ಸೋಮಯಾಗ ಇತ್ಯಾದಿ ಅನೇಕ   ಯಜ್ಞಗಳು        ಪ್ರಾಣಿಬಲಿಇಲ್ಲದೆ  ಮುಗಿಯುವುದೇ ಇಲ್ಲವೆಂಬ ಮಾತನ್ನು       ವೈದಿಕರ ಬಾಯಲ್ಲಿ  ಕೇಳುವಾಗ ನನಗೆ ದು:ಖವಾಗಿದೆ. ಇನ್ನು  ಅಶ್ವಮೇಧ ಯಾಗಕ್ಕೆ ಹೋಗುವ ಮಾತೆಲ್ಲಿ? 

ವೈದಿಕರುಗಲೊಡನೆ ಮಾತನಾಡುವಾಗ ಬರೀ ಗೊಂದಲವೇ.  ಅಶ್ವಮೇಧಯಾಗವನ್ನು ಮಾಡಬೇಕಾದ್ದು ಕ್ಷತ್ರಿಯರು. ಅವರು ಯಜ್ಞಕ್ಕೆ ಪ್ರಾಣಿಯನ್ನು   ಬಲಿಕೊಡ  ಬಹುದು. ಎನ್ನುತ್ತಾರೆ. ಸರಿ. ಮಂತ್ರವನ್ನು ನೀವು ಹೇಳುತ್ತಾ ಅದಕ್ಕೆ ಸಾಕ್ಷಿಯಾಗುತ್ತೀರಲ್ಲಾ! ಎಂದರೆ ಸರಿಯಾದ ಉತ್ತರವಿಲ್ಲ. 

ಅಂತೂ ಕೇವಲ ನನ್ನ    ಸದ್ಭಾವನೆ ಗಳು  ವೈದಿಕರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ.  ಯಾವುದೋ ಕಾರಣದಿಂದ  ಇಂದಿನ ಸಮಾಜ ಒಪ್ಪದ ಅನೇಕ ಸಂಗತಿಗಳು ನಡೆದು ಬಂದಿರಬಹುದು.ಆದರೆ ಇಂದಿನ ಯುವ ಪುರೋಹಿತರುಗಳಾದರೂ "ಪ್ರಾಣಿಬಲಿಯಂತ "  ವಿಚಾರಗಳನ್ನು  ಸಮಾಜದಲ್ಲಿ ಹೇಳುವುದನ್ನು ಬಿಟ್ಟು ಸಮಾಜಕ್ಕೆ   ಯಜ್ಞದ ಮಹತ್ವವನ್ನು ತಿಳಿಸಿ ಎಂಬ ಮನ: ಪೂರ್ವಕ ಸಲಹೆ ನೀಡಿರುವೆ. ಅದೆಷ್ಟು ಪರಿಣಾಮ ವಾಗುತ್ತದೋ ನಾನರಿಯೆ. 
ಇನ್ನು  ವೇದಾಧ್ಯಾಯೀ ಸುಧಾಕರಶರ್ಮ ರಂತಹ  ಸತ್ಯವನ್ನು ಹುಡುಕುವ ವಿದ್ವಾಂಸರು ಒಂದಿಷ್ಟು ಕಠಿಣ ಪದಗಳಿಂದ  ವೈದಿಕರ ನಡೆಯನ್ನು ಖಂಡಿ ಸಬಹುದು. ಆದರೆ ಪ್ರಯೋಜನವಾಗದು. ಎಲ್ಲರಲ್ಲೂ ಕಿರಿಕಿರಿ ತಪ್ಪಿದ್ದಲ್ಲ.  
ಮಾನವನ ನೆಮ್ಮದಿಗೆ ಕಾರಣವಾಗಬೇಕಿರುವ ವೇದದ ವಿಚಾರಗಳು ಗೊಂದಲವನ್ನು ಮೂಡಿಸುತ್ತಿವೆಯಲ್ಲಾ! ಎಂಬುದು ಬೇಸರದ ವಿಚಾರ.
---------------------------------------------
"ಯಜ್ಞದಲ್ಲಿ ಪ್ರಾಣಿಬಲಿ" ಚರ್ಚೆಯಲ್ಲಿ ಹಲವರು ಬೇರೆ ಬೇರೆ ತಾಣದಲ್ಲಿ ಚರ್ಚಿಸುತ್ತಿದ್ದು  ನನಗೆ ಹಲವು ಮೇಲ ಗಳು ಬರುತ್ತಿವೆ. ಆ ಎಲ್ಲವನ್ನೂ  ಇಲ್ಲಿ ಸೇರಿಸುತ್ತಾ ಹೋಗುತ್ತೇನೆ.

No comments:

Post a Comment