ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, June 6, 2012

ಪ್ರತಿಫಲ .................ಒಂದಷ್ಟು ಹರಟೆ" ಈ ಜಗತ್ತಿನಲ್ಲಿ ಒಳ್ಳೆಯದನ್ನು  ಮಾಡಿದವರಿಗೆ ಎಂದಿಗೂ ಕೆಡಕಾಗುವುದಿಲ್ಲ " ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ನಿತ್ಯಪಾಠ.  ಆದರೂ, ಕೆಲವೊಮ್ಮೆ ಈ ಮಾತಿನಲ್ಲಿ ನಮಗೆ ಸಂಶಯ ಕಾಡುತ್ತದೆ .  ಒಳ್ಳೆಯ ಕೆಲಸ ಮಾಡಲು ಹೋಗಿ ಕಷ್ಟಕ್ಕೆ ಸಿಲುಕಿಕೊಂಡಾಗ,  ಒಳ್ಳೆಯ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಬಂದಾಗ, ಒಳ್ಳೆಯವರು ಕಷ್ಟ ಪಡುವುದನ್ನು   ಗಮನಿಸುವಾಗ ಸಹಜವಾಗಿ ಒಳ್ಳೆಯ ಕೆಲಸ ಮಾಡಿದವರಿಗೆ ನಿಜವಾಗಿ ಒಳಿತಾಗುತ್ತದೆಯೇ?  ಎಂಬ ಪ್ರಶ್ನೆ ಏಳುತ್ತದೆ.  ಇಂತಹ ಸಮಯದಲ್ಲೂ ನಮ್ಮ ಹಿರಿಯರ ನುಡಿ ಒಂದೇ .  "ಒಳ್ಳೆಯವರಿಗೆ ಒಳಿತೇ ಆಗಬೇಕು .  ಇದು ಸಹಜ ಮತ್ತು ಭಗವಂತನ ನಿಯಮ ಕೂಡ " ಎನ್ನುತ್ತಾರೆ. 


ಒಳ್ಳೆಯದನ್ನು ಮಾಡಲು ಹೋಗುವುದೆಂದರೆ ಕೆಲವೊಮ್ಮೆ ಸಾಗರದ ಕಡೆಗೆ ರಭಸದಿಂದ ಹರಿಯುತ್ತಿರುವ ನದಿಯಲ್ಲಿ ವಿರುದ್ದವಾಗಿ ಈಜಿದಂತೆ.  ಕಷ್ಟವಾಗಲೇ ಬೇಕು, ಏಕೆಂದರೆ ನದಿಗೆ ಒಂದೇ ಗುರಿ ಸಾಗರ ಸೇರಬೇಕೆನ್ನುವುದು, ಹೀಗಾಗಿ ಏನೇ ಎದುರು ಬಂದರು ಅದನ್ನು ತಳ್ಳಿಕೊಂಡು ಮುಂದೆ ಸಾಗಿಬಿಡುತ್ತದೆ ನದಿ. ಇದು ನಮಗೆ ಕಲಿಸುವ ಪಾಠವೆಂದರೆ "ನಿನ್ನ ಗುರಿ ಮುಟ್ಟುವ ತನಕ ಪ್ರಯತ್ನ ಜಾರಿಯಲ್ಲಿಡು, ಅಡೆ ತಡೆಗಳಿಗೆ ಹೆದರದೆ ಮುನ್ನುಗ್ಗು".   ಒಂದು ಒಳ್ಳೆಯ ಕೆಲಸ ಮಾಡುವಾಗ ಅಡ್ಡಿ ಆತಂಕಗಳು ಸಹಜವಾಗಿ ಬಂದೆ ಬರುತ್ತವೆ, ಆದರೆ ಈ ಅಡ್ಡಿ ಆತಂಕಗಳು ನಮ್ಮ ಎದೆಕುಗ್ಗಿಸಬಾರದು ಬದಲಿಗೆ ಛಲ ನಮ್ಮದಾಗಬೇಕು .  ಯಾವುದೇ ಕಷ್ಟಗಳು ನಮ್ಮನ್ನು ಹೆಚ್ಚು ಬಲಿಷ್ಟರನ್ನಾಗಿ ಮಾಡುತ್ತವೆ ಎಂಬ ವಿಶ್ವಾಸ ನಮ್ಮಲ್ಲಿ ಬರಬೇಕು.  ಏಕೆಂದರೆ, ಪ್ರತಿ ಕಷ್ಟ ಎದುರಿಸಿದಾಗಲು ನಮಗೆ  ಒಂದು ಉತ್ತಮ ಸಂಸ್ಕಾರ ಸಂಪಾದನೆಯಾಗಿರುತ್ತದೆ. ಎಂದಿಗೂ ಇದರಿಂದ ವಿಫಲತೆ ಎಂಬುದಿಲ್ಲ.  ಎಷ್ಟು ಪ್ರಯತ್ನವೋ ಅಷ್ಟು ಸಂಸ್ಕಾರ ಫಲ ಸಿಕ್ಕೆ ಸಿಗುತ್ತದೆ. ಇದು ಕೂಡ ಪ್ರಕೃತಿ ನಿಯಮ.


ಒಂದು ವಸ್ತುವಿನ ಬೆಲೆ ಹತ್ತಾರು ಸಾವಿರಗಳಾಗಬಹುದು.  ಒಮ್ಮೆಲೇ ಇಷ್ಟು ಹಣ ಹೊಂದಿಸಲು ಸಾಧ್ಯವೇ ಎಂಬ ಸಂಶಯವೂ ಬರಬಹುದು.  ಆದರೆ ಪ್ರತಿ ನೂರು ರುಪಾಯಿ ಕೂಡ ಈ  ಸಾವಿರದ ಗಾತ್ರವನ್ನು ಕಡಿಮೆ ಮಾಡಲು  ಮತ್ತು ವಿಶ್ವಾಸ ಹೆಚ್ಚಿಸಲು ಸಹಕಾರಿ. ನಾವು ಗಳಿಸಿದ ನೂರು ರೂಪಾಯಿ ಮೊತ್ತ ಕಡಿಮೆ ಎನಿಸಿದರು ಆ ಹಣಕ್ಕೆ ಇರುವ ಮೌಲ್ಯ ಇದ್ದೆ ಇರುವ ಹಾಗೆ ನಾವು ಮಾಡುವ ಪ್ರತಿ ಕೆಲಸಕ್ಕೂ  ಮೌಲ್ಯ ಸಿಕ್ಕೆ ಸಿಗುತ್ತದೆ.  ನಾವು ಮಾಡುವ ಪಾಪ, ಪುಣ್ಯ, ಸತ್ಕರ್ಮ ಎಲ್ಲದರ ಮೌಲ್ಯವು ನಮ್ಮ ನಮ್ಮ ಖಾತೆಗೆ ಜಮಾ ಆಗೇ ತಿರುತ್ತದೆ. ಯಾವುದರಿಂದಲೂ ತಪ್ಪಿಸಿಕೊಳ್ಳುವ ಮಾತೆ ಇಲ್ಲ. ನಾವು ಗಳಿಸಿಕೊಂಡ ಸಂಸ್ಕಾರ ಫಲಗಳು ಮುಗಿಯುವವರೆಗೂ ನಮ್ಮನ್ನು ನೆರಳಿನ ಹಾಗೆ ಹಿಂಬಾಲಿಸುವ ಕಾರಣ ಇದು ಒಂದು ಜನ್ಮಕ್ಕಲ್ಲ ಹಲವಾರು ಜನ್ಮಗಳವರೆಗೂ ಸಾಗುತ್ತದೆ ಎನ್ನುತ್ತದೆ ಕರ್ಮ ಸಿದ್ಧಾಂತ.  


ಆದ್ದರಿಂದಲೇ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಒಂದು ಭರವಸೆಯ ಸಂದೇಶ ಕೊಡುತ್ತಾನೆ. " ನೀನು ಒಳ್ಳೆಯದನ್ನು ಮಾಡಿದ್ದೆ ಆದರೆ ನಿನಗೆ ದುರ್ಗತಿ ಬರಲು ಸಾಧ್ಯವೇ ಇಲ್ಲ."  ಈ ಜಗತ್ತಿನ ನಿಯಮವು ಹೀಗೆಯೇ. ನಾವು ಭೂಮಿಯಲ್ಲಿ ಏನನ್ನು ಬಿತ್ತುತ್ತೆವೋ ಅದು ಒಂದಕ್ಕೆ ನೂರಾಗಿ ವಾಪಸ್ಸು ಕೊಡುತ್ತವೆ. ಮಾವು ಬಿತ್ತಿದರೆ ಮಾವು, ಬೇವು ಬಿತ್ತಿದರೆ ಬೇವು.ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಪ್ರತಿಫಲ, ಕೆಟ್ಟದ್ದು ಮಾಡಿದರೆ ಕೆಟ್ಟ ಪ್ರತಿಫಲ, ಎಂಬುದನ್ನು ಒಪ್ಪಲೇಬೇಕು. ಆದರೆ ಯಾವುದೇ ಕೆಲಸವನ್ನು ಪೂರ್ಣಮಾಡದೆ ಇದ್ದಾಗ ಅದರ ಫಲವು ಅಪೂರ್ಣವೇ.  ಆದ್ದರಿಂದಲೇ ನಮ್ಮ ಹಿರಿಯರು ಹಿಡಿದ ಕೆಲಸವನ್ನು ಮುಗಿಯುವವರೆಗೂ ಬೇರೆಡೆ ಗಮನ ಕೊಡಬೇಡ ಎಂದು ಸಾರಿ ಸಾರಿ ಹೇಳಿದ್ದು. ಇದನ್ನೇ " one thing at a time that done well, it is a best rule as many can tell " ಎಂದಿರುವುದು. 


ಈ ಜಗತ್ತಿನಲ್ಲಿ ಸೋಲದೆ, ಒಮ್ಮೆಲೇ ಜಯ ಯಾರಿಗೆ ಸಿಕ್ಕಿದೆ?  ಈ ಜಯ  ಸಿಗಬೇಕಾದರೆ ಸೋಲಿನ ರುಚಿ ಕಂಡಿರಲೇ ಬೇಕು, ಆಗಲೇ ಗೆಲುವು ಹೆಚ್ಚು ರುಚಿಕರವಾಗುವುದು.  ಒಂದು ಆದರ್ಶಕ್ಕಾಗಿ ಸಾಧನೆ ಮಾಡುವಾತನಿಗೆ ಸೋಲು ಸ್ವಾಭಾವಿಕ. ಇದನ್ನು ಸಾಧಕ ಸೋಲೆಂದು ಪರಿಗಣಿಸಲೇ ಬಾರದು. ಈ ಅಡ್ಡಿ ಆತಂಕಗಳು ನಮ್ಮ ಸಹನಶಕ್ತಿಯನ್ನು ಪರೀಕ್ಷಿಸುವ ಪ್ರಶ್ನ ಪತಿಕೆಗಳು, ಪರೀಕ್ಷಾ  ಸಮಯಗಳು. ಇದಕ್ಕೆ ಉತ್ತರಿಸದೆ ಮುಂದಿನ ತರಗತಿಗೆ ಹೋಗಲು ಸಾಧ್ಯವೇ ಇಲ್ಲ. ಒಂದೊಂದು ಪರೀಕ್ಷೆ ಗೆದ್ದ ಹಾಗೆ ನಮ್ಮ ಸಂಸ್ಕಾರ ಘಟ್ಟಿಯಾಗುತ್ತ ಹೋಗುತ್ತವೆ. ಒಂದೊಂದು ಸೋಲು ನಮ್ಮನ್ನು ಪರಿಪಕ್ವವನ್ನಾಗಿ  ಮಾಡುತ್ತವೆ.  ನಡೆಯುವವನು ಮಾತ್ರ ಎಡವಲು ಸಾಧ್ಯ.  ಸುಮ್ಮನೆ ಕುಳಿತವನಿಗೆ, ಮಲಗಿದವನಿಗೆ ಎಡವುದು ಎಂದರೇನೆಂದು ಗೊತ್ತೇ ಇಲ್ಲ.  ನಾವು ಕಾಣುವ ತಾತ್ಕಾಲಿಕ ಜಯ  , ಸೋಲು ಇವೆಲ್ಲ ಅಂತಿಮ ಗುರಿ ಮುಟ್ಟಲು ಮಧ್ಯೆ ಮಧ್ಯೆ ಇರುವ ವಿಶ್ರಾಂತಿ ತಾಣಗಳು.  ಇಲ್ಲಿ ಕುಳಿತು ವಿಶ್ರಮಿಸಿ, ಸಾಧಕ ಬಾಧಕಗಳ ಪರಾಮರ್ಶೆ ಮಾಡಬಹುದು.  ಸಾಧಕನಿಗೆ ಅಂತಿಮ ಗುರಿ ಮುಖ್ಯವೇ ಹೊರತು ಮಿಕ್ಕವು ಯಾವುದು ಅಲ್ಲ. ಪ್ರಯತ್ನಶೀಲನಿಗೆ ಪರಮಾತ್ಮನ ಸಹಾಯ ಇದ್ದೆ ಇರುತ್ತದೆ. ಆದ್ದರಿಂದ ಒಳ್ಳೆಯ ಆಲೋಚನೆಯನ್ನು ಮಾಡೋಣ, ಒಳ್ಳೆಯ ಕೆಲಸಕ್ಕೆ ಮನಸ್ಸು ಮಾಡುತ್ತಾ ಪ್ರಯತ್ನಶೀಲತೆಯಲ್ಲಿ  ನಮ್ಮನ್ನು ತೊಡಗಿಸಿಕೊಂಡು ಸಾಧನಾ ಹಾದಿಯಲ್ಲಿ ನಡೆಯಲು ಪ್ರಾರಂಭಿಸಿದರೆ ಭಗವಂತನ ಕೃಪೆ ನಮ್ಮ ಮೇಲೆ ಸದಾ ಕಾಲ ಇದ್ದೆ ಇರುತ್ತದೆ.

ಒಳ್ಳೆಯ ಪ್ರಯತ್ನ ನಮ್ಮದಾದಾಗ ಅದರ ಒಳ್ಳೆಯ ಪ್ರತಿಫಲವೂ ನಮಗೆ ದೊರೆಯಲೇ ಬೇಕು.  ಎನೆನ್ನುತ್ತಿರಾ? 

ಹೆಚ್ ಏನ್ ಪ್ರಕಾಶ್ 

6 comments:

 1. ಒಳ್ಳೆಯ ವೈಚಾರಿಕ ಹರಟೆಗೆ ಧನ್ಯವಾದಗಳು, ಆತ್ಮೀಯ ಪ್ರಕಾಶರೇ.
  ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
  ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
  ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
  ರೀತಿ ಸುಂದರವಿರೆ ಯಶ ನಿನದೆ ಮೂಢ ||

  ReplyDelete
 2. ನಿಮ್ಮನ್ತಹ ಸ್ನೆಹಿತರಿರಲು ನನಗಿನ್ನು ಚಿನ್ತಾಯಾಕ? ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು
  ಪ್ರಕಾಶ್

  ReplyDelete
 3. ಸಾಧಕನಿಗೆ ಸಾಂತ್ವನ ಎನ್ನಲೇ? ಪ್ರೇರಣೆ ಎನ್ನಲೇ? ಅಂತೂ ಒಂದು ಸ್ಪಷ್ಟ. ಸಾಮಾಜಿಕ ಚಿಂತಕನಿಗೆ ಮಾತ್ರ ಈ ಚಿಂತನೆಗಳು ಬರಲು ಸಾಧ್ಯ. ನಮ್ಮ ನಮ್ಮ ಅನುಭವವೇ ನಮಗೆ ಬರೆಯಲು ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಸಾಧಕನಿಗೆ ಸರಿಯಾದ ಮಾರ್ಗದರ್ಶನ ಬೇಕಾಗುತ್ತದೆ. ಶ್ರೀ ಶಂಕರಾಚಾರ್ಯರ ಸಾಧನಾ ಪಂಚಕವೂ ಅದರಲ್ಲಿ ಒಂದು. ಸಾಮಾನ್ಯವಾಗಿ ಅಧ್ಯಾತ್ಮ ಚಿಂತನೆಯ ಯಾವುದೇ ಗ್ರಂಥಗಳು ನಮಗೆ ಪ್ರೇರಣಾದಾಯಕ. ಅಷ್ಟಾವಕ್ರ ಗೀತೆ ಓದುವಾಗ ಇದೇ ಸಾಕಲ್ಲವೇ ? ಎನಿಸದೆ ಇರದು, ಡಿ.ವಿ.ಜಿ.ಯವರ ಕಗ್ಗವನ್ನು ಓದುವಾಗ ಇಷ್ಟು ಸರಳಮಾತುಗಳಿಗಿಂತ ಬೇರೆ ಬೇಕೆ ? ಎನಿಸುತ್ತದೆ. ಸಮಾಜ ಚಿಂತಕನಿಗೆ ತನ್ನ ಕಾರ್ಯಪಥದಲ್ಲಿ ಪ್ರೇರಣೆ ಪಡೆಯಲು, ಅವಮಾನ ಸೈರಿಸಲು, ಮೆಚ್ಚುಗೆಗೆ ಬೀಗದಿರಲು, ಎದುರಾಳಿಗೆ ಹೆದರದೆ ಮುಂದುವರೆಯಲು ಹಲವಾರು ನಮ್ಮ ತಪಸ್ವಿಗಳ ಮಾತುನೆರವಾಗಬಲ್ಲದು. ಅಂತಹ ಲೇಖನಗಳನ್ನು ಮುಂದುವರೆಸಿ ಎಂದು ವಿನಂತಿಸುವೆ. ಧನ್ಯವಾದಗಳು.

  ReplyDelete
  Replies
  1. ಆತ್ಮೀಯ ಶ್ರೀಧರ್
   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
   ಪ್ರಕಾಶ್

   Delete
 4. ತುಂಬಾ ಚೆನ್ನಾಗಿದೆ ಪ್ರಕಾಶ್ ಅವರೇ..
  ನಮ್ಮ ದೊಡ್ಡಮ್ಮ ನವರು ಎಂದಿಗೂ ಯಾರಿಗೂ ಕೇಡನ್ನು ಬಯಸಿದವರಲ್ಲ, ತುಂಬಾ ಕಷ್ಟಾಳು, ಮದುವೆಯಾದಗಿಂದಲೂ ಅತೀ ಬಡತನದಲ್ಲೇ ಬೆಳೆದು ಮಕ್ಕಳನ್ನ ಉತ್ತಮ ಪ್ರಜೆಯಾಗಿ ಬೆಳೆಸಿದವರು ಆದರೆ ಇಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದನ್ನೇ ಮಾಡಿದವರಿಗೆ ಈ ಶಿಕ್ಷೆ ಯಾಕೆ ಅನ್ನುವ ಪ್ರಶ್ನೆ ನಮ್ಮ ಮನೆಯಲ್ಲಿ ಸಹಜವಾಗಿ ಎಲ್ಲರಲ್ಲೂ ಮೂಡಿತ್ತು. ಆದರೆ ನಮ್ಮ ಪೂರ್ವ ಜನ್ಮದ ಪಾಪವಿರಬಹುದು ಅಂದುಕೊಂಡು ಅದಕ್ಕೆ ವಿರುದ್ಧವಾಗಿ ಪ್ರತಿಭಟಿಸಿ ಇಂದು ಆರಾಮವಾಗಿದ್ದಾರೆ.ಆದರೆ ಅವರ ಕಷ್ಟದ ಫಲವೋ ಏನೋ ಎಂಬಂತೆ ಅವರ ಮೂರೂ ಮಕ್ಕಳು ಸುಸ್ಥಿತಿಯಲ್ಲಿ ಇರುವುದರಿಂದ ಉತ್ತಮ ಔಷದೊಪಚಾರಗಳಿಂದ ಇಂದು ಗುಣಮುಖರಾಗಿದ್ದಾರೆ. ಇದೆ ಅಲ್ಲವೇ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಅನ್ನುವುದು.
  ಇನ್ನೊಂದು ವಿಷಯ ಏನೆಂದರೆ "ಸೋಲೇ ಗೆಲುವಿನ ಮೂಲ" ಅನ್ನುವಂತೆ ಗೆಲ್ಲಬೇಕಾದರೆ ಸೋಲಲೇ ಬೇಕು ಆಗ ಮಾತ್ರ ಗೆಲುವಿನ ಆನಂದ ಅನುಭವಿಸಲು ಸಾಧ್ಯ.
  ಏಳುಬೀಳಿಲ್ಲದ ಜೀವನವಿಲ್ಲ ,ಒಳಿತು ಮಾಡಿದವರಿಗೆಂದೂ ಕೆಡುಕಿಲ್ಲ ಅನ್ನುವ ಮಾತು ನಿಜಕ್ಕೂ ಸತ್ಯ.

  ReplyDelete
 5. ಆತ್ಮೀಯ ಗಣೇಶ್,
  ಧನ್ಯವಾದಗಳು, ನಿಮ್ಮ ಅಭಿಪ್ರಾಯ ಸಂತಸ ತಂದಿದೆ.
  ಪ್ರಕಾಶ್

  ReplyDelete