ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, August 3, 2012

ಗೃಹಪ್ರವೇಶ


ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ   ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು.  ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.

ಗುರುನಾಥರು : ಏನ್ಸಾರ್, ಬಂದಿದ್ದು?

ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.

ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ?  ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.

ಗುರುಬಂಧು   ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.

ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ?  ಗಾರೆ ಕೆಲಸದವನು, ಲೈಟ್   ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ!  ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ  ಪ್ರಶ್ನೆ ಮಾಡಿದರು.

ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು  ನಕ್ಕರು.

ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?" 

ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.

ಗುರುನಾಥರು  : " ಎಲ್ಲರನ್ನು ಕರೆದು ಊಟ ಹಾಕಬೇಕು!  ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು. 

ಗುರುಬಂಧು  ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."

ಗುರುನಾಥರು  " ಅಂದರೆ,  ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ,   ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.

ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ  ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ?  ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ?  ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ.  ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ   ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.

ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು.  ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು.  ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ.  ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ  ಹೊರಟರು.

 "ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು.  ಅಲ್ಲವೇ ಸಾರ್? " ಎಂದರು ಗುರುನಾಥರು.

ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ.  ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.

6 comments:

 1. ಪ್ರಕಾಶ್, ಎಂತಹ ಹೃದಯಸ್ಪರ್ಷಿ ಮಾತು!
  ಗುರುನಾಥರಂತವರು ಹೀಗೆ ನೇರವಾಗಿ ಹೇಳುವುದರಿಂದ ಖಂಡಿತವಾಗಿಯೂ ಭಕ್ತರಿಗೆ ತಮ್ಮ ತಪ್ಪು ಅರಿವಾಗುತ್ತೆ, ನಿಜದ ಅರಿವಾಗುತ್ತೆ.ನಿಜವಾಗಿ ಅಪ್ಪ-ಅಮ್ಮನ ಸೇವೆ ಮಾಡದೆ ಎಷ್ಟು ಸಾವಿರಜನರನ್ನು ಕರೆದು ಊಟ ಹಾಕಿದರೆ ಏನು ಬಂತು? ಎಲ್ಲಾ ಬೂಟಾಟಿಕೆ! ತಮ್ಮ ದೊಡ್ದಸ್ತಿಕೆಯ ಪ್ರದರ್ಶನ ಅಷ್ಟೆ! ಸಣ್ಣ ಜನ ಮಾಡುವ ದೊಡ್ದ ಪ್ರದರ್ಶನ ಅಷ್ಟೆ! ನಿಜವಾಗಿ ಇಂತಹ ಸಂದರ್ಭದಲ್ಲಿ ಸ್ವಂತ ಅನುಭವವನ್ನೂ ಹಂಚಿಕೊಳ್ಳ ಬೇಕೆನಿಸುತ್ತೆ. ನಾನು ಇಲ್ಲಿ ಹೇಳುವುದು ಬಡಾಯಿ ಕೊಚ್ಚಿಕೊಳ್ಳಲು ಅಲ್ಲ. ನಿಜಸಂಗತಿಗಳು ಯುವಕರಿಗೆ ತಿಳಿದರೆ ಏನಾದರೂ ಪ್ರಯೋಜನ ಆಗಲೆಂದು ಅಷ್ಟೆ!!.ನಮ್ಮ ತಾಯಿ ವಿಧಿವಶರಾಗಿ 18 ವರ್ಷಗಳಾಯ್ತು. ಹಾಸನದ ನಮ್ಮ ಮನೆಯಲ್ಲಿಯೇ ಇದ್ದು ಕೊನೆಗಾಲದಲ್ಲಿ ಸಂಜೀವಿನಿ ಆಸ್ಪತ್ರೆಯಲ್ಲಿ ಸುಮಾರು ಒಂದುವರೆ ತಿಂಗಳು ಇದ್ದರು. ಅವರ ಅಂತಿಮ ದಿನಗಳು ಹತ್ತಿರವಾಗಿತ್ತು. ನಮ್ಮ ಸ್ವಂತ ಊರಿನ ನಮ್ಮ ಮನೆಯಲ್ಲಿ ಪ್ರಾಣಬಿಡ ಬೇಕೆಂಬುದು ಅವರ ಬಯಕೆ. ಊರಲ್ಲಿ ಒಂದು ಹದಿನೈದು ದಿನ ಇದ್ದರು. ಆ ದಿನಗಳಲ್ಲಿ ನಮ್ಮ ತಂದೆ ನಮ್ಮ ಮನೆಯಲ್ಲಿ ಹಾಸದಲ್ಲಿಯೇ ಇದ್ದರು. ನಮ್ಮ ತಾಯಿ ಪ್ರಾಣ ಬಿಡುವ ಮುಂಚೆ ಹೇಳಿದ ಒಂದು ಮಾತು ಸ್ಮರಣೀಯ.ಅವರ ಸ್ನೇಹಿತೆ ಗೌರಮ್ಮನವರ ಹತ್ತಿರ ಹೇಳಿದರು" ನೋಡು ಗೌರಮ್ಮ, ನಮ್ಮ ಶ್ರೀಧರ ಅವರಪ್ಪನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ಮಂಗಳ[ನನ್ನ ಪತ್ನಿ] ಅಂತೂ ಹೆತ್ತ ಅಪ್ಪನನ್ನು ನೋಡಿಕೊಳ್ಳುವಂತೆ ನೋಡಿ ಕೊಳ್ಳುತ್ತಿದ್ದಾಳೆ, ನನಗಿನ್ನೇನು ಚಿಂತೆ? ನಿರಾಳವಾಗಿ ಪ್ರಾಣ ಬಿಡುತ್ತೇನೆಂದು ಹೇಳಿ ಪ್ರಾಣ ಬಿಟ್ಟರು. ನೋಡಿ, ಇಲ್ಲಿ ಒಬ್ಬ ಧರ್ಮ ಪತ್ನಿಯ ಧರ್ಮ ಬುದ್ಧಿಯನ್ನು! ತಾನು ನಿರಾಳವಾಗಿ ಜೀವ ಬಿಡಬೇಕಾದರೂ ತನ್ನ ಪತಿಯ ಕ್ಷೇಮದ ಬಗ್ಗೆ ಎಂತಾ ಕಾಲಜಿ!! ನಮ್ಮ ಅಪ್ಪನ ಕೊನೆಯ ದಿನಗಳಲ್ಲಿ ನನ್ನ ಎಡಗೈ ಶಕ್ತಿಯನ್ನು ಕಳೆದುಕೊಂಡಿತ್ತು. ಒಂದೇ ಕೈಯ್ಯಲ್ಲಿ ಅವರಿಗೆ ಸ್ನಾನ ಮಾಡಿಸಬೇಕಿತ್ತು. ಸೂಕ್ತಗಳನ್ನು ಹೇಳಿಕೊಂಡು ದೇವರಿಗೆ ಅಭಿಷೇಕಮಾಡಿಸುವಂತೆ ನಾನು ಅವರಿಗೆ ಸ್ನಾನ ಮಾಡಿಸುತ್ತಿದ್ದೆ. ನಿಜಕ್ಕೂ ನನಗೆ ಬಲು ಕಷ್ಟ ಆಗ್ತಾ ಇತ್ತು. ನನ್ನ ಆಸ್ಥಿತಿಯಲ್ಲಿ ನೋವು ಮರೆಯಲು ಮಂತ್ರ ಹೇಳುತ್ತಿದ್ದೆ. ನಮ್ಮ ಅಪ್ಪ ಸಾಯುವಾಗ ಹೇಳಿದ ಒಂದು ಮಾತು ನನ್ನ ಜೀವನಕ್ಕೆ ಆಶೀರ್ವಾದವಾಯ್ತು. ನನ್ನ ಜೀವನದಲ್ಲಿ ಅತ್ಯಂತ ಸುಖವಾಗಿ ನನ್ನ ಮುಂದಿನ ಜೀವನ ಸಾಗುತ್ತಾ ಬಂತು. ಬಹಳ ಬಡ ತನ ಇದ್ದುದರಿಂದ ನಾನು ಹೈಸ್ಕೂಲು ಓದುವಾಗಲೇ ದುಡಿಯಲು ಆರಂಭಿಸಿದ್ದೆ. ಆಮೇಲೆ ಬೆಳೆದದ್ದು ಸಮಾಜದ ಆಶ್ರಯದಲ್ಲಿ. ನಮ್ಮ ಅಪ್ಪನಿಗೆ ಆ ಸಂಕಟ ಅವರ ಮನದೊಳಗೆ ತುಂಬಿತ್ತು.ಅವರು ಪ್ರಾಣ ಬಿಡುವಾಗ ಶುದ್ಧ ಅಂತ:ಕರಂಣದಿಂದ ಆಶೀರ್ವಾದ ಮಾಡಿದರು" ಭಗವಂತನು ನಿನ್ನನ್ನು ಚೆನ್ನಾಗಿ ಇಟ್ಟಿರಲಿ" ಈ ಮಾತು ಹೇಳುತ್ತಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅವರ ಆಶೀರ್ವಾದ ಈಗಲೂ ನಮ್ಮನ್ನು ಕಾಯುತ್ತಿದೆ.

  ReplyDelete
 2. ಅವಧೂತರ ಬಗ್ಗೆ ಬರೆಯಲು ಒಂದು ಬ್ಲಾಗ್ ಆರಂಭಿಸಿರುವೆ. ಆದರೆ ವೇದಸುಧೆಯ ನಿರ್ವಹಣೆಗೇ ಸಮಯ ಸಾಲದ್ದರಿಂದ ಅದನ್ನು ಮುಂದುವರೆಸಲಾಗಿಲ್ಲ. ದಯಮಾಡಿ ನೀವು ಅದನ್ನು ಮುಂದುವರೆಸಿ. ನಿಮ್ಮ ಜೊತೆಗೆ ಶ್ರೀಧರ ಸ್ವಾಮಿಗಳ ಬಗ್ಗೆ ಬರೆಯಲು ಶಿವಶಂಕರ್ ಎಂಬುವರು ಇದ್ದಾರೆ. ದಯಮಾಡಿ ಗುರುನಾಥರ ಬಗ್ಗೆ ಅದರಲ್ಲಿ ಬರೆಯಲು ವಿನಂತಿಸುವೆ. ನಿಮಗೆ ಅಧಿಕೃತ ಆಹ್ವಾನ ಕಳಿಸಿರುವೆ.http://avadoota.blogspot.in/

  ReplyDelete
  Replies
  1. This comment has been removed by the author.

   Delete
  2. ಆತ್ಮೀಯ ಶ್ರೀಧರ್ ,
   ನಿಮ್ಮ ಅವಧೂತ ಬ್ಲಾಗ್ನಲ್ಲಿ ನನ್ನ ಲೇಖನ ಹಾಕಲು ಆಗಲಿಲ್ಲ. ಈ ಬಗ್ಗೆ ನನಗೆ ಹೇಗೆ ಹಾಕಬೆಂಬುದರ ಬಗ್ಗೆ ಗೊತ್ತಿಲ್ಲ. ದಯಮಾಡಿ ತಿಳಿಸಿಕೊಡಿ ಇಲ್ಲ ಈ ಲೇಖನ ಮತ್ತು ಮುಂದಿನ ಲೇಖನಗಳನ್ನು ನೀವೇ ಆ ಬ್ಲಾಗ್ನಲ್ಲಿ ಹಾಕಿಬಿಡಿ. ದಯಮಾಡಿ ಬೇಸರಿಸಬೇಡಿ.
   ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಮತ್ತು ನಿಮ್ಮ ಆಹ್ವಾನಕ್ಕೆ ಕೃತಜ್ಞ.

   Delete
 3. ಈ ಲೇಖನ ಮತ್ತು ತಮ್ಮ ವೈಯುಕ್ತಿಕ ಅನುಭವವನ್ನ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.
  ಸ್ವರ್ಣಾ

  ReplyDelete
  Replies
  1. ಆತ್ಮೀಯರೇ,
   ಧನ್ಯವಾದಗಳು.

   Delete