ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತನಾರಾಯಣ ಅವರು ನಂತರ ಮಾತನಾಡಿದರು.
‘ಮನೆ ಮನೆಯೂ ಸಂಸ್ಕಾರ ಕೇಂದ್ರವಾಗಬೇಕು’
ಹಾಸನ, ಏ. ೮: ಶ್ರೇಷ್ಠತೆಯಿಂದ ಅತ್ಯಂತ ಶ್ರೇಷ್ಠತೆಯೆಡೆಗೆ ಸಾಗುವುದೇ ನಿಜವಾದ ಶಿಕ್ಷಣ; ಇಂತಹ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆಯಲು ಇಂದು ಪ್ರತಿ ಮನೆ ಮನೆಯೂ ಸಂಸ್ಕಾರ ಕೇಂದ್ರಗಳಾಗಬೇಕು ಹಾಗೂ ವ್ಯಕ್ತಿತ್ವ ವಿಕಾಸ ಕೇಂದ್ರಗಳಾಗಬೇಕು ಎಂದು ನಗರದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತ ನಾರಾಯಣ ಅವರು ಕಿವಿಮಾತು ಹೇಳಿದರು.
ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಮೆಕಾಲೆ ಪ್ರಣೀತ ಶಿಕ್ಷಣಕ್ಕೆ ಒಳಪಟ್ಟಿರುವ ಭಾರತೀಯರು ಇಂದು ಕೇವಲ ಹಣ ಸಂಪಾದನೆ ಮಾಡುವ ಶಿಕ್ಷಣಕ್ಕೆ ಜೋತುಬಿದ್ದು, ನಮ್ಮ ಮಕ್ಕಳಿಗೆ ನಾವೇ ಮಾನಸಿಕ ಒತ್ತಡ ಹೇರುತ್ತಾ; ಅಂಕ ಗಳಿಕೆಯನ್ನೇ ಗುರಿಯಾಗಿಸಿ; ಅವರಿಗೆ ಅವಿಧೇಯತೆ, ಸುಳ್ಳು ಹೇಳುವುದು; ಕಳ್ಳತನ ಮಾಡುವುದು; ವಂಚನೆ ಮಾಡುವುದು ಇತ್ಯಾದಿ ಕೆಟ್ಟ ಶಿಕ್ಷಣವನ್ನು ಪರೋಕ್ಷವಾಗಿ ಕಲಿಸುತ್ತಿದ್ದೇವೆ. ನಾವು ಮಕ್ಕಳಿಗೆ ದುಡಿದು ತಿನ್ನುವುದನ್ನು ಕಲಿಸದೆ; ಹೊಡೆದು ತಿನ್ನುವುದನ್ನು ಕಲಿಸುತ್ತಿದ್ದೇವೆ ಎಂದು ವಿಷಾದಿಸಿದರು.
ಇಂತಹ ಕೆಟ್ಟ ಮೆಕಾಲೆ ಪ್ರಣೀತ ಶಿಕ್ಷಣ ನಮಗೆ ಬೇಡ; ಮಹರ್ಷಿ ಪ್ರಣೀತ ಶಿಕ್ಷಣ ನಮಗಿಂದು ಅತ್ಯಗತ್ಯವಾಗಿದೆ; ಸಂಸ್ಕಾರ ರಹಿತ ಶಿಕ್ಷಣ ಶಿಕ್ಷಣವೇ ಅಲ್ಲ; ಪಠ್ಯ ಕ್ರಮ ಆಧರಿಸಿದ ನೈತಿಕ ಶಿಕ್ಷಣವೂ ಬೇಕಾಗಿಲ್ಲ; ಮನೆ ಮನೆಗಳಲ್ಲಿ ಈ ಹಿಂದೆ ಇದ್ದಂತಹ ಉತ್ತಮ ಮೌಲ್ಯಗಳನ್ನೆ ಪುನರ್ ಪ್ರತಿಷ್ಠಾಪಿಸಬೇಕು; ಆಗ ಮಕ್ಕಳು ತಾವಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತವೆ; ಪೋಷಕರೇ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅವರು ತಿಳಿಹೇಳಿದರು.
ಆಧ್ಯಾತ್ಮವೆಂದರೆ ವಯಸ್ಸಾದವರು ಕಾಲಹರಣ ಮಾಡಲು ಆಶ್ರಯಿಸುವ ಸಂಗತಿಯಲ್ಲ; ಸದಾ ಕಾಲವೂ ಬೇರೆಯವರ ಹಿತಚಿಂತನೆ ಕುರಿತು ಆಲೋಚಿಸುವುದೇ ನಿಜವಾದ ಆಧ್ಯಾತ್ಮ. ಹೀಗಾಗಿ ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ಆಧ್ಯಾತ್ಮದ ಪರಿಚಯ ಮಾಡಬೇಕು; ಅದಕ್ಕೆ ಪ್ರೇರಣೆ ನೀಡುವ ಪ್ರತಿ ಸಂಗತಿಗಳನ್ನೂ ಗಮನಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು
ವೇದ ಭಾರತೀ ಅಧ್ಯಕ್ಷರಾದ ಕ.ವೆಂ. ನಾಗರಾಜು ಪ್ರಾಸ್ತಾವಿಕ ಮಾತುಗಳನ್ನಾಡಿ, ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ. ಜಗತ್ತಿನ ಸರ್ವರಿಗೂ ಮುಕ್ತವಾಗಿ ತೆರೆದುಕೊಂಡಿರುವ ವೇದ ಮಂತ್ರಗಳನ್ನು ಆಧರಿಸಿ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲು ಪ್ರಯತ್ನಿಸಲಾಗುವುದು. ಇಲ್ಲಿ ಪಡೆದ ಸಂಸ್ಕಾರವನ್ನು ಜೀವನದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಕೋರಿದರು. ವೇದ ಭಾರತೀ ಸಹೋದರ ಸಂಸ್ಥೆಗಳಾದ ‘ವೇದಸುಧೆ’; ‘ವೇದ ಜೀವನ’ಕ್ಕೆ ಸೇರಿದ ಬ್ಲಾಗ್ಗಳಿಗೆ ಓದುಗರ ಸಂಖ್ಯೆ ದಿನೇದಿನೇ ಏರುತ್ತಿದೆ; ಈಗಾಗಲೇ ‘ವೇದಸುಧೆ’ಯಲ್ಲಿ ೯೫ ಸಾವಿರ ಮೀರಿ ಪುಟಗಳ ವೀಕ್ಷಣೆಯಾಗಿದೆ ಎಂದು ಹೆಮ್ಮೆಪಟ್ಟರು.
‘ವೇದಸುಧೆ’ ಬ್ಲಾಗ್ ಸಂಪಾದಕ ಹಾಗೂ ವೇದ ಭಾರತೀ ಪದಾಧಿಕಾರಿ ಹರಿಹರಪುರ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಚಿನ್ನಪ್ಪ ಹಾಜರಿದ್ದರು. ಆರಂಭದಲ್ಲಿ ವೇದಘೋಷ ನಡೆಯಿತು.
ಈ ಬಾಲ ಸಂಸ್ಕಾರ ಶಿಬಿರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ವೇದಾಧ್ಯಾಯಿ ವಿಶ್ವನಾಥ ಶರ್ಮ ಮತ್ತಿತರರು ತರಬೇತಿ ನೀಡುವರು.
ವರದಿ: ಹೆಚ್.ಎಸ್.ಪ್ರಭಾಕರ್
ಹಾಸನ ಜಿಲ್ಲಾ ವರದಿಗಾರರು
ಸಂಯುಕ್ತ ಕರ್ನಾಟಕ
 |
ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು |
 |
ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ |
 |
ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ |
 |
ಮನಸಾ ಸತತಂ ಸ್ಮರಣೀಯಂ ಗೀತೆ ಹೇಳಿಕೊಡುತ್ತಿರುವ ಭಗಿನಿ ಸುಧಾನಟರಾಜ್ |
 |
ವೇದ ಪಾಠ ಮಾಡುತ್ತಿರುವ ವೇದಾಧ್ಯಾಯೀ ಶ್ರೀ ಪ್ರಸಾದ್ ಶರ್ಮ |
 |
" ದೇಶ ದೇಶ ದೇಶ ದೇಶ ದೇಶ ನನ್ನದು" ಶಿಬಿರಗೀತೆ ಹೇಳಿಕೊಡುತ್ತಿರುವ ಭಗಿನಿ ಕಲಾವತಿ |
No comments:
Post a Comment