ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, August 4, 2014

ಮಾತನ್ನು ಹೇಗೆ ಆಡಬೇಕು?

ಸಕ್ತುಮಿವ ತಿತ ಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತಾ|
ಅತ್ರ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ|| (ಋಗ್ವೇದ.೧೦.೭೧.೨.)
ಹಿಟ್ಟನ್ನು ಜರಡಿಯಾಡುವಂತೆ ಪವಿತ್ರಗೊಳಿಸಲ್ಪಟ್ಟ ಮಾತನ್ನು ಮನಃಪೂರ್ವಕವಾಗಿ ಎಲ್ಲಿ ಧೀರರು ಉಂಟುಮಾಡುತ್ತಾರೋ ಅಲ್ಲಿ ಸ್ನೇಹವು ಸ್ನೇಹವನ್ನು ಅರಿಯುತ್ತದೆ ಮತ್ತು ಅಂತಹ ಮಾತುಗಳಲ್ಲಿಯೇ ಮಂಗಳಕರವಾದ ಸಂಪತ್ತು ಸ್ಥಿರವಾಗಿ ನೆಲೆಗೊಂಡಿರುತ್ತದೆ.
ನಮಗೆ ಮಾತನಾಡುವುದಕ್ಕೆ ಬರುತ್ತದೆ ಎಂದು ಹೇಗಾದರೂ ಮಾತನಾಡಲಾದೀತೇ? ಮಾತನ್ನು ಹೇಗೆ ಆಡಬೇಕು? ವೇದಮಂತ್ರವು ಹೇಳುತ್ತದೆ ” ನಿನ್ನ ಮೆದುಳಿನಲ್ಲಿ ಇಂತಾ ಮಾತನಾಡಬೆಕೆಂದು ನಿರ್ದೇಶನ ಸಿಕ್ಕಿ ಬಾಯಿ ಮೂಲಕ ಮಾತು ಹೊರಬರುವ ಮುಂಚೆ  ಹಿಟ್ಟನ್ನು ಜರಡಿಯಾಡುವಂತೆ  ಅದನ್ನು ಜರಡಿ ಯಾಡಿರಬೇಕು,  ನಾನಾಡುತ್ತಿರುವ ಮಾತು ಬೇರೆಯವರ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆ, ಅದು ಇನ್ನೊಬ್ಬರಿಗೆ ನೋವುಂಟುಮಾಡುತ್ತದೆಯೇ? ಸತ್ಯವಾಗಿದೆಯೇ? ಕೇಳುವವರಿಗೂ ಹೇಳುವ ನನಗೂ ಹಿತಮಾಗಿದೆಯೇ? ಇಬ್ಬರಿಗೂ ಪ್ರಿಯ ವಾಗಿದೆಯೇ? …ಹೀಗೆ ಎಲ್ಲಾ ರೀತಿಯಲ್ಲೂ ಜರಡಿಯಾಡಿ ಮಾತು ಹೊರಬೀಳಬೇಕು.

ಜರಡಿಯ ಮೂರು ಪದರಗಳಂತೆ  ಸತ್ಯ, ಹಿತ, ಪ್ರಿಯ ಈ ಮೂರೂ ಗುಣಗಳಿರುವಹಾಗೆ ಜರಡಿಯಾಡಿ ಆನಂತರ ಮಾತು ಹೊರಬೀಳ ಬೇಕು. ಹೊರ ಬಿದ್ದ ಮಾತು ಎಷ್ಟಿರಬೇಕು?      ಮಿತವಾಗಿರಬೇಕು. ವ್ಯರ್ಥ ಮಾತನ್ನು ಆಡಬಾರದು.ಹೀಗಿದ್ದಾಗ ನಮ್ಮ ಸ್ನೇಹ ಗಟ್ಟಿ ಯಾಗಿ ಉಳಿಯುತ್ತದೆ. ಇದರಿಂದ ಧೀರನಾದವನು  ವ್ಯರ್ಥವಾದ ಮಾತನ್ನು ಆಡಲಾರ. ಅವನ ಮಾತು ಮಧುರವಾಗಿ, ಸತ್ಯವಾಗಿ, ಹಿತವಾಗಿ ಮಿತವಾಗಿ ಎಲ್ಲರಿಗೂ ಆಪ್ಯಾಯಮಾನವಾಗಿರುತ್ತದೆ. 

No comments:

Post a Comment