ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, November 27, 2014

ಜೀವನವೇದ-೪೦      ಸೂರ್ಯನು ಜಗತ್ತಿಗೆ ಬೆಳಕು ಕೊಟ್ಟರೆ ಅವನಲ್ಲಿ ಆಶಕ್ತಿ ಕೊಟ್ಟವನಾರು?

ನಿತ್ಯವೂ ಅಗ್ನಿಹೋತ್ರವನ್ನು ಮಾಡುವಾಗ ಮಂತ್ರಗಳ ಅರ್ಥವನ್ನು ನಾವು ಸರಿಯಾಗಿ ತಿಳಿದುಕೊಂಡರೆ ಆಧ್ಯಾತ್ಮಿಕವಾಗಿ ನಾವು ಬೆಳೆಯಬಲ್ಲೆವು. ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಪಠಿಸುವ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ. 

ಓಂ ದೇವ ಸವಿತಃ ಪ್ರ ಸುವ ಯಜ್ಞಂ ಪ್ರ ಸುವ ಯಜ್ಞಪತಿಂ ಭಗಾಯ |
ದಿವ್ಯೋ ಗಂಧರ್ವಃ ಕೇತಪೂಃ ಕೇತಂ ನಃ ಪುನಾತು ವಾಚಸ್ಪತಿರ್ವಾಚಂ ನಃ ಸ್ವದತು || 
[ಯಜು ಅಧ್ಯಾಯ-೩೦ ಮಂತ್ರ-೧]
ಅನ್ವಯ :
ದೇವ = ದಿವ್ಯಸ್ವರೂಪನಾದ
ಸವಿತಃ = ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ
ಯಜ್ಞಂ = ಯಜ್ಞವನ್ನು
ಪ್ರ ಸುವ = ಪ್ರಕರ್ಷವಾಗಿ ಸಂಪಾದಿಸು
ಯಜ್ಞಪತಿಂ = ಯಜ್ಞ ರಕ್ಷಕನನ್ನು
ಭಗಾಯ = ಐಶ್ವರ್ಯಕ್ಕಾಗಿ
ಪ್ರಸುವ = ಸಂಪನ್ನಗೊಳಿಸು
ದಿವ್ಯಃ = ದಿವ್ಯನೂ
ಗಂಧರ್ವಃ = ಪೃಥಿವೀಧಾರಕನಾದ ಭವಂತನು
ಕೇತಪೂಃ = ಜ್ಞಾನವನ್ನು ಪಾವನ ಗೊಳಿಸುವ ಭವಂತನು
ಕೇತಂ = ಜ್ಞಾನವನ್ನು
ನಃ = ನಮಗೆ
ಪುನಾತು = ಪವಿತ್ರಗೊಳಿಸಲಿ
ವಾಚಸ್ಪತಿಃ = ವೇದವಾಣಿಯ ಧಾರಕನಾದ ಭವಂತನು
ವಾಚಂ = ವಾಣಿಯನ್ನು
ನಃ = ನಮಗೆ
ಸ್ವದತು = ಆಸ್ವಾದಿಸಲಿ

ಭಾವಾರ್ಥ :
ದಿವ್ಯಸ್ವರೂಪನಾದ ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ, ಯಜ್ಞ ರಕ್ಷಕನನ್ನು ಐಶ್ವರ್ಯಕ್ಕಾಗಿ ಸಂಪನ್ನಗೊಳಿಸು.  ದಿವ್ಯನೂ ಪೃಥಿವೀಧಾರಕನಾzವನೂ, ಜ್ಞಾನವನ್ನು ಪಾವನ ಗೊಳಿಸುವವನೂ ಆದ ಭಗವಂತನು ನಮ್ಮ  ಜ್ಞಾನವನ್ನು ಪವಿತ್ರಗೊಳಿಸಲಿ. ವೇದವಾಣಿಯ ಧಾರಕನಾದ ಭವಂತನು  ನಮ್ಮ ವಾಣಿಯನ್ನು ಮಧುರಗೊಳಿಸಲಿ.
ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಸಹಜವಾಗಿ ಯಜ್ಞವು ಪ್ರಜ್ವಲಿಸುತ್ತದೆ. ಆಗ ಯಜ್ಞದ ನಾಲ್ಕೂ ದಿಕ್ಕಿನಲ್ಲಿ ಕುಳಿತಿರುವ ಋತ್ವಿಜರೆಲ್ಲರೂ ಈ ಮಂತ್ರವನ್ನು ಪಠಿಸುತ್ತಾ ಬಲದಿಂದ ಎಡಕ್ಕೆ ಉದ್ಧರಣೆಯಿಂದ ನೀರನ್ನು ಹರಿಯಬಿಡುತ್ತಾರೆ. ಇದರ ಭೌತಿಕ ಉದ್ದೇಶ ಎರಡು. ೧] ಕ್ರಿಮಿಕೀಟಗಳು ಯಜ್ಞದೊಳಕ್ಕೆ ಪ್ರವೇಶಿಸದಿರಲೆಂಬುದು            ೨] ಯಜ್ಞವೇದಿಯ ಅಕ್ಕಪಕ್ಕದಲ್ಲಿರುವ ಸಮಿತ್ತುಗಳಿಗೆ ಬೆಂಕಿಯು ವ್ಯಾಪಿಸದಿರಲೆಂಬುದು.
ಈ ಮಂತ್ರಕ್ಕೂ ಋತ್ವಿಜರು ಮಾಡುವ ಕ್ರಿಯೆಗೂ ಸಂಬಂಧವಿದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಈ ಮಂತ್ರದಲ್ಲಿರುವ ಆಧ್ಯಾತ್ಮಿಕ  ಅರ್ಥವನ್ನು ಮುಂದೆ ತಿಳಿಯೋಣ. ಆದರೆ ಯಜ್ಞದಲ್ಲಿ ತುಪ್ಪದ ಆಹುತಿಯಾದಾಗ ಯಜ್ಞವು ಪ್ರಜ್ವಲಿಸುವುದರಿಂದ ಬೆಂಕಿಯ ಕಿಡಿ ಯಜ್ಞದಿಂದ ಹೊರಗೆ ಚಿಮ್ಮುವ ಸಾಧ್ಯತೆ ಇದೆ.   ಯಜ್ಞದಿಂದ ಹೊರಸಿಡಿದ ಅಂತಾ ಕಿಡಿಗಳು ಆರಿಹೋಗಲೆಂಬುದಷ್ಟೇ ಉದ್ದೇಶ. ಈ ಮಂತ್ರವು ಯಜ್ಞದ ಸುತ್ತ ನೀರು ಹರಿಯಬಿಡಲೆಂದೇ ಇರುವ ಮಂತ್ರವೆಂದು ತಿಳಿಯಬಾರದು.
ಈ ಮಂತ್ರದ ಆಧ್ಯಾತ್ಮಿಕ ಅರ್ಥದ ಬಗ್ಗೆ ವಿಚಾರ ಮಾಡೋಣ. ಸಾಮಾನ್ಯವಾಗಿ ವೇದಮಂತ್ರಗಳಲ್ಲಿ ಭಗವಂತನನ್ನು ನೂರಾರು ನಾಮಗಳಿಂದ ಕರೆಯಲಾಗಿದೆ. ಈ ಮಂತ್ರದಲ್ಲಿ ಜಗದುತ್ಪಾದಕ ಭಗವಂತನನ್ನು ಸ್ಮರಿಸಲು ಸವಿತಃ, ದಿವ್ಯಗುಣಸಂಪನ್ನನಾದ್ದರಿಂದ ದಿವ್ಯಃ, ಪೃಥಿವೀ ಧಾರಕನಾದ್ದರಿಂದ ಗಂಧರ್ವಃ, ಜ್ಞಾನವನ್ನು ಪುನೀತಗೊಳುಸುವವನಾದ್ದರಿಂದ ಕೇತಪೂಃ, ವಾಣಿಯನ್ನು ಮಧುರಗೊಳಿಸುವನಾದ್ದರಿಂದ ವಾಚಸ್ಪತಿಃ ಎಂದು ಆಯಾ ವಿಷಯಗಳಿಗೆ ಸೂಕ್ತವಾಗಿ ಕರೆಯಲಾಗಿದೆ. ಮನುಷ್ಯರಲ್ಲಿ  ದಾನ ಮಾಡುವ ಗುಣವಿದ್ದವನನ್ನು ದಾನಿಯೆಂದೂ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವವನನ್ನು ಧೈರ್ಯಗಾರನೆಂದೂ, ಕರುಣೆ ತೋರಿಸುವವನಿಗೆ ಕರುಣಾಳು ಎಂದೂ ನಾವು ಕರೆಯುವುದಿಲ್ಲವೇ? ಮನುಷ್ಯರಾದರೂ ಒಂದೊಂದು ಸ್ವಭಾವ ಒಬ್ಬೊಬ್ಬರಿಗಿರಬಹುದು. ಆದರೆ ಭಗವಂತನ ವಿಚಾರದಲ್ಲಿ   ಆಯಾಗುಣವಾಚಕಗಳಿಂದ ಒಬ್ಬನೇ ಭಗವಂತನನ್ನು  ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ ಅಷ್ಟೆ. 
ಅಂತೂ ಈ ಸಂದರ್ಭದಲ್ಲಿ  ನಮ್ಮ ಜ್ಞಾನವನ್ನು ಪವಿತ್ರಗೊಳಿಸು, ನಮ್ಮ ವಾಣಿಯನ್ನು ಮಧುರಗೊಳಿಸು, ಹೀಗೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಅಗ್ನಿಹೋತ್ರವನ್ನು ಮಾಡುವಾಗ ಪ್ರಾತಃಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಸಂದರ್ಭದಲ್ಲಿ ಪಠಿಸುವ ಯಜುರ್ವೇದದ ೩ನೇ ಅಧ್ಯಾಯದ ೯ ಮತ್ತು ೧೦ನೇ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಸೂರ್ಯೋಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ |
ಸೂರ್ಯನು ಜ್ಯೋತಿರ್ಯುಕ್ತನು. ಆದರೆ ಜ್ಯೋತಿರ್ಯುಕ್ತನಾದ ಆ ಭಗವಂತನು  ಆ ಸೂರ್ಯನಿಗೂ ಸೂರ್ಯನು. ಇದು ಸತ್ಯ. ಅಂದರೆ ಸೂರ್ಯನು ನಮಗೆ ಬೆಳಕು-ಶಾಖ ಕೊಡುತ್ತಾನೆ.ಆದರೆ   ಆ ಸೂರ್ಯನಿಗೆ    ಆ ಸಾಮರ್ಥ್ಯ ಕೊಟ್ಟವರಾರು? ಅವನೇ ಭಗವಂತ.ಇದು ಸತ್ಯ.
ಓಂ ಸೂರ್ಯೋ ವರ್ಚೋಜ್ಯೋತಿರ್ವರ್ಚಃ ಸ್ವಾಹಾ |
ಸೂರ್ಯನು ಬಲಪ್ರದನು.ಆದರೆ ಜ್ಯೋತಿರ್ಮಯನಾದ  ಆ ಭಗವಂತನು ಆ ಸೂರ್ಯನಿಗೂ ಬಲಪ್ರದನು.ಇದು ಸತ್ಯ. ನಮ್ಮ ಶರೀರ ಮತ್ತು ಆತ್ಮಬಲವನ್ನು ಪ್ರಕಾಶಪಡಿಸುವವನು ಸೂರ್ಯ.ಆದರೆ ಸೂರ್ಯನಿಗೆ ಆ ಶಕ್ತಿ ಕೊಡುವವನು ಭಗವಂತನೇ ಆಗಿದ್ದಾನೆ.ಇದು ಸತ್ಯ.
ಓಂ ಜ್ಯೋತಿಃ ಸೂರ್ಯಃ ಸೂರ್ಯೋ ಜ್ಯೋತಿಃ ಸ್ವಾಹಾ |
ಆ ಸೂರ್ಯನು ನಮಗೆಲ್ಲಾ ಜ್ಞಾನವನ್ನುಂಟುಮಾಡುವ ಜ್ಯೊತಿಪ್ರಭುವಾಗಿದ್ದಾನೆ. ಆ ಸೂರ್ಯನಿಗೂ ಸೂರ್ಯನಾಗಿ ಆಜ್ಯೋತಿಪ್ರಭುವಾದ ಭಗವಂತನಿದ್ದಾನೆ.ಇದು ಸತ್ರ್ಯ.
ಸಜೂರ್ದೇವೇನ ಸವಿತ್ರಾ ಸಜೂರುಷಸೇಂದ್ರವತ್ಯಾ |
ಜುಷಾಣಃ ಸೂರ್ಯೋ  ವೇತು ಸ್ವಾಹಾ ||
ಭಾವಾರ್ಥ:
  ಸೂರ್ಯೋದಯ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಅಗ್ನಿಹೋತ್ರವನ್ನು ಮಾಡುವಾಗ  ಸಾಯಂ ಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಅಗ್ನಿರ್ಜ್ಯೋತಿಜ್ಯೋತಿರಗ್ನಿಃ ಸ್ವಾಹಾ ||
ಅಗ್ನಿಯು ಪ್ರಕಾಶಸ್ವರೂಪನು. ಆದರೆ ಈ ಅಗ್ನಿಗೆ ಪ್ರಕಾಶಕೊಟ್ತವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಓಂ ಅಗ್ನಿರ್ವರ್ಚೋ ಜ್ಯೋತಿರ್ವರ್ಚಃ ಸ್ವಾಹಾ ||
ಅಗ್ನಿಯು ಬಲಪ್ರದನು. ಆದರೆ ಈ ಅಗ್ನಿಗೆ ಬಲವನ್ನು ಕೊಟ್ಟವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಅಗ್ನಿರ್ಜ್ಯೋತಿರ್ಜ್ಯೋತಿರಗ್ನಿಹಿಃ ಸ್ವಾಹಾ |
ಅಗ್ನಿಯು ಪ್ರಕಾಶವನ್ನು ನೀಡುವವನು, ಆದರೆ ಅಗ್ನಿಗೆ ಆ ಪ್ರಕಾಶವನ್ನು ನೀಡಿದವನು ಜ್ಯೊತಿರ್ಮಯನಾದ ಆ ಭಗವಂತನು. ಇದು ಸತ್ಯ.
ಓಂ ಸಜೂರ್ದೇವೇನ ಸವಿತ್ರಾ ಸಜೂ ರಾತ್ರೇಂದ್ರವತ್ಯಾ |
ಜುಷಾಣೋ ಅಗ್ನಿರ್ವೇತು ಸ್ವಾಹಾ ||
  ಭಾವಾರ್ಥ:
ಸೂರ್ಯಾಸ್ತ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಅಗ್ನಿಗೆ ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಆಧ್ಯಾತ್ಮಿಕನೆಲೆಯಲ್ಲಿ ಈ ಮಂತ್ರಗಳನ್ನು ಅರ್ಥಮಾಡಿಕೊಳ್ಳುವುದಾದರೆ ಬೆಳಿಗ್ಗೆ ನಾವು ಸೂರ್ಯನನ್ನು ಮತ್ತು  ರಾತ್ರಿ ಅಗ್ನಿಯನ್ನು ನೋಡಿದಾಗ ನಮಗೆ  ಆಭಗವಂತನನ್ನು ನಾವು ಹೀಗೆ ಸ್ಮರಣೆ ಮಾಡಿಕೊಳ್ಳಬೇಕು  ಪ್ರಚಂಡ ಶಕ್ತಿಯನ್ನು ಹೊಂದಿರುವ ಆ ಸೂರ್ಯನಲ್ಲಿ ಈ ಪ್ರಚಂಡ ಶಕ್ತಿಗೆ ಕಾgಣರಾರು? ಅಗ್ನಿಯಲ್ಲಿ ಈ ಶಾಖವನ್ನು ಕೊಟ್ಟವನಾರು? ಹೀಗೆ ಯೋಚಿಸುವಾಗ ಆಭಗವಂತನಲ್ಲದೆ ಮತ್ತೊಬ್ಬನಿಲ್ಲ ಎನ್ನುವುದು ಮನದಟ್ಟಾಗದೆ ಇರದು. ಹೀಗೆ ಹಗಲು ರಾತ್ರಿಗಳಲ್ಲಿ ಭಗವಂತನ ಸ್ಮರಣೆ ಮಾಡುತ್ತಾ ನಮ್ಮಲ್ಲಿ ಆಧ್ಯಾತ್ಮಿಕಕಾಮನೆಯನ್ನು ಆ ಭಗವಂತನು ಉದ್ದೀಪಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡಬೇಕೆಂಬುದು ಉದ್ದೇಶ. 
ಹೀಗೆ ಪ್ರಾತಃಕಾಲದಲ್ಲಿ ಮತ್ತು ಸಾಯಂ ಕಾಲದಲ್ಲಿ ಆ ಭಗವಂತನು ನಮ್ಮಲ್ಲಿ ಚೈತನ್ಯವನ್ನು ಹೆಚ್ಚಿಸಲಿ, ಜಗತ್ತಿನ ಈ ಚಟುವಟಿಕೆಗಳಿಗೆಲ್ಲಾ ಆ ಭಗವಂತನೇ ಕಾರಣನೆಂಬ ವಿಶ್ವಾಸವು ನಮ್ಮಲ್ಲಿ ಗಟ್ಟಿಯಾಗುತ್ತಾಹೋಗಲಿ, ಎಂಬ ವಿಚಾರವನ್ನು ನಮ್ಮ ಮನದಲ್ಲಿ ತಂದುಕೊಳ್ಳುತ್ತಾ ವಿಶೇಷ ಆಹುತಿಗಳನ್ನು ಯಜ್ಞದಲ್ಲಿ ಕೊಡುವುದರಿಂದ ಆಧ್ಯಾತ್ಮಿಕವಾಗಿ ನಾವು ಗಟ್ಟಿಯಾಗಲು ಸಾಧ್ಯವಾಗಲಾರವೇ?
ಅಲ್ಲದೆ ಸೂರ್ಯೋದಯದಲ್ಲಿ ದಿನವು ಆರಂಭಕಾಲದಲ್ಲಿ ಆ ಭಗವಂತನ ಸ್ಮರಣೆ ಮಾಡಿ ಅಗ್ನಿಹೋತ್ರವನ್ನು ಮಾಡಿ ದಿನದ ಚಟುವಟಿಕೆಯನ್ನು ಆರಂಭಿಸಿ ಸೂರ್ಯಾಸ್ತಸಮಯದಲ್ಲಿ ಪುನಃ ಅಗ್ನಿಹೋತ್ರವನ್ನು ಮಾಡಿ ವಿಶ್ರಮಿಸಿದರೆ ಇಡೀ ದಿನವು ಉಲ್ಲಾಸವಾಗಿ ಕಳೆದು ರಾತ್ರಿ ಸುಖವಾಗಿ ನಿದ್ರೆ ಬಾರದೆ ಇರದು. ಈ ಉದ್ದೇಶದಿಂದ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಅಗ್ನಿಹೋತ್ರವನ್ನು ಮಾಡುವುದು ಅತ್ಯಂತ ಲಾಭದಾಯಕ ಕ್ರಿಯೆಯಾಗಿದೆ.
-ಹರಿಹರಪುರಶ್ರೀಧರ್

No comments:

Post a Comment