ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, December 8, 2014

ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ


ಇಂದು ನಾವು ಕಾಣುತ್ತಿರುವ ಜಾತಿಯ ತಾರತಮ್ಯವು ವೇದದಲ್ಲಿ ಕಾಣಬರುವುದಿಲ್ಲ. ಮಾನವರೆಲ್ಲರೂ ಒಂದೇ ಎಂಬುದನ್ನು ವೇದವು ಗಟ್ಟಿಯಾಗಿ ಸಾರುತ್ತದೆ. ಮಧ್ಯಕಾಲದಲ್ಲಿ ಆಚರಣೆಗೆ ಬಂದು  ಹಿಂದುಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಜಾತಿವ್ಯವಸ್ಥೆಯ ಹೊಣೆಯನ್ನು ವೇದದ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂಬುದು ವೇದದ ಸ್ವಲ್ಪ ಪರಿಚಯ ಮಾಡಿಕೊಂಡರೂ ನಮ್ಮ ಅರಿವಿಗೆ ಬರುತ್ತದೆ. ಮನುಕುಲದ ಅಭ್ಯುದಯಕ್ಕಾಗಿ ನಮ್ಮ ಋಷಿಪುಂಗವರು ತಮ್ಮ ನೂರಾರು ವರ್ಷದ ತಪಸ್ಸಿನ ಸಾಧನೆಯಿಂದ ಕಂಡು ಕೊಂಡ  ಸತ್ಯವೇ ವೇದ. ಇದು ಕೇವಲ ಹಿಂದುಸಮಾಜಕ್ಕಾಗಿ, ಅದರಲ್ಲೂ ಕೇವಲ ಬ್ರಾಹ್ಮಣ  ವರ್ಗಕ್ಕಾಗಿ ಇದೆ ಎಂಬ ತಪ್ಪು ಕಲ್ಪನೆಯು ಬೆಳೆದುಕೊಂಡು ಬಂದಿದೆ. ಸಾವಿರಾರು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಈ ತಪ್ಪು ಕಲ್ಪನೆಯನ್ನು ದೂರಮಾಡುವುದು ಅಷ್ಟು ಸುಲಭವಲ್ಲ. ಶ್ರೀ ಶಂಕರಾಚಾರ್ಯರು ವೇದದ ಪುನರುತ್ಥಾನಕ್ಕಾಗಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರೂ ಸಹ  ವೇದದ ಅಪಪ್ರಚಾರವನ್ನು ಪೂರ್ಣವಾಗಿ ತಡೆಯಲಾಗಲಿಲ್ಲ. ೧೮೭೫ ರಲ್ಲಿ  ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು ಸ್ಥಾಪಿಸಿ ಜನರಲ್ಲಿ ವೇದದ ಸತ್ಯದ ಅರಿವು ಮೂಡಿಸಿ ಹಿಂದುಸಮಾಜದಲ್ಲಿನ ಜಾತಿಪದ್ದತಿಯನ್ನು ನಿರ್ಮೂಲಮಾಡಲು ಶ್ರಮಿಸಿದರೂ ಜಾತಿ ಪದ್ದತಿ ನಾಶವಾಗಿಲ್ಲ. ಇದೆಲ್ಲಾ ವಾಸ್ತವ ಸಂಗತಿಗಳ ಅರಿವಿದ್ದೂ ವೇದದ ಆಧಾರದಲ್ಲಿ ಒಂದಿಷ್ಟು ವಿಚಾರಮಾಡುವ ಪ್ರಯತ್ನವನ್ನು  ಈ ಲೇಖನದಲ್ಲಿ ಮಾಡುವೆ.
ಭಾರತದಲ್ಲಿ ಜಾತಿ ಪದ್ದತಿ ಬಲು ಗಟ್ಟಿಯಾಗಿ ಬೇರು ಬಿಟ್ಟಿರುವುದು ನಿಜ. ಮೇಲು-ಕೀಳು ಭಾವನೆಯು ಹಿಂದುಸಮಾಜದಲ್ಲಿ ದೊಡ್ದ ರಾದ್ಧಾಂತವನ್ನೇ ಮಾಡಿಬಿಟ್ಟಿದೆ. ಇದರಿಂದಾಗಿ ಹಿಂದುಸಮಾಜವು ನೂರಾರು ಜಾತಿಗಳಲ್ಲಿ ಹರಿದುಹಂಚಿಹೋಗಿರುವುದು ಸುಳ್ಳಲ್ಲ. ಜಾತಿ ವ್ಯವಸ್ಥೆ ಬಂದ ಪರಿಣಾಮ ಸ್ಪೃಶ್ಯ-ಅಸ್ಪೃಶ್ಯಭಾವನೆ, ನಡವಳಿಕೆ, ಆಹಾರಪದ್ದತಿ ಎಲ್ಲವೂ ವೆತ್ಯಾಸವಾಗಿ ವೇದಧರ್ಮವು ನಶಿಸಿರುವ ಚಿತ್ರಣ ನಮ್ಮ ಕಣ್ ಮುಂದಿದೆ. ಹಿಂದು ಸನಾಜದಲ್ಲಿ ಹಲವೆಡೆ ಇನ್ನೂ ಸ್ಪೃಶ್ಯ-ಅಸ್ಪೃಶ್ಯ ಭಾವನೆ ಇದೆ. ಈ ಎಲ್ಲಾ ಸತ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡೇ ನಿಜವಾದ ವೇದಧರ್ಮದ ಬಗ್ಗೆ ವಿಚಾರ ಮಾಡೋಣ. ವೇದದಲ್ಲಿ ಮಾನವರೆಲ್ಲರೂ ಸಮಾನರೆಂದು ಸಾರಿ ಸಾರಿ ಹೇಳಿದೆ. ಆ ಮಂತ್ರಗಳ ಬಗ್ಗೆಯೂ ವಿಚಾರ ಮಾಡೋಣ.ವರ್ಣಾಶ್ರಮದ ಬಗ್ಗೆ ವಿವರಿಸಲಾಗಿದೆ. ಅದರ ಬಗ್ಗೆಯೂ ವಿಚಾರ ಮಾಡೋಣ. ವರ್ಣಾಶ್ರಮವೆಂದೊಡನೆ ಬ್ರಾಹ್ಮಣ-ಶೂದ್ರ ಪದಗಳ ಪ್ರಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವಾಗ್ರಹದಿಂದ ಯೋಚಿಸಬಾರದೆಂದು ಮನವಿ ಮಾಡುತ್ತಾ ಶ್ರೀ ದಯಾನಂದ ಸರಸ್ವತಿಗಳು ಬರೆದಿರುವ ವೇದಭಾಷ್ಯದ ಆಧಾರದಲ್ಲಿ ಇನ್ನು ಮುಂದೆ ಕೆಲವು ವಿಚಾರಗಳನ್ನು ಹೇಳುತ್ತಾ ಮುಂದುವರೆಯುವೆ.

ಋಗ್ವೇದದ ಒಂದು ಮಂತ್ರ ಹೀಗಿದೆ?

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧುಃ |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||  [ಋಕ್ ೫.೫೯.೬]

ಅರ್ಥ:-
ಅಜ್ಯೇಷ್ಠಾಃ = ದೊಡ್ದವರೂ ಅಲ್ಲ
ಅಕನಿಷ್ಠಾಸ = ಚಿಕ್ಕವರೂ ಅಲ್ಲ
ಅದ್ಭಿದಃ = ಭೂಮಿಯನ್ನು ಸೀಳಿ ಮೇಲೆ ಬಂದವರು
ಅಮಧ್ಯಮಾಃ = ಮಧ್ಯಮರೂ ಅಲ್ಲ
ಜನುಷಾ = ಹುಟ್ಟಿದಾಗಿನಿಂದಲೂ
ಸುಜಾತಾಸಃ = ಉತ್ತಮರು
ಪೃಶ್ನೀಮಾತರಃ = ಭೂತಾಯಿಯ ಮಕ್ಕಳು
ದಿವಃ =ಇಚ್ಚೆ ಮಾಡುವವರೂ
ಮರ್ಯಾಃ = ಮನುಷ್ಯರು
ಸಹಸಾ = ಬಲದಿಂದ
ವಿ ವಾವೃಧುಃ= ಅತಿಶಯ ವೃದ್ಧಿಹೊಂದುವರು
ತೇ = ಅವರು
ಃ = ನಮ್ಮ 
ಅಚ್ಚಾ = ಉತ್ತಮರೀತಿಯಿಂದ
ಆ,  ಜಿಗಾತನ = ಗುಣಗಾನ ಮಾಡುವರು


ಭಾವಾರ್ಥ:-
ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು  ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು. 
ಈ ಮಂತ್ರದಲ್ಲಿ ವೇದವು ಎಲ್ಲಾ ಮನುಷ್ಯರನ್ನೂ ಸಮಾನರೆಂದು ಸ್ಪಷ್ಟವಾದ ಪದಗಳಲ್ಲಿ ಹೇಳಿದೆ “ ಎಲ್ಲರೂ ಅವರ ಗುಣ ಸ್ವಭಾವ, ನಡವಳಿಕೆಯಿಂದ ಏಳಿಗೆಹೊಂದಬಲ್ಲರು” ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಎಂದು ವೇದವು ಸಾರಿ ಹೇಳುತ್ತದೆ.

ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು

ವೇದದ ಈ ಸತ್ಯನುಡಿಯು ಎಷ್ಟು ಸತ್ಯವಾಗಿ ಗೋಚರಿಸುತ್ತಿದೆ, ಎಂಬುದು ನಮ್ಮ ಸಾಮಾಜಿಕ ಬದಲಾವಣೆಗಳಿಂದ ನಮಗೆ ಅರ್ಥವಾಗದೇ ಇರದು.  ನಮ್ಮ ಸಮಾಜದಲ್ಲಿ ಅಸ್ಪೃಶ್ಯರೆಂದು ಯಾರನ್ನು  ಈ ಸಮಾಜ ಗುರುತಿಸಿತ್ತೋ ಅಂತಹ ವರ್ಗದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ವೈದ್ಯಕೀಯ, ಇಂಜಿನೀರಿಂಗ್,ಐ.ಏ.ಎಸ್,ಐ.ಪಿ.ಎಸ್ ಮುಂತಾದ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅತ್ಯುತ್ತಮ, ವೈದ್ಯರೂ, ಇಂಜಿನಿಯರ್ ಗಳೂ, ಸರ್ಕಾರದಲ್ಲಿ ಉನ್ನತ ಅಧಿಕಾರಿಗಳೂ ಆಗಿ ಹೆಸರು ಮಾಡಿರುವ ಸಾವಿರಾರು ಜನರನ್ನು ನಾವು ಕಾಣಬಹುದಲ್ಲವೇ? ತಮ್ಮ ಅತಿಶಯ ಗುಣಸ್ವಭಾವದಿಂದ ವೃದ್ಧಿ ಹೊಂದುವರು ಎಂದು ವೇದವು ಸಾರಿದ್ದು ಇದನ್ನೇ ಅಲ್ಲವೇ?
ಮುಂದಿನ ಮಂತ್ರವನ್ನು ನೋಡೋಣ.  
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ ||
[ಋಕ್ ೫.೬೦.೫]

ಅರ್ಥ:-
ಸ್ವಪಾಃ= ಶ್ರೇಷ್ಠ ಕರ್ಮಠನು
ಯುವಾ = ಯುವಕನು
ರುದ್ರಃ= ಅನ್ಯರನ್ನು ರೋದಿಸುವವನು
ಪಿತಾ = ಪಾಲನೆ ಮಾಡುವವನು
ಏಷಾಂ = ಈ ಎಲ್ಲರ
ಸುದುಘಾ = ಇಷ್ಟಾರ್ಥ ಪೂರ್ಣಗೊಳಿಸುವವಳು
ಸುದಿನಾ = ಉತ್ತಮ ದಿನದಿಂದ
ಪೃಶ್ನಿಃ = ವಿಶಾಲ ಬುದ್ಧಿಯ ಭೂಮಾತೆ
ಮರುದ್ಭ್ಯಃ = ಮನುಶ್ಯರು 
ಅಜ್ಯೇಷ್ಠಾಃ = ಯಾರೂ ದೊಡ್ಡವರಲ್ಲ
ಅಕನಿಷ್ಠಾಸಃ = ಯಾರೂ ಚಿಕ್ಕವರೂ ಅಲ್ಲ
ಏತೇ = ಇವರೆಲ್ಲರೂ
ಭ್ರಾತರಃ = ಸೋದರರು
ಸೌಭಗಾಯ = ಸೌಭಾಗ್ಯಪ್ರಾಪ್ತಿಗಾಗಿ
ಸಂ ವಾವೃಧುಃ = ಚೆನ್ನಾಗಿ ಪ್ರಯತ್ನಿಸುವರು 
ಭಾವಾರ್ಥ:-
ಯಾವ ಮನುಷ್ಯನು ಬಾಲ್ಯ ಮತ್ತು ಕೌಮಾರ್ಯಗಳಲ್ಲಿ ವಿದ್ಯಾರ್ಜನೆ ಮಾಡಿಕೊಂಡು ಉತ್ತಮ ಗುಣಕರ್ಮ ಸ್ವಭಾವವನ್ನು ಅಳವಡಿಸಿಕೊಂಡು ಉತ್ತಮ ಗುಣವತೀ ಕನ್ಯೆಯೊಡನೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಕರ್ಮಾನುಷ್ಠಾನದಲ್ಲಿ ತೊಡಗುತ್ತಾನೋ ಅವನು ಐಶ್ವರ್ಯವನ್ನೂ ಆನಂದವನ್ನೂ ಅನುಭವಿಸುತ್ತಾನೆ.ಇವರಲ್ಲಿ ದೊಡ್ದವ ಚಿಕ್ಕವ ಎಂಬ ಭೇದವಿಲ್ಲ, ಇವರೆಲ್ಲರೂ ಸೋದರರು.
 ಇವೆರಡೂ ಮಂತ್ರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ. . . . . . . ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ. ಎಲ್ಲರೂ   ಭೂತಾಯಿಯ ಮಕ್ಕಳಾದ ಮೇಲೆ, ಪರಸ್ಪರ ಸೋದರರು. ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ತಮ್ಮ ತಮ್ಮ ಗುಣಸ್ವಭಾವದಿಂದ ನಡವಳಿಕೆಯಿಂದ ಯಾರು ಬೇಕಾದರೂ ಏಳಿಗೆಯನ್ನು ಹೊಂದಬಹುದು.
 ವೇದದ ಕರೆ ಹೀಗಿರುವಾಗ  ಮನುಷ್ಯರಲ್ಲಿ ಮೇಲು-ಕೀಳು ಭಾವನೆಯು ವೇದ ವಿರೋಧಿಯಷ್ಟೇ ಅಲ್ಲ, ಅದು ಮನುಷ್ಯತ್ವದ ವಿರೋಧಿಯೂ ಕೂಡ.

ಅಥರ್ವ ವೇದದ ಒಂದು ಮಂತ್ರವನ್ನು ನೋಡೋಣ.
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹಚಿತ್ತಮೇಷಾಮ್
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶಧ್ವಮ್ ||
[ಅಥರ್ವ ೬.೬೪.೨]
ಅರ್ಥ:-
ಮಂತ್ರಃ ಸಮಾನಃ = ಮಂತ್ರವು ಸಮಾನವಾಗಿರಲಿ
ಸಮಿತಿ ಸಮಾನೀ = ಸಮಿತಿಯು ಸಮಾನವಾಗಿರಲಿ
ವ್ರತಮ್ ಸಮಾನಮ್ = ವ್ರತವೂ ಸಮಾನವಾಗಿರಲಿ
ಏಷಾ ಚಿತ್ತಂ ಸಹ = ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ
ವಃ = ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ = ಸಮಾನವಾದ ಖಾದ್ಯ ಪೇಯಗಳನ್ನೇ
ಜುಹೋಮಿ = ದಾನಮಾಡುತ್ತೇನೆ
ಸಮಾನಂ ಚೇತಃ = ಸಮಾನವಾದ ಚೈತನ್ಯದಲ್ಲಿಯೇ 
ಅಭಿ ಸಂ ವಿಶಧ್ವಂ = ಎಲ್ಲೆಡೆಯಿಂದಲೂ ಪ್ರವೇಶಿಸಿರಿ 
ಭಾವಾರ್ಥ :-
ನಿಮ್ಮೆಲ್ಲರ ಮಂತ್ರವು ಸಮಾನವಾಗಿರಲಿ, ನಿಮ್ಮ ಸಮಿತಿಯು ಸಮಾನವಾಗಿರಲಿ, ವ್ರತವೂ ಸಮಾನವಾಗಿರಲಿ,ನಿಮ್ಮೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ, ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯ ಪೇಯಗಳನ್ನೇ ದಾನಮಾಡುತ್ತೇನೆ.ಸಮಾನವಾದ ಚೈತನ್ಯದಿಂದ ಎಲ್ಲೆಡೆಯಿಂದಲೂ ಪ್ರವೇಶಿಸಿರಿ.ವೇದದಲ್ಲಿ ಪುನಃ ಪುನಃ ಹೇಳಿರುವ ಸಮಾನತೆಯ ಮಾತುಗಳನ್ನು ಗಮನಿಸಿದಾಗ ಭಗವಂತನೆದುರು ಎಲ್ಲರೂ ಸಮಾನರೆಂದು ಭಗವಂತನೇ ಸ್ವತಃ ಹೇಳಿದ್ದರೂ ಇತ್ತೀಚೆಗೆ ರೂಢಿಗೆ ಬಂದ ತಾರತಮ್ಯದಿಂದಾಗಿ  ವೇದವನ್ನು ತಿಳಿಯದ ವಿಚಾರವಾದಿಗಳೆನಿಸಿ   ಕೊಂಡವರು  ಸಮಾಜದಲ್ಲಿರುವ ತಾರತಮ್ಯಕ್ಕೆ ವೇದವನ್ನು ಹೊಣೆಮಾಡುವುದು ಅದೆಷ್ಟು ಸರಿ? ಎಂಬುದನ್ನು ಓದುಗರು ಗಮನಿಸಬೇಕು. ಈಗಲೂ ಸ್ಪೃಶ್ಯಾಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.

No comments:

Post a Comment