Pages

Tuesday, January 6, 2015

ನೀನು ನನ್ನೊಳಗೇ ಇದ್ದೀಯ

ಭಗವಂತನೆಂಬುವನು ಒಬ್ಬನೇ. ಅದೂ ಕೂಡ ಒಂದು ಶಕ್ತಿಯ ರೂಪದಲ್ಲಿ. ಅವನು   ಗಂಡೂ ಅಲ್ಲ.ಹೆಣ್ಣೂ ಅಲ್ಲ. ಆದರೂ ಭಗವಂತನನ್ನು ಪುಲ್ಲಿಂಗ ರೂಪದಲ್ಲಿ ಕರೆಯುವುದು ರೂಢಿಯಲ್ಲಿ ಬಂದಿದೆ.  ಅವನಿಗೆ  ದೇಹವೇ ಇಲ್ಲ. ಅದೊಂದು ಶಕ್ತಿ -ವಿದ್ಯುತ್  ಇದ್ದಂತೆ. ವಿದ್ಯುತ್ ಗೆ ಆಕಾರ ಹೇಗಿರಲು ಸಾಧ್ಯ?  ಕಣ್ಣಿಗೆ  ಕಾಣುವ ಮೋಟಾರ್,ಜನರೇಟರ್, ವಿದ್ಯುತ್ ದೀಪಗಳನ್ನೇ  ವಿದ್ಯುತ್ ಎಂದು ಕರೆದರೆ ಸರಿಯೇ? ವಿದ್ಯುತ್ ಪ್ರಭಾವದಿಂದ ಓಡುವ ಮೋಟಾರ್ ನ್ನು  ನೋಡಬಹುದೇ ಹೊರತೂ ವಿದ್ಯುತ್ ನ್ನು ನೋಡಲು ಸಾಧ್ಯವಿಲ್ಲ. ಅಲ್ಲವೇ?
ಹಾಗೆಯೇ ಭಗವಚ್ಛಕ್ತಿ ಕೂಡ. ಅವನ ನಿಯಂತ್ರಣಕ್ಕೊಳಪಟ್ಟ ಜಗತ್ತನ್ನು ಕಾಣಬಹುದೇ ಹೊರತೂ ಅವನನ್ನು ನೋಡಲು ಸಾಧ್ಯವೇ ಇಲ್ಲ.  ನಮಗೆ    ಶರೀರವಿದೆ. ಅದರ ಚಿತ್ರವನ್ನೂ ಬರೆಯಬಹುದು. ಆದರೆ ಇಲ್ಲದ ಶರೀರದ ಚಿತ್ರ ಬರೆಯುವುದಾದರೂ ಹೇಗೆ? ಆದರೂ ಭಗವಂತನ ಹಲವಾರು ಕ್ರಿಯೆಗಳನ್ನು ಬಿಂಬಿಸುವ ರೂಪವನ್ನು ಕಲ್ಪಿಸಿ  ವಿಗ್ರಹಗಳನ್ನು ಶಿಲ್ಪಿಯೊಬ್ಬ ಕೆತ್ತಿದ. ವಿದ್ವಾಂಸನೊಬ್ಬ ಭಗವಂತನ ಲೀಲಾ ಪ್ರಸಂಗಗಳನ್ನು ಸ್ತೋತ್ರ ರೂಪದಲ್ಲಿ ಬರೆದ. ಆ ವಿಚಿತ್ರ ಶಕ್ತಿಯನ್ನು ಆರಾಧಿಸಿದ.ಆ ಪರಂಪರೆ ಮುಂದುವರೆಸಿದ. ಎಲ್ಲಿಯವರೆಗೆ ವಿಗ್ರಹಗಳು ಬಂದು ತಲುಪಿದೆಯೆಂದರೆ ಕ್ರಿಕೆಟ್ ಆಡುವ ಗಣಪನ ಮೂರ್ತಿಯನ್ನೂ ಸಹ ಇಂದು ಕಾಣಬಹುದು.ಕ್ರಿಕೆಟ್ ಗಣಪನಿಗೆ ಅಭಿಶೇಕ, ನೈವೇದ್ಯ, ಮಂಗಳಾರತಿ…ಎಲ್ಲವೂ ನಡೆಯುತ್ತವೆ!!!
ವೇದವು  ಸಾಮಾನ್ಯ  ಜನರಿಗೆ ಅರ್ಥವಾಗುವುದಿಲ್ಲ-ಎಂಬ ಸಬೂಬು ಹೇಳಿ ಪಂಡಿತರುಗಳೇ  ಕತೆಗಳನ್ನು ಕಟ್ಟಿ ವಿಗ್ರಹಾರಾಧನೆಯನ್ನು ವೈಭವೀಕರಿಸಿದರು. ಮನುಷ್ಯನ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಮಾಹಿತಿಗಳು ವೇದದಲ್ಲಿರುವುದನ್ನು ಸಾಮಾನ್ಯ ಜನರಿಗೆ ಪರಿಚಯಿಸಲೆ ಇಲ್ಲ! ಬದಲಿಗೆ ಭಗವಂತನ ಸ್ತೋತ್ರಗಳನ್ನು ಹೇಳುವ , ಅವನ ಹೆಸರಲ್ಲಿ ಸಹಸ್ರನಾಮಗಳನ್ನು ಪಠಿಸುವ ಪದ್ದತಿಗಳನ್ನು ಹುಟ್ಟುಹಾಕಿದರು. ನಾನೊಮ್ಮೆ ಚಿನ್ಮಯಾ ಮಿಷನ್ನಿನ ಆಶ್ರಮ ಒಂದಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುವಾಗ ಹೇಳುವ ಚಿನ್ಮಯಾನಂದರ ಸಹಸ್ರನಾಮ ಕೇಳಿ ಅಚ್ಚರಿ ಗೊಂಡೆ.ಸಹಸ್ರನಾಮ ದಲ್ಲಿ ಒಂದು ನಾಮ ಏನು ಗೊತ್ತೆ? “ ಓಂ ಆಂಗ್ಲಭಾಷಾಪ್ರವೀಣಾಯೈ ನಮಃ” ಈ ಸಹಸ್ರನಾಮ ಅರ್ಚನೆ ಕೇಳಿದಾಗ ನಗು ಬರುವುದಿಲ್ಲವೇ? ಚಿನ್ಮಯಾನಂದರು ಭಗವದ್ಗೀತೆಯ ಸಾರವನ್ನು ಪ್ರಚುರಪಡಿಸುತ್ತಾ ಹೋದರೆ ಅವರ ಅನುಯಾಯಿಗಳು ಚಿನ್ಮಯ ಸಹಸ್ರನಾಮ ಪ್ರಚುರಪಡಿಸುತ್ತಿದ್ದಾರಲ್ಲಾ!!
ಹಿಂದುಗಳನ್ನು ನೋಡಿ ನೋಡಿ ಇತ್ತೀಚೆಗೆ ಕ್ರೈಸ್ತರೂ ಶುರುಮಾಡಿದರು “ ಜೀಸಸ್ ಸಹಸ್ರನಾಮ” ಹೀಗೆಯೇ ಮುಂದುವರೆದರೆ ಎಲ್ಲಾ ರಾಜಕೀಯ ನಾಯಕರು, ಸಿನೆಮಾ ನಟರುಗಳ ಸಹಸ್ರನಾಮ ಬರಲು ಕಾಲ ದೂರವಿಲ್ಲ.
ಇದೇನು! ಭಗವಂತನ ವಿಚಾರದಲ್ಲಿ ಹುಡುಕುವ ನಮ್ಮ ದಿಕ್ಕು ಸರಿ ಇದೆಯೇ? ಹೀಗೊಂದು ಚಿಂತನೆ ನನ್ನ ಮನದಲ್ಲಿ ಹೊಕ್ಕಾಗ….
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ
ಯಾವ ಮಂತ್ರವ ಹೇಳಿ
ನಿನ್ನ ಮೆಚ್ಚಿಸಲಿ?
ಭಗವಂತನನ್ನು  ಹುಡುಕುತ್ತಾ ಹೊರಟಾಗ ಬಂದ ಪ್ರಶ್ನೆಗಳು. “ಭಗವಂತಾ, ನಿನ್ನನ್ನು ಎಲ್ಲಿ ಹುಡುಕಲಿ? ಎಲ್ಲಿದ್ದೀಯಾ ನೀನು? ನಿನ್ನನ್ನು ನಾನು ಹೇಗೆ ಆರಾಧಿಸಲಿ? ಯಾವ ಮಂತ್ರವನ್ನು ಹೇಳಿ ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ನನ್ನ ಹುಚ್ಚುತನ ನೋಡು.ನಾನು ಸ್ನಾನ ಮಾಡುವುದು ಅನಿವಾರ್ಯ. ಆದರೆ ನಿನಗೂ ಮಾಡಿಸುವ ಭ್ರಮೆ ನನ್ನದು. ನಿತ್ಯಶುದ್ಧನಾದ ನಿನಗೆ ಮಡಿಯ ಮಾಡಿಸುವ ಭ್ರಮೆ ನನ್ನದು!! ನಾನು ಹಸಿವಿನಿಂದ ಇದ್ದು ನಿನಗೆ ನೈವೇದ್ಯ ಮಾಡುವ ಹುಚ್ಚು ನನಗೆ! ನಿನಗೆಲ್ಲಿಯ ಹಸಿವು? ನಿನಗೆ ನಾನು ತಿನ್ನಿಸಿಯಾಯ್ತೇ?

ಕಣ್ಮುಚ್ಚಿ ಕುಳಿತಿರುವ ನಿನ್ನ
ದೇಗುಲದೀ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಭಗವಂತಾ, ಕಣ್ಣು ಮುಚ್ಚಿ ಕುಳಿತಿರುವ ನಿನ್ನ ವಿಗ್ರಹವನ್ನೇ ನೋಡಿ ಭ್ರಮಿಸಿದ ನನಗೆ ನಿನ್ನ ಪ್ರತ್ಯಕ್ಷ ದರ್ಶನ ಆಗಲೆ ಇಲ್ಲವಲ್ಲಾ! ಹೇಳು ಎಲ್ಲಿದ್ದೀಯಾ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಜಗತ್ತಿಗೆಲ್ಲಾ ಬೆಳಕು ಕೊಡುವ ನೀನು ಸ್ವಯಂ ಪ್ರಕಾಶ. ನಿನ್ನನ್ನು ಪುಟ್ಟ ಹಣತೆಯ ಬೆಳಕಿನಲ್ಲಿ ಹುಡುಕುವ ನನ್ನ ಹುಚ್ಚುತನಕ್ಕೆ ಏನು ಹೇಳಲಿ? ಜಗತ್ತೆಲ್ಲವನ್ನೂ ರಕ್ಷಿಸುವವನೇ ನೀನು, ನಿನಗೊಂದು ಗುಡಿ ಕಟ್ಟಿಸುವ ನನ್ನ ಹುಚ್ಚುತನ ನೋಡು. ನನ್ನ ಸಂತೋಷಕ್ಕೆ ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು.ಆದರೆ ನಾನು ಹೇಳುವುದು ನಿನ್ನ ಹೆಸರನ್ನು! ನಿನಗೆ  ಮನೆ ಇಲ್ಲವಂತೆ! ಅದಕ್ಕೆ ಗುಡಿ ಕಟ್ಟಿಸಬೇಕಂತೆ!!

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ
ಅಹುದೇ ದೇವ ತೋರು
ನಿನ್ನರೂಪ|

ಎಲ್ಲೆಲ್ಲೂ ಇರುವ ನಿನ್ನ   ನಿಜವಾದ ರೂಪವನ್ನು ನೋಡುವ ನನ್ನ ಹುಚ್ಚು ಆಸೆ ನೋಡು ಹೇಗಿದೆ? ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ನಿನ್ನನ್ನು ನಾನು ನೋಡುವುದಾದರೂ ಹೇಗೆ? ಒಂದು ವೇಳೆ ನಾನು ನೋಡುತ್ತಿದ್ದೇನೆಂದರೂ  ಆ ನೋಡುತ್ತಿರುವ ಕಣ್ಣಿನಲ್ಲೂ ನೀನೇ ಇದ್ದೀಯಲ್ಲಾ!  ಆ ನಿನ್ನನ್ನು ನಾನು ಹೇಗೆ ನೋಡಲಿ?

ನನ್ನೊಳಗೆ ಇರುವ
ನಿನ್ನ ಮರೆತೂ ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?

ಕೊನೆಯಲ್ಲಿ ನನಗೆ  ನಿನ್ನ ಬಗ್ಗೆ  ಸ್ವಲ್ಪ ಅರಿವುಂಟಾಗುತ್ತಿದೆ. . ನನ್ನಲ್ಲಿರುವ ನಿನ್ನನ್ನು ನಾನು ಮರೆತು ಎಲ್ಲೆಲ್ಲೋ ಹುಡುಕುತ್ತಿದ್ದೀನಲ್ಲಾ! ನನ್ನನ್ನು ಕ್ಷಮಿಸು ದೇವ. ನಿನ್ನ ಅನುಭವ ನನಗೆ ಮಾಡಿಬಿಡು ಸಾಕು. ನಿನ್ನ ರೂಪವನ್ನು ನೋಡುವ ಭ್ರಮೆಯನ್ನು ತೊರೆದುಬಿಡುವೆ.


ಇದೆಲ್ಲಾ ಓದಿದ ಮೇಲೆ ಇವನೊಬ್ಬ ಆರ್ಯಸಮಾಜಿ ಇವನು ವಿಗ್ರಹಾರಾಧನೆ ವಿರೋಧಿಸುತ್ತಾನೆ, ಎಂಬ ಭ್ರಮೆಗೆ ನೀವು ಬಂದರೆ ಅದು ನನ್ನ ತಪ್ಪಲ್ಲ. ಇದು ನನ್ನೊಳಗಿನ ಮಾತು. ಮ್ಕನುಷ್ಯನ ಆತ್ಮೋದ್ಧಾರಕ್ಕೆ ಅಗತ್ಯವಾಗಿರುವುದು  ಭಗವಂತನ ಸರ್ವವ್ಯಾಪಕತೆಯ ಬಗ್ಗೆ  ಬಲವಾದ ನಂಬಿಕೆ ಹೊರತೂ ಅವನನ್ನು ಸಂಕುಚಿತಗೊಳಿಸಿ ಅದಕ್ಕೊಂದು ಬಣ್ಣ ಕಟ್ಟುವುದಲ್ಲ. ಭಗವಂತನ ಈ ಭವ್ಯ ಸ್ಥಿತಿಯನ್ನು ಒಪ್ಪಿಅವನ ಗುಣಗಳನ್ನುನಮ್ಮದಾಗಿ ಮಾಡಿಕೊಳ್ಳುವುದೊಂದೇ ನಮ್ಮ ಆತ್ಮೋದ್ಧಾರಕ್ಕೆ ಇರುವ ಮಾರ್ಗ.

ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
http://sridhar.vedasudhe.com/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%a1%e0%b3%81%e0%b2%95%e0%b2%b2%e0%b2%bf-%e0%b2%a8%e0%b2%bf%e0%b2%a8%e0%b3%8d%e0%b2%a8/

1 comment:

  1. ನಮಸ್ತೆ, ಶ್ರೀಧರ್ ಜಿ,
    ಇದು ನಿಮ್ಮೊಬ್ಬರ ಮಾತಲ್ಲ ದೇವರನ್ನು ಹುಡುಕುತ್ತಿರುವವರೆಲ್ಲರ ಮನದಾಳದಿ ಮೂಡುವ ಭಾವ ಇದೇ ಆಗಿದೆ.
    ನಿಮ್ಮ ಈ ಪ್ರಯತ್ನಕ್ಕೆ ನನ್ನ ವಂದನೆಗಳು, ಧನ್ಯವಾದಗಳು

    ReplyDelete