ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, October 2, 2015

ಹೌದು, ಬಲು ಕಷ್ಟವಾಗುತ್ತೆ, ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪ್ರಶ್ನೆ ಮಾಡಲು ! ನಾನು ಸಂಪ್ರದಾಯ ವಿರೋಧಿಯಲ್ಲ! ಹಾಗೆ ತಪ್ಪು ತಿಳಿದೀರಿ! ಆದರೆ ಇಲ್ಲಿಯವರಗೆ ಯಾವುದಕ್ಕೂ ಯಾಕೆ? ಎನ್ನುವ ಪ್ರಶ್ನೆ ಮಾಡಬಾರದೆಂಬ  ಸಂಸ್ಕಾರದಲ್ಲಿ ನಾವೆಲ್ಲಾ     ಬೆಳೆದುಬಂದು ಬಿಟ್ಟಿದ್ದೇವೆ. ಯಾಕೆ ಹಾಗೆ ಬೆಳಸಿದರೋ ನಾನರಿಯೆ. ಆದರೆ ವೇದವನ್ನು ಅನುಸರಿಸುವ ನಮಗೆ ವೇದದಲ್ಲಿ ಹೇಳಿರುವ  ಪ್ರಶ್ನೆ ಮಾಡಿ ಅರ್ಥ ಮಾಡಿಕೋ, ಎಂಬುದನ್ನು ಮಾತ್ರ ಹೇಳಿಕೊಟ್ಟಿಲ್ಲ. ಹೀಗಾಗಿ ನಾನು ಸುಮಾರು ಏಳೆಂಟು ವರ್ಷಗಳು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ವಾದ ಮಾಡಿರುವೆ. ಅವರಿಗೆ ನಾನು ಕೇಳುತ್ತಿದ್ದೆ "  ನಮ್ಮ ಪೂರ್ವಜರು ಹಾಗಾದರೆ ದಡ್ದರೇ? ನೀವು ಮಾತ್ರವೇ ಬುದ್ಧಿವಂತರೋ?  

ಅದಕ್ಕೆ ಅವರು ಸ್ವಲ್ಪವೂ ಬೇಸರಿಸದೆ ಹೇಳುತ್ತಿದ್ದರು " ನಾನು ಸತ್ಯ  ಹೇಳಿದರೆ ನಿಮಗೆ ಬೇಸರವಾಗುತ್ತೆ. ನನ್ನ ಮೇಲೆ ಕೋಪವೂ ಬರಬಹುದು"

-ಏನು ಅಂತಾದ್ದು !!!?

- ಹೌದು, ನಮ್ಮ ಪೂರ್ವಜರು ಹಲವು ಸಂದರ್ಭಗಳಲ್ಲಿ  ಮೌಢ್ಯವನ್ನು ಪ್ರಶ್ನೆ ಮಾಡದೆ ತಾವೂ ಆಚರಿಸಿಕೊಂಡು ಬಂದು ಅದನ್ನೇ ಮುಂದುವರೆಯುವಂತೆ ಮಾಡಿದ್ದಾರೆ!!

-ಹೇಗೆ ಹೇಳ್ತೀರಾ? ನಮ್ಮ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಸಂಘದ ಸಾವಿರಾರು ಜನ  ಪ್ರಚಾರಕರುಗಳು ಇದ್ದಾರೆ. ಅವರೆಲ್ಲಾ ದಡ್ದರೆಂದು ನಿಮ್ಮ ಕಲ್ಪನೆಯೇ?

- ಮತ್ತೆ ಅದೇ ಪ್ರಶ್ನೆ ಕೇಳ್ತೀರಲ್ಲಾ!

- ನಾನಂತೂ ನಿಮ್ಮ ಮಾತು ಒಪ್ಪುವುದಿಲ್ಲ.

-ನನ್ನ ಮಾತು ಒಪ್ಪದಿದ್ದರೆ ಅದು ನಿಮ್ಮ ಖುಷಿ. ಆದರೆ ಸತ್ಯ ಎಂದಿದ್ದರೂ ಸತ್ಯವೇ. 

...............ಹೀಗೆ ಹಲವಾರು ವರ್ಷ ಶರ್ಮರೊಡನೆ ಗುದ್ದಾಡಿದರೂ ಅವರು ಬೇಸರಿಸಿಕೊಳ್ಳಲೇ ಇಲ್ಲ. ಪಂಡಿತ್  ಸುಧಾಕರಚತುರ್ವೇದಿಗಳ "ವೇದೋಕ್ತ ಜೀವನ ಪಥ" ಎಂಬ ಪುಟ್ಟ ಪುಸ್ತಕವನ್ನು ನನ್ನ ಕೈಗಿತ್ತರು. ಇದನ್ನು ಯಾವ ಪೂರ್ವಾಗ್ರಹವಿಲ್ಲದೆ ಓದಿ-ಎಂದರು.

ಮುಂದೆ ಕನ್ನಡ  ವೇದಭಾಷ್ಯದ ಎಲ್ಲಾ ಸಂಪುಟಗಳೂ ನನ್ನ ಮಿತ್ರ ಅಶೋಕ ರ  ಕೃಪೆಯಿಂದ ನನ್ನ ಕೊಠಡಿ ಸೇರಿದವು.  ಕಣ್ಣಾಡಿಸುತ್ತಾ ಹೋದಂತೆ ಹೊಸಬೆಳಕು ಕಾಣತೊಡಗಿತು. ಮಾನವೀಯ ಮೌಲ್ಯಗಳಿಗೆ ವಿರುದ್ಧವಾದದ್ದನ್ನು ನನ್ನ ಮನಸ್ಸು ಈಗ ಸುತಾರಾಮ್ ಒಪ್ಪುತ್ತಿಲ್ಲ. ಹಾಗಂತಾ ಎಲ್ಲವನ್ನೂ ವಿರೋಧಿಸಲೂ ಆಗ್ತಾ ಇಲ್ಲ. ಅದಕ್ಕೂ ಕಾರಣವಿದೆ. ನಾನು ಒಬ್ಬ ವೇದವಿದ್ವಾಂಸರ  ವೈಯಕ್ತಿಕ ಸಂಪರ್ಕಇಟ್ಟುಕೊಂಡು ಎಂಟು ಹತ್ತು ವರ್ಷ ಕಳೆದರೂ  ವೇದದ ಸತ್ಯ ಸಂದೇಶದಂತೆ ಇನ್ನೂ ನಡೆಯಲು ಸಾಧ್ಯ ಆಗ್ತಾ ಇಲ್ಲ. ಹೀಗಿರುವಾಗ  ನನ್ನ " ಜೀವನ ವೇದ ಪುಸ್ತಕ" ದಿಂದಲೋ ಅಥವಾ ನನ್ನ ಕೆಲವು ಬ್ಲಾಗ್ ಬರಹಗಳಿಂದಲೋ ಏನೋ ಬದಲಾವಣೆ ಆಗುತ್ತದೆಂಬ ಭ್ರಮೆ ನನಗಿಲ್ಲ. ಆದರೂ ಸತ್ಯವೆಂದು ಕಂಡಿದ್ದನ್ನು ನಿರ್ಭಯವಾಗಿ ಬರೆಯ ಬೇಕೆಂಬ ತುಡಿತವಂತೂ ಇದೆ.

No comments:

Post a Comment