ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, March 3, 2016

ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-1ಕೆಲವೊಮ್ಮೆ ಕೆಲವು ಸಾಮಾಜಿಕ ಚಟುವಟಿಕೆಗಳು ಜನರ ಮೆಚ್ಚುಗೆ ಪಡೆಯುತ್ತವೆ. ಕೆಲವಕ್ಕೆ ಅಡೆತಡೆಗಳು ಬರುತ್ತವೆ. ಏನೇ ಆದರೂ ಸಾಮಾಜಿಕ ಕಳಕಳಿ ಇರುವ ಕಾರ್ಯಕರ್ತನಾದವನು ತನ್ನ ಆತ್ಮಸಾಕ್ಶಿ ಒಪ್ಪಿದ್ದನ್ನು ಮಾಡುತ್ತಾ ಹೋಗುತ್ತಾನೆ. ಅದು ಸಮಾಜದ ಹಿತ ಕಾಪಾಡುವಂತಿದ್ದರೆ ಇಂದಲ್ಲಾ ನಾಳೆ ಜನರು ಒಪ್ಪುತ್ತಾರೆ, ಇಲ್ಲವಾದರೆ ತಿರಸ್ಕರಿಸುತ್ತಾರೆ. ಇಷ್ಟೆಲ್ಲಾ ಮಾತೇಕೆ ಎಂದರೆ ವೇದಭಾರತಿಯ ಹೆಸರಲ್ಲಿ ನಾವುಗಳು ಚಟುವಟಿಕೆ ಆರಂಭಿಸಿದ ಹೊಸದರಲ್ಲಿ ಹಲವರು ಭಾವಿಸಿದ್ದರು ಇಲ್ಲಿ ಪೂಜಾ ಮಂತ್ರವನ್ನು ಹೇಳಿಕೊಡುತ್ತಾರೆಂದು.ಇನ್ನು ಕೆಲವರು ನಮ್ಮ ಮಕ್ಕಳಿಗೆ "ಸಂಧ್ಯಾವಂದನೆ ಹೇಳಿಕೊಡುತ್ತೀರಾ? ಋಗ್ವೇದದಲ್ಲೋ? ಯಜುರ್ವೇದದಲ್ಲೋ? ಹೀಗೆ ಕೇಳುತ್ತಿದ್ದರು.

ನಾವು ಹೇಳುತ್ತಿದ್ದುದು ಒಂದೇ " ಇಲ್ಲಿ ನಿತ್ಯಪೂಜಾ ಮಂತ್ರ ಹೇಳಿಕೊಡುವುದಿಲ್ಲ" ಇಲ್ಲಿ ವೇದದ ಪರಿಚಯ ಮಾಡಿಕೊಡಲಾಗುತ್ತದೆ. ಅಗ್ನಿಹೋತ್ರವನ್ನು ಕಲಿಸಲಾಗುತ್ತದೆ. " ವೇದಪಾಠವು ನಡೆಯುತ್ತದೆ"
ಆಗ ಕೆಲವರು ಕೇಳುತ್ತಿದ್ದರು - ಕೇವಲ ಬ್ರಾಹ್ಮಣಹುಡುಗರು ಮಾತ್ರಾ ಬರುತ್ತಾರಲ್ಲವೇ?

- ನಮ್ಮ ಉದ್ದೇಶ ಇರುವುದೇ "ಎಲ್ಲರಿಗಾಗಿ ವೇದ " ಪರಿಚಯ ಮಾಡಿಕೊಡುವುದು. ಇಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಇದೆ. ನಾವು ಯಾರ ಜಾತಿಯನ್ನೂ ಕೇಳುವುದಿಲ್ಲ.

ವೇದ ಪಾಠ ಶುರುವಾಯ್ತು. ಬರುತ್ತಿದ್ದ ಕೆಲವರು ನಿಲ್ಲಿಸಿದರು. ಹೊಸಬರು ಬಂದರು. ನೂರಾರು ಕಡೆಯಿಂದ ಅಗ್ನಿಹೋತ್ರಕ್ಕಾಗಿ ಆಹ್ವಾನ ಬಂತು. ಸಾಧ್ಯವಾದಲ್ಲೆಲ್ಲಾ ವೇದಭಾರತಿಯ ಕಾರ್ಯಕರ್ತರು ಹೋಗಿ ಉಚಿತವಾಗಿ ಅಗ್ನಿಹೋತ್ರ ನಡೆಸಿ ವೇದದ ಸರಳ ಪರಿಚಯ ಮಾಡಿಕೊಟ್ಟು ಬಂದೆವು.
ಕ್ರಮೇಣ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮಗಳು ನಡೆದವು.ಶಿಬಿರಗಳು ನಡೆದವು. ವೇದಭಾರತಿಯ ಹೆಸರು ಪ್ರಚಾರವಾಯ್ತು. ನಾವು ನಡೆಸಿದ ವೇದೋಕ್ತ ಜೀವನ ಶಿಬಿರದಲ್ಲಿ ಮೊಟ್ಟ ಮೊದಲಿಗೆ ಏಳು ಜನರಿಗೆ ಉಪನಯನ ಮಾಡಿಸಿ ಯಜ್ಞೋಪವೀತ ಧಾರಣೆ ನಡೆಸಿದೆವು.ಅದರಲ್ಲಿ ನಾಲ್ವರು ಸ್ತ್ರೀಯರು,ಮೂವರು ಪುರುಷರು. ಕೆಲವರ ಜಾತಿ ಗೊತ್ತಿದ್ದರೂ ಕೆಲವರದ್ದು ನಮಗೆ ಗೊತ್ತಿಲ್ಲ. ವೇದಭಾರತಿಗೆ ಬರುವವರು ಯಾರು ಯಾವ ಜಾತಿಗೆ ಸೇರಿದವರೆಂದು ಗೊತ್ತಾಗುವುದೇ ಇಲ್ಲ. ಕಾರಣ ಅದು ನಮಗೆ ಬೇಕಿಲ್ಲ.

ಕಳೆದ ಒಂದುವರ್ಷದಿಂದ ವೇದಭಾರತಿಯ ಬಗ್ಗೆ ತಿಳಿದುಕೊಂಡಿದ್ದ ಸೇವಾಬಸ್ತಿಯ ಬಂಧು ಒಬ್ಬರಿಗೆ ತಮ್ಮ ಮಗನಿಗೆ ಉಪನಯನ ಮಾಡಿಸುವ ಇಚ್ಛೆಯಾಯ್ತು. ವಿಚಾರ ನಮಗೆ ತಿಳಿಸಿದರು. ಫೆಬ್ರವರಿ 19 ರಂದು ಅವರ ಗ್ರಾಮದಲ್ಲೇ ವೇದೋಕ್ತವಾಗಿ ಉಪನಯನ ವಾಯ್ತು. ಪತ್ರಿಕೆಗಳಲ್ಲಿ ಅದು ಬಿಸಿ ಸುದ್ಧಿಯಾಯ್ತು. ಸಾಮಾಜಿಕ ತಾಣಗಳಲ್ಲೂ ಸುದ್ದಿ ಹರಿದಾಡಿತು. ಹಲವರು ಮೆಚ್ಚಿದರು.ಯಾರೋ ಒಬ್ಬಿಬ್ಬರು ಇದು ಶಾಸ್ತ್ರ ಸಮ್ಮತವಲ್ಲ-ಎಂದರು. ಶಾಸ್ತ್ರಸಮ್ಮತವಲ್ಲ ಎನ್ನುವವರಿಗೆ ವೇದ ಮಂತ್ರದ ಆಧಾರ ಕೊಡುವುದಾಗಿ ತಿಳಿಸಿದ್ದಾಯ್ತು. ವಿಷಯ ಹಳೆಯದಾಯ್ತು.

ಇಲ್ಲಿ ಒಂದು ಮಾತು ನಾನು ಹೇಳಲೇ ಬೇಕು. ಸಾಮಾನ್ಯವಾಗಿ ನಮ್ಮ ಚಟುವಟಿಕೆಗಳನ್ನು ಮೆಚ್ಚುತ್ತಿದ್ದ ಹಲವರು ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ! ಮೌನಮ್ ಸಮ್ಮತಿ ಲಕ್ಷಣಮ್ ಎಂಬುದು Facebook ಮತ್ತು ಇತರ ಸಾಮಾಜಿಕ ತಾಣಗಳಿಗೆ ಹೊಂದುವ ಮಾತಲ್ಲ. ಇಲ್ಲಿ ಮೆಚ್ಚಬೇಕು.ಇಲ್ಲ ವಿರೋಧಿಸಬೇಕು. ಅಥವ ಕೀಟಲೆ ಮಾಡಬೇಕು.ಯಾವಾಗಲೂ ಪ್ರತಿಕ್ರಿಯೆ ನೀಡುತ್ತಿದ್ದವರು ಈ ಸುದ್ದಿಗೆಪ್ರತಿಕ್ರಿಯಿಸಲಿಲ್ಲ ವೆಂದರೆ ಅವರುಗಳಿಗೆ ಇದು ಸಮಾಧಾನವಾಗದ ವಿಷಯವೆಂದೇ ಅರ್ಥ.ಪರವಾಗಿಲ್ಲ.ಅದು ಅವರ ಇಷ್ಟ. ಆದರೆ ಈ ಪೋಸ್ಟ್ ಬರೆಯಲು ಪ್ರಮುಖ ಕಾರಣ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು. ಅವರು ಬೀದರ್ ನ ಶ್ರೀಮದ್ ವೀರ ಶೈವ ರಾಜ ಪೀಠದ ಅಧ್ಯಕ್ಷರು.ಶಿವಾದ್ವೈತ ಆಗಮಿಕ ಅನುಯಾಯಿ.ಹಿಂದಿಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಕನ್ನಡ ಕಷ್ಟ. ಮೊನ್ನೆ ರಾತ್ರಿ ನನಗೆ ಫೋನ್ ಮಾಡಿದರು. ಅವರು ಮಾತು ಆರಂಭಿಸುವುದೇ " ನಮಸ್ತೆ ಪ್ರಭು ಕೈಸೆ ಹೈ?"
ನನಗೆ ಹಿಂದಿ ಅರ್ಥವಾದರೂ ಮಾತನಾಡಲು ಬಲು ಕಷ್ಟ. ಆದರೂ ತಪ್ಪು ತಪ್ಪಾಗಿ ಮಾತನಾಡಿದರೂ. ಭಾವನೆಯನ್ನು ಅರ್ಥಮಾಡಿಕೊಂಡು ಸೊಗಸಾಗಿ ಮಾತು ಮುಂದುವರೆಸುತ್ತಾ 40 ನಿಮಿಷ ಮಾತನಾಡಿದರು. ಅವರ ಕಳಕಳಿಯನ್ನು ಸ್ನೇಹಿತರ ಗಮನಕ್ಕೆ ತರಲು ಈ ಪ್ರಯತ್ನ.
ಕರಂಜೆ : ವಿಶೇಷ ಕಾರ್ಯಕ್ರಮವನ್ನು ನೀವು ಮಾಡಿದಿರಂತೆ. ವಿಷಯ ತಿಳಿಯಿತು
ನಾನು : ಹೌದು ಸೇವಾಬಸ್ತಿಯ ಯುವಕನಿಗೆ ಉಪನಯನ ಮಾಡಿಸಿದೆವು
ಕ: ತುಂಬಾ ಸಂತೋಷ. ಇಂತಾ ಕಾರ್ಯಕ್ರಮಗಳು ನಡೆಯಬೇಕು
ನಾನು : ಸಂತೋಷ
ಕ : ನೋಡಿ, ಅವರಿಗೆ ಮುಂದಿನ ಸಂಸ್ಕಾರಕ್ಕೆ ಏನು ಮಾಡುವಿರಿ? ನಾನು ಹಲವು ಕಡೆ ನೋಡಿದ್ದೀನಿ. ಸಾವಿರಾರು ಜನರಿಗೆ ಶಿವ ದೀಕ್ಷೆ ಕೊಡಿಸಿಬಿಡುತ್ತಾರೆ. ನಂತರ ಮುಂದೆ ಅವರಿಗೆ ಏನೂ ಸಂಸ್ಕಾರವಾಗುವುದಿಲ್ಲ.
ನಾನು : ಉಪನಯನ ಮಾಡಿಸಿಕೊಂಡ ವಟುವೂ ಅವನ ತಂದೆಯೂ ನಮ್ಮ ಗುರುಗಳ ಹತ್ತಿರ ಪಾಠಕ್ಕೆ ಬರುತ್ತಾರೆ.
ಕ : ಆ ಕೆಲಸ ಆಗಬೇಕು. ಸಾವಿರ ಜನರಿಗೆ ದೀಕ್ಷೆ ಕೊಟ್ಟರೆ ಪ್ರಯೋಜನವಿಲ್ಲ. ಒಮ್ಮೆ ದೀಕ್ಷೆಕೊಟ್ಟಮೇಲೆ ಆ ಮಾರ್ಗದಲ್ಲಿ ಅವನು ಮುಂದುವರೆಯಬೇಕು. ಆ ಒಂದು ಕುಟುಂಬಕ್ಕೆ ಪೂರ್ಣ ವೈದಿಕ ಸಂಸ್ಕಾರವಾದರೆ ಅವರಿಂದ ಮುಂದೆ ಹತ್ತಿಪ್ಪತ್ತು ವರ್ಷಗಳಲ್ಲಿ ನೂರಾರು ಮನೆಗಳಿಗೆ ವೈದಿಕ ಸಂಸ್ಕಾರ ಸಿಗುವಂತಾಗುತ್ತದೆ.
ಕರಂಜೆಯವರು 40 ನಿಮಿಷ ಮಾತನಾಡಿದರು. ಅವರ ಮಾತಿನಲ್ಲಿ ಕಳಕಳಿಯಿತ್ತು. ವೇದಭಾರತಿಯೇ ಆಗಲೀ ಅಥವಾ ಬೇರೆ ಯಾವುದೇ ಸಂಘಟನೆಯೇ ಆಗಲೀ ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾರ್ಯಕ್ರಮಗಳನ್ನು ರೂಪಿಸಬೇಕೆನ್ನಿಸಿತು.

No comments:

Post a Comment