Pages

Friday, October 1, 2010

ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೧

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ - 3




ಶರೀರದಲ್ಲಿ ಮುಖದ ಕೆಲಸದಂತೆ ಸಮಾಜದಲ್ಲಿ ಕೆಲಸ ಮಾಡುವವರು ಯಾರು? ಬಾಹುಗಳಂತೆ ಕೆಲಸ ಮಾಡುವವರು ಯಾರು? ತೊಡೆಗಳಂತೆ ಕೆಲಸಮಾಡುವವರು ಯಾರು?[ಅಥರ್ವ ವೇದದಲ್ಲಿ ಮಧ್ಯೋ ತದಸ್ಯ ಯದ್ ವೈಶ್ಯೋ , ಎಂದು ಹೇಳಿದೆ, ಅಂದರೆಶರೀರದ ಮಧ್ಯಭಾಗದಂತೆ ಕೆಲಸ ಮಾಡುವವರು ವೈಶ್ಯರು]
ಶರೀರದಲ್ಲಿ ಕಾಲುಗಳು ಕೆಲಸಮಾಡುವಂತೆ ಸಮಾಜದಲ್ಲಿಕೆಲಸವನ್ನು ಮಾಡುವವರು ಯಾರು?- ಇದು ಪ್ರಶ್ನೆ. ಮುಖದಂತೆ, ಕಾಲುಗಳಂತೆ ಕೆಲಸ ಮಾಡುವವರು ಯಾರು? ಎಂಬುದು ಪ್ರಶ್ನೆಹೊರತು, ಮುಖದಿಂದ ಯಾರು ಜನಿಸಿದರು? ಪಾದದಿಂದ ಯಾರು ಜನಿಸಿದರು? ಎಂಬ ವ್ಯಾಖ್ಯೆಯೇ ತಪ್ಪು.ಇದನ್ನು ನಾವುರಿಯಾಗಿ ತಿಳಿದುಕೊಳ್ಳಬೇಕು. ಇಲ್ಲಿ ಸ್ವಲ್ಪ ವ್ಯಾಕರಣವನ್ನು ಗಮನಿಸಬೇಕು. ಅದೇನೆಂದರೆ || ಪದ್ಭ್ಯಾಮ್ ಶೂದ್ರೋ ಅಜಾಯತ|| ಇಲ್ಲಿ ಗಮನಿಸಬೇಕಾದುದೇನೆಂದರೆ ಪದ್ಭ್ಯಾಮ್ ಎನ್ನುವ ಪದವು ಚತುರ್ಥಿ ವಿಭಕ್ತಿಯಲ್ಲಿ ಇದಕ್ಕೋಸ್ಕರ ಎಂದಾಗುತ್ತದೆ.ಅಂದರೆಪಾದಗಳು ಮಾಡುವ ಕೆಲಸಕ್ಕೋಸ್ಕರ ಎಂದಾಗುತ್ತದೆ. ಪಂಚಮಿ ವಿಭಕ್ತಿಯಲ್ಲಿ ಇದರಿಂದ ಎಂದಾಗುತ್ತದೆ, [ ಅಂದರೆ ಪಾದಗಳಿಂದ] ಎಂದಾಗುತ್ತದೆ. ಪ್ರಶ್ನೆ ಇರುವುದು ಯಾವ ಕೆಲಸಕ್ಕಾಗಿ? ಎಂದಾದ್ದರಿಂದ ಇಲ್ಲಿ ಚತುರ್ಥಿ ವಿಭಕ್ತಿಯನ್ನೇ ನಾವುತೆಗೆದುಕೊಳ್ಳಬೇಕು.ಕಾರಣ ಹಿಂದಿನ ಪ್ರಶ್ನೆಗೆ ಈ ಮಂತ್ರ ಉತ್ತರವಾಗಬೇಕಾದರೆ ಪಾದಗಳಿಗೋಸ್ಕರ ವೆಂದು ಅರ್ಥೈಸಬೇಕೇ ಹೊರತು ಪಾದಗಳಿಂದ ಶೂದ್ರ ಹುಟ್ಟಿದ ಎಂಬುದು ತಪ್ಪು. ಹಾಗೆಯೇ ಮುಖದಿಂದ ಬ್ರಾಹ್ಮಣನಾಗಲೀ,ಬಾಹುಗಳಿಂದಕ್ಷತ್ರಿಯನಾಗಲೀ, ತೊಡೆಗಳಿಂದ ವೈಶ್ಯನಾಗಲೀ ಜನಿಸಲಿಲ್ಲ. ಎಲ್ಲರ ಜನವಾಗಿರುವುದು ತಾಯಿಯ ಗರ್ಭದಿಂದಲೇ. ಸಮಾಜದನಾಲ್ಕು ಕೆಲಸಗಳನ್ನು ಈ ಮಂತ್ರದಲ್ಲಿ ಹೇಳಿದ್ದಾರೆ. ಮುಖದಲ್ಲಿ ಯಾವ ಕೆಲಸ ನಡೆಯುತ್ತದೆ? ಮುಖದಲ್ಲಿ ಗ್ರಹಿಸುವಅಂಗಾಂಗಗಳಿವೆ. ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಮಿದುಳುಗಳಿವೆ.ಇವೆಲ್ಲವೂ ಹೊರಜಗತ್ತಿನಿಂದ ವಿಷಯಗಳನ್ನು ಸಂಗ್ರಹಿಸುವಇಂದ್ರಿಯಗಳು.ಅಲ್ಲದೆ ಅವುಗಳನ್ನು ವಿಮರ್ಶೆಮಾಡುವ ಹಾಗೂ ನಿರ್ಣಯ ಕೊಡುವ ಮಿದುಳೂ ಕೂಡ ಮುಖದ ಭಾಗದಲ್ಲಿಯೇ ಇದೆ. ಆ ನಿರ್ಣಯಗಳನ್ನು ಉಚ್ಛರಿಸುವ ನಾಲಿಗೆಯೂ ಇಲ್ಲಿಯೇ ಇದೆ. ಆ ನಿರ್ಣಯಗಳನ್ನು ಶರೀರದ ಎಲ್ಲಾ ಅಂಗಾಂಗಗಳಿಗೂ ಕಳಿಸುವ ವ್ಯವಸ್ಥೆಯೂ ಇಲ್ಲೇ ಇದೆ. ಅಂದರೆ ಈ ಶಿರೋ ಭಾಗದಲ್ಲಿರುವ ಅನ್ಯಾನ್ಯ ಅಂಗಾಂಗಗಳು ಮಾಡುವ ಕೆಲಸಗಳನ್ನು ಸಮಾಜದಲ್ಲಿ ಯಾರು ಮಾಡುತ್ತಾರೋ ಅವರನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ಅಂದರೆ ಇದು ಜಾತಿಯಲ್ಲ. ಇದು ಜನ್ಮದಿಂದಬರುವಂತಹದ್ದಲ್ಲ. ಶರೀರದ ಶಿರೋ ಭಾಗವು ನಿರ್ವಹಿಸುವ ಕೆಲಸಗಳನ್ನು ಸಮಾಜದಲ್ಲಿ ಯಾರ್ಯಾರು ಮಾಡುತ್ತಾರೆ, ಅವರೆಲ್ಲಾಬ್ರಾಹ್ಮಣರೇ ಹೌದು.ಶರೀರದ ರಕ್ಷಣೆ ಮಾಡುವ ಅಂಗ ಯಾವುದು? ಒಂದು ವೇಳೆ ಮುಗ್ಗರಿಸಿ ಬೀಳುವ ಸ್ಥಿತಿ ಬಂದರೆ ಮೊದಲುಕೈಯ್ಯನ್ನು ನೆಲಕ್ಕೆ ಕೊಡುತ್ತೀವಲ್ಲವೇ? ತಲೆಯಮೇಲೆ ಏನಾದರೊಂದು ವಸ್ತು ಅಕಸ್ಮಾತ್ ಬಿತ್ತೆಂದರೆ ತಲೆಯನ್ನು ಮೊದಲು ರಕ್ಷಿಸಲು ಧಾವಿಸುವುದು ಕೈ ಅಲ್ಲವೇ? ಹಾಗೆಯೇ ಸಮಾಜದ ಮೇಲಿನ ಆಘಾತಗಳು, ಅನ್ಯಾಯ, ಅಧರ್ಮ, ಅತ್ಯಾಚಾರಗಳಿಂದ ಸಮಾಜವನ್ನು ರಕ್ಷಿಸುವವನು ಕ್ಷತ್ರಿಯ. ಶರೀರದಲ್ಲಿ ಮಧ್ಯಭಾಗದಲ್ಲಿರುವುದು ಶ್ವಾಸಕೋಶ, ಹೃದಯ ಮತ್ತು ಜಠರ ಹಾಗೂತೊಡೆಗಳು.ಶ್ವಾಸಕೋಶವು ತಾನು ತೆಗೆದುಕೊಂಡ ಗಾಳಿಯಿಂದ ಆಮ್ಲಜನಕವನ್ನು ಶರೀರದ ಎಲ್ಲಾ ಭಾಗಗಳಿಗೂ ಹಂಚಬೇಕು.ಹೃದಯವು ರಕ್ತವನ್ನು ಶರೀರದ ಕಣಕಣಗಳಿಗೂ ಹಂಚಬೇಕು. ಹೊಟ್ಟೆ ತನ್ನಲ್ಲಿರುವ ಆಹಾರವನ್ನು ಶರೀರರದ ಎಲ್ಲಾಭಾಗಗಳಿಗೂ ಹಂಚಬೇಕು. ಹೀಗೆ ತಯಾರಿ ಮತ್ತು ಹಂಚುವ ಕೆಲಸವನ್ನು ಮಾಡುವ ಶರೀರದ ಮಧ್ಯಭಾಗವೇನಿದೆ ಅವುಗಳ , ಹಾಗೂ ಶರೀರಕ್ಕೆ ಆಧಾರವನ್ನು ಕೊಡುವ ತೊಡೆಯ ಕಾರ್ಯವನ್ನು ಸಮಾಜದಲ್ಲಿ ಮಾಡುವವನು ವೈಶ್ಯ. ಪಾದವಾದರೋ ಶರೀರದ ಚಲನೆಗೆ ಕಾರಣವಾಗಿದೆ. ಅದಿಲ್ಲದಿದ್ದರೆ ಮನುಷ್ಯನನ್ನು ಹೆಳವನೆನ್ನುತ್ತಾರೆ. ಮನುಷ್ಯನ ಪ್ರಗತಿ ಇರುವುದೇ ಅವನ ಚಲನೆಯ ಶಕ್ತಿಯಿಂದ. ಹೀಗೆ ಸಮಾಜದ ಪ್ರಗತಿಗೆ ಯಾರು ಕಾರಣರೋ ಅವರು ಶೂದ್ರ.ಶರೀರಕ್ಕೆ ತಲೆ ಮಾತ್ರ ಇದ್ದರೆ ಸಾಕೇ? ಕಾಲೂ ಬೇಕಲ್ಲವೇ? ಶರೀರಕ್ಕೆ ತಲೆಯು ಎಷ್ಟು ಮುಖ್ಯವೋ ಕಾಲೂ ಅಷ್ಟೇ ಮುಖ್ಯ.ಕಾಲೆಷ್ಟು ಮುಖ್ಯವೋ ಹೊಟ್ಟೆಯೂ ಅಷ್ಟೇಮುಖ್ಯ, ಕೈಗಳೂ ಅಷ್ಟೇ ಮುಖ್ಯ. ಶರೀರಕ್ಕೆ ಎಲ್ಲಾ ಅಂಗಗಳೂ ಮುಖ್ಯವೇ.ಶರೀರದಲ್ಲಿ ಎಲ್ಲಾ ಅಂಗಗಳೂ ಒಂದಕ್ಕೊಂದುಹೊಂದಿಕೊಂಡು ಕೆಲಸವನ್ನು ಮಾಡಿದರೆ ಮಾತ್ರ ಶರೀರರದ ಕೆಲಸಗಳು ಸುಗಮವಾಗುತ್ತವೆ. ಹಾಗೆಯೇ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಪರಸ್ಪರ ಹೊಂದಿಕೊಂಡು ತಮ್ಮತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದಾಗ ಮಾತ್ರ ಈ ಸಮಾಜರಥವು ಸುಗಮವಾಗಿ ಚಲಿಸುತ್ತದೆ. ಇಲ್ಲಿ ಯಾರೂ ಹೆಚ್ಚೂ ಇಲ್ಲ. ಯಾರೂ ಕಡಿಮೆಯೂ ಇಲ್ಲ. ಇದು ವೇದದಲ್ಲಿನ ಮಾತು. ಇದಕ್ಕೆ ಪೂರಕವಾಗಿ ವೇದದಲ್ಲಿ ಇನ್ನೊಂದು ಮಂತ್ರವು ಇದೆ. || ಅಜ್ಯೇಷ್ಠಾ ಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ||[ಋಕ್.೫.೬೦.೫] ಈ ಮಂತ್ರದ ಅರ್ಥ ವೇನೆಂದರೆ ಹೇ ಮಾನವರೇ, ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ-ಯಾರೂಕನಿಷ್ಠರೂ ಅಲ್ಲ. ನೀವೆಲ್ಲರೂ ಪರಸ್ಪರ ಸೋದರರು.ಎಲ್ಲರೂ ಸೌಭಾಗ್ಯಕ್ಕಾಗಿ ಒಂದುಗೂಡಿ ನಡೆಯಬೇಕು. ಅಂದರೆ ಬ್ರಾಹ್ಮಣನಿಗೆಯಾವ ಸ್ಥಾನವೋ ಶೂದ್ರನಿಗೂ ಅದೇ ಸ್ಥಾನ. ಉಚ್ಛ-ನೀಚ ಭೇದ ಎಣಿಸುವವರು ವೇದವನ್ನು ಸರಿಯಾಗಿ ಓದಬೇಕು. ವೇದದಲ್ಲಿ ಇದು ಸ್ಪಷ್ಟವಾಗಿದೆ.
. . . . . . . . . . . . .ಮುಂದಿನ ಭಾಗವನ್ನು ೫.೧೦.೨೦೧೦ ಮಂಗಳವಾರ ನಿರೀಕ್ಷಿಸಿ

Thursday, September 30, 2010

ಮೂಢ ಉವಾಚ -8

                  ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನೆಲ್ಲಾ!
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ


                ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ


                 ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ


                ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ
************
-ಕ.ವೆಂ.ನಾಗರಾಜ್

Wednesday, September 29, 2010

ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

[ಚಿತ್ರ ಅಂತರ್ಜಾಲದಿಂದ]



[ಅಂತರ್ಜಾಲದ ಚಿತ್ರದಿಂದ ಸಮಾಧಾನವಾಗಲಿಲ್ಲ. ತೊಟ್ಟು ಕಿತ್ತು ನೆಲದ ಮೇಲೆ ಬಿದ್ದ ಹೂವಿನ ಚಿತ್ರ ನಾನೇ ಸೆರೆಹಿಡಿದಾಗ]



ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||

ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||

ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!


Tuesday, September 28, 2010

ಎಲ್ಲರ ಜನನ ವಾಗಿರುವುದು ತಾಯಿಯ ಗರ್ಭದಿಂದಲ್ಲವೇ?

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ-2



[ ಕಳೆದ ಕೆಲವು ದಿನಗಳ ಮುಂಚೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಬ್ರಾಹ್ಮಣ ಸಮಾಜದಲ್ಲಿ ಮಾಡಿದ ಉಪನ್ಯಾಸದ ಆಡಿಯೋ ವನ್ನು ಇಲ್ಲಿ ನೀವು ಕೇಳಬಹುದು.ಆದರೆ ಕೆಲವರಿಗೆ ಆಡಿಯೋ ಕೇಳುವ ಸೂಕ್ತ ಸೌಲಭ್ಯವಿರುವುದಿಲ್ಲ. ಅವರಿಗಾಗಿ ಉಪನ್ಯಾಸದ ಬರಹರೂಪವನ್ನು ಇಲ್ಲಿ ಕೊಟ್ಟಿದೆ. ಬರಹ ರೂಪವನ್ನು ಓದುವಾಗ ಉಪನ್ಯಾಸವನ್ನು ಕೇಳಿದಂತಾಗುವುದಿಲ್ಲ. ವೀಡಿಯೋ ದಲ್ಲಿ ನೋಡಿದರಂತೂ ಇನ್ನೂ ಭಾವನೆಗಳು ಸ್ಪಷ್ಟವಾಗುತ್ತದೆ. ಆದರೂ ಆಡಿಯೋ/ವೀಡಿಯೋ ಗಳನ್ನು ಅಂತರ್ಜಾಲದಲ್ಲಿ ನೋಡುವಾಗ/ಕೇಳುವಾಗ ಅನೇಕ ತಾಂತ್ರಿಕ ತೊಂದರೆಗಳಿರುತ್ತವೆ. ಅದಕ್ಕಾಗಿ ಬರಹ ರೂಪ ಇಲ್ಲಿದೆ. ಆದರೂ ಆಡಿಯೋ ಕೇಳಿ.]
ಇವತ್ತು ರೂಢಿಯಲ್ಲಿ ಬ್ರಾಹ್ಮಣ ಎಂದರೆ ಅರ್ಥ ಏನು? ಅದು ಒಂದು ಜಾತಿ.ನಾವೆಲ್ಲಾ ಒಪ್ಪಿಕೊಂಡಿರುವಂತೆ ಬ್ರಾಹ್ಮಣ ಎಂಬುದು ಹುಟ್ಟಿನಿಂದ ಬರುತ್ತದೆ,ತಂದೆತಾಯಿ ಬ್ರಾಹ್ಮಣರಾಗಿದ್ದರೆ ಜನಿಸುವ ಮಗುವೂ ಬ್ರಾಹ್ಮಣ ಎಂಬುದು ಈಗ ನಡೆದುಬಂದಿರುವ ವಿಚಾರ.ಇದು ಬ್ರಾಹ್ಮಣ ಎಂಬ ಪದಕ್ಕಷ್ಟೇ ಅಲ್ಲ, ಎಲ್ಲಾ ಜಾತಿಯ ಕಥೆಯೂ ಇದೇ ಆಗಿದೆ. ವೈಶ್ಯ ನೆಂದರೆ ವೈಶ್ಯ ತಂದೆತಾಯಿಗೆ ಜನಿಸಿರುವವ ಎಂದೇ ಅರ್ಥ ಮಾಡುತ್ತೇವೆ.ಇದು ಎಲ್ಲಾ ಜಾತಿಗೂ ಅನ್ವಯ. ಅಥವಾ ಮತಗಳ ಹೆಸರಲ್ಲಿ ನೋಡಬೇಕೆಂದರೆ ಹಿಂದುಗಳ ಮನೆಯಲ್ಲಿ ಹುಟ್ಟಿದ ಮಗು ಹಿಂದು. ಕ್ರಿಶ್ಚಿಯನ್ ಮನೆಯಲ್ಲಿ ಹುಟ್ಟಿದ ಮಗು ಕ್ರೈಸ್ತ್ , ಮುಸಲ್ಮಾನರ ಮನೆಯಲ್ಲಿ ಹುಟ್ಟಿದವ ಮುಸ್ಲಿಮ್,ಲಿಂಗಾಯಿಯತರ ಮನೆಯಲ್ಲಿ ಹುಟ್ಟಿದವ ಲಿಂಗಾಯಿತ. ಒಟ್ಟಿನಲ್ಲಿ ಜಾತಿಯಾಗಲೀ, ಮತವಾಗಲೀ ಹುಟ್ಟಿನಿಂದ ಬರುತ್ತದೆಂಬ ವಿಚಾರ ನಮ್ಮ ತಲೆಯಲ್ಲಿ ಸೇರಿಕೊಂಡಿದೆ. ಆದರೆ ವೇದವು ಹೇಳುವ ವಿಚಾರವನ್ನು ನಾವು ಪ್ರಾಮಾಣಿಕವಾಗಿ ಗಮನಿಸುವುದಾದರೆ ಈ ರೀತಿಯ ಹುಟ್ಟಿನಿಂದ ಬರುವ ಜಾತಿಯನ್ನು ವೇದವು ಒಪ್ಪುವುದಿಲ್ಲ.ಭಗವಂತನು ಈ ರೀತಿಯ ವಿಭಾಗವನ್ನು ಮಾಡಿರುವುದಿಲ್ಲ. ಇಂದು ಇರುವ ಎಲ್ಲಾ ಈ ಜಾತಿಯ ವ್ಯವಸ್ಥೆಯನ್ನು ಮನುಷ್ಯನು ಭಗವಂತನಿಗೆ ವಿರುದ್ಧವಾಗಿ ಮಾಡಿಕೊಂಡಿದ್ದಾನೆಯೇ ಹೊರತು ಭಗವಂತನು ಮಾಡಿದ್ದಲ್ಲ. ಮನುಷ್ಯನು ಮಾಡಬಾರದೆಂದೇನೂ ಅಲ್ಲ, ಆದರೆ ಮನುಷ್ಯನು ಮಾಡಿದ್ದು ಭಗವಂತನ ಆದೇಶಕ್ಕೆ ಅನುಗುಣವಾಗಿರಬೇಕು.ಈ ಜಾತಿ ವ್ಯವಸ್ಥೆಯು ಭಗವಂತನ ಆದೇಶಕ್ಕೆ ವಿರುದ್ಧವಾಗಿದೆ.ಅಲ್ಲದೆ ವೇದದಲ್ಲಿರುವ ವರ್ಣಾಶ್ರಮ ವ್ಯವಸ್ಥೆಗೆ ತದ್ವಿರುದ್ಧವಾಗಿದೆ.ವೇದದಲ್ಲಿ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರ ಎಂಬ ಪದಗಳು ಪ್ರಯೋಗದಲ್ಲಿವೆ. ಆದರೆ ಅವುಗಳನ್ನು ಎಲ್ಲೂ ಈಗಿರುವ ಜಾತಿಯ ಅರ್ಥದಲ್ಲಿ ಬಳಸಿಲ್ಲ.ಒಬ್ಬ ವ್ಯಾಪಾರ ಮಾಡುವ ವ್ಯಕ್ತಿ ಇದ್ದಾನೆಂದರೆ ವೇದಗಳ ಪ್ರಕಾರ ಅವನು ವೈಶ್ಯ.ಅವನು ಯಾವ ಮನೆಯಲ್ಲಿ ಹುಟ್ಟಿದ್ದಾನೆ? ಅವರಪ್ಪ ಯಾರು? ಅವರಮ್ಮ ಯಾರು? ಎಂಬುದು ನಗಣ್ಯ.ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಹೆಸರು ಡಿಸೋಜ ಎಂದು ಭಾವಿಸೋಣ. ಅವನನ್ನು ಇಂದು ನಾವು ಏನೆಂದು ಕರೆಯುತ್ತೇವೆ? ಅವನನ್ನು ಕ್ರಿಶ್ಚಿಯನ್ ಎಂದು ಕರೆಯುತ್ತೇವೆ. ಆದರೆ ವೇದದ ಪ್ರಕಾರ ಅವನು ವೈಶ್ಯ. ಇಬ್ರಾಹಿಮ್ ಎಂಬುವನೊಬ್ಬ ಟೀಚರ್ ಕೆಲಸದಲ್ಲಿದ್ದರೆ ಅವನನ್ನು ಮುಸ್ಲಿಮ್ ಎಂದೇ ನಾವು ಕರೆಯುತ್ತೇವೆ. ವೇದದ ಪ್ರಕಾರ ಜ್ಞಾನವನ್ನು ಪ್ರಚಾರ ಮಾಡುತ್ತಿರುವ ಇಬ್ರಾಹಿಮ್ ಕೂಡ ಬ್ರಾಹ್ಮಣನೇ.ಜಾತಿ ಎಂಬುದು ಹುಟ್ಟಿನಿಂದ ಬರುವಂತಹದ್ದಲ್ಲ. ಇದನ್ನೆಲ್ಲಾ ಮನುಷ್ಯನು ವೇದದ ಆದೇಶಕ್ಕೆ ವಿರುದ್ಧವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಇದು ತಪ್ಪು.
ಇವತ್ತಿನ ನಮ್ಮ ಕಲ್ಪನೆ ಹೇಗಿದೆ, ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ.ಇದು ಇವತ್ತಿನ ವ್ಯವಸ್ಥೆಯಲ್ಲ, ಅನೇಕ ಶತಮಾನಗಳಿಂದ ಶೂದ್ರರನ್ನು ಕೀಳಾಗಿ ಕಾಣುತ್ತಾ ಬರಲಾಗಿರುವ ಧ್ಯೋತಕ..ಮೇಲ್ಜಾತಿ ಎಂಬುವರಿಂದ ಕೀಳ್ಜಾತಿ ಎಂಬುವರ ಮೇಲೆ ದೌರ್ಜನ್ಯಗಳು ನಡೆದಿರುವ ಹಲವು ಉಧಾಹರಣೆಗಳು ಚರಿತ್ರೆಯಲ್ಲಿದೆ.ಇವತ್ತಿಗೂ ಕೆಳಜಾತಿಯವರು ಮೇಲ್ಜಾತಿಯವರ ಸೇವೆ ಮಾಡುವುದಕ್ಕಾಗಿಯೇ ಇರುವುದು ಎಂಬ ಭಾವನೆ ಹಲವರಲ್ಲಿದ್ದು ಸಮಾಜದಲ್ಲಿನ ಸಾಮರಸ್ಯ ಕೆಡಲು ಮುಖ್ಯ ಕಾರಣವಾಗಿದೆ.ಈ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆಯೇ ಹೊರತು ನೆಮ್ಮದಿಗೆ ಕಾರಣವಾಗಿಲ್ಲ.ಆದ್ದರಿಂದಲೇ ಇದು ಭಗವಂತನು ಮಾಡಿರುವ ವ್ಯವಸ್ಥೆಯಲ್ಲ. ಭಗವಂತನು ಸಮಾಜದಲ್ಲಿ ನೆಮ್ಮದಿ ಹಾಳುಮಾಡುವ ವ್ಯವಸ್ಥೆ ಮಾಡಿರಲು ಸಾಧ್ಯವೇ ಇಲ್ಲ.ಭಗವಂತನ ಮಕ್ಕಳಾದ ನಾವೆಲ್ಲರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕ ಬೇಕೆಂಬುದೇ ಭಗವಂತನ ಇಚ್ಛೆ.ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಾಗ ಈಗ ಸಮಾಜದ ನೆಮ್ಮದಿ ಹಾಳುಮಾಡಲು ಯಾವಯಾವ ವ್ಯವಸ್ಥೆಗಳಿವೆ, ಅವೆಲ್ಲಾ ಭಗವಂತನು ಮಾಡಿದ್ದಲ್ಲ, ಅದನ್ನು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಜ್ಞಾನಿಗಳು ಮಾಡಿದ್ದು, ಎಂದು ನಾವು ತಿಳಿದುಕೊಳ್ಳಬಹುದು , ಅಷ್ಟೇ ಅಲ್ಲ, ಸಮಾಜದ ನೆಮ್ಮದಿಯನ್ನು ಹಾಳುಮಾಡುವಂತಹ ವ್ಯವಸ್ಥೆಯನ್ನು ಪಾಲಿಸ ಬೇಕಾಗಿಲ್ಲ.
ವೇದವು ನಿಜವಾಗಿ ಏನು ಹೇಳುತ್ತದೆಂಬುದನ್ನು ಈಗ ನೋಡೋಣ.ಶೂದ್ರರನ್ನು ಕೀಳು ಅಥವಾ ಬ್ರಾಹ್ಮಣರನ್ನು ಮೇಲು ಎಂದು ಕರೆಯಲು ಹಾಗೆ ಭಾವಿಸಿರುವವರು ಕೊಡುವ ಕಾರಣವೇನೆಂದರೆ, ವೇದದಲ್ಲಿ ಬರುವ ಒಂದು ಮಂತ್ರ.ಪುರುಷಸೂಕ್ತದ ಈ ಮಂತ್ರವನ್ನು ತಪ್ಪಾಗಿ ಅರ್ಥೈಸಿರುವುದೇ ಇವೆಲ್ಲಾ ಆಭಾಸಗಳಿಗೆ ಮೂಲ ಕಾರಣ. ಅದನ್ನೀಗ ನೋಡೋಣ.
||ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತ: | ಊರೂತದಸ್ಯ ಯದ್ವೈಶ್ಯೋ|ಪದ್ಭ್ಯಾಮ್ ಶೂದ್ರೋ ಅಜಾಯತ|| ಈ ಮಂತ್ರವು ನಾಲ್ಕೂ ವೇದಗಳಲ್ಲಿ ಬರುತ್ತದೆ. ಬ್ರಾಹ್ಮಣರು ಭಗವಂತನ ಮುಖದಿಂದ, ಬಾಹುಗಳಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಕಾಲುಳಿಂದ ಶೂದ್ರರೂ ಹುಟ್ಟಿದರು, ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿಂದ ಸಮಾಜದ ನೆಮ್ಮದಿ ಕೆಡಿಸುವ ಕ್ರಿಯೆ ಶುರುವಾಗಿದೆ.ಮುಖದಿಂದ ಹುಟ್ಟಿದ ಬ್ರಾಹ್ಮಣ ಮೇಲು, ಕಾಲುಗಳಿಂದ ಹುಟ್ಟಿದ ಶೂದ್ರ ಕೀಳೆಂಬ ಭಾವನೆಯನ್ನು ಗಟ್ಟಿಯಾಗಿ ಬಿತ್ತಲಾಗಿದೆ.ದುರ್ದೈವವೆಂದರೆ ಹಲವಾರು ಸಂಸ್ಕೃತ ಪಂಡಿತರೆನೆಸಿಕೊಳ್ಳುವರೂ ಸಹ ಈ ಮಂತ್ರಗಳಿಗೆ ಇದೇ ಅರ್ಥವನ್ನು ಹೇಳುತ್ತಾ ಸಮಾಜದ ನೆಮ್ಮದಿ ಹಾಳುಮಾಡುವ ಕೆಲಸವನ್ನು ಮಾಡಿದ್ದಾರೆ.ಇದು ಒಂದು ದೊಡ್ಡ ಗೊಂದಲ. ಈ ಗೊಂದಲವನ್ನು ಮೊದಲು ಬಿಡಿಸಿಕೊಳ್ಳುವ ಪ್ರಯತ್ನ ಮಾಡೋಣ.ಬ್ರಾಹ್ಮಣೋಸ್ಯ ಮುಖಮಾಸೀತ್, ಎಂಬ ಈ ಮಂತ್ರಕ್ಕೆ ಅರ್ಥವನ್ನು ಹುಡುಕುವ ಮೊದಲು ಅದರ ಹಿಂದಿನ ಮಂತ್ರವನ್ನು ನೋಡಬೇಕು. ಹಿಂದಿನ ಮಂತ್ರವು ಏನು ಹೇಳುತ್ತದೆಂದರೆ ಈ ಸಮಾಜ ಪುರುಷನ ಮುಖ ಯಾವುದು? ಬಾಹುಗಳು ಯಾವುವು?ತೊಡೆ ಹಾಗೂ ಕಾಲುಗಳು ಯಾವುವು? ಪ್ರಶ್ನೆ ಹೀಗಿರುವಾಗ ಉತ್ತರ ಹೇಗಿರ ಬೇಕು? ಮುಖ ಯಾವುದೆಂದರೆ ಮುಖ ಇದು ಎಂದು ಹೇಳಬೇಕಲ್ಲವೇ? ಅಂದರೆ ಬ್ರಾಹ್ಮಣನು ಸಮಾಜ ಪುರುಷನ ಮುಖ, ಕ್ಷತ್ರಿಯರು ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರರು ಪಾದಗಳು, ಎಂದು ತಾನೇ ಉತ್ತರಿಸ ಬೇಕಾದ್ದು.ಆದರೆ ಹೀಗೆ ಅರ್ಥ ಮಾಡಿದರೆ ಕೇಳಿದ ಪ್ರಶ್ನೆಯೇ ಒಂದು ಉತ್ತರವೇ ಬೇರೆ ಆಗುತ್ತದಲ್ಲವೇ?..........[ಮುಂದುವರೆದ ಮಾತುಗಳನ್ನು ಇದೇ ಅಕ್ಟೋಬರ್ ೧ ಶುಕ್ರವಾರ ನಿರೀಕ್ಷಿಸಿ]


-------------------------------------------------------------------------------------------------
ಹಾಸನದ ಮಲೆನಾಡು ಇಂಜಿನೀರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಸ್.ಆರ್.ಜಯರಾಮ್ ಇವರು ತಮ್ಮ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದ್ದಾರೆ.
Sri.Sridhar,
Normally I do not Check mail. By chance I did it today.
I think we have already come long way from the old definition of Brahmin. But what are we today!
Jayaram.


Dr.S.R.Jayaram
Professor in Mechanical Engineering
Malnad College of Engineering
HASSAN 573 201
Phone 08172-245307(O)
08172-265456(R)
Cell No. 94481 66877

-------------------------------------------------------------------------------------------------
ಎಷ್ಟೇ ದೂರ ಸಾಗಿದ್ದರೂ ಸತ್ಯದ ಅರಿವಾದಾಗ ಒಪ್ಪಬೇಕಾಗುತ್ತದೆ.ಇಲ್ಲಿ ನನ್ನದೊಂದು ಪ್ರಶ್ನೆ ಇದೆ. ಸುಧಾಕರ ಶರ್ಮರುಹೇಳುತ್ತಿರುವುದು ವೇದದ ಪರವಾಗಿದೆಯೋ ಅಥವಾ ವಿರುದ್ಧವೋ? ಎಂಬುದು. ಹೇಗೂ ವೇದಸುಧೆಗೆ ನಿಮ್ಮ ಪ್ರವೇಶವಾಗಿದೆ.ಇಲ್ಲಿಪ್ರಕಟವಾಗುತ್ತಿರುವುದು ತಪ್ಪೆಂದು ಕಂಡರೆ ತಪ್ಪೆಂದು ಹೇಳಿ.ಇವತ್ತು ನಾವೇನಾಗಿದ್ದೆವೆನ್ನುವ ಪ್ರಶ್ನೆ ಅವರವರ ಅಂತರಂಗಕ್ಕೆಕೇಳಿಕೊಳ್ಳಬಾಕಾದುದಲ್ಲವೇ?
ನಿಮ್ಮ ವನೇ ಆದ
-ಶ್ರೀಧರ್
-------------------------------------------------------------------------------------------------

Monday, September 27, 2010

ವಿಶ್ವ ಗುರು ಭಾರತ

ಭಾರತಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿರುವ ನಮಗೆ ನಮ್ಮ ಋಷಿಮುನಿಗಳ ನೂರಾರು ವರ್ಷದ ತಪಸ್ಸಿನ ಫಲವಾಗಿ ಒಂದುಜೀವನಕ್ರಮವು ಲಭ್ಯವಾಗಿದೆ. ನಾವೆಷ್ಟು ಪುಣ್ಯಶಾಲಿಗಳೆಂದರೆ ಈ ನಮ್ಮ ಭಾರತ ದೇಶದ ನೆಲದಲ್ಲಿ ಸಹಸ್ರಾರು ವರ್ಷಗಳಿಂದಸಾವಿರಾರು ಸಾದುಸಂತರು ಜನ್ಮವೆತ್ತಿ, ಸಾಧನೆಗೈದು ರೂಪಿಸಿರುವ ಜೀವನ ಕ್ರಮವು ಸರಳ ವಾಗಿರುವುದಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ, ಸಾರ್ವಕಾಲಿಕ ಅನುಸರಣೀಯವೂ ಆಗಿದೆ.ಹಾಗಾದರೆ ನಮ್ಮ ಜೀವನ ಕ್ರಮದ ವಿಶೇಷತೆ ಏನು?

"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀತಾ: ಮಾಗೃಧ: ತಸ್ಯ ಸ್ವಿದ್ ಧನಮ್||

ಈ ಜಗತ್ತೆಲ್ಲಾ ಈಶ್ವರ ಮಯ. ಅವನಿಂದಲೇ ಎಲ್ಲವೂ. ಅವನಿಂದ ಅಂದರೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಅರ್ಪಿಸಿಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸು. ಯಾರ ಧನಕ್ಕೂ ಆಸೆ ಪಡಬೇಡ.

ಇದು ನಮ್ಮ ದೃಷ್ಟಿಕೋನ. ಅಂದರೆ ನನ್ನದು ಎಂಬುದು ಏನೂ ಇಲ್ಲ. ಎಲ್ಲವೂ ಭಗವಂತನ ಕೃಪೆಯಿಂದ ಪ್ರಕೃತಿಯು ನಮಗೆಕೊಟ್ಟಿದೆ. ಆದ್ದರಿಂದ ಅವನಿಂದ ಪಡೆದದ್ದನ್ನು ಅವನಿಗೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸುವಾಗ ಅದರಲ್ಲಿ ಸಿಗುವಆನಂದವು ಅಪಾರ. ಅಷ್ಟೇ ಅಲ್ಲ. ಇನ್ನೂ ಒಂದು ಮಾತಿದೆ...

ಯಾವತ್ ಭ್ರಿಯೇತ ಜಠರಮ್ ತಾವತ್ ಸ್ವತ್ವಮ್ ದೇಹಿನಾಮ್|
ಅಧಿಕಮ್ ಯೋಭಿ ಮನ್ಯೇತ ಸ ಸ್ತೇನೋ ದಂಡ ಮರ್ಹತಿ||

ದೇಹ ಧಾರಣೆಗೆ ಎಷ್ಟು ಅಗತ್ಯವೋ ಅಷ್ಟನ್ನು ತೆಗೆದುಕೋ, ಇದಕ್ಕಿಂತ ಹೆಚ್ಚಿನ ಆಸೆ ಪಡುವವನು ಕಳ್ಳ. ಅವನು ಶಿಕ್ಷಾರ್ಹ.

ಇದು ನಮ್ಮ ಹೆಚ್ಚುಗಾರಿಕೆ. ನಮ್ಮದು ತ್ಯಾಗದ ಸಂಸ್ಕೃತಿ.ತ್ಯಾಗಮಯ ಜೀವನದಲ್ಲೇ ಆನಂದ ಪಡುವ ಸಂಸ್ಕೃತಿ ನಮ್ಮದು. ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಂಪತ್ತು ಇದೆ , ಎಂದು ಅದನ್ನು ಲೂಟಿಮಾಡುವಂತಿಲ್ಲ. ತನ್ನ ದೇಹಧಾರಣೆಗೆ ಅಗತ್ಯವಿರುವಷ್ಟುಮಾತ್ರ ಪಡೆದುಕೋ, ಅದಕ್ಕಿಂತ ಹೆಚ್ಚಿನ ಆಸೆಪಟ್ಟರೆ ಅದು ಶಿಕ್ಷಾರ್ಹ ಅಪರಾಧ.ಎಂತಹಾ ಅದ್ಭುತ ಚಿಂತನೆ ನಮ್ಮದು!! ಹೀಗೆಸರಳವಾಗಿ ಬದುಕುವಾಗ ಇತರರ ಬಗ್ಗೆ ನಮ್ಮ ಧೋರಣೆ ಏನು? ಅದಕ್ಕಾಗಿಯೇ ನಿತ್ಯವೂ ಸಂಕಲ್ಪ ಮಾಡುವಾಗ ನಾವುಹೇಳುತ್ತೇವೆ.....

ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಎಲ್ಲರೂ /ಎಲ್ಲವೂ ಸುಖವಾಗಿರಲಿ. ಎಲ್ಲರೂ ನೆಮ್ಮದಿಯಿಂದಿರಲಿ. ಎಲ್ಲವೂ ಸಮೃದ್ಧವಾಗಿರಲಿ. ಯಾರೂ ದು:ಖಿತರಾಗುವುದು ಬೇಡ.

ನಾವು ಸಂಕಲ್ಪ ಮಾಡುವಾಗ ಕೇವಲ ನನ್ನ ಕುಟುಂಬ, ನನ್ನ ಬಂಧುಬಳಗ, ನನ್ನ ಜಾತಿ, ನನ್ನ ಮತ, ನನ್ನ ಊರಿಗೆ ಒಳ್ಳೆಯದಾಗಲೀಎಂದು ಪ್ರಾರ್ಥಿಸಲಿಲ್ಲ. ಬದಲಿಗೆ " ಸರ್ವೇಪಿ" ಅಂದರೆ

"ಶನ್ನೋ ಅಸ್ತು ದ್ವಿಪದೇ ಶಂ ಚತುಷ್ಪದೇ" ಎಂದೂ ಹೇಳಿದೆವು. ಎರಡು ಕಾಲಿನ ಮನುಷ್ಯರಿಗಷ್ಟೇ ಅಲ್ಲ, ನಾಲ್ಕು ಕಾಲಿನ ಪ್ರಾಣಿಸಂಕುಲಕ್ಕೂ, ಪಶು-ಪಕ್ಷಿಗಳಿಗೂ, ಕ್ರಿಮಿಕೀಟ ಗಳಿಗೂ ,ಸಸ್ಯ ಸಂಕುಲಕ್ಕೂ ಒಳ್ಳೆಯದಾಗಲೆಂದು ನಿತ್ಯ ಪ್ರಾರ್ಥಿಸುವ ನಾವು ಅದಕ್ಕೆಅನುಗುಣವಾಗಿ ಪ್ರಕೃತಿಯ ದುರುಪಯೋಗ ವಾಗದಂತೆ ಜೀವನ ನಡೆಸುತ್ತಿದ್ದೆವು.

ವಸುಧೈವ ಕುಟುಂಬಕಮ್- ಅಂದರೆ ಇಡೀ ವಿಶ್ವವೇ ಒಂದು ಕುಟುಂಬವೆನ್ನುವ ನಾವು ಉಳಿದ ದೇಶಗಳಿಗೆ ಆದರ್ಶವಾಗಿ ಜೀವನನಡೆಸುತ್ತ ಭಾರತವು "ವಿಶ್ವಗುರು" ಎಂಬ ಮಾನ್ಯತೆಗೆ ಕಾರಣರಾಗಿದ್ದೆವು. ವಿಶ್ವ ಮಂಗಲದ ಚಿಂತನೆ ನಡೆಸುವಾಗ ಈ ನಮ್ಮಚಿಂತನೆಗಳು ನಮಗೆ ದಾರಿ ದೀಪವಾಗಬೇಕು.

ಆದರೆ ಕಾಲ ಕಳೆದಂತೆ ಪಶ್ಚಿಮದತ್ತ ವಾಲುತ್ತಾ ಬಂದೆವು.ನಮ್ಮ ಚಿಂತನೆಗೆ ವಿರುದ್ಧವಾಗಿ ಬದುಕುತ್ತಾ ಬಂದೆವು.ಭೋಗ ಜೀವನದದಾಸರಾದೆವು. " ಆತ್ಮವತ್ ಸರ್ವ ಭೂತೇಶು" ಎಂಬ ಮಾತನ್ನು ಮರೆತು ದುರ್ಬಲರನ್ನು ಶೋಷಣೆ ಮಾಡಿದೆವು. ಬೇಕು-ಬೇಕೆಂಬದುರಾಸೆಯಿಂದ ಪ್ರಕೃತಿಯಮೇಲೆ ದೌರ್ಜನ್ಯ ನಡೆಸಿದೆವು.ನಮ್ಮ ಭೋಗದ ಜೀವನಕ್ಕೆ ಸಿಲುಕಿ ಕಾಡುಗಳು ನಾಷವಾಯ್ತು. ನಮ್ಮಪೂರ್ವಜರು ಕಟ್ಟಿದ ಕೆರೆಕಟ್ಟೆಗಳನ್ನು ಒಡೆದು ಕಟ್ಟಡ ನಿಮಿಸಿದೆವು. ಪ್ರಕೃತಿ ಮುನಿದು ಮಳೆ ಬೆಳೆ ಇಲ್ಲ ದಂತಾಯ್ತು. ಆಗಲೂ ನಾವುಎಚ್ಚೆತ್ತುಕೊಳ್ಳದೆ ಭೂಮಿಯನ್ನೇ ಸೀಳಿ ನೀರು ತಂದೆವು.ಹತ್ತಾರು ವರ್ಷಗಳು ಭೂತಾಯಿಯ ಅಂತರ್ಜಲ ಬಸಿದು ಬರಿದಾದಯ್ತು. ಭೂಕಂಪಗಳಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾದೆವು. ಆದರೂ ನಾವು ಬದಲಗಲಿಲ್ಲ.

ಅಮೃತದಂತಹ ಹಾಲನ್ನು ಕರೆಯುತ್ತಿದ್ದ ನಾಡತಳಿ ಹಸುಗಳ ಸಂಖ್ಯೆ ನಮ್ಮ ದುರಾಸೆಗೆ ಬಲಿಯಾಯ್ತು. ಗೋಮಾತೆಯೆಂಬಶ್ರದ್ಧೆಯಿಂದ ಪೂಜಿಸುತ್ತಿದ್ದ ನಾವೇ ಗೋವುಗಳನ್ನು ಕಟುಕರ ಪಾಲು ಮಾಡಿದೆವು. ಅಧಿಕ ಹಾಲಿನ ಇಳುವರಿಗಾಗಿ ನಾಡಹಸುಗಳನ್ನುವಿದೇಶಿ ತಳಿಗಳೊಡನೆ ಸಂಕರ ಗೊಳಿಸಿದೆವು.ಪರಿಣಾಮವಾಗಿ ಹಾಲಿನ ಬಣ್ಣದ ದ್ರವವನ್ನೇ ಹಾಲೆಂದು ಕರೆದು ನಮ್ಮ ಮಕ್ಕಳನ್ನುನಿಜವಾದ ಹಾಲಿನಿಂದ ವಂಚಿಸಿದೆವು.

ರೈತನೊಬ್ಬ ನಾಡಹಸುವಿನಿಂದ ಹಾಲು, ಮೊಸರು , ಬೆಣ್ಣೆ, ತುಪ್ಪ ಸವಿಯುವುದರಜೊತೆಗೆ ಎತ್ತುಗಳಿಂದ ಭೂಮಿ ಉತ್ತು, ಸರಕುಸಾಗಿಸಲು ಗಾಡಿಗೆ ಕಟ್ಟಿ,ಅವುಗಳ ಸಗಣಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಿ, ಅವುಗಳ ಗಂಜಲವನ್ನೇ ಔಷಧಿಯಾಗಿ ಬಳಸುತ್ತಾಆನಂದವಾಗಿ ಬದುಕು ಸಾಗಿಸುತ್ತಿದ್ದ. ಅವರಲ್ಲಿದ್ದ ಗೋವಿನ ಸಂಖ್ಯೆಯೇ ನಮ್ಮ ಪೂರ್ವಿಕರ ಸಂಪತ್ತಿಗೆ ಮಾನದಂಡವಾಗಿತ್ತು. ನಮ್ಮರೈತರು ಉಪಯೀಗಿಸುತ್ತಿದ್ದ ಗೋವಿನ ಸತ್ವಪೂರ್ಣ ಸಗಣಿ ಗೊಬ್ಬರದ ಪರಿಣಾಮವಾಗಿ ಆಹಾರಧಾನ್ಯಗಳುಸತ್ವಪೂರ್ಣವಾಗಿರುತ್ತಿತ್ತು.

ಆದರೆ ಗೋಸಂಪತ್ತು ನಶಿಸುತ್ತಾ ಬಂದಂತೆ ರೈತನು ಕೃಷಿಗಾಗಿ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾಬಂದ. ಪರಿಣಾಮವಾಗಿ ಮಣ್ಣು ವಿಷಯುಕ್ತ ವಾಯ್ತು. ಬೆಳೆಯ ಕೀಟಗಳನ್ನು ನಾಶಪಡಿಸಲು ಕೀಟನಾಷಕಗಳನ್ನು ಸಿಂಪಡಿಸಲುಪ್ರಾರಂಭಿಸಿದ.ಅದರ ಪರಿಣಾಮವಾಗಿ ಆಹಾರಧಾನ್ಯಗಳೂ ವಿಷಯುಕ್ತವಾಯ್ತು.

ಈಗ ನಾವೆಲ್ಲಾ ಅದರ ಫಲವನ್ನು ನಿತ್ಯವೂ ಅನುಭವಿಸುತ್ತಿದ್ದೇವೆ. ವಿಷಮುಕ್ತ ಆಹಾರ ಧಾನ್ಯಗಳು ದುರ್ಲಭವಾಗಿದೆ. ಇದೇಆಹಾರವನ್ನು ಸೇವಿಸುತ್ತಾ ಹಿಂದೆಂದೂ ಕಾಣದಂತಹ ರೋಗಗಳು ಕಾಡುತ್ತಿವೆ. ಸಕ್ಕರೆ ಖಾಯಿಲೆ, ರಕ್ತದೊತ್ತಡ,ಕ್ಯಾನ್ಸರ್,ಕಿಡ್ನಿವೈಫಲ್ಯ ಮುಂತಾದ ರೋಗಗಳು ನಿತ್ಯದ ಮಾತಾಗಿದೆ. ಇವೆಲ್ಲಾ ಒಂದು ಮುಖವಾದರೆ ಮತ್ತೊಂದು ಇನ್ನೂ ಭಯಾನಕ ಮುಖವುನಿತ್ಯವೂ ನಮ್ಮ ನಿದ್ರೆಗೆಡಿಸುತ್ತಿದೆ.

ಕುಟುಂಬ ಒಂದರಲ್ಲಿ ಕಾಣುತ್ತಿದ್ದ ಪ್ರೀತಿ, ವಾತ್ಸಲ್ಯ,ವಿಶ್ವಾಸ, ಮಮಕಾರ,ಹಿರಿಯರ ಬಗ್ಗೆ ಗೌರವ-ಇಂತಹ ಸದ್ಗುಣಗಳುಮರೆಯಾಗುತ್ತಿವೆ.ಕೌಟುಂಬಿಕ ಸಾಮರಸ್ಯ ಏರು ಪೇರಾಗುತ್ತಿರುವ ಉಧಾಹರಣೆಗಳನ್ನು ನೋಡುತ್ತಿದ್ದೇವೆ.ನಮ್ಮ ಆಹಾರಪದ್ದತಿ,ಉಡುಪು, ನಮ್ಮ ಜೀವನ ಶೈಲಿ ಎಲ್ಲವೂ ಬದಲಾಗುತ್ತಿದೆ. ಪರಿಣಾಮವಾಗಿ ಸಂಸಾರದ ನೆಮ್ಮದಿ ಹಾಳಾಗುತ್ತಿದೆ. ಲಜ್ಜಾರಹಿತ ಜೀವನಕ್ಕೆ ಒಗ್ಗಿಕೊಳ್ಳುವ ಪರಿಸ್ಥಿತಿ ಎದಿರಾಗುತ್ತಿದೆ. ಹಡೆದ ಮಕ್ಕಳು ತಂದೆ ತಾಯಿಯರ ಲಾಲನೆ ಪೋಷಣೆ ಕಾಣದೆಅನಾಥರಾಗಿ ದಾದಿಯರೊಡನೆ ಬೆಳೆಯುತ್ತಿರುವ ಉಧಾಹರಣೆಗಳು ಹೆಚ್ಚುತ್ತಿವೆ, ಅದೇ ಸಮಯದಲ್ಲಿ ನೋಡುವವರಿಲ್ಲದೆ ವೃದ್ಧತಂದೆತಾಯಿಯರು ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿ ಬಂದೊದಗಿದೆ.

ಕೇವಲ ಮೂರು ನಾಲ್ಕು ದಶಕಗಳ ಹಿಂದೆ ನಮ್ಮ ಕುಟುಂಬಗಳು ಹೇಗಿದ್ದವು! ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮಹೃದಯ ಒಡೆದು ಹೋಗದಿರದು. ಅಪ್ಪ-ಅಮ್ಮನ ಜೊತೆಗೆ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ದಪ್ಪ-ದೊಡ್ದಮ್ಮ ,ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು. ಇಂತಹಾ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು-ಮೂವತ್ತು ಜನರು ಒಂದೇ ಮನೆಯಲ್ಲಿ ಇರುತ್ತಿದ್ದರು. ಕುಟುಂಬಕ್ಕೆ ಭದ್ರತೆ ಇತ್ತು. ಹಿರಿಯರಾಗಿದ್ದವರು ಮನೆಯ ಯಾವುದೇ ಮಗುವಿನ ಲಾಲನೆ ಪೋಷಣೆ ಮಾಡುತ್ತಿದ್ದರು.ಎಲ್ಲರೂಮನೆಗೆಲಸವನ್ನು ಹಂಚಿಕೊಂಡು ಮಾಡುತ್ತಿದ್ದುದರಿಂದ ಎಲ್ಲವೂ ಸುಗಮವಾಗಿ ಸಂಸಾರ ನಡೆಯುತ್ತಿತ್ತು. ಮನೆಯಲ್ಲಿ ಬರುತ್ತಿದ್ದ ಓರೆಕೋರೆ ಮಾತುಗಳನ್ನು ಕೇಳಿದ ಮನೆಯ ಯಜಮಾನ ತಪ್ಪಿತಸ್ತರಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದ. ಹಬ್ಬ-ಹರಿದಿನಗಳೆಂದರೆ ಅಂದುಮನೆಯು ಸ್ವರ್ಗಸದೃಶವಾಗಿರುತ್ತಿತ್ತು. ಬದುಕಿನಲ್ಲಿ ಸದಾ ಉತ್ಸಾಹವಿರುತ್ತಿತ್ತು. ಒಂದು ಮನೆಯಲ್ಲಿ ಹತ್ತಾರು ದನಕರುಗಳಿರುತ್ತಿದ್ದು, ಹಾಲು ಮೊಸರು, ಬೆಣ್ಣೆ-ತುಪ್ಪ ಸಂಮೃದ್ಧ ವಾಗಿರುತ್ತಿತ್ತು. ಬಡತನ ವಿದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲ.

ಈಗ ಎಲ್ಲವೂ ಬದಲಾಗಿದೆ. ಆದರ್ಶ ಕುಟುಂಬದ ಹೆಸರಿನಲ್ಲಿ ಪತಿ-ಪತ್ನಿ ಮತ್ತು ಒಂದು ಮಗುವಿರುವ ಮನೆಗಳು ಹೆಚ್ಚುತ್ತಿವೆ. ಆಹಾರ-ವಿಹಾರಕ್ಕೆ ತೊಂದರೆ ಇಲ್ಲದಿದ್ದರೂ ಬದುಕಿಗೆ ಭದ್ರತೆ ಇಲ್ಲವಾಗಿದೆ.ತಂದೆ ತಾಯಿ ಇಬ್ಬರೂ ನೌಕರಿಗೆ ಹೋದರಂತೂ ಮಗುಅನಾಥ ವಾದಂತೆಯೇ. ಕೈತುಂಬ ಹಣವಿದ್ದರೂ ಬಹುಪಾಲು ಜನರಿಗೆ ನೆಮ್ಮದಿ ಇಲ್ಲ, ಆರೋಗ್ಯವಿಲ್ಲ. ಹೌದು, ಇವೆಲ್ಲಾ ನಾವೇಸ್ವತ: ಮಡಿಕೊಮ್ಡಿರುವ ತಪ್ಪು. ತಪ್ಪುಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಮ್ದು ಬಿಟ್ಟಿದ್ದೇವೆ.

ಎಲ್ಲಕ್ಕೂ ಒಂದೇ ಪರಿಹಾರ: ಮತ್ತೊಮ್ಮೆ ನಮ್ಮ ಪೂರ್ವಜರ ಜೀವನಕ್ರಮವನ್ನು ನೆನಪು ಮಾಡಿಕೊಳ್ಳುವುದು ಮತ್ತು ಅದರಂತೆಬದುಕುವುದು. ನಮ್ಮ ಗ್ರಾಮ ಜೀವನವನ್ನು ಪುನರುತ್ಥಾನಗೊಳಿಸುವುದು. ನಮ್ಮ ನೆಲದ ವಿಷವನ್ನು ತೊಳೆಯಬೇಕಿದೆ. ಹೇಗೆತೊಳೆಯಬೇಕು? ನಾಲ್ಕೈದು ದಶಕಗಳಿಂದ ನಾವು ಪ್ರಕೃತಿಗೆ ಮಾಡಿರುವ ಅತ್ಯಾಚಾರದಿಂದ ಪ್ರಕೃತಿಯು ಮತ್ತೊಮ್ಮೆಹಸನ್ಮುಖಿಯಾಗಬೇಕಾದರೆ ದೀರ್ಘ ಕಾಲದ ಚಿಕಿತ್ಸೆಯೇ ಅನಿವಾರ್ಯ. ಕೆಲವು ವರ್ಷಗಳಾದರೂ ನಾವು ಸರಳ ಜೀವನ ಕ್ರಮವನ್ನುಅನುಸರಿಸಲೇ ಬೇಕು. ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು.ಆಗ ನಿಧಾನವಾಗಿಯಾದರೂ ಪರಿಹಾರ ಸಿಕ್ಕೀತು. ನಮ್ಮಸಾಂಸ್ಕೃತಿಕ ಬದುಕನ್ನು ನೆನಪು ಮಾಡಿಕೊಂಡು ಅದರಂತೆ ಬದುಕಲು ಸಂಕಲ್ಪ ತೊಡಬೇಕು. ಇಷ್ಟಾದರೂ ನಮ್ಮ ಸಂಸ್ಕೃತಿಯನ್ನುಮೆಚ್ಚಿ ನಮ್ಮ ಕಡೆ ಮುಖಮಾಡಿರುವ ವಿದೇಶೀಯರಿಗೆ ನಮ್ಮ ಮೆಲೆ ಭರವಸೆ ಹೆಚ್ಚಬೇಕು, ಆಗ ಮಾತ್ರ ನಾವು ವಿಶ್ವ ಮಂಗಲದಕನಸು ಕಾಣಬಹುದು.

Sunday, September 26, 2010

ನಿಮ್ಮ ಸಲಹೆ ನಮಗೆ ಬೇಕು.


ಸ್ನೇಹಿತರೇ,
ಬ್ಲಾಗ್ ಓದುವವರಿಗೆ ಸುಲಭವಾಗಿ ಮಾಹಿತಿ ದೊರೆಯುವಂತಿರಬೇಕೆಂಬ ಉದ್ಧೇಶದಿಂದ ಬ್ಲಾಗ್ ಸುಧಾರಿಸುವ ಪ್ರಯತ್ನದಲ್ಲಿ ಬ್ಲಾಗ್ರೂಪ ಸ್ವಲ್ಪ ಬದಲಾಗಿದೆ ,ಸಾಧ್ಯವಾದಷ್ಟೂ ವೇದದ ಬಗೆಗೆ ಹೆಚ್ಚು ಮಾಹಿತಿ ಕೊಡುವ ಪ್ರಯತ್ನವು ಮುಂದುವರೆಯುವುದು. ವೇದಸುಧೆಯ ಅಭಿಮಾನಿಗಳು ವೇದಸುಧೆಯನ್ನು ಓದುತ್ತಿರುವುದು ವೇದಸುಧೆಯನ್ನು ಭೇಟಿಮಾಡುವವರ ಸಂಖ್ಯೆಯಿಂದ ಸ್ವಲ್ಪಮಟ್ಟಿಗೆ ತಿಳಿಯುತ್ತಿದೆಯಾದರೂ ವೇದಸುಧೆಗೆ ಸಲಹೆಗಳು ಬರುತ್ತಿಲ್ಲ. ಆದ್ದರಿಂದ ನಮಗೆ ಲಭ್ಯವಿರುವ ಮಾಹಿತಿಗಳನ್ನು ವೇದಸುಧೆಯಅಭಿಮಾನಿಗಳಿಗೆ ನೀಡುತ್ತಾ ಮುಂದುವರೆಯುತ್ತೇವಾದರೂ ನಿಮ್ಮ ಸಲಹೆ ನಮಗೆ ಬೇಕು.

-ಹರಿಹರಪುರ ಶ್ರೀಧರ್