ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, November 15, 2010

ಇದು ತಪ್ಪು, ಇದು ಸರಿ, ಎಂದು ಹೇಳಲು ನಾವ್ಯಾರು?

ಮನವಿ: ಈ ಲೇಖನಕ್ಕೆ ಶ್ರೀ ಕವಿನಾಗರಾಜರು ,ಶ್ರೀ ಮಹೇಶ್ ಹಾಗೂ ಶ್ರೀ ವಿಶಾಲ್ ರವರು ಚರ್ಚೆ ಆರಂಭಿಸಿದ್ದಾರೆ. ಇಂತಹ ವಿಚಾರಗಳು ಚರ್ಚೆಗೊಳಗಾಗಬೇಕು.  ಅಂತೂ ಚಿಂತನ-ಮಂಥನದ ಅಂತ್ಯದಲ್ಲಿ ಬೆಣ್ಣೆಯು ಹೊರಬರಬೇಕು. ಆದರೆ ಸಾಮಾನ್ಯವಾಗಿ ಕೊನೆಯಲ್ಲಿ ಚರ್ಚೆಯು ಯಾವುದೋ ವೈಯಕ್ತಿಕ ವಿಚಾರಕ್ಕೆ  ಬಂದು ನಿಂತು ಬಿಡುತ್ತದೆ. ವಿಚಾರವಂತರೆಲ್ಲರೂ ಪಾಲ್ಗೊಂಡರೆ ಒಂದು ಹೊಸಹೊಳಹು ಮೂಡಬಹುದು. ಶ್ರೀ ರಾಘವೇಂದ್ರರ ಪ್ರತಿಕ್ರಿಯೆಗೆ ನಾನೊಂದು ಪ್ರತಿಕ್ರಿಯೆ ಬರೆದು ಪೋಸ್ಟ್ ಮಾಡಿದೆ.ಅದು ಉದ್ದವಾಯ್ತು. ಪ್ರಕಟವಾಗಲಿಲ್ಲ. ಪ್ರತಿಕ್ರಿಯೆಗಳು ಉದ್ದವಾದರೆ  ದಯಮಾಡಿ  ವೇದಸುಧೆಗೆ ಮೇಲ್ ಮಾಡಿ. ಮುಖ್ಯ ಲೇಖನದ ಜೊತೆಗೇ ಪ್ರಕಟಿಸಲಾಗುದು               
                      

ರಾಜಕಾರಣಿಗಳೇನೋ ಪವರ್ ಗಾಗಿ ಸಿದ್ಧಾಂತದ ಹೆಸರು ಹೇಳಿಕೊಂಡು ಅವರಿವರನ್ನು ಬೈಕೊಂಡು ಕಾಲ ಹಾಕ್ತಾರೆ."ಎಲ್ಲಾರು ಮಾಡುವುದು ಖುರ್ಚಿಗಾಗಿ, ಮಂತ್ರಿಗಾದಿಗಾಗಿ"- ರಾಜಕಾರಣಿಗಳ ಬಗ್ಗೆ ಎಲ್ಲಾರಿಗೂ ಗೊತ್ತು ಬಿಡಿ, ಆದರೆ ಧರ್ಮ-ಸಂಸ್ಕೃತಿ-ಸಮಾಜ ಅಂತಾ ಮಾತಾಡೋರೂ ಕೂಡ ಅದೆಷ್ಟು ರಂಪಾ ಮಾಡ್ತಾರೆ!   ಸಾಮಾನ್ಯ ಜನರಿಗೆ ಬೇಕಾಗಿರೋದೇನು?  ಹೊಟ್ಟೆಗೆ ಒಂದಿಷ್ಟು ಹಿಟ್ಟು, ಮೈ ಮುಚ್ಚಲು ಬಟ್ಟೆ, ವಾಸಕ್ಕೊಂದು ಸೂರು, ಒಳ್ಳೆಯ ಆರೋಗ್ಯ. ಇದಕ್ಕಾಗಿ ಅವನ ಮನಸ್ಸು ಒಪ್ಪಿಗೆ ಯಾಗುವಂತೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ತಾನೆ. ನೆಮ್ಮದಿ ಎಲ್ಲಿ ಸಿಗುತ್ತೋ ಅಲ್ಲಿ ಹೋಗ್ತಾನೆ. 

ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ|
ಹರಿಯ ಭಕ್ತರಿಗೆ ಹರಿ ಹರನ ಭಕ್ತರಿಗೆ ಹರ
ನರರೇನು ಭಾವಿಪರೊ ಅದರಂತೆ ತೋರುವನು||

                       ಮೇಲೆ ಹೇಳಿದ ವಚನದಂತೆ  ಅವನಿಗೆ ಹೇಗೆ ಇಷ್ಟಾ ಆಗುತ್ತೋ ಹಾಗೆ ಪೂಜೇನೋ, ಪುನಸ್ಕಾರಾನೋ, ಧ್ಯಾನವನ್ನೋ ,ಏನೋ ಒಂದು ಮಾಡಿಕೊಂಡು ನೆಮ್ಮದಿಯನ್ನು ಹುಡುಕಿಕೊಳ್ಳುತ್ತಾನೆ. ಇಂತವರ ತಲೆಗೆ ಹುಳು ಬಿಡೋರೇ ಹೆಚ್ಚು. ತನ್ನ ಪಾಡಿಗೆ ತಾನು ಕುಡಿದು ತಿಂದುಕೊಂಡು ಕಾಲ ಹಾಕುತ್ತಿದ್ದವನಿಗೆ ಉಪದೇಶವನ್ನು ಮಾಡೋರ್ಯಾರು? ಆದರೆ ಯಾರು ಒಂದು ಸನ್ಮಾರ್ಗದಲ್ಲಿರ್ತಾರೋ ಅವರ ತಲೆ ತಿನ್ನೋರೇ ಜಾಸ್ತಿ.ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ, ಅಂತೀರಾ? ಮೊನ್ನೆ ನನ್ನ ಒಬ್ಬ ಸ್ನೇಹಿತರು ನನಗೆ ಕೇಳಿದರು-"ನಾವು ಬ್ರಾಹ್ಮಣ್ಯವನ್ನು ಕಾಪಾಡುತ್ತಿದ್ದೀವಾ? ನಿತ್ಯವೂ ತ್ರಿಕಾಲ [ ಸಂಧ್ಯಾಕಾಲ ಎರಡೇ ಎನ್ನುವ ವಾದವೂ ಇದೆ]   ಸಂಧ್ಯಾವಂದನೆ ಎಷ್ಟು ಮನೆಯಲ್ಲಿ ಮಾಡ್ತಾರೆ? ನಿತ್ಯವೂ ದೇವತಾರ್ಚನೆ  ಎಷ್ಟು ಮನೆಯಲ್ಲಿ ಮಾಡ್ತಾರೆ? ಎಲ್ಲಾ ಭಾಷಣ ಬಿಗಿದ್ರೆ ಆಗಲಿಲ್ಲಾ ರೀ ಬ್ರಾಹ್ಮಣ್ಯ ಕಾಪಾಡೋ ಕೆಲಸಾ ಆಗ್ಬೇಕು" ನಾನು ಸುಮ್ನೆ ಕೇಳ್ತಾ ಇದ್ದೆ. ಇದರ ಬಗ್ಗೆ ವಾದ ಮಾಡ್ತಾ ಕುಳಿತುಕೊಂಡ್ರೆ ಇದು ಬಗೆಹರಿಯುವುದಿಲ್ಲ ವೆಂಬ ಅರಿವು ನನಗಿತ್ತು.  ಅವರು ಹೊರಟಾಗ ಹೇಳಿದೆ " ನಮ್ಮ ನಮ್ಮ ಅಂತಸಾಕ್ಷಿಯನ್ನು ಕೇಳಿಕೊಂಡರೆ ಗೊತ್ತಾಗುತ್ತೆ-ನಾವು ಮಾಡುತ್ತಿರುವುದು ಎಷ್ಟು ಸರಿ, ಎಂದು"  ಮುಂದೆ ಮಾತನಾಡುವವರಿದ್ದರು, ಆದರೆ ಅವರಿಗೂ ಆಫೀಸ್ ಗೆ ಸಮಯವಾಗಿತ್ತು.

                     ನಾನು  ಈ ಬ್ಲಾಗ್ ಶುರುಮಾಡಿದಮೇಲೆ ಸುಧಾಕರಶರ್ಮರ ಉಪನ್ಯಾಸಗಳನ್ನು ಅಲ್ಲಿಲ್ಲಿ ಕೇಳಿಸಿದಮೇಲೆ  ಈ ತರಾ ಜನರ ಕಾಟ ಜಾಸ್ತಿ ಆಗಿದೆ.  ನಾನಂತೂ ವೇದ ಪಂಡಿತನಲ್ಲ. ಆದರೆ ವೇದದ ಕೆಲವು ಮಂತ್ರಗಳ ಅರ್ಥವನ್ನು ಶರ್ಮರು ಸರಳವಾಗಿ ಹೇಳುವುದನ್ನು ಕೇಳಿದರೆ ಜೀವನಕ್ಕೆ ಬೇಕಾದ್ದೆಲ್ಲವೂ ಇಲ್ಲಿ ಇದೆ ಅನ್ನಿಸುತ್ತೆ. ಆದರೆ ವಾದ ಮಾಡಿ ಗೆಲ್ಲಬೇಕೆಂಬುದಕ್ಕಾಗಿ ನಾನು ಶರ್ಮರ ಉಪನ್ಯಾಸವನ್ನು ಕೇಳುವುದಿಲ್ಲ. ಕೇವಲ ನೆಮ್ಮದಿಗಾಗಿ. ಅಂದಹಾಗೆ ನನ್ನ ಮೊದಲ ಬ್ಲಾಗ್ ಹೆಸರೇ " ನೆಮ್ಮದಿಗಾಗಿ"  ವಾದ...ವಾದ..ವಾದ! ಯಾವ ಪುರುಷಾರ್ಥಕ್ಕಾಗಿ ವಾದ ಮಾಡಬೇಕು? ವಾದ ಮಾಡಿ ಏನ್ ಗೆಲ್ಲಬೇಕು? ಶರ್ಮರ ವಿಚಾರವೆಲ್ಲಾ ನನಗೆ ಒಪ್ಪಿಗೆ ಇದೆ ಎಂದು ಖಂಡಿತಾ ಅರ್ಥವಲ್ಲ.  ಆದರೆ ಕೆಲವು ವೇದಮಂತ್ರಗಳ ಅರ್ಥ ಹೇಳಿದ್ದಾರಲ್ಲಾ! ಅದು ಒಪ್ಪಿಗೆ ಯಾಗಿದೆ. ಇಷ್ಟಪಟ್ಟವರಿಗೆಲ್ಲಾ  ಅವರ ಉಪನ್ಯಾಸದ ಸಿ.ಡಿ ಕೇಳಿಸುತ್ತೇನೆ. ಈ ನನ್ನ  ಚಟುವಟಿಕೆ ಕೂಡ ಕೆಲವರಿಗೆ ಮುಜುಗರವಾಗಿದೆ.ನಾನೇನೂ ಯಾರನ್ನೂ " ಶ್ರಾದ್ಧ " ಮಾಡ್ಬೇಡಿ, ಪೂಜೆ ಮಾಡ್ಬೇಡಿ, ದೇವಾಲಯಕ್ಕೆ ಹೋಗ್ಬೇಡಿ, ವ್ರಥ-ಕಥೆ ಆಚರಿಸಬೇಡಿ ಅನ್ನೋದಿಲ್ಲ. ಅವರವರ ಇಷ್ಟದಂತೆ ಅವರವರು ಇರಲು ಎಲ್ಲರೂ ಸ್ವತಂತ್ರರು. ಆದರೆ ಭಗವಂತನನ್ನು ಕಾಣಲು ಇದೇ ಮಾರ್ಗ ಸರಿ ಅನ್ನೋ ವಿಚಾರದಲ್ಲಿ  ಕಚ್ಚಾಟ ಇದ್ದದ್ದೇ.
                          ನಾನಾದರೋ ನಲವತ್ತು ವರ್ಷಗಳ ಕಾಲ  ಆರ್.ಎಸ್.ಎಸ್. ಸಿದ್ಧಾಂತದಲ್ಲಿ ಬೆಳೆದವನು.ಆದರೆ ಇತ್ತೀಚಿನ ರಾಜಕೀಯ ಚಟುವಟಿಕೆಗಳಿಂದ ಬೇಸತ್ತಿರುವ ನಾನು ಸಂಘದ ಚಟುವಟಿಕೆಗಳಿಂದಲೂ ದೂರ ಇರುವವನು. ಆದರೆ ನಮ್ಮ ದೇಶದ ಸಂಸ್ಕೃತಿ-ಪರಂಪರೆಗಳ ಬಗ್ಗೆ  ಕಾಳಜಿ ಉಳ್ಳವನು. ನಮ್ಮ ಋಷಿ ಪರಂಪರೆಯ ಬಗ್ಗೆ ಹೆಮ್ಮೆ ಪಡುವವನು. ನಿಜವಾಗಿ ಭಾರತದ ಈ ಮಣ್ಣಿನಲ್ಲಿ ಜನಿಸಿರುವುದು ನನಗೆ ಅತ್ಯಂತ ಹೆಮ್ಮೆಯ ಅಭಿಮಾನದ ಸಂಗತಿ ಯಾಗಿದೆ.ವೇದಗಳ ಹೊರತು ಪಡಿಸಿ ಇನ್ಯಾವ ಧರ್ಮ ಗ್ರಂಥಗಳ ಬಗ್ಗೆ , ಹಿಂದು ಪದದ ಬಗ್ಗೆಯೇ ಶ್ರೀ ಶರ್ಮರಿಗೆ ಒಲವಿಲ್ಲವೆಂದರೆ  ನಾನು  ಶ್ರೀ ಶರ್ಮರ ನಿಲುವನ್ನು ಬೆಂಬಲಿಸಬೇಕೆಂದೇನೂ ಅಲ್ಲ. ನಾನು  ಹಿಂದು ಎಂಬ ಬಗ್ಗೆ ನನಗೆ ಅಭಿಮಾನವಿದೆ. ಹಿಂದು ಕೇವಲ ಒಂದು ಮತದ ಹೆಸರಲ್ಲ. ಅದೊಂದು ಜೀವನ ಶೈಲಿ, ಅದೊಂದು  ಸಂಸ್ಕೃತಿ, ಅದು ನಮ್ಮ ರಾಷ್ಟ್ರೀಯತೆಯ ಹೆಸರು.ಈ ವಿಚಾರದಲ್ಲಷ್ಟೇ ಅಲ್ಲ ನಮ್ಮ ಮನೆಗಳಲ್ಲಿ ನಡೆದು ಬಂದಿರುವ ಅನೇಕ ಹಬ್ಬ ಹರಿದಿನಗಳು, ವ್ರತ-ಕಥೆಗಳು,ಶ್ರಾದ್ಧ ಕರ್ಮಗಳು  ಆಚರಣೆಗಳನ್ನು ಶರ್ಮರು ಒಪ್ಪುವುದಿಲ್ಲ . ಆದರೆ ನನ್ನ ವಿಚಾರವನ್ನು ನೋಡಿದಾಗ ’ಡಬ್ಬಲ್ ಸ್ಟಾಂಡ್ " ಅನ್ನಿಸುತ್ತೆ.  ಹಿಂದಿನಿಂದಲೂ ನಡೆದುಕೊಂಡು ಬಂದಿರುವುದನ್ನು ಏಕಾ ಏಕಿ ನಿಲ್ಲಿಸುವುದರ ಬದಲು ಆಚರಿಸುವಾಗ ಅದರರ್ಥವನ್ನು ತಿಳಿಯುವ ಪ್ರಯತ್ನ ಶುರುವಾಗಿದೆ. ಯಾವುದು ಅರ್ಥ ಹೀನವೆಂದು ನನಗೆ ಅನ್ನಿಸುತ್ತೆ, ಅದರಿಂದ ನಾನು ದೂರ ಉಳಿಯುತ್ತೇನೇ ಹೊರತೂ ಮನೆಮಂದಿಗೆಲ್ಲಾ ನೀವೂ ಹೀಗೇ ಇರಿ ಎಂದು ಹೇಳಿ ಬೇಸರಮಾಡುವುದಿಲ್ಲ. ಆದಷ್ಟೂ  ನನಗೆ ಅರ್ಥವಾದರೆ ಅರ್ಥಪಡಿಸುವ ಪ್ರಯತ್ನ ಮಾಡುವೆ. ನಂತರವೂ ಇಲ್ಲಾ, ಹಿಂದಿನಿಂದ ನಡೆದು ಬಂದಿದೆ, ಬಿಡಲಾರೆ, ಎಂದರೆ ಕಿರಿ ಕಿರಿ ಮಾಡಿಕೊಂಡು  ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದಿಲ್ಲ.
ಇಷ್ಟೆಲ್ಲಾ ಹೇಳಿದರೂ ಹೇಳಬೇಕಾದ್ದನ್ನೇ ಹೇಳಲಿಲ್ಲ ವಲ್ಲಾ! ಶ್ರೀ ರಾಘವೇಂದ್ರ ನಾವಡರು ದುರ್ಗಾಕವಚದ ಬಗ್ಗೆ  ಬರೆಯುವ ಮುಂಚೆ ನನಗೆ ಫೋನ್ ಮಾಡಿದ್ದರು, ನನ್ನ ಅನುಮತಿ ಕೇಳಿದರು’" ದೇವರ ಬಗ್ಗೆ ವೇದಸುಧೆಯಲ್ಲಿ ಬರೆದರೆ ಪರವಾಗಿಲ್ಲವಾ?" ಎಂದು . ನಾನು ಹೇಳಿದೆ" ಬರೆಯಿರಿ ವೇದಸುಧೆ ಇರುವುದೇ ಇಂತಾ ಎಲ್ಲಾ ವಿಚಾರಕ್ಕೂ  ಚಿಂತನ-ಮಂಥನ ವೇದಿಕೆಯಾಗಿ ಕೆಲಸ ಮಾಡಲು. ನಿಮ್ಮ ಬರಹ ಒಪ್ಪದಿದ್ದವರು ಕಾರಣ ಕೊಟ್ಟು ಖಂಡಿಸಲಿ. ಹಾಗೆ ನೋಡಿದರೆ ವೇದಗಳ ಹೊರತಾಗಿ ಅದೆಷ್ಟು ಧರ್ಮ ಗ್ರಂಥಗಳಿಲ್ಲ! ರಾಮಾಯಣ, ಮಹಾಭಾರತವಷ್ಟೇ ಅಲ್ಲದೆ ಸಹಸ್ರಾರು ಸಾಹಿತ್ಯ ಗ್ರಂಥಗಳಿವೆ.ಪುರಾಣ ಪುಣ್ಯಕಥೆಗಳಿವೆ. ಅವೆಲ್ಲವನ್ನೂ ಸಮುದ್ರಕ್ಕೆ ಬಿಸಾಕಲು ಸಾಧ್ಯವೇ? ನೂರಾರು ಋಷಿಮುನಿಗಳು ತಾವು ಮಾಡಿದ ತಪಸ್ಸಿನ ಫಲವಾಗಿ ತಮ್ಮ ಅನೇಕ ಚಿಂತನೆಗಳನ್ನು ಹಂಚಿ ಕೊಂಡಿದ್ದಾರೆ. ಎಲ್ಲವನ್ನೂ ತಿರಸ್ಕರಿಸುವುದಾದರೂ ಹೇಗೆ?  ಸತ್ಯ ಒಂದೇ  ತಿಳಿದವರು ಅದನ್ನು ಅವರವರ ರೀತಿಯಲ್ಲಿ ಹಳಿದರೆಂದೂ ವೇದದಲ್ಲೇ ಹೇಳಿದೆ.
                     ವೇದಸುಧೆಯ ಹಿರಿಯ ಮಿತ್ರರಾದ ಕವಿ ನಾಗರಾಜರು  ಒಂದು ರೀತಿಯಲ್ಲಿ ಬಾಹ್ಯ ಪೂಜೆ-ಪುನಸ್ಕಾರಗಳು, ಮಠಾಧಿಪತಿಗಳು,ಇತ್ಯಾದಿಯನ್ನೆಲ್ಲಾ ನಂಬದ  ಅವರದೇ ಆದ ರೀತಿಯಲ್ಲಿ ಭಗವಂತನನ್ನು ಅಂತರ್ಯದಲ್ಲಿ ಕಾಣುವ ವ್ಯಕ್ತಿ.ಅಂತಹ ವಿಚಾರಶೀಲರು ಒಂದು ಘಟನೆ ಹೇಳಿದರು-  " ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿನ ಸ್ವಾಮೀಜಿಯವರು  ಅಲ್ಲಿನ ವ್ಯವಸ್ಥೆಗಾಗಿ ಒಂದು ಕಟ್ಟಡ ಕಟ್ಟಿಸಿದರು. ಸುಮಾರು ೩೦ ಲಕ್ಷ ರೂಗಳನ್ನು ಗುತ್ತಿಗೆದಾರನಿಗೆ ಕೊಡಬೇಕಿತ್ತು. ಗುತ್ತಿಗೆದಾರನು ತನ್ನ ಕಷ್ಟವನ್ನು ಸ್ವಾಮೀಜಿಗೆ ನಿವೇದಿಸಿಕೊಂಡ. ಸ್ವಾಮೀಜಿಯವರ ಹತ್ತಿರ ೩೦ಲಕ್ಷವೆಲ್ಲಿ ೩೦ ಸಾವಿರರೂಪಾಯಿಗಳೂ ಇಲ್ಲ. ಭಕ್ತರನ್ನು ನಂಬಿ ಕೆಲಸ ಮಾಡಿಸಿದ್ದರು. ಈಗ ಸಂಕಷ್ಟದಲ್ಲಿದ್ದಾರೆ. ಸ್ವಾಮೀಜಿಯವರು ತಮ್ಮ ಆರಾಧ್ಯ ದೈವದ ಮುಂದೆ ನಿಲ್ಲುತ್ತಾರೆ, ಏಕವಚನದಲ್ಲಿ  ದೇವರನ್ನು ನಿಂದಿಸುತ್ತಾರೆ.ಬೆಳಗಾಗುವಾಗ ಭಕ್ತನೊಬ್ಬ ೩೦ ಲಕ್ಷ ರೂ ಚೆಕ್ ನೊಂದಿಗೆ ಪ್ರತ್ಯಕ್ಷ. ಸ್ವತ: ನಾಗರಾಜರೇ ಈ ಘಟನೆಯನ್ನು ನೋಡಿ ಸಾಕ್ಷಿಯಾದರು. ಈಗಲೂ ಆಡಂಬರದ ಪೂಜೆ ಪುನಸ್ಕಾರಗಳನ್ನು ಮಾಡದೆ ಮನದಲ್ಲೇ ದೇವರನ್ನು ಆರಾಧಿಸುವ ನಾಗರಾಜರು ಈ ಘಟನೆಯನ್ನು ನಂಬಲೇ ಬೇಕಾಗಿದೆ. ಇಂಹ ಘಟನೆಗಳು ನೂರಾರು ಇರುತ್ತವೆ. ಕೆಲವು ಉತ್ಪ್ರೇಕ್ಷೆಯಾಗಲೂ ಬಹುದು. ಆದರೂ ಈಗಲೂ ಅವಧೂತರು, ಹಾಗೂ ಕೆಲವು ದೇವಿಯ ಆರಾಧಕರ ಹಿಂದೆ  ಸಾವಿರಾರು ಜನ ಭಕ್ತರಿರುತ್ತಾರೆ. ಅವರ ನಂಬಿಕೆ ಅವರದು. ಕಣ್ಣಿಗೆ ಕಾಣುವಂತಹ ದುರಾಚಾರ, ಜನರಿಗೆ ದ್ರೋಹ ನಡೆಯುತ್ತಿದ್ದರೆ ಬಲಿ ಪಶುಗಳಾದವರು ಸಿಡಿದೇಳಬೇಕೇ ಹೊರತೂ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ಇದು ತಪ್ಪು, ಇದು ಸರಿ, ಎಂದು ಹೇಳಲು ನಾವ್ಯಾರು?
-ಹರಿಹರಪುರಶ್ರೀಧರ್
ಸಂಪಾದಕ

36 comments:

 1. ಹಿಂದು ಕೇವಲ ಒಂದು ಮತದ ಹೆಸರಲ್ಲ. ಅದೊಂದು ಜೀವನ ಶೈಲಿ, ಅದೊಂದು ಸಂಸ್ಕೃತಿ, ಅದು ನಮ್ಮ ರಾಷ್ಟ್ರೀಯತೆಯ ಹೆಸರು. ನೂರಕ್ಕೆ ನೂರರಷ್ಟು ಸತ್ಯದ ಮಾತು. ಇದನ್ನು ಅರ್ಥ ಮಾಡಿಕೊಳ್ಳಲಾಗದೇ ಇತರ ಕೆಲವು ಮತಗಳವರು ಬಹಳ ಗೊಂದಲದಲ್ಲಿ ಬೀಳುತ್ತಾರೆ. ಧರ್ಮ ಮತ್ತು ಮತಗಳ ನಡುವೆ ತುಂಬಾ ವ್ಯತ್ಯಾಸವಿದೆ. ಹಿಂದು ಎನ್ನುವದಕ್ಕಿಂತ ಸನಾತನ ಎನ್ನುವುದೇ ಸೂಕ್ತ. ಧರ್ಮ ಎನ್ನುವದು ನಿರಂತರ ಪ್ರವಾಹ, ನಿಂತ ನೀರಲ್ಲ

  ReplyDelete
 2. ಪ್ರಿಯ ಶ್ರೀಧರ್, ನಿಮ್ಮ ಅನಿಸಿಕೆ ಓದಿದೆ. ಇತರರ ಅನಿಸಿಕೆ, ಅಭಿಪ್ರಾಯಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ನಮ್ಮ ಅಂತರಂಗ ಒಪ್ಪುವ ರೀತಿಯಲ್ಲಿ ಬಾಳಬೇಕಾದುದು ನಮ್ಮ ಕರ್ತವ್ಯ. ನಮ್ಮ ಅಂತರಂಗ ಒಪ್ಪುವುದನ್ನು ಸಮರ್ಥಿಸಿ ಇತರರನ್ನು ಒಪ್ಪಿಸುವ ಸಂದರ್ಭ ಬಂದಾಗ ನಮ್ಮ ಅರಿವು,ಪಾಂಡಿತ್ಯ, ಇತ್ಯಾದಿಗಳ ಇತಿಮಿತಿಗಳಿಂದಾಗಿ ನಮಗೆ ಸಾಧ್ಯವಾಗದೇ ಹೋಗಬಹುದು. ನನ್ನ ವಿಸ್ತೃತ ಅಭಿಪ್ರಾಯವನ್ನು ನಿಧಾನವಾಗಿ ವ್ಯಕ್ತಪಡಿಸುವೆ. ಬದುಕು ಸಹನೀಯವೆನಿಸಲು ಸಣ್ಣ ಪುಟ್ಟ ಹೊಂದಾಣಿಕೆಗಳು - ನಮಗೆ ಇಷ್ಟವಿಲ್ಲದಿದ್ದರೂ - ಅನಿವಾರ್ಯವಲ್ಲದಿದ್ದರೂ - ಅಗತ್ಯವಾಗಬಹುದು.

  ReplyDelete
 3. As Mr. Mahesh rightly said hinduism is a way of life and its never a religion.As we all know the word hindu has come from sindhu and even the word India.So everyone who stays in this region is an Indian/Hindu.Early indians never believed in dividing people in the name of religion.Infact the term hindu is a very new term but people in the world identify interms of race.So when it comes to race its either aryan or dravidian or mix of both.

  Indians realized that there could be people of different belief system only after the birth of Jainism and Buddhism.Few interesting things to note here is
  Early hindus never built temples,it was started in 2nd or 3rd century i.e only 1500 years back. According to archeological study hindu temples dates back to 4th century.
  Jains started building temples first later hindus copied the idea and started building temples as it was a place for various socio-cultural activities.

  Sir,I have to disagree with your views you mentioned in the final paragraph.In broader perspective even though it might feel that its ok to worship god in any convenient manner, its actually hinders the development of society in longer run.Its always better to understand little bit of background, history and early society before believing any rituals.A mere coincidence of few instances cannot prove the truth of the universe.

  Vishal

  ReplyDelete
 4. ಲೋಕೊ ಭಿನ್ನ ರುಚಿ:

  ಶ್ರೀ ವಿಶಾಲ್ ನಮಸ್ತೆ,
  ನಿಮ್ಮನ್ನು ನಿರೀಕ್ಷಿಸಿದ್ದೆ.
  ಏನೂ ಮಾಡಲಾಗುವುದಿಲ್ಲ.ಜಗತ್ತನ್ನೆಲ್ಲಾ ಮೂರ್ಖರೂ ಎನ್ನಲಾಗುವುದಿಲ್ಲ. ನನ್ನ ಸುತ್ತಲಿರುವ ಪ್ರತಿಶತ ೯೯.೯೯೯೯ ಜನರ ಅಭಿಪ್ರಾಯಗಳನ್ನು ಮಾನ್ಯ ಮಾಡಲೇ ಬೇಕಾಗುತ್ತದೆ. ಅಥವಾ ಇದು ತಪ್ಪೆಂದು ಹೇಳಲು ನನ್ನೊಡನೆ ಬಲವಾದ ಸಾಕ್ಷ್ಯಾಧಾರಗಳಿರಬೇಕಾಗುತ್ತದೆ. ಎಷ್ಟು ಜನ ಶರ್ಮರು ಸಿಗಲು ಸಾಧ್ಯ? ನನಗೆ ಒಪ್ಪಿಗೆಯಾದದ್ದು ಬೇರೆಯವರಿಗೆ ಒಪ್ಪಿಗೆಯಾಗದಿದ್ದರೆ ನಾನು ವ್ಯಗ್ರನಾಗಬಾರದು.
  ಒಂದು ವಿಚಾರವನ್ನು ಚೆನ್ನಾಗಿ ಹೇಳಿರುವಿರಿ. temples were place for various socio-cultural activities. ಹೌದು ನಾನೂ ಒಪ್ಪುವೆ. ದೇವಾಲಯಗಳನ್ನು ಕಟ್ಟಿಸಿದ ಉದ್ಧೇಶ ಬಹಳ ಚೆನ್ನಾಗಿದೆ. ದೇವಾಲಗಳು ಜ್ಞಾನ ಕೇಂದ್ರಗಳಾಗಿದ್ದವು. ಗತಿಹೀನರಿಗೆ ಆಶ್ರಯದಾಣಳಾಗಿದ್ದವು. ಸಂಗೀತ-ನೃತ್ಯ ಕೇಂದ್ರಗಳಾಗಿದ್ದವು.ಬ್ಯಾಂಕ್ ವ್ಯವಸ್ಥೆಕೂಡ ಇತ್ತೆಂದರೆ ಆಶ್ಚರ್ಯ ವಾಗುತ್ತದೆ. ಆದರೆ ಕಾಲದ ಗತಿಯಲ್ಲಿ ಏನೇನೋ ಬದಲಾವಣೆಗಳಾಗಿವೆ. ಎಲ್ಲವನ್ನೂ ಒಪ್ಪಿಕೊಳ್ಳಬೇಕಷ್ಟೆ.ನನಗೆ ಸರಿ ಎನಿಸಿದ್ದನ್ನು ನಾನು ಆಚರಿಸಬೇಕು. ಎಲ್ಲರನ್ನೂ ನನ್ನಂತೆ ಇರು ಎಂದು ಒತ್ತಾಯಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ,ಮಡದಿ ಮಕ್ಕಳನ್ನೂ ಕೂಡ.ಎಲ್ಲವನ್ನೂ ಸರಿಪಡಿಸುವ ಸಾಮರ್ಥ್ಯವು ಕಾಲಕ್ಕಿದೆ.ಅಷ್ಟೆ.ನನಗೆ ನೆಮ್ಮದಿಯೇ ಮುಖ್ಯ.

  ReplyDelete
 5. ತುಂಬಾ ಉಪಯುಕ್ತ ಚಿಂತನೆ.

  ReplyDelete
 6. ಪರಮಾತ್ಮ ನಿರಾಕಾರನೆಂಬ ವಿಚಾರದಲ್ಲಿ ನನಗೆ ಸಹಮತವಿದೆ. ಆದರೆ ಇಂದು ಸಾಕಾರ ರೂಪದಲ್ಲಿ ಪೂಜಿಸುವ ಹಿಂದುಗಳೇ ಜಾಸ್ತಿ. ಇನ್ನೊಂದು ಸಂಗತಿಯೆಂದರೆ ವೇದ ವಿದ್ವಾಂಸರುಗಳು, ಪಂಡಿತರುಗಳು ಎಂದು ಗುರುತಿಸಲ್ಪಡುವವರ ಪೈಕಿ ಸಹ ಹೆಚ್ಚಿನವರು ವಿಗ್ರಹಾರಾಧನೆ ಮಾಡುವವರು ಮತ್ತು ಬೆಂಬಲಿಸುವವರಾಗಿದ್ದಾರೆ. ವೈಯಕ್ತಿಕವಾಗಿ ನಾನು ವೇದಾಭ್ಯಾಸ ಮಾಡಿದವನಲ್ಲ. ಹೀಗಾಗಿ ನಾನು ಅಧಿಕೃತವಾಗಿ, ಅಧಿಕಾರಯುತವಾಗಿ ವಿಷಯ ಮಂಡಿಸುವುದು ಕಷ್ಟ. ವಿಗ್ರಹಾರಾಧನೆ ಸಂದರ್ಭದಲ್ಲಿ ಸಹ ವೇದ ಮಂತ್ರ ಪಠನೆ, ಘೋಷಣೆಗಳು ಆಗುತ್ತಿಲ್ಲವೆ? ತಿಳಿದವರು ಇಂತಹ ವಿಚಾರಗಳಲ್ಲಿ ಬೆಳಕು ಚೆಲ್ಲಿದರೆ ಮತ್ತು ಅರ್ಥಪೂರ್ಣ ಚರ್ಚೆ ಮಾಡಿದರೆ ಒಳ್ಳೆಯದು. ಈ ಚರ್ಚೆ ಇಲ್ಲಿಗೇ ನಿಲ್ಲದಿರಲಿ.

  ReplyDelete
 7. ಎಲ್ಲಾ ಮ೦ತ್ರಗಳಿಗೂ ಮೂಲ ವೇದ ಹಾಗೂ ಪುರಾಣಗಳೇ ಅಲ್ಲವೇ? ನಾವು ಋಗ್ವೇದಿಗಳು, ನಾವು ಯಜುರ್ವೇದಿಗಳು ಎ೦ದು ವರ್ಗೀಕರಿಸಿಕೊಳ್ಳುವ ವೈದಿಕರು, ಸ೦ಧ್ಯಾವ೦ದನೆ ಹಾಗೂ ದೇವತಾರಾಧನೆಗಳಿಗೆ ಉಪಯೋಗಿಸುವ ಮ೦ತ್ರಗಳು ಅವರವರ ವರ್ಗೀಕರಣದ ವೇದಗಳೇ ಅಲ್ಲವೇ?
  ದೇವಸ್ಥಾನಗಳ ಅಷ್ಟಬ೦ಧಗಳಲ್ಲಿ, ದಿನ ನಿತ್ಯ ದೇವತಾರಾಧನೆಗೆ ಹೇಳುವ ಮ೦ತ್ರಗಳು ಎಲ್ಲಿ೦ದ ಬ೦ದವು? ವೇದಗಳು “ ದೇವನೊಬ್ಬ ನಾಮ ಹಲವು“ ಎ೦ಬುದನ್ನು ಸ್ಪಷ್ಟೈಸಿದರೂ, ವಿಗ್ರಹಾರಾಧನೆಗೆ ಪೂರಕವಾದ ಮ೦ತ್ರಗಳು ಆಮೇಲೆ ರೂಪುಗೊ೦ಡವೇ? ರೂಪುಗೊ೦ಡದ್ದಾದಲ್ಲಿ ಯಾರಿ೦ದ? ವಿಗ್ರಹಾರಾಧನೆ ಕೂಡದು ಎ೦ದು ಎಲ್ಲಿ ಹೇಳಿದೆ? ರವಿವರ್ಮ ಬಿಡಿಸಿದ ಚಿತ್ರಗಳಲ್ಲಿನ ದೇವರ ರೂಪಗಳನ್ನೇ ನಾವು ದೇವರೆ೦ಬ ಹೆಸರು ಕೊಟ್ಟೆವು ಎ೦ಬುದು ಕೆಲವರ ವಾದ.ಹಾಗಿದ್ದರೂ ಅವನ ಕಲ್ಪನೆಗೂ ನಮ್ಮ ವೇದ/ಪುರಾಣಗಳೇ ಆಧಾರ ಅಲ್ಲವೇ?ನಿರಾಕಾರವನ್ನೇ ಪೂಜಿಸುವುದಾದಲ್ಲಿ ಆಕಾರಕ್ಕೇಕೆ ಪೂಜಿಸಬಾರದು?ಒ೦ದಕ್ಕೆ ಆಕಾರವಿಲ್ಲ! ಮತ್ತೊ೦ದಕ್ಕೆ ಆಕಾರವಿದೆ! ಆದರೆ ಎರಡರ ಶಕ್ತಿಯೂ ಒ೦ದೇ ಅಲ್ಲವೇ? ಅ೦ದರೆ ದೇವರು ನಿರಾಕಾರನಾಗಿದ್ದರೂ ಯಾ ಆಕಾರನಾಗಿದ್ದರೂ ಅವನು ಒ೦ದು ಶಕ್ತಿ ಎ೦ಬುದನ್ನು ಒಪ್ಪಿಕೊ೦ಡ ಮೇಲೆ, ಅವನನ್ನು ಆಕಾರದಲ್ಲಿ ಕಲ್ಪಿಸಿಕೊ೦ಡು ಯಾ ಆಕಾರವನ್ನೇ ಪೂಜಿಸುವುದೆ೦ಬ ಎರಡು ವಿಧಗಳೇಕೆ? ಈ ಹಲವಾರು ಪ್ರಶ್ನೆಗಳಿಗೆ ಬಲ್ಲವರು ಉತ್ತರ ತಿಳಿಸಿದರೆ, ನನ್ನ ಸ೦ದೇಹ ದೂರಾಗುತ್ತದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ReplyDelete
 8. I will try to bring in few points here. There are so many questions its too hard to respond to everything here. I am not answering your questions but I am just putting my views here.

  First of all,
  Lets not forget that many ppl in early India were speaking sanskrit and it is not too hard to write any shloka or mantra.Today as we do not understand that language so we feel whatever written in sanskrit is sacred.

  Instead of asking the proof for restriction of Idol worship, it would be better if we ask ourselves why do we need Idol worship.
  Few are asking why there should not be pooja for aakara but my question is who are we to give shape to god and that too 30cr shapes.

  Lets imagine, someone comes and tells us that your gr8 grandfathers father had a tail and his vehicle was a rat.Will you keep quite and agree or will you hit back.The same applies to god. He has given a very good physical shape and mental ability but what we have given to him?
  A tail? A vehicle like rat, an elephant head,monkeys mouth???and what all.

  ReplyDelete
 9. ಶ್ರೀ ವಿಶಾಲ್,
  ನಿಮ್ಮ ಅಭಿಪ್ರಾಯ ಇರಲಿ. ತಪ್ಪಿಲ್ಲ. ಅಣು ರೇಣು ತೃಣ ಕಾಷ್ಟಗಳಲ್ಲಿಭಗವಂತನನ್ನು ಕಾಣುವ ನಮ್ಮ ಪೂರ್ವಜರ ವಿಚಾರ ಅದ್ಭುತ.ಇಲಿವಾಹನವಾಗಿ, ಸೊಂಡಿಲಗಣಪನಾಗಿ,ಬಾಲವಿರುವ ಹನುಮನಾಗಿ ಭಗವಂತನಿಗೆ ರೂಪ ಕೊಟ್ಟ ಪುರಾಣಕಾಲದ ಹಿನ್ನೆಲೆಯನ್ನು ಅಧ್ಯಯನ ಮಾಡದೆ ಅದರ ಕಾರಣಗಳನ್ನು ತಿಳಿಯದೆ ಹಗುರವಾಗಿ ನಮ್ಮ ವಾದ ಮಂಡಿಸುವುದು ತರವಲ್ಲ.ವಿಚಾರವಂತೂ ಚರ್ಚೆಗೆ ದಾರಿಮಾಡಿದೆ.ಮತ್ತದೇ ಸಮಸ್ಯೆ. ಈ ಬಗ್ಗೆ ಅಧ್ಯಯನ ಮಾಡಿರುವ ವಿದ್ವಾಂಸರುಗಳು ಮುಂದೆಬರಬೇಕು, ಇಲ್ಲದಿದ್ದರೆ ಇನ್ನೊಂದೆರಡು ಚರ್ಚೆಗಳಲ್ಲಿ ಇದು ಮುಕ್ತಾಯವಾಗುತ್ತದೆ, ಅಲ್ಲದೆ ಚರ್ಚೆಮಾಡಿದವರು ಹಣೆಪಟ್ಟಿ ಕಟ್ಟಿಸಿಕೊಳ್ಳುತ್ತಾರೆ.ಆರೋಗ್ಯದಾಯಕವಾದ ಚರ್ಚೆ ಆಗಬೇಕು, ಆದರೆ ನಾವು ನೀವೆಲ್ಲಾ ನಮ್ಮ ಅಭಿಪ್ರಾಯಗಳನ್ನಷ್ಟೇ ಹೇಳಬಹುದು. ಆದರೆ ಮೂಲ ಎಟುಕುವುದೇ ಇಲ್ಲ.

  ReplyDelete
 10. There are very few scholars who talk logical and scientific.Apart from bannanje and sharmaji I havent seen anyone who is convincing.
  Sharmaji is accessible but bannanje is not but we can listen to his talk.
  When things are totally illogical there is no point in finding meaning behind it.The popular story of the birth or Ganapati is rejected by most sensible scholars.Please listen to the below discourse

  http://www.KannadaAudio.com/Songs/Discourses/home/GananantvamGanapate.php

  Whatever I write here is not a lose talk but has come by listening,reading and analysing those gr8 scholars since past few years.

  I highly recommend people to listen to all discourses of bannanje on www.kannadaaudio.com
  And whoever wants to clear doubts about IDOL WORSHIP please read a book called Murtipooje jignase by sudhakar chaturvedi.

  Thanks,

  Vishal

  ReplyDelete
 11. ಈಗ ತಾನೇ ವಿಷಯ ಮತ್ತು ಚರ್ಚಯನ್ನು ನೋಡಿದೆ. ತುಂಬಾ ಸ್ವಾರಸ್ಯವೂ ಮತ್ತು ಚಿಂತನಾರ್ಹವೂ ಆದಂತಹ ವಿಷಯ. ಶ್ರೀಧರ್ ರವರು ಹೇಳಿದಂತೆ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ One man's food is another man's poison. ದೇವರು ಇದ್ದಾನೋ ಇಲ್ಲವೋ, ಮೂರ್ತಿ ಪೂಜೆ ಬೇಕೋ ಬೇಡವೋ ಎಂಬುದು ಅನಾದಿ ಕಾಲದಿಂದ ಬಂದಿರುವ ಜಿಜ್ಞಾಸೆಗಳು. ಅದು ಇಂದಿಗೂ ಮುಂದುವರೆದಿದೆ; ಮುಂದಕ್ಕೂ ಸಹ ಮುಂದುವರೆಯಲಿದೆ. ಹಾಗಾಗಿ ಯಾರೊಬ್ಬ ಪ್ರಾಜ್ಞರು ಹೇಳಿದ್ದೇ ಅಂತಿಮ ಸತ್ಯ ಎಂದರೆ ಯಾರೂ ಒಪ್ಪಲಾರರರು. ಒಪ್ಪಿಸುವ ಪ್ರಯತ್ನ ಕೂಡ ಅಭಿಪ್ರಾಯ ಹೇರಿಕೆಯಾದೀತು. ಕವಿ ನಾಗರಾಜ್ ರವರು ಹೇಳಿದಂತೆ ವೈಯುಕ್ತಿಕ ಆಚರಣೆಗಳನ್ನು ಅವರವರಿಗೇ ಬಿಟ್ಟು ಬಿಡುವುದು ಅತ್ಯಂತ ಸೂಕ್ತ ಮಾರ್ಗ. ನನಗಿಷ್ಟವಾಗದಿದ್ದರೆ ಸುಮ್ಮನಿದ್ದರಾಯಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ಸಂಸ್ಕಾರ, ನಾವು ಬೆಳೆದಂತಹ ಪರಿಸರ ಮತ್ತು ನಮ್ಮ ಜ್ಞಾನಧಾರಣೆಯ ಶಕ್ತಿಗಳು ನಮ್ಮ ಅಭಿಪ್ರಾಯಗಳ ಮತ್ತು ಆಚರಣೆಗಳ ಮೂಲವಾಗಿರುತ್ತವೆ. ಹಾಗಾಗಿ ಅವು ಸಾರ್ವತ್ರಿಕವಾಗಿ ಒಂದೇ ಆಗಲು ಎಂದೂ ಸಾಧ್ಯವಿಲ್ಲ. ಊಟದಲ್ಲಿ ಷಡ್ರಸಗಳು ಹೇಗೆ ರುಚಿಯನ್ನು ಹೆಚ್ಚಿಸುತ್ತವೆಯೋ, ಹಾಗೆ ಇಂತಹ ಭಿನ್ನಾಭಿಪ್ರಾಯಗಳಿಂದ ನಮಗೆ ಸೂಕ್ತವಾದುದರನ್ನು ಆಯ್ದುಕೊಂಡು ಸೂಕ್ತವಾದ ರೀತಿಯಲ್ಲಿ ನಮ್ಮ ನಮ್ಮ ಅಭಿಪ್ರಾಯಗಳನ್ನು ಮತ್ತು ಆಚರಣೆಗಳನ್ನು ಕಾಲಕಾಲಕ್ಕೆ ಬದಲಾಯಿಸುವ open mind ಮಾತ್ರಾ ನಮದಾಗಿದ್ದರೆ ಬಲು ಚೆನ್ನ. ಯಾವುದೇ ವಿಷಯದ ಮೂಲ ಹುಡುಕುವುದರಲ್ಲಿಯೇ ವ್ಯಸ್ತನಾಗುವ ಬದಲು ವಿಷಯ ನಮಗೆ ಪ್ರಿಯವಾಗಿದ್ದರೆ ಅದನ್ನು ಅನುಸರಿಸುವುದರಲ್ಲಿ ನನಗೇನೂ ಅಭ್ಯಂತರ ಕಾಣಿಸುತ್ತಿಲ್ಲ. ಚರ್ಚೆ impersonal ಆಗಿ ವಿಷಯಕ್ಕೆ ಒತ್ತು ಕೊಟ್ಟಷ್ಟೂ ಹೆಚ್ಚು ಹೆಚ್ಚು ತಿಳಿಯಲು ಅನುವಾದೀತು.

  ReplyDelete
 12. ಮತ್ತೊಂದು ವಿಚಾರ ಮರೆತಿದ್ದೆ. ಶ್ರೀಧರ್ ರವರು ಪ್ರಸ್ತಾಪಿಸಿದ ಅವಧೂತರ ಇದೇ ಘಟನೆಯನ್ನು ಹಾಸನ ವೇ||ಬ್ರ||ಶ್ರೀ||ಕೃಷ್ಣಮೂರ್ತಿಗಳೂ ಸಹ (ನಾನು ಇತ್ತೀಚೆಗೆ ಅವರನ್ನು ಭೇಟಿ ಮಾಡಿದಾಗಿ)ನನಗೆ ತಿಳಿಸಿದ್ದರು.

  ReplyDelete
 13. ಶ್ರೀ ವಿಶಾಲ್,
  ನಮಸ್ತೆ,
  [ಇಲಿವಾಹನವಾಗಿ, ಸೊಂಡಿಲಗಣಪನಾಗಿ,ಬಾಲವಿರುವ ಹನುಮನಾಗಿ ಭಗವಂತನಿಗೆ ರೂಪ ಕೊಟ್ಟ ಪುರಾಣಕಾಲದ ಹಿನ್ನೆಲೆಯನ್ನು ಅಧ್ಯಯನ ಮಾಡದೆ ಅದರ ಕಾರಣಗಳನ್ನು ತಿಳಿಯದೆ ಹಗುರವಾಗಿ ನಮ್ಮ ವಾದ ಮಂಡಿಸುವುದು ತರವಲ್ಲ]
  ಈ ನನ್ನ ಮಾತಿಗೆ
  Whatever I write here is not a lose talk but has come by listening,reading and analysing those gr8 scholars since past few years.

  ಈ ಮಾತನ್ನು ಹೇಳಿದ್ದೀರಿ.ನಿಮ್ಮ ಸಮರ್ಥನೆಯನ್ನು ಸ್ವಾಗತಿಸುತ್ತೇನೆ. ಆದರೆ ಹಲವು ನೂರು ವರ್ಷಗಳಿಂದ ನಂಬಿರುವ ಕೋಟಿ ಕೋಟಿ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಲು ನಾನು ಇಷ್ಟಪದಲಾರೆ.ಇವತ್ತಿಗೂ ಹಳ್ಳಿಯ ಕಡೆ ಹೋದರೆ ಮಾರಮ್ಮನ ಗುಡಿ, ಊರಿಗೊಂದು ಹನುಮಂತನ ಗುಡಿಗಳಲ್ಲಿ ಮುಗ್ಧವಾಗಿ ಪೂಜಿಸುವ ಅವರು ನಂಬಿದ ದೇವರೊಡನೆ ಮಾತನಾಡುವ ಜನರೆದುರು ನಾನು ಆಶ್ಚರ್ಯದಿಂದ ಮೌನವಾಗಿ ನೋಡುತ್ತೇನೆ. ಕೆಲವೆಲ್ಲಾ ತರ್ಕಕ್ಕೆ ಸಿಗುವುದಿಲ್ಲ.ಅಂದರೆ ಚರ್ಚೆಯನ್ನೇಕೆ ಆರಂಭಿಸಿದಿರಿ, ಎನ್ನಬಹುದು. ಚರ್ಚೆ ನಡೆಯಬೇಕು, ಹಿನ್ನೆಲೆ ಅರ್ಥವಾಗಬೇಕು, ಆರೋಗ್ಯಪೂರ್ಣ ಚರ್ಚೆಯಿಂದ ಒಂದಿಷ್ಟು ಬದಲಾವಣೆಯೂ ಆಗಬಹುದು.
  ಇದೊಂದು ರೀತಿಯಲ್ಲಿ " ಅಕ್ಕಿಯಮೇಲೆ ಆಸೆ, ನೆಂಟರಮೇಲೆ ಪ್ರೀತಿ" ಅಂತಾರಲ್ಲ, ಹಾಗೆ. ಚರ್ಚೆಯೂ ನಡೆಯಬೇಕು, ಆದರೆ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆಯನ್ನೂ ವಹಿಸಬೇಕು. ಇದು ಕಷ್ಟ. ಆದರೂ ಇದೇ ನನ್ನ ಮಾರ್ಗ.

  ReplyDelete
 14. ಚರ್ಚೆ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ದುರಾದೃಷ್ಟವೆಂದರೆ ಮೂರ್ತಿಪೂಜೆಯ ಕಾರಣದಿಂದಲೇ ನಮ್ಮ ಸಂಸ್ಕೃತಿಯ ಮೇಲೆ ಹಲ್ಲೆ ನಡೆಸಲು ಇತರ ಧರ್ಮೀಯರಿಗೆ ಅವಕಾಶವಾಗಿರುವುದು. ಅನೇಕ ಕಲಾಕೃತಿಗಳು, ದೇವಸ್ಥಾನಗಳು ನಾಶಗೊಂಡುದೂ ಸಹ ಪರಧರ್ಮೀಯರ ಅಸಹನೆಯ ಮನೋಭಾವದಿಂದ. ಒಂದುಕಾಲದಲ್ಲಿ ಭಕ್ತಿಪಂಥದ ಮುಂಚೂಣಿಯಲ್ಲಿದ್ದ ಮಹಾನುಭಾವರು ಮೂರ್ತಿಪೂಜೆಯ ಕಾರಣದಿಂದ ಮೋಕ್ಷ ಸಾಧಿಸಿದ ಬಗ್ಗೆ ಉದಾಹರಣೆಗಳನ್ನು ಕಾಣುತ್ತೇವೆ. ಅಂತರಂಗಶುದ್ಧಿಗೆ ಅದೂ ಸಹ ಕಾರಣವಾಗಿತ್ತು, ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯುವುದು ಕಷ್ಟ. ಹಾಗೆಂದು ನಾನು ಮೂರ್ತಿಪೂಜೆಯನ್ನು ಸಮರ್ಥಿಸುವವನಲ್ಲ. ಅಷ್ಟಾಗಿ ದೇವರು ತನ್ನನ್ನು ಪೂಜಿಸಬೇಕೆಂದು ಬಯಸುತ್ತಾನೆಯೇ? ಅಂತರಂಗ ಒಪ್ಪುವಂತೆ ನಡೆದರೆ ಅದಕ್ಕಿಂತ ಬೇರೆ ಪೂಜೆ ಬೇಕಿಲ್ಲ. ನೇರ ಮತ್ತು ಒಳ್ಳೆಯ ನಡೆಯನ್ನು ಪೋಷಿಸುವ ಯಾವ ಮಾರ್ಗವಾದರೂ ಸರಿ. ಸಮನ್ವಯದ ದಾರಿಯಲ್ಲಿ ನಡೆದು ನಮ್ಮತನವನ್ನು ಉಳಿಸಿಕೊಂಡು ಇತರರಿಗೂ ಸತ್ಯದ ದರ್ಶನ ಮಾಡಿಸುವ ಕಾರ್ಯದ ಅಗತ್ಯತೆ ಇಂದು ಬಹಳವಿದೆ.

  ReplyDelete
 15. ವೇದಸುಧೆ=ಸಮನ್ವಯ

  ReplyDelete
 16. @Kavi Nagaraj

  Perfect.

  But yaa one thing regarding moksha.As per my understanding moksha is a state of the soul after complete realization in their previous Janmas. Realized individuals whom we see now are near to their moksha state.

  But interesting thing here is a person is said to be realized if he clear in his thoughts and usually accepts one philosophy and achieve something with the help of that.Its hard to get clarity of life if we partially understand and accept many philosophies.

  ReplyDelete
 17. ವಿಶಾಲ್ ರವರಿಗೆ ನಮಸ್ಕಾರ.
  ಸತ್ಯದ ಅರಿವು ಮತ್ತು ಸಾಕ್ಷಾತ್ಕಾರಗಳು ನಿರಂತರವಾಗಿ ನಡೆಯುವ, ಪರಿಷ್ಕರಣೆಗೆ ಒಳಗಾಗುವಂತಹ ಕ್ರಿಯೆಗಳು.'ನಮ್ಮದೇ ಸರಿ' ಎಂದು ವಾದಿಸಿದಲ್ಲಿ ವೈಚಾರಿಕ ಚಿಂತನೆ ಮೊಟಕುಗೊಳ್ಳಬಹುದು. ನಮಗೆ ಸರಿ ಎಂದು ಕಂಡಿದ್ದನ್ನು ನಾವು ಆಚರಿಸಿ, ಇತರರ ಭಾವನೆಗಳನ್ನು ಗೌರವಿಸಿ (ಅದನ್ನು ಒಪ್ಪಿ ಎಂದು ಅಲ್ಲ) ಸರಿಯೆನಿಸಿದುದನ್ನು ಹೇಳುತ್ತಾ ಹೋದಲ್ಲಿ ಏನಾದರೂ ಬದಲಾವಣೆ ನಿರೀಕ್ಷಿಸಬಹುದು. ಸರಿಯಲ್ಲವೆಂದು ಅನ್ನಿಸುವುದನ್ನು ವಿರೋಧಿಸಿ, ಖಂಡಿಸಿ ಹೇಳಿದರೆ ನಾವು ಹೇಳುವುದಕ್ಕೆ ವಿರೋಧ ಬರಬಹುದೇ ಹೊರತು ವಿಚಾರ ಒಪ್ಪಿಕೊಳ್ಳುವವರು ಕಡಿಮೆ. ತಿಳುವಳಿಕೆ ಇರುವವರು ಮತ್ತು ವಿದ್ವಾಂಸರು ಸಂದೇಹಗಳಿಗೆ ಸೂಕ್ತ ವಿವರಣೆ ನೀಡುತ್ತಾ ಹೋದಲ್ಲಿ ಅದು 'ಸಮನ್ವಯ'ದ ಹಾದಿಯೆನಿಸುವುದು.

  ReplyDelete
 18. ನನ್ನ ದೃಷ್ಟಿಯಲ್ಲಿ ನಾವೀಗ ಅಭಿಪ್ರಾಯಗಳನ್ನು ಹಂಚಿಕೊಂಡಿರುವವರೆಲ್ಲರೂ ಸಾಮಾನ್ಯರು. ನಮ್ಮ ನಮ್ಮ ಅನುಭವ, ಜೀವನದಲ್ಲಿನ ಸಂಸ್ಕಾರ,ಪಡೆದ ಸೀಮಿತ ಜ್ಞಾನ, ಇವುಗಳಿಗನುಸಾರವಾಗಿ ನಮ್ಮ ನಮ್ಮ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಇಲ್ಲಿ ಇನ್ನೂ ವಿದ್ವಾಂಸರ ಪ್ರವೇಶವಾಗಿಲ್ಲ. ಬಹುಷ: ಪ್ರವೇಶವಾಗಲಾರದು. ಆದ್ದರಿಂದ ಚರ್ಚೆಗೆ ಇತಿಶ್ರೀ ಹಾಡೋಣವೇ? ಅಥವಾ ಆಧಾರಕೊಟ್ಟು ವಿಷಯ ಮಂಡಿಸಬಲ್ಲ ಯಾರಾದರೂ ವಿದ್ವಾಂಸರುಗಳನ್ನು ವೇದಸುಧೆಯ ಅಭಿಮಾನಿಗಳು ಕರೆತರಬಹುದೇ?
  Its hard to get clarity of life if we partially understand and accept many philosophies.
  ಶ್ರೀ ವಿಶಾಲ್ ಅವರ ಈ ವಿಚಾರಕ್ಕೆ ನನ್ನ ಅನಿಸಿಕೆ ಹೀಗಿದೆ-ಎಲ್ಲಾ ಕಡೆಗಳಿಂದಲೂ ಬರುವ ವಿಚಾರಗಳನ್ನು ತೆರೆದ ಮನಸ್ಸಿನಿಂದ ಆಲಿಸಿ ಕೊನೆಗೆ ಎಲ್ಲವುಗಳ ಮಂಥನದಿಂದ [ಗೊಂದಲಕ್ಕೊಳಗಾಗದೆ]ನಮ್ಮ ಅಂತರ್ಯದಲ್ಲಿ ಒಂದು ಹೊಸ ಹೊಳಹು ಉತ್ಪತ್ತಿಯಾಗಿ ಜೀವನವನ್ನು ಸಾರ್ಥಕಪಡಿಸಬಲ್ಲದು. ವೇದಸುಧೆಯಲ್ಲಿ ಡಾ|| ಗೋಪಾಲಕೃಷ್ಣ ಅವರ ಉಪನ್ಯಾಸದ ಏಳು ಹತ್ತು ನಿಮಿಷಗಳ ಕಂತುಗಳನ್ನು ಹಾಕಿರುವೆ. ಅವುಗಳನ್ನೊಮ್ಮೆ ಕೇಳುವುದು ಸೂಕ್ತ. ಅವರ ಒಂದು ಮಾತು ಹೀಗಿದೆ.
  Wherever U go collect as much information as possible, convert information in to the knowledge,convert knowledge in to Wisdom, convert Wisdom in to experience and totality of the experience should be your life.

  ReplyDelete
 19. ತಿದ್ದುಪಡಿ:ಮೇಲಿನ ಪ್ರತಿಕ್ರಿಯೆಯಲ್ಲಿ ಹತ್ತು ನಿಮಿಷಗಳ ಏಳು ಕಂತುಳೆಂದು ಓದಿಕೊಳ್ಳಿ.

  ReplyDelete
 20. There will be few issues that deserves to be opposed.
  How can we respect when ppl say, god has created few animals to be eaten by human beings.
  How can we respect people that smoking and consuming alcohol is part of their culture.
  How can we respect a person who donot do any kind of work before looking at his horoscope.
  How can we respect people who give mental and physical torture to women and say its their tradition.
  How can we respect people who are looting the wealth of the country in the name of temple and god.
  How can we respect people who are misleading innocent people in the name of jyotishya etc.
  How can we respect people who spoil their children's future for their selfish desires.

  The above issues are related to basic human values which we have forgotten because the ignorance of our society since many decades/centuries.
  I think if we start respecting everyone's views without any stand or argument then people will call us hypocrites.

  ReplyDelete
 21. ಶ್ರೀ ವಿಶಾಲ್,
  ಚಿಂತನೆ ಮಾಡಲೇ ಬೇಕಾದ ಅನೇಕ ಸಂಗತಿಗಳು ನಿಮ್ಮಿಂದ ಮೂಡಿಬಂದಿವೆ.ಮೇಲಿನ ನನ್ನ ಪ್ರತಿಕ್ರಿಯೆ ನೋಡಿದ ಅದಕ್ಕೆ ಬರೆದ ಪ್ರತಿಕ್ರಿಯೆಯಲ್ಲವೆಂದುಕೊಂಡಿದ್ದೇನೆ.

  ReplyDelete
 22. ನಮ್ಮ ಪೂರ್ವಜರೆಲ್ಲಾ ಪ್ರಕೃತಿಯ ಆರಾಧಕರಾಗಿದ್ದರೆ೦ಬುದನ್ನು ವೇದಗಳು ಪುಷ್ಟೀಕರಿಸಿ ವೆ.ನಮ್ಮ ಪೂರ್ವಜರು ಪ್ರಕೃತಿಯ ಆರಾಧನೆಯ ಭಾಗವೆ೦ಬ೦ತೆ ಕೆಲವು ಪ್ರಾಣಿ, ಪಕ್ಷಿ ಗಳನ್ನು ದೇವರ ರೂಪ ಹಾಗೂ ಅವರ ವಾಹನಗಳನ್ನಾಗಿ,ಕೆಲವು ಮರಗಳನ್ನು, ಪೂಜಿಸು ತ್ತಿದ್ದರೆ೦ಬುದನ್ನು ಬಲ್ಲೆವು. ಸಾ೦ಕೇತಿಕವಾಗಿ, ದೇವರ ಜೊತೆಗೆ ಆ ಪ್ರಾಣಿಗಳೂ ಸ೦ರಕ್ಷಿಸಲ್ಪಡಲೆ೦ಬ ಆಶಯವಿರಬಹುದು.ಹಾಗ೦ತ ಅವುಗಳೆಲ್ಲವೂ ಸ೦ರಕ್ಷಿಸಲ್ಪಡು ತ್ತಿದ್ದಾವೆಯೇ ಎ೦ಬ ಪ್ರಶ್ನೆ ಉಧ್ಬವಿಸುತ್ತದೆ. ಇಲ್ಲ ವೆ೦ಬುದನ್ನು ಪ್ರಾಮಾಣಿಕವಾಗಿ ಒಪ್ಪಿ ಕೊಳ್ಳಬೇಕಾಗುತ್ತದೆ. ಆಶಯ ಒಳ್ಳೆಯದೇ, ಆದರೆ ಅದನ್ನು ಅರ್ಥೈಸಿಕೊ೦ಡಿಲ್ಲ ಅಷ್ಟೇ!ಹೇಗೆ೦ದರೆ ಗೋಹತ್ಯೆ ನಿಷೇಧದ ವಿರೋಧಿಗಳು, ವೇದಕಾಲದಲ್ಲಿ ಬ್ರಾಹ್ಮಣರೂ ಗೋ ಮಾ೦ಸವನ್ನು ಉಪಯೋಗಿಸುತ್ತಿದ್ದರೆ೦ಬ ಉಲ್ಲೇಖವನ್ನು ಇಡುತ್ತಾರಲ್ಲ ಹಾಗೆ!
  ಮೂರ್ತಿ ಪೂಜೆಯಿ೦ದ ನನಗೇನೂ ಇಲ್ಲಿಯವರೆಗೂ ತೊ೦ದರೆ ಕ೦ಡು ಬ೦ದಿಲ್ಲ! ಹಾಗ೦ತ ಮೂರ್ತಿ ಪೂಜಾ ವಿರೋಧಿಗಳನ್ನು ನಾನು ಖ೦ಡಿಸಲಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ದೇವರು ಎನ್ನುವುದು ಕಲಿಗಾಲದಲ್ಲಿ, ಯಾರ್ಯಾರು ಹೇಗೆ ಕಲ್ಪಿಸಿಕೊಳ್ಳುತ್ತಾರೋ ಹಾಗೆ! ಎ೦ದ೦ತೆ, ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ದೇವರನ್ನು ಕಾಣುತ್ತಾರೆ. ಯಧ್ಭಾವ೦ ಥದ್ಭವತಿ ಅಲ್ಲವೇ?
  ಹಾಗ೦ತ ಮೂರ್ತಿ ಪೂಜೆಯ ಅಲವಡಿಕೆಯಿ೦ದಲೇ ಪರಧರ್ಮೀಯರು ನಮ್ಮ ಧರ್ಮಾಶ್ರಯಗಳ ಮೇಲೆ ಹಲ್ಲೆಗೈದರೆ೦ಬುದು ಕೇವಲ ಮೂರ್ತಿ ಪೂಜೆಯ ವಿರೋಧದ ಮಾತಾಗುತ್ತದೆ. ಪರಧರ್ಮೀಯರು ನಮ್ಮ ಮೇಲೆ ಹಲ್ಲೆ ಗೈದದ್ದು ಮೊದಲನೆಯದಾಗಿ ದೇವಸ್ಥಾನಗಳಲ್ಲಿದ್ದ ಹೇರಳ ಧನ-ಕನಕ ಸ೦ಪತ್ತುಗಳ ಆಸೆಯಿ೦ದ! ಎರಡನೆಯದಾಗಿ ಸ್ವ-ದರ್ಮ ವಿಸ್ತರಣೆ ಎ೦ಬ ಮತ್ತೊ೦ದು ಮಹತ್ವಾಕಾ೦ಕ್ಷೆಯಿ೦ದ! ದೇವಸ್ಥಾನವೆ೦ಬ ಪವಿತ್ರ ಆಶ್ರಯಗಳ ಮೇಲೆ ಪರ “ಧರ್ಮೀಯ“ರು ಪ್ರವೇಶಿಸಲಾರರೆ೦ಬ ಮೂರ್ಖತನದ “ನ೦ಬಿಕೆ“ಯಿ೦ದಲೋ, ಬೇರಾವುದೇ ಮಾರ್ಗ ವಿರಲಿಲ್ಲವೆ೦ಬುದಾಗಿಯೋ ದೇವರ ಮೂರ್ತಿಗಳಲ್ಲಿ ಧನ-ಕನಕವನ್ನು ಅಡಗಿಸಿಡುತ್ತಿದ್ದರು. ಪರ ಧರ್ಮೀಯರು ಅದೇ ಧನ-ಕನಕಗಳನ್ನು ಬೇರೆಲ್ಲಿ ಅಡಗಿಸಿಟ್ಟಿದ್ದರೂ ಆ ಸ್ಥಳಗಳನ್ನೂ ಕೊಳ್ಳೆ ಹೊಡೆಯುತ್ತಿರಲಿಲ್ಲವೇ? ಮಹಮದ್ ಘೋರಿ ಮತ್ತು ಘಜನಿಗಳು ಭಾರತ ಹಾಗೂ ಅದರ ದೇವಸ್ಥಾನಗಳ ಮೇಲೆ ಧಾಳಿ ಮಾಡಿದ್ದೇ ಸ೦ಪತ್ತಿನಾಸೆಯಿ೦ದ ಎ೦ಬುದನ್ನು ಬಲ್ಲೆವಲ್ಲವೇ? ಹಾಗಾದರೆ ಮೂರ್ತಿ ಪೂಜೆಯೊ೦ದೇ ಪರರಾಕ್ರಮಣಕ್ಕೆ ಕಾರಣವಾಯಿ ತೆ೦ಬ ವಾದ ಎಷ್ಟು ಸರಿಯಾದುದು?ಧರ್ಮ ಅಸಹನೀಯತೆ ಮು೦ಚಿನಿ೦ದಲೂ ಇತ್ತು!ಎಲ್ಲಾ ಧರ್ಮೀಯರಿಗೂ ಆದಿನಕ್ಕೂ ಸ್ವಧರ್ಮವೇ ಶ್ರೇಷ್ಟವಾದುದೆ೦ಬ ಭಾವನೆ ಇತ್ತು ಅದು ಈಗಲೂ ಇದೆ ಅಷ್ಟೇ!

  ReplyDelete
 23. ನಾನು ಈ ಲೇಖನ ಸಾದ್ಯ೦ತ ಓದಿದೆ, "ಹಿ೦ದೂ" ಅನ್ನುವುದು ಧರ್ಮವಲ್ಲ, ಜೀವನ ಶೈಲಿ ಅನ್ನುವುದು ಎಲ್ಲೆಡೆ ನಾವು ಕೇಳುವ ಮಾತು. ಓಕೆ, ಒಪ್ಪೋಣ. ಇನ್ನು ಮೂರ್ತಿಪೂಜೆ ಸರಿಯೇ ತಪ್ಪೇ ಎ೦ಬ ಬಗ್ಗೆ ಕೂಡ ಬಹುವಿಧ ಅಭಿಪ್ರಾಯ. ಹಿ೦ದೂ ಧರ್ಮ ಗಳ ಒಳಗಿನ ಹಲವೆ೦ಟು ಜಾತಿಗಳು ಅವರು ಅನುಸರಿಸುವ ವಿವಿಧ ಪದ್ಧತಿಗಳು ಎಲ್ಲದರಲ್ಲೂ ವೈರುಧ್ಯವಿದೆ, ಅಭಿಪ್ರಾಯಬೇಧಗಳಿವೆ. ಹಿ೦ದೂ ಧರ್ಮದಲ್ಲಿ ಯಾವುದು ಸರಿ, ಯಾವುದು ತಪ್ಪು ಎ೦ಬ ಜಿಜ್ಞಾಸೆ ಎ೦ದಿಗೂ ಮುಗಿಯುವ೦ಥಾದ್ದಲ್ಲ. ಬೇರೆ ಧರ್ಮಗಳಿಗೂ, ಹಿ೦ದೂ ಧರ್ಮಕ್ಕೂ ಹೋಲಿಕೆ ಮಾಡಲಾಗದು. ಬೇರೆ ಧರ್ಮಗಳಲ್ಲಿ ಒ೦ದು ಸಿದ್ಧಸೂತ್ರವಿದೆ. ಆದರೆ ಇಲ್ಲಿ ಹಾಗಿಲ್ಲ. ಒಬ್ಬೊಬ್ಬರ ದೃಷ್ಟಿಕೋನ ಒ೦ದೊ೦ದು ಬಗೆಯದು. ಅವರವರ ಮಟ್ಟಿಗೆ ಎಲ್ಲವೂ ಸರಿ. ಬ್ರಾಹ್ಮಣರಲ್ಲೇ ಲೆಕ್ಕವಿಲ್ಲದಷ್ಟು ಒಳಪ೦ಗಡ ಗಳು. ಅವರವರದ್ದು ಒ೦ದೊ೦ದು ಬಗೆಯ ಆಚರಣೆ. ಒ೦ದೇ ಧರ್ಮದ ಇತರ ಪ೦ಗಡದವರ ಆಚರಣೆಕ್ರಮಗಳ ಬಗ್ಗೆ ತಾತ್ಸಾರ ತು೦ಬಿದ ಅವಗಣನೆ. ನಮ್ಮದೇ ಊಚು, ಉಳಿದವರದ್ದು ಬೂಸು ಎನ್ನುವ ಭಾವ. ಹೀಗೆ ಹಿ೦ದೂ ಧರ್ಮ ವಿಶಾಲ ಮನೋಧರ್ಮ ದ್ದಾದರೂ ಧರ್ಮಾನುಯಾಯಿಗಳ ಮನಸ್ಸು ತು೦ಬಾ ಸ೦ಕುಚಿತ. ಒ೦ದು ವಿಶಾಲ ನೆಲೆಯಲ್ಲಿ ಹಿ೦ದೂ ಧರ್ಮದೊಳಗಿನ ಎಲ್ಲ ಜಾತಿ ಪ೦ಗಡ ಗಳನ್ನೂ ಒಗ್ಗೂಡಿಸುವುದು ಎ೦ದೆ೦ದಿಗೂ ಸಾಧ್ಯವಿಲ್ಲದ ಮಾತು. ಹಾಗಾಗಿ ಧರ್ಮಾನುಚರಣೆ, ಪೂಜೆ, ದೇವತಾರಾಧನೆ, ವಿಚಾರದಲ್ಲಿ ಯಾವುದು ಸರಿ, ಯಾವುದು ತಪ್ಪು ಎ೦ಬುದನ್ನು ಇದಮಿತ್ಠ೦ ಅ೦ತ ನಿರ್ಣಯ ಮಾಡುವುದು ಅಸಾಧ್ಯ. ಎಲ್ಲ ಒಳ ಪ೦ಗಡಗಲ್ಲಿ, ಒಳ-ಜಾತಿಗಳಲ್ಲಿ ಸಾಮರಸ್ಯ ಮೂಡಿದಾಗ ಮಾತ್ರ ಹಿ೦ದೂ ಧರ್ಮ ಅಖ೦ಡವೆನಿಸುತ್ತದೆ.

  ReplyDelete
 24. ಎರಡು ಕಂತುಗಳ ಪ್ರತಿಕ್ರಿಯೆ :

  ’ಇದು ತಪ್ಪು ಇದು ಸರಿ’ ಕಡೆಗೋಲನ್ನು ಹಿಡಿದು ಇವತ್ತಿನ ವೇದಾಚರಣೆಗಳನ್ನು ಮಥಿಸುತ್ತಿರುವ ವಿಷಯ ನೋಡಿ ಖುಷಿಯಾಯ್ತು. ವೇದವನ್ನು ಸಂಪೂರ್ಣವಾಗಿ ಓದಿದ ವ್ಯಕ್ತಿ ನಾನಲ್ಲವೆಂದು ಮೊದಲೇ ಒಪ್ಪಿಕೊಳ್ಳುತ್ತೇನೆ. ಕೆಲವೊಂದು ಮೌಢ್ಯಗಳು ಆಚರಣೆಗಳಲ್ಲಿ ಪ್ರಾದೇಶಿಕವಾಗಿ ಸೇರಿಕೊಂಡಿದ್ದು ಕಂಡುಬರುತ್ತದೆ.

  ೧. ಇ ತಮ್ಮೆಲ್ಲರ ಮೊದಲ ಸಂದೇಹ ದೇವರು ಅಣುರೇಣು ತೃಣಕಾಷ್ಠಗಳಲ್ಲಿದ್ದರೂ ಮತ್ತೇಕೆ ಮೂರ್ತಿ ಪೂಜೆ ಎಂಬುದಾಗಿ

  ಯಾಕೇ ಅಂತ ಸ್ವಲ್ಪ ವಿಷ್ಲೇಶಿಸೋಣ : ಜನಸಾಗರದಲ್ಲಿ ಎಲ್ಲರಿಗೂ ಒಂದೇ ಹಂತದ ಅಥವಾ ತಾಕತ್ತಿನ ಮೆದುಳಿ ಇರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಷ್ಟೇ ? ನೀವೇನೇ ಕಲಿಸಿದರೂ ಕೇವಲ ಕೆಲವರು ಮಾತ್ರ ಹೆಸರುವಾಸಿ ವೈದ್ಯರು, ತಂತ್ರಜ್ಞರು, ಕಲಾವಿದರು ಹೀಗೆಲ್ಲಾ ಆಗುತ್ತಾರೆ ಆದರೆ ಎಲ್ಲರಿಗೂ ಏಕಪ್ರಕಾರದ ಅವಕಾಶ ಕೊಟ್ಟು ನೋಡಿ-ಎಲ್ಲರಿಂದಲೂ ಒಂದೇ ರೀತಿಯ ವ್ಯುತ್ಫತ್ತಿಯನ್ನು ಕಾಣುವುದು ಸಾಧ್ಯವಿಲ್ಲ! ಅದೇ ರೀತಿ ನಾವ್ಯಾರೂ ದೇವರನ್ನು ಅಥವಾ ವಿಶೇಷವಾದ ಅತಿಮಾನುಷ ಶಕ್ತಿಯನ್ನು ನೇರವಾಗಿ ಕಂಡಿಲ್ಲ. ಆದರೆ ನಾವು ಕಾಣದ್ದೆಲ್ಲಾ ಇಲ್ಲಾ ಎಂದರೆ ಅದೂ ಕೂಡ ತಪ್ಪೇ ತಾನೇ ? ವಿಜ್ಞಾನಿಯೊಬ್ಬ ವಿಶ್ಲೇಷಿಸಿದ ಸೂತ್ರವನ್ನು ಮತ್ತೊಬ್ಬ ವಿಜ್ಞಾನಿ ಅನುಸರಿಸಿದಾಗ ಮಾತ್ರ ಮೊದಲಿನಾತ ಹೇಳಿದ ಉತ್ತರ ನಮಗೆ ದೊರೆಯುತ್ತದೆ ಅಲ್ಲವೇ ?

  ಕೆಲವರಿಗೆ ಅವರ ಮನೋಸ್ಥಿತಿಗೆ ಮೂರ್ತಿಯಿರದೇ ಏಕಾಗ್ರತೆ ಬರುವುದಿಲ್ಲ. ಕೇವಲ ಏಕಾಗ್ರತೆ ಪಡೆಯುವ ಸರಳ ಸಾಧನವಾಗಿ ಕಲೆಯ ರೂಪದ ಕಲ್ಲಿನಲ್ಲಿ ಇಂತಿಂಥಾ ದೇವರೆಂದು ಕರೆದು ಪೂಜಿಸುತ್ತೇವೆ.

  ೨. ಪೂಜೆ ಮಾಡುವಾಗ ಮಂತ್ರಗಳನ್ನು ಉಪಯೋಗಿಸುತ್ತೇವೆ ನಿಜ. ಆದರೆ ಅಲ್ಲಿ ಇಂತಿಂಥಾ ದೇವರಿಗೇ ಇಂತಿಂಥಾದ್ದು ಎಂದು ಯಾರು ಬರೆದರು ? ಅಥವಾ ಇವೆಲ್ಲಾ ವೇದಗಳಲ್ಲಿ ಇಲ್ಲವೇ ?

  ವೇದ ಹೇಗೇ ಹುಟ್ಟಿರಲಿ ಅದೊಂದು ಅಗಣಿತ ಜ್ಞಾನದ ಆಗರ ಎಂಬುದು ಅರ್ಥಮಾಡಿಕೊಂಡವರಲ್ಲಿ ನಿರ್ವಿವಾದದ ವಿಷಯ. ವೇದ ಅಪೌರುಷೇಯ ಎಂಬ ವಿಭಾಗದವನು ನಾನು. ವೇದಗಳು ಋಷಿಮುನಿಗಳ ಪ್ರಮುಖವಾಗಿ ವ್ಯಾಸರ ಬಾಯಿಂದ ಬಂದಿದ್ದು ಎಂದು ನಾವು ತಿಳಿದಿದ್ದೇವಲ್ಲ ಈ ಮಾತನ್ನು ಆಧರಿಸುವುದಾದರೆ ವ್ಯಾಸರಿಗೂ ಮೊದಲು ಋಷಿಮುನಿಗಳಿರಲಿಲ್ಲವೇ ? ಇದ್ದರು. ಹಾಗಾದ್ರೆ ಅವರು ಪೂಜೆಮಾಡುತ್ತಿರಲಿಲ್ಲವೇ ? ಮಾಡುತ್ತಿದ್ದರು. ಪ್ರಳಯಕಾಲದಲ್ಲಿ ಉಳಿದುಕೊಳ್ಳಬಹುದಾದ ಅಪರೂಪದ ಆಸ್ತಿಗಳಲ್ಲಿ ವೇದವೂ ಸೇರಿದೆ.[ ನಾಲ್ಕೂ ವೇದಗಳನ್ನೂ ಸೇರಿಸಿ ವೇದ ಎಂದಿಟ್ಟುಕೊಳ್ಳೋಣ. ] ಪುಸ್ತಕ ರೂಪದಲ್ಲಿರುವ ವೇದದ ಪ್ರತಿಗಳು ನಾಶವದರೂ ಮತ್ತೆ ಮತ್ತೆ ಮಹರ್ಷಿಗಳು ಹುಟ್ಟಿ ಅವರ ಬಾಯಿಂದ ವೇದ ಹರಿದು ಬರುವುದು ಸತ್ಯ. ಪ್ರಸಕ್ತ ನಮಗೆ ದೊರೆತಿದ್ದು ವೇದವ್ಯಾಸರ ಬಾಯಿಂದ ಹೊರಬಂದ ವೇದ. ದ್ವಾಪರಾಯುಗದಲ್ಲಿ ಪ್ರಾಯಶಃ ಭಾಗಶಃ ಪ್ರಳಯವಾದುದರಿಂದ ಮತ್ತೆ ವೇದದ ಹುಟ್ಟಿಗೆ ಋಷಿಗಳು ಜನಿಸಬೇಕಾಗಿ ಬರಲಿಲ್ಲ ಎನಿಸುತ್ತದೆ. ಪ್ರತೀ ವೇದಮಂತ್ರಗಳನ್ನೂ ಬಳಸಿ ಅನುಭವಿಸಿ ಆ ಮಂತ್ರಗಳಲ್ಲಿರುವ ಮೂಲ ದೇವಾನುದೇವತೆಗಳನ್ನು ಆಯಾಯ ರೂಪಗಳಲ್ಲಿ ಪ್ರತ್ಯಕ್ಷ ಕಂಡ ಋಷಿಗಳೂ ಇದ್ದಾರೆ. ಅವರು ಆ ವೇದ ಮಂತ್ರಗಳಿಗೆ ಕೆಲವು ಆಯಾಮಗಳನ್ನು ದೈವೇಚ್ಛೆಯಂತೇ ಅವರು ಕಲ್ಪಿಸಿ ಮಂತ್ರದೃಷ್ಟಾರರು ಎನಿಸಿದ್ದಾರೆ. ಅಂತಹ ಮನೀಷಿಗಳ ಪ್ರೇರಣೆಯಂತೇ ಅವರವರ ಸಮಕಾಲೀನ ಶಿಲ್ಪಿಗಳು ಮೂರ್ತಿಗಳನ್ನೋ, ಕಲಾವಿದರು ಚಿತ್ರಗಳನ್ನೋ ಕೆತ್ತಿದರು/ಬರೆದರು. ದೀಪವನ್ನೇ ಕಾಣದ ಮನುಷ್ಯನ ಕಾಲವೊಂದಿತ್ತು: ಆದಿಮಾನವ ಕಾಲ ಎಂದು ಕೇಳಿದ್ದೇವೆ, ಆಗ ಅವರಿಗೆ ದೀಪದ ಪರಿಕಲ್ಪನೆ ಬರಲು ಸಾಧ್ಯವಿತ್ತೇ? ಮೊದಲಾಗಿ ಬೆಂಕಿ-ಆಮೇಲೆ ದೀಪ ಅಲ್ಲವೇ ? ಅಂತೆಯೇ ದೀಪವನ್ನು ಉರಿಸುವಾಗ ಸ್ಪಷ್ಟವಾದ ಆಕಾರವೊಂದು ಬೇಕೇ ಬೇಕು, ಇಲ್ಲದಿದ್ದರೆ ಅದು ದೀಪ ಎನಿಸಿಕೊಳ್ಳುವುದಿಲ್ಲವಲ್ಲಾ? ಇದನ್ನೇ ಮನದಂದು ತಮ್ಮ ಯೋಗದ ದಿವ್ಯದೃಷ್ಟಿಯಿಂದ ಮುಂದಿನ ಪೀಳಿಗೆಗೆ ಮಹರ್ಷಿಗಳು ದಾನಮಾಡಿದ/ಧಾರೆಯೆರೆದ ವಿದ್ಯೆ ವೇದ. ತಾವು ಏರಿದ ಮಟ್ಟವನ್ನು ಎಲ್ಲರೂ ಏರಲು ಅದಕ್ಕೆ ಸೋಪಾನವಾಗಿ ಅಷ್ಟಾಂಗಯೋಗ ಪ್ರಕ್ರಿಯೆಯನ್ನೂ, ಅದಕ್ಕೂ ಮೊದಲಾಗಿ ಏಕಾಗ್ರತೆಗಾಗಿ ಮೂರ್ತಿಪೂಜೆಯನ್ನು ಹೇಳಿದ್ದಾರೆ. ರಾಜನಿಲ್ಲದ ಸಿಂಹಾಸನಕ್ಕೆ ಏನೇ ಸೇವೆ ಸಲ್ಲಿಸಿದರೂ ಅದೊಂಥರಾ ಗೌಣ ಅಲ್ಲವೇ? ಅದೇ ರೀತಿ ಮೂರ್ತಿಯಿಲ್ಲದೇ ಪೂಜಿಸಿನೋಡಿ ! ವೇದ ದೇವರನ್ನು ಇಂಥದ್ದೇ ರೂಪದಲ್ಲಿ ಪೂಜಿಸಿ ಎಂದು ಕಟ್ಟಿಹಾಕುವುದಿಲ್ಲವಲ್ಲ ! ನಮನಮಗೆ ಬೇಕಾದ ರೂಪದಲ್ಲಿ, ನಮ್ಮಿಷ್ಟದಂತೇ ಪೂಜಿಸುವ ಔದಾರ್ಯವನ್ನೂ, ಅವಕಾಶವನ್ನೂ ಋಷಿಗಳು ಕೊಟ್ಟರು. ಮೂರ್ತಿಯನ್ನು ನೋಡುತ್ತಿದ್ದರೇ ಮನೋ ನಿಗ್ರಹಮಾಡಲಾಗದ ನಮಗೆ ಮೂರ್ತಿಯಿಲ್ಲದೇ ತಂತಾನೇ ಮನಸ್ಸು ನಿಗ್ರಹವಾಗುವ ಮಟ್ಟ ಇನ್ನೂ ಬರಬೇಕಿದೆ. ದೇವರೆಂಬ ಶಕ್ತಿ ನಿರ್ವಿಕಾರ ಎನಿಸಿಕೊಂಡಿದ್ದರೂ ಅದರ ಕಲ್ಪನೆ ನಮಗೆ ಬರುವುದು ಬೌದ್ಧಿಕವಾಗಿ ನಾವು ಸಿದ್ಧಿಪಡೆದಾಗ ಮಾತ್ರ!

  ReplyDelete
 25. ೩. ಹಿಂದೂ ಧರ್ಮ ಮೂರ್ತಿ ಪೂಜೆಗಳಿರುವುದರಿಂದ ವ್ಯಾಪಕವಾಗಿ ಹರಡಿಲ್ಲ ?

  ಇದು ಕಾರಣವೇ ಅಲ್ಲ. ಹಿಂದೂಧರ್ಮದ ಮೂಲ ಆಶಯ ಅಹಿಂಸೆ. ಅಹಿಂಸೆಯನ್ನು ಅನುಸರಿಸಲು ಆಗದ ಜನ ಬೇರೇ ಮಾರ್ಗಗಳನ್ನು ಹುಡುಕುತ್ತಿದ್ದರು. ತಮ್ಮ ಜಿಹ್ವಾ ಚಾಪಲ್ಯವನ್ನು ಹದ್ದುಬಸ್ತಿನಲ್ಲಿಡಲಾಗದೇ ಮಿಕ್ಕ ಹಲವು ಧರ್ಮಗಳ ದಾರಿ ಹಿಡಿದು ಅಲ್ಲಿಗೆಲ್ಲಾ ಹೋಗಿ ಅಲ್ಲೂ ತಮ್ಮದೇ ಆದ ಹಿಂಸಾತ್ಮಕ ಕ್ರಮಗಳನ್ನೇ ಮುಂದುವರಿಸಿದರು. ಕೆಲವು ಧರ್ಮಗಳು ಹಿಂಸೆಯನ್ನು ಅಲ್ಲಗಳೆಯಲಿಲ್ಲವಾಗಿ ಅಂಥವರಿಗೆ ಅಲ್ಲಿ ಅನುಕೂಲವೇ ಆಯಿತು. ಸನಾತನ ಅಂದರೆ ಯಾವುದೇ ಒಬ್ಬರಿಂದ ಚಾಲಿತವಾದ ಧರ್ಮ ಹಿಂದೂಧರ್ಮವಲ್ಲ. ನಮ್ಮೊಳಗೇ ಹಲವುತೆರನಾದ ಕಚ್ಚಾಟಗಳಿದ್ದರೂ ಪರಧರ್ಮ ಸಹಿಷ್ಣುತೆಯನ್ನು ಅಪಾರವಾಗಿ ಹೊಂದಿದೆ. ಯಾರನ್ನೂ ಬಲವಂತವಾಗಿ ಹಿಡಿದಿಟ್ಟುಕೊಳ್ಳುವ, ಹೀಗೆಯೇ ಮಾಡಿ ಎನ್ನುವ ಕಟ್ಟುಕ್ಕಟ್ಟಳೆ ಇದರಲ್ಲಿಲ್ಲ. ಸನಾತನ ಧರ್ಮವೊಂದು ಬದುಕುವ ಕಲೆ: ತನ್ನಿಂದ ಇತರ ಜೀವಿಗಳಿಗೆ, ವಸ್ತುಗಳಿಗೆ, ವ್ಯಕ್ತಿಗಳಿಗೆ ಆದಷ್ಟೂ ಕಮ್ಮಿ ತೊಂದರೆಕೊಡುತ್ತಾ, ಇಹ-ಪರಗಳ ವ್ಯಾಪ್ತಿಯನ್ನರಿತು, ಜನ್ಮಾಂತರಗಳ ಕರ್ಮಬಂಧನದಿಂದ ಬಿಡಿಸಿಕೊಳ್ಳುವ ಕಲೆ. ಆಚರಣೆಗಳ ಅರ್ಥ ಮತ್ತು ಕಾರಣಗಳನ್ನು ತಿಳಿದುಕೊಳ್ಳದೇ " ಇದು ಸರಿ, ಇದು ತಪ್ಪು" ಎನ್ನುವದರ ಬಗ್ಗೆ ನಾವೇಕೆ ಚಿಂತಿಸಬೇಕು.

  ಯಾರೋ ದಾರಿಹೋಕ ’ಪ್ರಾಜ್ಞ’ ಅಂತ ಕರೆಸಿಕೊಂಡು ಏನೋ ಹೇಳಿಹೋಗಿದ್ದರೆ ಅದನ್ನು ಗಾಳಿಗೆ ತೂರಿಬಿಡಬಹುದಿತ್ತು. ಆದರೆ ಹೇಳಿದವರು ಎಲ್ಲವನ್ನೂ ಅರಿತ ಪ್ರಾಜ್ಞರು ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ನಾವು ಕಾಣಬಹುದಾಗಿದೆ. ಹುರುಳಿಲ್ಲದ ತತ್ವಗಳಾಗಿದ್ದರೆ ಇಷ್ಟೊತ್ತಿಗೆ ಎಲ್ಲೋ ಹೋಗುತ್ತಿದ್ದವು. ಏನೋ ಇದೆಯೆಂಬುದು ಇತರ ಧರ್ಮಾನುಯಾಯಿಗಳಿಗೂ ಗೊತ್ತಿದೆ. ನಾವು ಬರಿದೇ ಮನಸ್ಸಿನ ಮೇಲೆ ಮತ್ತಷ್ಟು ಮುಸುಕು ಕವಿಸಿಕೊಳ್ಳುವುದಕ್ಕಿಂತ ಮೂಲವಾಗಿ ದಾರ್ಶನಿಕರು ಹೇಳಿದ ಆಚರಣೆಗಳನ್ನು ಅನುಸರಿವುದು ಒಳಿತು. ವಿಶ್ವವಿದ್ಯಾಲಯ ಹುಟ್ಟಿಕೊಳ್ಳುವುದು ಹಲವು ಅನುಭಾವಿಗಳ ಅನುಭವದಿಂದ ಬರೆದ ಶಾಸ್ತ್ರಗಳಮೇಲಲ್ಲವೇ ? ಹಾಗಾದ್ರೆ ಅವು ನಮಗೆ ಹಿಡಿಸದಿದ್ದರೆ ಆ ಶಾಸ್ತ್ರವೇ ಸುಳ್ಳು ಎನ್ನಲು ಆದೀತೇ ? ಅದೇ ರೀತಿ ಸನಾತನ ಧರ್ಮವೇ ಒಂದು ವಿಶ್ವವಿದ್ಯಾನಿಲಯ. ನಾವಿನ್ನೂ ಪ್ರೀ ಕೆ.ಜಿ. ಹಂತದಲ್ಲೇ ಇದ್ದೇವೆ! ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ, ಎಲ್ಲರಿಗೂ ನಮಸ್ಕಾರ

  ReplyDelete
 26. [ಮನದಂದು]
  ನೀವು ಮನಗಂಡು ಎಂದು ಟೈಪ್ ಮಾಡಿದಿರಿ ಎಂದು ಕೊಳ್ಳುತ್ತೇನೆ.

  ReplyDelete
 27. ’ಮನದಂದು’ ಎಂದರೆ ಮನಸಿಗೆ ತೆಗೆದುಕೊಂಡು, ಗ್ರಹಿಸಿ, ಪರಾಂಬರಿಸಿ, ಮನದಟ್ಟುಮಾಡಿಕೊಂಡು ಎಂಬೆಲ್ಲಾ ಅರ್ಥಗಳಿವೆ, ಶಬ್ದ ಸರಿಯಾಗೇ ಇದೆ,ಶ್ರೀಯುತ ಶ್ರೀಧರ್ ತಮ್ಮ ಶಬ್ದ ಚೌಕಾಸಿಗೆ ಧನ್ಯವಾದಗಳು

  ReplyDelete
 28. Sir,

  I write what I feel right.I dont have any intention to target anyone's
  views.I always talk in general which concerns everyone.I also intend to
  keep the dignity of the discussion intact.

  Vishal

  ReplyDelete
 29. ಶಬ್ದ ಚೌಕಾಸಿ ಮಾಡುವಷ್ಟು ಸಮರ್ಥ ನಾನಲ್ಲ. ಸಾಮಾನ್ಯವಾಗಿ ಆತುರದಲ್ಲಿ ಬರೆಯುವಾಗ ಬಹಳಷ್ಟು ತಪ್ಪುಗಳು ಟೈಪಿಸುವುದು ಸಾಮಾನ್ಯ. ಹಾಗೆ ಆಗಿರಬಹುದೆಂದು ಊಹಿಸಿ ನಿಮ್ಮ ಗಮನಕ್ಕೆ ತಂದೆ ಅಷ್ಟೆ. ಕನ್ನಡಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಲ್ಲಿ ಮನದಂದು-ಮನಗಂಡು ಎರಡೂ ಪದಗಳು ನನ್ನ ಕಣ್ಣಿಗೆ ಬೀಳಲಿಲ್ಲ.

  ReplyDelete
 30. ಚರ್ಚೆಯಲ್ಲಿ ಪಾಲ್ಗೊಂಡವರೆಲ್ಲರೂ ಅಮೂಲ್ಯ ವಿಷಯಗಳನ್ನು ತಿಳಿಸುವುದರೊಂದಿಗೆ ಮನಃಪೂರ್ವಕವಾಗಿ ಆರೋಗ್ಯಕರ ಚರ್ಚೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ.

  ಶ್ರೀ ವಿಶಾಲ್ ರವರು ತಿಳಿಸಿದಂತೆ ಕೆಲವು ಸಂಪ್ರದಾಯದ ಹೆಸರಿನಲ್ಲಿ ಮಾಡುವ ಅನಾಚಾರಗಳನ್ನು , ದುಷ್ಟ ಸಂಪ್ರದಾಯಗಳನ್ನು ಸೂಕ್ತ ರೀತಿಯಲ್ಲಿ ವಿರೋಧಿಸಬೇಕು. ಸಮಾಜವನ್ನು ಸೂಕ್ತ ರೀತಿಯಲ್ಲಿ ತಿದ್ದುವ ಕೆಲಸ ಸುಲಭದ್ದಲ್ಲ.ವಿರೋಧಿಸಿದರೆ ಬದಲಾವಣೆ ಆಗುವುದೆ ಎಂಬುದು ಪ್ರಶ್ನೆ. ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು. ಸಣ್ಣ ಉದಾಹರಣೆ ಕೊಡಬಹುದು. ಧೂಮಪಾನ ಮಾಡುವುದು, ಮದ್ಯ ಸೇವಿಸುವುದು ಕೆಟ್ಟದ್ದು ಎಂದು ಅದನ್ನು ಮಾಡುವವರಿಗೂ ಗೊತ್ತಿರುತ್ತದೆ. ಅವರನ್ನು 'ಹಾಗೆ ಮಾಡಕೂಡದು' ಎಂದು ಕಡ್ಡಾಯ ಮಾಡಿದರೆ ಹಠದಿಂದ ಅದನ್ನು ಮುಂದುವರೆಸುತ್ತಾರೆಯೆ ಹೊರತು ಬಿಡುವುದಿಲ್ಲ.ಬದಲಾಗಿ ಅವರಿಗೆ ಸೂಕ್ತ ರೀತಿ ತಿಳುವಳಿಕೆ ಹೇಳಿ, ಮನವೊಲಿಸಿ ಹೇಳಿದರೆ ಬಿಡುವ ಸಾಧ್ಯತೆ ಇರುತ್ತದೆ.
  ಈ ಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸಲ್ಮಾನರು ದೇವರನ್ನು 'ನಿರಾಕಾರ'ನಾಗಿ ಆರಾಧಿಸುವವರು. ಮೂರ್ತಿಪೂಜೆಯನ್ನು ಅವರು ವಿರೋಧಿಸುವುದಲ್ಲದೆ ಮೂರ್ತಿಪೂಜೆ ಮಾಡುವವರನ್ನು, ಇತರರನ್ನು ಕಾಫಿರರು ಎನ್ನುವರು. ಭಯೋತ್ಪಾದನೆ ಸಹ ಧರ್ಮದ ಹೆಸರಿನಲ್ಲೇ ಮಾಡುತ್ತಿರುವುದರ ಪರಿಣಾಮ ಏನಾಗಿದೆ? ಅವರ ಕಾರ್ಯವನ್ನು ದೇವರನ್ನು ನಿರಾಕಾರನಾಗಿ ಭಾವಿಸುವ ಇತರ ಧರ್ಮಗಳವರೂ ಒಪ್ಪುವುದಿಲ್ಲ. ಅಸಹಿಷ್ಣುತೆ ಅವರನ್ನು ಮತ್ತು ಇತರ ಧರ್ಮೀಯರನ್ನು ಹಾಳುಗೆಡವುತ್ತಿದೆ.
  ಇನ್ನು ಹಿಂದೂಗಳಲ್ಲಿ ಮೂರ್ತಿ ಪೂಜೆ ಮಾಡುವವರಿಂದ ಸಮಾಜದ ಮೇಲೆ ದುಷ್ಟ ಪರಿಣಾಮ ಉಂಟು ಮಾಡುವಂತಹ ಸಂಗತಿಗಳು ಇದ್ದಲ್ಲಿ (ಜಾತಿ ಭೇದ, ಪಂಕ್ತಿ ಭೇದ, ಇತ್ಯಾದಿಗಳು) ಅದನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಲೇಬೇಕು. ಆದರೆ ಮೂರ್ತಿ ಪೂಜೆಯ ಮೂಲಕ ವೈಯಕ್ತಿಕವಾಗಿ ಸಮಾಧಾನ ಪಡಲು ಸಾಧ್ಯವಿರುವವರನ್ನು -ಅಂತಹವರಿಂದ ಸಮಾಜಕ್ಕೆ ತೊಂದರೆಯಾಗದಿದ್ದಲ್ಲಿ- ವಿರೋಧಿಸುವ ಅಗತ್ಯತೆ ಏನಿದೆ? ನಾವು ಮಾಡಬಹುದಾದುದು ಏನೆಂದರೆ ನಮ್ಮ ಅರಿವಿಗೆ ಬರುವ ಸತ್ಯಗಳನ್ನು ಹೆಚ್ಚು ಹೆಚ್ಚಾಗಿ ಎಲ್ಲರ ಗಮನಕ್ಕೆ ತರುತ್ತಾ ಹೋಗುವುದು, ಉಪನ್ಯಾಸಗಳು, ಕಾರ್ಯಾಗಾರಗಳನ್ನು ಏರ್ಪಡಿಸುವುದು, ಇತ್ಯಾದಿ. ನಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕೆಂದೇನೂ ಇಲ್ಲ. ಒಪ್ಪಬೇಕೆಂದು ಬಯಸಬಹುದು ಅಷ್ಟೆ.

  ReplyDelete
 31. ಹಿ೦ದೂ ಧರ್ಮದಲ್ಲಿ ಮೂರ್ತಿ ಪೂಜೆ ವಿರೋಧಿಗಳಾಗಲೀ ಯಾ ಮೂರ್ತಿ ಪೂಜೆ ಮಾಡುವವರದಾಗಲೀ ಪ್ರತ್ಯೇಕ ಗು೦ಪುಗಳಾಗಲೀ, ಅವರು ಭಿನ್ನಾಭಿಪ್ರಾಯಗಳನ್ನು ವಿವಾದಗಳ ಮಟ್ಟಕ್ಕೆ ಎಳೆದುಕೊ೦ಡು ಹೋದುದಾಗಲೀ ನನ್ನ ಅರಿವಿಗೆ ಬ೦ದಿಲ್ಲ. ಮೂರ್ತಿ ಪೂಜೆ ಮಾಡುವವರು ಹಾಗೂ ಅದರ ವಿರೋಧಿಗಳೂ ಪರಸ್ಪರ ಚೆನ್ನಾಗಿಯೇ ಇದ್ದಾರೆ. ದೇವರಿಗಾಗಿ ( ಶೈವರು ಹಾಗೂ ವೈಷ್ಣವರು) ಹೊಡೆದಾಡಿದ್ದಾರೆಯೇ ವಿನ: ಮೂರ್ತಿ ಪೂಜೆಗಾಗಿ ಯಾ ಅದನ್ನು ವಿರೋಧಿಸುವುದಕ್ಕಾಗಿ ಆಗಲೀ ಹೊಡೆದಾಡಿದ್ದನ್ನು ನಮ್ಮ ಇತಿಹಾಸದಲ್ಲಿ ನಾನು ಓದಿಲ್ಲ. ಆದ್ದರಿ೦ದ ಮೂರ್ತಿ ಪೂಜೆ ಯಾ ಅದರ ವಿರೋಧ ಎರಡೂ ಹಿ೦ದೂ ಧರ್ಮದ ಬೆಳವಣಿಗೆಗೆ ಯಾ ನಮ್ಮ ಧಾರ್ಮಿಕ ಬೆಳವಣಿಗೆಗೆ ಒ೦ದು ತೊಡರುಗಾಲಾಗಿ ಪರಿಣಮಿಸಲಾರದು.ಹಾಗೆಯೇ ಆಸ್ತಿಕರು ಹಾಗೂ ನಾಸ್ತಿಕರ ನಡುವೆ ಕೂಡಾ ಎ೦ದಿಗೂ ವಿವಾದಗಳು, ಗಲಭೆಗಳು ಉಧ್ಬವಿಸಲಾರದು.. ಅವೂ ಕೂಡಾ ನಮ್ಮ ಧರ್ಮದ ಬೆಳವಣಿಗೆಗೆ ತೊಡರು ಗಾಲಾಗಿ ಪರಿಣಮಿಸವು. ನಾಸಿಕರು ಹಾಗೂ ಆಸ್ತಿಕರಿಬ್ಬರೂ ಸೌಹಾರ್ದವಿ೦ದ ಇರುವುದನ್ನು ನಾವು ಕಾಣಬಹುದು. ಒಮ್ಮೆ ಡಾ|| ಯು.ಆರ್. ಅನ೦ತಮೂರ್ತಿಯವರು ನಮ್ಮಲ್ಲಿಗೆ ಬ೦ದಾಗ.. ಅವರು ದೇವರ ದರ್ಶನ ಮಾಡದಿದ್ದುದನ್ನು ನಾನು ಕ೦ಡು, ಅದರ ಬಗ್ಗೆ ಕೇಳಿದಾಗ ಅವರು “ ನನಗೆ ಇಷ್ಟವಿಲ್ಲ“ ಎ೦ದರು.
  ನಾನು ಕೇಳಿದೆ. “ನೀವು ಇದೇ ಮುಖ ಮ೦ತಪದ ಮೆಟ್ಟಿಲನ್ನು ಹತ್ತಿ ಬರುತ್ತಿರುವಾಗ ಎದುರಿಗೇ ಕಾಣಲಿಲ್ಲವೇ?“
  “ಕ೦ಡಿತು.. ಅದೊ೦ದು ಸು೦ದರ ಪ್ರತಿಮೆ ನನ್ನ ಲೆಕ್ಕದಲ್ಲಿ“
  ನಾನು ಸುಮ್ಮನಾದೆ. ವಾದ ಮಾಡಲು ಹೋಗಲಿಲ್ಲ. ದೊಡ್ಡವರೊ೦ದಿಗೆ ದುರಹ೦ಕಾರದ ವರ್ತನೆ ಎನಿಸಿಕೊಳ್ಳಬಹುದೆ೦ದು. ಆದರೆ ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆ ಏನೆ೦ದರೆ- ನಾನು ಒ೦ದು ದೇವಸ್ಥಾನಕ್ಕೆ ಹೋದಾಗ.. ಮೆಟ್ಟಿಲನ್ನು ಹತ್ತಿ ಬರುವಾಗ ನನ್ನ ಸಮಾ ಎದುರಿಗೆ ದೇವರ ಮೂರ್ತಿಯ ದರ್ಶನವಾದರೆ.. ನನ್ನ ಇಮೇಜ್ ನಷ್ಟವಾಗಬಹುದೆ೦ದು ಕೈ ಮುಗಿಯದಿದ್ದರೂ ( ಯಾರಾದರೂ ನೊಡಿಯಾರೆ೦ಬ ಭಯದಿ೦ದ), ಮನಸ್ಸಿನಲ್ಲೊಮ್ಮೆ ವ೦ದಿಸುವುದಿಲ್ಲವೇ? ಅಥವಾ ಆ ಭಾವನೆಯೇ ಉದ್ಭವಿಸುವುದಿಲ್ಲವೇ? ಅಥವಾ ಮನಸ್ಸಿನಲ್ಲಿ ವ೦ದಿಸಿ,ಎದುರಿಗೆ ಮಾತ್ರ ಕೈ ಮುಗಿಯದಿದ್ದರೆ ಅದೆ೦ಥಾ ನಾಸ್ತಿಕತನ? ಇದು ಭಾವನೆಗಳ ಪ್ರಶ್ನೆ.. ಮನಸ್ಸಿನ ಪ್ರಶ್ನೆ.. ನನ್ನ ಪ್ರಕಾರ “ನಾಸ್ತಿಕರೂ ಆಸ್ತಿಕತನವನ್ನು ತೋರಿಸದೇ..ನಾಸ್ತಿಕತನವನ್ನು ವ್ಯಕ್ತಪಡಿಸುವ ಆಸ್ತಿಕರು“

  ReplyDelete
 32. ದೇವರ ಬಗ್ಗೆ ವಿಮರ್ಶೆ ಮಾಡುವಾಗ ಮೊದಲಿಗೆ ಕೆಲವು ವೈರುಧ್ಯಗಳನ್ನು ಬಿಡಿಸಿಕೊಳ್ಳಬೇಕಾಗಿದೆ.
  - ಭಗವಂತನನ್ನು ಸರ್ವವ್ಯಾಪಿ ಎಂದು ಹೇಳುವ ಉಸುರಿನಲ್ಲೇ ಭಗವಂತನ ಚಿತ್ರ, ರೂಪ,ಆಕಾರಗಳನ್ನು ಒಪ್ಪುತ್ತೇವೆ. ಆದರೆ, ಯಾವುದೇ ಚಿತ್ರ, ರೂಪ, ಆಕಾರವು ಸರ್ವವ್ಯಾಪಿಯಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ.
  ಸರ್ವವ್ಯಾಪಿ ಎನ್ನುವವರು ಚಿತ್ರ, ಆಕಾರಗಳನ್ನು ಸ್ವೀಕರಿಸುವಂತಿಲ್ಲ.
  ರೂಪ, ಆಕಾರವನ್ನು ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ.
  ಈ ಗೊಂದಲವನ್ನು ಮೊದಲು ಬಿಡಿಸೋಣವೇ?
  -ಸುಧಾಕರ ಶರ್ಮಾ

  ReplyDelete
 33. ವಿಶಾಲ್‌ರವರೇ, ಕೆಲವು ಪಾಶ್ಚಿಮಾತ್ಯ ಪಂಡಿತರು, ಹಿಂದು ಜೀವನ ವಿಧಾನವನ್ನ ತಮ್ಮ ಧರ್ಮದ ಚೌಕಟ್ಟಿನಂತೇ ನೋಡಲು ಪ್ರಯತ್ನಿಸಿದರು.. ಧರ್ಮವೆಂದ ಮೇಲೆ ಒಂದು ಪರಮೋನ್ನತ ಗ್ರಂಥ ಬೇಕೆನ್ನುವುದು ಸೆಮೆಟಿಕ್ ಧರ್ಮಗಳ ದೃಷ್ಠಿಕೋನ.. ವೇದಗಳನ್ನು ಆ ಪಂಡಿತರು ಹಿಂದು ಧರ್ಮಗ್ರಂಥವಾಗಿ ಆರೋಪಿಸಿದರು.. ಆದರೆ ಸೆಮೆಟಿಕ್ ಧರ್ಮಗಳ ದೃಷ್ಟಿಕೋನದಲ್ಲೇ ಓರಿಯಂಟಲ್ ಧರ್ಮಗಳನ್ನ ನೋಡುವ approach ತಪ್ಪು..

  ಒಂದು ಸರಳ ಸತ್ಯವನ್ನು ತಿಳಿಸಬಯಸುತ್ತೇನೆ.. ಎಲ್ಲವೂ ಪರಮಾತ್ಮನ ಸ್ವರೂಪ ಎಂದು ನಂಬುವ ಹಿಂದು ಸಂಸ್ಕೃತಿ ಎಲ್ಲವನ್ನೂ ಆರಾಧಿಸುವುದಿಲ್ಲ.. ಕಲ್ಲು ಕೂಡ ಒಂದು ಧಾತುವಷ್ಟೆ... ದೇವಾಲಯದ ಮೆಟ್ಟಿಲ ಕಲ್ಲಿಗೂ, ಒಳಗೆ ಆರಾಧಿಸಲ್ಪಡುವ ಕಲ್ಲಿಗೂ ಧಾತುವಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂದು ಪ್ರತಿ ಹಿಂದೂವೂ ಬಲ್ಲ.. ಖಂಡಿತವಾಗಿಯೂ ಒಳಗಿರುವ ಕಲ್ಲಿನಲ್ಲಿ ಹೇಗೆ ದೇವರಿರುವನೋ, ಮೆಟ್ಟಿಲ ಕಲ್ಲಿನಲ್ಲು ದೇವರಿದ್ದಾನೆ... ಆದರೆ ಆ ಕಲ್ಲಿಗೆ ದೈವಿಕ ನೆಲೆ ಒದಗುವುದು ನಾವು ಮಾಡುವ ಆವಾಹನೆ, ಪ್ರತಿಷ್ಠಾನಗಳೆಂಬ ಕ್ರಿಯೆಗಳಿಂದ.. ಆಗಮ ಶಾಸ್ತ್ರವೆಂಬ ಒಂದು ವಿದ್ಯಾ ಶಾಖೆಯೇ ಅದರ ಬಗೆಗೆ ಇದೆ...

  ಹೀಗೆ ವಿಗ್ರಹರೂಪಿಯಾದ ಕಲ್ಲಿಗೆ ನಾವು ಆರಾಧನೆಯ ಉದ್ದೇಶಕ್ಕಾಗಿ ಬಂದು ನೆಲೆಸು ಎಂದು ದೈವವನ್ನು ಆಹ್ವಾನಿಸುತ್ತೇವೆ... ಅವನು ಬಂದು ನೆಲೆಸಬೇಕಿಲ್ಲ.. ಆ ಕಲ್ಲಿನಲ್ಲೆ ಸುಪ್ತವಾಗಿರುವ ದೈವಿ ಶಕ್ತಿ ಜಾಗೃತವಾಗಿದೆಯೆಂಬ ಭಾವನೆ ನಮ್ಮ ಮನಸ್ಸಿಗೆ ಬರಲಿ ಎಂದು. ಅದು ನಮ್ಮ ಭಾವನೆಗಾಗಿ.. ಮನಸ್ಸಿನ ತೃಪ್ತಿಗಾಗಿ..

  ಪ್ರತಿ ವಿಗ್ರಹಾರಾಧಕ ಹಿಂದೂವಿಗೂ ಗೊತ್ತು, ದೈವಕ್ಕೆ ನಾವು ಆಹಾರ ಕೊಡಬೇಕಿಲ್ಲವೆಂದು.. ನಾವೇನೂ ಮೂರ್ಖರಲ್ಲ.. ಆದರೂ ನೈವೇದ್ಯವಿಡುತ್ತೇವೆ... ನಮ್ಮ ಮನೆಗೆ ಗಣೇಶನ ಚೌತಿಯಂದು ಗಣೇಶನನ್ನು ಆಹ್ವಾನಿಸುತ್ತೇವೆ.. ಕಡುಬು ಕೊಡುತ್ತೇವೆ.. ಸಂಜೆ ನೀರಿಗೆ ಹಾಕುತ್ತೇವೆ.. ನಮಗೆ ಗೊತ್ತು.. ಅದು ಮಣ್ಣಿನ ವಿಗ್ರಹವೆಂದು.. ನಮಗೆ ಗೊತ್ತು ಅದು ಕಡುಬು ತಿನ್ನುವುದಿಲ್ಲವೆಂದು.. ನಮಗೆ ಗೊತ್ತು ಆ ಮಣ್ಣಿನ ವಿಗ್ರಹ ನೀರಿಗೆ ಹಾಕಿದ ಮೇಲೆ ಕರಗಿ ಹೋಗುತ್ತದೆ ಎಂದು.. ಆದರೆ ನಮ್ಮ ಭಾವನೆಯಲ್ಲಿ, ಆ ದೈವ ಗಣೇಶನ ರೂಪದಲ್ಲಿ (ಮಣ್ಣಿನ ವಿಗ್ರಹವಾಗಿ) ನಮ್ಮ ಮನೆಗೆ ಬಂದ, ನಮ್ಮ ಆತಿಥ್ಯ ಸ್ವೀಕರಿಸಿದ.. ಮತ್ತು ನಾವು ಕಳಿಸಿದ ಮೇಲೆ ಹೋದ.(ವಿಸರ್ಜನೆ ಮಾಡಿದಾಗ ನೀರಿನಲ್ಲಿ ಕರಗಿಹೋದ).. ನಾವ್ಯಾರೂ ಹುಚ್ಚರಲ್ಲ.. ಪೆದ್ದರೂ ಅಲ್ಲ... ಆದರೆ ದೈವಕ್ಕೆ ಆತಿಥ್ಯ ನೀಡಿದ ಧನ್ಯರು... ಆ ತೃಪ್ತಿಗೆ ಸಾಟಿಯೇ ಇಲ್ಲ... ಆದರೆ ಪ್ರತಿ ಆಸ್ತಿಕ ವಿಗ್ರಹಾರಾಧೀ ಹಿಂದೂವೂ ನಾನು ಹೇಳಿದ್ದನ್ನು ಒಪ್ಪುವ..

  ಪ್ರತಿ ರಸ್ತೆಬದಿಯ ಕಲ್ಲು ಪೂಜಾರ್ಹವಲ್ಲ.. ಹಾಗೆಂದು ಅದರಲ್ಲಿ ದೈವವಿಲ್ಲ ಎಂದು ಹಿಂದೂ ಹೇಳುವುದಿಲ್ಲ.. ಆದರೆ ಪೂಜಿಸಿಕೊಳ್ಳಬಲ್ಲ ಹಾಗೆ ಮನಸ್ಸಿಗೆ ಅನ್ನಿಸಬಲ್ಲ ಶಕ್ತಿ ಆ ಕಲ್ಲಿನಲ್ಲಿರುವ ದೈವಕ್ಕೆ ಪ್ರಾಪ್ತವಾಗಿಲ್ಲ ಅಷ್ಟೇ.. ಪೂಜಿಸಲ್ಪಡುತ್ತಿದ್ದು ಅನಂತರ ಭಗ್ನಗೊಂಡ ವಿಗ್ರಹಗಳನ್ನು ನಾವು ಪೂಜಿಸುವುದಿಲ್ಲ.. ಅದರ ಅರ್ಥ ಅದರಲ್ಲಿ ದೈವವಿಲ್ಲವೆಂದಲ್ಲ.. ಆದರೆ ಮನಸ್ಸಿಗೆ ಆ ಭಾವನೆ ತರಬಲ್ಲ ಶಕ್ತಿಯನ್ನು ಅದು ಕಳೆದು ಕೊಂಡಿದೆಯೆಂದು ಅರ್ಥ.. ದೇವಾಲಯದ ಹೊರಗಿನ ಭಿತ್ತಿಯಲ್ಲಿ ಕಾಮವನ್ನು ಸೂಸುವ ಶೃಂಗಾರ ಶಿಲ್ಪಗಳನ್ನು, ಮಿಥುನ ಶಿಲ್ಪಗಳನ್ನು ನೀವು ನೋಡಿರಬಹುದು.. ಅವು ವಿಗ್ರಹಗಳೇ.. ಅವನ್ನು ನಾವು ಪೂಜಿಸುವುದಿಲ್ಲ... ಆ ಭಾವನೆ ಮನಸ್ಸಿಗೆ ಬರುವುದಿಲ್ಲ ಎಂಬ ಕಾರಣಕ್ಕೆ....

  ಚಿಕ್ಕ ವಯಸ್ಸಿನಲ್ಲಿ ಓದಿದ್ದ ಗುರು ನಾನಕದೇವರ ಕಥೆ ನೆನಪಿಗೆ ಬರುತ್ತದೆ.. ಗುರು ನಾನಕರು ಪಶ್ಚಿಮಕ್ಕೆ ಕಾಲು ಚಾಚಿ ಕುಳಿತಿದ್ದರಂತೆ.. ಆಗ ಅಲ್ಲಿಗೆ ಬಂದ ಮುಸಲ್ಮಾನನೊಬ್ಬ ಮಕ್ಕಾದ ಕಡೆ ಕಾಲು ಚಾಚಿ ಕೂರಬೇಡವೆಂದನಂತೆ.. ನಾನಕದೇವ್ ಹೇಳಿದರು, ದೇವರಿಲ್ಲದ ಕಡೆ ನನ್ನ ಕಾಲನ್ನು ನೀನೇ ಎತ್ತಿ ಇಡು ಎಂದು... ಗಾಲಿಬ್ ಹೇಳಿದ ಶಾಯರಿ ನೀವು ಕೇಳಿರಬಹುದು.. ಮಸೀದಿಯಲ್ಲಿ ನನ್ನ ಕುಡಿಯಲು ಬಿಡು ಇಲ್ಲಾಂದ್ರೆ ದೇವನಿಲ್ಲದ ಜಾಗವಾದರೂ ತೋರಿಸು ಅಲ್ಲಿ ಹೋಗಿ ಕುಡಿಯುತ್ತೇನೆ. ಎಂದು.. ದೇವನೆಲ್ಲೆಲ್ಲೂ ಇರುವನು ಎಂಬ ಸತ್ಯವನ್ನ ಮತ್ತು ಎಲ್ಲಾ ಕಲ್ಲು ಪೂಜಾರ್ಹವಲ್ಲ ಎಂಬ ಸತ್ಯವನ್ನು ಪ್ರತಿ ಹಿಂದೂವೂ ಅರಿತಿದ್ದಾನೆ.

  ನಾನು ಭಗ್ನ ವಿಗ್ರಹಕ್ಕೆ ಪೂಜೆ ಮಾಡಬಹುದು.. ಆದರೆ ಆ ಭಗ್ನ ವಿಗ್ರಹ ನನ್ನಲ್ಲಿ ಭಕ್ತಿ ಭಾವನೆಯನ್ನು ಹೊಮ್ಮಿಸಲಾರದೇ ಹೋದಲ್ಲಿ, ನಾನೇಕೆ ಮಾಡಲಿ, ಭಕ್ತಿ ಭಾವ ಹೊಮ್ಮಿಸಿದರೆ ಯಾವ ಹಿಂದೂವು ನನ್ನನ್ನು ತಡೆಯುವುದಿಲ್ಲ.. ಆದರೆ ಅದು ವಿಕೃತಿ ಎಂದು ಖಂಡಿತ ಹೇಳಿ ಮನವರಿಕೆ ಮಾಡಲು ಸ್ವತಂತ್ರ, ಆದರೆ ನನ್ನನ್ನು ನಿರ್ಭಂಧಿಸಲು ಅಲ್ಲ.. ನಮ್ಮದು ಸೆಮೆಟಿಕ್ ಧರ್ಮಗಳಂತೆ ಹಾರ್ಡ್‌ಕೋಡೆಡ್ ಅಲ್ಲ.. ಆಗಬಾರದು ಸಹ.

  ಇದು ಒಬ್ಬ ನಾಗರಿಕನಾಗಿ, ಹಿಂದು ಧರ್ಮ ನನಗೆ ನೀಡಿದ ಸ್ವಾತಂತ್ರ್ಯವನ್ನು ಬಳಸಿ ಹೇಳುತ್ತಿದ್ದೇನೆ.

  ಇನ್ನು ವಿಗ್ರಹಾರಾಧನೆ.. ನಿರಾಕಾರ ದೈವವನ್ನ ನಂಬುವವರಿಗೆ, ವಿಗ್ರಹಾರಾಧಕರು ಕಲ್ಲು ಪೂಜಿಸುತ್ತಾರೆಂದು ಅನ್ನಿಸುತ್ತದೆ ಎಂದು ಬಲ್ಲೆ.. ನಿಮಗೆ ಕಾಣುವುದು ಧಾತು, ನಮಗೆ ಕಾಣುವುದು ದೈವ... ನೀವು ಹಾಗೆ ಅಂದು ಕೊಂಡಾಗ ನಿಮಗೆ ನಮ್ಮ ಅಜ್ಞಾನಕ್ಕೆ ಮರುಕ ಬರುತ್ತೆ.. ಹಾಗೇಯೆ ನಮಗೂ ಕೂಡ ನಮ್ಮನ್ನು ಅಜ್ಞಾನಿಗಳೆಂದುಕೊಂಡ ನಿಮ್ಮ ಬಗ್ಗೆ ಮರುಕ ಹುಟ್ಟುತ್ತೆ... ಹೇಗೆ ಗೊತ್ತೇ.. ನೀವು ಗೋಡೆಯ ಮುಂದೆ ಮಂಡಿಯೂರಿ ನಮಾಜ್ ಮಾಡುತ್ತೀರಲ್ಲ.. ಆಗ ಯಾರದರೂ ಒಬ್ಬ ಹಿಂದೂ ನೀವು ಗೋಡೆಗೆ ಪೂಜೆ ಮಾಡುತ್ತೀರಿ ಎಂದರೆ ನಿಮಗೆ ಹೇಗೆ ಅವನ ಅಜ್ಞಾನದ ಬಗ್ಗೆ ನಗು, ಕನಿಕರ ಬರುವುದೋ ಹಾಗೇ ಹಿಂದೂಗಳಿಗೂ ಅವರ ವಿಗ್ರಹರಾಧನೆಯನ್ನು ನೀವು ಕಲ್ಲನ್ನು ದೈವವೆಂದು ಕರೆಯುತ್ತಾರೆಂದು ಹೇಳಿದಾಗ ನಗು, ಕನಿಕರ ಬರುತ್ತದೆ.. ಆ ವಿಗ್ರಹ ದೈವವಲ್ಲ, ದೈವದ ಪ್ರತಿನಿಧಿ ಅಷ್ಟೇ... (Gate way ಅನ್ನಬಹುದು.)

  ನನ್ನದೇ ಬ್ಲಾಗ್ ಅನಘ ಮಾನಸ (http://anaghamanasa.blogspot.in)ದಲ್ಲಿ ಬಹಳ ಹಿಂದೆ ವೆಬ್ ದುನಿಯಾದಲ್ಲಿ ನಡೆಸಿದ ಚರ್ಚೆಯೊಂದನ್ನ, ಮಹಾಮಂಥನ ಅನ್ನುವ ಹೆಸರಿನಲ್ಲಿ, ೧೦ ಭಾಗಗಳನ್ನಾಗಿ ಮಾಡಿ ಹಾಕಿರುವೆ, ಮಹಾಮಂಥನ-೯ ರಿಂದ ತೆಗೆದ ಭಾಗವೊಂದನ್ನು ಸ್ವಲ್ಪ edit ಮಾಡಿಯಷ್ಟೇ ಇಲ್ಲಿ ಮೇಲೆ ಹಾಕಿರುವೆ.

  ReplyDelete
  Replies
  1. ಕ್ಷಮಿಸಿ, ಮಹಾಮಂಥನ-೮ ರಿಂದ ರಿಂದ ತೆಗೆದ ಭಾಗವೊಂದನ್ನು ಸ್ವಲ್ಪ edit ಮಾಡಿ ಮೇಲೆ ಹಾಕಿರುವೆ. ಮಹಾಮಂಥನ-೯ರಿಂದ ಅಲ್ಲ

   Delete
  2. ಕ್ಷಮಿಸಿ ವಿಶಾಲ್‌ರೇ #"ನೀವು ಗೋಡೆಯ ಮುಂದೆ ಮಂಡಿಯೂರಿ ನಮಾಜ್ ಮಾಡುತ್ತೀರಲ್ಲ.. " ಸಾಲುಗಳು ನಿಮ್ಮನ್ನು ಉದ್ದೇಶಿಸಿದ್ದು ಅಲ್ಲ, ಕಾಪಿ ಪೇಸ್ಟ್ ಮಾಡಿದಾಗ ಬಂದದ್ದು. ಅದರ context ನೀವು ಮೂಲದಲ್ಲಿ ನೋಡಬಹುದು.

   Delete