Pages

Saturday, April 16, 2011

“ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....”

 “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....” ಎನ್ನುವ ಶ್ರಿ ಕನಕದಾಸರ ಕೃತಿ ಮಾಯೆಯ ಮಾಯಾಜಾಲವನ್ನು ವಿಧವಿಧವಾದ ಉಪಮೆಗಳೊಂದಿಗೆ ಬಿಂಬಿಸುತ್ತದೆ. ಮಾಯೆಯ ಮೋಡಿಗೆ ಒಳಗಾಗದವರಿಲ್ಲ; ಮಾಯೆಯ ಜಾಲಕ್ಕೆ ಸಿಲುಕದವರಿಲ್ಲ ಮತ್ತು ಮಾಯೆಯ ಬಲೆಗೆ ಬಿದ್ದು ಸಂಕಟಕ್ಕೀಡಾಗದವರಿಲ್ಲ. ವಿಪರ್ಯಾಸವೆಂದರೆ, ಮಾಯೆಯೆಂದು ತಿಳಿದೂ ಅದರ ಪಾಶದಲ್ಲಿ ಸಿಲುಕಿಕೊಳ್ಳುವ ಮಾಯೆಯ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಒಂದು ರೀತಿ ಸತ್ಯವನ್ನು, ವಾಸ್ತವವನ್ನು ಮತ್ತು ನಿಜಸ್ಥಿತಿಯನ್ನು ಮರೆ ಮಾಚಿ, ಅಸತ್ಯದ ಕಡೆಗೆ, ಅವಾಸ್ತವದ ಕಡೆಗೆ ಮತ್ತು ಮಿಥ್ಯದ ಕಡೆಗೆ ನಮ್ಮನ್ನು ಹೊರಳಿಸುವ ಈ ಮಾಯೆಯ ಪ್ರಭಾವ ಅಗಾಧವಾದದ್ದು. ಮಾಯೆಗೆ ವ್ಯಾಖ್ಯಾನಗಳು ಹಲವಾರು. ಕೆಲವರಿಗೆ ಅದು ಬಂಧನವೆಂದಾದರೆ ಮತ್ತೆ ಕೆಲವರಿಗೆ ಅದು ದುರ್ಮಾರ್ಗದೆಡೆಗೆ ಒಯ್ಯುವ ಸಾಧನವೆನಿಸಬಹುದು. ಏನೇ ಆಗಲಿ, ಮಾಯೆಯ ಆಟಕ್ಕೆ ತಲೆ ಬಾಗಿದವನಿಗೆ ಅಪಾಯ, ನಷ್ಟ, ಮಾನಹಾನಿ, ದೇಹಹಾನಿ ಮುಂತಾದ ತೊಂದರೆಗಳು ಕಟ್ಟಿಟ್ಟ ಬುತ್ತಿ. ಬಂಗಾರದ ಜಿಂಕೆಯ ವೇಷದ ರಾವಣನ ಮಾಯಕ್ಕೆ ಬಲಿ ಬಿದ್ದು ನಂತರ ಕೋಟಲೆಗಳ ಸರಮಾಲೆಯನ್ನೇ ಎದುರಿಸಿದ ಸೀತಾಮಾತೆ, ಮೇನಕೆಯ ವೈಯಾರಕ್ಕೆ ಮರುಳಾಗಿ, ಬಾಗಿ, ತಪೋಭಂಗವನ್ನನುಭವಿಸಿದ ವಿಶ್ವಾಮಿತ್ರ ಋಷಿಯಿಂದ ಹಿಡಿದು ಹಗ್ಗವನ್ನು ಹಾವೆಂದು ಭ್ರಮಿಸಿ ಗೋಳಿಡುವ ಪಾಮರರ ಪರಿಪಾಟಲು ಈ ಮಾಯೆ ಯಾರನ್ನೂ ಕೈಬಿಟ್ಟಿಲ್ಲ (ಶನಿ ಗ್ರಹದ ಹಾಗೆ!) ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಜೀವನದಲ್ಲಿ ಇಂತಹ ಮೋಹ-ಪಾಶಗಳೆಂಬ ಬಲೆಗಳು ಎದುರಾದಾಗ ಜಾಗರೂಕರಾಗಿ ಅವುಗಳ ನಿಜ ಸ್ವರೂಪವನ್ನರಿತು ಮುಂದುವರೆಯುವುದು ಅತ್ಯಂತ ಅವಶ್ಯಕ.

ಮಾಯೆಯ ಪರಿಕಲ್ಪನೆ ಕೂಡಾ ಒಬ್ಬೊಬ್ಬರಿಗೆ ಒಂದೊಂದು. ಮಾಯೆ ಕುರಿತು ಸರ್ವಜ್ಞನ ಈ ವಚನ ನೋಡಿ: “ಮಾಯೆ ಗೆದ್ದಿಹ ಸೊಲ್ಲು ಬಾಯಿ ಮಾತಲ್ಲವೇ? ಮಾಯೆಯಿಂ ಕಾಯ ಆಗಿರಲು, ಇವರುಗಳಾ! ಮಾಯೆ ಗೆಲಲುಂಟೆ ಸರ್ವಜ್ಞ.” ಅರ್ಥಾತ್ ಮಾಯೆಯನ್ನು ಅಂದರೆ ಹೆಣ್ಣನ್ನು ಗೆದ್ದೆನೆಂದು ಹೇಳುವವರು ಬರೀ ಬಾಯಿ ಮಾತಿನ ಶೂರರು. ನಮ್ಮ ಶರೀರ ಸೃಷ್ಠಿ ಆಗಿರುವುದೇ ಮಾಯೆ. ಅಂದರೆ ಹೆಣ್ಣಿನಿಂದ. ಆದುದರಿಂದ ಮಾಯೆ ಗೆಲಲು ಸಾಧ್ಯವೇ? [ಹೆಣ್ಣಿಗೂ ಗಂಡು ಮಾಯೆಯೇ ಆಗಿರಬಾರದೇಕೆ (?)] ಹಾಗೆ ನೋಡಿದರೆ ಪ್ರಪಂಚದಲ್ಲಿರುವ ಎಲ್ಲಾ ಲೌಕಿಕ (ಪ್ರಾಪಂಚಿಕ) ವಸ್ತುಗಳೂ ಮಾಯೆಯೇ. ಅದು ಚಿನ್ನವಿರಬಹುದು, ಭೂಮಿಯಿರಬಹುದು, ಹೆಣ್ಣಿರಬಹುದು ಅಥವಾ ಇನ್ಯಾವುದೇ ವಸ್ತುವಿರಬಹುದು. ಇಂತಹ ಲೌಕಿಕ ವಸ್ತುಗಳ ಆಕರ್ಷಣೆ ಎಷ್ಟೆಂದರೆ ಅವುಗಳ ಪ್ರಾಪ್ತಿಗಾಗಿ ಮಾನವ ಏನನ್ನು ಮಾಡಲೂ ಸಿದ್ಧನಾಗಿಬಿಡುತ್ತಾನೆ. ಅದಕ್ಕಾಗಿ ಎಲ್ಲಾ ನೈತಿಕ ಮೌಲ್ಯಗಳಿಗೂ ತಿಲಾಂಜಲಿ ನೀಡಲೂ ಹಿಂಜರಿಯುವುದಿಲ್ಲ. ಅಷ್ಟೇ ಏಕೆ, ಅವುಗಳ ಪ್ರಾಪ್ತಿಗಾಗಿ, ತನಗರಿಯದೆಯೇ ತನ್ನ ಸರ್ವಸ್ವವಾದ ಪ್ರಾಣತ್ಯಾಗಕ್ಕೂ ಸಿದ್ಧನಾಗುತ್ತಾನೆ. ಈ ಮಾಯೆಯೆಂಬ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಮಾಯೆಯ ಮೂಲಗಳಾದ “ಹೆಣ್ಣು-ಹೊನ್ನು-ಮಣ್ಣಿ”ಗಾಗಿ ತಮ್ಮ ರಾಜ್ಯ-ಪ್ರಾಣಗಳನ್ನೇ ಕಳೆದುಕೊಂಡ ಅಸಂಖ್ಯಾತ ನಿದರ್ಶನಗಳು ಪ್ರಪಂಚದ ಇತಿಹಾಸದ ಗರ್ಭದಲ್ಲಿ ಅಡಗಿ ಕುಳಿತಿವೆ. ಇಷ್ಟಾಗಿಯೂ ನಾವು ಪುನ: ಪುನ: “ಇರುಳು ಕಂಡ ಭಾವಿಗೆ ಹಗಲು ಬಿದ್ಧಂತೆ” ನಡೆಯುತ್ತಿರುವುದು ಈ ಮಾಯೆಯೆಂಬ ಭ್ರಮಾಲೋಕದ ಮಹಿಮೆಯಿಂದಲೇ!

ಸೂಕ್ಷ್ಮವಾಗಿ ಮನನ ಮಾಡಿದಾಗ ಸ್ಪಷ್ಟವಾಗುವ ಅಂಶವೆಂದರೆ, ಈ ಪ್ರಾಪಂಚಿಕ ವಸ್ತುಗಳೇ ನಿಜವಾದ ಮಾಯೆಯ ಸ್ವರೂಪಗಳು. ಮೇಲ್ನೋಟಕ್ಕೆ ಇವು ಆರಾಮದಾಯಕ ಮತ್ತು ಸುಖಕರ ಸಾಧನಗಳೆಂದು ತೋರಿದರೂ, ಆಂತರಿಕವಾಗಿ ಅವು ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೆ ನಿಜವಾದ ಕಾರಣಕರ್ತರುಗಳು.  ಹಾಗೆಂದು ಲೌಕಿಕ ವಸ್ತುಗಳನ್ನು ಸಂಪೂರ್ಣ ವರ್ಜಿಸಬೇಕೆಂದಲ್ಲ. ಪ್ರಪಂಚಕ್ಕೆ ಬಂದ ಮೇಲೆ, ಅದರಲ್ಲೂ ದಿವ್ಯವಾದ ಈ ಮಾನವ ಜನ್ಮ ಪಡೆದ ಮೇಲೆ, ಇರುವ ತನಕ, ಪ್ರಾಪಂಚಿಕ ಮತ್ತು ಅಂತಿಮವಾಗಿ  ಅಲೌಕಿಕ ಸಾಧನೆಗೆ ಈ ಪ್ರಾಪಂಚಿಕ ವಸ್ತುಗಳೇ ಮೆಟ್ಟಿಲುಗಳಷ್ಟೇ ಆಗಬೇಕು. ಆದರೆ ಸುಖ, ಶಾಂತಿ ಮತ್ತು ನೆಮ್ಮದಿಗಳನ್ನು ಅವುಗಳಲ್ಲಿ ಅರಸುವುದು ಕತ್ತಲಲ್ಲಿ ಸೂಜಿಯನ್ನು ಹುಡುಕಿದಂತೆಯೇ. ಬರೀ ಆಸೆ, ಬರೀ ಪರಿಶ್ರಮವಷ್ಟೇ ಆದೀತು. ಆದುದರಿಂದ, ಅವುಗಳ ಸಂದರ್ಭಾನುಸಾರ ಮತ್ತು ಅವಶ್ಯಾನುಸಾರ ಸಂಗ್ರಹಣೆ, ಯುಕ್ತಾಯುಕ್ತಾನುಸಾರ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ಅವುಗಳ ಸಂರಕ್ಷಣೆ ? ಅಂತಹ ವಸ್ತುಗಳ ಮಾಯೆಯ ಪಾಶದಿಂದ ಬಿಡಿಸಿಕೊಳ್ಳಬಹುದಾದಂತಹ ಕೆಲವು ಸರಳೋಪಾಯಗಳು. “ಕಂಕುಳಲ್ಲಿರುವ ಮಗುವನ್ನು ಊರೆಲ್ಲಾ ಹುಡುಕಿದಂತೆ” ನಿಜವಾದ ಸುಖ-ಶಾಂತಿ ನಮ್ಮ ಆಂತರ್ಯದಲ್ಲಿಯೇ ಇದೆ ಎಂಬ ಜ್ಞಾನ ಮತ್ತು ತಿಳುವಳಿಕೆ ಹೆಚ್ಚಿದಷ್ಟೂ ಈ ಪ್ರಾಪಂಚಿಕ ವಸ್ತುಗಳ ಮೇಲಿನ ಮೋಹ ಕಡಿಮೆಯಾಗುತ್ತಾ ಹೋಗುತ್ತದೆ.  ಯಾವುದೇ ಪ್ರಾಪಂಚಿಕ ವಸ್ತುಗಳು ಹೆಚ್ಚಾದರೂ - ಹಣ, ಭೂಮಿ, ಆಭರಣಗಳು, ಇತ್ಯಾದಿ - ಅವುಗಳಿಂದ ಸುಖ, ಶಾಂತಿ, ನೆಮ್ಮದಿಗಿಂತ ಚಿಂತೆ, ಭಯ, ಅವನತಿ ಮತ್ತು ಅಪಾಯಗಳೇ ಹೆಚ್ಚು. ಅದೇ ಅಶಾಂತಿಯ ಮತ್ತು ದುರ್ಮಾರ್ಗದ ಬಾಳುವೆಗೆ ಮುನ್ನುಡಿ. ಇಂದಿನ ಅನೇಕ ರಾಜಕಾರಣಿಗಳ ಮತ್ತು ಧನದಾಹಿಗಳ ಬದುಕು ಕೂಡ ಹೀಗೇ ಆಗಿದೆ. ನೋಡಲಿಕ್ಕಷ್ಟೇ ಅವರು ಮುಖಂಡರು, (ನ)ಗಣ್ಯರು; ಆದರೆ ಆಂತರ್ಯದಲ್ಲಿ ಅವರೆಲ್ಲರೂ ಅಶಾಂತಿಯಿಂದ, ಅಭದ್ರತೆಯಿಂದ ಮತ್ತು ಪಾಪಪ್ರಜ್ಞೆ(ಅದಿದ್ದವರಲ್ಲಿ ಮಾತ್ರಾ!) ಯಿಂದ ಮತ್ತು ಇವುಗಳ ಪ್ರಭಾವದಿಂದ ವಾಸಿಯಾಗದಂತಹ ಅನೇಕ ಖಾಯಿಲೆಗಳಿಂದ ಬಳಲಿ ಬೆಂಡಾದವರೇ/ಬೆಂಡಾಗುತ್ತಿರುವವರೇ.  ಆದರೆ ಇಂತಹ ಪ್ರಾಪಂಚಿಕ ವಸ್ತು/ವ್ಯಕ್ತಿಗಳ ಮೂಲಕ ನಮಗುಂಟಾಗುವ ಮಾಯಾ ಪ್ರಪಂಚದ ಅನುಭವಗಳೇ ಮುಂದೆ ನಮ್ಮನ್ನು ಮಾಯಾಪಾಶದಿಂದ ಬಿಡಿಸಿಕೊಳ್ಳುವ ಸಾಧನಗಳಾದಾವು; ಆಗಬೇಕು. ಅಂಥವುಗಳ ಮಿಥ್ಯ ಅವಲಂಬನೆಯಿಂದ ಉಂಟಾದ ಕಷ್ಟ-ಕೋಟಲೆಗಳು, ನಷ್ಟಗಳು, ಅವಮಾನಗಳು ಇತ್ಯಾದಿ ನಮ್ಮ ಕಣ್ತೆರೆಸಬೇಕು. ಒಮ್ಮೆ ಸಂಪತ್ತನ್ನೇ ಸರ್ವಸ್ವವೆಂದು ತಿಳಿದಿದ್ದ ಶ್ರೀ ಪುರಂದರದಾಸರು ಅದಕ್ಕೆಂದೇ ನಂತರ ಈ ರೀತಿ ಹಾಡಿದ್ದು: “ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ......”

ಆದುದರಿಂದ ಲೌಕಿಕ ವಸ್ತುಗಳನ್ನು ನಾವು ಪರಿಭಾವಿಸುವ ರೀತಿಯಲ್ಲಿ ಜಾಗ್ರತೆ ವಹಿಸಬೇಕು. ಒಬ್ಬ ಸಾಮಾನ್ಯ ಮನುಷ್ಯ ಓರ್ವ ಸುಂದರ ಯುವತಿಯಲ್ಲಿ ಸೌಂದರ್ಯ ಮತ್ತು ಆಕರ್ಷಣೆ ಕಂಡರೆ, ಅದೇ ರಾಮಕೃಷ್ಣ ಪರಮಹಂಸರು ಅವಳಲ್ಲಿ ದೇವೀ ಅಥವಾ ಮಾತೃಸ್ವರೂಪವನ್ನು ಕಾಣುತ್ತಾರೆ. ಬೇಲೂರು ಶಿಲಾಬಾಲಿಕೆ - ಸಾಮಾನ್ಯ ಮನುಷ್ಯ ಮತ್ತು ಕಲೋಪಾಸಕನಲ್ಲಿ ಬೇರೆ ಬೇರೆ ಭಾವನೆಗಳನ್ನೇ ಉಂಟುಮಾಡುತ್ತದೆ. ಮಾಯೆಯೆ ಪರದೆಯನ್ನು ಸರಿಸಿದಾಗಲೇ ಸತ್ಯದರ್ಶನ ಸಾಧ್ಯವಾಗುತ್ತದೆ. ಕಡು ಲೋಭಿಯಲ್ಲಿರುವ ಧನ ಆತನ ಕಣ್ಣಿಗಷ್ಟೇ ಆಪ್ಯಾಯಮಾನವಾದರೆ, ಧನವಂತನಾದ ಗುಣವಂತ ಆ ಹಣವನ್ನು ಸತ್ಪಾತ್ರರಿಗೆ ಮತ್ತು ಸಮಾಜಮುಖೀ ಕಾರ್ಯಗಳಿಗೆ ವಿನಿಯೋಗಿಸುವುದರಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುತ್ತಾನೆ. ಕಲಿತ ವಿದ್ಯೆಯನ್ನು, ಕೌಶಲ್ಯಗಳನ್ನು ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವಲ್ಲಿ ಕೂಡ ಈ ಮಾಯೆಯ ಪ್ರಭಾವ ಅಗಾಧವಾದುದು. ಈ ಸಂಪನ್ಮೂಲಗಳು ಒಳಿತಿಗೂ-ಕೇಡಿಗೂ ಸಮನಾಗಿ ಬಳಸಿಕೊಳ್ಳುವಂತಹವು. ಸಮಾಜದ ಅತೀ ಗಣ್ಯರು, ವಿದ್ಯಾವಂತರು ಮತ್ತು ಪ್ರಾಜ್ಞರು ಎನಿಸಿಕೊಂಡ ಬಹು ಮಂದಿ ಇಂದು ನಡೆಸುತ್ತಿರುವ ಅನೇಕ ಅನಾಚಾರಗಳೇ ಇದಕ್ಕೆ ಸಾಕ್ಷಿ. ಹಣ, ಯಶಸ್ಸು, ಅಧಿಕಾರ, ಕೀರ್ತಿ ಮುಂತಾದವುಗಳ ಸಂಗ್ರಹಣೆಗಾಗಿ ವಿದ್ಯಾವಂತರೇ ಇಂದು ಎಲ್ಲ ವಾಮಮಾರ್ಗಗಳನ್ನು ಅನುಸರಿಸುತ್ತಿರುವುದು ಕೂಡ ಈ ಮಾಯೆಯೆಂಬ ಬಿಸಿಲು ಕುದುರೆಯನ್ನೇರಿಯೇ! ಕಾಮನಬಿಲ್ಲಿನಷ್ಟು ಆಕರ್ಷಕ ದೃಶ್ಯ ಮತ್ತೊಂದಿಲ್ಲ. ಆದರೆ ಅದು ಅಷ್ಟೇ ಕ್ಷಣಿಕ! ಆ ಸತ್ಯದ ಅರಿವು ನಮ್ಮ ಅಂತರಾಳಕ್ಕಿರಬೇಕಷ್ಟೇ!

ಹಾಗಾಗಿ ಹೊರನೋಟಕ್ಕೆ ಕಂಡು ಬರುವುದೆಲ್ಲಾ ವಾಸ್ತವವಾದುದಲ್ಲ ಎಂಬ ಅಂಶ ತಡವಾಗಿಯಾದರೂ ನಮಗೆ ಸ್ಪಷ್ಟವಾಗಬೇಕು. ನಿಜಾರ್ಥಗಳು-ಗೂಡಾರ್ಥಗಳು ಬೇರೆ ಬೇರೆಯೇ ಇರುತ್ತವೆ.  ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ಇತ್ಯಾದಿಗಳಂತೆ! ಯಾವ ವಸ್ತುಗಳ-ವ್ಯಕ್ತಿಗಳ ಸದ್ಬಳಕೆಯಿಂದ/ಸಂಪರ್ಕದಿಂದ ಶಾಶ್ವತ ಸುಖ ಅಥವಾ ಶಾಶ್ವತ ನೆಮ್ಮದಿಯೆಡೆಗೆ ನಡೆಯಲು ಸಾಧ್ಯ ಎಂಬ ಒಳ ಚಿಂತನೆ ಬಹಳ ಅವಶ್ಯ. ಒಂದು ಫಲವನ್ನು ಒಬ್ಬನೇ ಸವಿಯುವ ಸವಿಯೇ ಬೇರೆ. ಅದೇ ಫಲವನ್ನು ನಾಲ್ಕಾರು ಜನರಿಗೆ ಹಂಚಿ ಸಾಮೂಹಿಕವಾಗಿ ಸೇವಿಸುವ ಭಾವವೇ ಬೇರೆ. ಅದೇ ಅದರ ನಿಜವಾದ ಸವಿ. ಎಲ್ಲವೂ ನಮಗಿರಲಿ ಎಂಬ ಉತ್ಕಟಾಪೇಕ್ಷೆ ಎಲ್ಲರಲ್ಲಿ ಸಹಜವೇ. ಆದರೂ ಅಷ್ಟೂ ನಮಗೆ ನಿಜವಾಗಿ ಬೇಕೇ? ಎಂದು ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ನಿಜ ತಂತಾನೇ ಸ್ಪಷ್ಟವಾಗುತ್ತದೆ. ಕೂಡಿಟ್ಟ ಹಣ, ಕಟ್ಟಿದ ಮನೆ-ಮಠಗಳು, ಬೆಳೆಸಿದ ತೋಟ-ಜಮೀನುಗಳು, ಸಂಗ್ರಹಿಸಿದ ಆಭರಣಗಳು ಎಲ್ಲವೂ ಒಂದೇ ಪ್ರಕೃತಿಯ ವಿಕೋಪದಿಂದ - ಸುನಾಮಿ, ಭೂಕಂಪ, ಪ್ರವಾಹ, ಅಗ್ನಿ, ಬಿರುಗಾಳಿ, ದರೋಡೆ ಇತ್ಯಾದಿ - ಕ್ಷಣಮಾತ್ರದಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಬಹುದು.  ಹಾಗೆ ನಿರಂತರ ನಾಶವಾಗುತ್ತಿರುವುದನ್ನು ಕೂಡ ನಾವು ನಿತ್ಯ ಗಮನಿಸುತ್ತಲೇ ಇದ್ದೇವೆ. [ಜಪಾನಿನಲ್ಲಿ ಮೊನ್ನೆಯಷ್ಟೇ ಆದ ದುರಂತಕ್ಕಿಂತ ಬೇರೆ ಉದಾಹರಣೆ ಬೇಕೇ?] ಅಂದರೆ ಲೌಕಿಕವೆಲ್ಲವೂ ಅಶಾಶ್ವತ ? ಆ ಲೌಕಿಕ ಸಂಪತ್ತು-ಸವಲತ್ತುಗಳನ್ನು ನಾವೆಷ್ಟು ಪಾರಮಾರ್ಥಿಕವಾಗಿ ಪರಿಭಾವಿಸಿದ್ದೆವು ಮತ್ತು ಬಳಸಿದ್ದೆವು ಎಂಬುದಷ್ಟೇ ಮುಂದೆ ಶಾಶ್ವತವಾಗುತ್ತದೆ; ಮುಂದಿನ ಜನ್ಮಜನ್ಮಾಂತರಗಳಿಗೆ ಪ್ರಸ್ತುತವಾಗುತ್ತದೆ. ಮಳೆ ಬಂದಾಗ ಆ ಮಳೆ ನೀರು ಯಾವುದೇ ಭೇದ-ಭಾವವಿಲ್ಲದೇ ಎಲ್ಲೆಡೆ ಬೀಳುತ್ತದೆ. ಹರಿಯುವಾಗ ತನ್ನೊಡನೆ ಎಷ್ಟೊಂದು ಕೊಳೆ-ಕಸ-ಕಡ್ಡಿ ಇತ್ಯಾದಿಗಳನ್ನು ಒಯ್ಯುತ್ತದೆ. ಆದರೆ ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರಾ. ಹರಿಯುವ ಹಾದಿಯಲ್ಲಿಯೇ ಹೊತ್ತು ತಂದ ಇಂತಹ ಅನೇಕ ಕಲ್ಮಷಗಳನ್ನು ಅದು ಸ್ವಲ್ಪ ಸ್ವಲ್ಪವೇ ವಿಸರ್ಜಿಸುತ್ತಾ ಮುಂದೆ ನದಿಯಾಗಿ ತಿಳಿಯಾದ ಶುಭ್ರ ಜಲಧಾರೆ ಪ್ರವಹಿಸುತ್ತದೆ. ನಮ್ಮ ಜೀವನ  ಕೂಡಾ ಇಂತಹ ಮಳೆ ಹರಿವಿನ ಪ್ರವಾಹದಂತಿರಬೇಕು. ಪ್ರಪಂಚಕ್ಕೆ ಕಾಲಿಟ್ಟ ಮೇಲೆ, ವ್ಯಕ್ತಿಗಳ, ವಸ್ತುಗಳ ಮತ್ತು ನಮ್ಮ ಸಂಸ್ಕಾರದ ಮತ್ತು ಸಂಪರ್ಕಗಳ ಪ್ರಭಾವದಿಂದ ನಮ್ಮ ಜೀವನಯಾತ್ರೆಯಲ್ಲಿ ಅನೇಕ ತಪ್ಪುಗಳನ್ನೆಸಗುತ್ತೇವೆ; ಅನೇಕರಿಗೆ ತೊಂದರೆ ಕೊಟ್ಟಿರುತ್ತೇವೆ ಮತ್ತು ಮಾನಸಿಕವಾಗಿ ನಾವೂ ಸಾಕಷ್ಟು ಕ್ಷೇಷಕ್ಕೊಳಗಾಗಿರುತ್ತೇವೆ. ಅರಿತೋ ಅರಿಯದೆಯೋ ಅನೇಕರ ಸಂಪರ್ಕದಿಂದ ದುಷ್ಟ ಆಚಾರ-ವಿಚಾರಗಳ ದಾಸರಾಗಿಬಿಟ್ಟಿರುತ್ತೇವೆ. ಪ್ರಾಪಂಚಿಕ ವಸ್ತುಗಳ ದುರ್ಬಳಕೆಯಿಂದ ನಮ್ಮ ಮನಸ್ಸಿಗೆ, ನಮ್ಮ ದೇಹಕ್ಕೆ ಮತ್ತು ಇಡೀ ಸಮಾಜಕ್ಕೆ ಸಾಕಷ್ಟು ಹಾನಿ ಮಾಡಿರುತ್ತೇವೆ. ಇಂತಹ ಒಂದು ಕಲ್ಮಷಗಳ ಅರಿವು ಮತ್ತು ಮಳೆ ಹರಿವಿನಂತೆ ಅಲ್ಲಲ್ಲಿಯೇ ಅವುಗಳನ್ನು (ಅಂದರೆ ಮಾಯೆಯನ್ನು)  ಬಿಟ್ಟು ಬಿಡಬೇಕೆಂಬ ಅರಿವು ಮತ್ತು ಅಂತಿಮವಾಗಿ ಹರಿವ ತಿಳಿ ನೀರಿನಂತೆ ನಮ್ಮ ಮನಸ್ಸು ಮತ್ತು ದೇಹ ಎರಡೂ ಆಗಬೇಕೆಂಬ ಅರಿವು ? ಈ ಮಾಯೆಯೆಂಬ ಪಾಶದಿಂದ ಹೊರಬರಲು ಸಹಕಾರಿ.

ಆದರೆ ಯಾವುದು ಮಾಯೆ ಎಂಬುದನ್ನು ಗುರುತಿಸುವುದೇ ಕಷ್ಟಸಾಧ್ಯವಾದ ಕೆಲಸವೆಂದರೆ ತಪ್ಪಲ್ಲ. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಚಿಕ್ಕಂದಿನಿಂದ ಗುರು-ಹಿರಿಯರಲ್ಲಿ ಶ್ರದ್ಧಾಭಕ್ತಿ, ಸದ್ವಿದ್ಯಾರ್ಜನೆ, ಪರೋಪಕಾರ ಬುದ್ಧಿ, ಉಪಕಾರ ಸ್ಮರಣೆ, ಕರುಣೆ, ಪರಮಾತ್ಮ ತತ್ವದಲ್ಲಿ ಅಚಂಚಲ ನಂಬಿಕೆ ಮುಂತಾದ ಉದಾತ್ತ ಗುಣಗಳು ಮಾಯಾಪಾಶಗಳನ್ನು ನಿವಾರಿಸುವಲ್ಲಿ ಪ್ರಬಲ ಅಸ್ತ್ರಗಳಾಗಬಲ್ಲವು. ಯಾವುದೇ ವಿಷಯದ ಬಗ್ಗೆ ಜಿಜ್ಞಾಸೆಗಳು, ದ್ವಂದ್ವಗಳು ಮತ್ತು ಅನಿಶ್ಚಯತೆ ಎದುರಾದಾಗ ಸೂಕ್ತ ಗುರುವಿನ ಆಸರೆ, ಸಹಾಯ, ಮಾರ್ಗದರ್ಶನ ಲಭ್ಯವಾದರೆ ಮಾಯೆಯನ್ನು ಜಯಿಸುವಲ್ಲಿ ಅದಕ್ಕಿಂತ ಬೇರೆ ಏನೂ ಹೆಚ್ಚಿನದು ಬೇಕಾಗದು. ಲೋಕದಲ್ಲಿ ಸರ್ವವ್ಯಾಪಿಯಾಗಿರುವ ಈ ಮಾಯೆಯ ಪರದೆಯನ್ನು ಸರಿಸಿ, ನಿಜ ಸತ್ಯದ, ಜೀವನಾರ್ಥದ, ಸಂಬಂಧಗಳ ಮಿಥ್ಯೆಯ ಮತ್ತು ಮೋಕ್ಷದೆಡೆಗೆ ಸಾಗುವ ಪರಿಯನ್ನೇ ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಸ್ತುತ ಪಡಿಸಿರುವುದು. ಭಗವದ್ಗೀತೆ ಮಾಯೆಯೆಂಬ ಮೋಡವನ್ನು ಸರಿಸಿ, ಬೆಳಕಿನೆಡೆಗೆ, ಜ್ಞಾನದೆಡೆಗೆ ಮತ್ತು ಪರತತ್ವ ಸಾಧನೆಯೆಡೆಗೆ ನಮ್ಮನ್ನೊಯ್ಯುವ ದಿವ್ಯ ನಾವೆ. ಆದುದರಿಂದಲೇ, ಮಾಯೆಯ ಮೋಡಿ ನಿರಂತರವಾದರೆ ಅದಕ್ಕೆ ನಾವು ಹಾಕುವ ನಿಯಂತ್ರಣ ಕ್ರಮಗಳೂ ಕೂಡ ನಿರಂತರವಾಗಿರಬೇಕು. ಇದು ದಿನನಿತ್ಯದ ನಿಲ್ಲದ ಪ್ರಕ್ರಿಯೆಯಾಗಬೇಕು. ಅದೇ ಮಾಯೆಯನ್ನು ಮೆಟ್ಟಿ ನಿಲ್ಲುವ ನಿರಂತರ ಸಾಧನೆ. ಮಾಯಾಪಾಶದಿಂದ ಬಿಡುಗಡೆ ಪಡೆವ ಹಾದಿ.

|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

ಕವಿ ವೆಂ. ಸುರೇಶ್

Friday, April 15, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - 1

      ಸಹೃದಯರೇ, ಪಂ. ಸುಧಾಕರ ಚತುರ್ವೇದಿಯವರು ಭಗವಂತನ ಸ್ವರೂಪದ ಕುರಿತು ಹಾಗೂ ಜೀವಾತ್ಮದ ಸ್ವರೂಪ ಕುರಿತು ವೇದಗಳು ಏನು ಹೇಳುತ್ತವೆ ಎಂಬ ಬಗ್ಗೆ ತಿಳಿಸಿರುವುದನ್ನು ಓದಿರುವಿರಿ ಹಾಗೂ ಆ ವಿಷಯಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನೂ ಮಾಡಿರುವಿರಿ. ಇನ್ನುಮುಂದೆ ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ ಕುರಿತು ವೇದ ಏನು ಹೇಳುತ್ತದೆ ಎಂಬುದನ್ನು ಪಂಡಿತರ ಮಾತುಗಳಲ್ಲೇ ನೋಡೋಣ.

ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ


     ಸೃಷ್ಟಿಯ ನಿಮಿತ್ತ ಕಾರಣ, ಮಹಾನ್ ವಿಶ್ವಚೇತನ, ಅಂದರೆ ಭಗವಂತನು. ಅವನು ಈ ಸೃಷ್ಟಿಯನ್ನು ರಚಿಸಿರುವುದು ಪರಿಚ್ಛಿನ್ನ ಚೇತನರಾದ ಜೀವಾತ್ಮರ ಸಲುವಾಗಿ. ಈ ವಿಷಯಗಳನ್ನು ವಿಸ್ತಾರವಾಗಿ ಅರಿತುದಾಯಿತು. ಈ ವಿಶ್ವಬ್ರಹ್ಮಾಂಡದ ಕಡೆ ಗಮನವಿತ್ತು ನೋಡಿದಾಗ, ಅಷ್ಟೇ ಸಿಕ್ಕುಗಟ್ಟಿದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಭಗವಂತನು ಚೇತನ ಜೀವಾತ್ಮರಿಗಾಗಿ ಸೃಷ್ಟಿಯನ್ನು ರಚಿಸಿದ, ಸರಿ. ಅದರೆ ಏತರಿಂದ ಸೃಜಿಸಿದ? ಕೆಲವು ಮತದವರು 'ಭಗವಂತ ಸೃಷ್ಟಿಯಾಗಲಿ ಎಂದ, ಸೃಷ್ಟಿಯಾಗಿ ಹೋಯಿತು' - ಎನ್ನುತ್ತಾರೆ. ಯಾರಿಗೆ ಹೇಳಿದ ಭಗವಂತ ಸೃಷ್ಟಿಯಾಗಿ ಹೋಗಲಿ ಎಂದು? ಶೂನ್ಯಕ್ಕೇನು? ಶೂನ್ಯ ಎಂದರೆ ಅಭಾವ, ಏನೂ ಇಲ್ಲದಿರುವಿಕೆ. ಅಭಾವದಿಂದ ಭಾವೋತ್ಪತ್ತಿ, ಅಸತ್‌ನಿಂದ ಸದುತ್ಪತ್ತಿ ಎಂದಿಗೂ ಆಗಲಾರದು. ಮಣ್ಣಿದ್ದರೆ ಮಡಕೆ, ನೂಲಿದ್ದರೆ ಬಟ್ಟೆ, ಮರದ ಹಲಗೆಗಳಿದ್ದರೆ ಕಾಲುಮಣೆ ಇದು ಸರಿ. ಕಾರಣವಿಲ್ಲದೆ ಕಾರ್ಯ ಉದ್ಭವಿಸಲಾರದು. ಶೂನ್ಯದಿಂದ ಮಡಕೆಯಾಗಲಾರದು, ಶೂನ್ಯದಿಂದ ಬಟ್ಟೆಯಾಗಲಾರದು, ಶೂನ್ಯದಿಂದ ಕಾಲುಮಣೆಯಾಗಲಾರದು. ಹೀಗಿರುವಾಗ ಇಷ್ಟು ದೊಡ್ಡ ಬ್ರಹ್ಮಾಂಡ ಶೂನ್ಯದಿಂದ ಆಗಿಹೋಯಿತೇ? ಕೆಲವರು 'ಭಗವಂತ ಸರ್ವಶಕ್ತ, ಅವನು ಏನು ಬೇಕಾದರೂ ಮಾಡಬಲ್ಲನು' ಎನ್ನುವುದುಂಟು. ಆದರೆ ವೈಜ್ಞಾನಿಕ ವಿಶ್ಲೇಷಣದ ಮುಂದೆ ಈ ವಾದ ಅರೆಕ್ಷಣವೂ ನಿಲ್ಲಲಾರದು. ಅಸಂಭವವಾದುದು ಎಂದಿಗೂ ಸಂಭವವಾಗಲಾರದು. 'ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ?' - ಎಂದು ನಾವು ಪ್ರಶ್ನಿಸುತ್ತೇವೆ. 'ಓಹೋ, ರಚಿಸಬಲ್ಲ' ಎಂದು ನೀವು ಹೇಳಿದರೆ, 'ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ, ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು' - ಎಂದು ಒಪ್ಪಬೇಕಾಗುತ್ತದೆ. 'ರಚಿಸಲಾರ' ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. 'ಭಗವಂತ ತನ್ನಂತಹ ಇನ್ನೊಬ್ಬ ಭಗವಂತನನ್ನು ಸೃಜಿಸಬಲ್ಲನೇ?' ಎಂದು ನಾವು ಪ್ರಶ್ನಿಸಿದರೆ ನೀವು 'ಇಲ್ಲ' ಎನ್ನಲೇಬೇಕಾಗುತ್ತದೆ. ಇದರ ತಾತ್ಪರ್ಯವೇನು? ಎಲ್ಲಾ ಮಾಡಬಲ್ಲ ಶಕ್ತಿಯಲ್ಲ ಸರ್ವಶಕ್ತಿ. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ - ಎಂಬುದೇ ಸಾಧುವಾದ, ತರ್ಕಬದ್ಧ ಹಾಗೂ ತಾತ್ವಿಕವಾದ ಪಕ್ಷ. ಭಗವಂತನೂ ಶೂನ್ಯದಿಂದ ಸೃಷ್ಟಿಯನ್ನು ರಚಿಸಲಾರನು.


     ಇನ್ನೊಂದು ಭ್ರಾಮಕ ವಾದವಿದೆ. ಅದನ್ನು 'ಅಭಿನ್ನ ನಿಮಿತ್ತೋಪಾದಾನ ಕಾರಣವಾದ' - ಎಂಬ ಉದ್ದವಾದ ಹೆಸರಿನಿಂದ ಕರೆಯುತ್ತಾರೆ. 'ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣ, ಅವನೇ ಉಪಾದಾನ ಕಾರಣ. ಭಗವಂತನೇ ಜಗತ್ತನ್ನು ರಚಿಸುತ್ತಾನೆ, ಅವನೇ ಜಗತ್ತಾಗುತ್ತಾನೆ' - ಎನ್ನುವುದೇ ಆ ವಾದದ ಸಾರ. ಏನರ್ಥ ಇದಕ್ಕೆ? ಬ್ರಹ್ಮವೇ ಜೀವವಾಯಿತು ಅಥವಾ ಬ್ರಹ್ಮದಿಂದಲೇ ಜೀವೋತ್ಪತ್ತಿಯಾಯಿತು - ಎಂಬ ವಾದಕ್ಕೆ ವಿರುದ್ಧವಾಗಿ ನಾವು ಹಿಂದಿನ ಅಧ್ಯಾಯದಲ್ಲಿ ಎತ್ತಿದ್ದ ಆಕ್ಷೇಪಣೆಗಳನ್ನು ಪಾಠಕರು ಜ್ಞಾಪಿಸಿಕೊಳ್ಳಬಹುದು. 'ಬ್ರಹ್ಮ ಪೂರ್ಣತಃ ಜಡವಾಗಿ ಅದರಿಂದ ಜಗತ್ತಾಯಿತು' - ಎಂದರೆ, ಈಗ ಬ್ರಹ್ಮವಿಲ್ಲವೇ ಇಲ್ಲವೇ? - ಎಂಬ ಪ್ರಶ್ನೆ ಹುಟ್ಟುತ್ತದೆ. ಎರಡನೆಯದಾಗಿ, ಸಂಪೂರ್ಣ ಬ್ರಹ್ಮವೇ ಜಡವಾಗಿ ಹೋದ ಮೇಲೆ, ಚೇತನ ಉಳಿಯಲೇ ಇಲ್ಲ, ಆ ಜಡೀಭೂತ ಬ್ರಹ್ಮಕ್ಕೆ ಜಗದಾಕಾರ ಕೊಟ್ಟವರಾರು? ತನ್ನಷ್ಟಕ್ಕೆ ತಾನೇ ನಿಯಮಪೂರ್ವಕವಾಗಿ ಬೇರೆ ಸಾರ್ಥಕರೂಪ ತಾಳೂವುದು ಜಡಕ್ಕೆ ಸಾಧ್ಯವಿಲ್ಲವಷ್ಟೇ?. 'ಹಾಗಲ್ಲ, ಬ್ರಹ್ಮನ ಯಾವುದೋ ಒಂದು ಭಾಗ ಮಾತ್ರ ಜಡವಾಯಿತು, ಉಳಿದ ಚೇತನ ಭಾಗ ಜಗತ್ತಿಗೆ ನಿಮಿತ್ತ ಕಾರಣವಾಯಿತು' - ಎಂದರೆ, ಬ್ರಹ್ಮದ ಅಖಂಡತ್ವದ ಗತಿ ಏನಾಯಿತು? 'ಬ್ರಹ್ಮ ಪ್ರಜ್ಞಾನ, ಬ್ರಹ್ಮ ನಿರ್ವಿಕಾರ' - ಎಂಬ ಹೇಳಿಕೆಗಳಿಗೆ ಅರ್ಥವೇನುಳಿಯಿತು?


     ನಿಜವಾಗಿ ಇಂತಹ ವಾದಗಳೆಲ್ಲಾ ಕೇವಲ ಭ್ರಾಂತಿವಿಲಾಸ ಮಾತ್ರ. ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ.

. . . . . . . ಏನು ಹೇಳುತ್ತವೆ? ಮುಂದಿನ ಕಂತಿನಲ್ಲಿ ನೋಡೋಣ.

Thursday, April 14, 2011

Ishtu Dina Nechchi Nambi Sound Clip and Quote

ಇಷ್ಟುದಿನ ನೆಚ್ಚಿನಂಬಿ


ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾ ರಮೇಶ್

   (Link)

ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

ಮನಸೆಳೆದ ವೈಯೋಲಿನ್ ಕಛೇರಿ

ನಿನ್ನೆ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್ ಶ್ರೀಫಣೀಂದ್ರ ಭಾಸ್ಕರ್ ಮತ್ತು ಘಟಂವಿದ್ವಾನ್ ಶ್ರೀ ರಘುನಂದನ್.ಸಂದರ್ಭ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯದವರು ಶ್ರೀ ರಾಮೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವೈಯೋಲಿನ್ ವಾದನಕಛೇರಿ.ವೈಯೋಲಿನ್ ನುಡಿಸಿದವರು ಬೇರೆ ಯಾರೂ ಅಲ್ಲ! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರ ಸೋದರರೂ ವೇದಸುಧೆ ಬಳಗದ ಸದಸ್ಯರೂ ಆದ ಕವಿ ಸುರೇಶ್ ಅವರ ಪುತ್ರ ಡಾ|| ಬಿ.ಎಸ್.ಆರ್.ದೀಪಕ್.ವೇದಸುಧೆಯ ವಾರ್ಷಿಕೋತ್ಸವದಲ್ಲಿ ದೀಪಕ್ ತಂಗಿ ಬಿ.ಎಸ್.ಆರ್ ಅಂಬಿಕಾ ಅವರು ವೈಯೋಲಿನ್ ನುಡಿಸಿ ನಮ್ಮೆಲ್ಲರ ಗಮನ ಸೆಳೆದ ನೆನಪು ಮಾಸುವದರೊಳಗಾಗಿ ದೀಪಕ್ ನಮ್ಮೆಲ್ಲರನ್ನೂ ಮೋಡಿ ಮಾಡಿ ತಮ್ಮ ಕೈ ಚಳಕ ತೋರಿಸಿಬಿಟ್ಟರು. ಆಯುರ್ವೇದ ವೈದ್ಯರಾದ ದೀಪಕ್ ನಿಜವಾಗಿ ಎಲ್ಲರ ಹೃದಯವನ್ನು ಗೆದ್ದಿದ್ದು ಅಷ್ಟೇ ಅಲ್ಲ ಮನೋ ಒತ್ತಡದ, ರಕ್ತದ ಒತ್ತಡ ಇರುವವರಿಗೆ ಅವರಿಗೆ ಗೊತ್ತಿಲ್ಲದಂತೆ ಚಿಕಿತ್ಸೆ ನೀಡಿದ್ದರು.ಕಾರ್ಯಕ್ರಮ ಮುಗಿದೊಡನೆ ಹರ್ಷಚಿತ್ತರಾಗಿ ವೇದಿಕೆಯತ್ತ ಹಲವಾರು ಹಿರಿಯರು ಧಾವಿಸಿ ತರುಣ ಸಂಗೀತ ವಿದ್ವಾಂಸರುಗಳಿಗೆ ನೂರ್ಕಾಲ ಬಾಳುವಂತೆ ಹಾರೈಸುತ್ತಿದ್ದುದನ್ನು ಗಮನಿಸಿದಾಗ ನನ್ನ ಹೃದಯ ತುಂಬಿಬಂದಿತ್ತು. ಈ ತರುಣರಿಗೆ ಧೀರ್ಘಾಯುಷ್ಯವನ್ನು ನೀಡಿ ಅವರ ಸೇವೆ ಸಮಾಜಕ್ಕೆ ಸದಾಕಾಲ ದೊರೆಯಲೆಂದು ನಿಂತಲ್ಲೇ ಆ ಭಗವಂತನಲ್ಲಿ ನಾನು ಪ್ರಾರ್ಥಿಸಿದ್ದೆ.
ಡಾ|| ದೀಪಕ್ ಅವರ ಪರಿಚಯ:
* Belongs to keladi kavimanetan family.
* Completed B.A.M.S. with distinction last March and presently doing housemanship in Shivamogga.
* Completed Vidwat (Proficiency) last year securing 1st Rank. .
* Student of Vid. TS Krishnamurthy and presently Dr. K Varad arangan, B'lore.
* B grade Artist of AIR.
* Has performed in more than 150 concerts so far, including those in Navarathri utsav, Shringeri, Mysore Dasara, Hampi utsav, AIR and Dooradarshan programmes.






ಪಕ್ಕವಾದ್ಯದಲ್ಲಿ ಸಹಕಾರ ನೀಡಿದ ವಿದ್ವಾಂಸರ ವಿವರ:
1. ಮೃದಂಗ: ವಿದ್ವಾನ್ ಫಣೀಂದ್ರ ಭಾಸ್ಕರ್, ಬೆಂಗಳೂರು. ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದ, ಫಿಲಿಪ್ಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್.
2. ಘಟಂ: ವಿದ್ವಾನ್ ರಘುನಂದನ್, ಬೆಂಗಳೂರು. ದಿ. ವಿದ್ವಾನ್ ಶ್ರೀ ಪಿ.ಜಿ.ಲಕ್ಶ್ಮಿನಾರಾಯಣ ಮತ್ತು ಈಗ ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ.



ನಿನ್ನೆಯ ಕಾರ್ಯಕ್ರಮದಲ್ಲಿ ನುಡಿಸಿದ ರಚನೆಗಳು:
1. ಕಾಂಬೋದಿ ರಾಗದ ಅಟ್ಟತಾಳವರ್ಣ - ಸರಸಿಜನಾಭ
2. ಹಂಸಧ್ವನಿ ರಾಗ - ರಘುನಾಯಕ (ಸಾಹಿತ್ಯ) ಆದಿತಾಳ
3. ಶುದ್ಧಬಂಗಾಳ ರಾಗ - ರಾಮಭಕ್ತಿಸಾಮ್ರಾಜ್ಯ - ಆದಿತಾಳ
4. ಹಂಸನಾದ ರಾಗ - ಬಂಟುರೀತಿ - ಆದಿತಾಳ
5. ರಾಗಮಾಲಿಕಾ - ಭಾವಯಾಮಿ ರಘುರಾಮಂ - ರೂಪಕತಾಳ
6.ಶುದ್ಧಧನ್ಯಾಸಿ ರಾಗ - ನಾರಾಯಣ - ಖಂಡಛಾಪುತಾಳ
7. ಖರಹರಪ್ರಿಯರಾಗ - ರಾಮನೀ ಸಮಾನಮೆವರು - ರೂಪಕತಾಳ
8. ನಾದನಾಮಕ್ರಿಯರಾಗ - ದಾಸನ ಮಾಡಿಕೋ ಎನ್ನ - ಆದಿತಾಳ
9. ಭೌಳೆ ರಾಗ - ಶ್ರೀಮನ್ನಾರಾಯಣ - ಆದಿತಾಳ
10. ದೇಶ್ ರಾಗದ ತಿಲ್ಲಾನ - ಆದಿತಾಳ
11. ಮಧ್ಯಮಾವತಿ ರಾಗ - ಭಾಗ್ಯದಾ ಲಕ್ಶ್ಮೀ ಬಾರಮ್ಮ - ಆದಿತಾಳ
12. ಕುರುಂಜಿ ರಾಗ - ಪವನಜಾ ಸ್ತುತಿ ಪಾತ್ರ - ಖಂಢಛಾಪು ತಾಳ
13. ಸೌರಾಷ್ಟ ರಾಗ - ಪವಮಾನ - ಆದಿತಾಳ.



ಯೋಚಿಸಲೊ೦ದಿಷ್ಟು...೩೦

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
೨. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ,ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. ಅವು ಪ್ರತಿಕ್ಷಣಗಳಲ್ಲಿಯೂ ಹುಟ್ಟುತ್ತಲೇ ಹೋಗುತ್ತವೆ!
೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!
೪. ನಿರಾಶಾವಾದಿಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ,ಆಶಾವಾದಿಗಳು ಅವುಗಳ ಪರಿಹಾರದತ್ತ ತಮ್ಮ ಗಮನ ಕೊಡುತ್ತಾರೆ !
೫. ನಮ್ಮ ಮೌಲ್ಯವನ್ನು ನಾವೇ ವರ್ಧಿಸಿಕೊಳ್ಳಬೇಕು!
೬. ಘಟನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದೂ ನಮ್ಮಲ್ಲಿನ ಆ೦ತರಿಕ ಶಾ೦ತಿಯನ್ನು ಉಳಿಸಿಕೊಳ್ಳುವುದರತ್ತ ನೀಡುವ ಗಮನವೇ!
೭. ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆ೦ದು ಅನಿಸಿದ ಕೂಡಲೇ ಅಲ್ಲಿ೦ದ ನಮ್ಮ ವಾಪಾಸಾತಿಯು ಮು೦ದೆ ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ!
೮. ಒತ್ತಡವು ಎಲ್ಲವನ್ನೂ ಸೃಷ್ಟಿಸಿದರೂ ಇನ್ನೊಬರ ಹೃದಯದಲ್ಲಿ ನಮ್ಮ ಬಗ್ಗೆ ಪ್ರೀತಿಯನ್ನು ಹುಟ್ಟಿಸದು!
೯. ಸಮಸ್ಯೆಗಳನ್ನು ಹ೦ಚಿಕೊಳ್ಳುವುದು ಹಾಗೂ ಅವುಗಳ ಪರಿಹಾರಕ್ಕಾಗಿ ಇನ್ನೊಬ್ಬರ ಸಹಾಯವನ್ನು ಬೇಡುವುದು ನಮ್ಮ ದೌರ್ಬಲ್ಯವನ್ನು ಹಾಗೂ ಅಶಕ್ತತೆಯನ್ನು
ಪ್ರತಿಬಿ೦ಬಿಸದು!
೧೦. ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾವಣೆಗೊಳಿಸಿಕೊಳ್ಳಲು ಹಲವಾರು ಆಯ್ಕೆಗಳಿದ್ದರೂ ಆಡಿದ ಮಾತನ್ನು ಹಿ೦ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನೂ ನಾವು ಪಡೆದಿಲ್ಲ!
೧೧. ಪುಸ್ತಕಗಳು ಕಣ್ಣೆದುರಿದ್ದರೂ ಓದಲು ಕಷ್ಟಪಡುವ೦ತೆ, ನಮ್ಮ ಆತ್ಮೀಯರ ಮನಸ್ಸಿನ ಭಾವನೆಗಳನ್ನು ಓದುವಲ್ಲಿಯೂ ನಾವು ಒಮ್ಮೊಮ್ಮೆ ವಿಫಲಗೊಳ್ಳುತ್ತೇವೆ!
೧೨. ಪ್ರತಿಯೊಬ್ಬರೂ ದಿನದ೦ತ್ಯದಲ್ಲಿ ತಾವು ಮಾಡಬೇಕಾಗಿದ್ದ ಕಾರ್ಯಗಳನ್ನು ಮಾಡಿದ್ದೇವೆ೦ಬ ಬಗ್ಗೆ ಸ೦ತೃಪ್ತಿ ಹೊ೦ದಿದರೆ, ಕೆಲವರು ತಾವು ನಾಳೆ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆಯೂ ಚಿ೦ತನೆ ನಡೆಸುತ್ತಾರೆ! ( ಡಾ|| ಎ.ಪಿ.ಜೆ ಅಬ್ದುಲ್ ಕಲಾ೦)
೧೩. ಯಾವುದೇ ಕಾರ್ಯದಲ್ಲಿಯೂ ವಿಜಯ ಸಾಧಿಸುವುದು ಎ೦ದರೆ ಆ ಕಾರ್ಯದ “ಸೀಮಿತತೆ“ ಗಳ ಬಗ್ಗೆ ಚಿ೦ತಿಸುವುದಲ್ಲ.. ಬದಲಾಗಿ ಕಾರ್ಯ ಸಾಧನೆಯ “ಸಾಧ್ಯತೆ“ಗಳ ಬಗ್ಗೆ ಚಿ೦ತಿಸುವುದು ಮಾತ್ರ!!
೧೪. ಕೇವಲ ಒ೦ದು ಸಣ್ಣ ಬಿ೦ದು ವಾಕ್ಯವನ್ನು ಅ೦ತ್ಯ ಗೊಳಿಸಬಹುದು.. ಆದರೆ ಕೆಲವು ಹೆಚ್ಚುವರಿ ಬಿ೦ದುಗಳು ವಾಕ್ಯದ ಮು೦ದುವರಿಕೆಯನ್ನು ಸೂಚಿಸುತ್ತವೆ! ಪ್ರತಿ ಅ೦ತ್ಯವೂ ಮತ್ತೊದು ಹೊಸತರ ಆರ೦ಭವಾಗಿರುತ್ತದೆ!!
೧೫.ಸಾಧನೆಯೆಡೆಗಿನ ತನ್ನ “ದಾಹ“ದಿ೦ದಲೇ ಕ್ರಿಯಾತ್ಮಕ ವ್ಯಕ್ತಿಯೊಬ್ಬ ಪ್ರೇರಣೆಗೊಳ್ಳುತ್ತಾನೆಯೇ ವಿನ: ಮತ್ತೊಬ್ಬರನ್ನು ಸೋಲಿಸಬೇಕೆ೦ಬ ಹಠದಿ೦ದಲ್ಲ!!