Pages

Tuesday, July 26, 2011

ವೇದವಿಚಾರ - ಚಿಂತನ

ಸಹೃದಯರೇ,
                    ಚನ್ನರಾಯಪಟ್ಟಣದಲ್ಲಿ 'ವೇದವಿಚಾರ - ಚಿಂತನ' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅಲ್ಲಿನ ಸತ್ಸಂಗದ ವತಿಯಿಂದ ಬಂದ ಆಹ್ವಾನಪತ್ರಿಕೆಯ ಪ್ರತಿಯನ್ನು ತಮ್ಮ ಅವಗಾಹನೆಗೆ ಪ್ರಕಟಿಸಿದೆ.
-ಕ.ವೆಂ.ನಾಗರಾಜ್.

Monday, July 25, 2011

ಸಾಧನಾ ಪಂಚಕಮ್-ಭಾಗ -12


ಆತ್ಮೀಯ ಬಂಧುಗಳೇ, ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾಪಂಚಕಮ್ ಕೃತಿಯ ಬಗ್ಗೆ ತಿಪಟೂರು ಚಿನ್ಮಯಾ ಮಿಶನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸದ ಎಲ್ಲಾ ಧ್ವನಿ ಕ್ಲಿಪ್ ಗಳನ್ನೂ ಕಳೆದ ಮೂರು ವಾರಗಳಿಂದ ಪ್ರಕಟಿಸುತ್ತಾ ಇಂದು ಕೊನೆಯ ಕಂತನ್ನು ಪ್ರಕಟಿಸಲಾಗಿದೆ. ಅಧ್ಯಾತ್ಮಪಥದಲ್ಲಿ ಸಾಗುತ್ತಿರುವ ಸಾಧಕರಿಗಂತೂ ಬಹಳ ಉತ್ತಮವಾದ ಜೀವನ ಸೂತ್ರಗಳು ಸಾಧನಾ ಪಂಚಕಮ್ ಉಪನ್ಯಾಸದಲ್ಲಿ ಲಭ್ಯ. ಹಾಗಂದು ಸಾಮಾನ್ಯ ಲೌಕಿಗರಿಗೆ ಇದು ಬೇಡವೇ? ಶ್ರದ್ಧೆಯಿಂದ ಈ ಉಪನ್ಯಾಸ ಮಾಲಿಕೆಯನ್ನು ಕೇಳಿನೋಡಿ. ನಿಮ್ಮ ಹಲವು ಸಮಸ್ಯೆಗಳಿಗೆ ಇಲ್ಲಿ ಉತ್ತರವಿದೆ.ಆದ್ದರಿಂದ ಸಾಧನಾ ಪಂಚಕಮ್ ಉಪನ್ಯಾಸ ಮಾಲಿಕೆ ಇಂದಿಗೆ ಮುಗಿದರೂ ಅದನ್ನು ಯಾವಾಗ ಬೇಕಾದರೂ ಕೇಳಲು ಯೋಗ್ಯವಾಗಿದೆ. ನೀವು ಮಾಡಬೇಕಾದುದು ಇಷ್ಟೆ.ಬ್ಲಾಗಿನ ಎಡಬದಿಯಲ್ಲಿ "ಮಾಲಿಕೆಗಳು" ಎಂಬ ತಲೆಬರಹವಿದೆ. ಅದರಡಿಯಲ್ಲಿರುವ "ಸಾಧನಾ ಪಂಚಕಮ್" ಮೇಲೆ ಕ್ಲಿಕ್ ಮಾಡಿದರೆ ಅಷ್ಟೂ ಉಪನ್ಯಾಸದ ಕ್ಲಿಪ್ ಗಳು ನಿಮಗೆ ಕೇಳಲು ಲಭ್ಯವಾಗುತ್ತವೆ. ಅದರ ಉಪಯೋಗವನ್ನು ಎಲ್ಲರೂ ಪಡೆದರೆ ನಮ್ಮ ಪ್ರಯತ್ನ ಸಾರ್ಥಕವಾದೀತು.
------------------------------------------
ಸಾಧನಾ ಪಂಚಕಂ -ಮೆಟ್ಟಲು- 37+38+39+40
37. ಪ್ರಾಕ್ಕರ್ಮ ಪ್ರವಿಲಾಪ್ಯತಾಮ್
-ಸಂಚಿತ ಕರ್ಮಗಳ ಫಲವನ್ನು ಅನುಭವಿಸು
38. ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಮ್
ಹಾಗೆಯೇ ಮನೋಬಲದಿಂದ ಭವಿಷ್ಯ ಬಗ್ಗೆಯೂ ಆತಂಕ ಪಡದಿರು
39. ಪ್ರಾರಬ್ಧಂ ತ್ವಿಹ ಭುಜ್ಯತಾಮ್
ಪ್ರಾರಬ್ಧ ಕರ್ಮಗಳನ್ನು ಇಲ್ಲಿ ಅನುಭವಿಸು.
40. ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್
-ಅನಂತರ ಬ್ರಹ್ಮಾನುಭವದಲ್ಲಿ ಸ್ಥಿತನಾಗಿರು.

Sunday, July 24, 2011

ಸಾಧನಾ ಪಂಚಕಮ್-ಭಾಗ -11

35. ಪೂರ್ಣಾತ್ಮಾ ಸುಸಮೀಕ್ಷತಾಮ್
ಸರ್ವವ್ಯಾಪಿಯಾಗಿರುವ ಆತ್ಮನನ್ನು ದರ್ಶಿಸು
36. ಜಗದಿದಂ ತದ್ಬಾಧಿತಂ ದೃಶ್ಯತಾಮ್
ಆ ಕ್ಷಣ ಭಂಗುರದ ಜಗತ್ತು ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಮನಗಾಣು

Saturday, July 23, 2011

ಉತ್ತರ ಸಿಕ್ಕಿತು!


      ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************
-ಕ.ವೆಂ.ನಾಗರಾಜ್.

Friday, July 22, 2011

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು:ಖ ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ಚ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಈ ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

ಸಾಧನಾ ಪಂಚಕಮ್-ಭಾಗ -10

33 ಏಕಾಂತೇ ಸುಖಮಾಸ್ಯತಾಮ್
-ಏಕಾಂತದ ಬದುಕನ್ನು ಆಶ್ರಯಿಸು
34. ಪರತರೇ ಚೇತ: ಸಮಾಧೀಯತಾಮ್
-ಚಿತ್ತವನ್ನು ಪರಮಾತ್ಮನಲ್ಲಿ ಲೀನಗೊಳಿಸು