Pages

Friday, April 12, 2013

"ಮಾತೃ ವಂದನಾ"



ಓಂ
ವೇದಭಾರತೀ, ಹಾಸನ

ಬಾಲ ಸಂಸ್ಕಾರ ಶಿಬಿರದ ವಿಶೇಷ ಕಾರ್ಯಕ್ರಮ

"ಮಾತೃ ವಂದನಾ"

ದಿನಾಂಕ ೧೪-೦೪-೨೦೧೩ ಭಾನುವಾರ ಬೆ. ೯.೩೦
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ, ರವೀಂದ್ರ ನಗರ, ಹಾಸನ

ಅಧ್ಯಕ್ಷತೆ:
ಶ್ರೀ ಸಿ.ಎಸ್. ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಮುಖ್ಯ ಅತಿಥಿಗಳು:
ಡಾ|| ವಾಮನರಾವ್ ಬಾಪಟ್,
ವಿಭಾಗ ಸಂಘಚಾಲಕರು, ರಾ.ಸ್ವ.ಸಂಘ, ಮೈಸೂರು

ಶ್ರೀ ಕೆ.ಪಿ.ಎಸ್. ಪ್ರಮೋದ್,
ಮುಖ್ಯಸ್ಥರು, ಅಮೋಘ್ ಛಾನಲ್ ಮತ್ತು
ಪ್ರಧಾನ ಸಂಪಾದಕರು, ಜನಮಿತ್ರ, ಹಾಸನ.

      ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಅಂದು ತಮ್ಮ ತಂದೆ-ತಾಯಿಗಳನ್ನು ಗೌರವಿಸುವ 
ಮತ್ತು ಭಾರತಮಾತಾ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ. ಮಕ್ಕಳ ತಂದೆ-ತಾಯಿ, ಪೋಷಕರುಗಳು
 ಈ ಸಂದರ್ಭದಲ್ಲಿ ತಪ್ಪದೆ ಹಾಜರಿರಲು ವಿನಂತಿಸಿದೆ.

  ಕ.ವೆಂ.ನಾಗರಾಜ್                                           ಚಿನ್ನಪ್ಪ
          ಅಧ್ಯಕ್ಷರು                                                       ಕಾರ್ಯದರ್ಶಿ

    ಮತ್ತು ಪದಾಧಿಕಾರಿಗಳು, ವೇದಭಾರತೀ, ಹಾಸನ.

Sunday, April 7, 2013

ಹಾಸನಲ್ಲಿ ಆರಂಭವಾದ ಬಾಲ ಸಂಸ್ಕಾರ ಶಿಬಿರ

ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತನಾರಾಯಣ ಅವರು ನಂತರ ಮಾತನಾಡಿದರು. ‘ಮನೆ ಮನೆಯೂ ಸಂಸ್ಕಾರ ಕೇಂದ್ರವಾಗಬೇಕು’ ಹಾಸನ, ಏ. ೮: ಶ್ರೇಷ್ಠತೆಯಿಂದ ಅತ್ಯಂತ ಶ್ರೇಷ್ಠತೆಯೆಡೆಗೆ ಸಾಗುವುದೇ ನಿಜವಾದ ಶಿಕ್ಷಣ; ಇಂತಹ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆಯಲು ಇಂದು ಪ್ರತಿ ಮನೆ ಮನೆಯೂ ಸಂಸ್ಕಾರ ಕೇಂದ್ರಗಳಾಗಬೇಕು ಹಾಗೂ ವ್ಯಕ್ತಿತ್ವ ವಿಕಾಸ ಕೇಂದ್ರಗಳಾಗಬೇಕು ಎಂದು ನಗರದ ನಿವೇದಿತಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಂತ ನಾರಾಯಣ ಅವರು ಕಿವಿಮಾತು ಹೇಳಿದರು. ಹಾಸನದ ‘ವೇದ ಭಾರತೀ’ ವತಿಯಿಂದ ಆರಂಭವಾದ ೧೦ ದಿನಗಳ ‘ಬಾಲ ಸಂಸ್ಕಾರ ಶಿಬಿರ’ವನ್ನು ಭಾನುವಾರ ನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಮೆಕಾಲೆ ಪ್ರಣೀತ ಶಿಕ್ಷಣಕ್ಕೆ ಒಳಪಟ್ಟಿರುವ ಭಾರತೀಯರು ಇಂದು ಕೇವಲ ಹಣ ಸಂಪಾದನೆ ಮಾಡುವ ಶಿಕ್ಷಣಕ್ಕೆ ಜೋತುಬಿದ್ದು, ನಮ್ಮ ಮಕ್ಕಳಿಗೆ ನಾವೇ ಮಾನಸಿಕ ಒತ್ತಡ ಹೇರುತ್ತಾ; ಅಂಕ ಗಳಿಕೆಯನ್ನೇ ಗುರಿಯಾಗಿಸಿ; ಅವರಿಗೆ ಅವಿಧೇಯತೆ, ಸುಳ್ಳು ಹೇಳುವುದು; ಕಳ್ಳತನ ಮಾಡುವುದು; ವಂಚನೆ ಮಾಡುವುದು ಇತ್ಯಾದಿ ಕೆಟ್ಟ ಶಿಕ್ಷಣವನ್ನು ಪರೋಕ್ಷವಾಗಿ ಕಲಿಸುತ್ತಿದ್ದೇವೆ. ನಾವು ಮಕ್ಕಳಿಗೆ ದುಡಿದು ತಿನ್ನುವುದನ್ನು ಕಲಿಸದೆ; ಹೊಡೆದು ತಿನ್ನುವುದನ್ನು ಕಲಿಸುತ್ತಿದ್ದೇವೆ ಎಂದು ವಿಷಾದಿಸಿದರು. ಇಂತಹ ಕೆಟ್ಟ ಮೆಕಾಲೆ ಪ್ರಣೀತ ಶಿಕ್ಷಣ ನಮಗೆ ಬೇಡ; ಮಹರ್ಷಿ ಪ್ರಣೀತ ಶಿಕ್ಷಣ ನಮಗಿಂದು ಅತ್ಯಗತ್ಯವಾಗಿದೆ; ಸಂಸ್ಕಾರ ರಹಿತ ಶಿಕ್ಷಣ ಶಿಕ್ಷಣವೇ ಅಲ್ಲ; ಪಠ್ಯ ಕ್ರಮ ಆಧರಿಸಿದ ನೈತಿಕ ಶಿಕ್ಷಣವೂ ಬೇಕಾಗಿಲ್ಲ; ಮನೆ ಮನೆಗಳಲ್ಲಿ ಈ ಹಿಂದೆ ಇದ್ದಂತಹ ಉತ್ತಮ ಮೌಲ್ಯಗಳನ್ನೆ ಪುನರ್ ಪ್ರತಿಷ್ಠಾಪಿಸಬೇಕು; ಆಗ ಮಕ್ಕಳು ತಾವಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತವೆ; ಪೋಷಕರೇ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅವರು ತಿಳಿಹೇಳಿದರು. ಆಧ್ಯಾತ್ಮವೆಂದರೆ ವಯಸ್ಸಾದವರು ಕಾಲಹರಣ ಮಾಡಲು ಆಶ್ರಯಿಸುವ ಸಂಗತಿಯಲ್ಲ; ಸದಾ ಕಾಲವೂ ಬೇರೆಯವರ ಹಿತಚಿಂತನೆ ಕುರಿತು ಆಲೋಚಿಸುವುದೇ ನಿಜವಾದ ಆಧ್ಯಾತ್ಮ. ಹೀಗಾಗಿ ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ಆಧ್ಯಾತ್ಮದ ಪರಿಚಯ ಮಾಡಬೇಕು; ಅದಕ್ಕೆ ಪ್ರೇರಣೆ ನೀಡುವ ಪ್ರತಿ ಸಂಗತಿಗಳನ್ನೂ ಗಮನಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ವೇದ ಭಾರತೀ ಅಧ್ಯಕ್ಷರಾದ ಕ.ವೆಂ. ನಾಗರಾಜು ಪ್ರಾಸ್ತಾವಿಕ ಮಾತುಗಳನ್ನಾಡಿ, ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ. ಜಗತ್ತಿನ ಸರ್ವರಿಗೂ ಮುಕ್ತವಾಗಿ ತೆರೆದುಕೊಂಡಿರುವ ವೇದ ಮಂತ್ರಗಳನ್ನು ಆಧರಿಸಿ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲು ಪ್ರಯತ್ನಿಸಲಾಗುವುದು. ಇಲ್ಲಿ ಪಡೆದ ಸಂಸ್ಕಾರವನ್ನು ಜೀವನದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಕೋರಿದರು. ವೇದ ಭಾರತೀ ಸಹೋದರ ಸಂಸ್ಥೆಗಳಾದ ‘ವೇದಸುಧೆ’; ‘ವೇದ ಜೀವನ’ಕ್ಕೆ ಸೇರಿದ ಬ್ಲಾಗ್ಗಳಿಗೆ ಓದುಗರ ಸಂಖ್ಯೆ ದಿನೇದಿನೇ ಏರುತ್ತಿದೆ; ಈಗಾಗಲೇ ‘ವೇದಸುಧೆ’ಯಲ್ಲಿ ೯೫ ಸಾವಿರ ಮೀರಿ ಪುಟಗಳ ವೀಕ್ಷಣೆಯಾಗಿದೆ ಎಂದು ಹೆಮ್ಮೆಪಟ್ಟರು. ‘ವೇದಸುಧೆ’ ಬ್ಲಾಗ್ ಸಂಪಾದಕ ಹಾಗೂ ವೇದ ಭಾರತೀ ಪದಾಧಿಕಾರಿ ಹರಿಹರಪುರ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಚಿನ್ನಪ್ಪ ಹಾಜರಿದ್ದರು. ಆರಂಭದಲ್ಲಿ ವೇದಘೋಷ ನಡೆಯಿತು. ಈ ಬಾಲ ಸಂಸ್ಕಾರ ಶಿಬಿರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ವೇದಾಧ್ಯಾಯಿ ವಿಶ್ವನಾಥ ಶರ್ಮ ಮತ್ತಿತರರು ತರಬೇತಿ ನೀಡುವರು.

ವರದಿ: ಹೆಚ್.ಎಸ್.ಪ್ರಭಾಕರ್
ಹಾಸನ ಜಿಲ್ಲಾ   ವರದಿಗಾರರು
ಸಂಯುಕ್ತ ಕರ್ನಾಟಕ



ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಜೊತೆಗೆ ಪೋಷಕರು
ವೇದಾಧ್ಯಾಯೀ ಶ್ರೀ ಅನಂತನಾರಾಯಣ ಅವರಿಂದ ಉದ್ಘಾಟನಾ ಭಾಷಣ
ವೇದ ಭಾರತಿಯ ಮುಖ್ಯ ಸಂಯೋಜಕರಾದ ಶ್ರೀ ಕವಿ ನಾಗರಾಜ್ ಅವರಿಂದ ಪ್ರಾಸ್ತಾವಿಕ ನುಡಿ
ಮನಸಾ ಸತತಂ ಸ್ಮರಣೀಯಂ ಗೀತೆ ಹೇಳಿಕೊಡುತ್ತಿರುವ ಭಗಿನಿ ಸುಧಾನಟರಾಜ್
 ವೇದ ಪಾಠ ಮಾಡುತ್ತಿರುವ ವೇದಾಧ್ಯಾಯೀ ಶ್ರೀ ಪ್ರಸಾದ್ ಶರ್ಮ

" ದೇಶ ದೇಶ ದೇಶ ದೇಶ ದೇಶ ನನ್ನದು"  ಶಿಬಿರಗೀತೆ  ಹೇಳಿಕೊಡುತ್ತಿರುವ ಭಗಿನಿ ಕಲಾವತಿ

Wednesday, April 3, 2013

ಕುಸುಮ-2


“ಎಲ್ಲರಿಗಾಗಿ ವೇದ”
[11.11.2012 ರಂದು ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿದೆ]

ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ… ಯಜುರ್ವೇದದ 31 ನೇ ಅಧ್ಯಾಯದ 7ನೇ ಮಂತ್ರ ಹೀಗಿದೆ…

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ    ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು.ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
ವೇದವು ಯಾರಿಗಾಗಿ?
ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊ ಟ್ಟಿದ್ದೇನೆ, ಎಂಬುದು     ಭಗವಂತನ ಮಾತು. ಯಜುರ್ವೇದದ 26 ನೇ ಅಧ್ಯಾಯದ 2ನೇ ಮಂತ್ರ ಹೀಗಿದೆ…

ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ,ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ  ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ  ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
 ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ

ಭಾವಾರ್ಥ:
ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ  ಈ ವಿಚಾರವು ಸ್ಪಷ್ಟವಾಗುತ್ತದೆ.ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದಿನ ವೇದಮಂತ್ರದಲ್ಲಿ ನೋಡ   ಬಹುದಾಗಿದೆ. 

Tuesday, April 2, 2013

ನಿಮ್ಮ ಜೀವನದ ಗುರಿ ಏನು?

ವೇದಸುಧೆಯ ಆತ್ಮೀಯ ಬಂಧುಗಳೇ,

                ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಪ್ರಕಟವಾಗುತ್ತಿರುವ ನನ್ನ " ಚಿಂತನ"  ಮತ್ತು "ಎಲ್ಲರಿಗಾಗಿ ವೇದ " ಲೇಖನಗಳನ್ನು ಇಂದಿನಿಂದ ಆರಂಭಿಸಿ ವಾರದಲ್ಲಿ ಎರಡು ಲೇಖನಗಳನ್ನಾದರೂ ಇಲ್ಲಿ ಪ್ರಕಟಿಸಬೇಕೆಂದಿರುವೆ. ಸಾಮಾನ್ಯವಾಗಿ ಪ್ರತೀ ಸೋಮವಾರ ಮತ್ತು ಗುರುವಾರ ಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ಓದಿ ನಿಮ್ಮ ಅಭಿಪ್ರಾಯಗಳನ್ನು     ತಿಳಿಸಿದರೆ ಮುಂದಿನ ನನ್ನ ಬರವಣಿಗೆಗೆ ಸಹಾಯ ವಾಗುವುದು.  ಸಮಾಜದ ಸ್ವಾಸ್ಥ್ಯದ  ದೃಷ್ಟಿಯಿಂದ ಸೂಕ್ತವಲ್ಲ ವೆನಿಸುವ  ವಿಚಾರಗಳನ್ನು ನೀವು ನನ್ನ ಬರವಣಿಗೆಯಲ್ಲಿ ಗಮನಿಸಿದರೆ ತಿಳಿಸಲು    ಹಿಂಜರಿಕೆ ಬೇಡ. ನನ್ನ ಅಭಿಪ್ರಾಯವೇ ಸರಿ ಎಂಬ ಮೊಂಡುವಾದ ನನಗಿಲ್ಲ.  ತಪ್ಪುಗಳನ್ನು  ತಿದ್ದುವ /ಸಲಹೆ ನೀಡುವ ಅಭಿಮಾನಿಗಳಿಗೆ ಸ್ವಾಗತವಿದೆ. ಸಂಸ್ಕೃತ ಅಥವಾ ಶಾಸ್ತ್ರೋಕ್ತ ವೇದ ಪಾಠವಾಗದ ನಾನು ಕೇವಲ ಉಪನ್ಯಾಸಗಳನ್ನು ಕೇಳಿಕೊಂಡು, ವೇದದಿಂದ ಆಕರ್ಶಿತನಾಗಿ  ವೇದದ ಕುರಿತು  ಬರೆಯುವ ಸಾಹಸ ಮಾಡುತ್ತಿರುವೆ. ಬರವಣಿಗೆಗೆ ಆಧಾರ ಪಂಡಿತ್ ಸುಧಾಕರ ಚತುರ್ವೇದಿಗಳ ಗ್ರಂಥಗಳು ಮತ್ತು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು. ಅದಕ್ಕೆ ನನ್ನ ಅಭಿಪ್ರಾಯವನ್ನು ಸೇರಿಸಿ ಬರೆಯುತ್ತಿರುವೆ.
ನಮಸ್ಕಾರಗಳು
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
------------------------------------------------------------------------------------------------------

ಚಿಂತನ-1                                       13.12.2012
ನೀವೇನಂತೀರಾ?             - ಹರಿಹರಪುರಶ್ರೀಧರ್,ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

ನಿಮ್ಮ  ಜೀವನದ ಗುರಿ ಏನು?
ಹೀಗೆಂದು ಕಾಲೇಜು ಹುಡುಗರಿಗೆ  ಪ್ರಶ್ನೆ ಹಾಕಿಬಿಟ್ಟರೆ ಅವರು ತಮ್ಮ ತಲೆಯನ್ನೆಲ್ಲಾ ಹೋಳುಮಾಡಿಕೊಂಡು ತಮ್ಮ ಕಣ್ಮುಂದೆ ಬರಬಹುದಾದ ಸರ್ವೋಚ್ಛ ಸ್ಥಿತಿಯನ್ನುಕಲ್ಪಿಸಿಕೊಂಡು ಅವರಿವರನ್ನೆಲ್ಲಾ ಅಂಗಲಾಚಿ ಒಂದಿಷ್ಟು ವಿಷಯ ಸಂಗ್ರಹ ಮಾಡಿ ಐದು ಪುಟದ ಲೇಖನ ಒಂದನ್ನು ಒಂದು ವಾರದ ಅವಧಿಯಲ್ಲಿ ಸಿದ್ಧಪಡಿಸಿಯಾರು!
ಯಾಕೇ? ತನ್ನ ಬರಹಕ್ಕೆ ಇಟ್ಟಿರುವ 25 ಅಂಕಗಳಲ್ಲಿ 15-20 ಆದರೂ ಬಂದು ಅವನ ಪರೀಕ್ಷೆಯಲ್ಲಿ ಪಾಸಾದರೆ ಸಾಕೆಂದು ಅವನ ಯೋಚನೆ. ಬರಹವನ್ನು ಇವ್ಯಾಲ್ಯುಯೇಟ್ ಮಾಡುವವರೂ ಕೂಡ ಬರಹ ಎಷ್ಟು ಉತ್ಕೃಷ್ಟವಾಗಿದೆ! ಎಂದು ಆಲೋಚಿಸುತ್ತಾರೆಯೇ ಹೊರತೂ  ಸಾಮಾನ್ಯಜನರ “ನೆಮ್ಮದಿಯ” ಜೀವನದ ಬಗ್ಗೆ ಯೋಚಿಸುವುದೇ ಇಲ್ಲ. ಯೋಚಿಸುವ ಸಾಮರ್ಥ್ಯ ಕೂಡ  ಕೆಲವರಲ್ಲಿರುವುದಿಲ್ಲ.
ನಮ್ಮ ಮನೆಗೆ ನಮ್ಮ ಸಂಬಂಧಿ ಒಬ್ಬ ನಿವೃತ್ತ ಉಪನ್ಯಾಸಕರು ಬಂದಿದ್ದರು. ನಮ್ಮಮನೆಯಲ್ಲಿ ವೇದಪಾಠ ನಡೆಯುವುದನ್ನು ಮತ್ತು ಮೇಜಿನ ಮೇಲಿರುವ ವೇದ ಸಾಹಿತ್ಯವನ್ನೆಲ್ಲಾ ನೋಡಿ ಹೇಳಿದರು” ಇದೆಲ್ಲಾ ಏನೋ,  ಈಗಾಗಲೇ  ವೃದ್ಧಾಪ್ಯ ಬಂದು ಬಿಡ್ತಾ?-ಕೇಳಿದರು
-“ಯಾಕೆ  ಹೀಗೆ ಕೇಳುತ್ತಿದ್ದೀರಿ?
-ಮತ್ತಿನ್ನೇನು? ವೇದ,ಪುರಾಣ ಎಲ್ಲಾ  ವೃದ್ಧಾಪ್ಯದಲ್ಲಿ ಕಾಲ ಕಳೆಯುವುದಕ್ಕೆ !
-ಈಗ ಏನು ಮಾಡಬೇಕು?
-ನಿಮ್ಮನೆಯಲ್ಲಿ ಟಿ.ವಿ.ಇಲ್ವಾ? ಇಂಟರ್ನೆಟ್ ಇಲ್ವಾ? ಅದೆಷ್ಟು ದಾರಾವಾಹಿಗಳು ಬರುತ್ವೆ! ಅದೆಷ್ಟು  ಸಿನೆಮಾ ನೋಡ್ ಬಹುದು, ಅದೆಲ್ಲಾ ಬಿಟ್ಟು ಇವೆಲ್ಲಾ ಯಾಕೋ?
ಪಾಪ! ಅವರಿಗೆ ನಿವೃತ್ತಿಯಾಗಿ 10-15 ವರ್ಷವೇ ಕಳೆದಿದೆ. ಆರಾಮವಾಗಿ ಟಿ.ವಿ.ನೋಡ್ ಕಂಡು,     ಊರೂರು ಸುತ್ತಿಕೊಂಡು,ಬೇಕಾದ್ದು ತಿನ್ಕೊಂಡು ಆರಾಮವಾಗಿದೀನಿ ಅಂತಾರೆ. ಆದರೆ ಮನುಶ್ಯನಿಗಿರಬಹುದಾದ ಎಲ್ಲಾ ಖಾಯಿಲೆಗಳೂ ಅವರಿಗಿದೆ. ದಿನಕ್ಕೆ  ಒಂದು ಬೊಗಸೆ ಮಾತ್ರೆ ನುಂಗುತ್ತಾರೆ. ನಾನು ಕೇಳಿದೆ ಅವರನ್ನು ನೀವು  ಕಾಲೇಜಿನಲ್ಲಿ ಯಾವ ವಿಷಯ ಪಾಠ ಮಾಡ್ತಾ ಇದ್ರೀ?

- ಪರ್ಸನಾಲಿಟಿ ಡೆವೆಲಪ್ ಮೆಂಟ್  ನನ್ನ ಪೆಟ್ ವಿಷಯ. ನನ್ನಿಂದ ತಯಾರಾದ ಹುಡುಗರು ಎಂತಾ ಭಾಷಣ     ಮಾಡ್ತಾರೆ, ಗೊತ್ತಾ? ಸೊಸೈಟಿಯಲ್ಲಿ ಹೇಗೆ ಬದುಕಬೇಕು, ಅಂತಾ ಸೊಗಸಾಗಿ ಮಾತನಾಡುವ ಹುಡುಗರನ್ನು ತಯಾರು ಮಾಡಿದ್ದೇನೆ- ಅವರು ಬಹಳ ಹೆಮ್ಮೆಯಿಂದ ಹೇಳಿದರು
-ನಿಮ್ಮ ಶಿಷ್ಯರಾಗಿದ್ದವರಲ್ಲಿ ಅನೇಕರು ಡಾಕ್ಟರ್ ಆಗಿರಬಹುದು, ಕೆಲವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರಬಹುದು ಅಲ್ವೇ?
- ಓಹೋ !  ನೂರಾರು ಜನ ನನ್ನ ಶಿಷ್ಯರು ಡಾಕ್ಟರ್ ಗಳಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಗಳಿದ್ದಾರೆ.
-  ಪ್ರಸಾದ್ ಅಂತಾ ನಿಮ್ಮ ಸ್ಟುಡೆಂಟ್ ಒಬ್ಬ ಮೈಸೂರಲ್ಲಿದ್ದ. ಅವನು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾಇದ್ದ. ಕಾಲೇಜು ದಿನಗಳಲ್ಲಿ ಅವನನ್ನು ಒಳ್ಳೆಯ ಭಾಷಣಕಾರನನ್ನಾಗಿ ತಯಾರು ಮಾಡಿದ್ದಿರಿ, ಅಲ್ವೇ?
- ಅವನ ಮಾತು ಬೇಡ ಬಿಡು. ಅವನೊನೊಬ್ಬ ರಾಕ್ಷಸನಾಗಿಬಿಟ್ಟ.   ಮದುವೆಯಾದ ಆರು ತಿಂಗಳಲ್ಲಿ ಅವನ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು.
-ಯಾಕೆ ಹಾಗಾಯ್ತು?
-ಅವನಿಗೆ ಮದುವೆಗೆ ಮುಂಚೆಯೇ ಎರಡು ಮೂರು ಹುಡುಗಿಯರ ಸಂಬಂಧ ಇತ್ತು. ಮದುವೆಯಾದಮೇಲೂ ಒಬ್ಬಳ ಜೊತೆ ಇವನ ಸಂಬಂಧ ಮುಂದುವರೆಯಿತು. ಹೆಂಡತಿ ಜೊತೆ ವಿನಾಕಾರಣ ಜಗಳ ಮಾಡ್ತಾ ಇದ್ದ.ಕೆಲವು ದಿನ ಕಂಪನಿಯಿಂದ ಬರುವಾಗ ರಾತ್ರಿ ಬಲು ತಡವಾಗ್ತಾಇತ್ತಂತೆ. ರಾತ್ರಿ ಹತ್ತು-ಹನ್ನೊಂದರ ಸಮಯದಲ್ಲಿ ಕುಡಿದು ಬರ್ತಾಇದ್ದ. ಹೆಂಡತಿಗೆ ಇವೆಲ್ಲಾ ಗೊತ್ತಾಯ್ತು. ಒಳ್ಳೆ ಹುಡುಗಿ ಆಕೆ. ಮರ್ಯಾದೆಗೆ ಅಂಜಿ ನೇಣಿಗೆ ಶರಣಾದಳು…..
ಕೊನೆಯಮಾತು ಹೇಳುವಾಗ  ಅವರ ಕಣ್ಣಂಚಿನಲ್ಲಿ ನೀರು ಹರಿದಿತ್ತು…………
ನಾನು ಹೇಳಿದೆ-
-ನಿಮ್ಮ ಪ್ರಶ್ನೆಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿರಬಹುದು, ಅನ್ಕೋತೀನಿ. ಅಧ್ಯಾತ್ಮ, ವೇದ ಉಪನಿಷತ್ತುಗಳ ಪರಿಚಯ, ಸತ್ ಸಂಸ್ಕಾರಗಳು  ನನಗೆ ನಿಜವಾಗಲೂ ಬಾಲ್ಯದಲ್ಲೇ ಸಿಗಬೇಕಿತ್ತು. ನಮಗೆ ಆಗ ಲಭ್ಯವಾಗಲಿಲ್ಲ. ಈಗಲಾದರೂ  ವೇದಾಭ್ಯಾಸ ಮಾಡುತ್ತಾ , ಆಸಕ್ತರೆಲ್ಲರಿಗೆ  ವೇದದಲ್ಲಿ ಲಭ್ಯವಿರುವ “ನೆಮ್ಮದಿಯ ಬದುಕಿನ ಸೂತ್ರಗಳ ಅರಿವು ಮೂಡಿಸುವುದಕ್ಕೆ ನನ್ನ ಕೈಲಾದ ಪ್ರಯತ್ನ ಮಾಡಬೇಕೂಂತ  ಇದೆಲ್ಲಾ ವ್ಯವಸ್ಥೆಗಳು. ನಾನೂ ಅದರ ಪ್ರಯೋಜನ ಪಡೀತೀನಿ. ಆಸಕ್ತರು ಯಾರು ಬಂದರೂ ಅವರಿಗೂ ಪಡೆಯಲು ಅವಕಾಶ ಮಾಡಿಕೊಡ್ತೀನಿ. ಇಲ್ಲಿ ಯುವಕರು ಬರ್ತಾರೆ, ಗೃಹಿಣಿಯರು ಬರ್ತಾರೆ, ಉದ್ಯೋಗಿಗಳು ಬರ್ತಾರೆ. ಎಲ್ಲಾ ಒಟ್ಟಿಗೆ  ಒಂದಿಷ್ಟು ವೇದಾಧ್ಯಯನ  ಆರಂಭ ಮಾಡಿದೀವಿ. ಅದರಲ್ಲಿ ಎಲ್ಲರಿಗೂ ಸಂತಸವಿದೆ. ನನಗಂತೂ ನನ್ನ ನಿವೃತ್ತಿಯ ಜೀವನದಲ್ಲಿ ಒಂದು ದಿನವೂ “ಹೇಗೆ ಕಳೆಯಬೇಕಪ್ಪಾ! ಅನ್ನಿಸಲಿಲ್ಲ. ಸಂತೋಷವಾಗಿ ಕಾಲ ಸಾಗಿದೆ. ಆರೋಗ್ಯವಾಗಿ ನೆಮ್ಮದಿಯಾಗಿರುವೆ. ಅದಕ್ಕಾಗಿ ಇವೆಲ್ಲಾ!!
          ಪರ್ಸನಾಲಿಟಿ ಡೆವೆಲಪ್ ಮೆಂಟ್ ಅಥವಾ ವ್ಯಕ್ತಿತ್ವ ವಿಕಸನ ಎಂದರೆ  ಭಾಷಣ ಹೇಗೆ ಮಾಡಬೇಕು? ಅನ್ನೋದನ್ನು ಕಲಿಸೋದಾ? ಅಥವಾ ನೆಮ್ಮದಿಯ ಜೀವನ ಹೇಗೆ ನಡೆಸೋದು ಅನ್ನೋದನ್ನು ಕಲಿಯೋದಾ?
ನೀವೇನಂತೀರಾ?

Thursday, March 28, 2013

ನಾನು



ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು
ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||

ಸಾಯಲಾರದ ನಾನು ಬದುಕಲಾರದ ನಾನು
ನಾನಾ ಸಂತೆಯಲಿ ಸರಕಾದ ನಾನು
ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು
ಕಣ್ಣಿದ್ದು ಕಾಣದಾ ಕುರುಡನೇ ನಾನು || ೧ ||

ಅವನಿಗೆ ಅವ ನಾನು ಇವನಿಗೆ ಇವ ನಾನು
ಅವನಿಯೊಳಾಳ್ವಿಕೆ ಮಾಡಿಹುದೇ ನಾನು
ನಾನು ನಾನೆನುತ ಅವಿರತ ಸೆಣಸಾಡಿ
ನರರು ಹತರಾಗಿ ಗೆದ್ದಿದ್ದೆ ನಾನು || ೨ ||

ಬಗೆ ಬಗೆ ಮುಖವಾಡ ಧರಿಸಿಕೊಂಡಿಹ ನಾನು
ಒಳ ನಾನು ಮರೆಯಾಗಿ ನರಳಿದ್ದೇ ನಾನು
ಕಪಟ ಬಂಧವ ಮುರಿದು ಹೊರಬರಲು ನಾನು
ಉದ್ಧಾರವಾದದ್ದೇ ನಿಜ ನಾನು ನಾನು || ೩ ||
***************
-ಕ.ವೆಂ.ನಾಗರಾಜ್.