Pages

Wednesday, March 10, 2010

ಆತ್ಮೀಯ ಹಾರೈಕೆ

ಆತ್ಮೀಯ ಶ್ರೀಧರ್,
ನಮಸ್ಕಾರ ತಮಗೆ,
ತಮ್ಮ ಬಗ್ಗೆ ತಿಳಿದುಕೊಂಡೆ, ಬಹಳ ಸಂತೋಷವಾಯಿತು.
ಸ್ವಾರ್ಥಿಗಳು ಏನನ್ನೂ ಮಾಡಲಾರರೇ ವಿನಃ ನಿಸ್ವಾರ್ಥರು ತಮ್ಮನ್ನು ಸದಾ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡೆ ಇರುತ್ತಾರೆ. ತಮ್ಮ ಬಹುಮುಖಿ ವ್ಯಕ್ತಿತ್ವದ ಅರಿವಾಗುತ್ತಿದೆ. ತಮ್ಮ ಸಮಾಜಮುಖಿ ಕೆಲಸಕ್ಕೆ ಎಷ್ಟೇ ಕೃತಜ್ಞತೆ ಹೇಳಿದರೂ ಅದು ಸಾಲದ್ದು ಅಥವಾ ಏನೋ ನಮ್ಮಿಂದ ಆಗದ್ದಕ್ಕೆ ಸುಮ್ಮನೇ ಹೇಳಬೇಕಲ್ಲ ಅಂತ ಹೇಳಿದ್ದೆವೇನೋ ಅನ್ನಿಸಿಬಿಡುತ್ತದೆ. ಯಾವುದೇ ಪ್ರಶಸ್ತಿ-ಫಲಕಗಳ ಹಿಂದೆ ಬೀಳದೆ 'ನಿಜದ ಅರಿವಿ'ನೆಡೆಗೆ ನೀವು ಹೆಜ್ಜೆ ಹಾಕಿರುವುದು ನಿಮ್ಮ ಪುಣ್ಯ ಸಂಚಯನಕ್ಕೆ ಬಹಳ ಅನುಕೂಲ.
ಇನ್ನು ನೀವು ಹೇಳಿದ ಹಾಗೇ ವೃತ್ತಿ ಜೀವನ ಒಂದು ಇರಲೇಬೇಕು, ಅದರ ಹಕ್ಕು-ಬಾಧ್ಯತೆಗಳು ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮನೆ-ಕುಟುಂಬ ಇದರ ಜವಾಬ್ದಾರಿ ಇನ್ನೊದು ಕಡೆಗೆ. ಇವುಗಳ ಜೊತೆಗೇ ಇಂದಿನದಿನ ಸಮಾಜ ಸೇವೆ ಮಾಡುವುದು ಬಹಳ ಕಷ್ಟಸಾಧ್ಯದ ಮಾತೇ ಸರಿ. ಹಲ್ಲುಗಳ ಮಧ್ಯೆಯ ನಾಲಿಗೆಯಂತೆ, ಕಷ್ಟಗಳ ಮಧ್ಯೆಯೇ ನಮ್ಮನ್ನು ಮರೆತು ಉಳಿದ ಸಹಯಾತ್ರಿಕರಿಗೆ [ಜೀವನವೇ ಯಾತ್ರೆ ಅಂತ ತಿಳಿದರೆ] ಮಾರ್ಗದರ್ಶಿಸುವಲ್ಲಿ, ಒಳ್ಳೆಯ ಗುರು-ಹಿರಿಯ ತತ್ವಬೋಧಕರನ್ನು ತೋರಿಸುವಲ್ಲಿ ತಾವು ಮಾಡಿರುವ ಕೆಲಸ ಶ್ಲಾಘನೀಯ, ನಮ್ಮ ಬಾಯಿಮಾತಿನ ಶ್ಲಾಘನೆ ಬೇಡ ಬಿಡಿ, ಇದು ಬೂಟಾಟಿಕೆಯಾದೀತು, ನಿಮಗೆ ದೇವರೇ ನಿರ್ಮಿಸಿಕೊಡುವ ಬಹುದೊಡ್ಡ ಶ್ಲಾಘನೆ ಜನ್ಮಾಂತರಕ್ಕೂ ಸಿಗಲಿದೆ; ಇದರಲ್ಲಿ ಯಾವುದೇ ಸಂಶಯವಿಲ್ಲ.
ರಾ.ಸ್ವ.ಸಂಘದ ಬಗ್ಗೆ ಬಹಳ ಕುತೂಹಲ-ಆಸಕ್ತಿ ಇದ್ದ ನನಗೆ, ನಮ್ಮೂರಿನಲ್ಲಿ ನಾನು ಚಿಕ್ಕವನಿರುವಾಗಲೇ ನಮ್ಮ ಮನೆಯಲ್ಲಿ ಬೈಠಕ್ ನಡೆದಿತ್ತು, ಹೀಗಾಗಿ ಅದರ ಕಾರ್ಯತತ್ಪರತೆ ಗೊತ್ತಿರುವ ವಿಷಯ, ಅದಿಲ್ಲದಿದ್ದರೆ ನಮ್ಮ ಹಿಂದೂಗಳನ್ನೆಲ್ಲಾ ಕುತ್ಸಿತ ರಾಜಕಾರಣಿಗಳು ಏನುಮಾಡುತ್ತಿದ್ದರು ಎನ್ನುವುದು ಊಹಿಸಲೂ ಕಷ್ಟ. ಅದರಲ್ಲಿ ತೊಡಗಿದವರು ಒಂಥರಾ ರಾಮಕೃಷ್ಣಾಶ್ರಮದಲ್ಲಿ ತರಬೇತಿ ಪಡೆದಂತೆ ಇರುತ್ತಾರೆ ಎಂದು ಬೇರೆ ಹೇಳಬೇಕೇ?
ನಮ್ಮಲ್ಲಿ ವರದಹಳ್ಳಿಯ ಭಾಗವನ್ ಶ್ರೀಧರರ ಬಗ್ಗೆ ತಾವು ಕೇಳಿರಬಹುದು, ಅಂಥ ಮಹಾತ್ಮರ ಹೆಸರನ್ನು ಪಡೆದಿದ್ದೀರಿ, ನನಗೆ ಅದೂ ಬಹಳ ಸಲ ನೆನಪಿಗೆ ಬಂತು.ಹೀಗಾಗಿ ನಿಮ್ಮನ್ನು ಅರಿತುಕೊಂಡು ಬಹಳ ಆಭಾರಿಯಾಗಿದ್ದೇನೆ, ನಿಮಗೆ ಪ್ರಜ್ಞಾನಮೂಲ ಪರಬ್ರಹ್ಮ ಸುದೀರ್ಘ ಅಕ್ಷಯ ಆಯುರಾರೋಗ್ಯ ,ನಿರ್ವಿಘ್ನತೈಶ್ವರ್ಯ, ಜ್ಞಾನ-ಸಂಪತ್ ಸಮೃದ್ಧಿ ಕರುಣಿಸಲೆಂದು ಅವನಲ್ಲಿ ಪ್ರಾರ್ಥಿಸಿ ಶುಭಾಹಾರೈಸುತ್ತಿದ್ದೇನೆ .
|| ಸತ್ಯಾಃ ಸಂತು ಶ್ರೀ ಶ್ರೀಧರಸ್ಯ ಕಾಮಾಃ || [ಸ್ವರ ಸೇರಿಸಿ ಓದಿಕೊಳ್ಳಿ]
ಧನ್ಯವಾದಗಳು, ಶುಭದಿನ
ವಿ.ಆರ್.ಭಟ್

Monday, March 8, 2010

ಬೆಳಕಿನ ಕಿಂಡಿ

ವೇದವು ಯಾರ ಸ್ವತ್ತು?
ಇಂದು ವೇದದ ಬಗೆಗೆ ತಪ್ಪು ಕಲ್ಪನೆಗಳೇ ಹೆಚ್ಚು.ವೇದವು ಯಾರ ಸ್ವತ್ತು? ಬ್ರಾಹ್ಮಣರು ಮಾತ್ರ ಕಲಿಯ ಬೇಕೆ? ಅಥರ್ವಣವೇದದಲ್ಲಿ ಈ ಬಗ್ಗೆ ಏನು ಹೇಳಿದೆ? ಈ ಬಗ್ಗೆ ನೋಡೋಣ.

ಪ್ರಜಯಾ ಸ ವಿಕ್ರಿಣೀತೇ
ಪಶುಭಿಶ್ಚೋಪದಸ್ಯತಿ|
ಯ ಆರ್ಷೇಯೇಭ್ಯೋ ಯಾಚದ್ಭ್ಯೋ
ದೇವಾನಾಂ ಗಾಂ ನ ದಿತ್ಸತಿ||

[ಅಥರ್ವ.೧೨.೪.೨]

ಅರ್ಥ:
ಯಾವನು ಆರ್ಷೇಯರಾದ ಅಂದರೆ ಪರಮಋಷಿಯಾದ ಪರಮಾತ್ಮನ ಮಕ್ಕಳಾದ ಜ್ಞಾನಯಾಚನೆ ಮಾಡುವ ಜನರಿಗೆ, ವಿದ್ವಜ್ಜನರ ಸಂಪತ್ತಾದ ವೇದವಾಣಿಯನ್ನು ಕೊಡಲು ಇಚ್ಛಿಸುವುದಿಲ್ಲವೋ, ಅವನು ಮಕ್ಕಳು-ಮರಿಗಳೊಂದಿಗೆ ಮಾರಿಹೋಗುತ್ತಾನೆ. ಮತ್ತು ತನ್ನ ಪಶು ಸಂಪತ್ತಿನೊಂದಿಗೆ ನಷ್ಟ-ಭ್ರಷ್ಟನಾಗಿ ಹೋಗುತ್ತಾನೆ.
ಇದು ವೇದ ವಾಣಿ. ಇನ್ಯಾರ ಅಪ್ಪಣೆ ಬೇಕು?
ವೇದವನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳು ಬೇಡವೇ? ಅರ್ಹತೆ ಬೇಡವೇ? ಯಾವುದೇ ವಿದ್ಯೆಯನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳೂ ಬೇಕು, ಅರ್ಹತೆಯೂ ಬೇಕು.ಹಾಗಾದರೆ ಕಟ್ಟುಪಾಡುಗಳೇನು? ವೇದವನ್ನು ಕಲಿಯಲಿಚ್ಛಿಸುವವನು ಮಾಂಸಾಹರಿಯಾಗಿದ್ದರೆ ಮೊದಲು ಮಾಂಸಾಹಾರ ತ್ಯಜಿಸಬೇಕು.ವೇದವನ್ನು ಕಲಿಯುವ ತೀವ್ರ ಇಚ್ಛೆ ಹೊಂದಿರಬೇಕು.ಅರ್ಹತೆ ಏನು? ಉಪನಯನ ಸಂಸ್ಕಾರವಾಗಬೇಕು. ಕಲಿಯಬೇಕೆಂಬ ಇಚ್ಛೆ ತೀವ್ರ ವಾದರೆ ಗುರುವು ದೊರೆಯುತ್ತಾನಷ್ಟೇ ಅಲ್ಲ,ಬೇಕಾದ ಸಿದ್ಧತೆ ಮಾಡಿಸುತ್ತಾನೆ.ಈಗಾಗಲೇ ಅಂತಹ ಗುರುಗಳು ನಮ್ಮ ಮಧ್ಯೆಯೇ ಇದ್ದಾರೆ.ಉಪಯೋಗವಾಗಬೇಕಷ್ಟೆ.

Friday, March 5, 2010

ಕೃತಜ್ಞತೆಗಳು

ಸೇವೆಯಲಿ ತಾನು ತನ್ನನು ಮರೆತುಸಲ್ಲುವುದು
ಯಾವ ಕಾಲಕೂ ಬರುವ ಪುಣ್ಯ ಸಂಚಯನ
ಜೀವಿತಾವಧಿಯುದ್ದ ಮಾಡು ವೇದಾಧ್ಯಯನ
ಜವನ ಧಿಕ್ಕರಿಸುತಲಿ | ಜಗದಮಿತ್ರ

ಸನ್ಮಿತ್ರರಾಗಿ ನಮ್ಮೆಲ್ಲಾ ಓದುಗ ಮಿತ್ರರಿಗೆ ನಿಸ್ವಾರ್ಥರಾಗಿ ವೇದಸುಧೆಯನ್ನು ಹರಿಸುತ್ತಿರುವ ಶ್ರೀ ಶ್ರೀಧರ್ ಅವರಿಗೆ ಧನ್ಯತಾಪೂರ್ವಕ ಅರ್ಪಿಸಿದ ಸಾಲುಗಳು, ಓದುಗ ಸ್ನೇಹಿತ ಬಂಧುಗಳೇ, ಬನ್ನಿ ವೇದಸುಧೆಯಲ್ಲಿ, ವೇದದ ಸೇವಾ ಕೈಂಕರ್ಯದಲ್ಲಿ ಕೈಜೋಡಿಸೋಣ
--ವಿ.ಆರ್.ಭಟ್

Wednesday, March 3, 2010

ಸುಭಾಷಿತಗಳು

ಹಾಸನದವರಾದ ಹಂಸಾನಂದಿಯವರು ಕ್ಯಾಲಿಫೊರ್ನಿಯಾದಲ್ಲಿದ್ದು ನಮ್ಮ ಸಂಸ್ಕೃತಿಯ ಬಗ್ಗೆ ಅತ್ಯಂತ ಅಭಿಮಾನ ಉಳ್ಳವರಾಗಿದ್ದು ಆಗಿಂದಾಗ್ಗೆ ಸಂಸ್ಕೃತ ಸುಭಾಷಿತಗಳನ್ನು ಸಂಪದಕ್ಕೆ/ವೇದಸುಧೆಗೆ ಕನ್ನಡ ಅರ್ಥದೊಂದಿಗೆ ಬರೆಯುತ್ತಾರೆ. ಅವೆಲ್ಲವೂ ಫೆಬ್ರವರಿ ತಿಂಗಳಿನ ಅವರ ಬರಹಗಳೊಡನೆ ಸೇರುತ್ತಾ ಹೋಗುತ್ತವೆ. ಅವುಗಳನ್ನು ಓದಿ ಪ್ರತಿಕ್ರಿಯಿಸುವಿರಾ?

Tuesday, February 16, 2010

ಶೀಲದ ಮಹಿಮೆ

ವಿದೇಶೇಷು ಧನಂ ವಿದ್ಯಾ
ವ್ಯಸನೇಷು ಧನಂ ಮತಿ:
ಪರಲೋಕೇ ಧನಂ ಧರ್ಮ:
ಶೀಲಂ ಸರ್ವತ್ರ ವೈ ಧನಮ್||


ಪರದೇಶಗಳಿಗೆ ಹೋದಾಗ ವಿದ್ಯೆಯೇ ಧನವು, ಸಂಕಷ್ಟಗಳೆದುರಾದಾಗ ವಿವೇಕರೂಪವಾದ ಧೈರ್ಯವೇ ಧನವು,ಪುಣ್ಯಲೋಕ ಪ್ರಾಪ್ತಿಗೆ ಧರ್ಮವೇ ಧನವು, ಆದರೆ ಶೀಲವಾದರೂ ಎಲ್ಲಾ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಧನವು.ಶೀಲವೇ ಧನವು, ಶೀಲವೇ ಸಂಪತ್ತು, ಶೀಲವೇ ಆಸ್ತಿ, ಶೀಲವೇ ಬಂಡವಾಳ.

Thursday, February 11, 2010

ಹಾಸನದಲ್ಲಿ "ಎಲ್ಲರಿಗಾಗಿ ವೇದ" ಉಪನ್ಯಾಸ



೨೩.೯.೨೦೦೯ ರಂದು ಹಾಸನದ ಶ್ರೀಶಂಕರಮಠದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ನಡೆಸಿಕೊಟ್ಟ "ಎಲ್ಲರಿಗಾಗಿ ವೇದ" ಉಪನ್ಯಾಸದಲ್ಲಿ ಪಾಲ್ಗೊಂಡ ಶ್ರೋತೃವರ್ಗ