Pages

Thursday, February 17, 2011

ನಾವು ಏನೇ ಮಾಡಿದರೂ ಅದರ ಫಲ ಸಿಗಬೇಕು, ತಾನೇ?

ಶ್ರೀ ಸುಧಾಕರಶರ್ಮರ ಮಾತುಗಳನ್ನು ಕೇಳಿದ ಕೆಲವರು ನನಗೆ ಮೇಲ್ ಮಾಡುತ್ತಾರೆ, ಕೆಲವರು ದೂರವಾಣಿಯಲ್ಲೂ ಮಾತನಾಡುತ್ತಾರೆ  "ಸಾರ್ ಶರ್ಮರು ಹೇಳುವ ವಿಷಯಗಳು ಸತ್ಯವಾಗಿ ಕಾಣುತ್ತಿವೆ, ಆದರೆ ತಲೆತಲಾಂತರದಿಂದ ನಮ್ಮ ಮನೆಗಳಲ್ಲಿ ನಡೆಸಿಕೊಂಡುಬಂದಿರುವ ಆಚರಣೆಗಳನ್ನು ಬಿಡಬೇಕಾಗುತ್ತದಲ್ಲಾ! ಬಲು ಗೊಂದಲ ಉಂಟಾಗಿದೆ"
ಹೌದು, ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಆಚರಣೆಗಳನ್ನು ಬದಲಿಸುವುದು ಬಹಳ ಕಷ್ಟ. ಆದರೆ ನನ್ನ ವಿಚಾರ ತಿಳಿಸಿ ಬಿಡುವೆ.ನಾನೂ ನಿಮ್ಮಂತ ಸ್ಥಿತಿಯಲ್ಲಿರುವವನೇ ಹೌದು. ಆದರೆ ನಾನು ಹೀಗೆ ಚಿಂತನೆ ಮಾಡುತ್ತೇನೆ" ನಾವು ಏನೇ ಮಾಡಿದರೂ ಅದರ ಫಲ ಸಿಗಬೇಕು, ತಾನೇ? ಅದರಿಂದ ನಮಗೆ ನೆಮ್ಮದಿ, ಮಾನಸಿಕ-ದೈಹಿಕ ಆರೋಗ್ಯ ಸಿಗಬೇಕು, ತಾನೇ? ಬದುಕು ನಡೆಸಲು ಹಗಲು ರಾತ್ರಿ ದುಡಿಯುವ ನಾವು ಬದುಕಿಗೊಂದು ಅರ್ಥವನ್ನೂ ತಿಳಿಯಲೇ ಬೇಕಲ್ಲವೇ? ಅಲ್ಲದೆ ಪತಿ-ಪತ್ನಿ ಸಮೇತ ಕಷ್ಟಪಟ್ಟು ದುಡಿಮೆ ಮಾಡುತ್ತಿರುವಾಗ ನಮಗಿರುವ ಸಮಯ, ಹಣ ಎಲ್ಲವನ್ನೂ ಯೋಚಿಸಿಯೇ ಖರ್ಚುಮಾಡಬೇಕಲ್ಲವೇ? ಹೀಗೆ ಆಲೋಚಿಸಿದಾಗ ಶರ್ಮರ ಮಾತುಗಳು ನನಗೆ ಆಪ್ಯಾಯಮಾನವಾಗಿ ಕಾಣುತ್ತವೆ, ನಮ್ಮ ಚಿಂತನೆಗಳು ಹೇಗಿರಬೇಕು, ನಮ್ಮ ದಿನಚರಿ ಹೇಗಿದ್ದರೆ ಆರೋಗ್ಯಕರ ಬದುಕು ನಡೆಸಲು ಸಾಧ್ಯ! ಯಾವ  ದೈನಂದಿನ ಪೂಜೆ ಪುನಸ್ಕಾರಗಳಿಂದ ನಮಗೆ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಸುಖ ಸಿಗುತ್ತದೋ ಅಂತಹ ಆಚರಣೆಗಳನ್ನು ಮಾಡಿದರಾಯ್ತು. ಎಲ್ಲೆಲ್ಲೂ ವ್ಯಾಪಿಸಿರುವ ಹಾಗೂ ಸರ್ವಶಕ್ತನಾದ ಭಗವಂತನು ನಮ್ಮಿಂದ ಏನುತಾನೇ ಅಪೇಕ್ಷಿಸಿಯಾನು? ನಿತ್ಯ ತೃಪ್ತನೂ, ನಿತ್ಯ ಶುದ್ಧನೂ, ಸ್ವಯಂ ಪ್ರಕಾಶನೂ ಆದ ಭಗವಂತನಿಗೆ ನಾವು ಮಾಡುವ ನೈವೇದ್ಯ, ಅಭಿಶೇಕ, ಮಂಗಳಾರತಿ ಅಗತ್ಯ ವಿದೆಯೇ? ಎಲ್ಲವೂ ನಮಗಾಗಿ, ಅಲ್ಲವೇ? ಹಾಗಾಗಿ   ಸದ್ವಿಚಾರ ಚಿಂತನೆ ಮಾಡುತ್ತಾ, ಸಾಧ್ಯವಾದಷ್ಟೂ ಪರೋಪಕಾರಿಯಾಗಿ ಜೀವಿಸುತ್ತಾ, ಪ್ರಕೃತಿಯ ಶೋಷಣೆಯನ್ನು ಆದಷ್ಟೂ ಕಡಿಮೆ ಮಾಡುತ್ತಾ, ಪ್ರಕೃತಿಗೆ ಪೂರಕವಾದ ಬದುಕು ನಡೆಸುತ್ತಾ ನಮ್ಮ ಜೀವನ ಸಾಗಿದರೆ ಅದು ನಿಜವಾದ ಯಜ್ಞ ಆಗಲಾರದೇ?

ಹೀಗೆಂದರು....

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು

ಕನಕಪುರದಲ್ಲಿ ನಡೆದ ಮಾಸಿಕ ಸತ್ಸಂಗ

ಕನಕಪುರದಲ್ಲಿ ನಡೆದ ಮಾಸಿಕ ಸತ್ಸಂಗದಲ್ಲಿ ಶ್ರೀ ಸುಧಾಕರಶರ್ಮ

ಕನಕಪುರದಲ್ಲಿ ನಡೆದ ಮಾಸಿಕ ಸತ್ಸಂಗದ ಒಂದು ನೋಟ

ವಾಯು, ಅಗ್ನಿ, ಯಮ-ಈ ಪದಗಳ ಅರ್ಥವೇನು?

Friday, February 11, 2011

ವೇದಸುಧೆ ವಾರ್ಷಿಕೋತ್ಸವದ ಒಂದು ವೀಡಿಯೋ ಕ್ಲಿಪ್


Untitled from hariharapurasridhar on Vimeo.

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -4

ಭಗವಂತನ ಪ್ರೇರಣೆಯಂತೆಯೇ ಜೀವಾತ್ಮರು ಬೇರೆ ಬೇರೆ ಶರೀರಗಳಲ್ಲಿ ಜನ್ಮವೆತ್ತುತ್ತಾರೆ. ಕೇಳಿರಿ:-


ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್ |
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ || (ಋಕ್. ೧.೧೬೪.೩೦.)


     [ತುರಗಾತು] ವೇಗಶಾಲಿಯೂ [ಧೃವಮ್] ಧೃಢವೂ ಆದ ಪರಮಾತ್ಮ ತತ್ವವು, [ಅನತ್] ಎಲ್ಲರಿಗೂ ಜೀವದಾನ ಮಾಡುತ್ತಿದೆ. [ಶಯೇ] ಅಂತಃಸ್ಥಿತವಾಗಿದೆ. [ಜೀವಮ್] ಜೀವಾತ್ಮನನ್ನು [ಆಪಸ್ತ್ಯಾನಾಂ ಮಧ್ಯೇ] ಲೋಕಲೋಕಾಂತರಗಳ ನಡುವೆ [ಏಜತ್] ಪ್ರವೇಶಗೊಳಿಸುತ್ತದೆ. [ಮೃತಸ್ಯ ಜೀವಃ] ಮೃತನಾದವನ ಜೀವಾತ್ಮವು [ಅಮರ್ತ್ಯಃ] ಸ್ವತಃ ಅಮರವಾಗಿದ್ದು [ಮರ್ತ್ಯೇನಾ ಸಂಯೋನಿಃ] ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ [ಸ್ವಧಾಭಿಃ] ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, [ಚರತಿ] ಸಂಚರಿಸುತ್ತದೆ.
     ಇದು ವೇದೋಕ್ತವಾದ ಸತ್ಯ. ಇದೆಂದಿಗೂ ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು. ಋಗ್ವೇದದ ಈ ಮಂತ್ರವೂ ಮನನೀಯವೇ ಆಗಿದೆ.


ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಪಥಿಭಿಶ್ಚರಂತಮ್ |
ಸ ಸಧ್ರೀಚೀಃ ಸ ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ || (ಋಕ್. ೧.೧೬೪.೩೧.)


     [ಆ ಚ ಪರಾ ಚ ಪಥಿಭಿಃ ಚರಂತಮ್] ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ [ಆನಿಪದ್ಯಮಾನಮ್] ಅವಿನಾಶಿಯಾದ [ಗೋಪಾಮ್] ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು [ಆಪಶ್ಯಮ್] ನಾನು ನೋಡುತ್ತಿದ್ದೇನೆ. [ಸಃ] ಅವನು [ಸಧ್ರೀಚೀಃ] ನೇರವಾಗಿ ನಿಂತು ನಡೆಯುವ ಶರೀರಗಳನ್ನೂ [ಸಃ[ ಅವನೇ [ವಿಷೂಚೀಃ] ತೆವಳಿಕೊಂಡು ಹೋಗುವ ಶರೀರಗಳನ್ನೂ [ವಸಾನಃ] ನೆಲೆಗೊಳಿಸುತ್ತಾ [ಭುವನೇಷು ಅಂತಃ] ಲೋಕಗಳ ಒಳಕ್ಕೆ [ಆ ಪರೀವರ್ತಿ] ಬಂದು ಹೋಗಿ ಮಾಡುತ್ತಿರುತ್ತಾನೆ.
     ಇದೀಗ ಸ್ಪಷ್ಟ ತತ್ತ್ವ ದರ್ಶನ. ಅಥರ್ವವೇದದ ಇನ್ನೆರಡು ಮಂತ್ರಗಳನ್ನು ಉದ್ಧರಿಸಿದರೆ ಜೀವಾತ್ಮನ ನಿಜವಾದ ಸ್ವರೂಪ ಪಾಠಕರ ಚಿತ್ತಭಿತ್ತಿಗಳ ಮೇಲೆ ಸ್ಫುಟವಾಗಿ ಅಂಕಿತವಾಗುತ್ತದೆ.


ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ.೧೦.೮.೨೭)


     ಓ ಜೀವಾತ್ಮನ್! [ತ್ವಂ ಸ್ತ್ರೀ] ನೀನು ಸ್ತ್ರೀಯಾಗಿದ್ದೀಯೆ. [ತ್ವಂ ಪುಮಾನ್ ಅಸಿ] ನೀನು ಪುರುಷನಾಗಿದ್ದೀಯೆ. [ತ್ವಂ ಕುಮಾರಃ] ನೀನು ಕುಮಾರನಾಗಿದ್ದೀಯೆ. [ಉತ ವಾ] ಮತ್ತು [ಕುಮಾರೀ] ಕುಮಾರಿಯಾಗಿದ್ದೀಯೆ. [ತ್ಮ್] ನೀನು [ಜೀರ್ಣಃ] ವೃದ್ಧನಾಗಿ [ದಂಡೇನ ವಂಚಸಿ] ಕೋಲನ್ನೂರಿ ತಡವರಿಸುತ್ತಾ ನಡೆಯುತ್ತೀಯೆ. [ತ್ವಮ್] ನೀನು [ಜಾತಃ] ಜನ್ಮವೆತ್ತಿ [ವಿಶ್ವತೋಮುಖಃ ಅಸಿ] ಎಲ್ಲೆಡೆಯೂ ಮುಖ ಮಾಡುತ್ತೀಯೆ.
     ಪರಮಾತ್ಮನೆಂತೋ ಜೀವಾತ್ಮನೂ ಅಂತೆಯೇ ಲಿಂಗರಹಿತನು. ಆದರೆ ಧರಿಸಿದ ಶರೀರದ ದೃಷ್ಟಿಯಿಂದ ಸ್ತ್ರೀ ಅಥವಾ ಪುರುಷ, ಕುಮಾರ ಅಥವಾ ಕುಮಾರೀ ಎನ್ನಿಸಿಕೊಳ್ಳುತ್ತಾನೆ.


ಉತೈಷಾಂ ವಿತೋತ ವಾ ಪುತ್ರ ಏಷಾಮುತೈಷಾಂ ಜ್ಯೇಷ್ಠ ಉತ ವಾ ಕನಿಷ್ಠಃ |
ಏಕೋ ಹ ದೇವೋ ಮನಸಿ ಪ್ರವಿಷ್ಟಃ
ಪ್ರಥಮೋ ಜಾತಃ ಸ ಉ ಗರ್ಭೇ ಅಂತಃ || (ಅಥರ್ವ.೧೦.೮.೨೮)


     [ಉತ] ಮತ್ತು [ಏಷಾಂ ಪಿತಾ] ಇವರ ತಂದೆ [ಉತ ವಾ] ಅಥವಾ [ಏಷಾಂ ಪುತ್ರಃ] ಇವರ ಮಗ [ಉತ] ಅಥವಾ [ಏಷಾಂ ಜ್ಯೇಷ್ಠಃ] ಇವರ ಅಣ್ಣ [ಉತ ವಾ] ಅಥವಾ [ಕನಿಷ್ಠಃ] ತಮ್ಮ [ಹ] ನಿಜವಾಗಿ [ಏಕ ದೇವಃ] ಒಬ್ಬನೇ ಜ್ಞಾನವಂತ ಚೇತನನು [ಮನಸಿ ಪ್ರವಿಷ್ಟಃ] ಮನಃಕಾಮನೆಯ ಒಳಹೊಕ್ಕಿದ್ದಾನೆ. [ಪ್ರಥಮಃ] ಆ ಶ್ರೇಷ್ಠ ಆತ್ಮನು [ಜಾತಃ] ಜನ್ಮವೆತ್ತಿದನು. [ಸ ಉ] ಅವನೇ ಮತ್ತೆ [ಗರ್ಭೇ ಅಂತಃ] ಗರ್ಭದಲ್ಲಿ ಪ್ರವೇಶ ಮಾಡಿದ್ದಾನೆ.
     ಪಾಠಕರಿಗೆ ಈಗ ಜೀವಾತ್ಮನ ವಿಷಯದಲ್ಲಿ ಒಂದು ಸ್ಪಷ್ಟ ಕಲ್ಪನೆ ಬಂದಿರಬಹುದು. ಹೀಗೆಯೇ ಜನ್ಮವೆತ್ತುತ್ತಾ, ಎತ್ತುತ್ತಾ ಕ್ರಮಕ್ರಮವಾಗಿ ವಿಕಾಸ ಹೊಂದಿ, ಪರಿಶುದ್ಧ ಧರ್ಮದ ಆಚರಣೆಯಿಂದ ವಿಶುದ್ಧ ಜ್ಞಾನ ಗಳಿಸಿ, ನಿಜವಾದ ಭಗವದುಪಾಸನೆ ಮಾಡಿ, ಸತ್ಕರ್ಮನಿಷ್ಠನಾಗಿ, ಪೂರ್ಣ ಪವಿತ್ರತೆಯನ್ನು ಗಳಿಸಿ, ಕೊನೆಗೆ ಮೋಕ್ಷ ಪಡೆಯುತ್ತಾನೆ. ಮೋಕ್ಷದ ಸ್ವರೂಪವೇನೆಂಬುದನ್ನು ಪಾಠಕರು ಮುಂದೆ ಓದುವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವಿದೆ. ಆ ದೇವಪುತ್ರನನ್ನು ನಂಬು, ಈ ದೇವದೂತನಿಗೆ ಶರಣಾಗು, ಈಮತಹ ಸಾಧು-ಸಂತರ ಸೇವೆ ಮಾಡು, ಅವರ ದಯೆಯಿಂದ, ಅವರ ಮಧ್ಯಸ್ತಿಕೆಯಿಂದ ದೇವರು ನಿನಗೆ ಮೋಕ್ಷ ನೀಡುವನು - ಈ ಮೊದಲಾದ ಅರ್ಥರಹಿತವಾದ, ಪಾಮರಕೋಟಿಯ ಕಣ್ಣಿಗೆ ಮಣ್ಣೆರಚುವ, ಆತ್ಮಘಾತುಕವಾದ ಟೊಳ್ಳು ಸಿದ್ಧಾಂತಗಳನ್ನು ವೇದಗಳು ಒಪ್ಪುವುದಿಲ್ಲ.

ಓದುಗರ ಉತ್ಸಾಹ ಕಡಿಮೆಯಾಗಿದೆಯೇ?

"ನಮಸ್ಕಾರ ಶ್ರೀಧರ್ ಸರ್,
ವಾರ್ಷಿಕೋತ್ಸವ ಆದಮೇಲೆ ಓದುಗರ ಉತ್ಸಾಹ ಕಡಿಮೆಯಾಗಿರುವಂತಿದೆ, ಯಾರೂ ಕಾಮೆಂಟ್ ಮಾಡುತ್ತಲೇ ಇಲ್ಲ. ಯಾಕೆ ಸಾರ್?"
ಇಂದು ಹೀಗೊಂದು ಕರೆ ಬಂತು. ಮಾತುಗಳಲ್ಲಿ ಕಳಕಳಿ ಇತ್ತು. ಕಾಮೇಂಟ್ ಬಂದರೆ ಬರೆಯುವವರಿಗೆ ಉತ್ಸಾಹ ಹೆಚ್ಚುತ್ತದೆನ್ನುವುದು ಅವರ ಮಾತಿನ ಅರ್ಥ. ನಾನು ಮಿತ್ರರಿಗೆ ಉತ್ತರಿಸಿದೆ." ವೇದಸುಧೆಯಲ್ಲಿ ಕಾಮೆಂಟ್ ಮಾಡಬೇಕಾದರೆ ಸ್ವಲ್ಪ ಯೋಚಿಸಬೇಕಾಗುತ್ತದೆ. " ಚೆನ್ನಾಗಿದೆ" ಎಂದು ಬರೆದರೆ ನಮಗೆ ಸಂತೋಷವಾಗುತ್ತಾದರೂ ಬರೆದಿಲ್ಲವೆಂದರೆ ಖಂಡಿತವಾಗಿ ಬೇಸರವಾಗುವುದಿಲ್ಲ. ಕಾರಣ  ನಿತ್ಯವೂ ನೂರಾರು ಜನರು ವೇದಸುಧೆಯನ್ನು ಓದುತ್ತಿರುವುದು ನಮ್ಮ ಅರಿವಿಗೆ    ಬರುತ್ತಲೇ ಇದೆ.ಒಂದು ವೇಳೆ ಓದುಗರ ಸಂಖ್ಯೆ ೧೦-೨೦ ಕ್ಕೆ ಕುಸಿದರೆ ಆಗ  ಇಷ್ಟೊಂದು ಸಮಯ ವ್ಯರ್ಥವಾಗುತಿದೆಯೇ? ಎಂದು ಸ್ವಲ್ಪ ತಲೆಕೆಡಸಿಕೊಳ್ಳಬೇಕಾಗುತ್ತದೆ. ಹಾಗಾಗಿಲ್ಲವಲ್ಲಾ! ಆದ್ದರಿಂದ  ಒದುತ್ತಿರುವವರಲ್ಲಿ  ಒಂದಿಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳಲೇ ಬೇಕಾಗುತ್ತದೆಂದು ತಿಳಿಸಿ ಸಮಾಧಾನ ಪಡಿಸಿದೆ.
ಹೌದು, ಮನರಂಜನಾತಾಣಗಳಲ್ಲಿ ಬರೆಯುವಂತೆ ವೇದಸುಧೆಯಲ್ಲಿ ಬರೆಯಲಾಗುವುದಿಲ್ಲ. ಆದರೂ ಗಂಭೀರವಾದ ವಿಷಯಗಳನ್ನೂ ಓದುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು,
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ