Pages

Tuesday, June 7, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೬

     ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ. ಹೀಗೆ ಹೇಳಿದರೆ, ಅದೆಷ್ಟು ಸದ್ಗುಣಗಳಿವೆಯೋ, ಎಷ್ಟನ್ನು ಅವಲಂಬಿಸಿದರೆ ಧರ್ಮವನ್ನು ಮೈಗೂಡಿಸಿಕೊಂಡಂತಾಗುವುದೋ ಯಾರ ಕಲ್ಪನೆಯ ಹಿಡಿತಕ್ಕೂ ಸಿಕ್ಕುವುದಿಲ್ಲ. ಆದುದರಿಂದ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:


ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ ||
(ಋಕ್. ೯.೭೩.೮.)

     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ, ಧರ್ಮದ ರಕ್ಷಕನು, [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು, [ಹೃದಿ ಅಂತಃ] ತನ್ನ ಹೃದಯದಲ್ಲಿ, [ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು, ಉಪಾಸನೆಗಳನ್ನು, [ಆ ದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು, [ವಿಶ್ವಾ ಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ, ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಆಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಆವ ವಿಧ್ಯತಿ] ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ, ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
    ವೇದಗಳ ಸಂದೇಶ ಬಹು ಗಂಭೀರ, ಬಹಳ ಆಳ. ಋತವನ್ನು ಈಶ್ವರೀಯ ವಿಧಾನವಾದ ಧರ್ಮವನ್ನು ಪಾಲಿಸುವವನ ವರ್ಣನೆ ಮಾಡುವಾಗ, ಋಗ್ವೇದ ಆ ಮಹಾಪುರುಷನು ಧರಿಸುವ ಮೂರು ಪವಿತ್ರ ಧರ್ಮಾಂಗಗಳನ್ನು, ಜ್ಞಾನಕರ್ಮೋಪಾಸನಾತ್ರಯವನ್ನು ಸೂಚಿಸುತ್ತದೆ. ಸತ್ಯ, ನ್ಯಾಯ, ದಯೆ, ತ್ಯಾಗ, ಸಂಯಮ, ದಾನ, ಮೈತ್ರಿ, ಅಹಿಂಸೆ ಮೊದಲಾದ ಮಾನವನ ಊಹೆಗಂದಬಹುದಾದ ಸಮಸ್ತ ಆತ್ಮೋದ್ಧಾರಕ ಗುಣಗಳೂ ಜ್ಞಾನ-ಕರ್ಮ-ಉಪಾಸನಾ ಎಂಬ ಮೂರು ಅಂಗಗಳಲ್ಲಿ ಅಡಕವಾಗಿ ಹೋಗುತ್ತವೆ. ಜ್ಞಾನಿ ಅನುದಾರನಾಗಲಾರ, ಸತ್ಕರ್ಮನಿರತನು ರಾಗ-ದ್ವೇಷಗಳಿಗೆ ಸಿಕ್ಕಲಾರನು, ಉಪಾಸಕನು ಯಾರ ವೈರಿಯೂ ಆಗಿರಲಾರನು. ಈ ಮೂರು ಅಂಗಗಳನ್ನೂ ತನ್ನ ಬಾಳಿಗೆ ಹೊಂದಿಸಿಕೊಂಡ ಧನ್ಯಾತ್ಮನು, ತನ್ನ ಸ್ವಂತ ದೌರ್ಬಲ್ಯದಿಂದಲೋ, ಪರರ ಒತ್ತಡದಿಂದಲೋ ಲೋಕಕ್ಕೆ ಅಪ್ರಿಯರಾದ, ವ್ರತಬಾಹಿರರಾದ ಅಧರ್ಮನಿರತರನ್ನು ಕಂಡು ಹೇಸಿಗೆಯಿಂದ ಮೂಗು ಮುರಿಯುವುದಿಲ್ಲ. ತಿರಸ್ಕಾರದಿಂದ ಧಿಕ್ಕರಿಸುವುದಿಲ್ಲ. ಪತನದ ಹಳ್ಳಕ್ಕೆ ಬಿದ್ದವರನ್ನೂ ಕೂಡ ಮೇಲೆತ್ತಿ, ಉತ್ತಮ ಶಾಸನಕ್ಕೆ, ಈಶ್ವರೀಯ ವಿಧಾನಕ್ಕೆ ಅವರೂ ಕೂಡ ತಲೆಬಾಗುವಂತೆ ಮಾಡುತ್ತಾನೆ.
**************

Monday, June 6, 2011

ಯೋಚಿಸಲೊ೦ದಿಷ್ಟು...೩೬

೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!
೮. ಹೆಚ್ಚು ಗಳಿಕೆ- ಹೆಚ್ಚು ಬಳಕೆ ಹಾಗೂ ಹೆಚ್ಚು ಉಳಿಕೆಯಿ೦ದ ಯಾವುದೇ ವ್ಯಕ್ತಿ ಶ್ರೀಮ೦ತನಾಗಲಾರ! ಬದಲಾಗಿ ಎಲ್ಲವುದರ ಸಮಪಾಲಿನ ಬಳಕೆಯಿ೦ದಲೇ ಶ್ರೀಮ೦ತನೆನಿಸಿಕೊಳ್ಳುವುದು ( ಯಾವುದರ ಹೆಚ್ಚು ಯಾ ಕಡಿಮೆ ಬಳಕೆ ಮಾಡದಿರುವುದು)
೯. ಸೋಲು ನಿಶ್ಚಿತವೆ೦ದಿದ್ದರೂ ಛಲ ಬಿಡದೆ ಗೆಲುವಿನತ್ತ ಸಾಗುವುದೇ ನಿಜವಾದ ವೀರನ ಲಕ್ಷಣ!
೧೦. ನಮ್ಮ ಒಳ್ಳೆಯತನವೇ ನಮ್ಮ ನಿಜವಾದ ಬ೦ಡವಾಳ! ಬಡ್ಡಿ ಶೀಘ್ರವಾಗಿ ದೊರೆಯದಿದ್ದರೂ ನಿಧಾನವಾಗಿಯಾದರೂ ಪಡೆಯಬಹುದು!
೧೧. ಜೀವನದಲ್ಲಿ ಅತಿ ಹೆಚ್ಚಿನ ಸ್ವಾರ್ಥವು ಕೆಲವೊಮ್ಮೆ ಮೌಲ್ಯಯುತ ನಿರೀಕ್ಷೆಗಳು ವಿಫಲಗೊಳ್ಳುವಲ್ಲಿ ಹಾಗೂ ಮೌಲ್ಯಯುತ ವಸ್ತುಗಳ/ವ್ಯಕ್ತಿಗಳ/ಭಾವನೆಗಳನ್ನು ಕಳೆದುಕೊಳ್ಳುವಲ್ಲಿ ಪರ್ಯಾವಸಾನಗೊಳ್ಳುತ್ತದೆ!
೧೨. ನಾವು ನಮ್ಮ ಪ್ರತ್ಯೇಕತೆಗಳಿ೦ದಲೇ “ಇತರರಿಗಿ೦ತ ಭಿನ್ನರು“ ಎ೦ದು ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ! ದುರದೃಷ್ಟವಶಾತ್ ನಾವು ಯಾವಾಗಲೂ ಇತರರ೦ತಾಗಲು ಪ್ರಯತ್ನಿಸುತ್ತಲೇ ಇರುತ್ತೇವೆ!
೧೩. ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲವೆ೦ಬುದು ನಮ್ಮ ಕೊನೆಯ ನಿಲುವಾದರೂ... ನಾವು ಕಳೆದುಕೊಳ್ಳುತ್ತಲೇ ಇರುತ್ತೇವೆ!
೧೪. ಹಸಿದ ಹೊಟ್ಟೆಯವನಿಗೆ ಧರ್ಮದ ಕುರಿತು ಉಪನ್ಯಾಸ ನೀಡಿದರೇನೂ ಪ್ರಯೋಜನವಿಲ್ಲ! ಮೊದಲು ಆತನ ಹೊಟ್ಟೆಯ ಹಸಿವನ್ನು ನೀಗಿಸಬೇಕು- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೫. ಸತ್ಯಕ್ಕೆ ಒ೦ದೇ ಮುಖವಲ್ಲ,ಅದಕ್ಕೆ ಅನೇಕ ಮುಖಗಳಿವೆ! ಸತ್ಯದ ಒ೦ದೇ ಮುಖವನ್ನು ಕ೦ಡು “ ಇದು ಇಷ್ಟೇ “ ಎ೦ಬ ನಿರ್ಣಯಕ್ಕೆ ಬರಲಾಗದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

ಸತ್ಸಂಗ

ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.






ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹ

ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ಮಾಡಿದ ಪ್ರವಚನದ ಧ್ವನಿಯನ್ನು ಹಾಗೂ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.








Wednesday, June 1, 2011

ಅವರವರ ಭಾವಕ್ಕೆ...



 



ವೇದಸುಧೆ ಬಳಗದ ಶ್ರೀ ಹೆಚ್ .ಎನ್.ಪ್ರಕಾಶ್ ಅವರು ಈ ಕೆಳಗಿನ ಚಿತ್ರಗಳನ್ನು ಪ್ರಕಟಿಸಲು ಕಳುಹಿಸಿಕೊಟ್ಟಿದ್ದಾರೆ.ಓದುಗರ ಮನದಲ್ಲಿ ಮೂಡುವ ಭಾವನೆಗಳನ್ನು ವೇದಸುಧೆಯು ಸ್ವಾಗತಿಸುತ್ತದೆ.

This happened in Kalika Mata temple in Ratlam,M.P., last month. Pictures tell the true story. The Saint was telling the story of Ramayana and "Hanumanji" appeared in the form of langur !! The langur first went and sat near the singers and listened to the kirtan, held the mic of the mahantji, got blessed by him,then "blessed" the saints and then sat in front of Shri Ramji's photo and took some of the flowers (note similar position to Shri Hanumanji in the framed picture) and left quietly.
Bolo Siyavar Ramchandra ki Jai. PavanasutaHanuman ki Jai.

Tuesday, May 31, 2011

ಮೇಲಕ್ಕೇರಿದ ಮೈಲಾರಶರ್ಮ: ಲೇಖಕನ ಪ್ರತಿಕ್ರಿಯೆ:

     ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದಿಸುವೆ. ಚಿಂತನೆ, ಜಿಜ್ಞಾಸೆಗಳಿಗೆ ಅವಕಾಶವಾದ ಲೇಖನ ಸಾರ್ಥಕವೆಂದು ಅನ್ನಿಸಿದೆ. ಪ್ರಾರಂಭದಲ್ಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಪೂರ್ವಾಗ್ರಹ ಪೀಡಿತನಾಗಿ ನನ್ನದೇ ಅಭಿಪ್ರಾಯ ಸರಿಯೆಂದು ವಾದಿಸಲು ಹೋಗುವುದಿಲ್ಲ, ಆದರೆ ನಾನು ಹೊಂದಿರುವ ಅಭಿಪ್ರಾಯ ಸರಿಯಲ್ಲವೆಂದು ನನಗೆ ಮನವರಿಕೆಯಾಗುವವರೆಗೂ ಅದನ್ನು ಬದಲಾಯಿಸಿಕೊಳ್ಳುವ ಮನೋಭಾವ ನನ್ನದಲ್ಲ. ನಡೆದುಕೊಂಡು ಬಂದಿರುವ ನಡವಳಿಕೆಗಳು/ ಸಂಪ್ರದಾಯಗಳು/ ವಸ್ತುಸ್ಥಿತಿಯೊಂದಿಗೆ ರಾಜಿ/ಹೊಂದಾಣಿಕೆ ಮಾಡಿಕೊಳ್ಳುವೆನಷ್ಟೆ. ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯಗಳಿಗೆ ನಾನು ವಿರೋಧಿಯಲ್ಲ. ಅದು ಅವರ ಹಕ್ಕು, ಅದನ್ನು ಗೌರವಿಸುವೆ. ಅಂತಹವರ ಅಭಿಪ್ರಾಯಗಳಿಂದ ನಾನು ನೊಂದುಕೊಳ್ಳುವುದಾಗಲೀ, ಬೇಸರಪಟ್ಟುಕೊಳ್ಳುವುದಾಗಲೀ ಮಾಡುವುದಿಲ್ಲ. ವೈಚಾರಿಕ ಭಿನ್ನತೆಯೂ ಸಹ ಚಿಂತನೆ, ಜಿಜ್ಞಾಸೆಗಳಿಗೆ ಸಹಕಾರಿ. ನನ್ನ ಲ್ಯಾಪ್ ಟಾಪ್‌ನ ದೋಷದಿಂದಾಗಿ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಪ್ರಕಟಗೊಳ್ಳುತ್ತಿರಲಿಲ್ಲ. ಎಲ್ಲರಿಗೂ ಒಟ್ಟಿಗೆ ಪ್ರತಿಕ್ರಿಯಿಸಿದರೆ ದೊಡ್ಡದಾಗುವ ಕಾರಣದಿಂದ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವೆ. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು.
     ಮಿತ್ರ ಶ್ರೀಧರರು ಭಾವನಾತ್ಮಕವಾಗಿ ಪತಿ-ಪತ್ನಿಯರ ಮತ್ತು ಇತರ ಸಂಬಂಧಿಕರ ಭಾವನೆಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ಮಧುರವಾಗಿರಲೇಬೇಕು, ಅದಕ್ಕಾಗಿ ಪತಿ-ಪತ್ನಿಯರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರಿ. ನಿಜ, ಮೃತರಾದ ನಂತರ ಅಂತ್ಯ ಸಂಸ್ಕಾರವಾಗುವವರೆಗೂ ಜಡವಾದ ಶರೀರವನ್ನು ನೋಡಲು, ಕಡೆಯ ಸಲವಾದರೂ ಕಣ್ತುಂಬಿಕೊಳ್ಳಲು ಬಯಸುವುದು ಮಾನವ ಸಹಜ ಗುಣ. ಮೃತರೊಡನೆ ನಾವು ಹೊಂದಿದ್ದ ಆತ್ಮೀಯತೆ ಅನುಸರಿಸಿ ಅವರನ್ನು ದೀರ್ಘಕಾಲದವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ. ಸಾಂಸಾರಿಕ ಜೀವನಕ್ಕೂ, ಮೃತರಾದ ನಂತರದ ಉತ್ತರಕ್ರಿಯೆಗಳಿಗೂ ತಳುಕು ಹಾಕುವುದು ತರವಲ್ಲ. 'ಎಲ್ಲರೂ ದೇಹದಾನ ಮಾಡಲು ತೊಡಗಿದರೆ ಮುಂದೊಂದು ದಿನ ದೇಹ ಪಡೆಯಲು ಆಸ್ಪತ್ರೆಯವರೂ ಮುಂದೆ ಬರಲಾರರು' ಎಂಬ ಮಾತಿಗೆ ನಾನು ಪ್ರತಿಕ್ರಿಯಿಸುವುದೇನೆಂದರೆ ಅಂತಹ ಸ್ಥಿತಿ ಬರಲಿ ಎಂದು. ಅಗತ್ಯವಿರುವ ವಸ್ತುಗಳನ್ನು ಕೊಟ್ಟರೆ ಅದು ದಾನ, ಅದು ಅಗತ್ಯ. ಒಂದು ವೇಳೆ ಅಂತಹ ಅಗತ್ಯವಿಲ್ಲದಿದ್ದರೆ ದೇಹವನ್ನು ಸುಡುವುದು ಒಳ್ಳೆಯ ಕೆಲಸ. ಶರೀರದ ಮಾರಾಟ ಒಂದು ದಂಧೆಯಾದರೂ, ನೆಗಡಿಯೆಂದು ಮೂಗನ್ನೇ ಕತ್ತರಿಸುವುದಿಲ್ಲವಲ್ಲವೇ? ಬದುಕಿರುವಾಗಲೇ ತಮ್ಮ ಆತ್ಮೀಯರಿಗಾಗಿ ತಮ್ಮ ಒಂದು ಕಿಡ್ನಿಯನ್ನು ಕೊಟ್ಟ ಪುಣ್ಯಾತ್ಮರು ಇರುವ ಭೂಮಿಯಿದು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ, ನರಕಯಾತನೆ ಪಡುತ್ತಿರುವವರನ್ನು ನೋಡಿದವರಿಗೆ, ಸತ್ತ ಮೇಲಾದರೂ ನಮ್ಮ ಶರೀರದ ಕಿಡ್ನಿ ಅವರ ಬದುಕಿಗೆ ಬೆಳಕಾಗುವುದಾದರೆ ಸಾರ್ಥಕವೆಂದು ಅನ್ನಿಸುವುದಿಲ್ಲವೇ? ಅನಾಥರ, ಚಿಕಿತ್ಸೆಗೆ ಬಂದವರ ಕಿಡ್ನಿಗಳನ್ನು ಚಿಕಿತ್ಸೆಯ ನೆಪದಲ್ಲಿ ಕಳ್ಳತನದಿಂದ ಶಸ್ತ್ರಚಿಕಿತ್ಸೆ ಮಾಡಿ ಅಪಹರಿಸುವವರ ಕುಕೃತ್ಯಕ್ಕೆ ಸಹ ಇಂತಹ ದೇಹದಾನದಿಂದ ಕಡಿವಾಣ ಬೀಳುವುದು. ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಆದರೂ ಸಾಧಿಸಿಲ್ಲ. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ? 'ಶರೀರದಾನ ಮಾಡಿದರೆ ನಾವು ಜಡವಸ್ತುವಿನಂತೆ, ನಾವು ಭಾವನೆಗಳಿಲ್ಲದವರು' ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಸುಟ್ಟರೆ ಪೂರ್ಣ ಶರೀರ ನಾಶಗೊಳ್ಳುತ್ತದೆ. ದಾನ ಮಾಡಿದರೆ ಕನಿಷ್ಠ ಪಕ್ಷ ಮೃತರ ಕೆಲವು ಅಂಗಗಳಾದರೂ - ಕಿಡ್ನಿ, ಕಣ್ಣು, ಇತ್ಯಾದಿ - ಬೇರೆಯವರ ಶರೀರಗಳಲ್ಲಿ ಬದುಕಿರುತ್ತವೆ, ಅದರಿಂದ ಅವರುಗಳ ಬಾಳೂ ಬೆಳಕಾಗಿದೆ ಎಂಬುದನ್ನು ಜ್ಞಾಪಿಸಿಕೊಂಡರೆ ಧನ್ಯತೆಯ ಭಾವನೆ ಮೂಡಬಹುದು. ದೇಹದಾನ ಮಾಡಬಯಸುವವರು ಮತ್ತು ಸಹಕರಿಸುವ ಕುಟುಂಬದವರಿಗೆ ಸಹ ದೇಹ ಸುಡುವವರಿಗೆ/ಹೂಳೂವವರಿಗೆ ಭಾವನೆಗಳು, ಕಳಕಳಿಯಿಲ್ಲವೆಂದು ಅನ್ನಿಸಬಹುದಲ್ಲವೇ?
     'ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ. ಭಾವನಾರಹಿತ ಜೀವನವು ಬದುಕೇ ಅಲ್ಲ. ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ?' ಎಂಬ ಶ್ರೀಧರರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ದೇಹವನ್ನು ಸುಟ್ಟರೆ ಮಾತ್ರ ಪ್ರೀತಿ, ವಿಶ್ವಾಸಗಳಿವೆ, ದಾನ ಮಾಡಿದರೆ ಇಲ್ಲ ಎಂಬಲ್ಲಿ ಮಾತ್ರ ನಾನು ಭಿನ್ನನೆನಿಸಿಕೊಳ್ಳುವೆ. 'ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ. ಒಂದೆಡೆ ಭಾವನಾರಹಿತರಾದವರು ಇನ್ನೊಂದೆಡೆ ಅತ್ಯುನ್ನತ ಸ್ಥಿತಿ ತಲುಪಿದವರು ಎಂದು ಅನ್ನಿಸಿಕೊಳ್ಳುವುದು ಸಾಧ್ಯವೇ? ಸಾವಿನ ವಿಷಯ ಬಂದಾಗ ಆತ್ಮೀಯರು ಆ ವಿಷಯ ಮಾತನಾಡಲು ಬಯಸುವುದಿಲ್ಲ. ಅಂತಹ ವಿಷಯ ಮಾತನಾಡಬೇಡ ಎಂದು ಬಾಯಿ ಮುಚ್ಚಿಸುವುದು ಸಾಮಾನ್ಯ. ನನ್ನ ಬರಹದ ಬಗ್ಗೆ ಮಿತ್ರ ಶ್ರೀಧರರ ಪ್ರತಿಕ್ರಿಯೆಯೂ ಸಹ ಇದಕ್ಕೆ ಒಂದು ಉದಾಹರಣೆ. ಅಂತಹುದರಲ್ಲಿ ಸಾವಿನ ನಂತರ ದೇಹದಾನ ಮಾಡುವ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಕಷ್ಟ ಮತ್ತು ಸೂಕ್ಷ್ಮವಾದ ವಿಚಾರ. ಭಾವನೆ ಅರ್ಥವಾಗುವಂತೆ ಮತ್ತು ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಹೇಳಬೇಕಾಗುತ್ತದೆ. ಆಗ ದೇಹದಾನ ಮಾಡಿದ ಮೈಲಾರಶರ್ಮರಂತಹವರು ನೆರವಿಗೆ ಬರುತ್ತಾರೆ.
     ಶ್ರೀಯುತ ಜಗದೀಶರು ಉಲ್ಲೇಖಿಸಿದ 'ಶರೀರಮಾತ್ರಮ್ ಖಲುಧರ್ಮಸಾಧನಂ' ಎಂಬ ಉಕ್ತಿಗೆ ನನ್ನ ಸಹಮತವಿದೆ. ಧೃಢ ಮನಸ್ಸು ಮತ್ತು ಶರೀರಗಳಿಂದ ಅದ್ಭುತಗಳನ್ನು ಸಾಧಿಸಬಹುದು. ಆದರೆ ಈ ಮಾತು ಜೀವಂತ ಶರೀರಕ್ಕೆ ಅನ್ವಯಿಸುತ್ತದೆ. ಅವರಂತೆ ನನಗೂ ಸಹ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ವಿಚಾರದಲ್ಲಿ ನಂಬಿಕೆಯಿದೆ. ದೇವನ ಅತ್ಯದ್ಭುತ ನಿರ್ಮಾಣವಾದ  ನವರಸದರಮನೆಯಾದ ಈ ದೇಹ ಪಡೆಯುವಲ್ಲಿ ದೇವನ ಕರುಣೆಯೊಂದಿಗೆ ಜೀವಿಯ ಕರ್ಮಫಲವೂ ಸೇರುತ್ತದೆ. ಇಂತಹ ದೇಹದ ಒಡೆತನವನ್ನು ದೇವನನ್ನು ಹೊರತುಪಡಿಸಿ ಸ್ವತಃ ಜೀವಿಯೂ ಸೇರಿದಂತೆ ಯಾರಾದರೂ ಸಾಧಿಸಲು ಸಾಧ್ಯವೇ ಎಂಬುದೇ 'ತಾಯಿಯ ಸ್ವತ್ತಲ್ಲ, ತಂದೆಯ ಸ್ವತ್ತಲ್ಲ, ಪತ್ನಿಯ ಸ್ವತ್ತಲ್ಲ, ಮಕ್ಕಳ ಸ್ವತ್ತಲ್ಲ' ಎಂಬ ಮೂಢನ ಉದ್ಗಾರದ ಒಳಾರ್ಥ. ಭಗವದ್ಗೀತೆ ಬೋಧಿಸಿದಂತೆ ಪ್ರತಿ ಜೀವಿಯೂ ತನ್ನ ಕರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತಾನೆ. ಎಲ್ಲರೂ ತಾವೇ ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕು. ಮೃತ ಶರೀರವನ್ನು ಸುಡಲಿ, ಬಿಡಲಿ, (ಕೇವಲ ಸುಡುವುದಕ್ಕೆ ಮಾತ್ರವಲ್ಲ, ಸಂಪ್ರದಾಯಕ್ಕನುಸಾರವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಿ, ಬಿಡಲಿ) ಅದು ಜೀವಿಯ ಪುನರ್ಜನ್ಮದ ಮೇಲೆ ಪರಿಣಾಮ ಬೀರಲಾರದು. ಜೀವಿತಾವಧಿಯಲ್ಲಿನ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮವಿರುತ್ತದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿದೆ. ಜಗದೀಶರು ಕೊಟ್ಟ 'ಕೇವಲ ಫೋಟೋದಲ್ಲಿನ ತಂದೆಯ ಚಿತ್ರದ ಕಣ್ಣಿಗೆ ಚುಚ್ಚಿದರೆ ಸಹಿಸುತ್ತಾರೆಯೇ' ಎಂಬ ಉದಾಹರಣೆ ಈ ವಿಷಯಕ್ಕೆ ಅಷ್ಟೊಂದು ಸೂಕ್ತವೆನಿಸದು. ಮೃತ ದೇಹಕ್ಕೆ ನೋವಾಗುತ್ತದೆ ಅಥವಾ ಸಂಬಂಧಿಕರ ಮನಸ್ಸಿಗೆ ನೋವಾಗುತ್ತದೆ ಅದನ್ನು ಸುಡದೆ/ಹೂಳದೆ ಇರುತ್ತಾರೆಯೇ? ಅವರಂತೆ ನಾನೂ ಸಹ ಯಾರ ಮನಸ್ಸನ್ನೂ ನೋಯಿಸಲು ಉದ್ದೇಶಿಸಿಲ್ಲ. ನನ್ನ ಅಭಿಪ್ರಾಯವನ್ನು ಎಲ್ಲರೂ - ನನ್ನ ಕುಟುಂಬದ ಸದಸ್ಯರುಗಳೂ ಸೇರಿ - ಒಪ್ಪಬೇಕೆಂದು ನನ್ನ ಆಗ್ರಹವಿಲ್ಲ. ಗಲ್ಲು ಶಿಕ್ಷೆಗೆ ಒಳಗಾದವರನ್ನೂ ಅವರ ಅಂತಿಮ ಇಚ್ಛೆ ಏನೆಂದು ಕೇಳಿ ಸಾಧ್ಯವಿದ್ದರೆ ನೆರವೇರಿಸುತ್ತಾರೆ. ಅದೇ ರೀತಿ ದೇಹದಾನ ಮಾಡಬಯಸುವವರು ಮೃತರಾದ ನಂತರ ಅವರ ಇಚ್ಛೆಯನ್ನು ನೆರವೇರಿಸುವುದು, ಬಿಡುವುದು ಸಂಬಂಧಿಕರಿಗೆ ಸೇರಿದ್ದು. ಕೆಲವು ಜಾತಿಗಳಲ್ಲಿ ಸತ್ತವರಿಗೆ ಇಷ್ಟವೆಂದು ಮಾಂಸ, ಮದ್ಯ, ಸಿಗರೇಟು, ಇತ್ಯಾದಿಗಳನ್ನೂ ಎಡೆ ಇಡುವುದನ್ನು ಕಂಡಿದ್ದೇನೆ. ಅಂತಹುದರಲ್ಲಿ ದೇಹದಾನ ಮಾಡಬಯಸಿದಲ್ಲಿ ಆ ಆಸೆಯನ್ನು ನೆರವೇರಿಸಲು ಸಂಬಂಧಿಕರು ಮನಸ್ಸು ಮಾಡಬಹುದು. ಇದನ್ನು ಬಾಲಿಶ ಹೇಳಿಕೆ ಎಂದು ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ.
     ಮಿತ್ರ ಮಹೇಶ ಪ್ರಸಾದ ನೀರ್ಕಜೆಯವರ ಅಭಿಪ್ರಾಯಗಳು ನನ್ನ ಬರಹಕ್ಕೆ ಪೂರಕವಾಗಿದೆ. ನಡೆದ ಚರ್ಚೆಗಳು ಉಪಯುಕ್ತವಾಗಿದೆ. ಸಂಪದದಲ್ಲಿ ಮಿತ್ರ ಗಣೇಶರು ಬರೆದ ದೇಹದಾನ ಕುರಿತ ಲೇಖನ ಸಹ ಇದಕ್ಕೆ ಪೂರಕವಾಗಿದ್ದು ಅದನ್ನೂ ಓದಲು ವಿನಂತಿಸುವೆ. ಶ್ರೀಯುತ ಜಗದೀಶರೇ ಉಲ್ಲೇಖಿಸಿದ ಮುತ್ತಿನಂತಹ ಮಾತುಗಳಿಂದ ಮುಗಿಸುವೆ: The most difficult requirement of becoming knowledgable is that you must give up certainty!”  ಪೂರ್ವಾಗ್ರಹವಿಲ್ಲದೆ ನಮ್ಮದೇ ಸರಿಯೆಂಬ ವಿಚಾರಕ್ಕೆ ಅಂಟಿಕೊಳ್ಳದೆ ವಿಚಾರ ಮಾಡೋಣ, ವಿಮರ್ಶಿಸೋಣ, ನಿಜವ ತಿಳಿಯೋಣ!
ನಮಸ್ಕಾರಗಳು.
-ಕ.ವೆಂ.ನಾಗರಾಜ್.