Pages

Friday, August 26, 2011

ವಿವೇಕ ಚೂಡಾಮಣಿ ಭಾಗ -೯



ಗ್ರಂಥದ ಮುಂದುವರಿದ ಭಾಗ

अतो विचारः कर्तव्यो जिज्ञासोरात्मवस्तुनः |
समासाध्य दयासिन्धुं गुरुं ब्रह्मविदुत्तमम् ||१५ ||

ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ |
(=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ )
ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫||
(= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು)

ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ ಪರಿಹಾರವನ್ನು ಒದಗಿಸುತ್ತಾರೆ.
ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ.
’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ್ನು ನೀಡುತ್ತದೆ. ತನ್ನ ಒಡಲಿನಲ್ಲಿ ಅಂತಹ ಅದೆಷ್ಟು ಹನಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆಯೋ ಬಲ್ಲವರಾರು !?. ಅಧಿಕಾರಿಯು ಆತ್ಮವಿದ್ಯಾಸಕ್ತನ ಎಲ್ಲಾ ಅವಗುಣಗಳನ್ನೂ ಮನ್ನಿಸಿ ಉಪದೇಶಿಸುವಂತಹ ಕರುಣಾಳಾಗಿರಬೇಕು ಎಂದು ಹೇಳುತ್ತಾರೆ.
ಮುಂದೆ, ’ಗುರುಂ’ ಎಂದು ಹೇಳುತ್ತಾರೆ. ’ಅಧಿಕಾರಿಯೆಂದರೇ ಗುರು’ ಎನ್ನುವಾಗ ಮತ್ತೊಮ್ಮೆ ’ಗುರುಂ’ ಎಂದು ಹೇಳುವ ಅಗತ್ಯವೇನು ? ಎಂಬ ಪ್ರಶ್ನೆ ಮೂಡುತ್ತದೆ. ’ಗು’ ಶಬ್ದವು ಕತ್ತಲೆ ಅಥವಾ ಅಜ್ಞಾನವನ್ನು ಸೂಚಿಸಿದರೆ ’ರು’ ಶಬ್ದವು ಬೆಳಕು (ಕತ್ತಲೆಯ ನಿರೋಧಕ) ಅಥವಾ ಜ್ಞಾನವನ್ನು ಸೂಚಿಸುತ್ತದೆ. ಕರುಣಾಳುವಾದ ಅಧಿಕಾರಿಯು ತನ್ನ ಉಪದೇಶದ ಮೂಲಕ ಆಸಕ್ತನ ಮನದ (ಹೃದಯಾಂಧಕಾರ) ಗೊಂದಲ, ಅಜ್ಞಾನವನ್ನು ತೊಳೆಯುತ್ತಾನೆ. ಆತ್ಮವಿದ್ಯೆಯ ಅಧಿಕಾರಿಯು ಗುರುವಾಗಿರಬೇಕು ಎಂದು ಹೀಗೆ ಹೇಳುತ್ತಾರೆ.
’ದಯಾಸಿಂಧು’ ಮತ್ತು ’ಗುರುಂ’ ಎಂಬ ಎರಡು ವಿಶೇಷ ಅರ್ಹತೆಗಳನ್ನು ಪಡೆದಿರುವ ಅಧಿಕಾರಿಯು ’ ಬ್ರಹ್ಮ ವಿದುತ್ತಮಮ್’ ಎಂದೆನಿಸಿಕೊಳ್ಳುತ್ತಾನೆ. ಬ್ರಹ್ಮನನ್ನು ತಿಳಿದವರು, ಆತ್ಮಾರ್ಥವನ್ನು ಅರಿತವರೇ ಬ್ರಹ್ಮವಿದುತ್ತಮರು.

ಆಕ್ಷೇಪ : ’ಸ್ವನುಭವೋ’ ಎಂದು ಈ ಮೊದಲೇ ಹೇಳಿರುವುದರಿಂದ ’ಅಧಿಕಾರಿ’ಯ ಉಪದೇಶದ ಅಗತ್ಯವೇನಿದೆ ?

ಸಮಾಧಾನ : ಯಾವುದೇ ಅಧ್ಯಯನ , ಉಪದೇಶಗಳಿಲ್ಲದೆ ಆತ್ಮವಿದ್ಯೆಯನ್ನು ಗಳಿಸುವುದು ಪಾಮರರಿಗೆ ಸಾಧ್ಯವಿಲ್ಲ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳಂತೆ ಏನೂ ಓದದೆ, ಯಾವುದನ್ನೂ ಅಭ್ಯಾಸ ಮಾಡದೆ ಸಮ್ಯಕ್ ಜ್ಞಾನವನ್ನು ಪಡೆಯಬಲ್ಲವರು ಜಗಕ್ಕೊಬ್ಬರು, ಯುಗಕ್ಕೊಬ್ಬರು ಎನ್ನಬಹುದು (ಇಲ್ಲಿ ’ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ’ ಎಂಬ ಗ್ರಂಥದ ಆರಂಭಿಕ ಶ್ಲೋಕದ ಸಾಲನ್ನು ಮನನ ಮಾಡಬಹುದು). ಎಲ್ಲರೂ ಇಂತಹವರಾಗಲು ಸಾಧ್ಯವಿಲ್ಲವಾದುದರಿಂದ ಗುರೂಪದೇಶ, ಗುರುವಿನ ಆಶ್ರಯ ಅಗತ್ಯವಾದುದಾಗಿರುತ್ತದೆ.
--------------------------------

ಮುಂದಿನ ಶ್ಲೋಕ

मेधावी पुरुषो विद्वान् ऊहापोह विचक्षणः ।
अधिकार्यात्मविद्यायामुक्तलक्षणलक्षितः ॥१६॥

ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ ವಿಚಕ್ಷಣಃ |
(= ಮೇಧಾವಿಯೂ(ಚುರುಕು ಬುದ್ಧಿ), ವಿದ್ವಾಂಸನೂ , ನ್ಯಾಯಾನ್ಯಾಯಗಳ ವಿವೇಚನೆಯುಳ್ಳವನು)
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣಲಕ್ಷಿತಃ ||೧೬||
(= ಅಧಿಕಾರಿಯು ಹೀಗೆ ಹೇಳಿರುವ ಲಕ್ಷಣಗಳಿಂದ ಕೂಡಿರಬೇಕು)

’ದಯಾಸಿಂಧುವಾದ ಗುರು, ಬ್ರಹ್ಮವಿದುತ್ತಮ, ಮೇಧಾವೀ, ವಿದ್ವಾನ್, ಉಹಾಪೋಹ ವಿಚಕ್ಷಣಃ ’ ಇವೆಲ್ಲಾ ಆತ್ಮವಿದ್ಯೆಯ ಅಧಿಕಾರಿಗೆ ಇರಬೇಕಾದ qualifications ಗಳು ಎನ್ನಬಹುದು. ವೇದಾಂತದ ಎಲ್ಲಾ ಮಜಲುಗಳು ಆರಂಭವಾಗುವುದೇ ಅಧಿಕಾರಿಯ ಅರ್ಹತೆಯ ನಿರೂಪಣೆಯಿಂದ. ಅಧಿಕಾರಿಯ ಪೂರ್ವಾರ್ಹತೆಯ ವಿವೇಚನೆಯ ನಂತರ ವೇದಾಂತದ ವಿಚಾರವು ಆರಂಭವಾಗುತ್ತದೆ.
ಆತ್ಮವಿದ್ಯೆಯ ಸಂಪಾದನೆಗಾಗಿ ಆಸಕ್ತನು ಆಶ್ರಯಿಸುವ ಅಧಿಕಾರಿಯು ಮೇಧಾವಿಯಾಗಿರಬೇಕು ಎಂಬಲ್ಲಿ, ’ಶಾಸ್ತ್ರಾರ್ಥಗಳಲ್ಲಿ ಪಾರಂಗತನಾದವನೂ, ಉಪದೇಶಿಸಲ್ಪಟ್ಟ ವಿಚಾರಗಳನ್ನು ಮನೋಗತ ಮಾಡಿಕೊಳ್ಳುವ ಶಕ್ತಿಯುಳ್ಳ ಬುದ್ಧಿವಂತನನ್ನು ’ಮೇಧಾವೀ’ ಎಂಬ ಪದದಿಂದ ಸೂಚಿಸಿರುತ್ತಾರೆ. ’ವಿದ್ವಾನ್ ’(Scholar) ಎಂದರೆ ಕಾವ್ಯ, ಕೋಶ, ವ್ಯಾಕರಣಗಳಲ್ಲಿ ನುರಿತಿರುವವನು ಎಂದು ತಿಳಿಯಬೇಕಾಗುತ್ತದೆ. ’ಊಹಾಪೋಹ ವಿಚಕ್ಷಣಃ’ ಎಂದರೆ ತರ್ಕಮೀಮಾಂಸ ಶಾಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನೆಂದು ಹೇಳುತ್ತಾರೆ. *ಪದವಾಕ್ಯಪ್ರಮಾಣಜ್ಞ*(೧) ನಾಗಿರುವುದೇ ಆತ್ಮವಿದ್ಯೆಯ ಅಧಿಕಾರಿಯ ಮುಖ್ಯ ಲಕ್ಷಣ ಎಂದು ಶಂಕರರು ತಿಳಿಸುತ್ತಾರೆ.
’ಉಕ್ತಲಕ್ಷಣ ಲಕ್ಷಿತಃ’ ಎಂದರೆ ಈಗಾಗಲೇ ಸೂಕ್ಷ್ಮವಾಗಿ ಗ್ರಂಥದ ಕೆಲವು ಶ್ಲೋಕಗಳಲ್ಲಿ ಹೇಳಿರುವ ನಾಲ್ಕು ವಿಧವಾದ ಸಾಧನಗಳ (=ಸಾಧನ ಚತುಷ್ಟಯ. ಮುಂದಿನ ಶ್ಲೋಕಗಳಲ್ಲಿ ವಿವರಣೆಗಳು ಬರಲಿದೆ) ಸಂಪನ್ನನೆಂದು ಎಂದು ಅರ್ಥ.
ಶುಭಕಾರ್ಯಕ್ಕೆ ಹೊರಟಾಗ ಎದುರಿಗೆ ಯಾರಾದರೂ ಬರಿದಾದ ಬಿಂದಿಗೆಯನ್ನು ಹಿಡಿದು ಹೊರಟರೆ ಅಪಶಕುನವೆಂದು(ಬೆಕ್ಕು ಅಡ್ಡಬರುವುದು) ಭಾವಿಸಿ ಕೆಲಹೊತ್ತು ತಡೆದು ಮುಂದುವರಿಯುವವರಿದ್ದಾರೆ. ಅವರಿಗೂ ಗೊತ್ತಿರುತ್ತದೆ
’ಬರಿಯ ಬಿಂದಿಗೆಯು ಏನೂ ಮಾಡದೆಂದು’ , ಆದರೂ ಇತರರು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ’ನಮಗೇಕೆ ಸಲ್ಲದ ಗೊಡವೆ’ ಎಂದು ಅಂಧಾನುಸರಣೆ ಮಾಡುತ್ತಾರೆ. ಇಂತಹವರಿಗೆ ’ಅಪೋಹ’ ವಿರುವುದಿಲ್ಲ. ಅರ್ಥಾನರ್ಥಗಳ ವಿವೇಚನೆಯನ್ನು ಹೊಂದಿರುವುದು ಅಧಿಕಾರಿಯ ಲಕ್ಷಣ ಎಂದು ಹೇಳುತ್ತಾರೆ.
--------------------------------------

ಮುಂದಿನ ಶ್ಲೋಕ

विवेकिनो विरक्तस्य शमादिगुणशालिनः ।
मुमुक्षोरेव हि ब्रह्मजिज्ञासायोग्यता मता ॥१७॥

ವಿವೇಕಿನೋ ವಿರಕ್ತಸ್ಯ ಶಮಾದಿಗುಣಶಾಲಿನಃ |
(= ವಿವೇಕಿಯೂ , ಅನಾಸಕ್ತನೂ(ತಟಸ್ಥ), ಸಹನಾಶೀಲಗುಣವುಳ್ಳವನು)
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾಯೋಗ್ಯತಾ ಮತಾ ||೧೭||
(= ಬ್ರಹ್ಮಜಿಜ್ಞಾಸುವಿಗೆ ಮುಮುಕ್ಷುತ್ವವೇ(ಬಂಧನದಿಂದ ಬಿಡುಗಡೆ) ಯೋಗ್ಯವಾದುದು)

ವಿವೇಕಿಯೂ, ವಿರಕ್ತನೂ ಶಮಾದಿಗುಣವುಳ್ಳವನು ಮತ್ತು ಮುಮುಕ್ಷುವಾದ ಅಧಿಕಾರಿಯು ವಿಚಾರಕ್ಕೆ ಯೋಗ್ಯನಾದವನು ಎಂದು ಶಂಕರರು ಸೂಚಿಸುತ್ತಾರೆ. ಈ ಶ್ಲೋಕದಲ್ಲಿ ಹೇಳಿರುವ ಎಲ್ಲಾ ಗುಣಗಳ ವಿವರಣೆಯು ಮುಂದೆ ’ಸಾಧನ ಚತುಷ್ಟಯ’ ಎಂದು ಹತ್ತು-ಹನ್ನೆರೆಡು ಶ್ಲೋಕಗಳಲ್ಲಿ ವಿವರವಾಗಿ ನಿರೂಪಿಸಲಾಗಿದೆ. ಅವುಗಳನ್ನು ಮುಂದೆ ತಿಳಿಯೋಣ.

ಅಧಿಕಾರಿಯನ್ನು ಅಥವಾ ಗುರುವನ್ನು ಹೇಗಿದ್ದರೂ ಒಪ್ಪಿಕೊಳ್ಳುವ ಪರಿಪಾಠ ಇಂದು ತುಸು ಹೆಚ್ಚಾಗಿದೆ ಎಂದೇ ಹೇಳಬಹುದು. ’ಶಿಷ್ಯರ ವಿತ್ತವನ್ನು(ದುಡ್ಡನ್ನು, ಸಂಪತ್ತನ್ನು) ಕಸಿಯುವ ಗುರುಗಳು ಹೇರಳವಾಗಿದ್ದಾರೆ , ಆದರೆ ಶಿಷ್ಯರ ಚಿತ್ತವನ್ನು( ಕಲಿಯುವ ಹುಮ್ಮಸ್ಸನ್ನು ತಣಿಸುವ) ಹಿಡಿದಿಟ್ಟುಕೊಳ್ಳುವ, ಹೃದಯವನ್ನು ಕಸಿಯುವ ಗುರುಗಳು ವಿರಳ’ ಎಂಬ ಮಾತೊಂದಿದೆ. ಅಂತಹ ಉತ್ತಮ ಗುರುಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದಲ್ಲಿ ರಾಮಕೃಷ್ಣರಂತೆ, ರಮಣಮಹರ್ಷಿಗಳಂತೆ self thought ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಇದು ಅಸಾಧಾರಣವಾದ ದಾರಿಯಾದ್ದರಿಂದ ಗುರೂಪದೇಶ, ಆಶ್ರಯದ ವಿಚಾರವನ್ನು ಶಂಕರರು ಹೇಳುತ್ತಾರೆ. ಕೆಲವರಿಗೆ ವಿಚಾರವು ಬಹು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದನ್ನು ಆಸಕ್ತರಿಗೆ ತಿಳಿಯುವಂತೆ ಹೇಳುವ ಚತುರತೆ ಇರುವುದಿಲ್ಲ ಅಥವಾ ಅಂತಹ ಕಾರುಣ್ಯವಿರುವುದಿಲ್ಲ ಎಂದು ಹೇಳಬಹುದು. ಒಂದು ವಿಚಾರವನ್ನು ನಾವು ಅರಿತಿದ್ದೇವೆ ಎನ್ನುವುದು ಅದನ್ನು ನಾವು ಹೇಗೆ ಬೇಕಾದರೂ ವಿವರಿಸಬಲ್ಲೆವು ಎನ್ನುವುದರ ಮೂಲಕ ತಿಳಿಯುತ್ತದೆ. ಗುರುವಿಗೆ ಕಲಿಸುವುದರ ಮತ್ತು ಕಲಿಯುವವರ ಬಗೆಗೆ ಪ್ರೀತಿ, ಸಹನೆ ಕಾರುಣ್ಯಗಳು ಇರಬೇಕಾಗುತ್ತದೆ. ಇಲ್ಲಿ ನನ್ನ ಕಾಲೇಜು ದಿನದ ಅನುಭವದ ವಿಷಯವೊಂದನ್ನು ಹೇಳಬಯಸುತ್ತೇನೆ. ನಾನು ಉಜಿರೆಯ ಧ.ಮ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಮಗೆ ಜಯಲಕ್ಷ್ಮಿ ( ಅವರು ಬಹಳ ದಪ್ಪಗಿದ್ದಿದ್ದರಿಂದ ತಮ್ಮನ್ನು ತಾವೇ ’ಗಜಲಕ್ಷ್ಮಿ’ ಎಂದು ಕರೆದುಕೊಳ್ಳುತ್ತಿದ್ದರು !) ಎಂಬ ಅಧ್ಯಾಪಕರು ಗಣಿತವನ್ನು ಕಲಿಸುತ್ತಿದ್ದರು. ಅವರು ಟ್ರಿಗ್ನಾಮೆಟ್ರಿ ಹೇಳಿಕೊಡುವಾಗ ನಮ್ಮಲ್ಲಿ ಬಹಳಷ್ಟು ಮಂದಿಗೆ ನಿದ್ದೆಯ ಮಂಪರು ಬರುತ್ತಿತ್ತು.
( ಆ ವಿಷಯವೇ ಹಾಗೇ ಅನ್ನಿ !). ಪಾಠದ ಮಧ್ಯೆ ನಮ್ಮ ಗುರುಗಳು ಆಗಾಗ್ಗೆ ಡಯಾಸನ್ನು ಜೋರಾಗಿ ಕಾಲಲ್ಲಿ ಕುಟ್ಟುವುದೋ ಅಥವಾ cos theta = ’some’ degree ಎಂತಲೋ ಜೋರಾಗಿ ಕಿರುಚುತ್ತಿದ್ದರು. ಹಾಗೇ ಸದ್ದು ಜೋರಾದಾಗ ಮಂಪರುಗಳಿಗೆ ಎಚ್ಚರಿಕೆಯಾಗುತ್ತಿತ್ತು !. ಪಾಠದ ಮಧ್ಯೆ ಅವರು ತೆರೆದ ಮನದಿಂದ ಮಾತನಾಡುತ್ತಿದ್ದರು "ಮಕ್ಕಳೇ, ನಾನೂ ನಿಮ್ಮಂತೆ ಟ್ರಿಗ್ನಾಮೆಟ್ರಿ ಕ್ಲಾಸಿನಲ್ಲಿ ನಿದ್ದೆ ಮಾಡಿಕೊಂಡೇ ಬಂದವಳು. ನನಗೂ ನಿಮ್ಮ ಕಷ್ಟ ಗೊತ್ತಾಗುತ್ತದೆ. ಈ ಪಾಠವೇ ಹೀಗೆ. ಅದಕ್ಕೆ ಆಗಾಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತಿರುತ್ತೇನೆ " ಎಂದು ಹೇಳುತ್ತಿದ್ದರು. ಎಂತಹಾ ಕಾರುಣ್ಯ ನೋಡಿ ನಮ್ಮ ಗುರುಗಳದ್ದು !. ಅವರು ನಿದ್ದೆ ಮಾಡಿ ಕಲಿತಿದ್ದರು ಎನ್ನುವ ಕಾರಣಕ್ಕೆ ನಾವು ಅವರಿಂದ ಏನು ಕಲಿಯುವುದಿದೆ ಎಂದು ಭಾವಿಸಿದ್ದಿದ್ದರೆ ಗಣಿತದಲ್ಲಿ ನಮ್ಮದು ಶೂನ್ಯಸಂಪಾದನೆಯಾಗಿರುತ್ತಿತ್ತು.
ಅವರು ಇಡೀ ಕಾಲೇಜಿಗೆ ಅತ್ಯುತ್ತಮ ಗಣಿತ ಉಪನ್ಯಾಸಕರು ಎನ್ನುವುದು ಹೆಮ್ಮೆಯ ವಿಚಾರವಾಗಿತ್ತು .
’ನೆಚ್ಚಿದ್ದ ಗುರುವೊಬ್ಬರು ಉಪ್ಪಿನಕಾಯಿ ತಿಂದರು’ ಎಂದ ಮಾತ್ರಕ್ಕೆ ಅವರಲ್ಲಿ ಗುರುವಿನ ಲಕ್ಷಣವೇ ಇಲ್ಲ ಎಂದು ತೀರ್ಮಾನಿಸಲು ಸಾಧ್ಯವೆ ?!. ಶಿಷ್ಯನಿಗೆ ಬೇಕಾದ್ದು ಅವರಲ್ಲಿರುವುದು ಮುಖ್ಯವಾಗುತ್ತದೆ.

ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ.
( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ.
ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು.
( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ
 ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ.

ಆತ್ಮವಿದ್ಯೆಯ ಸಾಧನೆಗೆ ಬೇಕಾದ ಸಾಧನಗಳ ವಿವರಣೆಯನ್ನು ’ಸಾಧನ ಚತುಷ್ಟಯ’ ಎಂಬ ವಿಭಾಗದಲ್ಲಿ ಶಂಕರರು ನಿರೂಪಿಸುತ್ತಾರೆ. ಮುಂದಿನ ಕಂತಿನಲ್ಲಿ ಇದರ ಬಗೆಗೆ ವಿವರವಾಗಿ ತಿಳಿಯೋಣ.

---------------------------------------------------

ಟಿಪ್ಪಣಿ:

೧) ಪದವಾಕ್ಯಪ್ರಮಾಣಜ್ಞ : ಪದಶಾಸ್ತ್ರವೆಂದರೆ ಭಾಷೆಯ ವ್ಯಾಕರಣದ ತಿಳುವಳಿಕೆ ಅಥವಾ ನುಡಿಯರಿಮೆ.
ವಾಕ್ಯಶಾಸ್ತ್ರವೆಂದರೆ ತರ್ಕ ಮತ್ತು ಮೀಮಾಂಸಶಾಸ್ತ್ರಗಳ ಅರಿವು. ಪ್ರಮಾಣವೆಂದರೆ
ನ್ಯಾಯಶಾಸ್ತ್ರಗಳ ತಿಳುವಳಿಕೆ. "ಪದವಾಕ್ಯಪ್ರಮಾಣಜ್ಞ" ಎಂಬುದನ್ನು ಯತಿಗಳ
ಬಿರುದಾವಳಿಯನ್ನು ಹೇಳುವಾಗ ಬಳಸುವುದನ್ನು ಗಮನಿಸಬಹುದು.


ವಂದನೆಗಳೊಂದಿಗೆ..

Tuesday, August 23, 2011

ಗುಡಿಗೆತಂದ ಹೂಗಳೆಲ್ಲಾ

ಇಲ್ಲೆರಡು ಹಾಡುಗಳಿವೆ . ವೇದಸುಧೆಯಲ್ಲಿ ಹಾಕುವುದು ಸೂಕ್ತವೋ ಅಲ್ಲವೋ ಅನ್ನೋ ಅನುಮಾನದಿಂದ ಸುಮ್ಮನಿದ್ದೆ. ಹಾಡು ನನ್ನ ರಚನೆ. ಕು|| ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಹಾಡಿದ್ದರಿಂದ ಸ್ನೇಹಿತ ಮಂಜುನಾಥ್ ನಿರೂಪಿಸಿದ್ದಾರೆ. ವೈಚಾರಿಕವಾಗಿ ಚಿಂತನೆ ಮಾಡುವ ಕೆಲವು ಅಂಶಗಳಿರುವುದರಿಂದ ವೇದಸುಧೆಯಲ್ಲಿ ಪ್ರಕಟಿಸುವುದು ತಪ್ಪಾಗುವುದಿಲ್ಲವೆಂದು ಪ್ರಕಟಿಸಿರುವೆ.




Sunday, August 21, 2011

ಶ್ರೀ ಕೃಷ್ಣಜನ್ಮಾಷ್ಟಮಿ

ವೇದಸುಧೆಯ ಓದುಗರೆಲ್ಲರಿಗೆ ದೇವಮಾನವ ಶ್ರೀಕೃಷ್ಣನ ಜನ್ಮದಿನದ ಶುಭಾಶಯಗಳು.

ಇದೀಗ ಗಮನಿಸಿದೆ. ಇದು ವೇದಸುಧೆಯ 600ನೆಯ ಪೋಸ್ಟ್!

ಎಂದೂ ಮುಗಿಯದು ಹರಿಕಥೆಯು !

ಚಿತ್ರಕೃಪೆ: ಅಂತರ್ಜಾಲ

ಎಂದೂ ಮುಗಿಯದು ಹರಿಕಥೆಯು !


ಮುರಳಿಯ ಮೋಹಕ ನಾದಕೆ ಗೋಕುಲ
ತಲೆದೂಗಿತು ಒಲೆದಾಡುತಲಿ
ತರಳನ ಮೋಡಿಯ ದಾಳಕೆ ವ್ಯಾಕುಲ
ಚಿತ್ತತೊರೆದು ನಲಿದಾಡುತಲಿ

ಹುಟ್ಟಿದ ಮಥುರೆಯ ತೊರೆಯುತಲಲ್ಲಿಗೆ
ಸಟ್ಟನೆ ಸಾಗುತ ಬಂದನವ
ತಟ್ಟಿದ ಎಲ್ಲರ ಹೃದಯವ ಮೆಲ್ಲಗೆ
ಬೆಟ್ಟವನೆತ್ತುತ ಕಂದನವ !!

ಗಡಿಗೆಯನೊಡೆದಾ ಬೆಣ್ಣೆಯಕದ್ದಾ
ಅಡಗಿಸಿ ಗೋಪಿಕೆ
ವಶನಗಳ
ಬೆಡಗಿಯರೆಲ್ಲರ ಹೆಣ್ಣಿಮೆಗೆದ್ದಾ
ಒಡನಾಡುತ ತಿಂದಶನಗಳ

ಜಾವದಿ ಕರೆದಾ ಗೋವುಗಳೆಲ್ಲವ
ಭಾವದಿ ಬಂದವು ಕರುಗಳವು
ಹಾವನು ತುಳಿದಾ ಜೀವಗಳೆಲ್ಲವ
ಸಾವಿನಿಂದ ತಾ ಹೊರಗೆಳೆದೂ

ಎಳೆತನದಲಿ ತಾ ಕುಚೇಲಗೊಲಿದಾ
ಗೆಳೆತನವಾಯಿತು ಹೆಮ್ಮರವು
ಗಳಿಕೆಯ ಹಿಡಿಯವಲಕ್ಕಿಯಪಡೆದಾ
ಅಳಿಸುತ ಬಡತನ ಸುಮ್ಮನವ

ಕರೆಯಲು ಬಂದಾ ಅಕ್ರೂರನ ಮನ
ಒರೆಗೆ ಹಚ್ಚಿ ತಾ ಪರಿಗಣಿಸಿ
ಅರಿವಲಿ ಭಕ್ತಗೆ ತಾ ಭಗವಂತನೇ
ಹೊರಗಡೆ ಬಂಧುವು ಎಂದೆನಿಸಿ

ಒದೆಯುತ ಮಾವನ ವಧಿಸಿದ ಅಳಿಯನು
ಸದೆಬಡಿಯುತ ಚಾಣೂರನನು
ಗದೆಯನು ನೀಡುತ ತಾತನ ಕೂರಿಸಿ
ಬದಲಿಸಿದನು ರಾಜ್ಯಭಾರವನು

ಪಾಂಚಾಲಿಯ ವೇದನೆಯನು ಗ್ರಹಿಸಿದ
ಪಾಂಚಜನ್ಯಧಾರಿಯು ಒಳಗೆ
ಕಾಂಚಾಣದ ಮದ ಹರಿದಾವೇಳೆಗೆ
ವಾಂಛಿತಕ್ಷಯಾಂಬರ ಹೊರಗೆ

ನಡೆಸಿದ ಭಾರತ ತರಿಯುತ ಹಲವರ
ಜಡದೇಹಕೆ ಅಂತ್ಯವ ಕರೆದು
ಗುಡಿಸಿ ಅಧರ್ಮವ ಬಡಿಸಿದ ಗೀತೆಯ
ತಡಮಾಡದೆ ಸತ್ಯವ ತೆರೆದು

ಒಂದೇ ಎರಡೇ ಘಟನೆಯು ಸಾವಿರ
ಎಂದೂ ಮುಗಿಯದು ಹರಿಕಥೆಯು !
ಚಂದದಿ ನೀವಿದ ಕೇಳಿದ ರೀತಿಗೆ
ಅಂದದ ಮಂಗಳ ಸಾರುವೆನು

---ವಿ. ಆರ್.ಭಟ್

Saturday, August 20, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೬:


     ಕರ್ಮ ಒಂದು ಬಗೆಯಲ್ಲ, ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸಿರುತ್ತದೆ. ಕರ್ಮ, ಪರರಿಗೆ ಕೇಡಾಗದಂತೆ ತನ್ನ ಹಿತಕ್ಕಾಗಿ, ಸರ್ವಮುಖೀ ಉನ್ನತಿಗಾಗಿ ಮಾಡುವ, ಪರರ ಸರ್ವಮುಖೀ ಉನ್ನತಿಗಾಗಿ ನೆರವಾಗಿ ನಿಂತು ಮಾಡುವ, ಎಲ್ಲ ಕ್ಷೇತ್ರಗಳಲ್ಲಿನ ಕರ್ತವ್ಯಗಳೂ ವೇದಗಳ ದೃಷ್ಟಿಯಲ್ಲಿ ಅವಶ್ಯವಾಗಿ ಮಾಡಲ್ಪಡಲೇಬೇಕಾದುದಾಗಿದೆ. ಅದರಲ್ಲಿಯೂ ರಾಷ್ಟ್ರದ ಹಿತ ಎದುರು ನಿಂತಾಗ ತನ್ನ ಹಿತದ ಸ್ವಾರ್ಥವನ್ನೂ ಬಿಟ್ಟು ಕೇವಲ ಪರಾರ್ಥವನ್ನೇ ನೋಡಬೇಕಾಗುವುದು. ಕರ್ತವ್ಯಕ್ಷೇತ್ರದಿಂದ ಸಂನ್ಯಾಸದ ಅಥವಾ ತ್ಯಾಗದ ಹೆಸರಿನಲ್ಲಿ ಓಡಿಹೋಗುವ ಪ್ರಶ್ನೆ ವೈದಿಕ ಧರ್ಮದಲ್ಲಿ ಇಲ್ಲವೇ ಇಲ್ಲ. ಇಂತಹ ಸಮಸ್ತ ಕರ್ತವ್ಯಗಳನ್ನೂ ಒಟ್ಟು ಸೇರಿಸಿ, ವೇದಗಳು ಯಜ್ಞ ಎಂದು ಕರೆಯುತ್ತವೆ ಮತ್ತು ಯಜ್ಞದ ಬಗೆಗೆ ಈ ಸಂದೇಶವನ್ನು ನೀಡುತ್ತದೆ :-


ಯಜ್ಞೋ ಹಿ ತ ಇಂದ್ರ ವರ್ಧನೋ ಭೂದುತ ಪ್ರಿಯಃ ಸುತಸೋಮೋ ಮಿಯೇಧಃ |
ಯಜ್ಞೇನ ಯಜ್ಞಮವ ಯಜ್ಞಿಯಃ ಸನ್ ಯಜ್ಞಸ್ತೇ ವಜ್ರಮಹಿಹತ್ಯ ಆವತ್ ||
(ಋಕ್. ೩.೩೨.೧೨.)

     [ಇಂದ್ರ] ದೇಹಾಧೀಶನಾದ, ಇಂದ್ರಿಯವಾನ್ ಜೀವ! [ಹಿ] ನಿಜವಾಗಿ [ಯಜ್ಞಃ] ಯಜ್ಞವೇ [ತೇ ವರ್ಧನಃ] ನಿನಗೆ ಅಭಿವೃದ್ಧಿಕಾರಕವೂ [ಉತ] ಮತ್ತು [ಪ್ರಿಯಃ] ಪ್ರಿಯಕರವೂ [ಸುತಸೋಮಃ] ಹಿಂಡಲ್ಪಟ್ಟ ಆನಂದರಸವನ್ನುಳ್ಳದ್ದೂ [ಮಿಯೇಧಃ] ಮೈತ್ರಿಯನ್ನು ವರ್ಧಿಸತಕ್ಕುದೂ [ಭೂತ್] ಆಗಿದೆ. [ಯಜ್ಞಿಯಃ ಸನ್ ಯಜ್ಞೇನ] ಯಜ್ಞಕರ್ತೃವಾಗಿ ಸತ್ಕರ್ಮದಿಂದಲೇ [ಯಜ್ಞಂ ಅವ] ಯಜ್ಞವನ್ನು, ಸತ್ಕರ್ಮವನ್ನು ರಕ್ಷಿಸು. [ಅಹಿ ಹತ್ಯೇ] ಕುಟಿಲತನವನ್ನು ನಾಶಮಾಡುವುದರಲ್ಲಿ [ಯಜ್ಞಃ] ಯಜ್ಞವು [ತೇ ವಜ್ರಮ್] ನಿನ್ನ ವಜ್ರಾಯುಧವಾಗಿ [ಆ ಆವತ್] ರಕ್ಷಿಸುತ್ತದೆ.
     ಎಂತಹ ಭವ್ಯ ಆದೇಶ! ಸತ್ಕರ್ಮದಿಂದ ನಮ್ಮ ಆತ್ಮಗಳ ರಕ್ಷಣೆಯೂ ಆಗುತ್ತದೆ. ಯಜ್ಞವನ್ನು ನಾವು ರಕ್ಷಿಸಿದರೆ, ಯಜ್ಞ ನಮ್ಮನ್ನು ರಕ್ಷಿಸುತ್ತದೆ. ಯಜ್ಞ-ಸತ್ಕರ್ಮ, ಧರ್ಮದ ಕ್ರಿಯಾತ್ಮಕ ರೂಪ. ಸತ್ಕರ್ಮದಿಂದ ಪುಷ್ಟೀಕರಿಸಲ್ಪಡದ ಜ್ಞಾನ, ಕೇವಲ ಗ್ರಾಂಥಿಕ ಜ್ಞಾನವಾಗಿ ತಲೆಯಲ್ಲೇ ಉಳಿದುಹೋಗುತ್ತದೆ. ಅದೊಂದು ನಿರರ್ಥಕ ಭಾರವಾಗಿ ಪರಿಣಮಿಸುತ್ತದೆ. ಆದಕಾರಣ, ಜ್ಞಾನವನ್ನು ಸಾರ್ಥಕಪಡಿಸಲು ಸತ್ಕರ್ಮಗಳನ್ನು ಮಾಡುತ್ತಲೇ ಜೀವನ ಪೂರ್ತ ಉಸಿರಾಡಲಿಚ್ಛಿಸಬೇಕು.
*****************

Friday, August 19, 2011

ವಿವೇಕ ಚೂಡಾಮಣಿ ಭಾಗ -೮



ಗ್ರಂಥದ ಮುಂದುವರಿದ ಭಾಗ

अर्थस्य निश्चयो दृष्टो  विचारेण हितोक्तितः।
न स्नानेन न दानेन प्राणायाम शतेनवा ॥१३॥

ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ|
(= ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು)
ನ ಸ್ನಾನೇನ ನ ದಾನೇನ ಪ್ರಾಣಾಯಾಮ ಶತೇನವಾ ||೧೩||
(=ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ)

ಸದ್ಗುರುಗಳಾದವರ ಒಳ್ಳೆಯ ಮಾತುಗಳನ್ನು , ಉಪದೇಶಗಳನ್ನು ಆಲಿಸುವುದರ ಜೊತೆಗೆ ಅಂತಹ ವಿಚಾರಗಳನ್ನು ಒರೆಗೆ ಹಚ್ಚಿ ತಿಳಿದುಕೊಂಡು ವಿವೆಚನೆಯಿಂದ ನಿರ್ಣಯಿಸಿಕೊಳ್ಳುವ ಆತ್ಮಾರ್ಥವು ಮಿಗಿಲಾದುದು.
ಇಂತಹ ಆತ್ಮಾರ್ಥಜ್ಞಾನವು ಕೇವಲ ಸ್ನಾನ, ದಾನ ಮತ್ತು ನೂರಾರು ಬಾರಿ ಪ್ರಾಣಾಯಾಮಗಳನ್ನು ಮಾಡುವುದರಿಂದ ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ.

ಆಕ್ಷೇಪ : ’ವಸ್ತುಸಿದ್ಧಿರ್ವಿಚಾರೇಣ’ ಎಂದು ಈಗಾಗಲೇ ತಿಳಿದಿರುವುದರಿಂದ ಸದ್ಗುರುಗಳ ಆಪ್ತವಚನದ ಅಗತ್ಯವಿದೆಯೆ ?

ಸಮಾಧಾನ :  ಹಗ್ಗವನ್ನೇ ಹಾವೆಂದು ತಿಳಿದು ಭ್ರಮೆಯಲ್ಲಿದ್ದಾಗ ವಾಸ್ತವದ ಅರಿವು ತಂತಾನೇ ಮೂಡುವುದು ಕಷ್ಟವಾಗುತ್ತದೆ. ಆಪ್ತರೊಬ್ಬರು ಹಿತವಾದ ಮಾತುಗಳಿಂದ ಸಂದರ್ಭವನ್ನು ವಿವರಿಸಿದಾಗ ಮನಸ್ಸು ತಿಳಿಯಾಗುತ್ತದೆ. ಭ್ರಮೆಯು ತೊಲಗುತ್ತದೆ.

ಶ್ಲೋಕದ ಎರಡನೆಯ ವಾಕ್ಯವನ್ನು ಯೋಗಗುರು ’ಬಾಬಾ ರಾಮದೇವರು ’ ಗಮನಿಸಿದರೆ, ಬಹುಶಃ ಅವರಿಗೆ ಕಡುಕೋಪ ಬರಬಹುದು. ವೇದಾಂತದ ವಿಚಾರವೇ ಹಾಗೆ !. ಅರ್ಜುನನು ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯುವಾಗ ಆತನ ಗುರಿಯಿದ್ದುದು ಕಣ್ಣಿನೆಡೆಗೆ ಮಾತ್ರ !. ಕಣ್ಣೊಂದನ್ನು ಬಿಟ್ಟು ಆತನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಮೀನಿನ ಉಳಿದ ಅಂಗಾಗಗಳೆಲ್ಲಾ ಆತನಿಗೆ ನಿರ್ಲಕ್ಷ್ಯ ಅಥವಾ ಮಿಥ್ಯೆ. ಆತನ ಗುರಿಯೊಂದೇ ಸತ್ಯ !. ಹೀಗೆ ಆತ್ಮಜ್ಞಾನದ ಅನ್ವೇಷಣೆಯಲ್ಲಿ ತೊಡಗುವವರಿಗೆ ಅದೊಂದೇ ಪರಮಗುರಿಯಾಗಿರಬೇಕಾಗುತ್ತದೆ. ಉಳಿದುವೆಲ್ಲಾ ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಿಮಿತ್ತವಾಗುತ್ತದೆ.
ಸ್ನಾನ, ದಾನಾದಿಗಳು ಮತ್ತು ಪ್ರಾಣಾಯಾಮಗಳಾವುವೂ ಆತ್ಮಜ್ಞಾನಾರ್ಥಿಯ ಪರಮಗುರಿಯಲ್ಲ. ಹಾಗಾಗಿ ಇವುಗಳಿಂದ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ.

ಆಕ್ಷೇಪ:       ಸ್ನಾನ, ದಾನ ಮತ್ತು ಪ್ರಾಣಾಯಾಮಗಳೆಲ್ಲಾ ಬಳಕೆಗೆ ಬಾರದ್ದೇ ? (ವ್ಯರ್ಥವೇ ?) .
ಸಮಾಧಾನ : ಮತ್ತೊಮ್ಮೆ ’ಚಿತ್ತಸ್ಯ ಶುದ್ಧಯೇ ಕರ್ಮ’ ಎನ್ನುವುದನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ.

ಸ್ನಾನದಲ್ಲಿ ನಿತ್ಯಸ್ನಾನ (ದಿನವೂ ಮೈತೊಳೆದುಕೊಳ್ಳುವುದು. ಶುಚಿತ್ವಕ್ಕಾಗಿ.), ಸೇತುಸ್ನಾನ (’ಸೇತು ಬಂಧೇತು ರಾಮೇಶಮ್’ ಎಂದು ಕೇಳಿದ್ದೆವೆ. ಗಂಡುಮಗುವನ್ನು ಪಡೆಯಲು ರಾಮೇಶ್ವರದ ಪುಣ್ಯತೀರ್ಥಗಳಲ್ಲಿ ಮೀಯವುದು ಎಂಬ ಶಾಸ್ತ್ರಾರ್ಥವಿದೆ), ಗಂಗಾಸ್ನಾನ (ಗಂಗಾನದಿಯಲ್ಲಿ ಮಿಂದು ಬಂದರೆ ಎಲ್ಲಾ ಪಾಪಗಳೂ ನಿವಾರಣೆ (ಚಿತ್ತಶುದ್ಧಿ!) ಎಂಬ ವಚನವಿದೆ) ಗಳೆಂಬ ಫಲಮೂಲವಾದ ಮೂರು ಪ್ರಸಿದ್ಧ ಕ್ರಿಯೆಗಳಿವೆ. ವಿಚಾರವೇ ಇಲ್ಲದೆ, ಆತ್ಮಶುದ್ಧಿಯೇ ಇಲ್ಲದೆ ಎಷ್ಟು ಕೋಟಿ ತೀರ್ಥಗಳಲ್ಲಿ ಮಿಂದು ಬಂದರೆ ಏನು ಪ್ರಯೋಜನ ?. ಅಜ್ಞಾನವೇ ಎಲ್ಲೆಲ್ಲೂ ಮುಸುಕಿರುವಾಗ ಕತ್ತಲೆಯಲ್ಲದೆ ಬೆಳಕು ಕಾಣುವುದಿಲ್ಲ.  ಕೊಳೆತುಹೋಗುವಷ್ಟು ಸಂಪತ್ತಿದೆ (Tax saving purpose !)   ಎಂದು ದಾನ ಮಾಡುವುದಕ್ಕಿಂತಲೂ ನಿಸ್ವಾರ್ಥ ಭಾವನೆಯಿಂದ ಕೊಡುವ ಚಿಕ್ಕಾಸೇ ಮಿಗಿಲಾದ ದಾನವೆನಿಸಿಕೊಳ್ಳುತ್ತದೆ. ಕರ್ಮಾನುಷ್ಠಾನಕ್ಕಾಗಿ ಮಾಡುವ ಪ್ರಾಣಾಯಾಮವು ಏಕಾಗ್ರತೆ , ಸಹಿಷ್ಣುತೆಗಳಿಗೆ ಮೂಲವಾದರೂ ಕೇವಲ ಅದನ್ನೇ ಹಲವು ನೂರು ಬಾರಿ ಮಾಡುವುದರಿಂದ ಆತ್ಮಾರ್ಥವು ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ. ಸ್ನಾನ , ದಾನ ಮತ್ತು ಪ್ರಾಣಾಯಾಮಗಳು ನಮ್ಮ ಸುಖ-ಸವಲತ್ತುಗಳನ್ನೇ ಮೇಲಾಗಿಟ್ಟುಕೊಂಡು ನೆಡೆಸುವಂತಹುದಾಗಿರುತ್ತದೆ. ಈಗಿನ ಕಾಲದಲ್ಲಿ ’ಪ್ರಾಣಾಯಾಮ ಮಾಡಿದರೆ ಬಿ.ಪಿ. , ಶುಗರ್ರು, ಹಿಡಿದಲ್ಲಿರುತ್ತೆ’ ಎನ್ನುವ ಮೂಲೋದ್ದೇಶವಿಲ್ಲದೆ ಅದನ್ನು ಆಚರಿಸುವವರು ವಿರಳಾತಿವಿರಳ ಎನ್ನಬಹುದು !.
(ಪ್ರಾಣಾಯಾಮ ಮತ್ತು ಅದರ ಸಮಗ್ರ ವಿಚಾರಗಳು ಅಂತರಜಾಲದಲ್ಲಿ ಸಾಕಷ್ಟು ಲಭ್ಯವಿದೆ. ಆಸಕ್ತರು ಜಾಲಾಡಬಹುದು).

ಹಿತೋಕ್ತಿಗಾಗಿ ಯಾರನ್ನು ಆಶ್ರಯಿಸಬೇಕು ಎನ್ನುವುದನ್ನು ಶಂಕರರು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

अधिकारिणमाशास्ते फलसिद्धिर्विशेषतः ।
उपाया देशकालाद्याः सन्तस्यां सहकारिणः॥१४||

ಅಧಿಕಾರಿಣಮಾಶಾಸ್ತೇ ಫಲಸಿದ್ಧಿರ್ವಿಶೇಷತಃ |
(= ಫಲಸಿದ್ಧಿಗಾಗಿ (=ಆತ್ಮವಿದ್ಯೆ) ಗುರುವಿನ ಬಳಿ ಸಾರುವುದು)
ಉಪಾಯಾ ದೇಶಕಾಲಾದ್ಯಾಃ ಸಂತ್ಯಸ್ಯಾಂ ಸಹಕಾರಿಣಃ ||೧೪||
(=ದೇಶ, ಕಾಲ, ಉಪಾಯಗಳು ಫಲಸಿದ್ಧಿಗೆ(=ಅಸ್ಯಾಂ) ಸಹಾಯಕವಾಗುತ್ತದೆ)

 ಆತ್ಮವಿದ್ಯೆಯ ಸಿದ್ಧಿಗಾಗಿ (ಫಲಸಿದ್ಧಿ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಇದು ಫಲಾಪೇಕ್ಷೆಯಲ್ಲ !) ಗುರುವನ್ನೇ ಆಶ್ರಯಿಸಬೇಕು ಮತ್ತು ಅಂತಹ ಸಾಧನೆಗೆ  ಕಾಲ (Time),  ದೇಶ ( Space) ಮತ್ತು ಉಪಾಯ (Method) ಗಳು ನೆರವಿಗೆ ಬರುತ್ತವೆ ಎಂದು ತಿಳಿಸುತ್ತಾರೆ. ಶ್ರೀ ಶಂಕರರು  ದೇಶ, ಕಾಲ, ಉಪಾಯಗಳು ಭಿನ್ನವಾಗಿರುತ್ತವೆ ಎಂಬುದನ್ನು ಒಪ್ಪಿದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ. ಶಂಕರರು ಇದನ್ನು ಹೇಳಿದ ಕಾಲಕ್ಕೂ ಈಗಿನ ಕಾಲಕ್ಕೂ ತಳುಕು ಹಾಕಿದರೆ ದೊಡ್ಡ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇಂತಹ ವಾಕ್ಯಗಳು ವಾಸ್ತವದ ಅರಿವಿನಿಂದ ಮತ್ತು ವಿಶಾಲ ಮನೋಭಾವದಿಂದ (ಉದಾರತೆ) ಬಂದಿರುವುದೆದು ತಿಳಿಯಬಹುದು. ದೇಶ, ಕಾಲೋಪಾಯಗಳು ಸಹಾಯಕವೆಂದು ಹೇಳುತ್ತಾರೆಯೇ ಹೊರತು ಅದನ್ನೇ ಸಾಧನವೆಂದು ನಿರೂಪಿಸುವುದಿಲ್ಲ.  ಉತ್ತಮ ಗುರುವು ದೊರೆಯದಿದ್ದರೆ ದೇಶ, ಕಾಲಗಳೆಲ್ಲಾ ಅಪ್ರಯೋಜಕ ಎನ್ನುವುದು ಸೂಕ್ಷ್ಮ ವಿಚಾರ.

ಇಲ್ಲಿ ಶಂಕರರು ಯಾವುದನ್ನೂ ಸಂಪೂರ್ಣ ನಿರಾಕರಿಸುವುದಿಲ್ಲ. ಯಾವ ಸಾಧನೆಗೆ ಯಾವ ಸಾಧನಗಳು ಅಗತ್ಯ ಎನ್ನುವುದನ್ನು ವಿವರಿಸುತ್ತಾ ಮನುಷ್ಯನು ತನ್ನ ಪರಮಗುರಿಯೆಡೆಗೆ ಹೇಗೆ ಸಾಗಬೇಕು ಎನ್ನುವುದನ್ನು ತಿಳಿಸುತ್ತಾರೆ. ವೇದಾಂತಿಗಳಿಗೆ ಇರಬೇಕಾದ ಮೂಲ ಗುಣವೇ ಇದು !.  "ನಾನು ಯಾವುದನ್ನೂ ನಿರಾಕರಿಸದೇ ನನ್ನನ್ನು ಯಾವುದೂ ನಿರಾಕರಿಸದಿರುವಂತೆ ಆಗಲಿ " (*ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇ ಅಸ್ತು  - ಛಾಂದೋಗ್ಯ ಉಪನಿಷತ್ತು. ಶಾಂತಿಮಂತ್ರ) ಎನ್ನುವುದನ್ನು ವೇದಾಂತಿಗಳೂ ತಿಳಿದಿರಬೇಕಾಗುತ್ತದೆ. ಕೆಲವು ಸೂಪರ್ ’ಅಹಂ ಬ್ರಹ್ಮಾಸ್ಮಿ’ಗಳಿಗೆ ತಾವು ನಂಬಿರುವ ತತ್ತ್ವವನ್ನು ಬಿಟ್ಟರೆ ಉಳಿದುದೆಲ್ಲವೂ ಸುಳ್ಳು ಎನ್ನುವ ಗುಣವಿರುತ್ತದೆ. ಇದನ್ನು ಶಂಕರರು ತಮ್ಮ ವಿಚಾರಗಳಿಂದಲೇ ಖಂಡಿಸುತ್ತಾರೆ. ’ಗುರಿಗೆ ಏನು ಬೇಕೋ ಅದನ್ನು ನಂಬು, ಉಳಿದ ವಿಚಾರಗಳನ್ನು ಪುರಸ್ಕರಿಸು’ ಎನ್ನುವ ಸೂಚನೆಯನ್ನು ಅಲ್ಲಲ್ಲಿ ನೀಡಿರುತ್ತಾರೆ.  ಅತ್ಮವಿದ್ಯೆಯ ಅರಿವಿಗೆ ಇಯತ್ತಾಪ್ರಮಾಣ ಎನ್ನುವುದು ಅಗತ್ಯ. ’ಇದಕ್ಕೆ ಇಷ್ಟೇ’ ಎನ್ನುವ ಯೋಗ್ಯತಾಸ್ವೀಕಾರದ ಅರಿವು ಆಸಕ್ತನಿಗೆ ಇರಬೇಕಾಗುತ್ತದೆ.  ಉಗುರನ್ನು ಕತ್ತರಿಸಲು ಸಣ್ಣ ’ನಯಿಲ್ ಕಟರ್’ ಸಾಕು, ಕೊಡಲಿಯ ಅಗತ್ಯವೇನೂ ಇಲ್ಲವಲ್ಲಾ !. ನಯಿಲ್ ಕಟರ್ರೂ ಕಬ್ಬಿಣದ್ದೇ, ಕೊಡಲಿಯೂ ಕಬ್ಬಿಣದ್ದೇ "ಇದನ್ನೆ ಅದನ್ನಾಗಿ ಮಾಡೋಣ" ಎನ್ನುವುದು ಗಾಂಪರಗುಂಪಿನ ಮಾತಾಗುತ್ತದೆ. ನಮ್ಮ ಉದ್ದೇಶಕ್ಕೆ, ಗುರಿಗೆ ಏನು ಬೇಕೋ ಅದನ್ನು ಅನುಸರಿಸುವುದು ಉತ್ತಮವಾದುದು . ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗ್ರಹಿಸುವುದರಿಂದ , ನಂಬುವುದರಿಂದ ಗುರಿಯೆಡೆಗೆ ಸಾಗುವುದು ಸುಗಮ ಎಂದು ಸೂಚಿಸಿರುತ್ತಾರೆ.  ರುಚಿಯಾಗಿದೆ ಎಂದು ಸೇರುಗಟ್ಟಲೆ ತಿನ್ನುವುದು ನಂತರ ತಿಂದಿದ್ದು ಅರಗದೆ  ಕಕ್ಕವುದು !.  ಪೌಷ್ಟಿಕವಾದ , ಉತ್ತಮವಾದ ಆಹಾರವನ್ನು ಕೊಂಚವೇ ತಿನ್ನುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಆತ್ಮವಿದ್ಯೆಯನ್ನು ತಿಳಿಸಿಕೊಡುವ ಗುರುವು-ಅಧಿಕಾರಿಯು ಹೇಗಿರಬೇಕು? ಆತನ ಲಕ್ಷಣಗಳೇನು ? ಎನ್ನುವುದನ್ನು ಮುಂದಿನ ಕಂತಿನಲ್ಲಿ ತಿಳಿಯೋಣ.

------------------------------------------
ಟಿಪ್ಪಣಿ :

ಛಾಂದೋಗ್ಯ ಉಪನಿಷತ್ತಿನ ಶಾಂತಿಮಂತ್ರ
-------------------------------------------

 आप्यायन्तु ममाङ्गानि वाक्प्राणश्चक्षुः
श्रोत्रमथो बलमिन्द्रियाणि च सर्वाणि ।
सर्वम् ब्रह्मौपनिषदम् माऽहं ब्रह्म
निराकुर्यां मा मा ब्रह्म
निराकरोदनिराकरणमस्त्वनिराकरणम् मेऽस्तु ।
तदात्मनि निरते य उपनिषत्सु धर्मास्ते
मयि सन्तु ते मयि सन्तु ।
ॐ शान्तिः शान्तिः शान्तिः 


ವಂದನೆಗಳೊಂದಿಗೆ.