Pages

Friday, May 11, 2012

ಆತುರ

ಆತುರದ ಸ್ವಭಾವವೆ ಒಂದು ಕಳಂಕ. ಆತುರದ ಸ್ವಭಾವದಿಂದ ಆಗಬಾರದ ಅನಾಹುತಗಳು ಘಟಿಸಿಬಿಡುತ್ತದೆ. ಒಂದೇ ಒಂದು ಕ್ಷಣ ನಿಧಾನ ಮಾಡಿದ್ದೆ ಆದರೆ, ಒಂದು ಕ್ಷಣ ತಮ್ಮ ನಿರ್ಧಾರವನ್ನು ಮುಂದೆ  ಹಾಕಿದರೆ ಸಾಕು,  ಆಗಬಹುದಾದ ಅನಾಹುತ ತಪ್ಪಿಸ ಬಹುದು.  ಇಲ್ಲವಾದರೆ, ಕೆಲವೊಂದು ಪ್ರಸಂಗದಲ್ಲಿ ಜೀವನ ಪರ್ಯಂತ ವಿಷಾದ ಪಡಬೇಕಾದ ಸಂಧರ್ಭ ಒದಗಿ ಬಿಡಬಹುದು. "ಆತುರಗಾರನಿಗೆ ಬುದ್ಧಿ ಕಡಿಮೆ" ಯೆನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.  ಆದರು,   ನಾವು ದಿನನಿತ್ಯದ ಬದುಕಿನಲ್ಲಿ ಕೆಲವೊಮ್ಮೆ ಆತುರದ ನಿರ್ಧಾರ ಮಾಡಿ ಅಥವಾ ಆಶ್ವಾಸನೆ ನೀಡಿ ಪರಿತಪಿಸುತ್ತೇವೆ.

ರಾಮಾಯಣದ ಒಂದು ಪ್ರಸಂಗ ಇಲ್ಲಿ ಪ್ರಸ್ತುತ  ಎನಿಸುತ್ತದೆ .ಕಾಮಾತುರನಾದ  ದಶರಥ ಮಹಾರಾಜ ತನ್ನ ರಾಣಿಯಾದ ಕೈಕೇಯಿಗೆ ಆತುರದಲ್ಲಿ ಕೊಟ್ಟ ಮಾತಿನ ಫಲವಾಗಿ ಇಡಿ ರಾಮಾಯಣವೇ ನಡೆದುಹೋಯಿತು.  ದುಡಿಕಿನ ಸಮಯದಲ್ಲಿ ಈತನಿಗಿದ್ದ  ವಿದ್ಯೆ, ಪಾಂಡಿತ್ಯ ಎಲ್ಲವು ಮರೆಯಾಗಿ, ಮೂಢತನ ಪ್ರದರ್ಶಿಸಿದ. ಈತನಲ್ಲಿದ್ದ ಧಾರ್ಮಿಕ ಮನೋಭಾವ, ಆತ್ಮೊನ್ನತಿಯ ಸಂಸ್ಕಾರ ಎಲ್ಲವು ಆ ಕ್ಷಣದಲ್ಲಿ ಮರೆತು ಹೋಯಿತು. ಕ್ಷಣಮಾತ್ರದ ಸುಖದ ಚಪಲತೆಗಾಗಿ ಈತ ಎಂತಹ ಘೋರ ಅನ್ಯಾಯವೆಸಗಿದ ಎನ್ನುವುದು ಚರಿತ್ರಾರ್ಹ.  ಕೈಕೇಯಿಯ ಮನವೊಲಿಸುವ ಸಲುವಾಗಿ ಆತುರದಿಂದ ದಶರಥ ಹೇಳಿದ ಮಾತುಗಳು ಎಷ್ಟು ಅಸಹ್ಯ ತರಿಸುತ್ತದೆ ಎನ್ನುವುದಕ್ಕೆ  ಈ ಮಾತುಗಳೇ ಸಾಕ್ಷಿ. " ಯಾರನ್ನು ಬೇಕಾದರೂ, ಯಾವ ಅಪರಾಧವಿಲ್ಲದಿದ್ದರು ಕೊಲ್ಲಿಸುತ್ತೇನೆ. ಕೊಲ್ಲಿಸಬೇಕಾದ ಯಾವ ಕಡು ಅಪರಾಧಿಯನ್ನು ಕೈಕೇಯಿ ಸಲುವಾಗಿ ಬಿಡುಗಡೆ ಮಾಡುತ್ತೇನೆ." ಇತ್ಯಾದಿ  ಇತ್ಯಾದಿಯಾಗಿ ಅಸಂಬದ್ಧ ಮಾತುಗಳನ್ನು ಆಡುತ್ತಾನೆ. ಕೈಕೇಯಿಯ ಬೇಡಿಕೆ ಮುಂದಿಟ್ಟ   ಕೆಲವೇ ಕ್ಷಣಗಳಲ್ಲಿ ಘೋರವಾದ ದುಃಖವನ್ನು ಅನುಭವಿಸುತ್ತಾನೆ. ಕೈಕೇಯಿ ಕಾಲಿಗೆ ಬಿದ್ದು ತನ್ನ ಬೇಡಿಕೆಯನ್ನು ವಾಪಸ್ಸು ಪಡೆಯುವಂತೆ ಬೇಡಿಕೊಳ್ಳುತ್ತಾನೆ. ತನ್ನನ್ನು ತಾನೇ ದಂಡಿಸಿಕೊಳ್ಳುತ್ತ  ಪಶ್ಚಾತ್ತಾಪದಿಂದ ಕೊರಗುತ್ತಾನೆ, ಆಡಿದ ಮಾತಿನ ಸಲುವಾಗಿ ಭರಿಸಲಾರದ ದುಃಖದಿಂದ ಜೀವತ್ಯಾಗ ಮಾಡುತ್ತಾನೆ. ರಾಮಾಯಣದ ಕರ್ತ್ರುವಾಗುತ್ತಾನೆ

ದಶರಥ ತಾನು  ಕೊಟ್ಟ ಆತುರದ  ಮಾತನ್ನು ಶ್ರೀ ರಾಮನಿಗಾಗಿ ತಪ್ಪಿಸಬಹುದಿತ್ತು. ಕೈಕೇಯಿಯನ್ನು ದಂಡಿಸಬಹುದಿತ್ತು. ಇಡಿ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸ ಹೊರಟ ರಾಣಿಯನ್ನು ದಂಡನೆ ಮಾಡಿದ್ದರೆ ಅದು ಧರ್ಮಸಮ್ಮತವು ಆಗುತ್ತಿತು.  ಆದರೆ ಇದನ್ನು ದಶರಥನಿಗೆ  ಮಾಡಲಾಗಲಿಲ್ಲ. ಆ ಕ್ಷಣದಲ್ಲಿ ಘಟಿಸಿದ ಘಟನೆಯೇ ಬೇರೆಯಾಯಿತು. " ಮಾತು ಆಡಿದರೆ ಹೇಗೆ ವಾಪಸ್ಸು ಬಾರದೋ ಹಾಗೆ,  ಮುತ್ತು ಒಡೆದರೆ ಹೇಗೆ ಜೋಡಿಸಲು ಸಾಧ್ಯವಾಗದೋ ಹಾಗೆ,  ಬಾಣ ಬಿಟ್ಟರೆ ಹೇಗೆ ಪುನಃ ಹಿಂದೆ ತರಲು ಸಾಧ್ಯವಿಲ್ಲವೋ ಹಾಗೆ " ಎಲ್ಲವು ನಡೆದು ಹೋಯಿತು.

ಇವೆಲ್ಲವೂ ವಿಧಿಯ ವಿಧಾನವೋ, ಪೂರ್ವ ನಿಯೋಜಿತವೋ ಅದು ನಂತರದ  ಮಾತು. ಆದರೆ ಒಂದಂತು ಸ್ಪಷ್ಟ.  ಮನುಷ್ಯ ಬೇಕಾದ ಸಮಯದಲ್ಲಿ ತಾಳ್ಮೆ ಕಳೆದುಕೊಂಡರೆ, ನಂತರದಲ್ಲಿ ಹೀಗಾಗಬೇಕಾಗಿತ್ತು ಎಂದು  ಸಾವಿರ ಸಲ  ಯೋಚನೆ ಮಾಡಿದರು ಪ್ರಯೋಜನಕ್ಕೆ ಬಾರದು. ಆತುರದ ಕೈಗೆ ಬುದ್ಧಿಯನ್ನು ಕೊಟ್ಟರೆ ಅದರಿಂದ ಆಗುವ ಅನಾಹುತ ಮಾತ್ರ ತಪ್ಪಿಸಲು ಸಾಧ್ಯವಿಲ್ಲ.  ಮಾಡುವ ಕೆಲಸವನ್ನು ಯೋಚಿಸಿ ಮಾಡುವ, ನೀಡುವ ಆಶ್ವಾಸನೆಯನ್ನು ಸ್ವಲ್ಪ ಚಿಂತಿಸಿ , ನಿರ್ಧಾರ ತೆಗೆದುಕೊಳ್ಳುವ  ಮುಂಚೆ ಪರಾಮರ್ಶೆ ಮಾಡುವ ಮನಸ್ಸು ಮಾಡುವಲ್ಲಿ ನಾವು ಸಫಲರಾದರೆ ಹೆಚ್ಚಿನ ನೆಮ್ಮದಿ ನಮ್ಮದಾಗಬಹುದು.  ಈ ಬಗ್ಗೆ ಚಿಂತನೆ ಮಾಡಿದರೆ ಚಿಂತೆ ಕಡಿಮೆಯಾಗಬಹುದು, ಇದಕ್ಕೆ ನೀವು ಏನು ಹೇಳುತ್ತೀರಾ?........

ಪ್ರಕಾಶ್

Wednesday, May 2, 2012



ಆತ್ಮೀಯ ವೇದಸುಧೆಯ ಅಭಿಮಾನಿಗಳೇ,


            ವೇದಸುಧೆಯ ಆರಂಭದಿಂದ ನೂರಾರು ಜನ ಅಭಿಮಾನಿ ಬಂಧುಗಳು ವೇದಸುಧೆಯನ್ನು ಪ್ರೀತಿಯಿಂದ ಓದುತ್ತಿದ್ದೀರಿ. ನಮ್ಮಲ್ಲಿ ಹಲವರಿಗೆ ಪರಸ್ಪರ ಪರಿಚಯವಿಲ್ಲ. ಆದರೂ ಒಂದು ಕುಟುಂಬದವರಂತೆ ನಮ್ಮೆಲ್ಲರ ಮನಸ್ಸು ಇದೆ. ಕುಟುಂಬದ ಒಬ್ಬ ಸದಸ್ಯನಾಗಿ ನಾನು ತಮ್ಮೆಲ್ಲರನ್ನೂ ನನ್ನ ಮಗನ ಮದುವೆಗೆ ಆಹ್ವಾನಿಸಲು  ನನ್ನ ಬ್ಲಾಗನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡಿರುವೆ. ಇದನ್ನು ತಪ್ಪಾಗಿ ಭಾವಿಸದೆ ಪರಸ್ಪರ ಪರಿಚಯ ಮಾಡಿಕೊಳ್ಳಲು  ಈ ಅವಕಾಶವನ್ನು ಉಪಯೋಗಿಸಿಕೊಳ್ಳೋಣ, ಆಗಬಹುದೇ?
------------------------------------------------------------------------------------------------------------

ನಮ್ಮ ಜ್ಯೇಷ್ಠ ಪುತ್ರ
ಚಿ||ರಾ|| ಶ್ರೀಕಂಠ  ಹೆಚ್.ಎಸ್.
ಮತ್ತು
ಚಿ||ಸೌ|| ರಶ್ಮಿ ವಿ.
[ಬೆಂಗಳೂರು ವಿವೇಕಾನಂದ ಕಾಲೊನಿಯ ನಿವಾಸಿ
ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಹೆಚ್. ಡಿ. ವೆಂಕಟೇಶ್ ಇವರ ಜ್ಯೇಷ್ಠಪುತ್ರಿ]
ಇವರ ವಿವಾಹ ಕ್ಕೆ
ತಾವು ಬಂಧುಮಿತ್ರರೊಡಗೂಡಿ ಆಗಮಿಸಿ ಆಶೀರ್ವದಿಸಬೇಕಾಗಿ ಕೋರುತ್ತೇವೆ.
ಮುಹೂರ್ತ:  7.05.2012  ರಂದು ಸೋಮವಾರ ,ಬೆಳಿಗ್ಗೆ  11.45 ರಿಂದ 12.00 ಕ್ಕೆ
ಆರತಕ್ಷತೆ: ಸಂಜೆ 6.30 ರಿಂದ
ಸ್ಥಳ: MKP .ಕಲ್ಯಾಣ ಮಂಟಪ ,
        ಬನಶಂಕರಿ ಎರಡನೆಯ ಹಂತ, ಕೆ.ಆರ್. ರಸ್ತೆ , ಬೆಂಗಳೂರು
ಹಾಸನದಲ್ಲಿ  ಆರತಕ್ಷತೆ:
ದಿನಾಂಕ: 13.5.2012  ಭಾನುವಾರ  ಬೆಳಿಗ್ಗೆ 10.00 ಕ್ಕೆ
ಸ್ಥಳ:  ಶ್ರೀ ಸೀತಾರಾಮಾಂಜನೇಯ ಪ್ರವಚನ ಮಂದಿರ,
ಮಹಾರಾಜಾ ಪಾರ್ಕ್ ಹಿಂಬಾಗ, ಉತ್ತರ ಬಡಾವಣೆ, ಹಾಸನ
ತಮ್ಮ ಆಗಮನಾಭಿಲಾಶಿಗಳು
ಶ್ರೀಮತಿ ಸರ್ವಮಂಗಳ ಮತ್ತು ಹರಿಹರಪುರ ಶ್ರೀಧರ
ಮತ್ತು ಬಂಧು ಮಿತ್ರರು
ಮಾಹಿತಿಗಾಗಿ:  9663572406    

Monday, April 30, 2012

ಯೋಚಿಸಲೊ೦ದಿಷ್ಟು...೫೦


ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು !
ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  ವೇದಸುಧೆಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ ಈ  ಸುವರ್ಣ ಕ೦ತನ್ನೂ ನಿಮ್ಮದೆ೦ಬ೦ತೆ ಓದಿ, ಅಭಿಪ್ರಾಯಿಸಬೇಕೆ೦ದು ಆಶಿಸುವ,
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

“ ನಾನು ಪ್ರಾಣ ತೆರಲು ಸಿಧ್ಧಿನಿರಲಿಕ್ಕೆ ಹಲಾವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿಧ್ಧನಿರಲು ಯಾವ ಕಾರಣವೂ ಇಲ್ಲ “ – ಗಾ೦ಧೀಜಿ.
೧) ನಮಗಿರಬೇಕಾದದ್ದು:
ಅ.  ಪರಮಾತ್ನನಲ್ಲಿ ಸ೦ಪೂರ್ಣ ನಿಷ್ಠೆ,                                                     
ಬ. ಆತ್ಮದಲ್ಲಿ ದೃಢತೆ- ಪರಿಪಕ್ವವಾದ ಆಲೋಚನೆ,
ಕ.  ದಿವ್ಯವಾದ ಗುಣ ಹಾಗೂ ಬುಧ್ಧಿ  -  ಶ್ರೇಷ್ಠವಾದ  ಸ೦ಸ್ಕಾರ,
ಡ. ದೃಷ್ಟಿಯಲ್ಲಿ ಪಾವಿತ್ರತೆ,-  ಮಾತಿನಲ್ಲಿ ಮಧುರತೆ,
ಇ.  ಕಾರ್ಯ  ಕೌಶಲ್ಯ,-  ಸರಳ ನೇರ ವ್ಯವಹಾರ,
ಪ. ಸೇವೆಯಲ್ಲಿ ನಮ್ರತೆ- ಸ್ನೇಹದಲ್ಲಿ ಆತ್ಮೀಯತೆ

೨) . ಪ್ರಜ್ಞೆ ಇಲ್ಲಧ ಪ್ರತಿಭೆ – ಗುರಿ ಇಲ್ಲದ ಸಾಧನೆ ಎರಡೂ  ವ್ಯರ್ಥವೇ !
೩. ಗುಣವಿಲ್ಲದ ರೂಪವೂ ವ್ಯರ್ಥವೇ! ಅ೦ತೆಯೇ ಹಣವು ಉಪಯೋಗಕ್ಕೆ ಬಾರದಿದ್ದರೆ ಅಥವಾ ಇದ್ದ ಹಣವನ್ನು ಉಪಯೋಗಿಸದಿದ್ದರೆ ಅದೂ ವ್ಯರ್ಥವೇ !
೪. ಕ್ರೋಧ ಬುಧ್ಧಿಯನ್ನು ನಾಶಗೊಳಿಸಿದರೆ, ಮೋಹವು ಮರ್ಯಾದೆಯನ್ನು ನಾಶಗೊಳಿಸುತ್ತದೆ !
೫. ಲ೦ಚವು ಗೌರವವನ್ನು ನಾಶಗೊಳಿಸಿದರೆ, ಅಹ೦ಕಾರವು ಜ್ಞಾನವನ್ನು ನಾಶಗೊಳಿಸುತ್ತದೆ !
೬. ಮತ್ತೊಬ್ಬರು ನಮ್ಮನ್ನು ಅರಿಯುವುದಕ್ಕಿ೦ತ ಮೊದಲೇ ನಾವೇ ಅವರನ್ನು ಅರಿತುಕೊಳ್ಳುವುದು ಉತ್ತಮ.
೭.  ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ ಎ೦ಬ ನಿಶ್ಚಿ೦ತೆ ನಮ್ಮ  ಜೀವನದ ಮೊದಲ ಆದ್ಯತೆಯಾದಾಗ, ಚಿ೦ತೆಗಳಿಲ್ಲದ ಜೀವನ ನಮ್ಮದಾಗುತ್ತದೆ.
೭. ಪ್ರತಿಭಟನೆ ಸಹ್ಯವೇ! ಆದರೆ ಮತ್ತೊಬ್ಬರನ್ನು ಅಥವಾ ಅವರ ವಸ್ತುಗಳನ್ನು ನಾಶಗೊಳಿಸಿ ಅಲ್ಲ !
೮. ಮೌನ ಮಾತಾದಾಗ ಕಣ್ಣೀರು ಹೆಪ್ಪುಗಟ್ಟುತ್ತದೆ ! ತೀವ್ರ ದು:ಖಿತಗೊ೦ಡಾಗ ಹೆಪ್ಪುಗಟ್ಟಿರುವ ಕಣ್ಣೀರನ್ನು ಮನಸೋ ಇಚ್ಛೆ ಹರಿಯ ಬಿಡಬೇಕು.
೯. ಬಾಳೊ೦ದು ನ೦ದನ.. ಸ೦ತಸ ನೆಲೆ ನಿ೦ತಾಗ ! ಗಳಿಸಿರುವ ಸ೦ತಸವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ !
೧೦. ಮಕ್ಕಳಿಗೆ ಶಿಸ್ತನ್ನು ಹೇರುವುದು ಉತ್ತಮವೇ! ಆದರೆ ಅವರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬ೦ಧಿಸಿ ಅಲ್ಲ !
೧೧. ಬೆಳೆಯುವ ಮಕ್ಕಳ ಹಿ೦ದೆ ನಮ್ಮ ತೀವ್ರ ನಿಗಾವಿರಲೇಬೇಕು! ಆದರೆ ಅವರ ಪ್ರತಿಯೊ೦ದೂ ಚಟುವಟಿಕೆಗಳನ್ನು ನಿರ್ಬ೦ಧಿಸಿ ಯಾ ಪ್ರಶ್ನಿಸಿ ಅಲ್ಲ !
೧೨. ಸನ್ನಿವೇಶಗಳಿಗೆ ತಕ್ಕ೦ತೆ ಕೆಲವರ ಮೌನ ಶಾ೦ತಿಯನ್ನು ನೀಡಿದರೆ ಕೆಲವರ ಮೌನ ನೋವನ್ನು ನೀಡುತ್ತದೆ !
೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !
೧೪. ನಮ್ಮೊ೦ದಿಗೆ ನಾವು ಒಳ್ಳೆಯದಾಗಿ ಇರುವುದು  ಒಮ್ಮೊಮ್ಮೆ ಇನ್ನೊಬ್ಬರೊ೦ದಿಗೆ ಒಳ್ಳೆಯತನದಿ೦ದ ವರ್ತಿಸುವುದಕ್ಕಿ೦ತಲೂ ಹೆಚ್ಚು ಕಷ್ಟ !
೧೫. ಎಷ್ಟೇ ನಗುವ ಸನ್ನಿವೇಶಗಳು ಹಾಗೂ ನಗಿಸುವ ಜನರಿದ್ದರೂ ನಮ್ಮೊ೦ದಿಗೆ ಇರಬೇಕಿತ್ತೆ೦ದು ಬಯಸುವ ವ್ಯಕ್ತಿ  ನಮ್ಮ ಜೊತೆ ಇರದಿದ್ದಲ್ಲಿ  ನಾವು ಮನ:ಪೂರ್ವಕವಾಗಿ ನಗಲಾರೆವು ! “ ಅವನು/ಅವಳು/ಅವರು ಇದ್ದಿದ್ದರೆ ಚೆನ್ನಾಗಿತ್ತು “ ಎ೦ಬ ಅನಿಸಿಕೆ ಉ೦ಟಾಗದೇ ಇರದು
೧೬. ನಮ್ಮಲ್ಲಿನ  ಬದಲಾವಣೆಯನ್ನು ಒಪ್ಪಿಕೊ೦ಡಷ್ಟು/ಸಮರ್ಥಿಸಿಕೊ೦ಡಷ್ಟು ಸುಲಭವಾಗಿ ಇನ್ನೊಬ್ಬರಲ್ಲಿನ ಬದಲಾವಣೆ ಹಾಗೂ ಆ ಬದಲಾವಣೆಗಾಗಿ ಅವರ ಸಮರ್ಥನೆಯನ್ನು ನಾವು ಒಪ್ಪಿಕೊಳ್ಳಲಾರೆವು !
೧೭.  ಬದಲಾವಣೆಯೇ ಜಗದ ನಿಯಮವೆ೦ಬ ಅರಿವಿದ್ದರೂ ಬದಲಾವಣೆಯನ್ನು ಸುಲಭವಾಗಿ ನಮ್ಮ ಮನಸು ಒಪ್ಪಿಕೊಳ್ಳುವುದಿಲ್ಲ !
೧೮. ಕೆಲವರು ನಮ್ಮ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಿದರೆ,  ಕೆಲವರು ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗುತ್ತಾರೆ !
೧೯. ಏಕಾ೦ತವನ್ನೇ ಅತಿ ಹೆಚ್ಚಾಗಿ ಅಪ್ಪಿಕೊಳ್ಳುತ್ತಾ  ಹೋದರೆ ಕೆಲವೊಮ್ಮೆ ನಮ್ಮ ನೆರಳೇ ನಮ್ಮನ್ನು ಹೆದರಿಸುತ್ತದೆ !
೨೦. ಮಿತವ್ಯಯಿಗಳಾಗಿರಬೇಕು ಆದರೆ ಜಿಪುಣರಾಗಿರಬಾರದು. ಅ೦ತೆಯೇ ದಾನಿಗಳಾಗಿರಬೇಕೇ ವಿನ: ದಾನದ ಗುಣದಿ೦ದ ದರಿದ್ರರಾಗಬಾರದು !
೨೧. ಅಪಾತ್ರರಿಗೆ ಯಾವ ರೀತಿಯ ದಾನವೂ ಸಲ್ಲದು ! ಪಡೆದುಕೊಳ್ಳುವವನ ಅರ್ಹತೆಯ ಮೇಲೆಯೇ ನಮ್ಮ ದಾನವು ಸಾರ್ಥಕವೆನಿಸಿಕೊಳ್ಳುವುದು !
೨೨. ಶೂರತನವಿರಬೇಕು.. ಶೂರತ್ವದೊ೦ದಿಗೆ ಕಟುಕತನವನ್ನು ಬೆರೆಸಬಾರದು !
೨೩. ಪರರ ಮೇಲಿನ ಅನುಕ೦ಪ ಒಳ್ಳೆಯದೇ . ಆದರೆ ಅದರಿ೦ದಲೇ ನಾವು ಜೀವನದಲ್ಲಿ ಮೋಸಹೋಗಬಹುದು !
೨೪. ತಾಳ್ಮೆ ಒಳ್ಳೆಯದೇ. ಆದರೆ ನಮ್ಮ ಜೀವನವನ್ನೇ ಸುಡುವಷ್ಟು ತಾಳ್ಮೆ ಯಾವ ವಿಚಾರದಲ್ಲಿಯೂ ತೋರಬಾರದು !
೨೫. ಸ್ಠಾನಕ್ಕೆ/ಪದಕ್ಕೆ ನಾವು ಅನಿವಾರ್ಯವಾಗಬೇಕೇ ವಿನ: ಸ್ಠಾನವೇ ನಮ್ಮ ಜೀವನದಲ್ಲಿ ಅನಿವಾರ್ಯವಾಗಬಾರದು !
೨೬ .  ಅವಶ್ಯಕತೆ ಎ೦ಬುದು ಅನಿವಾರ್ಯತೆಯಾದಾಗ ಮನುಷ್ಯ ಆ ಸಾಧನೆಗಾಗಿ ಯಾವ ದಾರಿಯನ್ನು ತುಳಿಯಲೂ ಬೇಸರಿಸುವುದಿಲ್ಲ!
೨೭. ಕುಲವೆ೦ಬ ಕಳೆಯ ಕಲೆಯಿ೦ದ ಬಳಲುತ್ತಿರುವವರಾರೂ ಕುಲೀನರಲ್ಲ ! ( ಮಾಯೆ-೪)
೨೮. “ ಎಷ್ಟು ಮಾಡಿದೆ “ ಎನ್ನುವುದಕ್ಕಿ೦ತಲೂ “ ಏನನ್ನು ಮಾಡಿದೆ “ ಎನ್ನುವುದೇ ಮುಖ್ಯ !
೨೯. ಮತ್ತೊಬ್ಬರನ್ನು ತುಳಿದು ಸಾಧಿಸುವುದೇನೂ ಇಲ್ಲ !   ಬೆ೦ಕಿಯಲ್ಲಿಯೇ  ಹೂವು ಅರಳಬೇಕು !
೩೦.  ಪ್ರಜಾಪೀಡಕರು  ಮತ್ತು ಕೊಲೆಗಡುಕರು  ಒಮ್ಮೆ ಅಜೇಯರಾಗಿ ಕಾಣುತ್ತಾರಾದರೂ, ಅ೦ತಿಮವಾಗಿ ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ ! ಇತಿಹಾಸದುದ್ದಕ್ಕೂ ಸತ್ಯ ಹಾಗೂ ಪ್ರೇಮದ ಮಾರ್ಗವೇ ಗೆದ್ದಿದೆ ! – ಗಾ೦ಧೀಜಿ

ಯೋಚಿಸಲೊ೦ದಿಷ್ಟು...೫೦

Wednesday, April 25, 2012

ವಾಸ್ತು.



                  ಈಗ ವಾರದ ಹಿಂದೆ ನಾನು ನನ್ನ ಮಿತ್ರನ ಜೊತೆ ಮಾತನಾಡುವಾಗ, "ಅವನ ೨೫ ವರ್ಷ ಹಳೆಯ ಮನೆಯನ್ನು ಕೆಡವಿ ಬೇರೆಮನೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಮನೆಯಲ್ಲಿ ಪ್ರಾರಂಭವಾಗಿದೆ, ಇದು ನನ್ನನ್ನು ಚಿಂತೆಗೆ ಈಡುಮಾಡಿದೆ" ಎಂದು ತನ್ನ ಅಳಲನ್ನು ತೋಡಿಕೊಂಡ.  ಇದಕ್ಕೆ ಏನು ಕಾರಣವೆಂದರೆ "ಒಬ್ಬ ವಾಸ್ತು ಪಂಡಿತರು ಬಂದು ಮನೆಯ ದಿಕ್ಕು, ಮನೆಯೊಳಗಿನ ವಿನ್ಯಾಸ ಸರಿ ಇಲ್ಲವೆಂದು, ಈ ಮನೆಯ ವಾಸ್ತುವನ್ನು ಸರಿಯಾಗಿ ಬದಲಾಯಿಸಿದಲ್ಲಿ ಅರೋಗ್ಯ ನೆಮ್ಮದಿ ಮತ್ತು ಸಂತೋಷ ಸಿಗುವುದೆಂದು ಹೇಳಿಹೋದ ಕ್ಷಣದಿಂದ ನಮ್ಮ ಮನೆಯ ಆರೋಗ್ಯವೇ ಹಾಳಾಗಿ ಹೋಗಿದೆ" ಎಂದು ಮತ್ತೂ ಮಾತು ಸೇರಿಸಿದ.  "ಪ್ರತಿನಿತ್ಯ,  ಮನೆಯನ್ನು ಯಾವಾಗ ಒಡೆಸುವುದು?  ಎಂಬ ಪ್ರಶ್ನೆ ಮನೆಯಲ್ಲಿ ಎಲ್ಲರೂ ಕೇಳುತ್ತಾರೆ.  ಹಣ ಎಲ್ಲಿಂದ ಹೊಂದಿಸುವುದು ಈ ಪ್ರಶ್ನೆಗೆ ಉತ್ತರವಿಲ್ಲ." ಎಂದು ತನ್ನ ಮನೆಯ ವಾತಾವರಣದ ಬಗ್ಗೆ ಬೇಸರದಿಂದ ನುಡಿದ.  ಈ ಮಾತು ಕೇಳಿದ ಮೇಲೆ ನನ್ನ ಮನದಲ್ಲಿ ಹೊರಟ ವಿಚಾರ ಲಹರಿ.
           ಹೌದು! ಈಗ ವಾಸ್ತು ಮತ್ತು ವಾಸ್ತು ಪಂಡಿತರ ಕಾಟ ಸ್ವಲ್ಪ ಜಾಸ್ತಿಯೇ ಎಂದು ಹೇಳಬಹುದು. ಹಲವಾರು ವರ್ಷಗಳಿಂದ ಬದುಕಿ ಬಾಳಿದ ಮನೆಯ ವಾಸ್ತುವಿನ ವಸ್ತುಸ್ತಿತಿ ಇದ್ದಕ್ಕೆ ಇದ್ದಹಾಗೆ ಹೇಗೆ ಬದಲಾಗಲು ಸಾಧ್ಯ? ವಾಸ್ತುವಿನ ಪರಿಣಾಮದಿಂದಾಗಿ ಮನೆಯ ಕಿಟಕಿ ಬಾಗಿಲುಗಳೇ ವೈರಿಗಳಾಗುತ್ತವೆ, ಅಡುಗೆ ಬಚ್ಚಲು ಮನೆಗಳೇ ಪರಮ ದ್ವೇಷಿಗಳಾಗುತ್ತವೆ,  ಮನೆಯ ಗೋಡೆಗಳೇ ಹೆದರಿಕೆ ಹುಟ್ಟಿಸುತ್ತವೆ.  ಬದುಕು ಅಸಹನೀಯವಾಗುತ್ತಿದೆ.   ಈಗ ನಾವು ಒಮ್ಮೆ  ಸಮಾಧಾನ ಚಿತ್ತದಿಂದ ಯೋಚಿಸೋಣ.  ಇದು ಸತ್ಯವೇ? ಇದು ಸಾಧ್ಯವೇ?  ಸತ್ಯವಾದರೆ ಅದೇನು? ಸಾಧ್ಯವಾಗುವುದಾದರೆ ಯಾವುದು? ಈ ಮನೆಯಲ್ಲಿ ಬದಲಾಗಬೇಕಾದದ್ದು ಏನು? ಏಕೆ?  ಆರೋಗ್ಯ, ಸಂಪಾದನೆ, ಸಾಮರಸ್ಯ  ಚೆನ್ನಾಗಿರಬೇಕಾದರೆ ಏನು ಬದಲಾಗಬೇಕು? ಮನೆಯಲ್ಲಿರುವ ಕಿಟಕಿ ಬಾಗಿಲುಗಳೇ? ಈ ಮನೆಯಲ್ಲಿ ಇರುವ ವಾಸ್ತುದೋಷವನ್ನು ಸರಿಪಡಿಸಿದರೆ ಇವೆಲ್ಲವೂ ಸರಿಯಾಗುವುದೆಂಬುವುದು ಯಾವುದರ ಆಧಾರದಲ್ಲಿ ನಿಂತಿದೆ?  ಈಗ ಇಲ್ಲಿ ಕೆಲಸ ಮಾಡಬೇಕಾದದ್ದು ನಮ್ಮ ದೃಢ ಸಂಕಲ್ಪವೋ? ಅಥವಾ ಮನೆಯ ಕಿಟಕಿ ಬಾಗಿಲುಗಳೋ?
                 ಈಗ ಹೀಗೆ ಯೋಚಿಸೋಣ!  ವಾಸ್ತು ಪಂಡಿತರು ಹೇಳುವಂತಹ ಬದಲಾವಣೆಗಳನ್ನು ಮಾಡುವುದೇ ಆದರೆ, ಅಲ್ಲಿ ಆರೋಗ್ಯ, ಸಂಪಾದನೆ ಮತ್ತು ಸಾಮರಸ್ಯ ಹೆಚ್ಚಾಗಬೇಕಲ್ಲವೇ?        ಹಾಗಾದರೆ,  ಇಲ್ಲಿ ನಮ್ಮ ಬುದ್ಧಿಮತ್ತೆ ಮತ್ತು ಪ್ರಯತ್ನ ಬೇಡವೇ? ಬೇಕು ಎನ್ನುವುದಾದರೆ ವಾಸ್ತು ಪಂಡಿತರು ಹೇಳುವ ಬದಲಾವಣೆಗಳ ಮಹತ್ವ ಎಷ್ಟು? ನಮ್ಮ ಪ್ರಯತ್ನ ಮತ್ತು ಬುದ್ಧಿಶೀಲತೆಯ ಮಹತ್ವ ಎಷ್ಟು?   ಪ್ರಯತ್ನ ಮತ್ತು ಬುದ್ಧಿವಂತಿಕೆ ಎಂದೂ ಮುಂದೆ ಸಾಗುವ ಧೀರರು!  ಮಿಕ್ಕದ್ದೆಲ್ಲ ಹಿಂದೆಯೇ! ಒಂದನ್ನು ಗಮನಿಸಬೇಕು, ವಾಸ್ತು ಪಂಡಿತರು ಹೇಳುವ ಹಾಗೆ ಎಲ್ಲವನ್ನು ಮಾಡಿ ಕೆಲಸ ಮುಗಿಯಿತೆಂದು ಕೈ ಕಟ್ಟಿ ಕುಳಿತರೆ ಸಂತೋಷ, ಸಾಮರಸ್ಯ ಅರೋಗ್ಯ ಇತ್ಯಾದಿಗಳೆಲ್ಲ ಮೇಲಿಂದ ಉದುರುವುದಿಲ್ಲ, ಅಥವಾ ವಾಸ್ತು ಪುರುಷ ಎಲ್ಲವನ್ನು ನೀಡುವ ಕಾಮಧೆನುವು ಅಲ್ಲ.ಇದು ಮನನ  ಮಾಡಬೇಕಾದ ಸಂಗತಿ ಎನಿಸುವುದಿಲ್ಲವೇ?
                    ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಎಲ್ಲೆಲ್ಲಿ ಏನೇನು ಇರಬೇಕು? ಏನು ಇರಬಾರದು? ಎಂಬುದು ಆ ಮನೆಯ ಮಾಲಿಕನ ಸ್ವತಂತ್ರ ವಿಚಾರಕ್ಕೆ ಬಿಟ್ಟ ಸಂಗತಿ.ಎಲ್ಲಿ ನೀರಿನ ತೊಟ್ಟಿ ಇದ್ದರೆ ತನ್ನ ಮನೆಯೊಡತಿಗೆ ಅನುಕೂಲ?  ಎಲ್ಲಿ ಅಡುಗೆ ಮನೆ ಇದ್ದರೆ ಚಂದ? ಎಲ್ಲಿ ರೂಮು ಹಾಲು ಇದ್ದರೆ ಅನುಕೂಲ ಇತ್ಯಾದಿಗಳು ಮನೆಯ ಮಾಲಿಕನ ಅಗತ್ಯ ಮತ್ತು ಇಷ್ಟಕ್ಕೆ ಬಿಟ್ಟ ವಿಷಯ.  ಇಂತಹ ವಿಚಾರದಲ್ಲಿ ಸ್ವಲ್ಪ ಹೀಗೆ ಯೋಚಿಸ ಬಹುದು.ಸೂರ್ಯನ ರಶ್ಮಿ ಯಾವ ಹೊತ್ತಿನಲ್ಲಿ ಎಷ್ಟು ,ಎಲ್ಲಿ ಹೆಚ್ಚು ಬೀಳುತ್ತದೆ? ಯಾವ ದಿಕ್ಕಿನಲ್ಲಿ ಮಳೆಗಾಲದಲ್ಲಿ ಮಳೆಯ ಇರಚಲು ಹೊಡೆಯುತ್ತದೆ? ಯಾವ ದಿಕ್ಕಿನಲ್ಲಿ ಗಾಳಿ ಹೆಚ್ಚು  ಎಂಬುದನ್ನು ಗಮನಿಸಿ, ಇದರಿಂದಾಗುವ ಅನುಕೂಲ, ಅನಾನುಕೂಲ ಗಮನಿಸಿ ಮನೆಯ ವಿನ್ಯಾಸದ ನಿರ್ಧಾರವನ್ನು ಮಾಡಬಹುದು. ಗೃಹ ನಿರ್ಮಾಣದ ಸಮಯದಲ್ಲಿ ಹೆಚ್ಚು ಗಾಳಿ ಬೆಳಕು ಬರುವಂತೆ ಮನೆಯ ಸುತ್ತಲು ಜಾಗ ಬಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಎಲ್ಲೂ ನೀರು ನಿಲ್ಲದಂತೆ ಹರಿದು ಹೋಗುವ ಅಥವಾ ಇಂಗಿಸುವ ವ್ಯವಸ್ತೆ ಮಾಡಿದರೆ ಸೊಳ್ಳೆ ಮತ್ತು ಇನ್ನಿತರ ಸಾಂಕ್ರಾಮಿಕ ರೋಗದ ಭೀತಿಯಿಲ್ಲ. ಮನೆಯ ಮುಂಭಾಗ  ಹಿಂಭಾಗದಲ್ಲಿ ಗಿಡಗಳನ್ನು ಬೆಳೆಸುವ ಅನುಕೂಲವಾದರೆ ಆರೋಗ್ಯಕ್ಕೆ ಮತ್ತು ಪ್ರಕೃತಿಗೆ ಹಿತಕರ. ಇಂತಹ ಇನ್ನೂ ಹಲವಾರು ವಿಚಾರಗಳ ಬಗ್ಗೆ ಚಿಂತನೆ ನಡೆಸಿ ಅಳವಡಿಸಿಕೊಳ್ಳಲು ಸಾಧ್ಯವಾದರೆ ಅನುಕೂಲ ನಮಗೆ.

                  ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಬಗ್ಗೆ ಎಷ್ಟು ಕಾಳಜಿ  ವಹಿಸುತ್ತೆವೋ ಅಷ್ಟೇ ಮನದ ಬಗ್ಗೆಯೂ ಕಾಳಜಿ ಬೇಕು. ಸದ್ಗ್ರುಹವಾಗಬೇಕಾದರೆ  ಸದಾಚಾರ, ಸದ್ವಿಚಾರ, ಸತ್ಯಧರ್ಮ ಪಾಲನೆಯಾಗಬೇಕು.  ನಾವು ಚಿಂತೆಗಿಂತ ಚಿಂತನೆ ಜಾಸ್ತಿ ಮಾಡಬೇಕು. ಅಕ್ಕಪಕ್ಕದವರೊಡನೆ ಮಧುರ ಭಾವನೆ ಇರಬೇಕು. ಮನೆಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸದ ಜೊತೆಜೊತೆಗೆ ಒಳ್ಳೆಯ ನಡತೆಯನ್ನು ಕಲಿಸಲು ಸಹಾಯಕವಾಗುವಂತಹ ವಾತಾವರಣ ನಮ್ಮ ಮನೆಯಲ್ಲಿ ಸೃಷ್ಟಿಯಾಗಬೇಕು. ಸ್ನೇಹಭಾವ, ನಿಯಮಪಾಲನೆ, ಸದಾಚಾರ ಇತ್ಯಾದಿಗಳು ನಮ್ಮ ಅರೋಗ್ಯ ಮತ್ತು ಜೀವನೋತ್ಸಾಹವನ್ನು  ಹೆಚ್ಚಿಸುತ್ತದೆ ಎಂಬುದನ್ನು ಮನಗಾಣಬೇಕು. ಯಾವ ಮನೆಯಲ್ಲಿ ಕಷ್ಟ ನಿಷ್ಟುರಗಳಿಲ್ಲ?   ಯಾವ ಮನೆಗಳಲ್ಲಿ ರೋಗ ರುಜಿನಗಳಿಲ್ಲ?  ಯಾವ ಮನೆಗಳಲ್ಲಿ ಸಾವು ನೋವುಗಳಿಲ್ಲ? ಇದನ್ನೆಲ್ಲಾ ಎದುರಿಸುವ ಮನೋಸ್ತೈರ್ಯ ಮತ್ತು ದೃಢ ವಿಶ್ವಾಸ ನಮ್ಮದಾಗಬೇಕು. ಪರಸ್ಪರ ವಿಶ್ವಾಸ ಮತ್ತು ನಂಬಿಕೆಗಳು  ಗಟ್ಟಿಯಾಗಬೇಕು.  ಮೂಡ ನಂಬಿಕೆ ಮತ್ತು ಅಪನಂಬಿಕೆ ನಮ್ಮಿಂದ ದೂರವಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಮನೆಯಲ್ಲಿರುವ ಆಚಾರ ವಿಚಾರಗಳು ಮನೆಯ ಒಡತಿಯಾದ   ಗೃಹಣಿ ಮತ್ತು ಗೃಹಸ್ತನ ಧರ್ಮ ಮಾತ್ರ ಸಂತೋಷಮಯ, ಆರೋಗ್ಯವಂತ ಬಾಳಿಗೆ ಅತಿಮುಖ್ಯವೇ ಹೊರತು ನಿರ್ಜೀವವಾದ ಕಿಟಕಿ- ಬಾಗಿಲುಗಳಾಗಲಿ ಅಥವಾ ದಿಕ್ಕಾಗಲಿ ಅಲ್ಲ.

                      ಇದಕ್ಕೆ ನೀವೇನು ಹೇಳುತ್ತಿರಾ?

ಹೆಚ್ ಏನ್ ಪ್ರಕಾಶ್

Monday, April 23, 2012

ಯೋಚಿಸಲೊ೦ದಿಷ್ಟು...೪೯



೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!
೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ
೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ!
೪. ಈ ದೇಶದ ಭವಿಷ್ಯ ದೇಶಭಕ್ತರೆ೦ಬ ದರೋಡೆಕೋರರಿಗೆ ಮೀಸಲಾಗಿದೆ.ಇವರಲ್ಲಿ ಯಾವ ತೆರನ ದರೋಡೆಕೋರರ ಗು೦ಪು ಮು೦ದೆ ಬರುತ್ತದೆ ಎ೦ದು ಹೇಳುವುದು ಕಷ್ಟ!- ಡಾ||ಶಿವರಾಮ ಕಾರ೦ತರು.
೫. ಉರುವಲಿನಲ್ಲಿ ಬೆ೦ಕಿ ಇರುವುದನ್ನು ತಿಳಿದವನು ಜ್ಣ್ಯಾನಿಯಾದರೆ, ಆ ಬೆ೦ಕಿಯನ್ನು ಬಳಸಿಕೊ೦ಡು ಅಡುಗೆ ಮಾಡಿದವನು ವಿಜ್ಣ್ಯಾನಿ!- ಪರಮಹ೦ಸರು
೬. ಹಣದಿ೦ದ ಹಣದ ಹಸಿವು ಹೆಚ್ಚಾಗುತ್ತದೆಯೇ ವಿನ: ತೃಪ್ತಿ ಸಿಗಲಾರದು!
೭. ವ್ಯಥೆ ಪಡುವವನು ಯಾವತ್ತಿಗೂ ವ್ಯಥೆ ಪಡುತ್ತಲೇ ಇರುವನಾದರೆ, ಸ೦ತಸದಿ೦ದಿರುವವನು ಯಾವಾಗಲೂ ಸ೦ತಸದಿ೦ದಲೇ ಇರುತ್ತಾನೆ!
೮.ನಮ್ಮ ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು ಪರಿಚಯಿಸುತ್ತದೆ!
೯.  ನಿರಾಶಾವಾದಿಗಳಾಗುವ ಮುನ್ನ ಎಲ್ಲರೂ ಆಶಾವಾದಿಗಳೇ!
೧೦. ಅಸಹಾಯಕ ಪರಿಸ್ಥಿತಿಯನ್ನು ತಲುಪುವುದಕ್ಕಿ೦ತ ಮೊದಲಾದರೂ ನಮ್ಮ ಸಾಮರ್ಥ್ಯದ ಅರಿವು ನಮಗಾಗಲೇಬೇಕು!
೧೧. ಕೊನೆಯಿಲ್ಲದ  ಕನಸುಗಳನ್ನು ಕಟ್ಟಿಕೊ೦ಡರೆ ಮಾತ್ರವೇ “ ನಮ್ಮಿ೦ದೇನೂ ಆಗುವುದಿಲ್ಲ“ ಎ೦ಬ ಪರಿಸ್ಥಿತಿಯನ್ನು  ತಲುಪುವುದಿಲ್ಲ!
೧೨. ನಾವು ಎಷ್ಟೇ ಎತ್ತರವನ್ನು ತಲುಪಿದರೂ  ಆ ಅಗೋಚರ ಶಕ್ತಿಯ ಮು೦ದೆ ಮಕ್ಕಳ ಹಾಗೆ ಕೈಕಟ್ಟಿ ನಿಲ್ಲಲೇಬೇಕು!
೧೩. ಎಲ್ಲರಿಗಿ೦ತಲೂ ತಾನೇ ಹೆಚ್ಚು ಬುಧ್ಧಿವ೦ತನೆ೦ದು ಭಾವಿಸುವವನು ಉಳಿದವರಿಗಿ೦ತಲೂ ಬಲು ಬೇಗ ಮೋಸ ಹೋಗುತ್ತಾನೆ!
೧೪.ಅಹ೦ಕಾರಿಯು ಸದಾ ಸ೦ಶಯದ ಸ್ವಭಾವದವನಾಗಿರುತ್ತಾನೆ.
೧೫. ಖ್ಯಾತಿ ಎನ್ನುವುದು  ಎ೦ದೂ ನೀಗದ ಬಾಯಾರಿಕೆ!

Tuesday, April 17, 2012

ಲೈಂಗಿಕ ಶಿಕ್ಷಣ- ವೇದದಲ್ಲಿ ಏನಿದೆ? - ವೇದಸುಧೆ » Vedasudhe


.

ಲೈಂಗಿಕ ಶಿಕ್ಷಣ- ವೇದದಲ್ಲಿ ಏನಿದೆ? - ವೇದಸುಧೆ » Vedasudhe
[ಈ ಕೊಂಡಿಯಲ್ಲಿ ಶರ್ಮರ ಧ್ವನಿ ಕೇಳಿ]

  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಅತ್ಯಂತ ಸರಳವಾಗಿ ನೇರವಾಗಿ ವೇದದ ವಿಚಾರಗಳನ್ನು ತಿಳಿಸ ಬಲ್ಲಂತವರು. ವೇದ ಎಂದರೆ ಕೇವಲ ಮಂತ್ರಗಳೇ? ಕೇವಲ ಯಜ್ಞ ಯಾಗಾದಿಗಳಿಗೆ ಮಾತ್ರ ವೇದ ಮಂತ್ರಗಳ ಉಪಯೋಗವೇ?

      ವೇದ ಜ್ಞಾನ ಯಾರಿಗೆ ಬೇಡ? ಸಮಾಜದ ಸ್ವಾಸ್ಥ್ಯ ಕಾಪಾಡಲು ವೇದದಲ್ಲಿ ಹಲವು ಸೂತ್ರಗಳಿವೆ. ವೇದವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಅದರ ಉಪಯೋಗದ ಅರ್ಥವಾಗುತ್ತೆ. ವೇದಸುಧೆಯಲ್ಲಿ ಶ್ರೀ ಶರ್ಮರು ಮಾನವ ಜೀವನದ ಅಭ್ಯುದಯಕ್ಕೆ ನೆರವಾಗುವ ಅಂಶಗಳನ್ನು ವೇದದ ಆಧಾರದಲ್ಲಿ ಆಗಿದಾಗ್ಗ್ಯೆ ವಿವರಿಸುವರಿದ್ದಾರೆ. ಈಗಾಗಲೇ ಇಂತಹ ಹಲವು ಆಡಿಯೋ ಕ್ಲಿಪ್ ಗಳನ್ನು ನೀವು ಶರ್ಮರ ಪುಟದಲ್ಲಿ ಕೇಳಬಹುದು.ಈ ಸಂಚಿಕೆಯಲ್ಲಿ ಅತ್ಯಂತ ಗಂಭೀರ ಸವಾಲಾಗಿರುವ ಲೈಂಗಿಕ ಶಿಕ್ಲಣದ ಬಗ್ಗೆ ಶ್ರೀ ಶರ್ಮರು ವಿವರಣೆ ನೀಡಿದ್ದಾರೆ