Pages

Saturday, June 30, 2012

CONSCIOUS MEDITATION




You are sitting, and when you sit for meditation many thoughts will come — uninvited guests. They never come ordinarily. When you meditate, only then do they become interested in you. They will come, they will crowd, they will encircle you. Do not fight with them. Just say, “I have decided not to be disturbed by you,” and remain still. A thought comes to you; just say to the thought, “Go away.” Do not fight! By fighting you acknowledge; by fighting you accept; by fighting you will prove weaker. Just say, “Go away!” and remain still. You will be surprised. Just by saying to a thought, “Go away!” it goes away.

But say it with a will. Your mind must not be divided. It must not be something like a feminine no. It must not be like that, because with a feminine no, the more forcefully it is said the more forcefully it means yes. It must not be a feminine no. If you say, “Go away,” then do not mean inside, “Come nearer.” Then let it be “Go away!” Mean it, and the thought will disappear. If you are angry and you have decided not to be angry, do not suppress it. Just say to the anger, “I am not going to be angry,” and the anger will disappear.

There is a mechanism. Your will is needed because anger needs energy. If you say no with full energy, there is no energy left for the anger. A thought moves because deep down a hidden yes is there. That is why a thought moves in your mind. If you say no, that yes is cut from the very root. The thought becomes uprooted. It cannot be in you. But then with the no or yes you must mean what you say. Then the no must mean no and the yes must mean yes. But we go on saying yes, meaning no; telling no, meaning yes. Then the whole life becomes confused. And your mind, your body, they do not know what you mean, what you are saying.

This conscious effort to decide, to act, to be, is now going to be the evolution for man. A Buddha is different from you because of this effort and nothing else. Potentially there is no difference. Only this conscious effort makes the difference. Between man and man, the real difference is only of conscious effort. All else is just superficial. Only your clothes are different, so to speak. But when you have something conscious in you, a growth, an inward growth which is not natural, but which goes beyond, then you have a distinct individuality.


Source – Osho Book “The Ultimate Alchemy, Vol2″


ನಾನು ದೇವರನ್ನು ನೋಡಿದೆ!



ವೇದಸುಧೆಯಲ್ಲಿ   ಚಿಂತನೆಗೆ ಯೋಗ್ಯವಾದ ಅದ್ಭುತವಾದ ಲೇಖನಗಳನ್ನು ನಮ್ಮ ಪ್ರಕಾಶ್  ಬರೆಯುವಾಗ " ಒಂದಿಷ್ಟು ಹರಟೆ " ಎಂಬ ಶಿರೋನಾಮದಲ್ಲಿ ಬರೆಯುತ್ತಿದ್ದರು. ಹಲವರು ಅದನ್ನು "ಚಿಂತನೆ" ಎನ್ನಬಾರದೆ? ಎಂದಾಗ ಹರಟೆ ಜಾಗವನ್ನು ಚಿಂತನೆ ದಕ್ಕಿಸಿಕೊಂಡಿತು. ಈಗ ನಿಜವಾಗಿ ಹರಟೆ ಮಾಡಬೇಕೆಂದೇ ಈ ಲೇಖನದ ಉದ್ಧೇಶ. ತಲೆಹರಟೆ ಎಂದರೂ ಇನ್ನೂ ಸರಿಯೇ ಆದೀತು.... ........ವಿಷಯಕ್ಕೆ ಬರುವೆ....


          ಇವತ್ತು ಆಷಾಡಮಾಸದ ಏಕಾದಶಿ . ನಮ್ಮ ಮನೆಗೆ ಬೆಂಗಳೂರಿನಿಂದ ಬಂದಿರುವ  ನನ್ನ ಬೀಗರು ಮತ್ತು ಅವರ ಕುಟುಂಬ ಬೆಳಗಾಗೆದ್ದು  ಮಾವಿನಕೆರೆ ವೆಂಕಟರಮಣನ ದರ್ಶನಕ್ಕೆಂದು ಹೋಗಿ ಬಂದರು. ಅಲ್ಲಿಂದ ಬಂದಕೂಡಲೇ ನನ್ನ ಸೊಸೆಯ ತಮ್ಮ  ಗಣೇಶನನ್ನು "ದೇವರ ಸೇವೆ ಆಯ್ತೇನಪ್ಪಾ? " ಎಂದೆ.
- ಆಯ್ತು ಅಂಕಲ್  ಅಂದ


-"ದೇವರನ್ನು ನೋಡಿದ್ಯಾ? ಎಂದೆ
- ಹೂ ಅಂಕಲ್ ನೋಡಿದೆ, ಎಂದ.


ಆ ನಂತರದ ಸರದಿಯಲ್ಲಿ ಕಣ್ಣಿಗೆ ಬಿದ್ದವರು ನಮ್ಮ ಬೀಗರ ತಾಯಿ ಎಪ್ಪತ್ತೈದು ವರ್ಷದ ವೃದ್ಧೆ. ಕೈಲಾಗದಿದ್ದರೂ ಅವರು ತಮ್ಮ  ಮನೆದೇವರ ದರ್ಶನ ಮಾಡಲೇ ಬೇಕೆಂದು ಹಟ ಮಾಡಿ ಹೋಗಿದ್ದವರು.


-ಅಜ್ಜೀ, ದೇವರನ್ನು ನೋಡಿದಿರಾ? ಎಂದೆ.


- ಹೂ ನೋಡಿದೆ. ಚೆನ್ನಾಗಿ ದರ್ಶನವಾಯ್ತು, ಎಂದರು  ಆನಂತರ  ಹೋಗಿದ್ದ ಎಲ್ಲಾ  ಐದೂ     ಮಂದಿಯಿಂದಲೂ     ದೇವರ ದರ್ಶನ ವಾಯ್ತೆಂಬ ಉತ್ತರ ಸಿಕ್ಕಿತು.  ಹೋಗಿದ್ದ ಕಾರಲ್ಲಿ ಐದು ಜನ ಮಾತ್ರ ಹೋಗಲು ಅವಕಾಶ ಇತ್ತು, ಹಾಗಾಗಿ ಐದು ಜನರಿಗೆ ಮಾತ್ರ  ದರ್ಶನವಾಯ್ತು.  ಒಂದು ಟ್ರೈನ್ ನಲ್ಲಿ ಹೋಗಿದ್ದರೆ ನೂಕು ನುಗ್ಗಲಿನಲ್ಲಿ  ಸಾವಿರಾರು ಜನ ದರ್ಶನ ಪಡೆಯುತ್ತಿದ್ದರು! ಪುಣ್ಯಕ್ಷೇತ್ರಗಳಲ್ಲಿ ನೋಡ್ತೀವಲ್ಲವೇ?


ಹಾಂ, ತಲೆಹರಟೆ ಬೇಡ. ವಿಷಯ ಪ್ರವೇಶಿಸೋಣ.  ಈ ಐದೂ ಮಂದಿಗೂ ನಾಟಕೀಯವಾಗಿ ಉತ್ತರ ಕೊಡಬೇಕೆನಿಸಲಿಲ್ಲ. ಮುಗ್ಧವಾಗಿಯೇ ವಿಶಯ ತಿಳಿಸಿದ್ದರು.ಎಲ್ಲರ ಬಾಯಲ್ಲೂ " ನಾನು ದೇವರನ್ನು ನೋಡಿದೆ, ಎಂಬ ಉತ್ತರ!! ಎಲ್ಲರ ಮುಖದಲ್ಲೂ ಸಂತಸ.ತಮಾಶೆ ಮಾಡಬೇಕೆಂದಿದ್ದ ನನಗೆ ತಮಾಶೆಗೂ ವಾದ ಮಾಡಬೇಕೆನಿಸಲಿಲ್ಲ. ಇಷ್ಟು ಸಮಯ ಆನಂದವಾಗಿರುವ ಇವರೊ ಡ ನೆ ನಾನು ರಡ್ದುವಾದ ಮಾಡಿ ಅವರ ಮನಸ್ಸನ್ನು ಕೆಡಿಸಲು ನನಗೆ ಇಷ್ಟವಾಗಲಿಲ್ಲ. ಅವರು ನಿಜವಾಗಿಯೂ ದೇವರನ್ನು ನೋಡಿದರಾ? ನೋಡಿದರು, ಎಂದಾದರೆ ತರ್ಕ ಮಾಡುವವರಿಂದ ಪ್ರಶ್ನೆ ಸಿದ್ಧವಾಗಿರುತ್ತೆ. " ದೇವರು ಹೇಗಿದ್ದ?" ಆ ಪ್ರಶ್ನೆ ಬಂದಕೂಡಲೇ ಇವನ್ಯಾರೋ ತಲೆ ಹರಟೆ ಎಂಬುದು ಅವರಿಗೆ ಖಾತ್ರಿ ಯಾಗಿರುತ್ತೆ.  


ಅವರವರ ಭಾವಕ್ಕೆ
ಅವರವರ ಬಕುತಿಗೆ
ಅವರವರ ತೆರನಾಗಿ
ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ
ಹರಿಯ ಭಕ್ತರಿಗೆ ಹರಿ
ನರರೇನು ಭಾವಿಪರೋ
ಅದರಂತೆ ತೋರುವನು||


ಎಷ್ಟು ಅದ್ಭುತವಾಗಿ ಬಣ್ಣಿಸಿದ್ದಾರೆ, ಅಲ್ಲವೇ? ಅವರು ತಲೆಹರಟೆ ಮಾಡ ಲಿಲ್ಲ."ನರರೇನು ಭಾವಿಪರೋ ಅದರಂತೆ ತೋರುವನು"-ಎಂದು ಬರೆಯುವಾಗ ಕವಿಯೂ ಕೂಡ ಭಗವಂತನು ಕಾಣಿಸುತ್ತಾನೆ, ಎಂದೇ ದೃಢ ವಿಶ್ವಾಸದಿಂದ ಹೇಳಿದ್ದಾನೆ. ಹೌದು, "ತೋರುವುದು" ಅಂದರೆ ಏನು? ಅದನ್ನೇ "ದರ್ಶನ" ಅನ್ನೋಣವೇ? ನಮ್ಮ ದೇಶದಲ್ಲಿ ಅನೇಕ ದಾರ್ಶನಿಕರು ಆಗಿಹೋಗಿದ್ದಾರೆ. ಅವರ ತಪಸ್ಸಿನಬಲದಿಂದ ಭಗವಂತನನ್ನು ಕಾಣಲು ಅವರಿಗೆ ತೋರಿದ ಹಾದಿ" ದರ್ಶನ" ಆಗಿರಬೇಕು. ಅಂದರೆ ಭಗವಂತನನ್ನು ಸಾಕಾರರೂಪದಲ್ಲಿಯೇ ನೋಡಬೇಕೇ? ನೋಡಲು ಸಾಧ್ಯವೇ? ಭಕ್ತರೆಲ್ಲಾ ದೇವರ ಗುಡಿಯಲ್ಲಿ ಸಾಮಾನ್ಯವಾಗಿ ನೋಡುವುದೇನು? ಗರ್ಭಗೃಹದಲ್ಲಿರುವ ವಿಗ್ರಹವನ್ನು ನೂಕುನುಗ್ಗಲಲ್ಲಿ ನೋಡಿದರೆ ಸಾಕು ಅವರಲ್ಲಿ ಕೃತಾರ್ಥ ಭಾವನೆ! ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಇಡೀ ದಿನರಾತ್ರಿ ಕ್ಯೂ ನಲ್ಲಿ ನಿಲ್ಲಬೇಕು. ಅಯ್ಯಪ್ಪನ ದರ್ಶನ ಮಾಡಲು ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕು.............. ಅದೇ ಸಮಯದಲ್ಲಿ ಎಲ್ಲೋ ಒಬ್ಬ ಕಣ್ಮುಚ್ಚಿ ಕುಳಿತು ದೇವರನ್ನು ಕಾಣಲು ಹಂಬಲಿಸುತ್ತಾನೆ.


ದೇವಾಲಯಗಳಿಗೆ ಹೋಗದೆ   ಕಣ್ಮುಚ್ಚಿ ಕುಳಿತು ಅವನೊಳಗೆ   ಭಗವಂತನನ್ನು  ಕಾಣ ಬೇಕೆನ್ನುವವನು ದೇವಾಲಯಕ್ಕೆ ಹೋಗುವ ಜನರನ್ನು ಕನಿಷ್ಟವಾಗಿ ಕಾ ಣ ಬಾರದು. ಹಾಗೆಯೇ  ಗುಡಿಯ ವಿಗ್ರಹದಲ್ಲಿ ಭಗವಂತನನ್ನು ಕಾಣುವವರೂ ಕೂಡ.
ಇರಲಿ. ಭಗವಂತನಿಗೆ ಆಕಾರ ಕೊಡಲು ಸಾಧ್ಯವೇ? ಅವನು ನಿರಾಕಾರಿ.        ಅವನನ್ನು ದೇವಾಲಯದಲ್ಲಿ ಬಂಧಿಸಲು ಸಾಧ್ಯವೇ? ಅವನು ಸರ್ವ ವ್ಯಾಪಿ. ಅವನಿಗೆ ದೂಪ,ದೀಪ, ನೈವೇದ್ಯ ಬೇಕೇ? ಎಲ್ಲವೂ ಅವನೇ ಕೊಟ್ಟಿದ್ದು. ಭಗವಂತನೆಂಬುದು ಒಂದು ನಿಯಂತ್ರಕ ಶಕ್ತಿ. ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುತ್ತಿರುವ ಆ ಶಕ್ತಿಗೆ  ನಮ್ಮಿಂದ ಭಿಕ್ಷೆ ಬೇಕೇ? ಆದರೆ ನಾವು ಮಾಡುವ ಎಲ್ಲಾ ಕ್ರಿಯೆಗಳೂ ನಮ್ಮ ಆನಂದಕ್ಕಾಗಿ. ಆನಂದವೇ ದೇವರು. ದೇವರ ತಟ್ಟೆಗೆ ದಕ್ಷಿಣೆ ಹಾಕಲು ನಮಗೆ ಸಾಧ್ಯವೇ?


ದೇವರಿಗೆ ಕವಚ ಮಾಡಿಸಿಕೊಟ್ಟೆ! ಗುಡಿಯ ಕಟ್ಟಿಸಿಕೊಟ್ಟೆ!! ಸೀರೆ ಕೊಟ್ಟೆ! ರೇಶ್ಮೆ ಪಂಚೆ ಉಡಿಸಿದೆ!! ಹೀಗೆಲ್ಲಾ  ಹೇಳುವುದು ಎಷ್ಟು ಮಾತ್ರ ಸರಿ? ಎಂದು ಚಿಂತಿಸೋಣ.
ಕೊಸರು: ಇವತ್ತು ಏಕಾದಶಿ ,ಎಂದೆ ಅಲ್ಲವೇ? ಇವರೆಲ್ಲಾ ಉಪವಾಸ ಹೋಗಿ ದೇವರ ದರ್ಶನ!? ಮಾಡಿ ಬಂದರು. ಆದರೆ  "ಪುಳಿಯೋಗರೆ, ಪೊಂಗಲ್" ಮಾಡಿ ಅರ್ಚಕರು ಅಲ್ಲಿ ದೇವರಿಗೆ ನೈವೇದ್ಯ ಮಾಡಿದ್ದರು!! ಇವರಿಗೆಲ್ಲಾ ಪ್ರಸಾದ ಭರ್ಜರಿಯಾಗೇ ಸಿಕ್ಕಿತು.

Thursday, June 28, 2012

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-4



ಆತ್ಮಕ್ಕೆಲ್ಲಿಯ ಸಾವು?
ಮುಕುಂದೂರ್ ಸ್ವಾಮೀಜಿ ಯವರ ಜೀವನ ಘಟನೆಗಳನ್ನು ಓದುತ್ತಿದ್ದನ್ತೆಲ್ಲಾ ಆನಂದವಾಗುತ್ತೆ. ಅಧ್ಯಾತ್ಮವನ್ನು ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳ್ತಾ ಇದ್ರೂ ಅಂದ್ರೆ......
ಸ್ವಾಮೀಜಿಯವರ ಆಶ್ರಮಕ್ಕೆ ಒಬ್ಬ ಭಕ್ತ ಬರ್ತಾನೆ. " ಸ್ವಾಮಿ ದೊಡ್ದಬೋರೆಗೌಡ ಸತ್ತೋದ " ಎಂದು ದು:ಖದಿಂದ ಹೇಳ್ತಾನೆ.
-ಹಾ! ಸತ್ತು ಹೋದ! ದೊಡ್ದಬೋರೆಗೌಡ !![ನಕ್ಕು] ಎಲ್ಲಾರ ಉಂಟೆ?
-ಇಲ್ಲಾ ಸ್ವಾಮಿ ನಾನೇ ಖುದ್ದು ನೋಡಿ ಬಂದೆ ,ನಿನ್ನೆ ಸತ್ತು ಇವತ್ತು ಮಣ್ಣು ಮಾಡಿ ಅಲ್ಲಿಂದಲೇ ಬರ್ತಾ ಇದ್ದೀನಿ !!
-ಹೌದಾ? ನೀನೇ ಖುದ್ದು ನೋಡಿದ್ಯಾ? ಏನಪ್ಪಾ ಸತ್ತು ಹೋಗೋದು ಅಂದ್ರೆ? ಎಂದರು ಗಂಭೀರವಾಗಿ.
-ಹೌದು ಸ್ವಾಮಿ , ನಾನೇ ನೋಡ್ದೆ ಅಂತೀನಿ.
-ಸರಿ ಬಿಡಪ್ಪಾ, ನೀನೇ ಕಂಡೇ ಅಂದ್ಮ್ಯಾಕೆ ಇನ್ನೇನ್ ಐತೆ? [ಕೃಷ್ಣ ಶಾಸ್ತ್ರಿಗಳ ಕಡೆ ನೋಡುತ್ತಾ......]" ಸ್ವಾಮಿ ಸತ್ತು ಹೊಗೊದುಂಟೆ? ಅದು ಬಂದೂ ಇಲ್ಲಾ, ಹೋಗೋದೂ ಇಲ್ಲಾ. ಅದು ಎಂದೆಂದಿಗೂ ಇರೋದು, ಈ ಯಪ್ಪಾ ನೋಡಿದ್ರೆ ನಾನೇ ಕಂಡೇ ಅಂತಾನೆ,ಎಂಗಪ್ಪಾ ಬಾಳಿ ಬದುಕಿ ಸತ್ತು ವೋಗೋದು? ಇವನಂತೂ ಸತ್ತು ವೋಗಾಕಿಲ್ಲಾ. [ಅವರನ್ನೇ ನೋಡಿಕೊಂಡು ]
" ಹೀಗಂತಾ ಹೇಳಿ ಜೋರಾಗಿ ನಕ್ಕಾಗ ಎಲ್ಲರೂ ಕಕ್ಕಾ-ಬಿಕ್ಕಿ.
ದೇಹಕ್ಕಷ್ಟೇ ಸಾವು, ಆತ್ಮನಿಗೆ ಸಾವಿಲ್ಲಾ!! ಎಂಬುದನ್ನು ಎಷ್ಟು ಸರಳವಾಗಿ ನಿರೂಪಿಸಿಬಿಟ್ರು!!

-------------------------------------------------------------
ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡ೦ಗೇ ಇಲ್ಲಾ!!
ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟ ವನ್ನು ಹತ್ತಲು ಕೃಷ್ಣ ಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು.ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ, " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿ ರುಮಾಲಿನ ಸಹಾಯದಿಂದ ಬನ್ದೆಮೇಲೇರುತ್ತಾರೆ.
ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.
-----------------------------------------------------------------------
"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"
ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,
-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!
- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.
-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್ ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿ ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿನ್ದ ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿಂತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?
-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?
ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ,
ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!
ಸ್ವಾಮೀಜಿಯವರೊಡನೆ ಶಾಸ್ತ್ರಿಗಳಿಗಾದ ಇಂತಹ ಅನುಭವಗಳನ್ನು ಓದುತ್ತಾ ಇದ್ದರೆ ಮೈ ಝುಂ .. ಎನ್ನುತ್ತೆ.
--------------------------------------------------------------


ಮನವಿ:

 ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ  ಹತ್ತಾರುವರ್ಷಗಳ ಸ್ವಾಮೀಜಿಯವರ ಒಡನಾಟದ ಪರಿಣಾಮವಾಗಿ ಬಟ್ಟಿ ಇಳಿಸಿರುವ "ಯೇಗ್ ದಾಗೆ ಐತೆ "  ಪುಸ್ತಕದಿಂದ ಪ್ರೇರಿತರಾಗಿರುವ  ಹಾಸನದ    ಶ್ರೀ ಕವಿನಾಗರಾಜ್, ಶ್ರೀ ಪ್ರಕಾಶ್,ಬೇಲೂರಿನ ಡಾ.ಶ್ರೀವತ್ಸ ವಟಿ ಯವರು ಸೇರಿದಂತೆ ಕೆಲವು ಆತ್ಮೀಯರು ಸೇರಿ ಶ್ರೀ ಮುಕುಂದೂರು ಸ್ವಾಮಿಗಳ ಬಗ್ಗೆ ಪ್ರಕಟವಾಗದೇ ಇರಬಹುದಾದ    ಇನ್ನಷ್ಟು  ಮಾಹಿತಿಗಳನ್ನು  ಸಂಗ್ರಹಿಸಲು ಚಿಂತನೆ ನಡೆಸಿದ್ದೇವೆ. ಸ್ವಾಮೀಜಿಯವರು ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ     ಸಾಕಷ್ಟು  ಓಡಾಟ ನಡೆಸಿರುವಂತಿದೆ.  ಹಾಗೂ ಹೊಳೇ ನರಸೀಪುರ ತಾಲ್ಲೂಕಿನ ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸು ಮಾಡಿ ಅವರಿಗೆ ಮುಕುಂದೂರಜ್ಜ ಅಥವಾ ಮುಕುಂದೂರು ಸ್ವಾಮಿಗಳು ಎಂಬ ಹೆಸರು ಬಂದಿದೆ.   ಈ ಭಾಗಗಳ ಪರಿಚಯವಿರುವ ಓದುಗ ಮಿತ್ರರು ಈ ಸತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿ ಕೋರುವೆ.
ನೀವೇನು ಮಾಡಬಹುದು?
1. ಮುಕುಂದೂರು ಸ್ವಾಮಿಗಳ ಹೆಸರು ತಿಳಿದವರ ಮಾಹಿತಿ ನಮಗೆ ಕೊಡಿ.ಅವರನ್ನು ಭೇಟಿಯಾಗಲನುಕೂಲವಾಗುವ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ
2. ನಿಮಗೆ ಸಾಧ್ಯವಾದರೆ ಅವರ ಸಂದರ್ಶನ ನಡೆಸಿ ವೀಡಿಯೋ ಕ್ಲಿಪ್ ನಮಗೆ ಕಳಿಸಿಕೊಡಿ.
3. ಒಂದು ವಿಚಾರ ಸ್ಪಷ್ಟವಿರಲಿ. ಸ್ವಾಮೀಜಿಯವರು ಯಾವುದೇ ಸಂಪ್ರದಾಯ ಪೋಷಕರಲ್ಲ.
4. ನಮಗೆ ಅಗತ್ಯವಿರುವುದು ಅವರ ನೇರವಾದ ಆಧ್ಯಾತ್ಮಿಕನುಡಿಗಳು. ನೆನಪಿರಲಿ ಸ್ವಾಮೀಜಿಯವರು  ವಿಗ್ರಹದಲ್ಲಿ ಮಾತ್ರ ದೇವರನ್ನು ಕಂಡವರಲ್ಲ. ಪ್ರಕೃತಿಯಲ್ಲಿರುವ ಗಿದಮರ ಬಳ್ಳಿಗಳು, ಬಂಡೆಗಳು,ಪ್ರಾಣಿ ಪಕ್ಷಿಗಳನ್ನು ಮನುಷ್ಯನಷ್ತೇ ಸಹಜವಾಗಿ ಮಾತನಾಡಿಸುತ್ತಿದ್ದವರು. ಆದ್ದರಿಂದ ಈ ತಲಹದಿಯಮೇಲೆ  ನೀವು ಮಾತನಾಡಿಸುವವರಿಂದ ಮಾಹಿತಿ ಪಡೆಯುವುದು ಉತ್ತಮ.





Wednesday, June 27, 2012

ಪುಟ್ಟ ಕಣ್ಣುಗಳಲ್ಲಿ ದೊಡ್ಡ ಕನಸುಗಳು

ರಕ್ತ ಸಂಬಂಧಗಳು ಮತ್ತು ಜೀವಾತ್ಮ



     ಅಲ್ಪ ಶಕ್ತ ಜೀವಾತ್ಮನಿಗೆ ಯಾವುದೇ ಕ್ರಿಯೆ ಮಾಡಲು ಶರೀರವೆಂಬ ಮಾಧ್ಯಮದ ಅಗತ್ಯವಿದೆ, ಅದು ಮಾಧ್ಯಮದ ಸಹಾಯವಿಲ್ಲದೆ ತಾನೇ ತಾನಾಗಿ ಏನೂ ಮಾಡಲಾರದು ಎಂದು ತಿಳಿದವರು ಹೇಳುತ್ತಾರೆ. ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿರುವವರು. ಹಿಂದಿನ ಜನ್ಮದ ಮಾತಾ-ಪಿತರೇ ಇನ್ನೊಂದು ಜನ್ಮದ ಮಾತಾ-ಪಿತೃಗಳಾಗಲಾರರು. ತಂದೆ-ತಾಯಿಯರ ಗುಣ ವಿಶೇಷಗಳೇ ಮಕ್ಕಳಿಗೆ ಇರದಿರುವುದು, ಎಲ್ಲಾ ಮಕ್ಕಳೂ ಒಂದೇ ಸ್ವಭಾವದವರಾಗದಿರುವುದು, ಕುಟುಂಬದ ಸದಸ್ಯರುಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣುವುದು, ಇತ್ಯಾದಿ ಅಂಶಗಳು ಪುನರ್ಜನ್ಮದ ನಂಬಿಕೆಗೆ ಪೂರಕವಾಗಿವೆ. ಹಿಂದಿನ ಜನ್ಮದಲ್ಲಿ ಸಂಬಂಧಿಗಳಾಗಿದ್ದವರು ಈ ಜನ್ಮದಲ್ಲೂ ಸಂಬಂಧಿಗಳಾಗಿದ್ದರೆ ಪರಸ್ಪರರಲ್ಲಿ ಮಧುರ ಸಂಬಂಧವಿರುತ್ತದೆ ಎಂದು ಹೇಳುತ್ತಾರೆ. ಇದೇನೇ ಇದ್ದರೂ ಕೆಲವು ಗುಣಗಳು ಅನುವಂಶಿಕವಾಗಿ ಬರುವುದನ್ನೂ ಕಾಣುತ್ತೇವೆ. ಸಂಬಂಧಗಳು, ಅದರಲ್ಲೂ ರಕ್ತ ಸಂಬಂಧಿಗಳ ನಡುವಣ ಸಂಬಂಧಗಳು ಚೆನ್ನಾಗಿರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಈ ಹಿನ್ನೆಲೆಯಲ್ಲಿ ರಕ್ತ ಸಂಬಂಧಗಳು ಮತ್ತು ಜೀವಾತ್ಮರ ಸಂಬಂಧದ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರನ್ನು ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಈ   ಆಡಿಯೋ ತುಣುಕಿನಲ್ಲಿದೆ: 


-  ಕವಿ ನಾಗರಾಜ್

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-3

ತೋಟದ ಹಾದಿಯಲ್ಲಿ ಹೊರಟವರು ಆಶ್ರಮ ತಲುಪಿದೆವು.  ಅಲ್ಲಿನ ಒಬ್ಬ ಕೆಲಸಗಾರ  ಎಲ್ಲಾ ತೋರಿಸಿದವನು "ಕಾಫಿ ಮಾಡಿಸಿಕೊಂಡು ಬರಲಾ? ಬುದ್ಧಿಯೋರು ಮಲಗವ್ರೆ, ಅಂದ.
-ಪರವಾಗಿಲ್ಲ ,ನಾವು ಇಲ್ಲೇ ಎಲ್ಲಾ ನೋಡಿಕೊಂಡು ಎಲ್ಲಾ ನೋಡ್ತಾ ಇತೀವಿ..ಆಮೇಲೆ ಸ್ವಾಮೀಜಿ ನೋಡೋಣ, ಎಂದೆವು. ಆ ವ್ಯಕ್ತಿ ಆಶ್ರಮದ ಆವರಣದಲ್ಲಿರುವ ದೇವಾಲಯ, ಧ್ಯಾನ ಮಂದಿರ [ಈಗ ಕಲ್ಯಾಣ ಮಂಟಪವಾಗಿ        ಉಪಯೋಗವಾಗುತ್ತಿದೆ]   ಮುಕುಂದೂರು ಸ್ವಾಮಿಗಳಗದ್ದುಗೆ. ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಗುಹೆ, ಅವರು ಪೂಜಿಸುತ್ತಿದ್ದ  ಈಶ್ವರ ವಿಗ್ರಹ..ಎಲ್ಲವನ್ನೂ ನೋಡಿಕೊಂಡು ಸುತ್ತಮುತ್ತ ಇರುವ ಹಿರಿಯ ವ್ಯಕ್ತಿಗಳಿಂದ ಸ್ವಾಮಿಗಳ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋನ ಎಂದು ಆಶ್ರಮದ ಹೊರಗೆ ಹೆಜ್ಜೆ ಹಾಕಿದೆವು. ಆಗ ಭೇಟಿಯಾದ ಮೊದಲ ವ್ಯಕ್ತಿಯನ್ನು ಮಾತನಾಡಿಸಿದಾಗ.......

[ವೀಡಿಯೋ ನೋಡುವುದು ಹಲವು ಭಾರಿ ಪ್ರಯಾಸದ ಕೆಲಸ. ಇದರ ಆಡಿಯೊ ಕೂಡ ಇಲ್ಲೇ ಕೆಳಗಿದೆ. ಆಡಿಯೋ ಕೇಳುವುದು ಸುಲಭ.]

ಈ ವ್ಯಕ್ತಿಯೊಡನೆ ಮಾತನಾಡುವಾಗ ಒಂದಂಶವಂತೂ ಸ್ಪಷ್ಟವಾಯ್ತು.ಸ್ವಾಮೀಜಿಯವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ದಿನ ತಮಗೂ ದೇಹಮುಕ್ತಿ ಕೊಡಬೇಕೆಂದು ಪ್ರಾಥಿಸಿದವರು ಗೌರಜ್ಜಿ ಎಂಬ ಅಂಶ ಯೇಗ್ ದಾಗೆಲ್ಲಾ ಐತೆ ಪುಸ್ತಕದಲ್ಲಿ ಪ್ರಕಟಗೊಂದಿದೆ. ಆದರೆ ಆ ವ್ಯಕ್ತಿ ಗೌರಜ್ಜಿಯಲ್ಲಾ ಅವ೫ರು ಶರಣಮ್ಮ ಎಂದು ಅಂದು ಘಟನೆಯನ್ನು ಕಣ್ಣಾರೆ ಕಂಡವರು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಇಷ್ಟೆಲ್ಲಾ ವಿಚಾರಗಲನ್ನು ನಮಗೆ ತಿಳಿಯುವಂತೆ ಮಾಡಿರುವ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ವಯೋಮಾನದ ಸಹಜ ಕುಂದಿದ ನೆನಪಿನ ಶಕ್ತಿಯ ಪರಿಣಾಮ ಹೆಸರು ಬದಲಾಗಿರಬಹುದು. ಆದರೆ ಧಾಖಲೆಯಲ್ಲಿ ತಪ್ಪಾಗದಿರಲಿ ಎಂದು ಈ ಅಂಶವನ್ನು ಪ್ರಕಟಿಸಿರುವೆ

 

 ಸ್ವಾಮೀಜಿಯವರ ಆಶ್ರಮದ ಭೇಟಿಯ ವಿಚಾರ ತಿಳಿದ ಮಿತ್ರ ಪ್ರಕಾಶ್ ಅವರು ಮಾಡಿರುವ ಪ್ರತಿಕ್ರಿಯೆಗೆ ಓದುಗರಿಗೆ ವಿಷಯ ತಲುಪಲೆಂಬ ಕಾರಣಕ್ಕೆ ಮುಖ್ಯ ಲೇಖನದಲ್ಲಿಯೇ ಪ್ರತಿಕ್ರಿಯಿಸಿರುವೆ.
 -ಹರಿಹರಪುರ ಶ್ರೀಧರ್ 

 ಆತ್ಮೀಯ ಪ್ರಕಾಶ್,
ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆಗಿದೆ ಅಂದ್ರೆ ಯಾವ ವಿಚಾರವನ್ನು ಸ್ವಾಮಿಗಳು ಹೃದಯಂಗಮ ಮಾಡಿಕೊಂದಿದ್ದರೋ ಅದನ್ನು ಬದಿಗಿಟ್ಟು ಅವರ ಆಶ್ರಮ ಅವರ ಹೆಸರಲ್ಲೇ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ಅಲ್ಲಿನ ಜನರ ತಪ್ಪೆಂದು ನಾನು ಭಾವಿಸುವುದಿಲ್ಲ. ಆದರೆ ಸ್ವಾಮಿಗಳ ವಿಚಾರವನ್ನು ಒಪ್ಪಿರುವ ಸಹಸ್ರಾರು ಜನರು ಮುಂದೆ ಬಂದರೆ ನಿಜವಾಗಲೂ ಸ್ವಾಮಿಗಳ ವಿಚಾರವನ್ನು ಹರಡುವಂತೆ ಮಾಡಿದರೆ ನಿಜವಾದ ಅಧ್ಯಾತ್ಮದ ಕೆಲಸ ಅದಾಗುವುದರಲ್ಲಿ ಸಂಶಯವಿಲ್ಲ. ಸ್ವಾಮಿಗಳದ್ದು ಸ್ವತ: ತಪೋನುಭವ. ಭಾಷೆಯನ್ನೂ ಕಲಿಯದ ಅವರು ತಮಗೆ ತಿಳಿದಿದ್ದ ಹಳ್ಳಿ ಭಾಷೆಯಲ್ಲಿ ಬಹಳ ಮುಗ್ಧವಾಗಿ ಅಧ್ಯಾತ್ಮವನ್ನು ತಿಳಿಸುವ ಶೈಲಿಯಲ್ಲಿ ನಾವೂ ಕೂಡ  ಮಗುವಾಗಿಬಿಡುತ್ತೇವೆ. ಸ್ವಾಮಿಗಳು ಓಡಾಡಿದ ಸ್ಥಳಗಳಲ್ಲಿ ಈಗಲೂ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ಜೀವಿಗಳಿಂದ ಸ್ವಾಮೀಜಿಯವರ ವಿಚಾರದ ಮೇಲೆ ಬೆಳಕು ಚೆಲ್ಲುವ ಸಂಗತಿಗಳನ್ನು ಸಂಗ್ರಹಿಸಲು ಇದುವೇ ಸಕಾಲ. ವರ್ಷ ಕಳೆದಂತೆ ಹಳಬರು ಇಲ್ಲವಾಗುತ್ತಾರೆ. ಇದುವರೆವಿಗೆ ಪ್ರಕಟವಾಗದೆ ಉಳಿದಿರುವ ಹಲವಾರು ಸಂಗತಿಗಳು ಕಾಲಗರ್ಭ ಸೇರಿಹೋಗುತ್ತವೆ.ಈಗ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುವುದಾದರೆ ಸಮಾನ ಮಾನಸಿಕರ ಜೊತೆ ಪೂರ್ಣವಾಗಿ ಕೈ ಜೋಡಿಸಲು ನಾನಂತೂ ಸಿದ್ಧ.
------------------------------------------------------------------------
ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂಚ್ ಮೇಲೆ ಸ್ವಾಮಿಗಳು ಕುಳಿತಿದ್ದು ಆಯ್ತು. " ನಿನ್ನ ಪಾಡಿಗೆ ನೀನು ಪಾಠ ಮಾಡು " ಸ್ವಾಮಿಜಿ ಅಪ್ಪಣೆ ಕೊಡಿಸಿದರು. ತೂಗಿ ಹಾಕಿದ್ದ ಭೂಪಟದಲ್ಲಿ ಬಂಗಾಳಕೊಲ್ಲಿ,ಅರಬ್ಬೀ ಸಮುದ್ರ, ಕಲ್ಕತ್ತಾ, ಬೊಂಬಾಯಿ, ಎಲ್ಲಾ ತೋರಿಸಿ ಪಾಠ ಮಾಡಿ ಮುಗಿಸಿದ್ದಾಯ್ತು. ಸ್ವಾಮೀಜಿ ಜೊತೆ ಶಾಸ್ತ್ರಿಗಳು ಹೊರಗೆ ಹೊರಟರು. ಸ್ವಾಮೀಜಿ " ಚೆನ್ನಾಗಿ ಪಾಠ ಮಾಡ್ತೀಯ." ಎಂದಾಗ ಶಾಸ್ತ್ರಿಗಳು" ಚೆನ್ನಾಗಿ ಮಾಡ್ತೀನಾ? ಸ್ವಾಮಿ ಎಂದು ಮತ್ತೆ ಕೇಳಿದರು. " ಹೌದು, ಸಮುದ್ರ ನೋಡಿದ್ದೀಯಾ? ಅಂತ ಮಕ್ಕಳನ್ನು ಯಾರಾದ್ರೂ ಕೇಳಿದ್ರೆ, ಅವರು ಏನ್ ಹೇಳತಾರೆ? ಇಸ್ಕೂಲಲ್ಲಿ ಪಟ ಹಾಕಿದ್ರು ಅದರಲ್ಲಿ ನೋಡಿದ್ದೀನಿ, ನೀವೂ ಪಟ ಹಾಕಿ, ಅದರಲ್ಲಿ ತೋರಿಸ್ತೀನಿ,ಅಂತಾವೆ ಅಲ್ವಾ? "ಅಂಗೇನೆ ಸನ್ಯಾಸೀನ "ದೇವರು ತೋರಿಸಿ" ಅಂದ್ರೆ ಗುಡಿಬಾಗಿಲು ತೆಗಿ" ಅಂತಾನೆ. ಗುಡಿ ವಿಗ್ರಹದಲ್ಲಿ ದೇವರು ಐತಾ? " ಸ್ವಾಮೀಜಿ ಮಾತಿನ ಅಂತರಾಳ ಅರ್ಥಮಾಡಿಕೊಂಡು ಶಾಸ್ತ್ರಿಗಳು ಬೆಪ್ಪಾಗಿ ನಿಲ್ತಾರೆ. ಮುಂದೆ ಸ್ವಲ್ಪ ದೂರದಲ್ಲಿ ಹೆದ್ದಾರಿ ಕಾಣುತ್ತೆ. " ನೋಡು ನಾವೀಗ ಸಣ್ಣ ದಾರಿಯಿಂದ ದೊಡ್ಡ ರಸ್ತೆ ಸೇರ್ತೀವಿ.ದೊಡ್ಡರಸ್ತೆ ಸಿಕ್ಕಿದ ಕೂಡ್ಲೆ ನಮಗೆ ಊರೇ ಸಿಕ್ತು ಅಂತಾ ಹೇಳಕ್ಕಾಯ್ತದ? ಸರಿಯಾಗಿ ಹೋಗಿಲ್ಲಾ ಅಂದ್ರೆ ಊರು ಸಿಕ್ದೆ ಇನ್ನೆಲ್ಲೋ ಹೋಗ್ ಬಹುದು ಅಲ್ವಾ? ಎಚ್ಚರ ಇರ್ಬೇಕಪ್ಪಾ!! ಸ್ವಾಮೀಜಿ ಮಾತು ಎಷ್ಟು ಅರ್ಥ ಗರ್ಬಿತ ಅಲ್ವಾ? ಇದಕ್ಕೆ ವಿವರಣೆ ಬೇಕಾಗಿಲ್ಲಾ, ಅಲ್ವಾ?

-----------------------------------------------------------------

ಮನವಿ: ಆಶ್ರಮಕ್ಕೆ ನಾವು ಹೋದವರು ಆಶ್ರಮದ ಜೊತೆಗೆ ಸುತ್ತ ಮುತ್ತಲಿನ ಕೆಲವರನ್ನು    ಅವರಿಂದ  ಮಾಹಿತಿ ಪಡೆಯುವ ಸಲುವಾಗಿ ಮಾತನಾಡಿಸಿದ್ದೇವೆ.  ಅಂತಹ ವೀಡಿಯೋ ಗಳನ್ನು ಪ್ರಕಟಿಸುತ್ತಾ  ಗ್ರಂಥದ ಕೆಲವು ಆಯ್ದ ಭಾಗಗಳನ್ನು  ಇನ್ನೂ ಹಲವು ಭಾಗಗಳಲ್ಲಿ ಪ್ರಕಟಿಸಲಿದ್ದೇವೆ.

ಹಿಂದಿನ ಭಾಗಗಳಿಗಾಗಿ ಕೊಂಡಿ:

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-2

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-1