Pages

Sunday, December 1, 2013

ಎಲ್ಲರಿಗಾಗಿ ವೇದ ಪ್ರಥಮ ಭಾಗ

ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು  ವೇದ ಸುಧೆಯ ಓದುಗರಿಗಾಗಿ ಪ್ರಕಟಿಸಿರುವೆ.


“ಸಾಮಾನ್ಯನಿಂದ ಸಾಮಾನ್ಯರಿಗೆ”

ಕುಸುಮ-೧            

ವಿಷಯ ಪ್ರವೇಶಕ್ಕೆ ಮುಂಚೆ:

 ಆರಂಭದಲ್ಲಿಯೇ ಒಂದು ಮಾತನ್ನು ಓದುಗರಲ್ಲಿ ಸ್ಪಷ್ಟಪಡಿಸಿಬಿಡುವೆ. ಈ ಹೊತ್ತಿಗೆಯ ಉದ್ಧೇಶವೆಂದರೆ “ವೇದ” ಎಂದರೆ  “ಇದು ನಮ್ಮಂತಹ ಸಾಮಾನ್ಯರಿಗಲ್ಲ”! ವೇದವನ್ನು ತಿಳಿಯಲು  ಸಂಸ್ಕೃತದ ಜ್ಞಾನ   ಇರಬೇಕು! ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ ಇರುವ ಮಂತ್ರಗಳು! ಎಲ್ಲರಿಗೂ   ವೇದವನ್ನು ಓದುವ ಅರ್ಹತೆ ಇಲ್ಲ! ಹೆಂಗಸರು ಓದಬಾರದು! ಯಾವುದೋ ಒಂದು ವರ್ಗದವರು ಮಾತ್ರ ಓದಬೇಕು! ಇತ್ಯಾದಿ,ಇತ್ಯಾದಿ ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ಹೊತ್ತಿಗೆಯ  ಉದ್ಧೇಶವೆಂದರೆ ವೇದವೆಂದರೆ ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ ಅರಿವಿನ ಭಂಡಾರ ಎಂಬುದನ್ನು  ಕೆಲವು ವೇದ ಮಂತ್ರವನ್ನು ಆಧರಿಸಿ  ಸರಳವಾದ ಮಾತುಗಳಲ್ಲಿ  ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ”  ತಿಳಿಸುವುದೇ ಆಗಿದೆ. ಈ ಹೊತ್ತಿಗೆಯನ್ನು ಓದುವಾಗ ವೇದ ಪಂಡಿತರುಗಳು ಹಲವು  ಭಾಷ್ಯಗಳ ಆಧಾರದಮೇಲೆ  ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನು ನೀಡುವ ಅವಕಾಶಗಳೂ ಸಹ  ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ  ನಿರುಕ್ತದ ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ  ವೇದವು ಇಂದಿನ ಕಾಲಕ್ಕೂ , ಮುಂದಿನ ಕಾಲಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ.

ಈಗಾಗಲೇ ನಿರುಕ್ತದ ಆಧಾರದಲ್ಲಿ ವೇದಮಂತ್ರಗಳಿಗೆ ಅರ್ಥವನ್ನು ಬಿಡಿಸಿ ಸರ್ವಮಾನವರ ಹಿತಕ್ಕಾಗಿ ಉಪಯೋಗವಾಗುವಂತೆ ಬರೆದಿರುವ ಪಂಡಿತ್ ಸುಧಾಕರ ಚತುರ್ವೇದಿಯವರ “ ವೇದೋಕ್ತ ಜೀವನ ಪಥ” , ವೇದಾಧ್ಯಾಯೀ ಸುಧಾಕರಶರ್ಮರು ನನ್ನ ಅಂತರ್ಜಾಲ ತಾಣವಾದ veಜಚಿsuಜhe.ಛಿom  ಗಾಗಿ ನೀಡಿರುವ ಉಪನ್ಯಾಸಗಳು ಮತ್ತು ಬೆಂಗಳೂರಿನ ವೇದಭಾಷ್ಯಪ್ರಕಾಶನ ಸಮಿತಿಯವರು ಪ್ರಕಟಿಸಿರುವ ಕನ್ನಡ ವೇದಭಾಷ್ಯವು [ಮೂಲ ಸ್ವಾಮಿ ದಯಾನಂದ ಸರಸ್ವತಿಯವರ ಭಾಷ್ಯ] ನನ್ನ ಈ ಹೊತ್ತಿಗೆಗೆ ಆಧಾರವೆಂಬುದನ್ನು ಸವಿನಯವಾಗಿ ತಿಳಿಸಬಯಸುವೆ.ಅಲ್ಲದೆ ಸರ್ವಜನರ ಹಿತಕ್ಕಾಗಿ ಬರುವ ಯಾರದೇ ಸಲಹೆಗಳನ್ನು ಸವಿನಯವಾಗಿ ಸ್ವೀಕರಿಸಲು ಬದ್ಧನಾಗಿರುವೆ. ಇನ್ನು ಒಂದೊಂದೇ ಹೆಜ್ಜೆ ಹಾಕುತ್ತಾ ಸಾಗೋಣ.

ವೇದ ಎಂದರೇನು?
  ವೇದ ಎಂದರೆ  ಜ್ಞಾನ. ಇಷ್ಟು ಸರಳವಾಗಿರುವ ಅರ್ಥವನ್ನು ಅದೆಷ್ಟು ಕಠಿಣ ಮಾಡಿಬಿಟ್ಟಿದ್ದಾರೆ! ಹಾಗೆನಿಸೋದಿಲ್ಲವೇ? ಜ್ಞಾನ ಎಂದರೆ ಅರಿವು. ಎಂತಹ ಅರಿವು ? ಸುಂದರ ಬದುಕು ನಡೆಸುವುದು ಹೇಗೆಂಬ ಅರಿವು.ಮುಂದೆ ಒಂದೊಂದೇ ಮಂತ್ರವನ್ನು ಬಿಡಿಸುತ್ತಾ ಹೋಗುವಾಗ “ ಇದು ಪೂಜೆಯ ಮಂತ್ರವೇ? ಶ್ರಾದ್ಧ ಕರ್ಮಗಳಿಗೆ ಮಾತ್ರ ಪಠಿಸುವ ಮಂತ್ರವೇ? ಹವನ ಹೋಮಗಳಿಗೆ ಮಾತ್ರ ಸೀಮಿತವೇ? ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
 “ಎಲ್ಲರಿಗಾಗಿ ವೇದ”  ಎಂಬುದಕ್ಕೆ ಆಧಾರವಾದ  ವೇದ ಮಂತ್ರಗಳು, ಮನುಷ್ಯನ ನೆಮ್ಮದಿಯ ಬದುಕಿಗೆ ವೇದವು ಏನು ಸೂತ್ರವನ್ನು ಕೊಡುತ್ತದೆ?  ಇವನು   ಶ್ರೇಷ್ಠ ಇವನು ಕನಿಷ್ಠನೆನ್ನಲು ವೇದದಲ್ಲಿ ಅವಕಾಶವಿದೆಯೇ? ಎಲ್ಲವನ್ನೂ ಮುಂದಿನ ಪುಟಗಳಲ್ಲಿ ನೋಡೋಣ.

ವೇದವನ್ನು ಯಾರು ಬರೆದರು?
ವೇದವು ಅಪೌರುಷೇಯ.ಇದನ್ನು ಮನುಷ್ಯರು ಬರೆದದ್ದಲ್ಲ. ಅಂದರೆ ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು. “ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ  ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ ಭಗವಂತನಿಂದಲೇ ಕಂಡುಕೊಂಡ  ಸತ್ಯವೇ ವೇದಗಳು. ಮಾನವ ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ   ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು  ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ  ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ? ಆದರೆ ವಿಜ್ಞಾನಿಯು ಈ ನಿಯಮವನ್ನು ತನ್ನ ಸಂಶೋಧನೆಯಿಂದ  ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ  ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು. ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು  ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು  ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು  ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ  ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ   ಮುಂದುವರೆಯೋಣ.

ಕುಸುಮ-೨
ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ. ಯಜುರ್ವೇದದ ೩೧ ನೇ ಅಧ್ಯಾಯದ ೭ನೇ ಮಂತ್ರ ಹೀಗಿದೆ?

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ  ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
ವೇದವು ಯಾರಿಗಾಗಿ?
ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊಟ್ಟಿದ್ದೇನೆ, ಎಂಬುದು     ಭಗವಂತನ ಮಾತು. ಯಜುರ್ವೇದದ ೨೬ ನೇ ಅಧ್ಯಾಯದ ೨ನೇ ಮಂತ್ರ ಹೀಗಿದೆ?

ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ, ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ  ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ  ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ

ಭಾವಾರ್ಥ:
ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ  ಈ ವಿಚಾರವು ಸ್ಪಷ್ಟವಾಗುತ್ತದೆ. ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.
ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದೆ ವಿಮರ್ಶೆ ಮಾಡಲಿರುವ ವೇದಮಂತ್ರಗಳಲ್ಲಿ ನೋಡ   ಬಹುದಾಗಿದೆ.

ಕುಸುಮ-೩  
       ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ ನಿಮ್ಮ ಜೀವನ ರಥ ತೆರಳಲಿ      

ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ  ಕಲಿಯುತ್ತಿರುವ ವಿದ್ಯಾರ್ಥಿಯು  ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಋಗ್ವೇದ ೫ನೇ ಮಂಡಲದ  ೫೫ನೇ ಸೂಕ್ತದ ೮ನೇ ಮಂತ್ರವನ್ನು  ವಿಮರ್ಶೆ ಮಾಡೋಣ.

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ  = ಯಾವುದು ಪ್ರಾಚೀನವೋ    ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ  ಯಾತಾಂ  ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ:  ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

 ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ.
ಮಂತ್ರದ ಭಾವಾರ್ಥ ನೋಡಿ.
ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದೆ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ.
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ.
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

ಕುಸುಮ-೪
ಋಗ್ವೇದದ ೭ನೇ ಮಂಡಲದ ೩೩ನೇ ಸೂಕ್ತ ೭ ನೇ ಮಂತ್ರದಬಗ್ಗೆ ತಿಳಿಯೋಣ
“ಆರ್ಯಾ ಜ್ಯೋತಿರಗ್ರಾ:”
ಎಷ್ಟು ಸರಳ! ಆದರೆ ಅದೆಷ್ಟು ಅರ್ಥವ್ಯಾಪ್ತಿಯನ್ನು ಹೊಂದಿರುವ ಮಂತ್ರ!!
“ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು ಆರ್ಯ.” ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ,ಅವರು ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳ ವಿರುದ್ಧ ಹೋರಾಡಿ ತಮ್ಮ ಅಸ್ಥಿತ್ವವನ್ನು ಭಾರತದಲ್ಲಿ ಉಳಿಸಿಕೊಂಡರು, ಹೀಗೆಲ್ಲಾ ಅಪಪ್ರಚಾರ ನಡೆದಿದೆ. ಆದರೆ ಯಾರು ಆರ್ಯರು? ಎಂಬ ಬಗ್ಗೆ ಈ ಒಂದು ಚಿಕ್ಕ ಮಂತ್ರ  ಅದೆಷ್ಟು ಸೊಗಸಾಗಿ ಹೇಳಿದೆ!
 ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು  ಆರ್ಯ. ಅಂದರೆ ದೀಪ ಹಿಡಿದುಕೊಂಡು ಮುಂದೆ  ಹೆಜ್ಜೆ ಹಾಕುವುದೇ? ಹೌದು? ಎಂತಹ ದೀಪವೆಂಬುದನ್ನು ಮಾತ್ರ ತಿಳಿದಿರಬೇಕು. “ಜ್ಞಾನದ ದಿವ್ಯ ಜ್ಯೋತಿಯನ್ನು ಹಿಡಿಕೊಂಡು  ಮುಂದೆ ಅಡಿ ಇಡುವವನು ಆರ್ಯ.”  ಇಲ್ಲಿ ಪ್ರಥಮವಾಗಿ ಆರ್ಯರೆಂದರೆ ಎಲ್ಲಿಂದಲೋ ಬಂದವರಲ್ಲಾ, ಎಂಬುದನ್ನು ಮೊದಲು ಮನಗಂಡು ಯಾರನ್ನು ಆರ್ಯ ಎನ್ನುವರು? ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. “ಜ್ಞಾನದ ದೀಪವನ್ನು ಹಿಡಿದುಕೊಂಡು   ಮುಂದೆ ಅಡಿ ಇಡುವವನು ಆರ್ಯ” ಎನ್ನುತ್ತದೆ ಋಗ್ವೇದದ ಈ ಮಂತ್ರ. ಅಂದರೆ ಅವನು ಜ್ಞಾನವಂತನಾಗಿರಬೇಕು.ಇಂದು ಪ್ರಚಲಿತವಾಗಿರುವ ಜಾತಿಯಬಗ್ಗೆ ಉಲ್ಲೇಖ ಬರುವುದಿಲ್ಲ.  ಇಲ್ಲಿ ಅವನ ಜ್ಞಾನ ಸಂಪತ್ತು ಮಾತ್ರ ಗಣನೆಗೆ ಬರುತ್ತದೆ. ಅವನ ಹುಟ್ಟು ಯಾರ ಹೊಟ್ಟೆಯಲ್ಲಾಗಿದ್ದರೇನು? ಅವನು ಜ್ಞಾನವಂತನಾಗಿರಬೇಕಷ್ಟೆ. ಅವನು ಬ್ರಾಹ್ಮಣವರ್ಣಕ್ಕೆ ಸೇರುತ್ತಾನೆಂದು ಕೂಡ ವೇದವು ಸಾರುತ್ತದೆ.[ಇಂದಿನ ಜಾತಿಯಲ್ಲ.ವರ್ಣದ ಬಗ್ಗೆ ಮುಂದೆ ನೋಡೋಣ]
ಹಾಗಾದರೆ ಆರ್ಯನೊಬ್ಬ  ಎಷ್ಟು ಎಚ್ಚರದಿಂದ ಹೆಜ್ಜೆ ಇಡಬೇಕೆಂಬ ಬಗ್ಗೆ ನೋಡೋಣ. ಅವನು ಮುಂದೆ ಅಡಿ ಇಡುವಾಗ ತಪ್ಪು ಹೆಜ್ಜೆ ಇಡುವಂತಿಲ್ಲ. ಕಾರಣ ಅವನನ್ನು ಅನುಸರಿಸಲು ನೂರಾರು ಜನ ಕಾದಿದ್ದಾರೆ. ಅವನು ಸತ್ಯ-ಅಸತ್ಯ ಮಾರ್ಗದ ಭೇದವನ್ನು ಚೆನ್ನಾಗಿ ಅರಿತವನಾಗಿರಬೇಕು. ಯಾವುದರಲ್ಲಿಯೂ ಅಂಧಾನುಕರಣೆ ಮಾಡುವಂತಿಲ್ಲ. ಅವನು ಇಡುವ ಹೆಜ್ಜೆ ಸತ್ಯವೇ? ಹಿತವೇ? ಎಂದು  ಪರಿಶೀಲಿಸಿ    ಹೆಜ್ಜೆ ಇಡಬೇಕು. ಹೀಗೆ ವೇದದ ಒಂದೊಂದು ಚಿಕ್ಕ ಮಂತ್ರಗಳನ್ನು ಬಿಡಿಸಿ ನೋಡಿದಾಗ ಅದರ ವಿಶಾಲತೆಯ ಅರಿವಾಗುತ್ತದೆ.

ಕುಸುಮ-೫

ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ

ಇನ್ನೊಂದು ಮಂತ್ರವನ್ನು ನೋಡೋಣ.
[ಅಥರ್ವ: ೨-೧೧-೫]
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ಪ್ರಕಾಶವಾಗಿದ್ದೀಯೆ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ

ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು. ಮುಂದಿನ ಮಂತ್ರದಲ್ಲಿ ಅಂಧಾನುಕರಣೆಗೆ ವೇದವು ಅದೆಷ್ಟು ವಿರೋಧಿಯಾಗಿದೆ ಎಂಬುದನ್ನು ತಿಳಿಯಬಹುದು.

ಮಾ ನೋ ದೀರ್ಘಾ ಅಭಿಶನ್ತಮಿಸ್ರಾ:
[ಋಗ್ವೇದ ೨-೨೭-೧೪]
“ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ”
 ದೀರ್ಘವಾದ ಅಂಧಕಾರಗಳು ಯಾವುವು? ಉಧಾಹರಣೆಗೆ ನೋಡೋಣ?
ಹೊಸದಾಗಿ ವಾಹನವನ್ನೋ ಒಂದು ಯಂತ್ರವನ್ನೋ ಕೊಂಡು ಅದನ್ನು ಚಾಲನೆಗೊಳಿಸುವಾಗ ಪ್ರಥಮ ಪೂಜೆ ಮಾಡುತ್ತೀವಷ್ಟೆ.
[ಪೂಜೆಯ ವಿವರಣೆಯನ್ನೂ ಮುಂದೆ ನೋಡೋಣ] ನೂರಾರು ವರ್ಷಗಳಿಂದ ನಡೆದುಕೊಂಡು    ಬಂದಿರುವ ಆಚರಣೆ ಹೇಗಿದೆ? ಒಮ್ಮೆ ವಿಮರ್ಷೆ ಮಾಡೋಣ. ಯಂತ್ರವನ್ನು ಶುಚಿಗೊಳಿಸಿ ಅದಕ್ಕೆ ಒಂದಿಷ್ಟು ಅರಿಶಿನ-ಕುಂಕುಮ ಹಚ್ಚಿ ನಂತರ ಒಂದು ದೊಡ್ಡ ಬೂದಗುಂಬಳ ಕಾಯಿಗೆ ಒಂದು  ಕುಳಿಮಾಡಿ ಅದರಲ್ಲಿ ಒಂದಿಷ್ಟು ಕುಂಕುಮ,ಒಂದಿಷ್ಟು ಚಿಲ್ಲರೆಕಾಸು ತುಂಬಿ ವಾಹದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೊಪ್ಪೆಂದು ನೆಲದ ಮೇಲೆ ಎತ್ತಿಹಾಕಿದಾಗ ಅದು ನಾಲ್ಕಾರು ಚೂರಾಗಿ ಅದರೊಳಗಿನಿಂದ ಕುಂಕುಮಬೆರೆತ ನೀರು ರಕ್ತದಂತೆ ಹರಿದಾಗ ಅದೇನೋ ಸಂತೋಷ!! ಪೂಜೆ ಮಾಡಿದ ತೃಪ್ತಿ!!   ಚೂರಾದ ಕುಂಬಳ ಕಾಯಿಯನ್ನು ಪ್ರಾಣಿಗಳು ತಿಂದರೂ ಅವುಗಳ ಜೀವಕ್ಕೆ ಕಷ್ಟ. ಇನ್ನು ಮನುಷ್ಯ ತಿನ್ನುವ ಮಾತೇ ಇಲ್ಲ ಬಿಡಿ. ಬೇಯಿಸಿ ತಿನ್ನಬೇಕಾದ ಕುಂಬಳಕಾಯಿಯನ್ನು ಹೀಗೆ ಪ್ರಯೋಜನಕ್ಕೆ ಬಾರದಂತೆ ಒಡೆದು ಎಸೆಯುವುದು ಅಂಧಕಾರದ ಪರಮಾವಧಿಯಲ್ಲವೇ?
ಯಂತ್ರವನ್ನು ಚಾಲನೆಗೊಳಿಸುವಾಗ ನಾವು ಮಾಡಬೇಕಾದದ್ದೇನು? ಶುಚಿಗೊಳಿಸಬೇಕು, ಅಗತ್ಯ ಭಾಗಗಳಿಗೆ ಗ್ರೀಸ್ ಅಥವಾ ಎಣ್ಣೆ ಹಾಕಬೇಕು,ಅದು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ನಿರ್ವಹಣೆ ಮಾಡಬೇಕು. ಬದಲಿಗೆ ಅದಾಗಲೇ ಶುಚಿಗೊಳಿಸಿದ್ದ ಯಂತ್ರದಮೇಲೆ ಪೂಜೆ ಮಾಡುವವರು ನೀರು ಚಿಮುಕಿಸಿದಾಗ ನೀರು ತಾಗಬಾರದ ವಿದ್ಯುತ್ ಭಾಗಗಳಿಗೆ ನೀರು ಬಿದ್ದಾಗ ಯಂತ್ರಕ್ಕೆ ತೊಂದರೆಯೂ ಆಗಬಹುದು. ಆ ಯಂತ್ರವಾದರೋ  ಕುಂಕುಮ ಅರಿಶಿನದ ಪಟ್ಟೆಯನ್ನು ಕೇಳುತ್ತದೆಯೇ? ಕುಂಬಳಕಾಯಿ ಬಲಿ ಕೇಳುತ್ತದೆಯೇ? ಇದನ್ನೇ ಅಂಧಕಾರ ಎನ್ನಲಡ್ಡಿಯಿಲ್ಲ. ನಾವು  ಮಾಡುವ ಪೂಜಾವಿಧಿಗಳಿಗೂ ಸರಿಯಾದ ಅರ್ಥ ಇರಬೇಕಲ್ಲವೇ?  ಇದು ಒಂದು ಉಧಾಹರಣೆಯಷ್ಟೆ. ಒಟ್ಟಿನಲ್ಲಿ ಅವೈಜ್ಞಾನಿಕ ಯಾವುದೇ ಆಚರಣೆಯನ್ನು ವೇದವು ವಿರೋಧಿಸುತ್ತದೆ.

 ಕುಸುಮ-೬

 ಅಂಧಕಾರದಿಂದ ಸರಿದಮೇಲೆ ಮುಂದೇನು? ಈ ಪಶ್ನೆಗೆ ವೇದವು ಹೇಳುತ್ತದೆ. . . .

“ಜ್ಯೋತಿರ್ವೃಣೀತ ತಮಸೋ ವಿಜಾನನ್”
[ಋಗ್ವೇದ ೩-೩೯-೭]
“ಅಂಧಕಾರದಿಂದ  ದೂರಸರಿದು ಜ್ಯೊತಿಯನ್ನು ತುಂಬಿಕೊಳ್ಳಬೇಕು” ಎಂದು ವೇದವು ಕರೆಕೊಡುತ್ತದೆ. ಕತ್ತಲೆ ಹೋದಮೇಲೆ ಬೆಳಕು ತಾನೆ ಬರಬೇಕು. ನಿಮ್ಮ ಜೀವನವನ್ನು ಉನ್ನತಿಗೆತ್ತಬಲ್ಲ  ದಿವ್ಯ ಜ್ಯೋತಿಯನ್ನು  ಅಂದರೆ ಜ್ಞಾನವನ್ನು ತುಂಬಿಕೊಳ್ಳಬೇಕೆಂದು ವೇದವು ಸ್ಪಷ್ಟ ಪಡಿಸುತ್ತದೆ. ಅಂದರೆ ಒಂದು ಆಚರಣೆಯನ್ನು ಮಾಡುವಾಗ ಅದು ನಮ್ಮನ್ನು ಸತ್ಯಪಥದಲ್ಲಿ ಕೊಂಡೊಯ್ಯುತ್ತದೋ, ಸಮಾಜದಹಿತವು ಅದರಲ್ಲಿದೆಯೇ? ವೈಜ್ಞಾನಿಕವಾಗಿ ಅದರಿಂದ ಜೀವನಕ್ಕೆ ಲಾಭವಿದೆಯೋ ಅಥವಾ ಅಂಧಕಾರದಲ್ಲಿ ನಮ್ಮನ್ನು ಮುಳುಗಿಸುತ್ತದೋ ,ಹೀಗೆ ಆಚರಣೆಯ ಎಲ್ಲಾ ಮಗ್ಗಲುಗಳನ್ನೂ ವಿವೇಚಿಸಿ ಆಚರಿಸುವುದು ಸೂಕ್ತವೆಂದು ವೇದವು ಸಾರುತ್ತದೆ.  ಮನುಷ್ಯನ  ಸುಖಕರವಾದ, ನೆಮ್ಮದಿಯ ಜೀವನಕ್ಕೆ ಅಗತ್ಯವಾದ  ವೇದದಲ್ಲಿನ  ಸೂತ್ರಗಳ ಬಗೆಗೆ ಮುಂದಿನ ಹಲವು ಮಂತ್ರಗಳಲ್ಲಿ ಚಿಂತನೆ ನಡೆಸೋಣ.ಅವುಗಳಲ್ಲಿ ಶ್ರದ್ಧೆ ಬಗ್ಗೆ ಇರುವ  ಒಂದು ವೇದ ಮಂತ್ರವನ್ನು ನೋಡೋಣ.              
           
“ ಶ್ರದ್ಧೆ”
ಅಂಧಪರಂಪರೆಗೆ ವೇದವು ವಿರೋಧಿಯಾಗಿದ್ದು ಅರಿತು ಮಾಡುವ ಆಚರಣೆಗಳ ಬಗ್ಗೆ “ ಶ್ರದ್ಧೆ” ಹೇಗಿರಬೇಕೆಂಬುದನ್ನು ಈ ಕೆಳಗಿನ ವೇದಮಂತ್ರವು ಸಾರುತ್ತದೆ?.
ಋಗ್ವೇದ: ೧೦-೧೫೧-೫
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯ ದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನ:  ||

ಪ್ರಾತ:= ಬೆಳಗಿನಹೊತ್ತು
ಶ್ರದ್ಧಾಂ ಹವಾಮಹೇ= ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಮಧ್ಯಂದಿನಂ ಪರಿ= ನಡುಹಗಲಿನಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಸೂರ್ಯಸ್ಯ ನಿಮೃಚಿ= ಸೂರ್ಯಾಸ್ತ ಕಾಲದಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇವೆ
ಶ್ರದ್ಧೇ= ಓ ಶ್ರದ್ಧೇ!
ಇಹ= ಈ ಜಗತ್ತಿನಲ್ಲಿ
ನ: ಶ್ರದ್ಧಾಪಯ=ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು

ಅಂದರೆ ಬೆಳಿಗ್ಗೆ ಏಳುವಾಗಲಿಂದ ರಾತ್ರಿ ಮಲಗುವ ತನಕ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಈ ಮಂತ್ರವು ಹೇಳುತ್ತದೆ. ಅಂದರೆ ಶ್ರದ್ಧೆ ಎಂದರೇನು?  ನಮ್ಮ ನಂಬಿಕೆಯು ಯಾವಾಗ ಶ್ರದ್ಧೆ ಎನಿಸಿಕೊಳ್ಳುತ್ತದೆ? “ ಶ್ರದ್ದಾ” ಎಂಬ ಪದವನ್ನು ಬಿಡಿಸಿಕೊಂಡಾಗ  “ಶ್ರದ್ಧೆ” ಪದದ ಸರಿಯಾದ ಅರ್ಥ ಗೊತ್ತಾಗುತ್ತದೆ.
  ಸಾಮಾನ್ಯವಾಗಿ ಆಡುಮಾತಿನಲ್ಲಿ ಹೇಳುವುದುಂಟು” ನಮ್ಮ ಮಕ್ಕಳಿಗೆ  ನಮ್ಮ ಧರ್ಮದಲ್ಲಿ ಶ್ರದ್ಧೆ ಇಲ್ಲ, ನಮ್ಮ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಇಲ್ಲ,ಇತ್ಯಾದಿ,ಇತ್ಯಾದಿ. ಈ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯವಾಗಿ ಭಾವಿಸುವುದೇನು? ಈಗೇನು ಆಚಾರ-ವಿಚಾರಗಳಿವೆ, ಅವುಗಳನ್ನು ಅನುಸರಿಸದಿದ್ದಾಗ?.ಇವನಿಗೆ  ನಮ್ಮ ಧರ್ಮದಲ್ಲೇ ಶ್ರದ್ಧೆ ಇಲ್ಲಾ!! ಎಂದು ಅವನ ಬಗ್ಗೆ ಪೂರ್ವಾಗ್ರಹದ ತೀರ್ಪು ಹೊರಬೀಳುತ್ತದೆ!! ಆದರೆ ನಿಜವಾಗಿ ಶ್ರದ್ಧೆ ಯಾವಾಗ ಬರಬೇಕು? ಶ್ರದ್ಧೆ ಪದವೇ ಹೇಳುತ್ತದೆ?” ಸತ್ಯದ ಧಾರಣೆ” ಅಂದರೆ ನಮ್ಮ ಆಚಾರ ವಿಚಾರಗಳನ್ನು ವಿಮರ್ಶಿಸಿ” ಇದು ಸತ್ಯವೇ? ಹಿತವೇ? ಇದರಿಂದ ಸತ್ಯದ ಅಪಚಾರವಾಗುವುದಿಲ್ಲವೇ? ಎಂಬುದನ್ನು ಮನವರಿಕೆ ಮಾಡಿಕೊಂಡು ಧರಿಸುವುದಕ್ಕೆ “ ಶ್ರದ್ಧೆ” ಎನ್ನಲಡ್ಡಿಯಿಲ್ಲ. ಆದರೆ ಯಾವುದೇ ಆಚರಣೆಯ ಸತ್ಯಾಸತ್ಯತೆಯನ್ನರಿಯದೆ ಅಂಧಾನುಕರಣೆಮಾಡುವುದನ್ನು” ಶ್ರದ್ಧೆ” ಎನ್ನಲಾಗುವುದಿಲ್ಲ. ಅದು ಕೇವಲ ನಂಬಿಕೆ. ನಮ್ಮ ನಂಬಿಕೆಗಳನ್ನು ಇತರರು ಅನುಸರಿಸದಿದ್ದರೆ ಅವರಿಗೆ  ಈ ಆಚರಣೆಗಳಲ್ಲಿ” ಶ್ರದ್ಧೆ” ಇಲ್ಲಾ  ಎನ್ನುವಂತಿಲ್ಲ. ಶ್ರದ್ಧೆಯೇ ಬೇರೆ. ನಂಬಿಕೆಯೇ ಬೇರೆ. ಈ ವೇದ ಮಂತ್ರವಾದರೋ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ಮಲಗುವವರೆಗೂ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಸಾರುತ್ತದೆ. ಶ್ರದ್ಧೆಯ ಅರ್ಥವ್ಯಾಪ್ತಿ ಎಷ್ಟಿದೆ! ನೋಡಿ!


ಕುಸುಮ-೭
       “ಬುದ್ಧಿಯ ಬಗ್ಗೆ ವೇದವು ಏನು ಹೇಳುತ್ತದೆ”

ಹಿಂದಿನ ಮಂತ್ರದಲ್ಲಿ ಶ್ರದ್ಧೆಯ ಬಗ್ಗೆ  ಚಿಂತನೆ ನಡೆಸಿದ್ದೇವೆ. ಈಗ ಬುದ್ಧಿಯ ಬಗ್ಗೆ ವೇದವು     ಏನು ಹೇಳುತ್ತದೆ ನೋಡೋಣ.
ಅಥರ್ವ: ೬-೧೦೮-೦೫
ಮೇಧಾಂ ಸಾಯಂ ಮೇಧಾಂ ಪ್ರಾಥರ್ಮೇಧಾಂ ಮಧ್ಯಂ ದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭಿರ್ವಚಸಾ  ವೇಶಯಾಮಹೇ||
ಅರ್ಥ:
ಸಾಯಮ್ = ಸಂಜೆ
ಮೇಧಾಂ = ಬುದ್ಧಿಯನ್ನು
ಆವೇಶಯಾಮಹೇ = ಜೀವನಕ್ಕೆ ಇಳಿಸಿಕೊಳ್ಳುತ್ತೇವೆ
ಪ್ರಾಥ: = ಬೆಳಿಗ್ಗೆ      
ಮೇಧಾಂ = ಬುದ್ಧಿಯನ್ನು [ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಮಧ್ಯಂದಿನಂ ಪರಿ = ಮಧ್ಯಾಹ್ನದಲ್ಲಿಯೂ
ಮೇಧಾಂ = ಬುದ್ಧಿಯನ್ನು[ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಸೂರ್ಯಸ್ಯ ರಶ್ಮಿಭಿ: = ಸೂರ್ಯ ಕಿರಣಗಳೊಂದಿಗೆ
ವಚಸಾ = [ವಿದ್ವಜ್ಜನರ ಉಪದೇಶ ]ವಚನಗಳಿಂದ
ಮೇಧಾಂ ಆವೇಶಯಾಮಹೇ = ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆ

ಈ ಮಂತ್ರವು ನಮ್ಮನ್ನು ಹೇಗೆ ಎಚ್ಚರಿಸುತ್ತದೆ! ನೋಡಿ, ನಾವು ಸದಾಕಾಲ ಬುದ್ಧಿಯನ್ನು ಜೀವನಕ್ಕೆ ಇಳಿಸಿಕೊಳ್ಳುತ್ತೇನೆಂದು ಹೇಳುವಾಗ ಜೊತೆಯಲ್ಲಿಯೇ  ವಿದ್ವಜ್ಜನರ ಉಪದೇಶಗಳಿಂದ ಸೂರ್ಯಕಿರಣಗಳೊಂದಿಗೆ  ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆಂದು  ಈ ಮಂತ್ರವು ಹೇಳಿದೆ. ಅಂದರೆ ನಮ್ಮಷ್ಟ್ಟಕ್ಕೆ  ನಮಗೆ ತೋಚಿದಂತೆ ಬುದ್ಧಿಯನ್ನು ಹರಿಬಿಡುವಂತಿಲ್ಲ. ವಿದ್ವಜ್ಜನರ ಉಪದೇಶಗಳಿಂದ ನಿನ್ನ ಬುದ್ಧಿಯನ್ನು ಹದಗೊಳಿಸಿಕೋ” ಎಂದು ಕೂಡ ವೇದವು ಸಾರುತ್ತದೆ.    ಇದರೊಡನೆಯೇ ಇನ್ನೊಂದು ಮಂತ್ರವು ಹೇಳುತ್ತದೆ?
ಅಥರ್ವ: ೧೯-೬೪-೧]
ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ: ಪ್ರ ಯಚ್ಛತು||
ಅರ್ಥ:
ಸ ಜಾತವೇದಾ: = ಸರ್ವಜ್ಞನಾದ ಭಗವಂತನು       ಮೇ = ನನಗೆ
ಶ್ರದ್ಧಾಂಚ ಮೇಧಾಂಚ ಪ್ರಯಚ್ಛತು = ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ.

ಭಗವಂತನನ್ನು ಪ್ರಾರ್ಥಿಸುವಾಗ  ನನಗೆ ಇದರಲ್ಲಿ ಶ್ರದ್ಧೆ ಕೊಡು ಎಂದಷ್ಟೇ ಕೇಳಲಿಲ್ಲ, ಜೊತೆಗೆ ನನಗೆ ವಿವೇಚಿಸುವ ಬುದ್ಧಿಯನ್ನೂ ಕೊಡು  ಎಂದು ಕೇಳ ಬೇಕೆಂದು ವೇದದ ಕರೆ. ಯಾವುದನ್ನಾಗಲೀ ಕುರುಡು ಕುರುಡಾಗಿ  ಅನುಸರಿಸಬೇಡವೆಂಬುದೇ ವೇದದ ಆಶಯ. ಅದಕ್ಕಾಗಿಯೇ ಶ್ರದ್ಧೆಯೊಡನೆ ಬುದ್ಧಿಯೂ ಇರಬೇಕೆಂಬುದೇ ವೇದದ ಕರೆ.


“ಸತ್ಯ-ಅಸತ್ಯದ ಬಗ್ಗೆ ವೇದವು     ಏನು ಹೇಳುತ್ತದೆ”

 ಮೇಲಿನ ಮಂತ್ರದಲ್ಲಿ  “ಶ್ರದ್ಧೆಯ ಜೊತೆಗೆ ಬುದ್ಧಿಯನ್ನೂ ಕೊಡೆಂದು”  ಭಗವಂತನಲ್ಲಿ ಪ್ರಾರ್ಥಿಸಿದ್ದನ್ನು ಗಮನಿಸಿದ್ದೇವೆ. ಸತ್ಯಾ ಸತ್ಯತೆಯ ಬಗ್ಗೆ ವೇದವು  ಏನು ಹೇಳುತ್ತದೆಂಬುದನ್ನು ಮುಂದಿನ ಮಂತ್ರದಲ್ಲಿ ನೋಡೋಣ.

[ಯಜುರ್ವೇದ: ೧೯-೭೭]
ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿ: |
ಅಶ್ರದ್ಧಾಂ ಅನೃತೇs ದಧಾಚ್ಛದ್ಧಾಂ ಸತ್ಯೇ ಪ್ರಜಾಪತಿ: ||

ಅರ್ಥ:
ಪ್ರಜಾಪತಿ: = ಭಗವಂತನು
ರೂಪೇ ದೃಷ್ಟ್ವಾ = ಸತ್ಯಾಸತ್ಯತೆಗಳ ರೂಪಗಳನ್ನು ನೋಡಿ
ಸತ್ಯಾನೃತೇ ವ್ಯಾಕರೋತ್ = ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು
ಅನೃತೇ = ಅಸತ್ಯದಲ್ಲಿ
ಅಶ್ರದ್ಧಾಂ ಅದಧಾತ್ = ಅಶ್ರದ್ಧೆಯನ್ನು ನೆಲೆಗೊಳಿಸಿದನು
ಸತ್ಯೇ = ಸತ್ಯದಲ್ಲಿ
ಶ್ರದ್ಧಾಂ ಅದಧಾತ್ = ಶ್ರದ್ಧೆಯನ್ನು ನೆಲೆಗೊಳಿಸಿದನು
ಭಾವಾರ್ಥ:
ಭಗವಂತನು ಸತ್ಯಾ ಅಸತ್ಯಗಳೆರಡನ್ನೂ ನೋಡಿ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಿದನು. ಅಸತ್ಯದಲ್ಲಿ ಅಶ್ರದ್ಧೆಯನ್ನೂ ಸತ್ಯದಲ್ಲಿ ಶ್ರದ್ಧೆಯನ್ನೂ ನೆಲಗೊಳಿಸಿದನು.
ಬಹಳ ಸುಲಭವಾಗಿ ಅರ್ಥವಾಗುವಂತಹ ವೇದ ಮಂತ್ರ ಇದು. ಮಂತ್ರವಾದರೋ ಏನನ್ನು ಒತ್ತಿ ಹೇಳುತ್ತದೆ? ಅಸತ್ಯವನ್ನು ನಂಬಬೇಡ. ಸತ್ಯದಲ್ಲಿ ಶ್ರದ್ಧೆ ಇಡು. ಶ್ರದ್ಧೆ ಎಂದರೆ “ಸತ್ಯದ ಧಾರಣೆ” ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಮಂತ್ರದಲ್ಲೂ ಅದನ್ನೇ ಹೇಳುತ್ತದೆ. ಭಗವಂತನೇ ಸತ್ಯಾ-ಅಸತ್ಯಗಳನ್ನು ಬೇರ್ಪಡಿಸಿ  ಸತ್ಯದಲ್ಲಿ ಮಾತ್ರವೇ ಶ್ರದ್ಧೆಯನ್ನು ನೆಲೆಗೊಳಿಸುತ್ತಾನೆ, ಎಂದು ನಿಖರವಾಗಿ ಹೇಳಿದೆ. ಅಂದರೆ ಯಾವುದು ಅಸತ್ಯವೆಂದು ಮನಗಾಣುತ್ತದೋ  ಅದನ್ನು ಯಾರೇ ಹೇಳಲಿ, ಅದನ್ನು ಅನುಸರಿಸಿದರೆ ಅದು   ವೇದ ವಿರೋಧಿ ನಡೆಯಾಗುತ್ತದೆ. ಆದ್ದರಿಂದ ನಾವು ಧರ್ಮದ ಹೆಸರಲ್ಲಿ ಮಾಡುವ ಆಚರಣೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದು, ಅಸತ್ಯ, ಅವೈಜ್ಞಾನಿಕ, ಸಮಾಜ ವಿರೋಧಿ, ಎನಿಸಿದರೆ ಅಚರಿಸಬಾರದು, ಅದು ಸತ್ಯಪಥವಾಗಿದ್ದು ಸಮಾಜಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಅನುಸರಿಸಬೇಕು. ಇದು ವೇದದ ಕರೆ.

Friday, November 29, 2013

ವೇದೋಕ್ತ ಜೀವನ ಪಥ-ಶಿಬಿರ

ಈಗಾಗಲೇ ಹಾಸನದಲ್ಲಿ ಒಂದು ವೇದೋಕ್ತಜೀವನ ಶಿಬಿರ ನಡೆದಿರುವುದು ಹಲವರ ಗಮನಕ್ಕೆ ಬಂದಿದೆ. ಹಲವರು ಅದರಲ್ಲಿ ಭಾಗವಹಿಸಿದ್ದಿರಿ. ಈಗ ಎರಡನೆಯ ಶಿಬಿರವನ್ನು ಚನ್ನರಾಯಪಟ್ಟಣದ ವೇದ ಭಾರತೀ ಸಂಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ. ಅದರ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.ಆಸಕ್ತರಿಂದ ಅರ್ಜಿಯನ್ನು ಪಡೆಯಲು ವ್ಯವಸ್ಥಾಪಕರು ಉದ್ಧೇಶಿಸಿದ್ದಾರೆ. ಶಿಬಿರದಲ್ಲಿ ಪಾಲ್ಗೊಳ್ಲಲು ಇಚ್ಚೆ ಇರುವ ವೇದಾಭಿಮಾನಿಗಳು ಅರ್ಜಿಯನ್ನು ನೇರವಾಗಿ ವ್ಯವಸ್ಥಾಪಕರ ವಿಳಾಸಕ್ಕೆ ಕಳಿಸಬಹುದು.


ವೇದಗಳಷ್ಟು ಪ್ರಾಚೀನವೂ, ಸರ್ವಜನಾದರಣೀಯವೂ, ಶ್ರೇಷ್ಠ ಸಂಸ್ಕೃತಿಯೂ, ಶ್ರೀಮಂತ ಕಲೆಯೂ, ಅನುಪಮ ಸಾಹಿತ್ಯ ಜ್ಞಾನಭಂಡಾರಗಳು ಮತ್ತೊಂದಿಲ್ಲ. ಅಂತೆಯೇ ಹೃದಯ ವೈಶಾಲ್ಯತೆಯನ್ನು ಹೊಂದಿರುವ ಈ ಸನಾತನ ಧರ್ಮದ ವೈಭವ ಮನುಕುಲಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯ ಅರಿವು ಮೂಡಿಸಲು ವೇದಪ್ರಚಾರಕರಾಗಿ, ಪರಿಚಾರಕರಾಗಿ ದೇಶದ ಉದ್ದಗಲಗಳಲ್ಲಿಯೂ ಸಂಚರಿಸಿ ದುಡಿಯುತ್ತಿರುವ ಬೆರಳೆಣಿಕೆಯ ಮಹನೀಯರಲ್ಲಿ ವೇದಾಧ್ಯಾಯೀ ಶ್ರೀಯುತ ಸುಧಾಕರಶರ್ಮಾ ಒಬ್ಬರು.  ವೇದ ಭಾಷ್ಯಕಾರರೂ, ವಿದ್ವಾಂಸರೂ,  ಸಂಶೋಧಕರೂ, ಲೇಖಕರೂ, ಸಾಹಿತಿಗಳೂ ಬಹುಭಾಷಾ ಪ್ರವಚನಕಾರರೂ ಮತ್ತು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾದ ಜಗತ್ತಿನ ಪ್ರಪ್ರಥಮ ವೇದ- ವೈದಿಕ ಧಾರಾವಾಹಿ ಹೊಸಬೆಳಕು ಎಂಬ ಖ್ಯಾತಿಯ ರುವಾರಿಗಳೂ ಆದ ಶ್ರೀಯುತ ಶರ್ಮರು ವೇದಗಳಲ್ಲಿ ಹೇಳಿರುವ ಹಾಗೂ ಮಹರ್ಷಿಗಳ ಉದಾತ್ತ ಚಿಂತನೆಯ ವಿಚಾರಗಳು ಮತ್ತು ಆಧ್ಯಾತ್ಮ ವಿದ್ಯೆಯ ವಾಸ್ತವಿಕ ಸ್ವರೂಪವನ್ನು ಅತಿ ಸುಲಭ ಮತ್ತು ಸರಳ ರೀತಿಯನ್ನು ಅನುಸರಿಸಿ ಸುಲಲಿತವಾಗಿ ಜನರಿಗೆ ತಿಳಿಸಿಕೊಡುವುದರೊಂದಿಗೆ ಅವರು ವೇದಪ್ರಣೀತ ಜೀವನವನ್ನು ನಡೆಸುವಂತಾಗಬೇಕು ಎಂಬ ಇಚ್ಛೆಯಿಂದ ಚನ್ನರಾಯಪಟ್ಟಣದಲ್ಲಿ ವೇದೋಕ್ತ ಜೀವನ ಪಥ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಕಲ ವಿಚಾರಗಳಲ್ಲಿಯೂ ಜೀವನ ಪೋಷಕ ಆದರ್ಶಗಳನ್ನು ಆಕರ್ಷಣೀಯ ಮಾತುಗಳಲ್ಲಿ ಮನಮುಟ್ಟುವಂತೆ ತಿಳಿಸಿಕೊಡಲಿದ್ದಾರೆ. ಶಾಂತಿ ಮತ್ತು ಸೌಭಾಗ್ಯದ ಆನಂದಕ್ಕಾಗಿ ರೂಪಿಸಲಾದ ಈ ಪವಿತ್ರ ಸಂಕಲ್ಪವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ. ವೇದಾನುಭವ ಸಂಪನ್ನರಿಂದ ನಡೆಯುತ್ತಿರುವ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿ, ಮುಕ್ತ ಮನಸ್ಸಿನಿಂದ ವಿಮರ್ಶಿಸಿ ತಿಳಿಯುವವರಿಗೆ ರಸದೌತಣ. ಈ ಮಾರ್ಗದರ್ಶನ ನಾಳಿನ ಬಾಳಿಗೆ ನಂದಾದೀವಿಗೆಯಾಗಬಲ್ಲದು.

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
   
9980813162/9448033813/9448868537
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ
-------------------------------------------------------------------------------------------

ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ-೫೭೩೧೧೬

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-

Monday, November 11, 2013

ಧರೆ ಹತ್ತಿ ಉರಿದೊಡೆ . . .?

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ನಮ್ಮ ವಿಚಾರ, ಸಿದ್ಧಾಂತಗಳನ್ನು ಎಲ್ಲರೂ ಒಪ್ಪಬೇಕು ಅನ್ನುವವರು, ನಮ್ಮದೇ ಸರಿ ಅನ್ನುವವರು. ಅದಕ್ಕಾಗಿ ಸಂಘರ್ಷಗಳು, ರಕ್ತಪಾತಗಳು ಹಿಂದಿನಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಈಗಲೂ ಮುಂದುವರೆಯುತ್ತಿವೆ. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆಯಾದಷ್ಟು ಜಡಜಗತ್ತಿನ ಬಗ್ಗೆ ಹೆಚ್ಚು ಚರ್ಚೆಯಾದಂತಿಲ್ಲ. ಈ ಬಗ್ಗೆ ಈ ಇಲ್ಲಿ ಚರ್ಚಿಸೋಣ.
     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ  ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ,  ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು. 
     ಮೊದಲೇ ಪ್ರಸ್ತಾಪಿಸಿದಂತೆ ಮೂರು ಅಂಶಗಳು, ಜಗತ್ತು ಅರ್ಥಾತ್ ಪ್ರಕೃತಿ, ಜೀವ ಮತ್ತು ದೇವ, ಇವುಗಳ ಅಸ್ತಿತ್ವದ ರೀತಿ ತರ್ಕಿಸುವವರಿಗೆ, ಜಿಜ್ಞಾಸೆ ಮಾಡುವವರಿಗೆ ಬಹು ದೊಡ್ಡ ಆಯಾಮವನ್ನು ಒದಗಿಸುತ್ತದೆ. ದೇವರು ಎಂಬ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ, ಅದು ಗೋಚರವೋ, ಅಗೋಚರವೋ, ಆಕಾರವೋ, ನಿರಕಾರವೋ, ಏನೋ ಒಂದು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ದೇವರ ಅಸ್ತಿತ್ವವನ್ನು ನಂಬದ ನಾಸ್ತಿಕರೂ ಸಹ ಅಗೋಚರ ನಿಯಂತ್ರಕ ಶಕ್ತಿಯ ಬಗ್ಗೆ ಒಪ್ಪುತ್ತಾರೆ. ಹಾಗಾದರೆ ಅಂತಹದೊಂದು ಇದೆ, ಅದು ಅನಂತ ಮತ್ತು ಅನೂಹ್ಯ, ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದು ಒಪ್ಪಬಹುದು. ಹಾಗೆಯೇ ಜೀವದ ಅಸ್ತಿತ್ವದ ಬಗ್ಗೆ ಸಹ ಹಿಂದೆ ಚರ್ಚಿಸಲಾಗಿದೆ. (ಲೇಖನ: ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!) ಈಗ ಜಡ ಪ್ರಕೃತಿಯ ಬಗ್ಗೆ ಹೇಳುವುದಾದರೆ ಮೇಲೆ ತಿಳಿಸಿದಂತೆ ಅದು ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ ಎಂಬುದನ್ನು ನಾವು ವ್ಶೆಜ್ಞಾನಿಕ ದೃಷ್ಟಿಯಿಂದ ಯೋಚಿಸಿದರೂ ಒಪ್ಪಲೇಬೇಕಾದ ಸಂಗತಿ. ಹೀಗೆ ಜಗತ್ತು, ಜೀವ ಮತ್ತು ದೇವ ಈ ಮೂರೂ ಸಂಗತಿಗಳು ಶಾಶ್ವತ, ಅನಂತವೆಂಬ ವಾದ ಅತ್ಯಂತ ಸಮಂಜಸವಾಗಿ ತೋರುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಮ್ಪವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ. 
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. 
     ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಈ ದೇಹ ಪಂಚಭೂತಗಳಿಂದ -ನೆಲ, ಜಲ, ಆಕಾಶ, ವಾಯು, ಅಗ್ನಿ- ಆದುದು ಎಂಬುದು ಸರ್ವವಿದಿತ. ಈ ಪಂಚಭೂತಗಳಿಂದ ಸೃಷ್ಟಿಯಾದ ದೇಹದಲ್ಲಿರುವ ಜೀವದಿಂದ ಆ ದೇಹಕ್ಕೆ ಅರ್ಥ ಬರುತ್ತದೆ. ಸತ್ತಾಗ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ, ಅದರೊಳಗಿನ ಜೀವಾತ್ಮ ಇನ್ನೊಂದು ರೂಪದಲ್ಲಿ ಅಸ್ತಿತ್ವ ಹೊಂದುತ್ತದೆ. ಪ್ರತಿ ಮಾನವನೂ ಮೂರು ರೀತಿಯ ಋಣಗಳನ್ನು-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ತೀರಿಸಬೇಕೆಂದು ಹೇಳುತ್ತಾರೆ. ಈ ದೇವಋಣವನ್ನು ತೀರಿಸುವುದಾದರೂ ಹೇಗೆ? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ವಿಚಾರ ಮಾಡಬೇಕಾದ ಸಂಗತಿಯಿದಲ್ಲವೇ?

ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ, ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ ಇದೇ ಹೊರತು ಮತ್ತೊಂದಲ್ಲ. 
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಪ್ರಕೃತಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ!
-ಕ.ವೆಂ.ನಾಗರಾಜ್


[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]

Wednesday, October 30, 2013

ಹಿಂದುರಾಷ್ಟ್ರ ಎಂದರೆ ಏನು?

ವಿಷವಿಕ್ಕಿದವಗೆ ದಯೆ ತೋರಿಸಿದ ದಯಾನಂದರು!

ಇಂದು ಮಹರ್ಷಿ ದಯಾನಂದರ ಸ್ಮರಣದಿನ!
     ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು. ಮಾರಿಷಸ್ ಸರ್ಕಾರ ಅವರ ನೆನಪಿನಲ್ಲಿ ಹೊರಡಿಸಿದ್ದ ಅಂಚೆ ಚೀಟಿಗಳ ಚಿತ್ರವಿದು.

Sunday, October 27, 2013

ನಿಜವ ತಿಳಿಯೋಣ-೧

ನಿಜವ ತಿಳಿಯೋಣ
[ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಉಪನ್ಯಾಸದ ಭರಹ ರೂಪ]

[ಕಳೆದ 47ಭಾನುವಾರಗಳಿಂದ ನಿರಂತರವಾಗಿ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಬರೆಯುತ್ತಿರುವ “ಎಲ್ಲರಿಗಾಗಿ ವೇದ” ಸರಣಿಯನ್ನು ಕೆಲವು ದಿನ ಇಲ್ಲಿ ಹಂಚಿಕೊಳ್ಳಲಾಗಿತ್ತು. ಇನ್ನು ಮುಂದೆ ಪ್ರತೀ ಭಾನುವಾರ ಮುಂದಿನ ಬರಹಗಳನ್ನು ಪ್ರಕಟಿಸಲಾಗುವುದು]

ಅಥರ್ವವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
 ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋ ಮುಖ: ||
[ಅಥರ್ವ ವೇದ ೧೦ನೇ ಕಾಂಡ, ೮ನೇ ಸೂಕ್ತ,೨೭ ನೇ ಮಂತ್ರ]

ಆತ್ಮನ  ವಿಚಾರವನ್ನು ಮೇಲಿನ ಮಂತ್ರದಲ್ಲಿ ವಿವರಿಸಲಾಗಿದೆ.
ತ್ವಂ ಸ್ತ್ರೀ = ನೀನು ಹೆಣ್ಣಾಗಿದ್ದೀಯೆ
ತ್ವಂ ಪುಮಾನಸಿ = ನೀನು ಗಂಡೂ ಕೂಡ ಆಗಿದ್ದೀಯೆ
ಅಂದರೆ ಆತ್ಮಕ್ಕೆ ಲಿಂಗವಿಲ್ಲ. ಅದು ಗಂಡೂ ಹೌದು, ಹೆಣ್ಣೂ ಹೌದು.ಅಂದರೆ ಅದು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣುಶರೀರದಲ್ಲಿದ್ದಾಗ ಹೆಣ್ಣು ಎಂದು ಕರೆಸಿಕೊಳ್ಳುತ್ತದೆ. ತ್ವಂ ಕುಮಾರ ಉತ ವಾ ಕುಮಾರೀನೀನು ಕುಮಾರನೂ ಹೌದು ಅಂತೆಯೇ ಕುಮಾರಿಯೂ ಹೌದು. ಅಣುಚೇತನಕ್ಕೆ [ಆತ್ಮಕ್ಕೆ] ಅದರದೇ ಆದ  ಲಿಂಗವ್ಯವಸ್ಥೆ ಇಲ್ಲದಿರುವುದರಿಂದ ಅದು ಗಂಡೂ ಹೌದು, ಹೆಣ್ಣೂ ಹೌದು, ಕುಮಾರನೂ ಹೌದು, ಕುಮಾರಿಯೂ ಹೌದು. ಅಂದರೆ ಅದು ಯಾವ ಶರೀರದಲ್ಲಿ, ಯಾವ ಸ್ಥಿತಿಯಲ್ಲಿರುತ್ತದೋ ಅದರಂತೆ  ಗಂಡು/ಹೆಣ್ಣು/ಕುಮಾರ/ಕುಮಾರೀ ಎಂದು ಕರೆಯಲ್ಪಡುತ್ತದೆ.
ತ್ವಂ ಜೀರ್ಣೋ ದಂಡೇನ ವಂಚಸಿ  ನೀನು ಒಂದು ಕಾಲದಲ್ಲಿ ಆಶರೀರವು ಜೀರ್ಣವಾದಾಗ ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ  ಅಂದರೆ ಇಲ್ಲಿ ಕುಮಾರ,ಕುಮಾರಿ, ಹೆಣ್ಣು, ಗಂಡು, ವೃದ್ಧ, ಈ ಎಲ್ಲಾ ಸ್ಥಿತಿಯುಂಟಾಗುವುದು ಈ ಅಣುಚೇತನವು ಯಾವ ಶರೀರದಲ್ಲಿದೆಯೋ ಆ ಶರೀರಕ್ಕೆ ಆದ್ದರಿಂದ ಶರೀರಕ್ಕೆ ವೃದ್ಧಾಪ್ಯ ಬಂದಾಗ  ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ ಎಂದು ವಿವರಿಸಲಾಗಿದೆ.ಅಣುಚೇತನಕ್ಕೆ ಮಾತ್ರ ಅದರದೇ ಆದ ಬಾಲ್ಯ-ಯೌವ್ವನ, ವೃದ್ಧಾಪ್ಯದ ಸ್ಥಿತಿಯಾಗಲೀ, ಲಿಂಗವಾಗಲೀ ಇರುವುದಿಲ್ಲ. ಶರೀರದಲ್ಲಿರುವವರೆಗೂ ಆ ಶರೀರಕ್ಕನುಗುಣವಾಗಿ ಗುರುತಿಸಲ್ಪಡುತ್ತದೆ. ಶರೀರವು ಜೀರ್ಣವಾಗಿ ಈ ಶರೀರ,ಇಂದ್ರಿಯ ಮನಸ್ಸುಗಳನ್ನು ಸಾಧನವಾಗಿ ಬಳಸಲು ಅಣುಚೇತನಕ್ಕೆ  ಅಸಾಧ್ಯವಾದಾಗ ಅಂದರೆ ಆ ಶರೀರವು ಅಂತ್ಯವಾದಮೇಲೆ ಅಣುಚೇತನ ಎಲ್ಲಿ ಹೋಗುತ್ತದೆ? ಎಂಬುದನ್ನು ಮಂತ್ರದ ಮುಂದಿನಭಾಗವು ಸ್ಪಷ್ಟಪಡಿಸುತ್ತದೆ.
ತ್ವಂ ಜಾತೋ ಭವಸಿ ವಿಶ್ವತೋ ಮುಖ:
ಈವರಗೆ ಇದ್ದ ಶರೀರದಲ್ಲಿ ಶರೀರ ಇಂದ್ರಿಯ ಮತ್ತು ಮನಸ್ಸನ್ನು ಸಾಧನವಾಗಿ ಇನ್ನು ಉಪಯೋಗಿಸಲು ಸಾಧ್ಯವಿಲ್ಲವೆಂದಾಗ  ಮುಂದೇನಾಗುತ್ತದೆ?  ಎಂಬುದಕ್ಕೆ  ಅಣುಚೇತನವನ್ನು ಕುರಿತು ಮಂತ್ರದ ಈ ಭಾಗ ಹೇಳುತ್ತದೆ ಈ ಶರೀರವನ್ನು ಬಿಟ್ಟು ಬೇರೆ ಶರೀರದಲ್ಲಿ ವಿಶ್ವದಲ್ಲಿ ಎಲ್ಲಿ ಬೇಕಾದರೂ  ಪ್ರಕಟವಾಗುತ್ತೀಯೆ ಒಂದು ಶರೀರವನ್ನು ಬಿಟ್ಟ ಅಣುಚೇತನವು ಮತ್ತೊಂದು ಶರೀರವನ್ನು ಸೇರಬೇಕಾದರೆ ಹಿಂದಿನ ಜನ್ಮದಲ್ಲಿ[ಹಿಂದಿನ ಶರೀರಗಳಲ್ಲಿ] ಮಾಡಿರುವ ಕರ್ಮಗಳ ಆಧಾರದ ಮೇಲೆ  ಯಾವ ಶರೀರವನ್ನು ಸೇರಬೇಕೆಂಬುದು ನಿರ್ಧರಿಸಲ್ಪಡುತ್ತದೆ. ತಾನು ಮಾಡಿದ ಹಿಂದಿನ ಕರ್ಮಾನುಸಾರ ಹೊಸ  ಶರೀರವು ಈ ಅಣುಚೇತನಕ್ಕೆ ಲಭ್ಯವಾಗುತ್ತದೆ.
ಅಂದರೆ ನಾವು ನಮ್ಮ ನಮ್ಮ ಹಿಂದಿನ ಜನ್ಮದ ಕರ್ಮಾನುಸಾರ ಇಂದಿನ ಜನ್ಮದಲ್ಲಿ ಯಾವ ಗರ್ಭದಲ್ಲಿ ಜನ್ಮವೆತ್ತಬೇಕೋ ಅದರಂತೆ ಜನ್ಮವೆತ್ತಿದ್ದೇವೆ. ಕರ್ಮದ ಫಲವನ್ನು ಮುಂದಿನ ಮಂತ್ರದಲ್ಲಿ ಇನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ.

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ: ಸಮಮಮಾನ ಏತಿ|
ಅನೂನಂ ಪಾತ್ರಂ ನಿಹಿತಂ ನ ಏತತ್ ಪಕ್ತಾರಂ ಪಕ್ವ: ಪುನರಾ ವಿಶಾತಿ||
[ಅಥರ್ವ ವೇದದ ೧೨ ನೇ ಕಾಂಡ,೩ನೇ ಸೂಕ್ತದ ೪೮ ನೇ ಮಂತ್ರ]
 ಮೇಲಿನ ಮಂತ್ರಕ್ಕೆ ಪೂರಕವಾಗಿರುವ ಇನ್ನೂ ಹಲವು ವೇದಮಂತ್ರಗಳ ಆಧಾವಾಗಿಟ್ಟುಕೊಂಡು ಈ ಮಂತ್ರವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಅತ್ರ ಕಿಲ್ಬಿಷಮ್ ನ   ಇಲ್ಲಿ ಕಿಲುಬು[ದೋಷ] ಇಲ್ಲ. ಅಂದರೆ ಭಗವಂತನ ವ್ಯವಸ್ಥೆಯಲ್ಲಿ ಯಾವ ದೋಷವೂ ಇಲ್ಲ. ಭಗವಂತನ  ವ್ಯವಸ್ಥೆಗಳೆಲ್ಲವೂ ದೋಷಮುಕ್ತವಾಗೇ ಇವೆ. ಅಂದರೆ ಈಗ್ಗೆ ಹತ್ತು ಸಾವಿರವರ್ಷಗಳ ಹಿಂದೆ ಯಾವ ವ್ಯವಸ್ಥೆ ಇತ್ತೋ ಅದೇ ವ್ಯವಸ್ಥೆ ಇಂದೂ ಇದೆ. ಅಂದೂ ಸರಿಯಾಗಿತ್ತು.ಇಂದೂ ಸರಿಯಾಗಿಯೇ ಇದೆ.ಆದರೆ ನಾವು ಮಾಡುವ ವ್ಯವಸ್ಥೆ ಹೇಗಿರುತ್ತದೆ, ಒಂದು ಉಧಾಹರಣೆ ನೋಡೋಣ. ಸ್ವಾತಂತ್ರ್ಯ  ಬಂದಮೇಲೆ ನಮ್ಮ ದೇಶದ ಸಂವಿಧಾನ ರಚಿಸಿದರು.ಕೇವಲ ಅರವತ್ತು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ತಿದ್ದುಪಡಿಯನ್ನು ನಾವೇ ಮಾಡಿದ್ದೇವೆ. ಇನ್ನೂ ಎಷ್ಟು ಮಾಡುತ್ತೀವೋ ಗೊತ್ತಿಲ್ಲ. ಆದರೆ ಭಗವಂತನ ವ್ಯವಸ್ಥೆಯು ಎಲ್ಲಾ ಕಾಲಕ್ಕೂ ಒಂದೇ ಆಗಿರುತ್ತದೆ.
ಮುಂದಿನ ಮಂತ್ರಭಾಗ  ನಾಧಾರೋ ಅಸ್ತಿ ಇದಕ್ಕೆ ಯಾವ ಆಧಾರವೂ ಇಲ್ಲ.ಇದೇನಿದು? ಆಧಾರವಿಲ್ಲದ ಯಾವ ಮಾತನ್ನೂ ಒಪ್ಪಿಕೊಳ್ಳಬಾರದು ಎಂದು ವೇದವೇ ಹೇಳುತ್ತದೆ. ಆದರೆ ಭಗವಚ್ಛಕ್ತಿಯ ವಿಚಾರದಲ್ಲಿ ಯಾವ ಆಧಾರವೂ ಇಲ್ಲ, ಎಂದರೆ ಏನು?
ಇಲ್ಲಿ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಆಧಾರವೆಂಬುದು ಯಾವಾಗ ಬೇಕಾಗುತ್ತದೆ?
ಯಾವುದು ಸ್ವಯಂ ಸಿದ್ಧವಾಗಿದೆಯೋ ಅದಕ್ಕೆ ಆಧಾರ ಬೇಕಾಗಿಲ್ಲ. ಉಧಾಹರಣೆಗೆ ಸೂರ್ಯನಿಂದ ಶಾಖ ಮತ್ತು ಬೆಳಕು ಹೊರಹೊಮ್ಮುತ್ತದೆ, ಎಂಬುದಕ್ಕೆ ಯಾವ ಆಧಾರದ ಅಗತ್ಯವಿದೆ? ಯಾವ ಆಧಾರವೂ ಬೇಕಾಗಿಲ್ಲ, ತಾನೇ? ಅದು ಸ್ವಯಂ ಸಿದ್ಧ. ಆದರೆ ಯಾವುದಕ್ಕೆ ಆಧಾರಬೇಕಾಗುತ್ತದೆಂದರೆ ಎರಡು ವಿಚಾರಗಳಿದ್ದು,ಇದು ಸರಿಯೇ? ಅಥವಾ ಅದು ಸರಿಯೇ? ಎಂಬ ಗೊಂದಲ ಬಂದಾಗ ಯಾವುದು ಸರಿ ಎಂಬುದಕ್ಕೆ ಆಧಾರಬೇಕಾಗುತ್ತದೆ.ಯಾವುದಾದರೂ ಪ್ರಮಾಣ ಬೇಕಾಗುತ್ತದೆ.ಆದರೆ ಭಗವಚ್ಛಕ್ತಿಯ ವಿಚಾರಕ್ಕೆ ಯಾವ ಆಧಾರದ ಅಗತ್ಯವೂ ಇಲ್ಲ.
ಆಧಾರದ ಬಗ್ಗೆ ಚರ್ಚಿಸುವಾಗ ಮತ್ತೊಂದು ವಿಚಾರವನ್ನೂ  ಕೂಡ ಗಮನಿಸಬೇಕು.  ಯಾವುದಾದರೂ ವಿಚಾರವನ್ನು ಸರಿ ಎಂದು ಹೇಳಬೇಕಾದರೆ ಅದಕ್ಕಿಂತ ಪ್ರಾಚೀನವಾದ ಸತ್ಯಕ್ಕೆ ಅದನ್ನು ಹೋಲಿಸಿ ನೋಡಿ ಅದು ಸರಿಯೇ ತಪ್ಪೇ ಎಂದು ನಿರ್ಧರಿಸಬೇಕಾಗುತ್ತದೆ. ಆದರೆ ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯವು ವೇದವೇ ಆಗಿರುವಾಗ ವೇದವನ್ನು ಯಾವುದಕ್ಕೆ ಹೋಲಿಕೆ ಮಾಡಿ ನೋಡಲು ಸಾಧ್ಯ? ಆದ್ದರಿಂದ ವೇದವು ವಿವರಿಸುವ ಭಗವಚ್ಛಕ್ತಿಯ ವಿಚಾರವನ್ನೂ ಯಾವುದಕ್ಕಾದರೂ ಹೋಲಿಸಲು ಅದಕ್ಕಿಂತ ಪ್ರಾಚೀನ ಸಾಹಿತ್ಯ ಇಲ್ಲವಾದ್ದರಿಂದ ಯಾವ ಆಧಾರವು ಇಲ್ಲ ಎಂದು ವಿವರಿಸಲಾಗಿದೆ, ಎಂದು ಅರ್ಥಮಾಡಿಕೊಳ್ಳಬಹುದು.
 ಯನ್ಮಿತ್ರೈ: ಸಮಮಮಾನ ಏತಿ ನಾವು ನಮ್ಮ ಬಂಧು ಬಾಂಧವರೊಡಗೂಡಿ ಇದ್ದೇವೆ. ಆದ್ದರಿಂದ ನಾವು ಸುರಕ್ಷಿತ ಎಂದು ಕೊಂಡರೆ ವೇದವು ಹೇಳುತ್ತದೆ ಇಲ್ಲ ಭಗವಂತನ ವ್ಯವಸ್ಥೆ ಏನಿದೆ, ಅದನ್ನು ಮುರಿಯಲಾಗುವುದಿಲ್ಲ.
ಒಂದು ಉಧಾಹರಣೆ ನೋಡೋಣ. ಒಬ್ಬ ವ್ಯಕ್ತಿಯು ಯಾವುದೋ ರೋಗಕ್ಕೆ ತುತ್ತಾಗಿದ್ದಾನೆ. ಸಾಕಷ್ಟು ಜನ ಬಂಧು ಬಳಗ ಇದ್ದಾರೆ. ಶ್ರೀಮಂತಿಕೆ ಇದೆ. ಹೈಟೆಕ್ ಆಸ್ಪತ್ರೆಯಲ್ಲಿ ಹತ್ತಾರು ಜನ ಸ್ಪೆಶಲಿಸ್ಟ್ ಗಳು ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಪ್ರಾಣ ಹೋಗುವ ಸಮಯ ಬಂದರೆ ಯಾರೂ ಅದನ್ನು ತಡೆಯಲಾರರು. ಭಗವಂತನ ನಿಯಮವನ್ನು ಯಾರೂ ಮುರಿಯಲಾರರು. ಅದೇ ಅಂತಿಮ. ಕೊನೆಯಲ್ಲಿ ವೈದ್ಯರು ಹೇಳುವುದೂ ಇದನ್ನೇ ನಾವು ಮಾಡುವ ಎಲ್ಲಾ ಪ್ರಯತ್ನ ಮಾಡಿದೆವು. ಇನ್ನು ಭಗವಂತನ ಇಚ್ಛೆ.
ಅಂದರೆ ನಾವು ಏನು ಕೆಲಸ ಮಾಡಬೇಕಾದರೂ ಭಗವಂತನ ನಿಯಮವನ್ನರಿತು ಕೆಲಸಮಾಡಿದರೆ ಯಶಸ್ವಿಯಾಗುತ್ತೇವೆ, ಹೊರತು ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ ಯಾವ ಬಂಧು ಬಳಗವೂ ನಮ್ಮನ್ನು ರಕ್ಷಿ   ಸಲಾಗದು.ಅದ್ದರಿಂದ ಭಗವಂತನ ನಿಯಮವನ್ನು ಅರಿತುಬಾಳಿದರೆ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಸಿಗಲು ಸಾಧ್ಯ. ಭಗವಂತನ ನಿಯಮಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಸರಳವಾಗಿ ಹೇಳಬೇಕೆಂದರೆ ಸತ್ಯವನ್ನೇ ಹೇಳು,ಕಳ್ಳತನ ಮಾಡಬೇಡ,ಹಿಂಸೆ ಮಾಡಬೇಡ ಎಂಬುದು ನಿಯಮಗಳು. ಸತ್ಯವನ್ನು ಹೇಳುವ ಅಥವ ಹೇಳದಿರುವ ಸ್ವಾತಂತ್ರ್ಯ ನಮಗೇ ತಾನೇ ಇರುವುದು? ಕಳ್ಳತಾನ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ಮಾಡಬೇಕಾಗಿರುವವರು ನಾವೇ ತಾನೇ? ಹಿಂಸೆ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ನಾವೇ ತಾನೇ ಮಾಡಬೇಕು. ಸರಿಯಾದ ನಿರ್ಧಾರ ತೆಗೆದುಕೊಂಡರೆ ಭಗವಂತನ ನಿಯಮದಂತೆ ಬದುಕು ಸಾಗುತ್ತದೆ, ಬದುಕು ಉಜ್ವಲವಾಗುತ್ತದೆ,ಇಲ್ಲವಾದರೆ ಬದುಕಿನಲ್ಲಿ ಸುಖ, ಸಂತೋಷ ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ
ಇನ್ನೊಂದು ವೇದ ಮಂತ್ರವು ಹೇಳುತ್ತದೆ  ನಾ  ಅನ್ಯಪಂಥಾ ವಿದ್ಯತೇ ಅಯನಾಯ  ಬೇರೆ ದಾರಿಯೇ ಇಲ್ಲ. ಭಗವಂತನ ನಿಯಮದಂತೆ ಕ್ರಮಿಸುವಿರಾ? ನಿಮಗೆ ಯಶಸ್ಸು ಇದೆ,ಇಲ್ಲದಿದ್ದರೆ ಇಲ್ಲ. ನಮಗೆ ಬದಲೀ ಮಾರ್ಗ ವಿಲ್ಲ.
ಒಟ್ಟಿನಲ್ಲಿ ಈ ಒಂದು ವೇದಮಂತ್ರದ ಮೊದಲಭಾಗದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ್ದು ಏನೆಂದರೆ. . ೧] ಭಗವಂತನ ವ್ಯವಸ್ಥೆಯಲ್ಲಿ ದೋಷವಿಲ್ಲ
೨] ಭಗವಂತನವಿಚಾರವು ಸ್ವಯಂ ಸಿದ್ಧವಾದ್ದರಿಂದ ಯಾವ ಆಧಾರದ ಅಗತ್ಯವಿಲ್ಲ.
೩] ಭಗವಂತನ ನಿಯಮಕ್ಕೆ ವಿರುದ್ಧವಾಗಿ ನಮ್ಮ ಬಂಧುಬಳಗವೂ ಕೂಡ ನಮ್ಮನ್ನು ರಕ್ಷಿಸಲಾರದು
            ಈ ಮಂತ್ರ ಭಾಗದ ಒಟ್ಟು ಸಾರವೆಂದರೆ ಭಗವಂತನನ್ನು ನಂಬಿ ಅವನ ನಿಯಮದಂತೆ ಸತ್ಯದ ಪಥದಲ್ಲಿ ಸಾಗಿದರೆ ನಮ್ಮ ಜೀವನದಲ್ಲಿ ಸುಖ, ನೆಮ್ಮದಿ ಶಾಂತಿ ದೊರಕಬಲ್ಲದು. ಭಗವಂತನ ನಿಯಮ ಮೀರಿ ಜೀವನ ಸಾಗಿಸಿದ್ದೇ ಆದರೆ ಜೀವನದಲ್ಲಿ ಸುಖ, ನೆಮ್ಮದಿ,ಶಾಂತಿ ಸಿಗಲು ಸಾಧ್ಯವಿಲ್ಲ. ಇದೇ ಮಂತ್ರದ ಮುಂದಿನ ಭಾಗವು ಇನ್ನೂ ಅದ್ಭುತವಾಗಿದ್ದು ಅದರ ಅರ್ಥವನ್ನು ಮುಂದಿನವಾರ ನೋಡೋಣ.

-ಹರಿಹರಪುರಶ್ರೀಧರ್