Pages

Wednesday, April 1, 2015

ನಮ್ಮ ಹೊಣೆ ಏನು?

ನಿತ್ಯವೂ ಕೆಲವರ ಮಾತು ಕೇಳಿದಂತೆಲ್ಲಾ ಹಲವು ಚಿಂತನೆಗಳು ಕಣ್ಮುಂದೆ ಬರುತ್ತವೆ. ಕೆಲವು ದಿನಗಳ ಮುಂಚೆ ಒಬ್ಬ ಕಿರಿಯ ಸ್ನೇಹಿತೆ ಒಂದು ಗುಡಿಸಲಿನ ಮುಂದೆ ಮುದ್ದಾದ ಮೂರು ಮಕ್ಕಳು ನಿಂತಿರುವ ಚಿತ್ರ ಹಾಕಿದ್ದರು. ಅದನ್ನು ಶೇರ್ ಮಾಡಿದ ನಾನು ಅದರ ವಿವರ ತಿಳಿದು ಪ್ರಕಟಿಸುವುದಾಗಿ ಪೋಸ್ಟ್ ಬರೆದಿದ್ದೆ.ಅಂತೆಯೇ ಅವರನ್ನು ವಿವರ ಕೇಳಿದೆ. ಆಕೆಗೆ ನನ್ನ ಮೇಲೆ ಎಲ್ಲಿಲ್ಲದ ಸಿಟ್ಟು   ಬಂತು. ಇಂತಾ ನೂರಾರು ಕುಟುಂಬಗಳು ಆ ಜಾಗದಲ್ಲಿ ಬಡತನ ಅನುಭವಿಸ್ತಾ ಇದಾರೆ.ಮಾಡುವುದಾದದರೆ ಅಲ್ಲಿ ಹೋಗಿ ಸಹಾಯ ಮಾಡ್ರೀ, ಅಂತಾ ಸಿಟ್ಟಾಗಿಯೇ ಹೇಳಿದ್ದರು. ಆಕೆಯ ಸಿಟ್ಟಿನಿಂದ ನನಗೇನೂ ಬೇಸರವಾಗಲಿಲ್ಲ. ನಾಟಕವಾಡುವ ಜನರನ್ನು ನೋಡಿ ನೋಡಿ ರೋಸಿಹೋಗಿ ಈ ಮಾತು ಹೇಳಿರಬಹುದು.ಇರಲಿ.
                      ಹೀಗೆಯೇ Facebook ನಲ್ಲಿ ಹಲವರು ತಾವು ಕಂಡ ದಾರಿದ್ರ್ಯ ದೃಶ್ಯಗಳನ್ನು ಬರೆಯುತ್ತಾ ಇರುತ್ತಾರೆ.ಹಲವರು ತಮ್ಮ ಮನೆಯ ಮಕ್ಕಳ ಹುಟ್ಟುಹಬ್ಬವನ್ನು ಸ್ಲಮ್ ನಲ್ಲಿ ಆಚರಿಸಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚಿ ಬಂದೆವೆಂದು ಬರೆಯುತ್ತಿರುತ್ತಾರೆ.
ಇವೆಲ್ಲವೂ ಸತ್ಯವೇ ಹೌದು. ಆದರೂ ಒಂದು ಚಿಂತೆ ನನ್ನನ್ನು ಕಾಡುತ್ತದೆ. ಸರ್ಕಾರದ " ಭಾಗ್ಯ ಯೋಜನೆ" ಗಳಿವೆಯಲ್ಲಾ ! ಅವು ಯಾರನ್ನು ತಲಪುತ್ತಿವೆ? ಕೆಲವರಿಗೆ 400.00 ರೂ ಕೆಲವರಿಗೆ 1000.00 ರೂ, ಕೆಲವರಿಗೆ ಒಂದು ರೂಪಾಯಿಗೆ ಅಕ್ಕಿ !!

ಈ ಎಲ್ಲದರ ಪ್ರಯೋಜನ ಯಾರು ಪಡೆಯುತ್ತಾರೆ?

ಈ ಎಲ್ಲಾ ಯೋಜನೆಗಳಿಗಿಂತ ಅತ್ಯಂತ ಹಳೆಯ ಯೋಜನೆಯೊಂದಿತ್ತು. ಅದು ಇಂದಿನ ಯುವಕರಿಗೆ ಗೊತ್ತಿರಲಾರದು. ಅದು " ಗರೀಬೀ ಹಾಟಾವ್ " ಯೋಜನೆ. ಇಂದಿರಾಗಾಂಧಿಯವರ ಕನಸು. ಅದರ ಹಿಂದಿನ ಚಿಂತನೆ ಕಾಂಗ್ರೆಸ್ಸರಿಗೇ ಅರ್ಥವಾಗಲಿಲ್ಲ. ವಿರೋಧಪಕ್ಷದವರು " ಅದು ಬಡತನ ನಿರ್ಮೂಲನೆಯಲ್ಲಾ! ಅದು ಬಡವರ ನಿರ್ಮೂಲನೆ!! ಎಂದು ಗೇಲಿ ಮಾಡಿದರು. ಆ ಯೋಜನೆ ಹಾಳಾಗಿ ಹೋಯ್ತು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಈ ಏಳು ದಶಕಗಳು ಬೇಕಾಗಿತ್ತಾ-ಈ ಬಡತನ ಹೋಗಲಾಡಿಸಲು.ದೇಶದ ಸಂಪತ್ತನ್ನು ಲೂಟಿ ಹೊಡೆದಿರುವ ರಾಜಕಾರಣಿಗಳ ಸಂಪತ್ತನ್ನು ಸರ್ಕಾರ ಕಿತ್ತುಕೊಂಡು ಯೋಗ್ಯರಿಗೆ ಹಂಚುವ ದಿಟ್ಟತನ ತೋರಿಸಲಿ. ಆಗ ಇನ್ನೂ ಹತ್ತು ಕೋಟಿ ಜನ ಬಡವರಿಗೆ ಬದುಕಲು ಇಲ್ಲಿಯೇ ಶ್ರೀಮಂತರ ಹತ್ತಿರ ಕೊಳೆಯುತ್ತಿರುವ ಸಂಪತ್ತು ಸಾಕಾಗುತ್ತೆ.

ಇದಕ್ಕೆ ವೇದದ ಆಧಾರ ಇಲ್ಲಿದೆ ನೋಡಿ.........

ಸಾಮಾನ್ಯವಾಗಿ   ಬಳಕೆಯಲ್ಲಿರುವ  ಗಣೇಶ ಸೂಕ್ತದ ಎರಡು ಮಂತ್ರಗಳಲ್ಲಿ ಏನು ಹೇಳುತ್ತೆ ಗೊತ್ತೇ?

ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೭

ಉಪ ಕ್ರಮಸ್ವಾ ಭರ ಧೃಷತಾ ಧೃಷ್ಣೋ ಜನಾನಾಮ್ |
ಅದಾಶೂಷ್ಟರಸ್ಯ ವೇದಃ ||
 ಅರ್ಥ:-
ಜನಾನಾಮ್ ಧೃಷ್ಣೋ = ಮಾನವರ ವಶೀಕರ್ತನಾದವನೇ
ಧೃಷತಾ = ದಮನಬಲದಿಂದ
ಅದಾಶೂಷ್ಟರಸ್ಯ = ಕೊಡದವನ
ವೇದಃ = ಧನವನ್ನು
ಆಭರ = ತುಂಬಿಸಿಕೊಡು
ಉಪಕ್ರಮಸ್ವ = ಕಾರ್ಯ ನಿರತನಾಗು
ಭಾವಾರ್ಥ:-
ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ಆ ಹಣವು ಜನರ ಹಿತಕ್ಕಾಗಿ ಬಳಸಲ್ಪಡುವುದಿಲ್ಲ. ಆದ್ದರಿಂದ ಅಂತವರ ಧನವನ್ನು ಶಾಸಕನು ದಮನಶಕ್ತಿಯಿಂದ ಕಿತ್ತುಕೊಂಡು ಉದಾರಾತ್ಮರಿಗೆ ನೀಡಬೇಕು, ಅಂತೆಯೇ ಕ್ರಿಯಾಶೀಲರಾಗಬೇಕು.
ಸಾಮಾನ್ಯವಾಗಿ ವೇದಮಂತ್ರಗಳು ಕೇಳಲು -ಹೇಳಲು ಹಿತವಾಗಿರುತ್ತವೆ, ಹಾಗಾಗಿ ಬಹಳ ಜನರು ವೇದ ಮಂತ್ರವನ್ನು ಇಷ್ಟಪಡುತ್ತಾರೆ. ಆದರೆ ಅದರ ಅರ್ಥ ತಿಳಿದುಕೊಂಡರೆ ನಮಗೆ ಆಶ್ಚರ್ಯವಾಗದೇ ಇರದು. ನಾವು ಹೇಳುವ ಹಲವು ಮಂತ್ರಗಳು ನಮ್ಮ ಜೀವನಕ್ಕೆ ಮಾರ್ಗದರ್ಶೀ ಸೂತ್ರಗಳಷ್ಟೇ ಅಲ್ಲ, ಭಗವಂತನ  ಆದೇಶವಾಗಿರುತ್ತವೆ.
ಈ ಮಂತ್ರವಂತೂ ಗಟ್ಟಿಯ ಧ್ವನಿಯಲ್ಲಿ ಹೇಳುತ್ತದೆ ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ನಮ್ಮನ್ನಾಳುವ ರಾಜನು ಅಥವಾ ಸರ್ಕಾರ ತನ್ನ  ದಮನಶಕ್ತಿಯಿಂದ ಸ್ವಾರ್ಥಿಗಳ ಐಶ್ವರ್ಯವನ್ನು ಕಿತ್ತುಕೊಂಡು ಉದಾರಾತ್ಮರಿಗೆ ಹಂಚಬೇಕು
  ನಾವು ಈಗ ಹೇಳುತ್ತಿರುವ ಸರ್ವರಿಗೂ ಸಮಪಾಲು, ಸಮ ಬಾಳು ಈ ಎಲ್ಲವನ್ನೂ ವೇದವು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ನಮಗೆ ಅದು ಸ್ಪಷ್ಟವಾಗದೇ ಇರದು. ವೇದಮಂತ್ರವು ಬಳಸಿರುವ ಪದದ ಗಟ್ಟಿತನವು ನಮಗೆ ಅರ್ಥವಾಗಬೇಕು. ಧೃಷತಾ ಎಂಬ ಪದದ ಬಳಕೆಯಾಗಿದೆ ಅಂದರೆ ದಮನಬಲದಿಂದ ಸ್ವಾರ್ಥಿಗಳ ಸಂಪತ್ತನ್ನು ಕಿತ್ತುಕೊಂಡು ಅಗತ್ಯವಿದ್ದ ಜನರಿಗೆ ಹಂಚು-ಎಂಬುದು ವೇದದ ಕರೆ. ಅಂದರೆ ಎಷ್ಟು ಸಮಾಜಮುಖಿಯಾಗಿ ಚಿಂತನೆ ನಡೆದಿದೆ! ಎಂಬುದು ನಮಗೆ ಅರ್ಥವಾಗಬೇಕು.
ಅದಾಶೂಷ್ಟರಸ್ಯ ವೇದಃ ಎಂಬ ಮಂತ್ರಭಾಗಕ್ಕೆ ಕೊಡದವನ ಸಂಪತ್ತನ್ನು ಎಂಬ ವಿವರಣೆಯನ್ನು ನೀಡಿದ್ದಾರೆ. ವೇದದಲ್ಲಿ ಒಂದೊಂದು ಪದಕ್ಕೂ ಸಂದರ್ಭಾನುಸಾರ ಮತ್ತು ಸ್ವರದ ಆಧಾರದಲ್ಲಿ ಹಲವಾರು ಅರ್ಥಗಳು. ಈ ಮಂತ್ರದಲ್ಲಿ ವೇದಃ ಎಂಬ ಪದಕ್ಕೆ ಧನವನ್ನು/ಸಂಪತ್ತನ್ನು ಎಂದು ಅರ್ಥೈಸಲಾಗಿದೆ.
ದೇಶದ ಹಣವನ್ನು ಲೂಟಿಮಾಡಿ ಕಪ್ಪುಹಣವನ್ನು ಹೊಂದಿರುವವರಿಗೆ ಈ ಮಾತು ನೇರವಾಗಿ ಅನ್ವಯವಾಗಲಾರದೆ? ಇಂತವರ ಹಣವನ್ನು ತನ್ನ ರಾಜಬಲದಿಂದ        ವಶಪಡಿಸಿಕೊಂಡು ದೇಶದ ಉತ್ತಮ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕೆಂಬುದೇ ಈ ಮಂತ್ರದ ಕರೆ.
ಈ ಮಂತ್ರವನ್ನು ಬಹುಪಾಲು ಜನರು ನಿತ್ಯವೂ ಪಠಿಸುತ್ತಾರೆ. ಆದರೆ ಈ ಮಂತ್ರದ ಅರ್ಥ ಯಾರ ಕಿವಿಗೆ ಬೀಳಬೇಕೋ ಅವರ ಕಿವಿಗೆ ಬೀಳುತ್ತಿದೆಯೇ? ಇಂತಹ ವೇದದ ಆದೇಶವನ್ನು ಆಡಳಿತಮಾಡುವವರ ಕಿವಿಗೆ ಮುಟ್ಟಿಸುವುದು ವೇದ ವಿದ್ವಾಂಸರ ಕರ್ತವ್ಯವಲ್ಲವೇ?

ಮತ್ತೊಂದು ಮಂತ್ರವು ಇನ್ನೂ ಅದ್ಭುತವಾಗಿ ಇದೇ ವಿಚಾರವನ್ನು ಹೇಳುತ್ತದೆ. . . . . . .
ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೮

ಇಂದ್ರ ಯ ಉ ನು ತೇ ಅಸ್ತಿ ವಾಜೋ ವಿಪ್ರೇಭಿಃ ಸನಿತ್ವಃ |
ಅಸ್ಮಾಭಿಃ ಸು ತಂ ಸನುಹಿ ||

ಅರ್ಥ:-
ಇಂದ್ರ = ಸರ್ವೇಶ್ವರನೇ
ತೇ = ನಿನ್ನ
ಯಃ = ಯಾವ
ಸನಿvಃ = ಹಂಚಿಕೊಳ್ಳಲರ್ಹವಾದ
ವಾಜಃ ಅಸ್ತಿ = ಸಂಪತ್ತಿದೆಯೋ
ತಮ್ = ಅದನ್ನು
ಅಸ್ಮಾಭಿಃ ವಿಪ್ರೇಭಿಃ =  ಮೇಧಾವಿಗಳಾದ ನಮ್ಮೊಂದಿಗೆ ಸೇರಿ
ಸು ಉ ನು ಸನುಹಿ = ಚೆನ್ನಾಗಿ ನಿಶ್ಚಯವಾಗಿ ಹಂಚಿಕೊಡು

ಭಾವಾರ್ಥ:-
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು, ಆ ಸಂಪತ್ತು ದಾನಮಾಡುವುದಕ್ಕಾಗಿಯೇ ಇದೆ ಹೊರತೂ ಸ್ವಾರ್ಥಕ್ಕಾಗಿ ಅಲ್ಲ,  ಆ ಸಂಪತ್ತನ್ನು ಭಗವಂತನ ಪ್ರೇರಣೆಯಿಂದ ಮೇಧಾವಿಗಳು ಪಾತ್ರರಿಗೆ ನೀಡಲಿ.
ನಿಜವಾದ ಕಮ್ಯೂನಿಸ್ಟ್ ವಿಚಾರಧಾರೆಯಲ್ಲವೇ, ಇದು! ಈಗಿನ ಕಮ್ಯೂನಿಸ್ಟ್ ವಿಚಾರವು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ವೇದಮಂತ್ರವು ಸಾರುತ್ತದೆ                 ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನಿಗೆ ಸೇರಿದ್ದು. ಅದರ ಮೇಲೆ ನನ್ನ ಹಕ್ಕು ಏನೂ ಇಲ್ಲ. ನನಗೇನಾದರೂ ಒಂದಿಷ್ಟು ಸಂಪತ್ತು ಇದೆ ಎಂದಾದರೆ ನಾನು ಅದಕ್ಕೆ ಒಬ್ಬ ವಿಶ್ವಸ್ಥನೇ ಹೊರತೂ ಯಜಮಾನನಲ್ಲ.

ಇಂದಿನ ಸರ್ಕಾರದ ನೀತಿಯಲ್ಲೂ ಸಹ ಇಲ್ಲದವನಿಗೆ ಸರಕಾರ ಸವಲತ್ತನ್ನು ಒದಗಿಸುವುದೇ ಆಗಿದೆ. ಆದರೆ ಯಾರು ರಾಜಕಾರಣಿಗಳ ಹಿಂಬಾಲಕರಿರುತ್ತಾರೋ ಅವರಿಗೆ ಸರ್ಕಾರದ ಸವಲತ್ತುಗಳು ಸೇರುತ್ತವೆ. ನಿಜವಾದ ಬಡವನು ಎಲ್ಲಾ ಸೌಕರ್ಯಗಳಿಂದಲೂ ವಂಚಿತನಾಗುತ್ತಾನೆ. ಈ ವಿಚಾರದಲ್ಲಿ ವೇದವು ಸ್ಪಷ್ಟ ಆದೇಶವನ್ನು ಕೊಡುತ್ತದೆ ಮೇಧಾವಿಗಳೊಂದಿಗೆ, ಚಿಂತಕರೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ನೀಡಿ
ಆದರೆ ಈಗ ನಡೆದಿರುವುದೇನು? ಎಲ್ಲವೂ ವೇದಕ್ಕೆ ವಿರೋಧವಾಗಿಯೇ. ಅಂದರೆ ಸತ್ಯಕ್ಕೆ ವಿರೋಧವಾಗಿಯೇ. ಅಸತ್ಯ, ಅಧರ್ಮ,ಅನ್ಯಾಯವನ್ನು ಕೇಳುವಷ್ಟು ಗುಂಡಿಗೆ ಜನರಲ್ಲಿಲ್ಲ. ಮತ್ತೊಂದು ಮಂತ್ರದ ಬಗ್ಗೆ ತಿಳಿಯೋಣ

ಸದ್ಯೋಜುವಸ್ತೇ ವಾಜಾ ಅಸ್ಮಭ್ಯಂ ವಿಶ್ವಶ್ಚಂದ್ರಾಃ |
ವಶೈಶ್ಚ ಮಕ್ಷೂ ಜರಂತೇ || [ ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೯]

ಅರ್ಥ
ಸರ್ವೇಶ್ವರನೇ
ತೇ ವಾಜಾಃ = ನಿನ್ನ ಸಂಪತ್ತು
ವಿಶ್ವಶ್ಚಂದ್ರಾಃ = ಎಲ್ಲರಿಗೂ ಆಹ್ಲಾದವನ್ನು ಕೊಡತಕ್ಕದ್ದು
ಅಸ್ಮಭ್ಯಂ = ನಮಗೆ
ಸದ್ಯೋಜುವಃ = ಬೇಗನೇ ಪ್ರಾಪ್ತವಾಗಲಿ
ವಶೈಃ  ಚ =ಕಾಮನೆಗಳಿಂದ
ಮಕ್ಷೋ = ಬಾರಿಬಾರಿ
ಜರಂತೇ = ಜನರು ಅರ್ಚಿಸುತ್ತಾರೆ

ಭಾವಾರ್ಥ
ಭಗವಂತನ ಐಶ್ವರ್ಯವು ಎಲ್ಲರಿಗೂ ಆಹ್ಲಾದವನ್ನು ಉಂಟುಮಾಡುವಂತಹದಾಗಿದೆ. ಅಂತಹ ಐಶ್ವರ್ಯವು ಎಲ್ಲರಿಗೂ ಶೀಘ್ರವಾಗಿ ದೊರಕಲಿ. ಆಗ ಅನೇಕವಿಧವಾದ ಕಾಮನೆಗಳಿಂದ ಕೂಡಿದ ಜನರು ಭಗವಂತನನ್ನು ಸ್ತುತಿಸುತ್ತಾರೆ.
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು ಎಂಬುದನ್ನು ಈ ಹಿಂದಿನ ಮಂತ್ರವು ತಿಳಿಸಿದರೆ ಈ ಮಂತ್ರವಾದರೂ ಅದರ ಉಪಯೋಗ ಮತ್ತು ಹಂಚಿಕೆಯ ಬಗ್ಗೆ ತಿಳಿಸುತ್ತದೆ. ನಮ್ಮನ್ನು ಆಳುವವರಿಗೆ ಸರಿಯಾದ ಮಾರ್ಗದರ್ಶನವಲ್ಲವೇ ಈ ಮಂತ್ರ?  ಜನರಿಗೆ ಹಲವು ಕಾಮನೆಗಳಿರುತ್ತವೆ, ಅಲ್ಲವೇ! ಅದನ್ನು ಭಗವಂತನೇ ನೇರವಾಗಿ ಪೂರೈಸಲು ಸಾಧ್ಯವೇನು? ಪ್ರಜೆಗಳ ಅವಶ್ಯಕತೆಗೆ ಮತ್ತು ಅರ್ಹತೆಗೆ ತಕ್ಕಂತೆ ದೇಶದ ಸಂಪತ್ತು ಅವರಿಗೆ ಪ್ರಾಪ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂಬುದು ವೇದದ ಆದೇಶ.
ಗಣೆಶಸೂಕ್ತಗಳನ್ನು ಗಟ್ಟಿಯಾಗಿ ನಮ್ಮ ಸಂತೋಶಕ್ಕೆ ಹೇಳಿದರೆ ಸಾಲದು. ಅದರ ಅರ್ಥವನ್ನು   ತಿಳಿದುಕೊಂಡು ಅದರಂತೆ ನಡೆದಾಗ ಸಾರ್ಥಕವಾಗುತ್ತದೆ.
----------------------------------------------------------------------------------------

ಇದೆಲ್ಲಾ ಓದಿದಮೇಲೆ ಹೇಳಿ " ನಾವು ಸ್ಲಮ್ ಏರಿಯಾ ಗೆ ಹೋಗಿ ನಮ್ಮ ಮಕ್ಕಳ ಹುಟ್ಟುಹಬ್ಬ ಆಚರಿಸಿ ಬಂದೆವೆಂದು "  ಸಂತೋಷ ಪಡ್ತೀವಲ್ಲಾ! ಅದರ ಇನ್ನೊಂದು ಮುಖ ಹೇಳುತ್ತೆ " ಎಷ್ಟೊಂದು ಜನ ಬದುಕಲು ಆಶ್ರಯ ಇಲ್ಲದೆ ನರಳುತ್ತಿದ್ದಾರೆಂದು"ಅಲ್ಲವೇ? ದೇಶದಲ್ಲಿರುವ ಇಂತಾ ಅವಸ್ತೆಯನ್ನು ಉಳಿಸಿಕೊಂಡು ,ಆಗಿಂದಾಗ್ಗೆ  ಅಲ್ಲಿ ಹೋಗಿ ಸಂತೋಷ ಹಂಚಿಕೊಳ್ಳಬೇಕೋ? ಅಥವಾ ಇಂತಾ ಪರಿಸ್ಥಿತಿಯೇ ಇರದಂತಾ ಯೋಜನೆಗಲನ್ನು ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೇಕೋ!  ನಮ್ಮ ಜವಾಬ್ದಾರಿ ಏನು?

ಅದೆಲ್ಲಾ ಸರ್ಕಾರ ಮಾಡುತ್ತೆ. ನಮ್ಮ ಜವಾಬ್ದಾರಿ ಅಲ್ಲಾ,ಅನ್ನೋ ಮಾತೂ ಸರಿ ಇರಬಹುದು. ಸರ್ಕಾರ ಅಂದರೆ ಯಾರು? ನಾವೇ ಆರಿಸಿದ್ದು ತಾನೇ? ನಾವೇ ಅದರ ಮೇಲೆ ಒತ್ತದ ಹಾಕಬೇಕಲ್ಲವೇ?  ಈ ನನ್ನ ಪ್ರಯತ್ನವೂ ಅದರ ಒಂದು ಭಾಗವೇ, ಆಗಿದೆ. ಈ ವಿಚಾರವನ್ನು ನಮ್ಮ ನಮ್ಮ ಶಾಸಕರಿಗೆ ಪತ್ರ ಬರೆದು ಯಾಕೆ ಒಂದು Face book ಮೂಲಕವೇ ಒಂದು ಆಂದೋಲನ ಮಾದಬಾರದು. ಇನ್ನೂ ಒಂದು ದಾರಿ ಈಗ ತೆರೆದಿದೆ. Change.org  ಮೂಲಕ ಕೋರ್ಟ್ ಗೆ ಅರ್ಜಿ ಹಾಕಿ ಸಾವಿರಾರು ಜನರ ಸಹಿ ಪಡೆದು ಒತ್ತಾಯಿಸುವ ಪ್ರಕ್ರಿಯೆ ಒಂದಿದೆ. ಕಾನೂನು ತಜ್ಞರು ಆ ಪ್ರಯತ್ನವನ್ನೂ ಮಾಡಬಹುದು ಅಲ್ಲವೇ?

Monday, March 30, 2015

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು - ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (28.3.2015) 118ವಸಂತಗಳನ್ನು ಕಂಡು 119ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ  ಇತಿಹಾಸದ ನೈಜ ಜೀವಂತ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು. ಹಾಸನದ ವೇದಭಾರತಿ ಅವರ ವಿಚಾರಗಳನ್ನು ಅನುಷ್ಠಾನಗೊಳಿಸುವತ್ತ ಪುಟ್ಟದಾದರೂ ದಿಟ್ಟ ಹೆಜ್ಜೆಯನ್ನಿಟ್ಟಿದೆ.
-ಕ.ವೆಂ.ನಾಗರಾಜ್.
**************
ಪಂಡಿತರೊಡನೆ: 
[ಮೂರು ವರ್ಷಗಳ ಹಿಂದಿನ ಫೋಟೋ]



Sunday, March 29, 2015

ಜೀವನವೇದ-2


ಸಂಮೃದ್ಧ ಮನೆ :                                                  
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣವೇದದ ೭ನೇ ಕಾಂಡ ೬೦ನೇ ಸೂಕ್ತ ೨ನೇ ಮಂತ್ರ]

 ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು, ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು. ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು. ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.
ಇಂದಿನ ಕಾಲಕ್ಕೆ ನಾವು ಈ ವೇದಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಸಂಮೃದ್ಧವಾದ ಮನೆ ಅಂದರೆ ಮನೆಯ ಯಜಮಾನನು ಸತ್ಯಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಿರಬೇಕು. ಆ ಸಂಪತ್ತಿನಿಂದ ಮನೆಗೆ ಬಂದ ಅತಿಥಿಗಳ ಸತ್ಕಾರವು ಚೆನ್ನಾಗಿ ನಡೆಯುತ್ತಿರಬೇಕು. ಅದು ಸುಸಂಕೃತ ಮನೆಯಾಗಿದ್ದು  ಮನೆಯಲ್ಲಿ ಯಾವಾಗಲೂ ಸಂತಸದ ವಾತಾವರಣ ನೆಲಸಿರಬೇಕು.‘

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ವಸುವನಿಃ ಸುಮೇಧಾ ಅಘೋರೇಣ ಚಕ್ಷುಷಾ ಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ  ರಮಧ್ವಂ ಮಾ ಬಿಭೀತ ಮತ್||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು, ಮೇಧಾವಂತನಾಗಿರಬೇಕು, ಮನೆಯ ಸದಸ್ಯರೊಡನೆ ಕ್ರೋಧರಹಿತನೂ, ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ, ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜಂ ಬಿಭ್ರತ್ :

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು. ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರವಾದ ಪ್ರೇಮಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .
ವಸುವನೀ
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ.
ಯಜುರ್ವೇದದ ೪೦ನೇ ಅಧ್ಯಾಯದ ೧೬ ನೇ ಮಂತ್ರದಲ್ಲಿ ಸಂಪತ್ತನ್ನು ಯಾವ ಮಾರ್ಗದಲ್ಲಿ ಗಳಿಸಬೇಕೆಂಬುದನ್ನು ತಿಳಿಸುತ್ತದೆ.ಆಮಂತ್ರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೂಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||

ಅರ್ಥ
ದೇವ = ದಿವ್ಯ ಸ್ವರೂಪನೇ
ಅಗ್ನೇ = ಪ್ರಕಾಶಮಯ ಭಗವಾನ್
ತೇ = ನಿನಗೆ
ಭೂಯಿಷ್ಠಾಮ್ = ಅತ್ಯಧಿಕವಾಗಿ
ನಮ ಉಕ್ತಿಂ ವಿಧೇಮ = ಸತ್ಕಾರಪೂರ್ವಕವಾಗಿ ನಮಸ್ಕರಿಸುತ್ತೇವೆ.
ವಿದ್ವಾನ್ = ಸರ್ವಜ್ಞನಾದ ನೀನು
ಅಸ್ಮತ್ = ನಮ್ಮಿಂದ
ಜುಹುರಾಣಮ್ = ಕುಟಿಲತೆಯನ್ನು
ಏನ: = ಪಾಪವನ್ನು
ಯುಯೋಧಿ = ಬೇರೆ ಮಾಡು
ಅಸ್ಮಾನ್ = ನಮ್ಮನ್ನು
ರಾಯೇ = ಸುಖಕ್ಕಾಗಿ
ಸುಪಥಾ = ಒಳ್ಳೆಯ ಮಾರ್ಗದಲ್ಲಿ ನಡೆಸು
ವಿಶ್ವಾನಿ ವಯುನಾನಿ = ನಮಗೆ ಸಕಲ ಪ್ರಶಸ್ತ ಜ್ಞಾನಗಳನ್ನು
ನಯ: = ಲಭಿಸುವಂತೆ ಮಾಡು

ಈ ಮಂತ್ರದ ಸಾರವೇನು?
ಜ್ಞಾನದಾತನಾದ ಪ್ರಭುವೇ, ನಮ್ಮಿಂದ ಕುಟಿಲತೆಯನ್ನೂ, ಪಾಪಾಚರಣೆಯನ್ನೂ ದೂರಮಾಡು.ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸುವಂತೆಮಾಡು. ನಮ್ಮ ಕಲ್ಯಾಣಕ್ಕಾಗಿ ನಿನಗೆ ಅತ್ಯಧಿಕ ನಮಸ್ಕಾರಗಳನ್ನು ಮಾಡುತ್ತೇನೆ.
ಈ ಮಂತ್ರದಲ್ಲಿ ಒಂದು ಶಬ್ಧಪ್ರಯೋಗವಾಗಿದೆ. ಅದು ರಾಯೇ  ಅಂದರೆ ನಮ್ಮ ಸುಖಕ್ಕಾಗಿ ಸಂಪತ್ತನ್ನು ಗಳಿಸಬೇಕೆಂಬುದೇ ವೇದದ ಆಶಯ. ಆದರೆ ಸಂಪತ್ತನ್ನು ಗಳಿಸುವಾಗ ಸನ್ಮಾರ್ಗದಲ್ಲಿ ಗಳಿಸಲು ದಾರಿಮಾಡಿಕೊಡು, ಎಂಬುದು ದೇವರಲ್ಲಿ  ನಮ್ಮ ಪ್ರಾರ್ಥನೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ  ವೇದವು ಕೇವಲ ವೈರಾಗ್ಯವನ್ನು ಹೇಳುವುದಿಲ್ಲ.ಜೀವನದಲ್ಲಿ ಸುಖವಾಗಿರಿ. ಆದರೆ ಸುಖವಾಗಿರಲು ಅಗತ್ಯವಾದ ಹಣವನ್ನು ಸಂಪಾದಿಸಲು ವಾಮ ಮಾರ್ಗಹಿಡಿಯಬೇಡಿ. ಸನ್ಮಾರ್ಗದಲ್ಲಿ ಧನಾರ್ಜನೆ ಮಾಡಿ, ಜೀವನದಲ್ಲಿ ಸುಖವಾಗಿರಿ, ಎಂಬುದು ವೇದದ ಆಶಯ.
ಹಣವನ್ನು ಹೇಗೆ ಸಂಪಾದಿಸಬೇಕು? ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ ಎನ್ನುತ್ತದೆ ಮತ್ತೊಂದು ಸುಭಾಷಿತ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ.ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ?

Saturday, March 28, 2015

ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು

ಯುವ ಮಿತ್ರರು ಕೆಲವರು ಎಲ್ಲೆಲ್ಲೋ ಹುಡುಕಿ ವೇದಕ್ಕೆ ಅಪಚಾರವಾಗುವ ಸಂಗತಿಗಳನ್ನು ತಮ್ಮ ಬರಹಗಳಲ್ಲಿ ಕೋಟ್ ಮಾಡುತ್ತಿದ್ದಾರೆ. ಅವರಿಗೆ ಪುಷ್ಠಿ ಕೊಡುವ ವಿಚಾರ ಎಂದರೆ ಆ ಮಾತು ವಿವೇಕಾನಂದರೇ ಹೇಳಿದ್ದು, ಶಂಕರಾಚಾರ್ಯರೇ ಹೇಳಿದ್ದು .ಅಂತಾ ಮಹಾಮಹಿಮರೇ ಹೇಳಿದಮೇಲೆ ವೇದವು ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ, ವೇದದಲ್ಲಿ ಅಸಮಾನತೆಗೆ ಅವಕಾಶವಿದೆ.....ಹೀಗೆಲ್ಲಾ ಬರೆಯುತ್ತಿದ್ದಾರೆ. ಅಂತಾ ಮಿತ್ರರಲ್ಲಿ ನನ್ನದು ಒಂದು ಪ್ರಶ್ನೆ ಇದೆ. ಯಾಕೆ ನಿಮಗೆ ವೇದದಲ್ಲಿ ಸದ್ವಿಚಾರಗಳು ಕಾಣಲೇ ಇಲ್ಲವೇ?-ಇದು ಮೊದಲನೆಯದು. ಎರಡನೆಯದೆಂದರೆ ಒಂದು ವೇಳೆ  ವೇದಕ್ಕೆ ಅಪಚಾರವಾಗುವಂತಾ ಸಂಗತಿಗಳು ವೇದಲ್ಲಿವೆ ಎಂದು ಯಾರೇ ಬರೆದಿದ್ದರೂ ಅದು ಸ್ವೀಕಾರಾರ್ಹವಲ್ಲ. ಮೂರನೆಯ ಮತ್ತು ಕಟ್ಟಕಡೆಯ ಸಂಗತಿ ಎಂದರೆ ಮೂಲ ವೇದದಲ್ಲಿ ಇಂತಾ ಮಾನವ ವಿರೋಧಿ ಸಂಗತಿಗಳಿವೆ ಎಂದು ಯಾರಾದರೂ  ಪ್ರೂವ್ ಮಾಡಿದರೆ ಅಂತಾ ವೇದದಿಂದ ಆಗಬೇಕಾದ್ದೇನಿದೆ? ಅದನ್ನು ಅಧ್ಯಯನ ಮಾಡಬೇಕೇಕೇ?

ಮತ್ತೆ ಮತ್ತೆ ಹೇಳುವೆ. ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳು ತಪಸ್ಸು ಮಾಡಿ ಕಂಡುಕೊಂಡ  ಸತ್ಯವೇ ವೇದ. ಅದು ಮಾನವತೆಯನ್ನು ಉಳಿಸಲು, ನೆಮ್ಮದಿಯ ಜೀವನ ಮಾಡಲು, ಸಾಮಾಜಿಕ ಸದ್ಭಾವನೆಗೆ ಇರುವ ಸೂತ್ರಗಳು. ಅದನ್ನು ವಿರೋಧಿಸುವುದೆಂದರೆ ಮಾನವೀಯ ಮೌಲ್ಯಗಳನ್ನು ವಿರೋಧಿಸಿದಂತೆಯೇ. ಯಾರೋ ಸ್ವಾರ್ಥಕ್ಕಾಗಿ ಬರೆದುಕೊಂಡಿರುವ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ,  ಮೇಲು-ಕೀಳು ಭಾವನೆಯನ್ನು ಬಿತ್ತುವ  ಸಾಹಿತ್ಯವನ್ನು ಹುಡುಕಿ ಹುಡುಕಿ ಓದುವಿರೇಕೇ? ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವೇ? ನಾನು ಬರೆದಿರುವ ಪುಸ್ತಕದ ಬಗ್ಗೆ ನಾನೇ ಹೇಳುವುದು ಉಚಿತವಲ್ಲ. ಆದರೂ ಸಾಮಾಜಿಕ ಸದ್ಭಾವನೆಯನ್ನು ಅರಳಿಸುವ ಅದೆಷ್ಟು ಮಂತ್ರಗಳಿವೆ-ಎಂಬುದನ್ನು ನನ್ನ  " ಜೀವನವೇದ " ಪುಸ್ತಕವನ್ನು ಓದಿ, ನಂತರ ಹೇಳಿ.

ನಾನೇನೂ ವೇದವನ್ನು ಅರೆದು ಕುಡಿದಿಲ್ಲ. ಆದರೆ ಮಾನವೀಯ ಮೌಲ್ಯಗಳನ್ನು ಬಿತ್ತುವ ನೂರಾರು ಮಂತ್ರಗಳ ಅರ್ಥವನ್ನು  ಪಂಡಿತ್ ಸುಧಾಕರ ಚತುರ್ವೇದಿಗಳು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ ತಿಳಿದುಕೊಂಡಿದ್ದೇನೆ. ಸಾಮಾಜಿಕ ಸದ್ಭಾವನೆಯನ್ನು ಕಾಪಾಡುವ ಇಂತಾ ವಿಚಾರಗಳನ್ನು ಪಡೆಯುವ ಬದಲು ಯಾರೋ ಸ್ವಾರ್ಥಪರರು ಬರೆದಿರುವ ಮಾನವವಿರೋಧೀ ಅಂಶಗಳನ್ನು ಹುಡುಕುವಿರೇಕೇ?

ವೇದದ ಪರ ವಕಾಲತ್ತು ವಹಿಸುವ ಮಿತ್ರರಲ್ಲೂ ನನ್ನ ನಿವೇದನೆ ಇದೆ. ಅದೇನೆಂದರೆ ಈ ಗೊಂದಲಗಳಿಗೆಲ್ಲಾ ಕಾರಣ ಅರಿವಿನ ಕೊರತೆ, ಅಷ್ಟೆ. ಇದನ್ನು ಯಾವುದೇ ಜಾತಿಯ ಪರ-ವಿರುದ್ಧ ಎಂದು ಭಾವಿಸಬೇಕಾಗಿಲ್ಲ. ವೇದದಲ್ಲಿ ಜಾತಿಯೆಂಬುದೇ ಇಲ್ಲ. ಇಷ್ಟೆಲ್ಲಾ ಗೊಂದಲಕ್ಕೆ ಕೆಲವೇ ಶತಮಾನಗಳಿಂದ ಆಚರಣೆಯಲ್ಲಿರುವ ಜಾತಿ ಪದ್ದತಿಯೇ ಕಾರಣ. ಜಾತಿ-ಜಾತಿ ನಡುವಿನ ದ್ವೇಷವು ಜನರನ್ನು ಹುಚ್ಚರನ್ನಾಗಿಸಿದೆ. ಮಾನವಕೋಟಿ ಒಂದೇ ಎಂಬ ಭಾವನೆ ಇಂದಿನ ಪರಿಸ್ಥಿತಿಯಲ್ಲಿ ಮೂಡುವುದು ಕಷ್ಟವಾದರೂ ವೇದದ ಅಭಿಮಾನಿಗಳು ಜಾತಿ-ಜಾತಿ ನಡುವೆ ಸದ್ಭಾವನೆಯನ್ನು ಅರಳಿಸುವ ಕೆಲಸವನ್ನು ಮಾಡಬೇಕೇ ಹೊರತೂ ಕಂದಕವನ್ನು ಹಿರಿದು ಮಾಡುವ ಕೆಲಸವನ್ನು ಮಾಡಲೇ    ಬಾರದು. ವೇದದ ಅರಿವಿಲ್ಲದಿದ್ದವರಿಗೆ ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು.ಇದಕ್ಕೆ ಬಲು ತಾಳ್ಮೆ ಬೇಕು.