Pages

Thursday, April 23, 2015

ಸಾರ್ಥಕ ಹೊತ್ತು, ಸನ್ಮಿತ್ರನಿಗೆ ಅರವತ್ತು!

 ಜೀವನವೇದ ಪುಸ್ತಕ ಲೋಕಾರ್ಪಣೆಯ ಆ ಕ್ಷಣ!

     ಕಳೆದ ಭಾನುವಾರ ನನ್ನ ದೀರ್ಘಕಾಲದ ಮಿತ್ರ ಶ್ರೀಧರ ೬೦ ವಸಂತಗಳನ್ನು ಕಂಡು ಮುಂದಡಿಯಿಟ್ಟ ದಿನ. ಆ ಸುಸಂದರ್ಭದ ನಿಮಿತ್ತ ಮಿತ್ರನ ಮನೆಯಲ್ಲಿ ಅಗ್ನಿಹೋತ್ರ, ವಿಶೇಷ ಕಾರ್ಯಕಲಾಪಗಳು, ಬಂಧು-ಮಿತ್ರರ ಶುಭ ಹಾರೈಕೆಗಳ ಮೇಳೈಕೆಗಳೊಂದಿಗೆ ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸನ್ಮಾನ್ಯ ಶ್ರೀ ಸು.ರಾಮಣ್ಣನವರ ಆಶೀರ್ವಾದಪೂರ್ವಕ ಸಂದೇಶಸೂಚಕವಾದ ಮಾತುಗಳು, ದೂರವಾಣಿ ಮೂಲಕವೇ ಸಾಂದರ್ಭಿಕವಾಗಿ ಮಾತನಾಡಿದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾತುಗಳು ಶುಭಸಂದರ್ಭವನ್ನು ಮತ್ತಷ್ಟು ಮಹತ್ವಗೊಳಿಸಿದವು. ಸಮ್ಮಿಶ್ರಭಾವದಿಂದ ನನ್ನ ಕಣ್ಣುಗಳಿಂದ ಜಾರಿದ ಒಂದೆರಡು ಹನಿಗಳನ್ನು ಬೇರೆಯವರು ಗಮನಿಸದಂತೆ ಒರೆಸಿಕೊಂಡೆ. ನನ್ನ ಮತ್ತು ಶ್ರೀಧರರ ಗೆಳೆತನ ಸಾಗಿಬಂದ ದಿನಗಳನ್ನು ಮನಸ್ಸು ಮೆಲುಕು ಹಾಕಿತ್ತು.                                                              
     ಅರವತ್ತು ವರ್ಷಗಳು ಜೀವಿಯ ಕಾಲದಲ್ಲಿ ಆತ್ಮಾವಲೋಕನದ ಸಮಯ. ಕಳೆದ ಆ ವರ್ಷಗಳಲ್ಲಿ ಬಾಳಿನಲ್ಲಿ ಕಳೆದುದೆಷ್ಟೋ, ಕೂಡಿದುದೆಷ್ಟೋ, ಗುಣಿಸಿದೆಷ್ಟೋ ಮತ್ತು ಭಾಗಿಸಿದದೆಷ್ಟೋ ಎಲ್ಲ ಲೆಕ್ಕವನ್ನೂ ಮಾಡಿದ ನಂತರ ಉಳಿವ ಶೇಷವೇ ಆ ಸಮಯದ ಬದುಕಿನ ಸ್ಥಿತಿ! ನನ್ನ ಸನ್ಮಿತ್ರನ ಈಗಿನ ಸ್ಥಿತಿಯಲ್ಲಿ ಈ ರೀತಿ ಲೆಕ್ಕ ಹಾಕಿದರೆ ಪುಣ್ಯದ ಲೆಕ್ಕದಲ್ಲಿ ಗಣನೀಯ ಶಿಲ್ಕು ಇರುವುದು ಗೋಚರವಾಗದೇ ಇರದು. ಧನ್ಯತೆ ಮತ್ತು ಮಾನ್ಯತೆ ಎರಡನ್ನೂ ಗಳಿಸಿಕೊಂಡಿರುವುದಕ್ಕೆ ಪೂರ್ವಾರ್ಜಿತ ಕರ್ಮ ಮತ್ತು ಈಗ ಮಾಡಿರುವ ಸುಕರ್ಮಗಳ ಫಲಗಳೇ ಕಾರಣವೆಂದರೆ ತಪ್ಪಿಲ್ಲ.

ವೇದಭಾರತಿಯ ತಂಡದ ಸಹಕಾರದೊಡನೆ ವಿಶೇಷ ಅಗ್ನಿಹೋತ್ರ

     ಇದು ವಾನಪ್ರಸ್ಥಾಶ್ರಮದ ಸಮಯ. ವಾನಪ್ರಸ್ಥವೆಂದರೆ ಜನರಿಂದ ದೂರವಾಗಿ ಬಾಳುವುದಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು ತಾನು ತಾನಾಗಿರಬೇಕು, ಅರ್ಥಾತ್ ತನಗಾಗಿ ಬಾಳಬೇಕು. ತನಗಾಗಿ ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ನನ್ನ ಮಿತ್ರನ ಸದ್ಯದ ಗುರಿಯೆಂದರೆ ವೇದದ ಕುರಿತು ಪ್ರಚಾರ, ಪ್ರಸಾರದಲ್ಲಿ ತೊಡಗುವುದು, ಅಗ್ನಿಹೋತ್ರವನ್ನು ಜನಪ್ರಿಯಗೊಳಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ಇತರರನ್ನೂ ಆ ದಿಸೆಯಲ್ಲಿ ಪ್ರೇರಿಸುವುದು. ಆತ ಸಾಗುತ್ತಿರುವ ರೀತಿಯಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಕಾಣುತ್ತಿದೆ. ಯಶಸ್ವಿಯೂ ಆಗಲಿ ಎಂಬುದು ಮನದಾಳದ ಹಾರೈಕೆ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ


     ೧೯೭೦ರ ದಶಕದ ಸಮಯದಲ್ಲಿ ಶ್ರೀಧರರ ಪರಿಚಯವಾದಾಗ ಆತ ಇನ್ನೂ ಐ.ಟಿ.ಐ. ಓದುತ್ತಿದ್ದ ವಿದ್ಯಾರ್ಥಿ. ನಾನು ಆಗಿನ್ನೂ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ನಾನು ಜಿಲ್ಲಾ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ. ಇಬ್ಬರೂ ಸಂಘದ ಕಾರ್ಯಕರ್ತರಾದ್ದರಿಂದ ಪರಿಚಯ ಸಹಜವಾಗಿ ಆಗಿತ್ತು. ೧೯೭೩ರಲ್ಲಿ ಶ್ರೀಧರ್ ಸಂಘದ ಕಾರ್ಯಾಲಯದಲ್ಲಿ ಇದ್ದುಕೊಂಡು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಆತ ವಾಣಿವಿಲಾಸ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ಶೈಲೇಂದ್ರ ಸಾಯಂಶಾಖೆಯ ಮುಖ್ಯಶಿಕ್ಷಕನಾಗಿದ್ದರೆ, ನಾನು ಭಾಗ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹನಾಗಿ ಜವಾಬ್ದಾರಿ ಹೊಂದಿದ್ದೆ. ಚ.ವಾಸುದೇವ್ ಜಿಲ್ಲಾ ಪ್ರಚಾರಕ್, ಬಿ.ಎನ್.ಹರಿಪ್ರಸಾದ್ (ಈಗಿನ ಬೆಂಗಳೂರಿನ ಜನಪ್ರಿಯ ಶಾಸಕರಾದ ಬಿ.ಎನ್.ವಿಜಯಕುಮಾರರ ತಮ್ಮ) ನಗರ ಪ್ರಚಾರಕ್, ಎ.ವಿ. ಚಂದ್ರಶೇಖರ್ (ಈಗ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು) ವಿಸ್ತಾರಕ್ ಮತ್ತು ಸು.ರಾಮಣ್ಣನವರು ಮೈಸೂರು ವಿಭಾಗ ಪ್ರಚಾರಕರಾಗಿದ್ದ ಸಮಯವದು. ಹೊ.ವೆ.ಶೇಷಾದ್ರಿಯವರು ಪ್ರಾಂತ ಪ್ರಚಾರಕರಾಗಿದ್ದರು. ನಾನು ಪ್ರತಿನಿತ್ಯ ನನ್ನ ವ್ಯಾಪ್ತಿಯಲ್ಲಿನ ಒಂದೊಂದು ಶಾಖೆಗೆ ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆಗೂ ವಾರಕ್ಕೆ ಎರಡು-ಮೂರು ದಿನಗಳು ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಉತ್ತಮದ್ದಾಗಿತ್ತು. ಅವರು ಬಾಲ ಸ್ವಯಂಸೇವಕರೊಂದಿಗೆ ಬೆರೆಯುತ್ತಿದ್ದ ರೀತಿ, ಆಟವಾಡಿಸುತ್ತಿದ್ದ ಶೈಲಿ, ಗಟ್ಟಿ ಕಂಠದಲ್ಲಿ ಹೇಳಿಕೊಡುತ್ತಿದ್ದ ದೇಶಭಕ್ತಿಗೀತೆಗಳು, ಶಾಖೆಗೆ ಬಾರದಿದ್ದ ಬಾಲಕರ ಮನೆಗಳಿಗೆ ಹೋಗಿ ಅವರನ್ನು ಮಾತನಾಡಿಸುತ್ತಿದ್ದುದು, ಮುಂತಾದವು ಹೊಸ ಹೊಸ ಬಾಲಕರನ್ನು ಶಾಖೆಯೆಡೆಗೆ ಸೆಳಯುತ್ತಿದ್ದವು. ಶ್ರೀಧರರ ಇಂದಿನ ಕಾರ್ಯಕ್ಷಮತೆ, ಸಂಘಟನಾಚತುರತೆ, ವಾಕ್ಪಟುತ್ವಗಳಿಗೆ ಅವರು ಶೈಲೇಂದ್ರ ಶಾಖೆಯ ಮುಖ್ಯಶಿಕ್ಷಕನಾಗಿದ್ದುದು, ಮೇಲೆ ತಿಳಿಸಿದ ಮಹನೀಯರ ಮಾರ್ಗದರ್ಶನ, ಜೊತೆಯಲ್ಲಿದ್ದ ಸಮರ್ಥ ಸಂಘದ ಕಾರ್ಯಕರ್ತರ ಸಹವಾಸ, ಬಡತನದ ಕಷ್ಟ-ನಷ್ಟಗಳ ಅರಿವುಗಳು ಗಟ್ಟಿ ತಳಹದಿ ಹಾಕಿತ್ತೆಂಬುದರಲ್ಲಿ ಅನುಮಾನವೇ ಇಲ್ಲ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ

     ಅಧಿಕಾರದಾಹದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಜನತೆಯ ಮೇಲೆ ಹೇರಿದ್ದ ೧೯೭೫-೭೭ರ ತುರ್ತುಪರಿಸ್ಥಿತಿ ದೇಶವನ್ನು ಸರ್ವಾಧಿಕಾರಕ್ಕೆ ದೂಡಿತ್ತು. ವಿರೋಧಿಗಳನ್ನೆಲ್ಲಾ ಜೈಲುಪಾಲಾಗಿಸಿದ್ದರು. ಪತ್ರಿಕಾ ಮತ್ತು ಇತರ ಮಾಧ್ಯಮಗಳಿಗೆ ದಿಗ್ಬಂಧನ, ರಾ.ಸ್ವ.ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ನಿಷೇಧ ದೇಶದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ತಂದಿತ್ತು. ಆ ಅವಧಿ ನನ್ನ ಪಾಲಿಗೂ ಕರಾಳ ಅವಧಿಯಾಗಿತ್ತು. ನಾನೂ ಸೇರಿದಂತೆ ಹಲವರನ್ನು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಅಟ್ಟಿದ್ದರು. ನನ್ನ ನೌಕರಿ ಹೋಗಿತ್ತು. ಸುಮಾರು ಆರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿ ಕಳೆದಿದ್ದೆ. ಶ್ರೀಧರ್ ಆ ಸಮಯದಲ್ಲಿ ೧೯೭೪ರಿಂದ೭೭ರವರೆಗೆ ಬೆಂಗಳೂರಿನಲ್ಲಿದ್ದು ತುರ್ತುಪರಿಸ್ಥಿತಿ ಅವಧಿಯಲ್ಲಿ ಭೂಗತನಾಗಿ ತುರ್ತುಪರಿಸ್ಥಿತಿ ವಿರುದ್ಧ ಜನರನ್ನು ಜಾಗೃತಗೊಳಿಸುವ ಕಹಳೆ ಪತ್ರಿಕೆಯ ವಿವಿದೆಡೆಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ತೆರೆಮರೆಯ ಈ ಕೆಲಸ ಅತ್ಯಂತ ಮಹತ್ವದ್ದು ಮತ್ತು ಅಪಾಯಕಾರಿಯಾಗಿದ್ದುದಾಗಿತ್ತು. ಹಲವು ಸಲ ಚಾಣಾಕ್ಷತೆಯಿಂದ ಪೋಲಿಸರ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡಿದ್ದರು. ಆ ಕರಾಳ ಅವಧಿ ನೂರಾರು ಸ್ವಯಂಸೇವಕರ ಜೀವನವನ್ನೇ, ಸಂಸಾರಗಳನ್ನೇ ನಾಶ ಮಾಡಿತ್ತು. ಸಂಘದ ದಿಟ್ಟ ಹೋರಾಟದಿಂದ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದ್ದು ಈಗ ಇತಿಹಾಸ.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕನಾಗಿ
     ೧೯೭೭ರಿಂದ ೭೯ರವರೆಗೆ ಕೆಜಿಎಫ್ ನಲ್ಲಿದ್ದ ಶ್ರೀಧರ್ ೧೯೭೯ರಲ್ಲಿ ಹಾಸನ ಜಿಲ್ಲೆಗೆ ಬಂದವರು ತದನಂತರದಲ್ಲಿ ಹಾಸನ ಜಿಲ್ಲೆಯಲ್ಲಿಯೇ ಕೆಲಸ ಮಾಡಿದರು. ನನ್ನ ಮತ್ತು ಶ್ರೀಧರರ ಮರುಭೇಟಿ ೧೯೮೦ರ ದಶಕದ ಆರಂಭದ ವರ್ಷಗಳಲ್ಲಿ ಹೊಳೆನರಸಿಪುರದಲ್ಲಾಯಿತು. ನಾನು ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಹೋದಾಗ ಅವರು ಕೆ.ಇ.ಬಿ. ನೌಕರರಾಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಸಂಘದ, ವಿಶ್ವಹಿಂದು ಪರಿಷತ್ತಿನ ಅನೇಕ ಚಟುವಟಿಕಗಳಲ್ಲಿ ಇಬ್ಬರೂ ಸಕ್ರಿಯವಾಗಿ ತಡಗಿಸಿಕೊಂಡಿದ್ದೆವು. ನಾನು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಮತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ಆಗಿದ್ದರಿಂದ ಆ ಸಂಘಗಳ ಮೂಲಕವೂ ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ಅವಕಾಶವಾಗಿತ್ತು. ಅಂತಹ ಚಟುವಟಿಕೆಗಳಿಗೆ ಶ್ರೀಧರರ ಸಕ್ರಿಯ ಸಹಕಾರ ಲಭಿಸುತ್ತಿತ್ತು. ಅಲ್ಲಿಂದ ನನಗೆ ವರ್ಗಾವಣೆಯಾದಾಗ ಮತ್ತೆ ಬೇರ್ಪಟ್ಟೆವು.
ಸಂಸ್ಕೃತ ಸಮ್ಮೇಳನದಲ್ಲಿ ಸಮ್ಮೇಳನ ಸಂಯೋಜಕನಾಗಿ


     ಸಕಲೇಶಪುರ, ಬೇಲೂರು, ಮಂಗಳೂರು ಜಿಲ್ಲೆಯ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿ ಹಾಸನಕ್ಕೆ ೧೯೯೧-೯೨ರಲ್ಲಿ ವರ್ಗ ಮಾಡಿಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯ ಮಾಡಲು ಬಂದಾಗ ಶ್ರೀಧರ್ ಸಹ ಹಾಸನದಲ್ಲಿದ್ದರು. ನಾನು ಶಾಂತಿನಗರದ ಸ್ವಂತ ಮನೆಯಲ್ಲಿದ್ದರೆ, ಅವರೂ ಶಾಂತಿನಗರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶ್ರೀಧರ್ ಆಗ ವಿಶ್ವಹಿಂದುಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾಗಿದ್ದರು.ಅದೇ ಸಮಯದಲ್ಲಿ  ಶ್ರೀರಾಮಜನ್ಮಭೂಮಿಮುಕ್ತಿ ಹೋರಾಟ ಆರಂಭವಾಗಿ  ವಿಶ್ವಹಿಂದು ಪರಿಷತ್ತಿನ ಮೇಲೆ ಸರ್ಕಾರವು ನಿಶೇಧವನ್ನು ಹೇರಿದ್ದರಿಂದ ವಿಶ್ವಹಿಂದು ಪರಿಷತ್ತಿನ ಹೆಸರಲ್ಲಿ ಚಟುವಟಿಕೆ ನಡೆಸುವಂತಿರಲಿಲ್ಲ. ಆಗ ರೂಪುಗೊಂಡಿದ್ದೇ ಮನೆ-ಮನೆ ಭಜನೆ ಕಾರ್ಯಕ್ರಮ. ಶ್ರೀಧರ್, ನಾನು, ವಿಶ್ವೇಶ್ವರಯ್ಯ (ಈಗ ಮೈಸೂರಿನಲ್ಲಿದ್ದಾರೆ) ಮತ್ತು ಉಪೇಂದ್ರ (ಈಗ ಚಿಕ್ಕಮಗಳೂರಿನಲ್ಲಿ) ನಾವು ನಾಲ್ವರು ಮಾತನಾಡಿಕೊಂಡು ಪ್ರತಿ ಶನಿವಾರ ಒಂದೊಂದು ಮನೆಯಲ್ಲಿ ಸಾಮೂಹಿಕ ಭಜನೆ ನಡೆಸುವುದೆಂದು ತೀರ್ಮಾನಿಸಿ ಆರಂಭಿಸಿಯೇ ಬಿಟ್ಟೆವು. ಸಾಯಂಕಾಲ ೭ರಿಂದ ೭.೪೫ರವರೆಗೆ ಭಜನೆ, ೧೦ ನಿಮಿಷಗಳ ಕಾಲ ಸಾಮಯಿಕ ಮಹತ್ವದ ವಿಷಯದ ಕುರಿತು ಯಾರಾದರೂ ಒಬ್ಬರ ಮಾತು, ನಂತರ ಮಂಗಳಾರತಿ (ಯಾರ ಮನೆಯಲ್ಲಿ ಭಜನೆ ನಡೆಯುತ್ತಿತ್ತೋ ಆ ಮನೆಯವರು ಪೂಜಿಸುವ ದೇವರಿಗೆ), ಜೊತೆಗೆ ಭಾರತಮಾತಾ ನಮನವೂ ಇರುತ್ತಿತ್ತು. ಪ್ರಸಾದ ವಿನಿಯೋಗದೊಂದಿಗೆ ೮ರ ವೇಳೆಗೆ ಕಾರ್ಯಕ್ರಮ ಮುಗಿಯುತ್ತಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮ ಶಾಂತಿನಗರ ಮತ್ತು ಹೇಮಾವತಿನಗರದ  ಅನೇಕರ ಮನೆಗಳಲ್ಲಿ ನಡೆದು, ಪರಸ್ಪರರಲ್ಲಿ ಸೌಹಾರ್ದತೆ, ಬಡಾವಣೆಯವರೆಲ್ಲಾ ಒಂದೇ ಕುಟುಂಬದವರು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಫಲವಾಗಿ ಅಂಚೆ-ತಂತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಾವುಗಳೇ ರಾಮನವಮಿ ಉತ್ಸವವನ್ನು ಸುಮಾರು ೧೦ ವರ್ಷಗಳವರೆಗೆ ವಿಜೃಂಭಣೆಯಿಂದ ಮಾಡಿದ್ದೆವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಡ್ಡ ಮೆರವಣಿಗೆಗಳು ನಡೆಯುತ್ತಿದ್ದವು. ನಂತರದಲ್ಲಿ ಶ್ರೀಧರ್ ಸ್ವಂತ ಮನೆ ಈಶಾವಾಸ್ಯಮ್ವಾಸಿಯಾದರೆ ನಾನು ವರ್ಗಾವಣೆಯಾಗಿ ಬೇರೆ ಜಿಲ್ಲೆಗಳಲ್ಲಿ ಸುತ್ತುತ್ತಿದ್ದುದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತು. ಶ್ರೀಧರ್ ಅರಸಿಕೆರೆಯ ತಾಲ್ಲೂಕು ಸಹಕಾರ್ಯವಾಹ ಮತ್ತು ನಂತರದಲ್ಲಿ ಜಿಲ್ಲಾಸಹಕಾರ್ಯವಾಹರಾಗಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಗಣನೀಯ ಕಾರ್ಯ ಮಾಡಿದ್ದಾರೆ. ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ನಾನು ಈ ಸಂಸ್ಥೆಯ ಸಂಯೋಜಕರಾಗಿದ್ದರೆ, ಡಾ. ಗುರುರಾಜ ಹೆಬ್ಬಾರ್ ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್ ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್ ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯ ಖಜಾಂಚಿಯಾಗಿದ್ದರೆ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್‌ರವರು ಇದ್ದರು. ಆ ಸಮಯದಲ್ಲಿ ಶ್ರೀಧರ್ ಸಂಘದ ಜಿಲ್ಲಾ ಸೇವಾಪ್ರಮುಖ್ ಆಗಿ ಜವಾಬ್ದಾರಿ ಹೊಂದಿದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಮಾತ್ರ. ಇದು ವಾಸ್ತವ ಸಂಗತಿ. ಈ ಮೂವರ ತಂಡವನ್ನು  ಸೇವಾ ಆಟೋ ಎಂದು ಸ್ನೇಹಿತರು ಹಾಸ್ಯ ಮಾಡುತ್ತಿದ್ದರು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಸಾಗುತ್ತಿರಲಿಲ್ಲ. ಈ ಆಟೋದ ಎಂಜಿನ್ ಹೆಬ್ಬಾರರಾಗಿದ್ದರು. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾಗರಾಜ್ ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ನಡೆಯುತ್ತಿದ್ದ ಸೇವಾಚಟುವಟಿಕೆಗಳನ್ನು ಮುಂದುವರೆಸಲಾಗಿರಲಿಲ್ಲ. ಸೇವಾಭಾರತಿಯಿಂದ ಹಾಸನದ ಅಂಬೇಡ್ಕರ್ ನಗರ ಮತ್ತು ಸಿದ್ದಯ್ಯನಗರಗಳ ವ್ಯಾಪ್ತಿಯಲ್ಲಿ ೮ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನಿಗಳ ವಿವರ ಸಂಗ್ರಹಿಸಿ ರಕ್ತದಾನ ಮಾಡುವ ವ್ಯವಸ್ಥೆ, ಸೇವಾದಿನದ ಆಚರಣೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಸ್ವದೇಶಿ ಜಾಗರಣ ಆಂದೋಲನ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಂತಿನಗರ ಬಡಾವಣೆಯಲ್ಲಿ ಪಾರ್ಥೇನಿಯಂ ನಿರ್ಮೂಲನಾ ಕಾರ್ಯದ ಜೊತೆಗೆ ವಿನೂತನ ರೀತಿಯ ರಕ್ಷಾಬಂಧನ ಕಾರ್ಯಕ್ರಮ, ಇತ್ಯಾದಿ ಚಟುವಟಿಕೆಗಳು ಸುಮಾರು ನಾಲ್ಕು ವರ್ಷಗಳವರೆಗೆ ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ನಾನು ತಹಸೀಲ್ದಾರನಾಗಿ ಮಂಗಳೂರಿಗೆ, ಲಕ್ಷ್ಮಣ್ ಮೈಸೂರಿಗೆ ವರ್ಗವಾಗಿ ಹೋದನಂತರದಲ್ಲಿ ಸೇವಾಭಾರತಿ ಚಟುವಟಿಕೆ ಸ್ತಬ್ಧವಾಯಿತು. ಈಗಲೂ ಯಾರಾದರೂ ತರುಣರು ಈ ಕಾರ್ಯ ಮುಂದುವರೆಸಲು ಮುಂದೆ ಬಂದಲ್ಲಿ ನನ್ನ ಮತ್ತು ಶ್ರೀಧರರ ಕ್ರಿಯಾತ್ಮಕ ಸಹಕಾರ ಸಿಗಲಿದೆ.
     ನಂತರದ ಮತ್ತು ಈಗಿನ ಚಟುವಟಿಕೆಗಳು ವೇದಭಾರತಿಯ ಯಶೋಗಾಥೆಯದು. ಶಿಕಾರಿಪುರ ಮತ್ತು ಶಿವಮೊಗ್ಗಗಳಲ್ಲಿ ಕಾರ್ಯ ನಿರ್ವಹಿಸಿ ೨೦೦೯ರ ಡಿಸೆಂಬರಿನಲ್ಲಿ ಸ್ವಯಂ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ಶ್ರೀಧರ್ ಸಹ ಒಂದೆರಡು ವರ್ಷಗಳ ನಂತರ ಸ್ವಯಂ ನಿವೃತ್ತಿ ತೆಗೆದುಕೊಂಡರು. ವೇದಸುಧೆ ಅಂತರ್ಜಾಲದ ಬ್ಲಾಗ್ ಅನ್ನು ಶ್ರೀಧರ್ ತೆರೆದರು. ನನ್ನನ್ನು ಗೌರವ ಸಂಪಾದಕರಾಗಿರಲು ಮತ್ತು ಲೇಖನಗಳನ್ನು ಬರೆಯಲು ಕೋರಿದರು. ಈ ಬ್ಲಾಗ್ ಎಷ್ಟು ಜನಪ್ರಿಯವಾಯಿತೆಂದರೆ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ಇದು ಕಂಡಿದೆ. ಬ್ಲಾಗಿನ ವಾರ್ಷಿಕೋತ್ಸವವನ್ನೂ ಆಚರಿಸಿದೆವು. ಶ್ರೀಧರ್ ಮತ್ತು ನನ್ನ ತಮ್ಮನ ಒತ್ತಾಯದ ಮೇರೆಗೆ ನನ್ನ ಮೂಢ ಉವಾಚ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ವಿವರಗಳು ಪ್ರಚುರವಾಗುತ್ತಲೇ ಇರುವುದರಿಂದ ಇಲ್ಲಿ ಪುನಃ ಅ ಬಗ್ಗೆ ವಿವರಿಸಹೋಗುವದಿಲ್ಲ. ತಮ್ಮ ಮನೆಯ ಹಾಲ್ ಅನ್ನೇ ಈ ಚಟುವಟಿಕೆಗಳಿಗೆ ಮೀಸಲಿಟ್ಟು ವೇದಭಾರತಿಯ ಬೆನ್ನೆಲುಬಾಗಿರುವ ಶ್ರೀಧರರಿಗೆ ಸಕ್ರಿಯ ಸಹಕಾರ, ಬೆಂಬಲಗಳನ್ನು ವೇದಭಾರತಿ ಕಾರ್ಯಕರ್ತರು ಹೀಗೆಯೇ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಲಿ ಎಂದು ಹಾರೈಸುವೆ.
      ಹಾಸನದಲ್ಲಿ ನಡೆದ ನಮ್ಮ ಕೆಳದಿ ಕವಿಮನೆತನದವರ ವಾರ್ಷಿಕ ಸಮಾವೇಶದಲ್ಲಿ ಅದು ತಮ್ಮದೇ ಕೆಲಸವೆಂಬಂತೆ ನನ್ನ ಹೆಗಲಿಗೆ ಹೆಗಲಾಗಿ ಶ್ರಮಿಸಿದ ಶ್ರೀಧರರಿಗೆ ನಾನು ಕೃತಜ್ಞ. ಜಿಲ್ಲಾ ಸಂಸ್ಕೃತ ಸಮ್ಮೇಳನದ ಬಗ್ಗೆ ಹೇಳಲೇಬೇಕು. ಸಮ್ಮೇಳನದ ಸಂಯೋಜಕರಾಗಿ ಸಮ್ಮೇಳನವು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಡೆದ ಸಮ್ಮೇಳನಗಳಿಗಿಂತ ಅತ್ಯದ್ಭುತವಾಗಿ ಯಶಸ್ವಿಗೊಳಿಸಲು ಶ್ರೀಧರ್ ವಹಿಸಿದ ಶ್ರಮ ಅಭಿನಂದನೀಯ. ಅವರ ಸಂಘಟನಾ ಚತುರತೆ ಇಲ್ಲಿ ಫಲ ನೀಡಿತು. ಅವರು ಹಾಸನದ ಜನಮಿತ್ರ ಮತ್ತು ಜನಹಿತ ಪತ್ರಿಕೆಗಳಲ್ಲಿ, ವಿಕ್ರಮ ವಾರಪತ್ರಿಕೆಯಲ್ಲಿ ನಿರಂತರವಾಗಿ ವೇದದ ವಿಚಾರಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸಂಗ್ರಹ ಜೀವನವೇದ ನಿಜಕ್ಕೂ ಒಂದು ಅದ್ಭುತ ಕೃತಿಯಾಗಿದ್ದು ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವೂ ಆಗಿ ಜನಪ್ರಿಯವೆನಿಸಿರುವುದು ಹೆಮ್ಮೆಯ ಸಂಗತಿ.
     ಬರೆಯುತ್ತಾ ಹೋದರೆ ಮುಗಿಯಲಾರದು. ಸಂಕ್ಷಿಪ್ತವಾಗಿ ನನ್ನ ಮತ್ತು ಶ್ರೀಧರರ ದಶಕಗಳ ಒಡನಾಟದ ಕೆಲವು ಸಂದರ್ಭಗಳನ್ನು ಸ್ಮರಿಸಿಕೊಂಡಿರುವೆ. ಶ್ರೀಧರರಿಂದ ಇನ್ನೂ ಹೆಚ್ಚು ರಭಸದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇನೆ. ಅವರಿಗೆ ಇನ್ನೂ ಹೆಚ್ಚಿನ ಧನ್ಯತೆ ಮತ್ತು ಮಾನ್ಯತೆ ಎರಡೂ ಸಿಗಲಿ ಎಂದು ಪುನಃ ಹಾರೈಸುತ್ತಾ, ಅವರಿಗೆ ನನ್ನ ಕ್ರಿಯಾತ್ಮಕ ಸಹಕಾರ ಸದಾ ಇರುತ್ತದೆಂದು ತಿಳಿಸುತ್ತಾ ಈ ಕೆಲವು ಸಾಲುಗಳನ್ನು ಅವರ ಅರವತ್ತರ ಸಂದರ್ಭಕ್ಕೆ ಉಡುಗೊರೆಯಾಗಿ ನೀಡಿರುವೆ.

ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ
-ಕ.ವೆಂ.ನಾಗರಾಜ್.


Tuesday, April 21, 2015

ಜೀವನವೇದ-5

ಸದಾ ಮಿತ್ರರಾಗಿ ಬಾಳೋಣ
         
ನಾವು ಸಾಮಾನ್ಯವಾಗಿ ಹೇಳುವ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ

ಓಂ ಸಹ ನಾವವತು ಸಹ ನೌ ಭುನಕ್ತು  ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ|| ಓಂ ಶಾಂತಿಃ ಶಾಂತಿಃ ಶಾಂತಿಃ ||
[ತೈತ್ತಿರೀಯಾರಣ್ಯಕ: ೯.೧]

ಅರ್ಥ :
ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷಣೆಯನ್ನು  ಮಾಡೋಣ
ಸಹ ನೌ ಭುನಕ್ತು = ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು

ಭಾವಾರ್ಥ:

ನಾವೆಲ್ಲರೂ ಪರಸ್ಪರ ರಕ್ಷಣೆ ಮಾಡಿಕೊಳ್ಳೋಣ. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ ಸದಾ ಇರುವಂತಾಗಲಿ.

ಈ ಮಂತ್ರದ ಅರ್ಥವು ಎಷ್ಟು ಸೊಗಸಾಗಿದೆ! ಭಗವಂತಾ, ನನ್ನನ್ನು ಕಾಪಾಡು ಎಂದು ಕೇಳಲಿಲ್ಲ, ಬದಲಿಗೆ ನಮ್ಮನ್ನು ಪರಸ್ಪರ ರಕ್ಷಣೆ ಮಾಡಿಕೊಳ್ಳೋಣವೆಂಬ ಸಂಕಲ್ಪ.ಇಲ್ಲಿ ಸ್ವಾರ್ಥದ ಸುಳಿವೂ ಇಲ್ಲ. ಎಲ್ಲರೂ ಒಟ್ಟಿಗೆ ಆನಂದವನ್ನು ಅನುಭವಿಸೋಣ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ಅಬ್ಭಾ! ಪ್ರಾರ್ಥನೆಯಲ್ಲಿ ಎಂತಹ ವಿಶಾಲ ಮನೋಭಾವ! ನನ್ನೊಬ್ಬನ ತೇಜಸ್ಸನ್ನು ವರ್ಧಿಸೆಂದು ಕೇಳಲಿಲ್ಲ, ಬದಲಿಗೆ ನಮ್ಮೆಲ್ಲರ ತೇಜಸ್ಸು ವರ್ಧಿಸಲಿ!  ನಮ್ಮ ಮಧ್ಯೆ ವಿರೋಧವು ಎಂದಿಗೂ ಬಾರದಿರಲಿ!ನಾವೆಲ್ಲಾ ಸದಾ ಮಿತ್ರರಾಗಿ ಇರುವಂತೆ ಮಾಡು. ಒಂದೊಂದು ಮಾತೂ ಅದ್ಭುತ!

ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಊಟದ ಸಮಯದಲ್ಲಿ ಶಾಂತವಾಗಿ ಕುಳಿತಿರುತ್ತಾರೆ, ಆ ಸಮಯದಲ್ಲಿ ಈ ಮಂತ್ರವನ್ನು ಹೇಳುವುದರಿಂದ ಜನರಿಗೆ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತದೆ ಎಂದು ರೂಢಿಗೆ ಬಂದಿರಬಹುದು. ಆದರೆ ಎಷ್ಟುಜನ ಈ ಮಂತ್ರದ ಅರ್ಥವನ್ನು ತಿಳಿದು ಹೇಳುತ್ತಾರೆ?
ಈ ಮಂತ್ರದ ಅರ್ಥವನ್ನು ತಿಳಿದು ಹೇಳಿದ್ದೇ ಆದರೆ ನಾವು ಅದರಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಕಷ್ಟವೇನಲ್ಲ. ಅರ್ಥವನ್ನು ತಿಳಿದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಾಗ ಮಂತ್ರವು ಸಾರ್ಥಕವಾಗುತ್ತದೆ.

ಅನ್ನದಾತನನ್ನು ರಕ್ಷಿಸು

ಭೋಜನ ಸಮಯಕ್ಕೆಂದೇ ನಮ್ಮ ಋಷಿಮುನಿಗಳು ಮಾಡಿರುವ ಯಜುರ್ವೇದದ ಮಂತ್ರ ಒಂದಿದೆ. ಆ ಮಂತ್ರದ ಬಗ್ಗೆಯೂ ತಿಳಿಯೋಣ.

ಅನ್ನಪತೇನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣ: |
ಪ್ರ ಪ್ರ ದಾತಾರಂ ತಾರಿಷ ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ ||
[ಯಜು-ಅಧ್ಯಾಯ-೧೧ ಮಂತ್ರ-೮೩]

 ಅರ್ಥ:
ಅನ್ನಪತೇ = ಅನ್ನಗಳ ರಕ್ಷಕನಾದ ಯಜಮಾನನೇ
ಅನ್ನಸ್ಯ = ಅನ್ನವನ್ನು
ಃ = ನಮಗೆ
ದೇಹಿ = ಕೊಡು
ಅನಮೀವಸ್ಯ = ರೋಗವನ್ನುಂಟುಮಾಡದಿರುವುದೂ, ಸುಖಕರವೂ ಆದ
ಶುಷ್ಮಿಣಃ = ಹೆಚ್ಚು ಬಲಕಾರವೂ ಆದ ಅನ್ನವನ್ನು [ನಮಗೆ ಕೊಡು]
ಪ್ರ ಪ್ರ = ಶ್ರೇಷ್ಠವಾದ [ಅನ್ನವನ್ನು ನಮಗೆ ಕೊಡು]
ದಾತಾರಮ್ = ಅನ್ನದಾತನನ್ನು
ತಾರಿಷಃ = ಸಂರಕ್ಷಿಸು
ಊರ್ಜಮ್ = ಪರಾಕ್ರಮವನ್ನು
ನಃ = ನಮಗೆ
ಧೇಹಿ = ಉಂಟುಮಾಡಿಕೊಡು
ದ್ವಿಪದೇ = ಎರಡು ಕಾಲಿನ ಪ್ರಾಣಿಗಳಿಗೆ   [ಮನುಷ್ಯರಿಗೆ ಬಲವನ್ನು ಉಂಟುಮಾಡು]
ದ್ವಿಪದೇ = ನಾಲ್ಕು ಕಾಲಿನ ಪ್ರಾಣಿಗಳಿಗೆ [ಬಲವನ್ನು ಉಂಟುಮಾಡು]
ಭಾವಾರ್ಥ:
ಹೇ ಭಗವಂತಾ, ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ನಮಗೆ ನೀಡು. ಪ್ರಾಣಿಗಳಿಗೂ, ಮನುಷ್ಯರಿಗೂ ಶ್ರೇಷ್ಠವಾದ ಹಾಗೂ ಪರಾಕ್ರಮವನ್ನು ಉಂಟುಮಾಡುವ  ಅನ್ನವನ್ನು [ಆಹಾರವನ್ನು] ನೀಡುತ್ತಿರುವ ಅನ್ನದಾತನನ್ನು ಸಂರಕ್ಷಿಸು.
ನಿಜವಾಗಿ ನಾವು ಊಟಮಾಡುವಾಗ ನಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕಾದ ವಿಚಾರಗಳು ಏನೆಂಬುದನ್ನು ಈ ಮಂತ್ರವು ಎಷ್ಟು ಸೊಗಸಾಗಿ ವರ್ಣಿಸಿದೆ ಎಂದರೆ, ಈ ಮಂತ್ರಗಳ ಶಬ್ದದಲ್ಲಿ      ಅಡಗಿರುವ  ಅಂತರಾರ್ಥವನ್ನು ಗಮನಿಸಬೇಕು. ನಮಗೆ ಎಂತಹ ಆಹಾರಬೇಕೆಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ ಇದೆ? ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ಕೊಡು, ಎಂಬುದು ಭಗವಂತನಲ್ಲಿ ನಮ್ಮ ಪ್ರಾರ್ಥನೆ. ಭಗವಂತನು ನಮಗೆ ಪರಿಶುದ್ಧವಾದ, ಪುಷ್ಠಿದಾಯಕವಾದ ಆಹಾರವನ್ನೇ ಕೊಟ್ಟಿದ್ದಾನೆ. ರೈತ ಬೆಳೆದಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆನಂತರ ನಾವೇನು ಮಾಡುತ್ತೇವೆ? ಅನ್ನವು ಬೆಳ್ಳಗಿರಬೇಕೆಂದು ಹೆಚ್ಚು ಪಾಲೀಶ್ ಮಾಡಿದ ಅಕ್ಕಿಯಲ್ಲಿ ಅನ್ನ ಮಾಡುತ್ತೇವೆ. ಅಕ್ಕಿಯ ಪೌಷ್ಠಿಕಾಂಶವೆಲ್ಲವೂ ಪಾಲೀಶ್ ಮಾಡಿದಾಗ ಹೊಟ್ಟಿನ ಪಾಲಾಗಿರುತ್ತದೆ [ ಅದನ್ನು ಹಸುಗಳಿಗೆ ಆಹಾರವಾಗಿ ಬಳಸಿದರೂ ಪರವಾಗಿಲ್ಲವೆನ್ನಿ] ಇನ್ನು ಅಕ್ಕಿಯಲ್ಲಿ ಉಳಿದದ್ದೇನು? ಅನ್ನ ಮಾತ್ರ ಬೆಳ್ಳಗಿರುತ್ತದೆ ಹೊರತೂ ಅದರಲ್ಲಿ ಪೌಷ್ಟಿಕಾಂಶವಿರುವುದಿಲ್ಲ.
ಕುಕ್ಕರ್‌ನಲ್ಲಿ ಬೇಯಿಸಿದ ಅಡುಗೆಯ ಬಗ್ಗೆ ದಿ|| ರಾಜೀವ್ ದೀಕ್ಷಿತ ಅವರ ಮಾತುಗಳನ್ನು ಕೇಳಿ.ಒಂದು ಮಗುವಿನ ಜನ್ಮವಾಗಲು ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳು ಇರಬೇಕಲ್ಲವೇ? ಒಂದು ಬೆಳೆ ಸರಿಯಾಗಿ ಬರಲು ಅದಕ್ಕೆ ಅಗತ್ಯವಾದ ಮೂರ್ನಾಲ್ಕು ತಿಂಗಳು ಬೇಕಲ್ಲವೇ? ಹಾಗೆಯೇ ಒಂದು ಉತ್ತಮವಾದ ಕಾಳು ಬೇಳೆ,ಅಕ್ಕಿ ಬೇಯಲು ಅದಕ್ಕೆ ನಿರ್ಧಿಷ್ಠ ಸಮಯ, ಹಿತವಾದ ಶಾಖ, ಗಾಳಿ, ಬೆಳಕು, ಎಲ್ಲವೂ ಇದ್ದರೆ ಬೇಯಿಸಿದ ಆಹಾರವು ಆರೋಗ್ಯದಾಯಕವಾಗಿರುತ್ತದೆ. ಹಾಗಲ್ಲದೆ ಕುಕ್ಕರ್‌ನಲ್ಲಿ ಬೇಯಿಸಿದ ತರಕಾರಿ, ಬೇಳೆ ಕಾಳುಗಳು, ಅಕ್ಕಿ ಕೂಡ ಸಹಜವಾಗಿ ಬೇಯದೆ ಅತ್ಯಂತ ಕಡಿಮೆ ಸಮಯದಲ್ಲಿ ಬೆಂದಂತಾಗಿ ಗಾಳಿ, ಬೆಳಕು ಇಲ್ಲದೆ  ಅದರ ಪೌಷ್ಟಿಕಾಂಶವೆಲ್ಲವೂ ನಾಶವಾಗಿರುತ್ತದೆ. ನಾವು ನಿತ್ಯವೂ ಇದೇ ಆಹಾರವನ್ನು ಸೇವಿಸುತ್ತೇವೆ,ಅಲ್ಲವೇ?
 ಹೀಗಿರುವಾಗ ಭಗವಂತನು ಕರುಣಿಸಿದ ಪುಷ್ಠಿದಾಯಕ ಆಹಾರವನ್ನು ಹಾಳುಗೆಡವಿದವರು ನಾವೇ ಅಲ್ಲವೇ? ಇನ್ನು ನಾವು ತಿನ್ನುವ ತರಕಾರಿ, ಹಣ್ಣು ಹಂಪಲು, ಎಲ್ಲವೂ ವಿಷಯುಕ್ತ. ಮನುಷ್ಯನ ದುರಾಸೆಯ ಫಲವಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದಲ್ಲದೆ, ಕ್ರಿಮಿಗಳು ಬಾರದಂತೆ ಕ್ರಿಮಿನಾಶಕಗಳ ಸಿಂಪಡಿಸುವುದರಿಂದ ಹಣ್ಣು ತರಕಾರಿಗಳ ಮೂಲಕ ನಾವು ವಿಷವನ್ನೇ ಸೇವಿಸುತ್ತೇವೆ.

 ಇಂದಿನ ಪೀಳಿಗೆಗೆ   ನಾಡ  ಹಸುವಿನ ಹಾಲಿನ ರುಚಿಯೇ ಗೊತ್ತಿಲ್ಲದಿರಬಹುದು. ನಮ್ಮ ದೇಶದಲ್ಲಿ ಗೋವನ್ನು ಪ್ರತ್ಯಕ್ಷ ದೇವತೆಯಂತೆ ಕಾಣುತ್ತಿದ್ದೆವು.ಈಗಲೂ ಅದೇ ಭಾವನೆ ಇದೆ. ಕಾರಣವೇನು ? ಮನೆಮಂದಿಗೆಲ್ಲಾ ಹಾಲು, ಮೊಸರು, ಬೆಣ್ಣೆ , ತುಪ್ಪವು ಹಸುವಿನಿಂದ ದೊರಕುತ್ತಿದ್ದರೆ ಎತ್ತು ಕೃಷಿಗೆ ಸಹಕಾರಿಯಾಗಿತ್ತು. ದನಗಳ ಸಗಣಿಯೇ ಬೆಳೆಗೆ ಗೊಬ್ಬರವಾಗಿತ್ತು. ಇದೆಲ್ಲಾ ಆ ಭಗವಂತನ ಕೃಪೆಯಲ್ಲವೇ? ಆದರೆ ನಮ್ಮ ದುರಾಸೆಯ ಪರಿಣಾಮವಾಗಿ ನಾಡಹಸುಗಳ ಸಂತತಿ ಕ್ಷೀಣಿಸಲು ನಾವೇ ಕಾರಣರಾದೆವು.ಅಲ್ಲವೇ?

ಮಂತ್ರದಲ್ಲಿ ಹೇಳಿರುವ ಮತ್ತೊಂದು ಅಂಶವೆಂದರೆ ಹೇ ಭಗವಂತಾ, ನಮಗೆ ಆರೋಗ್ಯಯುತವಾದ ಆಹಾರವನ್ನು ನೀಡಿರುವ ಅನ್ನದಾತನನ್ನು ಕಾಪಾಡು. ಅನ್ನದಾತನೆಂದರೆ ಯಾರು? ಭಗವಂತನೇ? ಅವನನ್ನೇ ಅವನು ಕಾಪಾಡಿಕೊಳ್ಳಬೇಕೇ? ಇಲ್ಲ, ಪ್ರತ್ಯಕ್ಷವಾಗಿ ನಮಗೆ ಅನ್ನವನ್ನು ನೀಡುವ ನಿಜವಾದ ಅನ್ನದಾತನೆಂದರೆ ರೈತ. ಆ ರೈತನ ಸ್ಥಿತಿ ಇಂದು ಹೇಗಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ರೈತ ಬೆಳೆವ ಬೆಳೆಗೆ ಸೂಕ್ತಬೆಲೆ ಸಿಗದೆ ಆತ್ಮಹತ್ಯೆ    ಮಾಡಿಕೊಳ್ಳುವ ಪರಿಸ್ಥಿತಿ! ಆದರೆ ನಮ್ಮ ಋಷಿಮುನಿಗಳ ಚಿಂತನೆ ಎಂದರೆ ನಮಗೆ ಅನ್ನ ಕೊಡುವ ರೈತನು ಸಂತೋಷವಾಗಿರಬೇಕು. ನಮ್ಮ ಋಷಿಮುನಿಗಳ ಚಿಂತನೆ ನಮ್ಮ ಜನರಿಗೆ ನಮ್ಮನ್ನು ಆಳುವವರಿಗೆ ಅರ್ಥವಾಗಬೇಕಲ್ಲವೇ?

Friday, April 10, 2015

ಜೀವನವೇದ-4


ವೇದದಲ್ಲಿ ಮೂವತ್ಮೂರು ಕೋಟಿ ದೇವತೆಗಳೆಂದು ಹೇಳಿದೆ. ಹಾಗಾಗಿ ಭಗವಂತನೆಂದರೆ ಒಬ್ಬನೇ ಆಗಿರಬೇಕಿಲ್ಲ, ಎಂಬ ವಾದ ಇದೆ. ಇಂತಹ ವಾದಗಳನ್ನು ಸಮಾಧಾನಪಡಿಸುವುದು ಕಷ್ಟ. ಅಗತ್ಯವೂ ಇಲ್ಲ. ಆದರೂ ವೇದದಲ್ಲಿ ಭಗವಚ್ಛಕ್ತಿಯು ಒಂದೇ ಎಂದು ಹಲವಾರು ಮಂತ್ರಗಳಲ್ಲಿ ಪ್ರತಿಪಾದಿಸಿದೆ. ವೇದದ ಬೆಳಕಲ್ಲಿ “ದೇವತೆ” ಮತ್ತು “ಭಗವಂತ”   ಈ ಪದಗಳ ಬಗ್ಗೆ ಇಂದು ವಿಚಾರ ಮಾಡೋಣ.
ಯಾಸ್ಕ ಮಹರ್ಷಿಗಳ ನಿರುಕ್ತದಂತೆ “ದೇವೋ ದಾನಾತ್” ಎಂದಿದೆ. ಹಾಗೆಂದರೇನು? ದೇವನೆಂದರೆ ಕೊಡುವವನು ಎಂದರ್ಥ. ಉಧಾಹರಣೆಗೆ  ಅಗ್ನಿರ್ದೇವತಾ, ವರುಣೋ ದೇವತಾ, ಸೂರ್ಯೋದೇವತಾ,?ಇತ್ಯಾದಿ. ಅಂದರೆ  ಅಗ್ನಿಯು ಶಾಖ ಕೊಡುತ್ತದೆ, ವರುಣ ಮಳೆಯನ್ನು ಸುರಿಸುತ್ತದೆ, ಸೂರ್ಯನಿಂದ ಬೆಳಕು ಮತ್ತು ಶಾಖವನ್ನು ಪಡೆಯುತ್ತೇವೆ. ಅಂತೆಯೇ ಒಬ್ಬ ಶ್ರೀಮಂತನು ಬಡವರಿಗೆ  ಹಣವನ್ನು ದಾನ ಮಾಡುತ್ತಾನೆ. ವಿದ್ವಾಂಸನು ಜ್ಞಾನವನ್ನು ದಾನಮಾಡುತ್ತಾನೆ, ಹೀಗೆ ಯಾವುದು ಪ್ರಪಂಚಕ್ಕೆ ಏನನ್ನಾದರೂ ಕೊಡುತ್ತದೋ ಅದು ದೇವತೆ.ಹಾಗೆಯೇ ಅದೇ ನಿರುಕ್ತದಲ್ಲಿ “ಮಂತ್ರ ಪ್ರತಿಪಾದಕ ವಿಷಯೋ ದೇವತಾ” ಎಂತಲೂ ಹೇಳಿದೆ. ಅಂದರೆ ಒಂದು ಮಂತ್ರವು ಯಾವ ವಿಷಯವನ್ನು ಪ್ರತಿಪಾದಿಸುತ್ತದೋ  ಆ ವಿಷಯವನ್ನು ದೇವತೆ ಎನ್ನುತ್ತಾರೆ. ಒಂದು ವಿಷಯದಿಂದ ಉಪಯೋಗ ಪಡೆಯುವುದೆಂದರೆ  ಮನುಷ್ಯನು  ಅದನ್ನು ಆಧಿಭೌತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಆಧಿ ದೈವಿಕವಾಗಿ  ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ “ದೇವತೆಗಳ ಬಗ್ಗೆ ಪ್ರಸ್ತಾಪವಾಗಿರುವ ಒಂದೆರಡು ಮಂತ್ರಗಳ ಬಗ್ಗೆ ವಿಚಾರ ಮಾಡೋಣ.
ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್| ವಿದನ್ನಹ ದ್ವಿತಾಸನನ್||
[ಋಗ್ವೇದ: ೮.೨೮.೧]
ಯೇ =ಯಾವ
ತ್ರಿಂಶತಿ ತ್ರಯಸ್ಪರ: = ಮೂವತ್ಮೂರು
ದೇವಾಸ: = ದೇವತೆಗಳು
ಬರ್ಹಿ = ಯಜ್ಞಾಸನದ ಮೇಲೆ
ಆಸದನ್ = ಕುಳಿತುಕೊಳ್ಳುತಾರೋ ಅವರು
ಅಹ = ನಿಜವಾಗಿ
ದ್ವಿತಾ = ಎರಡು ರೀತಿ
ವಿದನ್ = ತಿಳಿದವರಾಗಿರುತ್ತಾರೆ ಮತ್ತು
ಆಸನನ್ = ಎರಡು ರೀತಿ ಹಂಚಲು ಸಮರ್ಥರಾಗಿರುತ್ತಾರೆ
ಯಾವ ಮೂವತ್ಮೂರು ದೇವತೆಗಳು  ಯಜ್ಞಾಸನದ ಮೇಲೆ ಕುಳಿತುಕೊಳ್ಳುತಾರೋ ಅವರು ನಿಜವಾಗಿ ತಿಳಿದವರಾಗಿರುತ್ತಾರೆ ಮತ್ತು   ಎರಡು ರೀತಿ ಹಂಚಲು ಸಮರ್ಥರಾಗಿರುತ್ತಾರೆ.ರೂಢಿಯಲ್ಲಿ ಮೂವತ್ಮೂರು   ಕೋಟಿ ದೇವತೆಗಳೆಂದು ಹೇಳುತ್ತಾರೆ. ಆದರೆ ಈ ವೇದ ಮಂತ್ರವು ಮೂವತ್ಮೂರು ದೇವತೆಗಳ ಕುರಿತು ಹೇಳುತ್ತಿದೆ.
ಈ ಮಂತ್ರದಲ್ಲಿ ದ್ವಿತಾಸನನ್ ಮತ್ತು ದ್ವಿತಾ ವಿದನ್ ಎಂಬ ಎರಡು ಶಬ್ಧಗಳ ಪ್ರಯೋಗವಾಗಿದೆ. ಹಾಗೆಂದರೇನು? ದ್ವಿತಾವಿದನ್ ಎಂದರೆ  ಶತೃಗಳನ್ನೂ ಮಿತ್ರರನ್ನೂ ತಿಳಿದವನು, ದ್ವಿತಾಸನನ್ ಎಂದರೆ ನಿಗ್ರಹ ಮತ್ತು ಅನುಗ್ರಹ ಗಳ ಸಮಯವನ್ನು ಅರಿತವನು.
 ಈ ಮಂತ್ರಗಳನ್ನು ಗಮನಿಸಿದಾಗ ದೇವತೆಗಳೆಂದರೆ ನಮಗೆ ಅನುಕೂಲ ಕಲ್ಪಿಸುವವರೆಂದು ಹೇಳಿದೆ ಹೊರತೂ ಅವರನ್ನು ಭಗವಂತನೆಂದು ಹೇಳಿಲ್ಲ. ನೂರಾರು ಹೆಸರುಗಳಿಂದ ಕರೆದರೂ ಭಗವಂತ ಎಂಬುವನು ಒಬ್ಬನೇ ಎಂಬುದನ್ನು ಮತ್ತೊಂದು ಮಂತ್ರವು ಅತಿ ಸ್ಪಷ್ಟವಾಗಿ ಹೇಳುತ್ತದೆ.

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸತ್ ವಿಪ್ರಾ ವಹುದಾವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹು: ||
[ಋಗ್ವೇದ ೧.೧೬೪.೪೬]

ಅಗ್ನಿಂ = ತೇಜೋಮಯ ಪ್ರಭುವನ್ನು
ಇಂದ್ರಂ ಮಿತ್ರಂ ವರುಣಂ = ಇಂದ್ರ, ಮಿತ್ರ,ವರುಣ ಎಂದು
ಅಹುಃ = ಕರೆಯುತ್ತಾರೆ
ಅಥೋ = ಹಾಗೆಯೇ
ಃ = ಆ ಪ್ರಭುವು
ದಿವ್ಯಃ  = ದಿವ್ಯನೂ
ಸುಪರ್ಣಃ = ಸುಪರ್ಣನೂ
ಗುರುತ್ಮಾನ್ = ಮಹಾನ್ ಆತ್ಮವಂತನೂ  ಹೌದು
ಸತ್ ಏಕಮ್ = ಸತ್ಯವು ಇರುವುದು ಒಂದೇ
ವಿಪಾಃ = ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು
ಬಹುಧಾ ವದಂತಿ = ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ.
ಅಗ್ನಿಮ್ = ಅದೇ ತೇಜೋ ರೂಪವನ್ನು
ಯಮಂ ಮಾತರಿಶ್ವಾನಂ ಅಹುಃ = ಯಮ, ಮಾತರಿಶ್ವಾ ಎನ್ನುತ್ತಾರೆ.

ತೇಜೋಮಯ ಪ್ರಭುವನ್ನು ಇಂದ್ರ, ಮಿತ್ರ,ವರುಣ ಎಂದು ಕರೆಯುತ್ತಾರೆ, ಹಾಗೆಯೇ  ಆ ಪ್ರಭುವು ದಿವ್ಯನೂ ಸುಪರ್ಣನೂ  ಆತ್ಮವಂತನೂ   ಹೌದು, ಸತ್ಯವು ಇರುವುದು ಒಂದೇ,  ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. ಅದೇ ತೇಜೋ ರೂಪವನ್ನು ಯಮ, ಮಾತರಿಶ್ವಾ ಎನ್ನುತ್ತಾರೆ.

ಈ ಮಂತ್ರದಲ್ಲಿ  ಒಬ್ಬನೇ ಭಗವಂತನೆಂದು  ಎಷ್ಟು ಸ್ಪಷ್ಟವಾಗಿ ಹೇಳಿದೆ ಅಲ್ಲವೇ. ದೇವನೊಬ್ಬ ನಾಮ ಹಲವು. ಇರುವ ಒಂದೇ ಸತ್ಯವಸ್ತುವನ್ನು  ವಿದ್ವಾಂಸರು ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆಂದು ಹೇಳಿದೆ. ಇಂದ್ರ ,ಅಗ್ನಿ, ವರುಣ, ಸೂರ್ಯ, ಹೀಗೆ ನಮಗೆ ಅನುಕೂಲ ಕಲ್ಪಿಸುವ ಇವರನ್ನೆಲ್ಲಾ ದೇವತೆಗಳೆಂದು ಹೇಳಿದೆ. ಆದರೆ ಅವರನ್ನೆಲ್ಲಾ  ಭಗವಂತನೆಂದು ಹೇಳಿಲ್ಲ. ದೇವರು ಒಬ್ಬನೇ ಎಂದು ವೇದವು ಸ್ಪಷ್ಟ   ಪಡಿಸುತ್ತದೆ. ಆದರೆ ಇರುವ ಒಬ್ಬನೇ ದೇವರನ್ನು  ವಿದ್ವಾಂಸರು ಹಲವಾರು ಹೆಸರುಗಳಿಂದ ಕರೆಯುತ್ತಾರೆಂದು ವೇದವು ಸಾರಿ ಹೇಳುತ್ತದೆ.
 ನಿರುಕ್ತದಲ್ಲಿ “ಮಂತ್ರ ಪ್ರತಿಪಾದಕ ವಿಷಯೋ ದೇವತಾ”  ಎಂಬ  ವಿವರಣೆ ಇದೆ. ಮಂತ್ರಗಳು ಪ್ರತಿಪಾದಿಸುವ ವಿಷಯವನ್ನು ದೇವತೆ ಎನ್ನುತ್ತಾರೆ. ಅಂದರೆ ಉಧಾಹರಣೆಗೆ ಋಗ್ವೇದದ ಮೊದಲನೇ ಮಂಡಲದ ಮೊದಲನೇ ಸೂಕ್ತದ ಮೊದಲನೇ ಮಂತ್ರವನ್ನು ನೋಡೋಣ.

ಅಗ್ನಿಮೀಳೇ  ಪುರೋಹಿತಮ್ ಯಜ್ಞಸ್ಯ  ದೇವಮೃತ್ವಿಜಮ್ |ಹೋತಾರಂ  ರತ್ನಧಾತುವಮ್||

ಈ ಮಂತ್ರದ ದೇವತೆ ಅಗ್ನಿ ,ಅಂದರೆ ಈ ಮಂತ್ರವು   ಅಗ್ನಿಯ ವಿಷಯವನ್ನು ಪ್ರತಿಪಾದಿಸುತ್ತದೆ ಎಂದರ್ಥ. ಈ ಮಂತ್ರದ ಬಗ್ಗೆ ಇಲ್ಲಿ  ಚರ್ಚೆ ಮಾಡುತ್ತಿಲ್ಲ. ದೇವತೆ ಎಂದು ಯಾವುದನ್ನು ಕರೆಯುತ್ತಾರೆ, ಎಂಬುದಕ್ಕೆ  ಈ ಮಂತ್ರದ ವಿಷಯವನ್ನು ಪ್ರಸ್ತಾಪಿಸಿದೆ ಅಷ್ಟೆ.
 ಆದ್ದರಿಂದ  ಓದುಗರು ದೇವತೆ ಮತ್ತು ಭಗವಂತ ಎಂದರೆ ಒಂದೇ ಎಂದು ಅರ್ಥ ಮಾಡಿಕೊಳ್ಳಬಾರದು. ವಿಷಯವನ್ನೇ ಒಬ್ಬ ಭಗವಂತ ನೆಂದು ಅರ್ಥಮಾಡಿಕೊಂಡು ಬಿಟ್ಟರೆ ಅದು ವೇದಕ್ಕೆ ಪೂರ್ಣ ವಿರುದ್ಧವಾಗಿ ಬಿಡುತ್ತದೆ. ಭಗವಂತ ಒಬ್ಬನೇ. ಅವನ ಹೆಸರು ಬಹಳ, ಎಂದು ಅರ್ಥಮಾಡಿಕೊಂಡರೆ ಸಾಕು.
ಆದರೆ ಪ್ರಪಂಚದಲ್ಲಿ  ಈಗ  ನಡೆದಿರುವುದೇನು? ನನ್ನ ದೇವರು ಬೇರೆ, ನಿನ್ನ ದೇವರು ಬೇರೆ ದೇವರ ಹೆಸರಲ್ಲಿ ಬಡಿದಾಟ. ಇಲ್ಲಿ ಧರ್ಮ ಮತ್ತು ಮತದ ಸೂಕ್ಷ್ಮ ಅರಿತುಕೊಂಡರೆ ದೇವರು ತಾನಾಗಿಯೇ ಅರ್ಥವಾಗಿಯಾನು.
ಧರ್ಮ ಅಂದರೆ  ಜೀವನಮಾರ್ಗ ಎಂದು ಅರ್ಥಮಾಡಿಕೊಂಡರೆ ಸಾಕು.ಅದಕ್ಕೆ ಸಾಕಷ್ಟು ವಿವರಣೆ ಗಳಿವೆ,ಅದನ್ನು ಇಲ್ಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಮತ ಬೇರೆ. ನನ್ನನ್ನು ಮತ್ತು ನನ್ನ ಮತಗ್ರಂಥವನ್ನು ನೀನು ನಂಬುವುದದರೆ ನೀನೂ ಕೂಡ ನನ್ನ ಮತದ ಅನುಯಾಯಿ. ಒಂದು ಮತ ಎನ್ನಬೇಕಾದರೆ ಅದಕ್ಕೊಬ್ಬ ಪ್ರವಾದಿ ಅದಕ್ಕೊಂದು ಗ್ರಂಥ ಇರಲೇ ಬೇಕು. ಉಧಾಹರಣೆಗೆ ಕ್ರೈಸ್ತ ಮತವನ್ನೇ ನೋಡೋಣ. ಪ್ರವಾದಿ ಏಸುಕ್ರಿಸ್ತ. ಆ ಮತದ ನಂಬಿಕೆಯ ಗ್ರಂಥ ಬೈಬಲ್, ಮೊಹಮದ್ ಪೈಗಂಬರ್ ಆರಂಭಿಸಿದ್ದು ಇಸ್ಲಾಮ್, ಬುದ್ಧನಿಂದ ಬೌದ್ಧ. ಏಸೂ ಕ್ರಿಸ್ತ ಹುಟ್ಟಿದನಂತರ ಆರಂಭವಾದ ಕ್ರೈಸ್ತಮತಕ್ಕೆ  ೨೦೦೦ ವರ್ಷಗಳಾಗಿವೆ. ಉಳಿದ ಮತಗಳಿಗೂ ಆವುಗಳದೇ ನಿಶ್ಚಿತ ದಿನಗಳಿವೆ. ಆದರೆ ಧರ್ಮ ಹಾಗಲ್ಲ. ಹಿಂದು ಎಂಬುದು ಧರ್ಮ. ಮತ ಎನ್ನಲು ಅದಕ್ಕೆ ಒಬ್ಬ  ಪ್ರವಾದಿ ಇಲ್ಲ.  ಅದಕ್ಕೆ ಒಂದೇ ಮತಗ್ರಂಥವಿಲ್ಲ. ನೂರಾರು ಋಷಿಮುನಿಗಳು ಕಂಡುಕೊಂಡ ಸತ್ಯದ ಮಾರ್ಗವೇ ಹಿಂದು ಧರ್ಮ. ಅದೊಂದು ಸಂಸ್ಕೃತಿ.
ಏಕಮ್ ಸತ್ ವಿಪ್ರಾ ಬಹುದಾ ವದಂತಿ-ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಸತ್ಯ.  ದೇವನು ಒಬ್ಬನೇ ನಾಮ ಹಲವು. ಈ ಸತ್ಯದ ಅರಿವಾದಾಗ ವಿಶ್ವದಲ್ಲಿ ದೇವರ ಹೆಸರಿನಲ್ಲಿ ಕಚ್ಚಾಟವಿರಲಾರದು. ಅಲ್ಲವೇ?

ಇವರು ರಾಮನ ಸಂತಾನವೋ? ರಾವಣನ ಸಂತಾನವೋ?

ಬುದ್ಧಿಜೀವಿಗಳೆನಿಸಿಕೊಂಡವರು ನಿಜವಾಗಿ ಬುದ್ಧಿ ಜೀವಿಗಳೇ? ಹಲವರು ಹಲವು ಶಬ್ದಗಳಿಂದ ಇವರನ್ನು ಕರೆಯುತ್ತಾರೆ. ನಾನು ಇವರನ್ನು ಬೇರೆ ಯಾವ ಹೆಸರಿನಿಂದಲೂ ಕರೆಯುವುದಿಲ್ಲ. ಆದರೆ ಈ ಒಂದು ಗುಂಪಿನ ಉದ್ಧೇಶ ಏನು?
ನಮ್ಮ ಸಂಸ್ಕೃತಿ   ಪರಂಪರೆಗೆ ಮಾರಿಹೋಗಿ ಇಡೀ ವಿಶ್ವವು ನಮ್ಮ ದೇಶದತ್ತ ನೋಡುತ್ತಿರುವಾಗ ಇವರೇಕೇ ಹೀಗೆ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ? ಇವರಿಗೆ ಇದರಿಂದ ಏನು ಪ್ರಯೋಜನ? ಜೊತೆಗೆ ಇವರು ಮಾಡುತ್ತಿರುವ ಡ್ಯಾಮೇಜ್ ಅವರ ವಿರೋಧಿಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಕಾರಣ ಅವರ ವಿರೋಧಿಗಳ ಪಾಸ್ಸಿಟೀವ್ ಎನೆರ್ಜಿ ಜಾಸ್ತಿ ಇದೆ. ನಡೆಯುತ್ತಿರುವ ಮಹಾನ್ ಯಜ್ಞದಲ್ಲಿ ಒಂದು ಮೆಣಸಿನಕಾಯಿ ಹಾಕಿ ಬಿಟ್ಟರೆ  ಅದನ್ನು ಜೀರ್ಣಿಸಿಕೊಳ್ಳುವಷ್ಟು ತಾಕತ್ತು ಆ ಯಜ್ಞಕ್ಕಿದೆ. ಆದರೆ ಇವರ ಈ ನಡೆಯಿಂದ ನೇರ ದುಷ್ಪರಿಣಾಮ ಆಗುವುದು ಮೊದಲು ಇವರ ಕುಟುಂಬದ ಮೆಲೆಯೇ !! ಆನಂತರ ಮುಂದಿನ ವಿಚಾರ. ಇವರ ಮಕ್ಕಳು ಮೊಮ್ಮಕ್ಕಳು ರಾಕ್ಶಸರಾಗಿ ಬೆಳೆಯ ಬೇಕೆ? ಇವರು ರಾಮನ ಸಂತಾನವೋ? ರಾವಣನ ಸಂತಾನವೋ?

ಪಾಶ್ಚಾತ್ಯರಲ್ಲಿ ಅದೆಷ್ಟು ಜನ ಪ್ರಾಣಿಗಳನ್ನು ಪ್ರೀತಿಸುತ್ತಾರೆ!  ಅಂತಾ  ಅದೆಷ್ಟು ವೀಡಿಯೋ ಕ್ಲಿಪ್ ಗಳು FB ಯಲ್ಲಿ ಪ್ರಕಟವಾಗುತ್ತವೆ!!

ಮಾಂಸಾಹಾರಿಗಳನೇಕರು ಸಸ್ಯಾಹರಕ್ಕೆ ಬದಲಾವಣೆಯಾಗುತ್ತಿರುವ ಕಾಲದಲ್ಲಿ ಇವರೆಲ್ಲಾ  ಆಹಾರ ವೈವಿದ್ಯತೆಯ ಹೆಸರಲ್ಲಿ   ಮಾಂಸಾಹಾರದ ಪ್ರಚಾರ ಮಾಡುತ್ತಿದ್ದಾರಲ್ಲಾ! ವೇದವನ್ನು ,ರಾಮಾಯಣ  ಮತ್ತು ಭಗವದ್ಗೀತೆಯನ್ನು ಪಾಶ್ಚಿಮಾತ್ಯರು ಗುಣಗಾನ ಮಾಡುತ್ತಿರುವಾಗ ಇದನ್ನೆಲ್ಲಾ ಸುಡ ಬೇಕೆನ್ನುವ ಇವರಿಗೆ ಅದೆಂತಹ ಹುಚ್ಚು ಹಿಡಿದಿದೆ!!?

ನಮ್ಮ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳಸಬೇಕೆನ್ನುವ ಸ್ನೇಹಿತರು ಈ ವಿರೋಧೀ ಭಾವನೆಯ ಜನರ ಮಾತಿಗೆ ಮಹತ್ವ ಕೊಡಬೇಡಿ. ದುರ್ನಾತದಿಂದ ದೂರ ಇರುವುದೇ ಮೇಲು. ಅದರ ಕೆಟ್ಟಪರಿಣಾಮವು ಅವರಮೇಲೆಯೇ ಆಗಲಿ.

ಒಂದು ಮಾತು ನೆನಪಿರಲಿ. ನಮ್ಮ ಪರಂಪರೆಯಲ್ಲಿ ಯಾವುದಾದರೂ ಅಂಶಗಳು ಮಾನವೀಯತೆಗೆ ವಿರೋಧಿಯಾಗಿ ಕಂಡರೆ ಅದನ್ನು ಮೊದಲು ಕಿತ್ತು ಬಿಸಾಕುವ ಕ್ರಮಕ್ಕೆ ಕೈ ಹಾಕಿ. ಇಡೀ ಜಗತ್ತಿನ ನೆಮ್ಮದಿಗೆ ಅಗತ್ಯವಾದ ಮಾರ್ಗದರ್ಶನ ನಮ್ಮ ವೇದ-ಉಪನಿಷತ್ತುಗಳಲ್ಲಿ, ರಾಮಾಯಣ  ಮಹಾಭಾರತ ಭಗವದ್ಗೀತೆಯಲ್ಲಿ ಹೇರಳವಾಗಿ ಲಭ್ಯವಿದೆ. ಅಂತಾ ಮಾನವೀಯ ಮೌಲ್ಯಗಳನ್ನು ಉಳಿಸೋಣ. ಕೆಸರಿನ ಮೇಲೆ ಕಲ್ಲು ಹಾಕುವುದು ಬೇಡ.

Sunday, April 5, 2015

ಜೀವನವೇದ-3

ಒಂದು ನೆಮ್ಮದಿಯ ಕುಟುಂಬದಲ್ಲಿನ ಯಜಮಾನನ ಅರ್ಹತೆಗಳ  ಬಗ್ಗೆ ಅಥರ್ವಣ  ವೇದದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರದ ಆಧಾರದಲ್ಲಿ  ವಿಚಾರ ಮಾಡುತ್ತಿದ್ದೆವು.  ಹಿಂದಿನ ಅಧ್ಯಾಯದಲ್ಲಿ ಮೊದಲ ಸಾಲಿನ ಎರಡು  ಶಬ್ಧಗಳ ಬಗ್ಗೆ ಚರ್ಚಿಸಿದ್ದೇವೆ.  ಇಲ್ಲಿ ಮುಂದಿನ ಭಾಗದ ಬಗ್ಗೆ ವಿಚಾರವನ್ನು ಮಾಡೋಣ. ವಿಮರ್ಶೆಮಾಡಬೇಕಾದ ಮಂತ್ರ ಭಾಗವೆಂದರೆ. . . . . . .
ಸುಮೇಧಾ:
ಮೇಧಾವಂತನಾಗಿರಬೇಕು. ಮೇಧಾ ಎಂದರೆ ಜ್ಞಾನ. ಎಲ್ಲಿ ಜ್ಞಾನವಿರುತ್ತದೆಯೋ ಅಲ್ಲಿ ಅಂಧವಿಶ್ವಾಸಗಳಿರುವುದಿಲ್ಲ. ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ. ಧರ್ಮಾಧರ್ಮಗಳ ವಿವೇಕವಿದ್ದಾಗ ಜೀವನವು ನಿರ್ಭಯದಿಂದ ಸಾಗುತ್ತದೆ. ಅವನು ಯಾವುದೇ ವ್ಯಾಮೋಹಕ್ಕೆ ಒಳಗಾಗುವುದಿಲ್ಲ. ಮನೆಯ ಸದಸ್ಯರಲ್ಲಿ ವ್ಯಾಮೋಹ ಹೊಂದದೆ ಪ್ರೀತಿ,ವಾತ್ಸಲ್ಯ, ಮಮಕಾರಗಳನ್ನು ಹೊಂದಿರುತ್ತಾನೆ. ಮನೆಯ ಹಿರಿಯನ ಈ ಗುಣಗಳು ಕಿರಿಯರ ಅಭ್ಯುದಯಕ್ಕೆ ಆಸ್ಪದ ನೀಡುತ್ತವೆ.
ಮನೆಯ ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ.. . . . .
ಅಘೋರೇಣ ಚಕ್ಷುಷಾಮಿತ್ರಿಯೇಣ|
ಶಾಂತವಾದ,ಸ್ನೇಹಪೂರ್ವಕ ದೃಷ್ಟಿಕೋನ ಹೊಂದಿದ ನಡೆಯುಳ್ಳವನು, ಎಂದು ಈ ಮಂತ್ರಭಾಗದ ಅರ್ಥ.
ಕೆಲವು ಮಕ್ಕಳು ತಮ್ಮ ಅಹವಾಲನ್ನು ತಾಯಿಯೊಡನೆ ಮಾತ್ರವೇ ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅಪ್ಪ ಎಲ್ಲಿ ಬೈದುಬಿಡುತ್ತಾರೋ! ಎಂಬ ಭಯ. ತಂದೆಯ ಬಗ್ಗೆ  ಇಂತಹ ಭಯವು ಸರ್ವತಾ ಇರಕೂಡದು. ಇಲ್ಲಿ ತಪ್ಪು ಮಕ್ಕಳದ್ದಲ್ಲ ತಂದೆಯದು. ವೇದವು ಹೇಳುತ್ತದೆ  ಮಕ್ಕಳನ್ನು ಸ್ನೇಹದಿಂದ ನೋಡು ಎಂದು. ಒಬ್ಬ ತಂದೆ ತನ್ನ ಮಕ್ಕಳನ್ನು ಭಯದಿಂದ ಇಟ್ಟುಕೊಂಡಿದ್ದಾನೆಂದರೆ ಅವನು ವೇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದೇ ಅರ್ಥ. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆದ್ದು ವಿಶ್ವಾಸದಿಂದ  ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕೇ ಹೊರತೂ ಭಯದಿಂದಲ್ಲ.

ಮನೆಯ ಯಜಮಾನನ ಮತ್ತೊಂದು ಅರ್ಹತೆ ಎಂದರೆ.. . . .
ಸುಮನಾ: -
ಸುಮನಾ ಎಂದರೆ ಉತ್ತಮ ಮನಸ್ಸುಳ್ಳವನು ಎಂದರ್ಥ. ಒಬ್ಬ ಆದರ್ಶ ತಂದೆಯ ಮನಸ್ಸು ಉತ್ತಮವಾಗಿರಬೇಕಾದರೆ ಅವನು ಪವಿತ್ರಕಾಮದಿಂದ ಪೂರ್ಣವಾಗಿರಬೇಕು, ಪಾಪಮಯ ವಾಸನೆಯು ಹತ್ತಿರವೂ ಸುಳಿಯ ಕೂಡದು. ಪಾಪಮಯ ವಾಸನೆಗೆ ಬಲಿಯಾದದ್ದೇ ಆದರೆ ಅವನ ಮನಸ್ಸು ಉತ್ತಮ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ.
ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ. . . . .
ವಂದಮಾನ:-
ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರಬೇಕು. ಅಂದರೆ ಅವನಲ್ಲಿ ಹುಡುಕಿದರೂ ದೋಷ ಸಿಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಯಾರೊಡನೆಯೂ ಅತೀ ಸಲಿಗೆಯೂ ಇರಬಾರದು, ವೈರವೂ ಇರಬಾರದು. ಅನಗತ್ಯವಾದ ವಾದ ವಿವಾದಗಳು ವೈರತ್ವಕ್ಕೆ ಕಾರಣವಾಗುತ್ತದೆ.
ಹಲವು ಭಾರಿ ಬೇಡದ ವಿಷಯಗಳಿಗೆ ಚರ್ಚೆ ಆರಂಭವಾಗಿ ಅದು ಬೇರೆಯದೇ ಹಾದಿ ಹಿಡಿದುಬಿಡುತ್ತದೆ. ಯಾರೊಡನೆಯೂ ಅನಗತ್ಯವಾಗಿ ವಾದ ಮಾಡಬಾರದೆಂದು ತೀರ್ಮಾನಿಸಿದ್ದರೂ ಹಲವು ವೇಳೆ ನಮಗರಿವಿಲ್ಲದಂತೆ ನಮ್ಮ ಸುಮಧುರ ಮಾತುಗಳೂ ಕೂಡ ವಾದದತ್ತ ಹೊರಳಿರುತ್ತದೆ. ನಮಗೆ ಸತ್ಯವೆನಿಸಿದ್ದನ್ನು ನಾವು ಹೇಳುತ್ತಿದ್ದರೂ ಅದು ಎದುರು ಪಕ್ಷದವನಿಗೆ ರುಚಿಸದಾಗ ಮಾತು ವಾದದತ್ತ ನಮಗರಿವಿಲ್ಲದೆ ಹೊರಳುತ್ತದೆ. ಎದುರಾಳಿಯು ವಿತ್ತಂಡವಾದ ಮಾಡಲೆಂದೇ ಬಂದಿದ್ದರಂತೂ ನಮ್ಮ ಕಥೆ ಮುಗಿದಂತೆಯೇ. ಆದ್ದರಿಂದ ನಿಮ್ಮ ಮಾತನ್ನು ಒಪ್ಪದ ವ್ಯಕ್ತಿಯನ್ನು ಒಪ್ಪಿಸುವ ಪ್ರಯತ್ನ ಮಾಡದಿರುವುದೇ ಕ್ಷೇಮ. ಒಂದು ಉತ್ತಮ ವಿಚಾರವನ್ನು ತನ್ನ ವಿತ್ತಂಡವಾದದಿಂದ ಸೋಲಿಸಬೇಕೆಂದು ನಿರ್ಧರಿಸಿರುವ ವ್ಯಕ್ತಿಗೆ ನಷ್ಟವಾಗುತ್ತದೆಯೇ ಹೊರತೂ ನಿಮಗೇನೂ ನಷ್ಟವಿಲ್ಲ. ಅಲ್ಲವೇ? ಆದ್ದರಿಂದ ಎಲ್ಲರ ಪ್ರಶಂಸೆಗೆ ಪಾತ್ರನಾಗಬೇಕೆಂದರೆ ಅನಗತ್ಯ ವಾದ-ವಿವಾದ ಮಾಡಲೇ ಕೂಡದು!!
ಅಹಂಕಾರವು ಮನುಷ್ಯನ ದೊಡ್ದ ಶತ್ರುವಾಗಿದ್ದು, ಅಹಂಕಾರವು ಇವನ ಎಲ್ಲಾ ಸದ್ಗುಣಗಳನ್ನೂ ಮೆಟ್ಟಿ ಇವನನ್ನು ಅವನತಿಯತ್ತ ತಳ್ಳುತ್ತದೆ. ಆದ್ದರಿಂದ ಅಹಂಕಾರವು ಸುಳಿಯದಂತೆ ಎಚ್ಚರವಹಿಸಬೇಕು. ಹೀಗೆ ಒಬ್ಬ ಆದರ್ಶ ತಂದೆಯಾಗಿರಬೇಕಾದರೆ ಮೇಲಿನ ಆರು ಗುಣಗಳನ್ನು ಹೊಂದಿರಬೇಕು.
ಋಗ್ವೇದದ ಇನ್ನೊಂದು  ಮಂತ್ರವು ತಂದೆ-ತಾಯಿಯ ಕರ್ತವ್ಯದ ಬಗ್ಗೆ ಸೊಗಸಾಗಿ ಹೇಳುತ್ತದೆ.ಆ ಮಂತ್ರದ ಬಗ್ಗೆ ವಿಚಾರ ಮಾಡೋಣ.


ತೇ ಸೂನವಃ   ಸ್ವಪಸ: ಸುದಂಸಸೋ ಮಹೀ ಜಜ್ಞುರ್ಮಾತರಾ ಪೂರ್ವ ಚಿತ್ತಯೇ |
ಸ್ಥಾತುಶ್ಚ ಸತ್ಯಂ ಜಗತಶ್ಚ ಧರ್ಮಾಣಿ ಪುತ್ರಸ್ಯ ಪಾಥ: ಪದಮದ್ವಯಾವಿನ: ||

[ಋಗ್ವೇದ ಮಂಡಲ -೧ ಸೂಕ್ತ- ೧೫೯ ಮಂತ್ರ - ೩]

ಪದಾರ್ಥ:-
ಸ್ವಪಸಃ = ಉತ್ತಮ ಕರ್ಮಗಳು
ಸುದಂಸಸ: = ಅವುಗಳನ್ನು ಉತ್ತಮ ರೀತಿಯಲ್ಲಿ ಆಚರಣೆಗೆ ತರುವವರು
ಪೂರ್ವ ಚಿತ್ತಯೇ = ಅದಕ್ಕೆ ಅಗತ್ಯವಾದ ಸಿದ್ಧತೆಯನ್ನು ಮುಂಚಿತವಾಗಿ ಯೋಚಿಸುವವರು
ಜಗ್ನ್ಯುಃ = ಪ್ರಸಿದ್ಧರಾಗಿರುತ್ತಾರೆಯೋ
ತೇ = ಅವರು
ಮಹಿ = ಹಿರಿದಾದ
ಮಾತರ = ತಾಯಿಯನ್ನು
ಸ್ಥಾತುಃ = ಸ್ಥಿರ ಧರ್ಮವನ್ನಾಚರಿಸುವವನು
ಚ = ಮತ್ತು
ಜಗತಃ= ಜಗತ್ತಿಗೆ
ಧರ್ಮಾಣಿ = ಸಾಧಾರಣ ಧರ್ಮಗಳಲ್ಲಿ
ಅದ್ವಯಾವಿನಃ = ಏಕರೂಪದಲ್ಲಿರುವ
ಪುತ್ರಸ್ಯ = ಮಗನಿಗೆ
ಸತ್ಯ ಪದಂ = ಸ್ಥಿರವಾದ ಸ್ಥಾನವನ್ನು ಪಡೆಯುವಂತಹ
ಪಾಥಃ ಮಾರ್ಗವನ್ನು
ಸೂನವಃ = ಅವರ ಸಂತಾನಗಳು ನಿರಂತರ ಕೈಗೊಳ್ಳಬೇಕು
ಭಾವಾರ್ಥ :-
ಭೂಮಿ ಮತ್ತು ಸೂರ್ಯರು ಸ್ಥಿರ ಮತ್ತು ಜಂಗಮರೂಪವಾದ ಎಲ್ಲಾ ಜೀವಿಗಳನ್ನು ಹೇಗೆ ಪಾಲನೆ ಮಾಡುತ್ತಾರೋ, ಎಲ್ಲಾ ಜೀವಿಗಳಿಗೂ ಸಮಾನಧರ್ಮವನ್ನು ಹೇಗೆ ಅನ್ವಯಿಸುವಂತೆ ಮಾಡುತ್ತಾರೋ ಅದನ್ನು ಅರಿಯಬೇಕು. ತಂದೆತಾಯಿಯರು ಈ ವಿಸ್ಮಯ ಜಗತ್ತಿನ ರಹಸ್ಯವನ್ನು ಮಕ್ಕಳಿಗೆ ಹೇಳಿಕೊಟ್ಟು ಅವರೂ ಸಹ ಈ ಜಗತ್ತಿನಲ್ಲಿ ಕೃತಾರ್ಥರಾಗುವಂತೆ ಮಾಡಬೇಕು.
ಈ ಮಂತ್ರದ ಭಾವಾರ್ಥದ ಬಗ್ಗೆ ವಿಚಾರಮಾಡುವಾಗ ಪ್ರಕೃತಿಯ ಚಿತ್ರಣ ನಮ್ಮ ಕಣ್ಮುಂದೆ ಬರಬೇಕು. ಈ ಸೃಷ್ಟಿಯ ರಹಸ್ಯವು ಸಾಮಾನ್ಯರಾದ ನಮಗೆ ಅರ್ಥವಾಗುವುದು ಅಷ್ಟು ಸುಲಭವೇನಲ್ಲ. ಆದರೆ ಭಗವಂತನು ನಮಗೆ ಕೊಟ್ಟಿರುವ ಗಾಳಿ,ಬೆಳಕು,ನೀರಿನ ಬಗ್ಗೆ ನಾವೇನಾದರೂ ಕಿಂಚಿತ್ ಯೋಚಿಸಿದ್ದೇವೆಯೇ? ನಾವು ಬದುಕಲು ಬೇಕಾದ ಇಷ್ಟನ್ನೂ ನಮಗೆ ಭಗವಂತನು ಉಚಿತವಾಗಿ ನೀಡಿದ್ದಾನಲ್ಲಾ! ಅಷ್ಟೇ ಅಲ್ಲ, ಇವ ಒಳ್ಳೆಯವ, ಇವ ಕೆಟ್ಟವ, ಇವ ನಮ್ಮವ, ಇವ ಬೇರೆಯವ ಎಂದು  ಭೇದ ಮಾಡಲೇ  ಇಲ್ಲವಲ್ಲಾ!
ಈ ಮಂತ್ರವು ಹೇಳುತ್ತದೆ ಈ ಭೂಮಿ-ಸೂರ್ಯರ ಧರ್ಮವನ್ನು ತಂದೆತಾಯಿಯಾದವರು ತಮ್ಮ ಮಕ್ಕಳಿಗೆ ಹೇಳಿಕೊಡಿ. ಅಬ್ಭಾ! ಒಂದು ವೇಳೆ ಭಗವಂತನ ಈ ಸಮಾನ ಧರ್ಮವನ್ನು ಸರಿಯಾಗಿ ಅರಿತುಕೊಂಡಿದ್ದೇ ಆದರೆ ನಾವು ಪ್ರಕೃತಿಯ ನಾಶಕ್ಕೆ ಕಾರಣ ವಾಗುತ್ತಿರಲಿಲ್ಲ. ನಮ್ಮ ದುರಾಸೆಯ ಪರಿಣಾಮವಾಗಿ ನಾವು ಕಾಡನ್ನೂ ಬಿಡಲಿಲ್ಲ, ಕೆರೆಗಳನ್ನೂ ಬಿಡಲಿಲ್ಲ. ಕಾಡನ್ನು ನಾಶಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿದೆವು. ಕೆರೆಗಳನ್ನು ನಾಶಮಾಡಿ ಮನೆ ಕಟ್ಟಿದೆವು! ಪರಿಣಾಮ ಕಾಡಿನಲ್ಲಿರಬೇಕಾದ ಮೃಗಗಳೆಲ್ಲಾ ಆಶ್ರಯವಿಲ್ಲದೆ ನಾಡಿಗೆ ನುಗ್ಗುತ್ತಿವೆ! ಕೆರೆಗಳನ್ನು ನಾಶಮಾಡಿದ ನಾವು ಅಂತರ್ಜಲ ಕುಸಿತವಾಗಿ ನೀರಿಗೆ ಹಾಹಾಕಾರ  ಪಡುವಂತಾಗಿದೆ. ವೇದವಾದರೋ ನಮ್ಮನ್ನು ಸದಾಕಾಲ ಎಚ್ಚರಿಸುತ್ತಲೇ ಇದೆ, ಆದರೆ ವೇದದ ಮಾತು ನಮ್ಮ ಕಿವಿಗೆ ಬೀಳಬೇಕಷ್ಟೆ. ಕುಟುಂಬದಲ್ಲಿ ತಂದೆಯ ಕರ್ತವ್ಯಗಳಂತೆಯೇ ಉಳಿದ ಸದಸ್ಯರ ಕರ್ತವ್ಯಗಳೂ  ಕೂಡ ಇವೆ.

Friday, April 3, 2015

ಬೆಂಗಳೂರಿನಲ್ಲಿ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ

  ಹಾಸನದ ವೇದಭಾರತಿಯ ಸಹಕಾರದಲ್ಲಿ  ಬೆಂಗಳೂರಿನಲ್ಲಿ ಒಂದು ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿ ವೇದ" ಪರಿಚಯ ಕಾರ್ಯಕ್ರಮ ನಡೆಸಬೇಕೆಂಬ ವಿಷಯವನ್ನು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಪ್ರಸ್ತಾಪಿಸಿದಾಗ      ಆದಷ್ಟೂ ಬೇಗ ಏರ್ಪಾಡು ಮಾಡಿ ನಾನು ವಿಚಾರ ತಿಳಿಸುತ್ತೇನೆಂದು ಹೇಳಿದ್ದಾರೆ. ಅವರ ಅನಾರೋಗ್ಯದ ಸ್ಥಿತಿಯಲ್ಲಿ ಅವರಿಗೆ ಅನುಕೂಲವಾಗುವ ಸ್ಥಳದ ಸಲಹೆ ಕೂಡ  ಕೊಟ್ಟಿದ್ದಾರೆ. ರಾಜಾಜಿನಗರದಲ್ಲಿ ಇಸ್ಕಾನ್ ಸಮೀಪ ಇರುವ "ವಂದೇಮಾತರಮ್ " ಹೋಟೆಲಿನ ಕಾನ್ಫೆರೆನ್ಸ್ ಹಾಲ್ ಆದರೆ ಸೂಕ್ತ ಎಂಬುದು ಅವರ ಅಭಿಪ್ರಾಯ[ ಅಲ್ಲಿ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸುತ್ತಾರೆ]. ಅಲ್ಲಿ ಧ್ವನಿ ವರ್ಧಕ ಸಹಿತ ಎಲ್ಲಾ ವ್ಯವಸ್ಥೆ ಇದೆ. ಸಂಖ್ಯೆ ಐವತ್ತಾದರೆ ಉತ್ತಮ.[ ಅಲ್ಲಿ ನೂರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಅವಕಾಶವಿದೆ] ಅಗ್ನಿಹೋತ್ರವನ್ನೂ ಮಾಡಲು ಅವಕಾಶವಿದೆ. ಅಲ್ಲಿ ನಾವು ತೆಗೆದುಕೊಳ್ಳುವ ಆಹಾರಕ್ಕೆ ಮಾತ್ರ ಛಾರ್ಜ್ ಮಾಡುತ್ತಾರೆ. ಕಾನ್ಫರೆನ್ಸ್ ಹಾಲ್ ಉಚಿತ-ಎಂದು ತಿಳಿಸಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ಒಂದು ಭಾನುವಾರವನ್ನು ನಿಶ್ಚಯಿಸಿದರಾಯ್ತು. ಆಸಕ್ತರು vedasudhe@gmail.com ಗೆ ನಿಮ್ಮ ಫೋನ್ ನಂಬರ್ ಸಹಿತ ಮೇಲ್ ಮಾಡಿ. ಬೆಂಗಳೂರಿನ ಅಭಿಮಾನಿಗಳಷ್ಟೇ  ಅಲ್ಲ. ಹೊರಗಿನವರೂ ಪಾಲ್ಗೊಳ್ಳಬಹುದು.