Pages

Wednesday, August 4, 2010

ಮನಸ್ಸಿಗಿರಲಿ ವಿರಾಮ!

ಆಂಗ್ಲ ಭಾಷೆಯಲ್ಲಿ ಹೀಗೊಂದು ನುಡಿ ಇದೆ: An idle mind is devil's workshop ಅಂತ. ಆದರೆ ನಿಜವಾಗಿ ಯೋಚಿಸಿ ನೋಡಿ. ನಮ್ಮ ಮನಸ್ಸು ಸೋಮಾರಿ ಅಥವಾ ನಿಷ್ಕ್ರಿಯವಾಗಿರಲು ಸಾಧ್ಯವೇ ಎಂದು. ಒಂದಲ್ಲಾ ಒಂದು ವಿಚಾರವನ್ನು ಸದಾ ಮನಸ್ಸು ಮಂಥನ ಮಾಡುತ್ತಿರುತ್ತಲೇ ಇರುತ್ತದೆ ಎಂಬುದು ಎಲ್ಲರ ಅನುಭವ. ಹಾಗಾಗಿ idle mind ಎನ್ನುವುದಕ್ಕಿಂತ idle body ಎನ್ನುವುದು ಹೆಚ್ಚು ಸೂಕ್ತವೆಂದು ನನ್ನ ಭಾವನೆ. ಮೇಲಿನ ಹೇಳಿಕೆಯಂತೆ ನಿಜವಾಗಿ ನಾವು idle mind ಸ್ಥಿತಿಯನ್ನು ತಲುಪಿದರೆ ಬಹುಶ: ಅದು ನಿರ್ವಿಕಾರದ ಮತ್ತು ನಿಷ್ಕಲ್ಮಷ ಮನಸ್ಸಿನ ಪ್ರತೀಕವೇ ಆಗುತ್ತದೆ. ಹಾಗಾದಾಗ ನಾವು ಮನಸ್ಸಿನ ನೆಮ್ಮದಿಯ ಪರಾಕಾಷ್ಠೆಯನ್ನು ತಲುಪಿದ್ದೇವೆಂದೇ ಭಾವಿಸಬೇಕಾಗುತ್ತದೆ. ಅಂತೆಯೇ idle mind ನ ಸ್ಥಿತಿ ಎಲ್ಲರೂ ತಲುಪಲು ಬಲು ಕಠಿಣ ಸಾಧನೆಯನ್ನೇ ಮಾಡಬೇಕು. idle body ಸ್ಥಿತಿಯಲ್ಲಿ ಮನಸ್ಸು devil's workshop ಆಗಬಹುದು. ಕೈಯಲ್ಲಿ ಮಾಡಲು ಕೆಲಸವಿಲ್ಲದಿದ್ದಾಗ, ಸೋಮಾರಿಯಾಗಿದ್ದಾಗ ಸಹಜವಾಗಿಯೇ ಅನುಪಯುಕ್ತ ಯೋಚನೆಗಳು ನಮ್ಮನ್ನು ಆವರಿಸುತ್ತವೆ. ತಾತ್ಪರ್ಯ ಇಷ್ಟೆ. ಪ್ರತಿ ನಿಮಿಷವೂ (ಜಾಗೃದಾವಸ್ಥೆಯಲ್ಲಿ) ನಾವು ಒಂದಿಲ್ಲೊಂದು ಚಟುವಟಿಕೆಯಲ್ಲಿ ಮಗ್ನರಾಗಿರಬೇಕು. ಆ ಚಟುವಟಿಕೆಗಳು ಸ್ವ-ಹಿತ ಸಾಧನೆಯ ಜೊತೆಜೊತೆಗೆ ಲೋಕಕಲ್ಯಾಣಕ್ಕೂ ಕೈ ಜೋಡಿಸುವಂತಹವಾಗಿರಬೇಕು. ಆ ಚಟುವಟಿಕೆಗಳಿಂದ ನಮಗೂ, ಪರರಿಗೂ ನಿಜವಾದ ಆನಂದ ಮತ್ತು ನೆಮ್ಮದಿ ಲಭ್ಯವಾಗುವಂತಿರಬೇಕು. ಇಂತಹ ಒಂದು ನಿಟ್ಟಿನಲ್ಲಿ ನಮ್ಮ ಚಟುವಟಿಕೆಗಳು ರೂಪುಗೊಂಡಾಗ ನಮ್ಮ ಮನಸ್ಸೂ ಕೂಡ ನಮಗರಿವಿಲ್ಲದೆಯೇ ಅರಳುತ್ತದೆ, ನಗುತ್ತದೆ ಮತ್ತು ನೆಮ್ಮದಿಯ ಗೂಡಾಗುತ್ತದೆ. ಮನಸ್ಸು ಸದಾ ಪ್ರಫುಲ್ಲವಾಗಿದ್ದಷ್ಟೂ ಸತ್ಕಾರ್ಯ, ಸಚ್ಚಿಂತನೆ ಮತ್ತು ಸನ್ನಡತೆಯ ಚಟುವಟಿಕೆಗಳು ತಂತಾನೇ ಹಿಂಬಾಲಿಸುತ್ತವೆ. ಆದುದರಿಂದ ನಮ್ಮ ಮನಸ್ಸು ಮತ್ತು ದೇಹ ಎರಡೂ God's workshop ಆಗುವತ್ತ ನಮ್ಮ ಪ್ರಯತ್ನ ಸಾಗಬೇಕು.

5 comments:

  1. ಕವಿ ಸುರೇಶರೇ, ತಮ್ಮ ಜಿಜ್ಞಾಸೆಯಲ್ಲಿ ಒಂದು ಮಾತು. ಮೆದುಳಿನಲ್ಲಿ ಮಹಾಮಸ್ತಿಷ್ಕ ಮತ್ತು ಅನುಮಸ್ತಿಷ್ಕ ಎಂಬ ಎರಡು ಭಾಗ ಇದೆಯಲ್ಲ, ಇದರಲ್ಲಿ ನಮ್ಮ ಅನುಮಸ್ತಿಷ್ಕ ನಿಷ್ಕ್ರಿಯವಾಗುವುದೇ ಇಲ್ಲ, ಅದು ನಿಷ್ಕ್ರಿಯವಾದಾಗ ಮಾತ್ರ ನಮಗೆ ಸಮಾಧಿ ಸ್ಥಿತಿ ಬರುತ್ತದೆ, ಕೇವಲ ಮಹಾಮಸ್ತಿಷ್ಕ ನಿಷ್ಕ್ರಿಯವಾಗಿದ್ದರೆ ಅದು idle ಎಂದು ಲೌಕಿಕವಾಗಿ ಪರಿಗಣಿಸಲ್ಪಡುತ್ತದೆ. ನೀವು ಹೇಳಿದ್ದಕ್ಕೆ ವಿರುದ್ಧವೆನಿಲ್ಲ, ಪೂರಕವೇ ಆದ್ರೆ ಸ್ವಲ್ಪ ಭಿನ್ನ ಅಷ್ಟೇ! ಜನಸಾಮಾನ್ಯರಿಗೆ ಅನುಮಸ್ತಿಷ್ಕದ ಆಡಳ್ತೆಯ ಪರಿವೆಯೇ ಇರುವುದಿಲ್ಲ, ನಿಜವಾಗಿ ಇದು ಪ್ಲೇನ್ ನಲ್ಲಿ ಬ್ಲಾಕ್ ಬಾಕ್ಸ್ ಇದ್ದಹಾಗೇ. ನಮ್ಮ ಪ್ರತಿಯೊಂದೂ ಆಗುಹೋಗುಗಳು, ನಮ್ಮ ಇಚ್ಛಾ ಕರ್ಮಗಳು ಎಲ್ಲವನ್ನೂ ಅದು ರೆಕಾರ್ಡ್ ಮಾಡುತ್ತದೆ! ಇದಕ್ಕೆ ಸಂಪರ್ಕ ಸೇತು ಸುಷುಮ್ನಾ ನಾಡಿ! ಮನುಷ್ಯ ದೇಹಬಿತ್ತು ಹೊರಡುವಾಗ ಈ ಬ್ಲಾಕ್ ಬಾಕ್ಸ್ ತನ್ನಲ್ಲಿರುವ ರೆಕಾರ್ಡ್ಗಳನ್ನು ಆತ್ಮಕ್ಕೆ ಅಂಟಿಸಿಬಿಡುತ್ತದೆ ಮತ್ತು ಒಂದು ಪ್ರತಿಯನ್ನು ಪರಾಮಾತ್ಮನಿಗೆ ಹಸ್ತಾಂತರಿಸುತ್ತದೆ! ಹೀಗಾಗಿ ನಮ್ಮ ಸಂಚಿತ ಕರ್ಮಗಳು ಆತ್ಮಕ್ಕೆ ಅಂಟಿಕೊಂಡೇ ಇರುತ್ತವೆ. ಒಂದೊಮ್ಮೆ ಅನುಮಸ್ತಿಷ್ಕವನ್ನು ಲಕ್ಷ್ಯಿಸಿ ಧ್ಯಾನ ಮಾಡಿ, ಆ ಮೂಲಕ ಪರಾಶಕ್ತಿಯಲ್ಲಿ ಕೆಲಹೊತ್ತು ಆನಂದ ಸ್ಥಿತಿಯಲ್ಲಿ ಲೀನವಾದಾಗ ನಮಗೆ ಇಹದ ಪರಿವೆಯೇ ಇರುವುದಿಲ್ಲ, ಆಗ ದೇಹ almost ಸತ್ತ ಸ್ಥಿತಿಯಂತೆ! ಆದ್ರೆ ಉಸಿರಾಟವಿರುತ್ತದೆ ಅಷ್ಟೇ. ಇದನ್ನೆಲ್ಲ ಸಾಮಾನ್ಯರು ಅರಿಯಲೂ ಅನುಸರಿಸಲೂ ಆಗುವುದಿಲ್ಲ, ಇದನ್ನು ಅನುಸರಿಸಿದವರೇ ನಿಜವಾದ ಸನ್ಯಾಸಿಗಳು, ಹೀಗಾಗಿ ಇಂಗ್ಲೀಷ್ ಗಾದೆ ಸರಿಯಾಗೇ ಇದೆ, ಆದರೆ ಅದರಲ್ಲಿ ಮೈಂಡ್ ಎನ್ನುವುದು ಕೇವಲ ಮಹಾಮಸ್ತಿಷ್ಕಕ್ಕೆ ಸೀಮಿತವಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ , ನಮಸ್ಕಾರ

    ReplyDelete
  2. ನಿಮ್ಮಿಬ್ಬರ ಚಿಂತನೆಗಳೂ ಚೆನ್ನಾಗಿಯೇ ಇವೆ. ನಾನೇನೂ ಹೊಗಳಬೇಕೆಂದು ಹೇಳುತ್ತಿಲ್ಲ. ಸುರೇಶ್ ಹೇಳಿದ್ದು ನಮ್ಮ ಚಟುವಟಿಕೆಗಳು ಸಮಾಜದ ಹಿತಕ್ಕಾಗಿ ನಡೆದಿದ್ದರೆ ಅದು ಭಗವಂತನ ಕಾರ್ಯಾಗಾರವಾಗುತ್ತದೆಂದು. ಸರಿಯೆ. ಭಟ್ಟರು ಇನ್ನೂ ಆಳವಾಗಿ ಮೆದುಳಿನ ಚಟುವಟಿಕೆಯನ್ನು ವಿವರಿಸಿದ್ದಾರೆ.ಅಲ್ಲದೆ ಆತ್ಮ ಚಿಂತನೆ, ಕರ್ಮದ ವಿವರಣೆ ಎಲ್ಲವನ್ನೂ ಚಿಕ್ಕದಾಗಿಯೇ ಹೇಳುವ ಪ್ರಯತ್ನ ಮಾಡಿದ್ದಾರೆ. ವಿಷಯ ಜ್ಞಾನಕ್ಕೆ ಎರಡೂ ಒಳ್ಳೆಯದೇ ಆಯ್ತಲ್ಲವೇ? ಇಬ್ಬರಿಗೂ ಧನ್ಯವಾದಗಳು.

    ReplyDelete
  3. ವಿಷಯ ವಿಸ್ತಾರಕ್ಕಾಗಿ ಮತ್ತು ಮೆಚ್ಚುಗೆಗಾಗಿ ಶ್ರೀ ಭಟ್ ಮತ್ತು ಶ್ರೀ ಶ್ರೀದರ್ ರವರಿಗೆ ಧನ್ಯವಾದಗಳು.

    ReplyDelete