ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, August 5, 2010

ಮಕ್ಕಳಿಗೆ ಕಿವಿಮಾತು

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ

7 comments:

 1. ಚೆನ್ನಾಗಿದೆ. ಮಕ್ಕಳಿಗೆ ನಾವೇ ದಾರಿದೀಪ. ನಮ್ಮ ನಡವಳಿಕೆಗಳೂ ಇದೇ ಹಾದಿಯಲ್ಲಿ ಸಾಗಿದಾಗ ಮಾತ್ರ ಮಕ್ಕಳೂ ಅನುಸರಿಸುವಲ್ಲಿ ಸಂಶಯವಿಲ್ಲವೆಂದೆನಿಸುತ್ತದೆ.ವಯಸ್ಸಾದವರಿಗೆ ಗೌರವ ಕೊಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಯಸ್ಸಾದವರೂ ಆ ಗೌರವ ಉಳಿಸಿಕೊಳ್ಳುವಂತೆ ನಡೆಯುವುದು. ಹಿರಿ-ಕಿರಿಯರ ಈ ಎರಡು ಚಕ್ರಗಳಲ್ಲಿ ಒಂದು ಹಾದಿ ತಪ್ಪಿದರೂ ಜೀವನವೆಂಬ ಗಾಡಿಯಲ್ಲಿ ಇಬ್ಬರಿಗೂ ನೋವು ಕಾದಿಟ್ಟಿದ್ದು. ಅದನ್ನೇ ನಾವಿಂದು ಬಹಳ ಕಡೆ ನೋಡುತ್ತಿರುವುದು.

  ReplyDelete
 2. ಕಿವಿ ಮಾತು ಮನಸ್ಸಿಗೆ ತಲುಪಲಿ ಎನ್ನುವುದೇ ನನ್ನ ಆಶಯ,ನಿಮ್ಮ ಸು೦ದರ ಕವನದ೦ತೆ.

  ReplyDelete
 3. ಧನ್ಯವಾದಗಳು, ಡಾ.ಗುರುಮೂರ್ತಿ, ಕುಸು ಮುಳಿಯಾಲ ಮತ್ತು ಸುರೇಶರಿಗೆ.

  ReplyDelete
 4. ದೇವರನು ಅರಸದಿರಿ ಗುಡಿಗೋಪುರಗಳಲಿ
  ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲಿ

  ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
  ಹೃದಯಗಳ ಜೋಡಿಸಿರಿ ಆಗುವುದು ಗೃಹವು

  --ಹೀಗೆ ಸ್ವಲ್ಪ ಬದಲಿಸಿದರೆ ಸರಿಯೇ?
  ನಿಜಕ್ಕೂ ತುಂಬಾ ಚೆನ್ನಾಗಿದೆ.

  ReplyDelete
 5. ಶ್ರೀಯುತ ಸೀತಾರಾಮ ಮತ್ತು ಶ್ರೀಧರರಿಗೆ ಧನ್ಯವಾದಗಳು. ಶ್ರೀಧರ್ ತಿಳಿಸಿರುವ ಬದಲಾವಣೆಗಳೂ ಸೂಕ್ತವಾಗಿವೆ.ಗೃಹಕ್ಕಿಂತ ಮನೆ ಹೆಚ್ಚು ಸಂವೇದನೆ ತರಬಹುದೆಂದು ನನ್ನ ಅನಿಸಿಕೆ.

  ReplyDelete