ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, August 10, 2010

ನಮ್ಮ ಮನೆಯಲ್ಲಿ ಫ್ಯುನೆರಲ್ ಫಂಕ್ಷನ್!!

ಕೆ.ಪಿ.ಟಿ.ಸಿ.ಎಲ್ ಗೆ ಹೊಸದಾಗಿ ಆಯ್ಕೆಯಾಗಿರುವ ನಾಲ್ಕು ಜನ ಸಹಾಯಕ ಇಂಜಿನಿಯರ್ ಗಳು ನಾನು ಕೆಲಸ ಮಾಡುವ ಹಾಸನ ಪವರ್ ಸ್ಟೇಶನ್ ಗೆ ನಿನ್ನೆ ತರಬೇತಿಗಾಗಿ ಬಂದು ವರದಿಮಾಡಿಕೊಂಡರು. ಮದ್ಯಾಹ್ನ ೧.೩೦ ರಿಂದ ೨.೩೦ ರ ವರಗೆ ಅವರುಗಳಿಗೆ ಊಟಕ್ಕಾಗಿ ಬಿಡುವಿತ್ತು. ಮೂರು ಜನರು ಸಮಯಕ್ಕೆ ಸರಿಯಾಗಿ ಊಟ ಮುಗಿಸಿ ಸ್ಟೇಶನ್ ಗೆ ಬಂದರು. ಒಬ್ಬರು ಮಾತ್ರ ಐದು ನಿಮಿಷ ತಡವಾಗಿ ಬಂದರು. ಎಲ್ಲರೊಡನೆ ಮಾತನಾಡುತ್ತಾ ಸಹಜವಾಗಿ " ಎಲ್ಲರ ಊಟವಾಯ್ತಾ?’ ಎಂದೆ. ಎಲ್ಲರೂ ಆಯ್ತು ಎಂದರು. ತಡವಾಗಿ ಬಂದ ಆಕೆ ಮಾತ್ರ " ಊಟ ಆಗಿಲ್ಲ, ನಮ್ಮ ಮನೆಯಲ್ಲಿ ಏನೋ ಫಂಕ್ಷನ್ ಇದೆ ಸರ್, ಆದ್ದರಿಂದ ತಡವಾಗಿದೆ, ಎಂದರು. ಭೀಮನ ಅಮಾವಾಸ್ಯೆ ಹಬ್ಬವನ್ನು ಕೆಲವರು ನಿನ್ನೆ, ಕೆಲವರು ಇಂದು ಆಚರಿಸಿರುವುದರಿಂದ " ಹಬ್ಬದ ಗಡಿಬಿಡಿಯಿಂದ ತಡವಾಯ್ತಾ? ಅಂದೆ. " ಇಲ್ಲಾ ಸರ್ , ನಮ್ಮ ಮನೆಯಲ್ಲಿ ಫ್ಯುನೆರಲ್ ಫಂಕ್ಷನ್! "
ನನಗೋ ಗಾಭರಿ! ಪಾಪ, ಯಾರು ಮೃತರಾಗಿದ್ದಾರೋ! ಅಂತಹಾ ಪರಿಸ್ಥಿತಿಯಲ್ಲಿ ಬಂದುಬಿಟ್ಟಿದ್ದಾರಲ್ಲಾ! -ಅಂತಾ ಯೋಚಿಸಿದವನೇ " ಯಾರಮ್ಮಾ? ಅಂದೆ. "ನಮ್ಮ ಅಜ್ಜಿದೂ ಸರ್" ಅಂದರು.
-ಮುಖ ನೋಡಿದರೆ ಅಂತಾ ದು:ಖವೇನಿಲ್ಲಾ, ನಾನು ಊಹಿಸಿದೆ -ಹುಡುಗಿ ಏನೋ ತಪ್ಪಾಗಿ ಹೇಳಿದ್ದಾಳೆಂದು
- "ಮನೆಯಲ್ಲಿ ಅಜ್ಜಿಯ ಶ್ರಾದ್ಧವೇನಮ್ಮಾ?"-ಅಂದೆ
-ಹೌದು ಸಾರ್
-ಮತ್ತೆ ಫ್ಯುನೆರಲ್ ಅಂದ್ಯಲ್ಲಾ?
-ಏನು ಹೇಳಬೇಕು ,ಅಂತಾ ಗೊತ್ತಾಗಲಿಲ್ಲ ಸಾರ್.
----------------
ನೋಡಿ ನಮ್ಮ ವಿದ್ಯಾವಂತ ಯುವಕರ ಪರಿಸ್ಥಿತಿ!
ಬಿಇ ನಲ್ಲಿ ಒಳ್ಳೆಯ ಮಾರ್ಕ್ಸ್ ತಗೊಂಡು ಕೆಲಸ ದಕ್ಕಿಸಿದ್ದಾಗಿದೆ. ಆದರೆ ಸಾಮಾನ್ಯ ಜ್ಞಾನ!?

ಪಾಪ, ಆಕೆಗೆ ನಮ್ಮಜ್ಜಿ ತಿಥಿ ಅಂತಾನೋ, ವೈದೀಕ ಅಂತಾನೋ ಅಥವಾ ಶ್ರಾದ್ಧ ಅಂತಾನೋ ಹೇಳೋದಕ್ಕೆ ಸಂಕೋಚ, ಇಂಗ್ಲೀಶ್ ನಲ್ಲಿ ಹೇಳೋಕೇ ಹೋಗಿ ಆದ ಆಭಾಸ ಇದು! ಏನಂತೀರಾ?

4 comments:

  1. ಇವತ್ತಿನ ಹೊಸ ಪೀಳಿಗೆಯಲ್ಲಿ ಬಹುತೇಕರು ಹೀಗೇ, ಹೊಸದಾಗಿ ಇಂಗ್ಲೀಷ ಕಲಿತ ದೋಸ್ತನೊಬ್ಬನನ್ನು ಕಾಣಲು ಆತನ ಗೆಳೆಯ ಬಂದನಂತೆ, ಆಗ ಸಹಜವಾಗಿ ಆತನ ತಂದೆ ಎಲ್ಲಿ ಎಂದು ಆತನ ಹತ್ತಿರ ಮನೆಯ ಹೊರಗಿನಿಂದಲೇ ಕೇಳಿದ್ದಾನೆ, ಆಗ ಈ ಇಂಗ್ಲೀಷ್ ಕಲಿಯುತ್ತಿರುವ ಪುಣ್ಯಾತ್ಮ " my father is no more " ಎಂದನಂತೆ, ಕಕ್ಕಾವಿಕ್ಕಿಯಾದ ಆ ಗೆಳೆಯ ಹೇಳಿದನಂತೆ ಈಗೆರಡು ಗಂಟೆ ಮೊದಲು ಮಾರ್ಕೆಟ್ಟಿನಲ್ಲಿ ನೋಡಿದ್ದೆನಲ್ಲೋ ಎಂದು, ಆಗ ಆಟ ಹೇಳಿದನಂತೆ " ಹೌದೌದು ಹೊರಗಡೆ ಹೋಗಿದ್ದಾರೆ " , ತಮಗೆ ಅರ್ಥವಾಗಿರಬಹುದು, ನಮಸ್ಕಾರ

    ReplyDelete
  2. ಒಮ್ಮೊಮ್ಮೆ ಇಂದಿನ ಯುವಕರ ಬಗ್ಗೆ ಕನಿಕರ ಪಡುವುದೇ? ಅಥವಾ ನಮ್ಮ ಶಿಕ್ಷಣ ಪದ್ದತಿಯ ಬಗ್ಗೆ ಮರುಕ ಪಡುವುದೇ? ಏನೂ ತೋಚುವುದಿಲ್ಲ.ಮುಂದಿನ ದಿನಗಳನ್ನು ನೆನಸಿಕೊಂಡರೆ ಒಮ್ಮೊಮ್ಮೆ ನನಗಂತೂ ಗಾಭರಿಯಾಗುತ್ತೆ!

    ReplyDelete