ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, September 22, 2010

"ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ"

ನಮಗರಿವಿಲ್ಲದಂತೆ ನಾವೆಷ್ಟು ಭೀತರು! ಎಂದರೆ ನಾವು ತಲೆತಲಾಂತರದಿಂದ ಆಚರಿಸಿ ಕೊಂಡು ಬಂದಿರುವ ಆಚರಣೆಗಳಿಗೆ ಅರ್ಥ ಹುಡುಕಹೊರಟಾಗ ಬಹುಪಾಲು ಆಚರಣೆಗಳಿಗೆ ಅರ್ಥವಿಲ್ಲವೆಂಬ ಸತ್ಯದ ಅರಿವಾದರೂ ಅಂಧವಾಗಿ ಅನುಸರಿಸುತ್ತಿರುವ ಆಚರಣೆಗಳನ್ನು ಬಿಡಲು ನಮ್ಮ ಮನ ಒಪ್ಪುವುದಿಲ್ಲ.ಕಳೆದ ಒಂದೆರಡು ವರ್ಷಗಳಿಂದ ಶ್ರೀ ಸುಧಾಕರ ಶರ್ಮರೊಡನೆ ಚರ್ಚಿಸುವಾಗ ನಾನು ಅವರೊಡನೆ ಬಲವಾಗಿ ಮಂಡಿಸುತ್ತಿದ್ದ ವಿಚಾರ ಇಷ್ಟೆ" ಸಮಾಜಕ್ಕೆ ತೊಂದರೆಯಾಗದಂತೆ ನಾನು ಏನು ಮಾಡಿದರೆ ನಿಮಗೇನು? ನೀವೇಕೆ ಅದನ್ನು ವಿರೋಧಿಸುವುದು? "
ಶರ್ಮರು ನನ್ನ ಮಾತುಗಳಿಗೆ ನಗುನಗುತ್ತಲೇ ಉತ್ತರಿಸುತ್ತಿದ್ದರು" ನಿಮಗರಿವಿಲ್ಲದಂತೆ ನೀವು ಸಮಾಜಕ್ಕೆ ತಪ್ಪು ಸಂದೇಶವನ್ನು ಕೊಡುತ್ತಿದ್ದೀರಿ" ನಾನಾದರೋ ಮೊ೦ಡುವಾದ ಮಾಡದೆ ಅಥವಾ ಅವರೂ ಹೆಚ್ಚು ಚರ್ಚಿಸದೆ ದಿನಗಳು ಉರುಳುತ್ತಾ ಬಂದವು. ಆದರೂ ಅವಕಾಶ ಸಿಕ್ಕಿದಾಗಲೆಲ್ಲಾ ಅವರ ಮಾತುಗಳನ್ನು ಕೇಳುವುದನ್ನು ನಾನು ನಿಲ್ಲಿಸಲಿಲ್ಲ. ೨-೩ ವರ್ಷಗಳ ಅವರ ಸಂಪರ್ಕದಿಂದ ಒಂದಂತೂ ನನಗೆ ಅರ್ಥವಾಗುತ್ತಿದೆ. ಶರ್ಮರು ಯಾವುದನ್ನೇ ಖಂಡಿಸಿದರೂ ಆಧಾರ ಸಹಿತವಾಗಿ ಶರ್ಮರನ್ನು " ನೀವು ಹೇಳುತ್ತಿರುವುದು ತಪ್ಪೆಂದು" ಯಾರೂ ತಮ್ಮ ವಾದ ಮಂಡಿಸಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಸಕಲ ಮಾನವ ಕುಲಕ್ಕೆ ಒಳಿತಾಗಲೆಂದು ತಿಳಿಸುವ ಅನೇಕ ಮಂತ್ರಗಳು ವೇದದಲ್ಲಿವೆ. ಅಲ್ಲದೆ ಸ್ತ್ರೀಯರಿಗೂ ವೇದಾಧ್ಯಯನದ ಅಧಿಕಾರವಿದೆ, ಎಂಬುದನ್ನು ಶರ್ಮರು ಆಧಾರ ಸಹಿತ ತಮ್ಮ ವಾದ ಮಂಡಿಸುತ್ತಾರೆ. ಬ್ರಾಹ್ಮಣ-ಶೂದ್ರ ಪದಗಳಿಗೆ ವೇದ ಮಂತ್ರಗಳ ಆಧಾರವಾಗಿಟ್ಟುಕೊಂಡು ಮಂಡಿಸುವ ಅವರ ಮಾತುಗಳು ಅದ್ಭುತ.ಶ್ರಾದ್ಧದ ವಿಚಾರದಲ್ಲಂತೂ ಬಹಳ ಸ್ಪಷ್ಟವಾಗಿ ಮನುಷ್ಯನು ಸತ್ತ ನಂತರ ಅಂತ್ಯೇಷ್ಠಿ ಆದರೆ ಅಲ್ಲಿಗೆ ಮುಗಿದಂತೆ.ಪ್ರತಿವರ್ಷ ಮಾಡುವ ಶ್ರಾದ್ಧಕ್ಕೆ ಯಾವ ಅರ್ಥವೂ ಇಲ್ಲವೆಂದು ಹೇಳುತ್ತಾರೆ.

ನಮ್ಮ ಆಚರಣೆ ಹೇಗಿದೆ ಎಂದರೆ ಬೆಕ್ಕನ್ನು ಕಟ್ಟಿ ಶ್ರಾದ್ಧಮಾಡಿದ ಒಂದು ಕಥೆ ಇದೆ.ಅದನ್ನು ಹೇಳಿ ಬಿಡುವೆ. ಮನೆಯೊಂದರಲ್ಲಿ ಬೆಕ್ಕನ್ನು ಸಾಕಿದ್ದರು. ಅವರ ಮನೆಯಲ್ಲಿ ಅವರಪ್ಪ ಅಮ್ಮನ ಶ್ರಾದ್ಧ ಮಾಡುವಾಗ ಮಧ್ಯೆದಲ್ಲಿ ಅದು ಓಡಾದಿ ತೊಂದರೆ ಕೊಡುತ್ತಿತ್ತು. ಅದಕ್ಕಾಗಿ ಶ್ರಾದ್ಧದ ದಿನ ಅದನ್ನು ಕಟ್ಟಿಹಾಕಿ ಅದರ ಮೇಲೆ ಒಂದು ಕುಕ್ಕೆ ಮುಚ್ಚಿ ಶ್ರಾದ್ಧ ಮಾಡುತ್ತಿದ್ದರು. ಅವರ ಕಾಲ ಮುಗಿಯಿತು. ಅವರ ಮಕ್ಕಳ ಕಾಲಕ್ಕೆ ಮನೆಯಲ್ಲಿ ಬೆಕ್ಕಿನ ಸಂತತಿ ಇರಲಿಲ್ಲ. ಅಂದು ಶ್ರಾದ್ಧ ಮಾಡಬೇಕು. ಎಲ್ಲೋ ಒಂದು ಬೆಕ್ಕು ಹಿಡಿದು ತಂದರು. ಕಟ್ಟಿಹಾಕಿ ಅದರ ಮೇಲೆ ಕುಕ್ಕೆ ಮುಚ್ಚಿದರು. ಶ್ರಾದ್ಧ ಆಯ್ತು. ಎಲ್ಲರ ಭರ್ಜರಿ ಊಟವಾಯ್ತು. ಬೆಕ್ಕನ್ನು ಮರೆತರು. ಎರಡು -ಮೂರು ದಿನದ ನಂತರ ಮನೆಯಲ್ಲಿ ಅಸಾಧ್ಯವಾದ ದುರ್ನಾತ ಶುರು ವಾಯ್ತು. ಕುಕ್ಕೆಯಿಂದ ಮುಚ್ಚಿದ್ದ ಬೆಕ್ಕು ಸತ್ತು ಕೊಳೆತು ವಾಸನೆ ಬರುತ್ತಿತ್ತು. ನಾವು ಅಂಧವಾಗಿ ನಡೆಸುವ ಆಚರಣೆಗಳು ಅನೇಕ ಭಾರಿ ಹೀಗೆಯೇ ಇರುತ್ತವೆ. " ಏಕೆ? ಆಚರಿಸಬೇಕು. ಎಂಬ ಪ್ರಶ್ನೆ ಮಾಡಲು ನಾವು ಅಂಜುತ್ತೇವೆ. ಕಾರಣ ನಾವು ಬೆಳೆದು ಬಂದಿರುವುದೇ ಹಾಗೆ. ನಾವು ಎನ್ನುವಾಗ ನಾನು ಕೂಡ ಸೇರುತ್ತೇನೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ ವಷ್ಟೆ.
ಆದರೆ ಮಿತ್ರರೇ, ಕಳೆದ ಒಂದು ವಾರದಿಂದ ಶರ್ಮರ ಅನೇಕ ಉಪನ್ಯಾಸಗಳನ್ನು ಕೇಳಿರುವೆ. ಅನೇಕ ವೀಡಿಯೋಗಳನ್ನು ವೇದಸುಧೆಗಾಗಿಯೇ ಸಿದ್ಧಪಡಿಸಲು ಶರ್ಮರು ಉಪನ್ಯಾಸವನ್ನು ಮಾಡಿದ್ದಾರೆ.ಅನೇಕ ಆಡಿಯೋ ರೆಕಾರ್ಡಿಂಗ್ ಕೂಡ ಆಗಿದೆ. ಅವೆಲ್ಲವನ್ನೂ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ದಾರಾವಾಹಿಯಾಗಿ ಪ್ರಕಟಿಸಲಾಗುವುದು. ವೇದಸುಧೆಯ ಅಭಿಮಾನಿ ಬಂಧುಗಳಲ್ಲಿ ಒಂದು ಕಳಕಳಿಯ ಮನವಿಯಿದೆ." ಶರ್ಮರು ಹೇಳಿದ್ದನ್ನೆಲ್ಲಾ ಒಪ್ಪಬೇಕೆಂದೇನೂ ಇಲ್ಲ. ಆದರೆ ಅವರ ಎಲ್ಲಾ ಮಾತಿಗೂ ವೇದದ ಆಧಾರವನ್ನು ಕೊಡುತ್ತಾರೆ.ಅದು ಸರಿಯೋ ತಪ್ಪೋ ಎನ್ನುವುದನ್ನು ವೇದದ ಬಗ್ಗೆ ಇನ್ನೂ ಹೆಚ್ಚು ತಿಳಿದವರು ಹೇಳಬೇಕಷ್ಟೆ. ವೇದವನ್ನು ಆಳವಾಗಿ ಅಧ್ಯಯನ ಮಾಡದವರಿಗೆ ವಾದಮಾಡಲು ಆಧಾರಗಳಿರುವುದಿಲ್ಲ. ವೇದಸುಧೆಯಾದರೋ ಇಂತಹ ಸದ್ವಿಚಾರಗಳಿಗೆ ಒಂದು ವೇದಿಕೆಯೇ ಹೊರತು. ಯಾವುದಕ್ಕೂ ಹೊಣೆಯಲ್ಲ. ಹಾಗಾಗಿ ಶರ್ಮರ ಉಪನ್ಯಾಸಗಳಿಗೆ ಶರ್ಮರೇ ಜವಾಬ್ದಾರರು. ಹಾಗೂ ಯಾವುದೇ ವಾದ ಮಂಡಿಸುವವರು ಕೊಡುವ ದಾಖಲೆಗಳಿಗೆ ಅವರೇ ಜವಾಬ್ದಾರರು. ವೇದಸುಧೆಯು ಇಲ್ಲಿ ಯಾವುದೇ ವಕಾಲತ್ತು ವಹಿಸುವುದಿಲ್ಲ , ಆದರೆ ಸತ್ಯದ ದಾರಿಯನ್ನು ಹುಡುಕುವವರಿಗೆ ಒಂದು ವೇದಿಕೆಯಾಗಿ ತನ್ನ ಅಳಿಲು ಸೇವೆ ಅಥವಾ ಜವಾಬ್ದಾರಿಯನ್ನು ವೇದಸುಧೆಯು ನಿರ್ವಹಿಸುತ್ತದೆ. ಮುಂದೆ ಪ್ರಕಟವಾಗುವ ಸುಧಾಕರಶರ್ಮರ ಉಪನ್ಯಾಸಗಳನ್ನು ದಯಮಾಡಿ ಸತ್ಯ ಶೋಧನೆಗಾಗಿ ಅವಲೋಕಿಸಿ. ಒಮ್ಮೆಗೇ ಉದ್ದನೆಯ ಉಪನ್ಯಾಸಗಳನ್ನು ಮಾಡಿಸುವ ಬದಲು ೫-೧೦ ನಿಮಿಷಗಳಲ್ಲಿ ಮುಗಿಯುವಂತೆ ಚಿಕ್ಕ ಚಿಕ್ಕ ಕಂತುಗಳಾಗಿ ವಿಂಗಡಿಸಲಾಗಿದೆ. ಆದರೆ ಒಂದಕ್ಕೊಂದು ಸಂಬಂಧವಿರುವುದರಿಂದ ಇಂದು ಉಪನ್ಯಾಸವನ್ನು ಕೇಳುವ ಮುಂಚೆ ಅದರ ಹಿಂದಿನ ಉಪನ್ಯಾಸವನ್ನೊಮ್ಮೆ ಪುನ: ಕೇಳುವುದು ಉತ್ತಮ. ಅಂತೂ ಯಾವ ಪೂರ್ವಾಗ್ರಹವಿಲ್ಲದೆ ಸಿದ್ಧವಾಗಿರುವ "ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ" ಯನ್ನು ವೇದಸುಧೆಯ ಅಭಿಮಾನಿಗಳು ಪ್ರೀತಿಯಿಂದ ಸ್ವೀಕರಿಸುವುದಲ್ಲದೆ ಆರೋಗ್ಯಕರ ಚರ್ಚೆಯಲ್ಲಿ ಪಲ್ಗೊಳ್ಳುತ್ತಾರಾಗಿ ವೇದಸುಧೆಯು ಆಶಿಸುತ್ತದೆ.
-ಹರಿಹರಪುರಶ್ರೀಧರ್

ನಿರ್ವಾಹಕ

5 comments:

 1. ಪ್ರಿಯ ಶ್ರೀಧರ್, ಈ ವಿಚಾರದಲ್ಲಿ ನಾನು ಸಹಮತನಿದ್ದೇನೆ.

  ReplyDelete
 2. ದಯವಿಟ್ಟು ಪ್ರವಚನಗಳ ಗದ್ಯ ರೂಪ ವನ್ನೂ ಸಹ
  ಇಲ್ಲಿ ಕೊಡಿ. ಧ್ವನಿ ಕೆಲವೊಮ್ಮೆ ಸರಿಯಾಗಿ ಕೇಳದು ಮತ್ತು
  ಡೌನ್ಲೋಡ್ ಆಗೋಕೆ ಸ್ವಲ್ಪಕಷ್ಟ
  ಸ್ವರ್ಣ

  ReplyDelete
 3. ಆತ್ಮೀಯ ಭಟ್ಟರೇ,
  ಆಡಿಯೋ/ವೀಡಿಯೋ ನೋಡಿ/ಕೇಳಿ ಬರಹ ರೂಪಕ್ಕೆ ತರುತ್ತೀರಾ?
  ಹಾಗೆ ಆಗಲಿ, ಎಂದರೆ ಹೀಗೆ ತಿಳಿಯಲೆ?
  -ಶ್ರೀಧರ್

  ReplyDelete
 4. ನನಗೆ ತಿಳಿದಂತೆ ವೇದಸುಧೆಯ ಮೂಲೋದ್ದೇಶ ಸತ್ಯಾನ್ಷೇಷಣೆ - ಯಾವುದೇ ವಸ್ತು ಅಥವಾ ಆಚಾರ-ವಿಚಾರಗಳ ಬಗ್ಗೆ. ಪ್ರಾಮಾಣಿಕವಾಗಿ ನೋಡಿದರೆ ನಿಜವಾದ ಸತ್ಯವನ್ನು ಅರಿತವರು ಬಹಳ ವಿರಳ. ಬಹುಮಂದಿಗೆ (ನನ್ನನ್ನೂ ಸೇರಿ) ನಿಜವಾದ 'ಸತ್ಯ' ಏನೆಂಬುದೇ ಅರಿಯದು. ಬಹಳ ಸೀಮಿತ ಅರ್ಥದಲ್ಲಿ ನೋಡುವುದಾದರೆ, ಯಾವುದೇ ಆಚಾರ-ವಿಚಾರಗಳ ಬಗ್ಗೆ, ಲಭ್ಯವಿರುವ ಮತ್ತು ತಿಳಿದಿರುವ ಮಾಹಿತಿಯ ಹಿನ್ನೆಲೆಯಲ್ಲಿ, ಯಾವುದನ್ನು ನಮ್ಮ ಅಂತರಾತ್ಮ ಸರಿಯೆಂದು ಒಪ್ಪಿಕೊಳ್ಳುತ್ತದೆಯೋ ಅದೇ ಅಂತಿಮವಾದ 'ಸತ್ಯ'. ಅಂತಹ ಸತ್ಯವನ್ನು ಹುಡುಕುವಲ್ಲಿ ವೇದಸುಧೆಯ ಈ ವಿಚಾರ ಮಂಥನ ನಿಜಕ್ಕೂ ನೆರವಾಗಬಲ್ಲದು. ಮೇಲೆ ತಿಳಿಸಿದಂತೆ ವಿಷಯ ಮಂಡನೆಯಷ್ಟೇ ವೇದಸುಧೆಯ ಕಾರ್ಯ; ವಿಷಯ ಮಂಥನ ಮತ್ತು ಮನನ ಅವರವರಿಗೆ ಬಿಟ್ಟದ್ದು.

  ReplyDelete