Pages

Tuesday, October 5, 2010

ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೨


ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ -



ಮಾನವರೆಲ್ಲಾ ಸಮಾನರು ಹೇಗೆ? ಎಂಬುದಕ್ಕೆ ಸೂತ್ರರೂಪದಲ್ಲಿ ಕೆಲವು ವಿಚಾರಗಳನ್ನು ನೋಡೋಣ.ಆಗ ನಮಗೆ ವಿಚಾರವು ಇನ್ನೂ ಸ್ಪಷ್ಟವಾಗಿ ಅರ್ವಾಗುತ್ತದೆ. ಸಮಾಜವನ್ನು ನಾಷಮಾಡುವ ನಾಲ್ಕು ರಾಕ್ಷಸೀ ಶಕ್ತಿಗಳಿವೆ.ಮೊದಲನೆಯದು ಅಜ್ಞಾನ.ಯಾವ ಸಮಾಜದಲ್ಲಿ ಅಜ್ಞಾನವಿರುತ್ತದೆ, ಸಮಾಜದ ಏಳಿಗೆಯಾಗುವುದಿಲ್ಲ.ಕೇವಲ ಭಾರತೀಯ ಸಮಾಜ ಅಥವಾ ಹಿಂದು ಸಮಾಜ ಎಂದೇನೂ ಅಲ್ಲ. ಪ್ರಪಂಚದಲ್ಲಿ ಯಾವ ಸಮಾಜದಲ್ಲಿಯಾಗಲೀ ಅಜ್ಞಾನವಿದ್ದರೆ ಸಮಾಜದ ಏಳಿಗೆ ಸಾಧ್ಯವಿಲ್ಲ.ಹಾಗಾದರೆ ಒಂದು ಸಮಾಜದ ಏಳಿಗೆಯಾಗಬೇಕಾದರೆ ಅದರಲ್ಲಿರುವ ಅಜ್ಞಾನ ನಾಶವಾಗಬೇಕು.ಎರಡನೆಯ ಶತ್ರು ಅಂದರೆ ಅನ್ಯಾಯ, ಅಧರ್ಮ. ಯಾವ ಸಮಾಜದಲ್ಲಿ ಅನ್ಯಾಯ, ಅಧರ್ಮವು ಇರುತ್ತದೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲು ಸಾಧ್ಯವಿಲ್ಲ. ಅನ್ಯಾಯದ ಕಾರಣ ಶೋಷಣೆಗೊಳಗಾದವರು ಯಾವಾಗಲೂ ಆಕ್ರೋಶಗೊಂಡಿದ್ದಾಗ ಉಳಿದ ಸಮಾಜದಲ್ಲಿ ನೆಮ್ಮದಿಯಾದರೂ ಎಲ್ಲಿಂದ ಬರಬೇಕಲ್ಲವೇ?ಇದು ಸಹಜ. ಸಮಾಜದಲ್ಲಿ ಅಧರ್ಮ-ಅನ್ಯಾಯ ನೆಲೆಗೊಂಡಿದ್ದಾಗ ಅನ್ಯಾಯಕ್ಕೆ , ಶೋಷಣೆಗೆ ಬಲಿಯಾದವರು ಸಹಜವಾಗಿ ಆಕ್ರೋಶಗೊಂಡಿರುತ್ತಾರೆ. ಇದು ಸಮಾಜವನ್ನು ಅಶಾಂತಿಗೆ ತಳ್ಳುವ ಎರಡನೆಯ ಶತ್ರು. ಸಮಾಜದ ಮೂರನೆಯ ಶತ್ರು "ಅಭಾವ". ಸಮಾಜದಲ್ಲಿ ಹೊಟ್ಟೆಗೆ ತಿನ್ನಲು ಕೆಲವರಿಗೆ ಇಲ್ಲ, ಕೆಲವರಿಗೆ ತಿಂದು ಹೆಚ್ಚಾಗಿ ಚೆಲ್ಲುವಷ್ಟಿದ್ದರೆ, ಸಂಪತ್ತಿನಲ್ಲಿ ಅಸಮತೋಲನದಿಂದ ಅಭಾವ ಸೃಷ್ಟಿಯಾಗುತ್ತದೆ. ಯಾವ ಸಮಾಜದಲ್ಲಿ ಪ್ರಕೃತಿಯ ಸಂಪತ್ತು ಉಳಿಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಬೆಳಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಸಮಾನವಾಗಿ ಹಂಚಲ್ಪಡುತ್ತದೆ, ಸಮಾಜದಲ್ಲಿ ಶಾಂತಿ-ನೆಮ್ಮದಿ ಇರುತ್ತದೆ.ಅಂದರೆ ಆಸಮಾಜದಲ್ಲಿ ಅಭಾವವು ಇರುವುದಿಲ್ಲ. ಸಮಾಜದ ನಾಲ್ಕನೆಯ ಶತ್ರು "ಆಲಸ್ಯ" ಅಥವಾ ಸೋಮಾರಿತನ. ಯಾವ ಸಮಾಜದಲ್ಲಿ ಸೋಮಾರಿಗಳೇ ಹೆಚ್ಚು ಇರುತ್ತಾರೆ, ಸಮಾಜದ ಏಳಿಗೆಯಗುವುದಿಲ್ಲ. ನಾಲ್ಕು ಜನರು ದುಡಿದು ತಿನ್ನುವವರು ನಾನೂರು ಜನರಾದರೆ! ಅದು ಏಳಿಗೆಯಾಗಲು ಸಾಧ್ಯವೇ? ಯಾವ ಸಮಾಜದಲ್ಲಿ ಶ್ರಮಜೀವಿಗಳಿರುತ್ತಾರೆ, ಕಷ್ಟಪಟ್ಟು ದುಡಿಯುತ್ತಾರೆ, ಸಮಾಜದ ಏಳಿಗೆಯು ಸಹಜವಾಗಿಯೇ ಆಗುತ್ತದೆ.
ಹೀಗೆ ಅಜ್ಞಾನದ ವಿರುದ್ಧವಾಗಿ ಹೋರಾಡುವವರೆಲ್ಲರೂ ಬ್ರಾಹ್ಮಣರು.ಕಾರಣ ಇವರು ಸಮಾಜವನ್ನು ಸುಸ್ಥಿತಿಯಲ್ಲಿಡುವ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ಯಾರ್ಯಾರು ಅನ್ಯಾಯ-ಅಧರ್ಮಗಳ ವಿರುದ್ಧ ಹೋರಾಡುತ್ತಾರೋ ಅವರು ಕ್ಷತ್ರಿಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳಸಿ, ಹಂಚುವರೋ ಅವರು ವೈಶ್ಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಯಾರು ಆಲಸ್ಯವನ್ನು ಬಿಟ್ಟು ಶ್ರಮವಹಿಸುವರೋ ಅವರು ಶೂದ್ರರು.
ಎಲ್ಲದರಲ್ಲೂ ಸಾಮಾನ್ಯವಾದ ಮತ್ತು ಸಮಾನವಾದ ವಿಷಯವೆಂದರೆ ಸಮಾಜದ ಸುಸ್ಥಿತಿ. ಎಲ್ಲರೂ ಕರ್ತವ್ಯವನ್ನು ನಿರ್ವಹಿಸುವುದು ಸಮಾಜದ ಸುಸ್ಥಿತಿಗಾಗಿ.ಬ್ರಾಹ್ಮಣ, ಕ್ಷತ್ರಿಯ , ವೈಶ್ಯ ಮತ್ತು ಶೂದ್ರ- ಇವರೆಲ್ಲರ ಸಮಾನ ಗುರಿ ಎಂದರೆ ಸಮಾಜವನ್ನು ಸುಸ್ಥಿತಿಯಲ್ಲಿಡುವುದು. ನಾಲ್ಕೂ ವರ್ಣಗಳದ್ದೂ ಸಮಾಜದ ಸುಸ್ಥಿಯೇ ುರಿಯಾದಮೇಲೆ ಮೇಲ್ಯಾರು? ಕೀಳ್ಯಾರು? ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರ ಸೇವೆಯೂ ಸಮಾಜಕ್ಕೆ ಅಗತ್ಯ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರವರ ಕೆಲಸದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ಗುರುತಿಸಲ್ಪಟ್ಟರೇ ಹೊರತು ಹುಟ್ಟಿಗೂ ಜಾತಿಗೂ ಸಂಬಂಧವಿಲ್ಲ.ಇದನ್ನೇ ಗುಣಕರ್ಮ ವಿಭಾಗಶ: ಎನ್ನುತ್ತಾರೆ. ಚಾತುರ್ವಣ್ಯಾ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶ: ಎಂದು ಶ್ರೀ ಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ. ಗುಣ ಕರ್ಮ ವಿಭಾಗವೇ ಹೊರತು ಇಲ್ಲಿ ಅಪ್ಪ-ಅಮ್ಮ ಯಾರೆಂದು ಕೇಳಿಲ್ಲ. ಈಗ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು . ಬ್ರಾಹ್ಮಣನ ಗುಣ-ಕರ್ಮಗಳನ್ನು ತಾನು ಅನುಸರಿಸುತ್ತಾ ಇದ್ದೇನೆಯೇ? ಇಲ್ಲವೇ ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಕೇವಲ ಬ್ರಾಹ್ಮಣ ಅಪ್ಪ-ಅಮ್ಮನ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ತಾನು ಬ್ರಾಹ್ಮಣನೆಂದು ಕರೆದುಕೊಂಡರೆ ಎಷ್ಟು ಮೂರ್ಖತನವಾಗುತ್ತದೆಂದರೆ ನಮ್ಮ ಅಪ್ಪ ಡಾಕ್ಟರು ಅದರಿಂದ ನಾನೂ ಡಾಕ್ಟರೆಂದರೆ ಎಷ್ಟು ಮೂರ್ಖತನದ ಮಾತಾಗುತ್ತದೋ ಇದೂ ಹಾಗೆಯೇ. ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿದ್ದವ ಯಾರೇ ಆದರೂ ಆತ ಬ್ರಾಹ್ಮಣ. ಅಲ್ಲದೆ ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿರದ ವ್ಯಕ್ತಿ ಬ್ರಾಹ್ಮಣನ ೊಟ್ಟೆಯಲ್ಲಿ ಹುಟ್ಟಿದ್ದರೂ ಅವನು ಬ್ರಾಹ್ಮಣನಾಗಲಾರ. ಡಾಕ್ಟರ ಮಗ ಡಾಕ್ಟರಾಗಬೇಕಾದರೆ ಅವನು ಎಮ್.ಬಿ.ಬಿ.ಎಸ್ ಓದಿದರೆ ಮಾತ್ರ ಸಾಧ್ಯ. ಇಲ್ಲವಾದರೆ ಅವನು ಡಾಕ್ಟರಾಗಲು ಸಾಧ್ಯವೇ? ವಿಚಾರದಲ್ಲೂ ಸಹ ಅದೇ ಸೂತ್ರ ಅನ್ವಯವಾಗುತ್ತದೆ. ನನ್ನ ಅಪ್ಪ ಇಂಜಿನಿಯರಾಗಿದ್ದರೂ ಸಹ ನಾನು ಇಂಜಿನಿಯರಿಂಗ್ ಓದಿದಾಗ ಮಾತ್ರ ನಾನು ಒಬ್ಬ ಇಂಜಿನಿಯರ್. ನಮ್ಮಪ್ಪ ಬ್ರಾಹ್ಮಣನಾಗಿದ್ದರೂ ಕೂಡ ಬ್ರಾಹ್ಮಣನ ಗುಣ-ಕರ್ಮ-ಸ್ವಭಾವಗಳನ್ನು ನಾನು ಪಡೆದುಕೊಂಡರೆ ಮಾತ್ರ ನಾನು ಬ್ರಾಹ್ಮಣನಾಗಬಲ್ಲೆ. ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ, ನಾನು ಬ್ರಾಹ್ಮಣನ ಗುಣ ಕರ್ಮ ಸ್ವಭಾವಗಳನ್ನು ಹೊಂದಿದ್ದೇನೆಯೇ? ಆಶ್ಚರ್ಯವಾಗಬಹುದು, ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರಲ್ಲಿ ಪ್ರತಿಶತ ೯೦ ಕ್ಕಿಂತ ಹೆಚ್ಚು ಬ್ರಾಹ್ಮಣರೆಂದು ಕರೆದುಕೊಳ್ಳುವಂತಿಲ್ಲ.ಕಾರಣ ಅವರಲ್ಲಿ ಗುಣ ಕರ್ಮ ಸ್ವಭಾವಗಳಿಲ್ಲ.ಹಾಗಾಗಿ ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಸಮಾಜದ ಇತರ ವರ್ಗಗಳ ನಿಂದನೆಗೆ ಗುರಿಯಾಗಿದ್ದಾರೆ. ಇದರಿಂದ ಕೋಪಗೊಳ್ಳುವ ಬದಲು ಸಮಾಜದ ನಿಂದನೆಗೆ ಕಾರಣವನ್ನು ಹುಡುಕಿ ನಿಜವಾದ ಬ್ರಾಹ್ಮಣ್ಯವನ್ನೇಕೆ ಅನುಸರಿಸಬಾರದು? ವೇದಗಳ ಕಾಲದಲ್ಲಿ ನಿಜವಾದ ಬ್ರಾಹ್ಮಣ್ಯಕ್ಕೆ ಗೌರವವಿತ್ತು. ಈಗಲೂ ಗೌರವ ಸಿಗಬೇಕಾದರೆ ನಿಜವಾದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು. ಇಂದು ಪರಿಸ್ಥಿತಿ ಹೇಗಿದೆ? ಬ್ರಾಹ್ಮಣ ನೆಂದು ಕರೆಸಿಕೊಳ್ಳುವ ವ್ಯಕ್ತಿ ದುರ್ವ್ಯಸನಕ್ಕೆ ತುತ್ತಾಗಿರುವ ಉಧಾಹರಣೆಗಳಿವೆ. ಅವನಿಗೆ ಗೌರವ ಬರಬೇಕೆಂದರೆ ಹೇಗೆ ಬಂದೀತು?ಆದ್ದರಿಂದ ಬ್ರಾಹ್ಮಣನ ಗುಣಕರ್ಮ ಸ್ವಭಾವ ಗಳನ್ನರಿತು ಬಾಳಿದರೆ ಅವನು ಬ್ರಾಹ್ಮಣನೆಂದು ಕರೆಸಿಕೊಳ್ಳುತ್ತಾನಾದರೂ ಅವನು ಮಾತ್ರವೇ ಶ್ರೇಷ್ಠನೆನಿಸುವುದಿಲ್ಲ.ಇದನ್ನು ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣನ ಗುಣಕರ್ಮಸ್ವಭಾವಗಳನ್ನು ಅರಿತು ಬಾಳಿದಾಗ ಬ್ರಾಹ್ಮಣನಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗುತ್ತದೆ. ಬ್ರಾಹ್ಮಣರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಅಂಶಗಳೆಂದರೆ ಅಧ್ಯಯನ ಮತ್ತು ಅಧ್ಯಾಪನ., ಯಜನ-ಯಾಜನ, ದಾನ, ಪ್ರತಿಗ್ರಹ. ಅಧ್ಯಯನ ಮತ್ತು ಅಧ್ಯಾಪನ,ಇದು ಬ್ರಾಹ್ಮಣನ ಕರ್ಮ. ಬ್ರಾಹ್ಮಣನು ವೇದಾಧ್ಯಯನವನ್ನು ಮಾಡಬೇಕು ಮತ್ತು ಅದರ ಪ್ರಸಾರ ಮಾಡಬೇಕು. ಬ್ರಾಹ್ಮಣನೆಂದು ಕರೆಸುಕೊಳ್ಳುವವನು ಈಗ ಆತ್ಮ ವಿಮರ್ಶೆಮಾಡಿಕೊಳ್ಳಬೇಕು, ನಾನು ವೇದಾಧ್ಯಯನ ಮಾಡುತ್ತಿದ್ದೇನೆಯೇ? ಇಂತಾ ವಿಚಾರ ಮಾಡುವಾಗ ಬ್ರಾಹ್ಮಣ ಮಹಿಳೆಯರಲ್ಲಿ ಪ್ರಶ್ನೆ ಉದ್ಭವವಾಗುತ್ತದೆ, ಮಹಿಳೆಯರು ವೇದಾಧ್ಯಯನ ಮಾಡಬಹುದೇ? ವೇದಾಧ್ಯಯನಕ್ಕೆ ಪುರುಷ-ಸ್ತ್ರೀ ಭೇದವಿಲ್ಲ.ಯಾವ ಶಾಸ್ತ್ರದಲ್ಲಾಗಲೀ ವೇದದಲ್ಲಾಗಲೀ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ಎಲ್ಲೂ ಹೇಳಿಲ್ಲ. ಸ್ತ್ರೀ-ಪುರುಷ ನೆನ್ನುವುದು ಶರೀರ ಧರ್ಮ.ವೇದಾಧ್ಯಯನ ಇರುವುದು ಆತ್ಮೋನ್ನತಿಗಾಗಿ.ಆತ್ಮೋನ್ನತಿ ವಿಚಾರ ಮಾಡುವಾಗ ಲಿಂಗದ ವಿಚಾರ ಬರುವುದೇ ಇಲ್ಲ. ಆತ್ಮಕ್ಕೆ ಲಿಂಗವಿಲ್ಲ. ಅದೇನಿದ್ದರೂ ಶರೀರಕ್ಕೆ. ಶರೀರದ ಒಳಗಿರುವ ಚೇತನ ಶಕ್ತಿಗೆ ಲಿಂಗಭೇದವಿಲ್ಲ. ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡೆಂತಲೂ ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣೆಂತಲೂ ಗುರುತಿಸಲ್ಪಡುತ್ತದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ||ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತವಾ ಕುಮಾರೀ|| ಭಗವಂತನ ವಾಣಿ ಸ್ಪಷ್ಟವಾಗಿದೆ " ಹೇ ಜೀವಾತ್ಮ, ನೀನು ಸ್ತ್ರೀ ಆಗಿದ್ದೀಯೆ, ನೀನು ಪುರುಷನಾಗಿದ್ದೀಯೇ, ನೀನುಕುಮಾರನಾಗಿದ್ದೀಯೇ, ನೀನು ಕುಮಾರಿಯೂ ಆಗಿದ್ದೀಯೇ". ಅದು ಹೇಗೆಂದರೆ ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣು ಆಗಿರುತ್ತದೆ. ಶರೀರಕ್ಕೆ ಮಾತ್ರ ಲಿಂಗವಿದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ಆದ್ದರಿಂದ ಆತ್ಮೋದ್ಧಾರಕ್ಕಾಗಿ ಮಾಡುವ ವೇದಾಧ್ಯಯಕ್ಕೆ ಲಿಂಗಭೇದವಿಲ್ಲ. ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆನ್ನುವ, ಸ್ತ್ರೀಯರು ಓಂಕಾರ ಪಠಿಸಬಾರದೆನ್ನುವ ಎಲ್ಲವೂ ವೇದ ವಿರೋಧಿಯೇ ಆಗಿದೆ. ಭಗವಂತ ಕೊಟ್ಟಿರುವ ವೇದವನ್ನು ಪಠಿಸಬಾರದೆನ್ನುವವರು ಭಗವದ್ರೋಹಿಗಳೇ ಅಲ್ಲವೇ? ದುರಾದೃಷ್ಟವೆಂದರೆ ಹಲವಾರು ಮಠಾಧೀಷರೂ ಸಹ ವೇದವಿರೋಧವಾಗಿಯೇ ಮಾತನಾಡುವುದನ್ನು ಕಾಣುತ್ತೇವೆ.ತಿಳಿದವರೆಂದು ಕರೆಸಿಕೊಳ್ಳುವವರು, ಪಂಡಿತರು, ಜ್ಞಾನಿಗಳೆನಿಸಿದವರುಹೀಗೆ ವೇದ ವಿರೋಧವಾದ ಮಾತುಗಳನ್ನಾಡಿದರೆ ಸಮಾಜದ ಮೇಲೆ ಎಂತಹಾ ದುಶ್ಪರಿಣಾಮ ಆಗುತ್ತದೆ, ಅಲ್ಲವೇ? ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ವೇದದಲ್ಲಿ ಎಲ್ಲಿಯೂ ಹೇಳಿಲ್ಲವಾದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬೇಕು.ವೇದಾಧ್ಯಯನ-ಅಧ್ಯಾಪನವು ಬ್ರಾಹ್ಮಣರ ಕರ್ತವ್ಯವಾದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಎಲ್ಲರೂ ವೇದಾಧ್ಯಯನ ಮಾಡಲೇ ಬೇಕು. ಆಗ ಮಾತ್ರ ಬ್ರಾಹ್ಮಣನೆಂದು ಕರೆಸಿಕೊಳ್ಳಲು ಅರ್ಹತೆ ಸಿಗುತ್ತದೆ. ಅಷ್ಟೇ ಹೊರತು ವೇದಾಧ್ಯಯನ ಮಾಡಿದ್ದರಿಂದ ಶ್ರೇಷ್ಠರು ಎಂಬ ಭಾವನೆ ಸಲ್ಲದು. ಎಲ್ಲರೂ ಸಮಾನರೇ ಆಗಿದ್ದಾರೆ. ಇದು ವೇದದ ಕರೆ.
.. ..........ಮುಂದಿನ ಕಂತನ್ನು ಇದೇ ಶುಕ್ರವಾರ ೮.೧೦.೨೦೧೦ ರಂದು ನಿರೀಕ್ಷಿಸಿ



.

5 comments:

  1. ಅದ್ಭುತವಾದ ಲೇಖನ.
    ಅಜ್ಞಾನ, ಅಧರ್ಮ/ಅನ್ಯಾಯ, ಅಭಾವ ಮತ್ತು ಆಲಸ್ಯ -ಬ್ರಾಹ್ಮಣ್ಯ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಗಳ ಸಮೀಕರಣ, ಕರ್ಮಸಿದ್ಧಾಂತದ ವರ್ಣಾಶ್ರಮ,ಆತ್ಮನ್ನೋತಿ ವೆಧದ್ಧ್ಯಾಯನ, ಲಿಂಗಭೆಧವಿಲ್ಲದ ಆತ್ಮೋನ್ನತಿ -ಅದ್ಭುತ ತಿಳುವಳಿಕೆ ತಮ್ಮಿಂದ ದೊರೆಯಿತು.
    ಧನ್ಯವಾದಗಳು.

    ReplyDelete
  2. ಶ್ರೀ ಸೀತಾರಾಮ್
    ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಇನ್ನೂ ೮-೧೦ ಕಂತುಗಳಲ್ಲಿ ಈಗಾಗಲೇ ಶರ್ಮರು ವೇದದ ಬಗ್ಗೆ ಮಾಡಿರುವ ಉಪನ್ಯಾಸಗಳನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಪ್ರಕಟಿಸಲಾಗುವುದು. ಸಹಕಾರ ಹೀಗೆಯೇ ಇರಲಿ.

    ReplyDelete
  3. ಶರ್ಮರ ಈ ನಾಲ್ಕು ವರ್ಣಾಶ್ರಮಗಳ ಬಗ್ಗೆ ಬಹಳ ಸೂಕ್ತವಾಗಿ ಸರಳವಾಗಿ ವೈಜ್ಞಾನಿಕವಾಗಿ, ಸಮರ್ಥವಾಗಿ ಮ೦ಡಿಸಿರುವ ಈ ವ್ಯಾಖ್ಯಾನ ನನಗೆ ತು೦ಬಾ ಹಿಡಿಸಿತು. ಇ೦ಥಾ ವಿಚಾರಗಳು ಆದಷ್ಟು ಹೆಚ್ಚಿನ ಜನಸ್ತೋಮಕ್ಕೆ ತಲುಪಬೇಕು. ವರ್ಣಾಶ್ರಮದ ಬಗ್ಗೆ ಜನಮಾನಸದಲ್ಲಿ ಪ್ರಚಲಿತವಾಗಿರುವ ಅಗಾಧ ತಪ್ಪು ಕಲ್ಪನೆಗಳು ಆಗಲಾದರೂ ದೂರವಾದೀತು. ನಿಮ್ಮ ಈ ಪ್ರಯತ್ನಕ್ಕೆ ನನ್ನ ಪ್ರಣಾಮಗಳು. ಇ೦ಥಾ ಅರಿವು ಮೂಡಿಸುವ, ಎಚ್ಚರಗೊಳಿಸುವ ಲೇಖನಗಳು ಸಮೃದ್ಧವಾಗಿ ಮೂಡಿಬರಲಿ.

    ReplyDelete
  4. ಡಾ|| ಜ್ಞಾನದೇವ್, ಶ್ರೀ ಭಟ್,
    ನಿಮ್ಮ ,ಮೆಚ್ಚುಗೆಗೆ ಧನ್ಯವಾದಗಳು. ಶ್ರೀ ಶರ್ಮರ ಉಪನ್ಯಾಸಗಳ ಇನ್ನೂ ೮-೧೦ ಕಂತುಗಳಿವೆ.ಎಲ್ಲವನ್ನೂ ವಾರಕ್ಕೆರಡರಂತೆ ಪ್ರಕಟಿಸಲಾಗುವುದು.ಅಷ್ಟೇ ಅಲ್ಲ ಬೇರೆ ಯಾರಾದರೂ ವಿದ್ವಾಂಸರ ಪರಿಚಯ ನಿಮಗಿದ್ದರೆ ದಯಮಾಡಿ ಅವರುಗಳಿಂದಲೂ ವೇದಸುಧೆಗೆ ವೇದದ ವಿಚಾರದಲ್ಲಿ ಬರೆಯಲು ಆಹ್ವಾನಿಸಿ.ಅಂತೂ ಎಲ್ಲರ ಪ್ರಯತ್ನಗಳಿಂದ ಒಂದಿಷ್ಟು ವೇದದ ವಿಚಾರಗಲನ್ನು ಸರಳವಾಗಿ ತಿಳಿದುಕೊಳ್ಳೋಣ.

    ReplyDelete