Pages

Monday, December 20, 2010

ಮೂಢ ಉವಾಚ -16

ಕೋಪವೆಂಬುದು ಕೇಳು ವಂಶದಾ ಬಳುವಳಿಯು|
ಸಜ್ಜನರ ಸಹವಾಸವೇ ಪರಿಹಾರದಮೃತವು||
ಕೋಪದ ತಾಪದಿಂ ಪಡದಿರಲು ಪರಿತಾಪ|
ಶಾಂತಚಿತ್ತದಲಿ ಅಡಿಯನಿಡು ಮೂಢ||


ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು|
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು||
ದೇಹಧಾರ್ಢ್ಯವನು ಕಾಪಿಟ್ಟು ಧೃಢಚಿತ್ತದಲಿ|
ಮುನ್ನಡೆದು ವ್ಯಗ್ರತೆಯ ನಿಗ್ರಹಿಸು ಮೂಢ||


ಕೀಳರಿಮೆಯದು ತಾ ಸಿಟ್ಟಿಗದು ಹೇತುವು|
ಅಭಿಮಾನಕಾಘಾತ ಕಿಚ್ಚಿಗದು ಕಾರಣವು||
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|
ಛಲದಿಂದ ಬಲಗಳಿಸಿ ಮೇಲೇರು ಮೂಢ||


ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ||
ಮನುಜ ಮನುಜರನಡುವೆ ಧಗಧಗಿಸುವ ದ್ವೇಷದ|
ಮೂಲ ಕ್ರೋಧಾಗ್ನಿಯಲ್ಲದೆ ಮತ್ತೇನು ಮೂಢ||
***************
-ಕವಿನಾಗರಾಜ್.

3 comments:

  1. [ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು]
    ಸತ್ಯದ ಮಾತು.ಬೇರೇನೇ ಕಾರಣ ಹುಡುಕಿದರೂ ತನ್ನ ದೌರ್ಬಲ್ಯವೇ ಸಿಡಿಮಿಡಿಗೆ ಕಾರಣವೆಂಬುದರಲ್ಲಿ ಎರಡು ಮಾತಿಲ್ಲ.

    ReplyDelete
  2. ಶ್ರೀಯುತ ನಾಗರಾಜರೇ, ದೌರ್ಬಲ್ಯವದು ಸಿಡಿಮಿಡಿಗೆ ಕಾರಣವು--ಸ್ವಲ್ಪ ಸಂದೇಹ! ಸಿಡಿಮಿಡಿಗೆ ನಮ್ಮ ಮನಸ್ಸೇ ಕಾರಣ ವಿನಃ ದೇಹದೌರ್ಬಲ್ಯವಲ್ಲ, ದೇಹ ದುರ್ಬಲವಗಿದ್ದರೂ ಮನಸ್ಸು ಸಿಯಾಗಿದ್ದರೆ ಕೋಪ ಬರುವುದಿಲ್ಲ.ಪೈಲ್ವಾನನಿಗೆ ದೇಹದಾರ್ಢ್ಯತೆಯಿರುತ್ತದೆ-ಕೋಪಬರುವುದಿಲ್ಲವೇ?ಬಶಲಿಗಳೆಲ್ಲಾ ಧೀ ಶಕ್ತಿಯನ್ನು ಪಡೆಯಲು ಸಾಧ್ಯವಿಲ್ಲ! ಅತೀ ಕಿರಿದಾದಾ ಶರೀರವುಳ್ಳವರೂ ಧೀಶಕ್ತಿಯನ್ನು ಪಡೆಯಬಹುದು. ಕೋಪ ವಂಶದ ಬಳುವಳಿಯಲ್ಲ, ಅದು ಅಭ್ಯಾಸದಿಂದ ಬರುವ ಕೆಟ್ಟ ಚಾಳಿ. ಕೀಳರಿಮೆ, ಅಹಂಕಾರ ಇವೆಲ್ಲಾ ಮನಸ್ಸಿನ ಭಾಗವಾದ ಚಿತ್ತವೃತ್ತಿಗಳು. ಹೀಗಾಗಿ ಈ ವಿಷಯದಲ್ಲಿ ತಾವು ಚಿಂತಿಸಬೇಕು, ನಾನು ಹೀಗಂದಿದ್ದಕ್ಕೆ ಕೋಪಮಾಡಿಕೊಳ್ಳಬೇಡಿ ಮತ್ತೆ! ಇನ್ನೂ ಹಲವನ್ನೂ ಇದರ ತಿದ್ದುಪಡಿಯನ್ನೂ ನಿರೀಕ್ಷಿಸುತ್ತೇನೆ,ಧನ್ಯವಾದ

    ReplyDelete
  3. taalme iddalli ellavu tahabandiyalliruttave...?allave sir...dhanyavaadagalu.

    ReplyDelete