Pages

Wednesday, December 1, 2010

ಹೃದಯದ ಭಾವದೆ ಅರ್ಥವನರಿಯದೇ



ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ  ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ

ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ

ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ  ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ

ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ
ಅರಿವನು ಅರಸದೆ ಕೆಸರನು  ಬೆರೆಸದೆ
ತಿಳಿವನೆ ಮೆರೆಸುತೆ ಎಲ್ಲೆಲ್ಲೂ

ಅರಿವಿನ ಪಕ್ಷಿಯ  ತೆರೆಯುತೆ ಅಕ್ಷಿಯ
ನಿರುತದೆ ಸತ್ಯವ ಅರಸುತಲೂ
ಹರಸುವ ನಮಿಸುವ ಕ್ಷಮಿಸುವ ಮನದಲು
 ಸ್ಫುರಿಸುವ ಭಾವವೇ ಬರಿಸುತಲೂ

ಕಾಣದ ಪ್ರೀತಿಯ ಆಂತರ್ಯವರಿಯುವೆ
ಅರಸುತಲಿದ್ದೂ ಮನವೆಲ್ಲಾ
ಹೃದಯದ ಹೊರಗೂ  ಒಳಗೂ ಕಾಣುವೆ
ಹುಡುಕದೇ ಇದ್ದೂ ದಿನವೆಲ್ಲಾ

2 comments:

  1. ಗೋಪಿನಾಥರೇ,
    [[ಹೃದಯದ ಹೊರಗೂ ಒಳಗೂ ಕಾಣುವೆ
    ಹುಡುಕದೇ ಇದ್ದೂ ದಿನವೆಲ್ಲಾ ]]
    ಈ ಸಾಲುಗಳ ಭಾವ ಸೊಗಸು.

    ReplyDelete
  2. ಕವಿಗಳೇ ನಿಮ್ಮ ಭಾವಕ್ಕೆ ವಂದನೆಗಳು

    ReplyDelete